ಯಾವುದೇ ಮಹಿಳೆಯ ರಂಗುರೂಪು ಹೇಗೆ ಇರಲಿ, ಅವಳು ಸದಾ ಸುಂದರವಾಗಿ ಕಂಗೊಳಿಸಲು ಬಯಸುತ್ತಾಳೆ. ಕಿಟೀ ಪಾರ್ಟಿ ಅಥವಾ ಇನ್ನಾವುದೇ ಫಂಕ್ಷನ್‌ ಇರಲಿ, ತನಗೆ ಆಹ್ವಾನ ದೊರೆತ ತಕ್ಷಣ ತನ್ನ ಡ್ರೆಸ್‌, ಜ್ಯೂವೆಲರಿ, ಮೇಕಪ್‌, ಹೇರ್‌ ಸ್ಟೈಲ್ ಇತ್ಯಾದಿಗಳ ಬಗ್ಗೆ ಚಿಂತಿಸುತ್ತಾಳೆ. ಈ ಒಂದು ಅವಕಾಶ ಬಳಸಿಕೊಂಡು ಅವಳು ತನ್ನ ದುಬಾರಿ ಡಿಸೈನರ್‌ಡ್ರೆಸ್‌, ಭಾರಿ ಒಡವೆ, ಬ್ಯೂಟಿಫುಲ್ ಮೇಕಪ್‌ನಿಂದ ಎಲ್ಲರ ಮುಂದೆ ಬೀಗಬಹುದು.

ಆದರೆ ಇಂಥ ಸಂದರ್ಭಗಳಲ್ಲಿ ನೀವು ಸರಳತೆಯಿಂದ ಆಕರ್ಷಕವಾಗಿ ಬದಲಾಗಿ ಎಲ್ಲರನ್ನೂ ಪ್ರಭಾವಿತಗೊಳಿಸುವ ಅವಕಾಶ ಕಳೆದುಕೊಳ್ಳಬೇಡಿ. ಇದಕ್ಕಾಗಿ ನಿಮ್ಮ ವ್ಯಕ್ತಿತ್ವದ ಕಡೆ ಹೆಚ್ಚಿನ ಗಮನ ಕೊಡಬೇಕು.

ನೀವು ಹೇಗೆ  ಕಾಣಿಸುತ್ತೀರಿ, ಹೇಗೆ ಇರುತ್ತೀರಿ, ಹೇಗೆ ನಡೆಯುತ್ತೀರಿ, ಹೇಗೆ ಕುಳಿತೇಳುವಿರಿ, ನಿಮ್ಮ ಡ್ರೆಸ್‌ ಸೆನ್ಸ್ ಹೇಗಿರುತ್ತದೆ, ಆ ಮೂಲಕ ನಿಮ್ಮ ಪರ್ಸನಾಲ್ಟಿ ಹೇಗಾಗಿದೆ, ನಿಮ್ಮ ಬಾಡಿ ಲ್ಯಾಂಗ್ವೇಜ್‌ ಇತ್ಯಾದಿಗಳೇ ನಿಮಗೆ ಆಕರ್ಷಕ ವ್ಯಕ್ತಿತ್ವ ಒದಗಿಸಬಲ್ಲವು ಎಂಬುದನ್ನು ನೆನಪಿಡಿ.

ಬಾಹ್ಯ ಸೌಂದರ್ಯಕ್ಕೇ ಇಂದು ಹೆಚ್ಚು ಮಾರ್ಕ್ಸ್ ಎಂಬುದು ಗೊತ್ತೇ ಇದೆ, ಆದರೆ ಆಂತರಿಕ ಸೌಂದರ್ಯ ಅದಕ್ಕೂ ಮಿಗಿಲಾದುದು. ಇದರಿಂದ ಎಲ್ಲರ ಹೃದಯ ಗೆಲ್ಲಬಹುದು. ನಿಮ್ಮ ಆತ್ಮವಿಶ್ವಾಸ ಎಂದೂ ಕಳೆದುಕೊಳ್ಳಬೇಡಿ. ಬ್ಯೂಟಿಫುಲ್ ಸ್ಮಾರ್ಟ್‌ ಎನಿಸಲು ನಿಮ್ಮ ಕೆಲವು ಅಭ್ಯಾಸಗಳನ್ನು ಸುಧಾರಿಸಿ :

