ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಮತ್ತು ನ್ಯಾಯಾಲಯಗಳಲ್ಲಿ ವರ್ಷಾನುವರ್ಷಗಳಿಂದ ನಡೆಯುತ್ತಿರುವ ಮೊಕದ್ದಮೆಗಳಿಂದ ಯಾರಿಗೆ ಲಾಭ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಹಲವು ಕುಟುಂಬಗಳ ಭವಿಷ್ಯ ಪಣಕ್ಕೊಡ್ಡಲ್ಪಟ್ಟಿರುತ್ತದೆ. ಇಂತಹ ಸ್ಥಿತಿಗೆ ಗಂಡ ಹೆಂಡತಿ ಮಾತ್ರ ಜವಾಬ್ದಾರರೊ ಅಥವಾ ಕಾನೂನು ಮತ್ತು ನ್ಯಾಯಾಲಯದ ಪ್ರಕ್ರಿಯೆಗಳೋ, ಆ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ…

ದೆಹಲಿಯ ವಿಶಾಲ್ 1995ರಲ್ಲಿ ಆಶಾಳನ್ನು ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲ ಸರಿಯಿತ್ತು. ಅವರಿಗೆ ಒಬ್ಬ ಮಗಳು ಇದ್ದಾಳೆ. ಆದರೆ ಕಾಲ ಕ್ರಮೇಣ ಸಮಸ್ಯೆಗಳು ಅವರನ್ನು ಹಿಂಡಿ ಹಿಪ್ಪೆ ಮಾಡತೊಡಗಿದವು.

ಒಂದು ಅಪಘಾತದಲ್ಲಿ ಆಶಾಳ ಅಣ್ಣ ಅಸುನೀಗಿದ. ಹಾಗಾಗಿ ಅವಳ ತಂದೆ ತಾಯಿಯ ಸ್ಥಿತಿ ಗಂಭೀರವಾಯಿತು. ಮಗನ ಸಾವಿನಿಂದ ಆಘಾತಕ್ಕೊಳಗಾದ ತಂದೆಯ ಆರೋಗ್ಯ ಮೇಲಿಂದ ಮೇಲೆ ಹದಗೆಡತೊಡಗಿತು. ಈ ಕಾರಣದಿಂದ ಆಶಾ ಮೇಲಿಂದ ಮೇಲೆ ತವರಿಗೆ ಹೋಗತೊಡಗಿದಳು. ವಿಶಾಲ್ ‌ತನ್ನ ಹೆಂಡತಿ ಆಶಾಗೆ ನಿನ್ನ ತಂದೆತಾಯಿಯರನ್ನು ಇಲ್ಲಿಗೇ ಕರೆಸಿಕೋ ಎಂದು ಹೇಳಿದ. ಆದರೆ ಆಶಾಳ ತಾಯಿ ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಆಶಾ ತವರಿಗೆ ಹೋಗುವುದು ಬರುವುದು ನಡೆದೇ ಇತ್ತು. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಗಂಡಹೆಂಡತಿ ನಡುವೆ ಮನಸ್ತಾಪ ಉಂಟಾಗಿ ಇಬ್ಬರೂ 2010ರಲ್ಲಿ ಬೇರೆ ಬೇರೆ ವಾಸಿಸತೊಡಗಿದರು.

ಮಹಿಳಾ ಸೆಲ್‌ನ ಮುಖಾಂತರ ಆಶಾ ತನ್ನ ಪತಿಗೆ ನೋಟೀಸ್‌ ಜಾರಿ ಮಾಡಿ ಕೌಟುಂಬಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಳು. ತನಗೆ ಪರಿಹಾರ ಕೊಡಬೇಕೆಂದೂ ಅವಳು ಆಗ್ರಹಿಸಿದ್ದಳು.

2011ರಲ್ಲಿ ವಿಶಾಲ್ ‌ದೆಹಲಿ ಕೋರ್ಟ್‌ಗೆ ವಿಚ್ಛೇದನದ ಅರ್ಜಿ ಸಲ್ಲಿಸಿದ. ಅಂದಿನಿಂದ ಇಂದಿನವರೆಗೂ ಆ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಮಧ್ಯೆ ಜೀವನಾಂಶದ ಪ್ರಕರಣ ಕೂಡ ಚಾಲ್ತಿಯಲ್ಲಿದೆ.

2015ರಲ್ಲಿ ನ್ಯಾಯಾಲಯ ವಿಶಾಲ್‌ಗೆ ನೀಡಿದ ಆದೇಶ ಏನೆಂದರೆ, ಆತ ಪ್ರತಿ ತಿಂಗಳೂ 25,000 ಜೀವನಾಂಶ ಕೊಡಬೇಕೆಂದು ಹೇಳಿತು. ಯಾವ ದಿನದಂದು ಅರ್ಜಿ ಸಲ್ಲಿಸಿದ್ದಳೋ ಆ ದಿನದಿಂದ ಈ ಆದೇಶ ಅನ್ವಯವಾಗುತ್ತಿತ್ತು.

