ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಮತ್ತು ನ್ಯಾಯಾಲಯಗಳಲ್ಲಿ ವರ್ಷಾನುವರ್ಷಗಳಿಂದ ನಡೆಯುತ್ತಿರುವ ಮೊಕದ್ದಮೆಗಳಿಂದ ಯಾರಿಗೆ ಲಾಭ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಹಲವು ಕುಟುಂಬಗಳ ಭವಿಷ್ಯ ಪಣಕ್ಕೊಡ್ಡಲ್ಪಟ್ಟಿರುತ್ತದೆ. ಇಂತಹ ಸ್ಥಿತಿಗೆ ಗಂಡ ಹೆಂಡತಿ ಮಾತ್ರ ಜವಾಬ್ದಾರರೊ ಅಥವಾ ಕಾನೂನು ಮತ್ತು ನ್ಯಾಯಾಲಯದ ಪ್ರಕ್ರಿಯೆಗಳೋ, ಆ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ...
ದೆಹಲಿಯ ವಿಶಾಲ್ 1995ರಲ್ಲಿ ಆಶಾಳನ್ನು ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲ ಸರಿಯಿತ್ತು. ಅವರಿಗೆ ಒಬ್ಬ ಮಗಳು ಇದ್ದಾಳೆ. ಆದರೆ ಕಾಲ ಕ್ರಮೇಣ ಸಮಸ್ಯೆಗಳು ಅವರನ್ನು ಹಿಂಡಿ ಹಿಪ್ಪೆ ಮಾಡತೊಡಗಿದವು.
ಒಂದು ಅಪಘಾತದಲ್ಲಿ ಆಶಾಳ ಅಣ್ಣ ಅಸುನೀಗಿದ. ಹಾಗಾಗಿ ಅವಳ ತಂದೆ ತಾಯಿಯ ಸ್ಥಿತಿ ಗಂಭೀರವಾಯಿತು. ಮಗನ ಸಾವಿನಿಂದ ಆಘಾತಕ್ಕೊಳಗಾದ ತಂದೆಯ ಆರೋಗ್ಯ ಮೇಲಿಂದ ಮೇಲೆ ಹದಗೆಡತೊಡಗಿತು. ಈ ಕಾರಣದಿಂದ ಆಶಾ ಮೇಲಿಂದ ಮೇಲೆ ತವರಿಗೆ ಹೋಗತೊಡಗಿದಳು. ವಿಶಾಲ್ ತನ್ನ ಹೆಂಡತಿ ಆಶಾಗೆ ನಿನ್ನ ತಂದೆತಾಯಿಯರನ್ನು ಇಲ್ಲಿಗೇ ಕರೆಸಿಕೋ ಎಂದು ಹೇಳಿದ. ಆದರೆ ಆಶಾಳ ತಾಯಿ ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಆಶಾ ತವರಿಗೆ ಹೋಗುವುದು ಬರುವುದು ನಡೆದೇ ಇತ್ತು. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಗಂಡಹೆಂಡತಿ ನಡುವೆ ಮನಸ್ತಾಪ ಉಂಟಾಗಿ ಇಬ್ಬರೂ 2010ರಲ್ಲಿ ಬೇರೆ ಬೇರೆ ವಾಸಿಸತೊಡಗಿದರು.
ಮಹಿಳಾ ಸೆಲ್‌ನ ಮುಖಾಂತರ ಆಶಾ ತನ್ನ ಪತಿಗೆ ನೋಟೀಸ್ ಜಾರಿ ಮಾಡಿ ಕೌಟುಂಬಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಳು. ತನಗೆ ಪರಿಹಾರ ಕೊಡಬೇಕೆಂದೂ ಅವಳು ಆಗ್ರಹಿಸಿದ್ದಳು.
2011ರಲ್ಲಿ ವಿಶಾಲ್ ದೆಹಲಿ ಕೋರ್ಟ್‌ಗೆ ವಿಚ್ಛೇದನದ ಅರ್ಜಿ ಸಲ್ಲಿಸಿದ. ಅಂದಿನಿಂದ ಇಂದಿನವರೆಗೂ ಆ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಮಧ್ಯೆ ಜೀವನಾಂಶದ ಪ್ರಕರಣ ಕೂಡ ಚಾಲ್ತಿಯಲ್ಲಿದೆ.