ಹೀಗೆ ಸುಂದರವಾಗಿ ಕಂಗೊಳಿಸಿ

ಯಾವುದೇ ಫಂಕ್ಷನ್‌ ಅಥವಾ ಪಾರ್ಟಿಯಲ್ಲಿ ಬಂದಂಥ ಹೆಚ್ಚಿನ ಮಹಿಳೆಯರು ದುಬಾರಿ ಡಿಸೈನರ್‌ ಸೀರೆ, ಭಾರಿ ಒಡವೆಗಳನ್ನು ಧರಿಸಿ ಮೆರೆಯುತ್ತಿದ್ದರೆ, ದಪ್ಪ ಮೇಕಪ್‌ ಪದರ ಮೆತ್ತಿಕೊಂಡು ಹೊಳೆಯುತ್ತಿದ್ದರೆ, ನೀವು ಸರಳ ಗೆಟಪ್‌ನಲ್ಲಿ ಸೌಮ್ಯವಾಗಿ ವರ್ತಿಸುತ್ತಾ ನಸುನಗುತ್ತಿದ್ದರೆ, ಖಂಡಿತಾ ಎಲ್ಲರಿಗಿಂತ ನೀವೇ ಅಲ್ಲಿ ಆಕರ್ಷಣೆಯ ಕೇಂದ್ರವಾಗುತ್ತೀರಿ.

ಫಂಕ್ಷನ್‌ಗೆ ತಕ್ಕಂತೆ ಹೀಗೆ ಸಿದ್ಧರಾಗಿ. ಪಾರ್ಟಿಗೆ ಪೂರಕ ಡ್ರೆಸ್‌ ಇರಲಿ. ಸಮಯ ಮತ್ತು ಉದ್ದೇಶ ನೆನಪಿರಿಸಿಕೊಂಡು ತಯಾರಾಗಬೇಕು. ಡೀಸೆಂಟ್‌ ಆಗಿ ಅಚ್ಚುಕಟ್ಟಾಗಿ ನೀವು ಉಟ್ಟುಕೊಂಡು ಬಂದಿರುವ ಕಾಟನ್‌ ಸೀರೆ ಕೂಡ ಕಾಂಜೀವರಂ ಸೀರೆಗಿಂತ ಹೆಚ್ಚು ಪ್ರಶಂಸೆಗೆ ಒಳಗಾಗುತ್ತದೆ. ಸೀರೆಗೆ ತಕ್ಕಂತೆ ಇತರ ಆ್ಯಕ್ಸೆಸರೀಸ್‌ ಇರಲಿ. ಬೇರೆಯವರಿಗಿಂತ ನೀವು ಫಿಟ್‌ & ಫೈನ್‌ ಆಗಿ ಕಂಗೊಳಿಸಿದಾಗ, ನಿಮ್ಮ ಒಳಗಿನಿಂದ ಆತ್ಮವಿಶ್ವಾಸ ತಂತಾನೇ ಉಕ್ಕಿಬರುತ್ತದೆ. ನೀವು ಬೇರೆ ಹೆಂಗಸರೊಡನೆ ಹೇಗೆ ಬೆರೆಯುತ್ತೀರಿ, ಅವರೊಡನೆ ಹೇಗೆ ಸಂಭಾಷಿಸುತ್ತೀರಿ…. ಇವೆಲ್ಲ ತುಂಬಾ ಮುಖ್ಯ.

ಇಂದಿನ ಆಧುನಿಕ ಸಮಾಜದಲ್ಲಿ, ಎಲ್ಲಕ್ಕೂ ಮೊದಲು ಜನ ನಿಮ್ಮ ಡ್ರೆಸ್‌ಗಮನಿಸಿಯೇ ನಿಮ್ಮನ್ನು ಎಡೆ ಹಾಕುತ್ತಾರೆ. ನೀವು ರೆಡಿಯಾಗಿ ಬಂದಿರುವ ರೀತಿ ಮುಖ್ಯವಾಗುತ್ತದೆಯೇ ಹೊರತು ಅದು ದುಬಾರಿ ಡಿಸೈನರ್‌ ಮೆಟೀರಿಯಲ್ ಅಲ್ಲವೇ ಎಂಬುದು ಮುಖ್ಯವಲ್ಲ. ನೀವು ಪಾರ್ಟಿಯಲ್ಲಿ ಯಾವುದೇ ಡ್ರೆಸ್‌ ಧರಿಸಿರಲಿ, ಅದು ಸಂದರ್ಭಕ್ಕೆ ಸೂಕ್ತವಾಗಿರಬೇಕು, ನಿಮಗೆ ಹೊಂದುವಂತಿರಬೇಕು. ಜೊತೆಗೆ ನೀವು ಆ ಡ್ರೆಸ್‌ನ್ನು ಸರಿಯಾಗಿ ಮೇಂಟೇನ್‌ ಮಾಡುತ್ತಿರಬೇಕು.

ಮುಖವೇ ವ್ಯಕ್ತಿತ್ವದ ದರ್ಪಣ

ನೀವು ಸಿನಿಮಾ, ಟಿವಿ ಶೋಗಳಲ್ಲಿ ನೋಡಿರಬಹುದು, ನಟಿಯರು ಗೌನ್‌ಯಾ ಡ್ರೆಸ್‌ ಧರಿಸಿ ಸ್ಟೇಜ್‌ ಮೇಲೆ ಪಾರ್ಟಿಗಾಗಿ ಬರುತ್ತಾರೆ. ಅದನ್ನಂತೂ ಅವರು ಸಂಭಾಳಿಸಲು ಆಗದು, ಎಲ್ಲರ ಮುಂದೆ ಆಗ ಅವರು ಸಂಕೋಚಕ್ಕೆ ಒಳಗಾಗುತ್ತಾರೆ. ಆದ್ದರಿಂದ ನೀವು ನಿಮ್ಮ ಪರ್ಸನಾಲ್ಟಿ, ವಯಸ್ಸು, ಗೆಟಪ್‌ಗೆ ತಕ್ಕಂತೆ ನಿಮ್ಮ ಡ್ರೆಸ್‌ಆಯ್ಕೆ ಮಾಡಿ.

ಸರಳತೆಯನ್ನು ಆಕರ್ಷಕಗೊಳಿಸಲು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ಮುಖ ನಿಮ್ಮ ವ್ಯಕ್ತಿತ್ವದ ದರ್ಪಣವಾಗಿದೆ. ಆದ್ದರಿಂದ ಮೊಟ್ಟ ಮೊದಲು ನಿಮ್ಮ ಚರ್ಮವನ್ನು ಕಾಂತಿಯುತ ಮತ್ತು ಆಕರ್ಷಕಗೊಳಿಸಲು ಅದರ ಶುಚಿತ್ವ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಮುಖದ ಚರ್ಮ ಬಲು ನಾಜೂಕು. ಆದ್ದರಿಂದ ನಿಮ್ಮ  ಕ್ಲೆನ್ಸರ್‌ ಆಲ್ಕೋಹಾಲ್‌ ಫ್ರೀ ಆಗಿರಬೇಕು. ನೈಸರ್ಗಿಕ ಅಂಶಗಳಾದ ಹಾಲು, ಮೊಸರು, ಅರಿಶಿನ, ಚಂದನ ಇತ್ಯಾದಿ ಬಳಸಿ ಮುಖವನ್ನು ಶುಚಿಗೊಳಿಸಿದರೆ, ಈ ವಸ್ತುಗಳು ನಿಮಗೆ ನೈಸರ್ಗಿಕ ಸೌಂದರ್ಯ, ಹೊಳಪನ್ನು ತಂದುಕೊಡುತ್ತವೆ. ಪ್ರತಿದಿನ 8-10 ಗ್ಲಾಸ್‌ ನೀರು ಕುಡಿಯುವುದರಿಂದಲೂ ಉತ್ತಮ ಪ್ರಭಾವ ಸಿಗುತ್ತದೆ. ಕೈಕಾಲು, ಕೂದಲಿನ ಕಡೆಯೂ ಅಷ್ಟೇ ಗಮನ ಕೊಡಬೇಕು. ಐ ಬ್ರೋಸ್‌ಶೇಪ್‌ ಕೂಡ ಸವರಿ ಇರಬೇಕು. ತುಟಿಗಳನ್ನೂ ಸದಾ ಮೃದುವಾಗಿರುವಂತೆ ಗಮನಿಸಿ.