2015ರಲ್ಲಿ ನ್ಯಾಯಾಲಯ ವಿಶಾಲ್‌ಗೆ ನೀಡಿದ ಆದೇಶ ಏನೆಂದರೆ, ಆತ ಪ್ರತಿ ತಿಂಗಳೂ 25,000 ಜೀವನಾಂಶ ಕೊಡಬೇಕೆಂದು ಹೇಳಿತು. ಯಾವ ದಿನದಂದು ಅರ್ಜಿ ಸಲ್ಲಿಸಿದ್ದಳೋ ಆ ದಿನದಿಂದ ಈ ಆದೇಶ ಅನ್ವಯವಾಗುತ್ತಿತ್ತು.
ವಿಶಾಲ್ ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ. ಆದರೆ ಹೈಕೋರ್ಟ್ ಕೂಡ 3 ತಿಂಗಳಲ್ಲಿ ಜೀವನಾಂಶ ನೀಡಬೇಕೆಂದು ಆದೇಶ ನೀಡಿತು. ಬಳಿಕ ಸುಪ್ರೀಂ ಕೋರ್ಟ್ ಕದ ತಟ್ಟಿ ಈ ಆದೇಶವನ್ನು ಪ್ರಶ್ನಿಸಿದ. ಆದರೆ ಅಲ್ಲೂ ಕೂಡ ಅವನು ನಿರಾಶೆ ಅನುಭವಿಸಬೇಕಾಯಿತು. ಕೊನೆಯಲ್ಲಿ ವಿಶಾಲ್ ಕೊಡಬೇಕಾದ ಮೊತ್ತವನ್ನೆಲ್ಲ ಪಾವತಿಸಿದ. ಈ ಪ್ರಕರಣದಲ್ಲಿ ತಾನು ಮಧ್ಯೆ ಪ್ರವೇಶಿಸುವುದಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿತು.
ಕಳೆದ 7-8 ವರ್ಷದಿಂದ ಅವನು 16-17 ಲಕ್ಷ ರೂ. ಖರ್ಚು ಮಾಡಿದ. ದೈನಂದಿನ ಓಡಾಟ ಮತ್ತು ಮಾನಸಿಕ ಹಿಂಸೆ ಅನುಭವಿಸಬೇಕಾಗಿ ಬರುತ್ತದೆ. ಈಗ ಅವನಿಗೆ 45 ವರ್ಷ ಆಗಿಬಿಟ್ಟಿದೆ. ಇನ್ನು ಕೆಲವು ವರ್ಷ ಸರಿದುಬಿಟ್ಟರೆ ಅವನಿಗೆ ಮರು ಮದುವೆ ಕೂಡ ಕಷ್ಟವಾಗುತ್ತದೆ.
ವಿಶಾಲ್ ಈ ಕುರಿತಂತೆ ಹೀಗೆ ಹೇಳುತ್ತಾರೆ, ``1 ವರ್ಷಕ್ಕೆ 2 ಡೇಟ್ ಸಿಗುವುದು ಕಷ್ಟಕರ. ಆ ಡೇಟ್ ಸಿಕ್ಕಾಗ ಒಮ್ಮೊಮ್ಮೆ ನ್ಯಾಯಾಧೀಶರು ರಜೆ ಹಾಕಿರುತ್ತಾರೆ. ಇನ್ನೊಮ್ಮೆ ಎದುರು ಪಾರ್ಟಿಯ ವಕೀಲರು ಬೇರೆ ಡೇಟ್ ಕೇಳುತ್ತಾರೆ. ತಮ್ಮ ಶುಲ್ಕ ಸಿಗುತ್ತಿರಬೇಕು ಎನ್ನುವುದು ಅವರ ಇಚ್ಛೆಯಾಗಿರುತ್ತದೆ.''