ಮುಖದಲ್ಲಿ ನಗುವಿರಲಿ : ಸದಾ ನಿಮ್ಮ ಮುಖದಲ್ಲಿ ಒಂದು ಬ್ಯೂಟಿಫುಲ್ ಸ್ಮೈಲ್ ಇರಲಿ. ಲವಲವಿಕೆಯಿಂದ ಕೂಡಿದ, ನಸುನಗು ಬೀರುವ ಮುಖ ಎಲ್ಲರಿಗೂ ಇಷ್ಟ. ಹೆಸರಿಗೆ ತಕ್ಕಂತೆ ಸುಹಾಸಿನಿ ಖ್ಯಾತಿ ಪಡೆದದ್ದು ಈ ಕಾರಣಕ್ಕಾಗಿಯೇ! ಇದು ಅಪರಿಚಿತರನ್ನೂ ಹತ್ತಿರ ತರಬಲ್ಲದು.

ಅಭಿವಾದನ ಇರಲಿ : ನೀವು ಯಾರನ್ನೇ ಭೇಟಿಯಾಗಲಿ ನಿಮ್ಮ ಪರಿಚಯ, ಸ್ನೇಹ, ಸಲುಗೆಗೆ ತಕ್ಕಂತೆ ನಮಸ್ತೆ, ಹಾಯ್‌, ಹಲೋ ಹೇಳಲು ಮರೆಯದಿರಿ. ಶೇಕ್‌ ಹ್ಯಾಂಡ್‌ ಮಾಡಿ, ಹಿರಿಯರಾದರೆ ಕೈ ಮುಗಿದು, ಆಶೀರ್ವಾದ ಪಡೆಯಿರಿ. ಸಮವಯಸ್ಕರನ್ನು ಆಲಂಗಿಸಿ ಸಂತಸ ಹಂಚಿಕೊಳ್ಳಿ. ಈ ಶಿಷ್ಟಾಚಾರ ನಿಮ್ಮ ವ್ಯಕ್ತಿತ್ವಕ್ಕೆ ದೊಡ್ಡ ಪ್ಲಸ್‌ ಪಾಯಿಂಟ್‌.

ಆದರಿಸಲು ಮರೆಯದಿರಿ : ನವು ಎಲ್ಲೇ ಹೋಗಿರಿ, ಅಲ್ಲಿ ಚಿಕ್ಕ ಮಕ್ಕಳು ಕಾಣಿಸಿದರೆ ಅವರೊಂದಿಗೆ ನಕ್ಕುನಲಿಯಿರಿ. ನೀವು ದೊಡ್ಡವರು ಎಂಬ ಹಮ್ಮು ಬಿಟ್ಟು ಮಕ್ಕಳೊಂದಿಗೆ ಮಕ್ಕಳಾಗಿ. ಇಂಥ ವ್ಯಕ್ತಿತ್ವದವರು ಎಲ್ಲೇ ಹೋಗಲಿ, ಮಕ್ಕಳು ಬಂದು ಅವರನ್ನು ಮುತ್ತಿಕೊಳ್ಳುತ್ತಾರೆ. ಹೌ ನೈಸ್‌, ವೆರಿ ಕ್ಯೂಟ್‌, ಸೋ ಸ್ವೀಟ್‌…… ಇತ್ಯಾದಿ ಕಮೆಂಟ್ಸ್ ನೀಡಲು ಮರೆಯದಿರಿ. ಅದೇ ತರಹ ನಿಮ್ಮ ಸಮವಯಸ್ಕರೊಂದಿಗೆ ಬೆರೆತಾಗ, `ಏನಿವತ್ತು….. ಈ ಡ್ರೆಸ್‌ನಲ್ಲಿ ಮಿಂಚಿಂಗು!’ ಅಂತ ಅವರನ್ನು ಖುಷಿಪಡಿಸಿ. ಒಟ್ಟಾರೆ ಎಲ್ಲರೊಂದಿಗೆ ಸಹಜವಾಗಿ ಬೆರೆತು ಒಂದಾಗಿ, ಮುಖ ಗಂಟಿಕ್ಕುವವರು ಯಾರಿಗೂ ಬೇಡ.

ಮನರಂಜನೆಯೂ ಮುಖ್ಯ : ಜನರೊಂದಿಗೆ ಸಹಜವಾಗಿ ಬೆರೆಯುವಾಗ ವರ್ತಮಾನದ ವಿಷಯಗಳು, ಪ್ರಮುಖ ಘಟನೆಗಳ ವಿಶ್ಲೇಷಣೆ, ಸಣ್ಣಪುಟ್ಟ ಜೋಕ್ಸ್ ಇತ್ಯಾದಿ ಹೇಳಿ ನೀವೆಷ್ಟು ಸರಳ ವ್ಯಕ್ತಿತ್ವದವರು ಎಂದು ನಿರೂಪಿಸಿ. ನಿಮ್ಮಲ್ಲಿ ವಿಶೇಷ ಪ್ರತಿಭೆ ಇದ್ದರೆ, ಅಂದ್ರೆ ಹಾಡುಗಾರಿಕೆ ಇತ್ಯಾದಿ ಅವಕಾಶ ಸಿಕ್ಕಾಗ ನಾಲ್ಕು ಜನರ ಮಧ್ಯೆ ಅದನ್ನು ಪ್ರದರ್ಶಿಸಿ ಒಳ್ಳೆಯ ಹೆಸರು ಪಡೆಯಿರಿ. ಆಗ ನೀವು ಆಕರ್ಷಣೆಯ ಕೇಂದ್ರವಾಗುವಿರಿ.

ಉತ್ತಮ ಶ್ರೋತೃಗಳಾಗಿ : ನಾವೇ ಸದಾ ವಟವಟ ಎನ್ನುತ್ತಿರುವುದಕ್ಕಿಂತ ಇನ್ನೊಬ್ಬರು ಹೇಳುವುದನ್ನು ಸಹನೆಯಿಂದ ಕೇಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ನೀವಾಗಿ ಅವಸರದಲ್ಲಿ ಏನಾದರೂ ಬಡಬಡಿಸುವ ಮುನ್ನ, ಎದುರಿನವರು ತಮ್ಮ ಮಾತು ಪೂರೈಸಲು ಬಿಡಿ. ನಂತರ ಸಂದರ್ಭಕ್ಕೆ ತಕ್ಕಂತೆ ನಿಮ್ಮ ಪ್ರತಿಕ್ರಿಯೆ, ಮಂದಹಾಸ, ಸಹಾನುಭೂತಿ, ಸಲಹೆ, ಸಹಾಯ ನೀಡಿ. ಸಾಧ್ಯವಾದರೆ ಸಹಾಯ ಮಾಡಿ, ನಿಮ್ಮ ಕೈ ಮೀರಿದ್ದರೆ `ಕ್ಷಮಿಸಿ….. ಸಾಧ್ಯವಿಲ್ಲ’ ಎಂದು ವಿನಯವಾಗಿ ತಿಳಿಸಿ.

ಹೊಗಳಲು ಮರೆಯಬೇಡಿ : ಪ್ರಪಂಚದಲ್ಲಿ ತಮ್ಮ ಹೊಗಳಿಕೆ ಕೇಳಿ ಹಿಗ್ಗದ ವ್ಯಕ್ತಿಗಳಿಲ್ಲ. ಒಂದು ವಿಷಯ ನೆನಪಿಡಿ, ಪ್ರಶಂಸೆ ಸಕಾರಣವಾಗಿ ಇರಬೇಕು, ಬರಿಯ ಹುಸಿ ಪ್ರಶಂಸೆಗಳು ಗೊತ್ತಾಗುತ್ತವೆ, ಕೆಲಸಕ್ಕೆ ಬಾರವು. ಎದುರಿನವರ ಗುಣ, ಸ್ವಭಾವ ಉತ್ತಮವಾದುದಾದರೆ ಸಂದರ್ಭಕ್ಕೆ ತಕ್ಕಂತೆ ಅವರನ್ನು ಹೊಗಳಬೇಕು. ಬೇರೆಯವರ ಮನಸ್ಸನ್ನು ಅರಿತು, ಅದಕ್ಕೆ ತಕ್ಕಂತೆ ಮಾತನಾಡಿ. ಆಗ ನೀವು ಬೇಗ ಖ್ಯಾತರಾಗುವಿರಿ.

ಸಹಾಯಹಸ್ತ ಚಾಚಲು ಹಿಂಜರಿಯದಿರಿ : ಯಾರೇ ಇರಲಿ, ನಿಮ್ಮಿಂದ ಸಹಾಯ ಅಪೇಕ್ಷಿಸಿದಾಗ, ಸಾಧ್ಯವಾದಷ್ಟೂ ತುಂಬು ಮನದಿಂದ ಅವರಿಗೆ ಸಹಾಯ ಮಾಡಿ, ಸಲಹೆ ನೀಡಿ, ಮಾರ್ಗದರ್ಶನ ತೋರಿ. ನೀವು ಲೆಕ್ಚರರ್‌ ಆಗಿದ್ದರೆ ಪರಿಚಿತರ ಮಕ್ಕಳಿಗೆ ಅಥವಾ ಕೇಳಿದವರಿಗೆ ಶೈಕ್ಷಣಿಕ ಮಾಹಿತಿ ನೀಡಿ. ಅಡ್ಮಿಶನ್‌, ಹಾಸ್ಟೆಲ್‌, ಬುಕ್ಸ್, ಸ್ಕಾಲರ್‌ಶಿಪ್‌, ಕಾಲೇಜ್‌ ಇತ್ಯಾದಿಗಳ ಮಾಹಿತಿ ಕೊಡಿ. ಇದರಿಂದ ನೀವು ಎಲ್ಲರ ಆದರ ಮನ್ನಣೆ ಗಳಿಸುವಿರಿ.

ಸದಾ ಸಂಪರ್ಕದಲ್ಲಿರಿ : ಇತ್ತೀಚಿನ ವಾಟ್ಸ್ಆ್ಯಪ್‌, ಫೇಸ್‌ಬುಕ್‌ಗಳಂಥ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ತುಂಬಾ ಸಕ್ರಿಯರಾಗಿರುತ್ತಾರೆ. ಇದರಿಂದಾಗಿ ಬಹಳಷ್ಟು ಜನರ ಸಂಪರ್ಕ ಹೊಂದಲು ಸಾಧ್ಯ. ಅವರವರ ಬರ್ತ್‌ಡೇ, ಆ್ಯನಿವರ್ಸರಿ, ಹಬ್ಬಗಳು, ನ್ಯೂ ಇಯರ್‌ ಸಂದರ್ಭಗಳಲ್ಲಿ ಸಂದೇಶಗಳ ಮುಖಾಂತರ ಪರಸ್ಪರ ಟಚ್‌ನಲ್ಲಿರಬಹುದು. ಇದರಲ್ಲೂ ನಿಮ್ಮ ಸರಳತೆ, ನಿಮ್ಮ ವ್ಯಕ್ತಿತ್ವದ ವರ್ಚಸ್ಸು ಪ್ರದರ್ಶಿಸಬಹುದು.

ಸರಳತೆಯನ್ನು ಆಕರ್ಷಕವಾಗಿ ತೋರ್ಪಡಿಸಲು ಎಲ್ಲಕ್ಕೂ ಮುಖ್ಯವಾಗಿ ಬೇಕಾದುದು ನಿಮ್ಮ ಆರೋಗ್ಯ. ಸರಿಯಾದ ಡಯೆಟ್ ಫಾಲೋ ಮಾಡಿ, ನಿಮ್ಮ ಲೈಫ್‌ ಸ್ಟೈಲ್‌ನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ. ಪ್ಯಾಕ್ಡ್ ಫುಡ್‌ ಎಂದೂ ಸೇವಿಸಬೇಡಿ. ವ್ಯಾಯಾಮ ಮತ್ತು ಮಾರ್ನಿಂಗ್‌ ವಾಕಿಂಗ್‌ ಮಿಸ್‌ ಮಾಡಬೇಡಿ. ಈ ರೀತಿ ಆರೋಗ್ಯಕರ, ಅಂದದ ಮೈಕಟ್ಟು ಹೊಂದಲು, ನಿಮ್ಮ ಆಹಾರ ವ್ಯವಹಾರಗಳಲ್ಲಿ ಸಂಯಮ ಇರಲಿ. ನಿಮ್ಮ ಬಾಡಿ ಪೋಸ್ಚರ್‌ ಕಡೆ ಅಗತ್ಯ ಗಮನವಿರಲಿ.

– ಜಿ. ಪದ್ಮಾವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