ವಿಶಾಲ್ ‌ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ. ಆದರೆ ಹೈಕೋರ್ಟ್‌ ಕೂಡ 3 ತಿಂಗಳಲ್ಲಿ ಜೀವನಾಂಶ ನೀಡಬೇಕೆಂದು ಆದೇಶ ನೀಡಿತು. ಬಳಿಕ ಸುಪ್ರೀಂ ಕೋರ್ಟ್‌ ಕದ ತಟ್ಟಿ ಈ ಆದೇಶವನ್ನು ಪ್ರಶ್ನಿಸಿದ. ಆದರೆ ಅಲ್ಲೂ ಕೂಡ ಅವನು ನಿರಾಶೆ ಅನುಭವಿಸಬೇಕಾಯಿತು. ಕೊನೆಯಲ್ಲಿ ವಿಶಾಲ್ ಕೊಡಬೇಕಾದ ಮೊತ್ತವನ್ನೆಲ್ಲ ಪಾವತಿಸಿದ. ಈ ಪ್ರಕರಣದಲ್ಲಿ ತಾನು ಮಧ್ಯೆ ಪ್ರವೇಶಿಸುವುದಿಲ್ಲವೆಂದು ಸುಪ್ರೀಂ ಕೋರ್ಟ್‌ ಹೇಳಿತು.

ಕಳೆದ 7-8 ವರ್ಷದಿಂದ ಅವನು 16-17 ಲಕ್ಷ ರೂ. ಖರ್ಚು ಮಾಡಿದ. ದೈನಂದಿನ ಓಡಾಟ ಮತ್ತು ಮಾನಸಿಕ ಹಿಂಸೆ ಅನುಭವಿಸಬೇಕಾಗಿ ಬರುತ್ತದೆ. ಈಗ ಅವನಿಗೆ 45 ವರ್ಷ ಆಗಿಬಿಟ್ಟಿದೆ. ಇನ್ನು ಕೆಲವು ವರ್ಷ ಸರಿದುಬಿಟ್ಟರೆ ಅವನಿಗೆ ಮರು ಮದುವೆ ಕೂಡ ಕಷ್ಟವಾಗುತ್ತದೆ.

ವಿಶಾಲ್ ‌ಈ ಕುರಿತಂತೆ ಹೀಗೆ ಹೇಳುತ್ತಾರೆ, “1 ವರ್ಷಕ್ಕೆ 2 ಡೇಟ್‌ ಸಿಗುವುದು ಕಷ್ಟಕರ. ಆ ಡೇಟ್‌ ಸಿಕ್ಕಾಗ ಒಮ್ಮೊಮ್ಮೆ ನ್ಯಾಯಾಧೀಶರು ರಜೆ ಹಾಕಿರುತ್ತಾರೆ. ಇನ್ನೊಮ್ಮೆ  ಎದುರು ಪಾರ್ಟಿಯ ವಕೀಲರು ಬೇರೆ ಡೇಟ್‌ ಕೇಳುತ್ತಾರೆ. ತಮ್ಮ ಶುಲ್ಕ ಸಿಗುತ್ತಿರಬೇಕು ಎನ್ನುವುದು ಅವರ ಇಚ್ಛೆಯಾಗಿರುತ್ತದೆ.”

ವಿಚ್ಛೇದನ ವಿಳಂಬ ಬೇಸತ್ತ ಜನ

ಭಾರತದಲ್ಲಿ ಹಲವು ವರ್ಷಗಳ ಕಾಲ ನಡೆಯುತ್ತಿರುವ ಪ್ರಕರಣಗಳ ಸಂಖ್ಯೆ ಸಾವಿರಗಳಲ್ಲ, ಕೋಟಿಗಳಲ್ಲಿದೆ.

ವಿಚ್ಛೇದನದ ಪ್ರತಿಯೊಂದು ಪ್ರಕರಣದಲ್ಲೂ 2 ಜೀವಗಳು ಮತ್ತು ಅದೆಷ್ಟೋ ಕುಟುಂಬಗಳು ಶಾಮೀಲಾಗಿರುತ್ತವೆ. ಭಾರತದಲ್ಲಿ ವಿಚ್ಛೇದನ ಹಾಗೂ ಮಕ್ಕಳನ್ನು ಕಸ್ಟಡಿಗೆ ಕೊಡುವಂತೆ ಕೇಳುವ ಪ್ರಕರಣಗಳು ಅನೇಕ ವರ್ಷಗಳಿಂದ ನಡೆಯುತ್ತಲೇ ಇವೆ. ಇದರಿಂದ ಜನರಿಗೆ ಹಲವು ರೀತಿಯಲ್ಲಿ ಸಮಸ್ಯೆ ಉಂಟಾಗುತ್ತವೆ.

ಬೆಂಗಳೂರಿನ ರವಿ ಅವರಿಗೂ ಹೀಗೆಯೇ ಆಯಿತು. ಅವರ ಮದುವೆಯಾದದ್ದು 2001ರಲ್ಲಿ. ಅವರ ತಂದೆ ಮಹಾನಗರ ಪಾಲಿಕೆಯಲ್ಲಿದ್ದಾರೆ, ತಾಯಿ ಟೀಚರ್‌.

ಈ ಕುರಿತಂತೆ ರವಿ ಹೀಗೆ ಹೇಳುತ್ತಾರೆ, “ಮದುವೆಯಾದ 3 ತಿಂಗಳಲ್ಲಿಯೇ ನಮ್ಮಿಬ್ಬರ ನಡುವೆ ಮನಸ್ತಾಪ ಶುರುವಾಯಿತು. ಶೃತಿ ನನ್ನ ತಂದೆ ತಾಯಿಯರನ್ನು ಇಷ್ಟಪಡುತ್ತಿರಲಿಲ್ಲ. ಅವಳು ಮೇಲಿಂದ ಮೇಲೆ ತವರಿಗೆ ಹೋಗುತ್ತಿದ್ದಳು. ಅವಳ ಒತ್ತಡಕ್ಕೆ ಮಣಿದು ಮನೆಯಲ್ಲಿ ಪಾರ್ಟಿಶನ್‌ ಮಾಡಿಸಿದೆ. ಆದರೆ ತನ್ನ ತಮ್ಮನ ಮದುವೆ ನಿಶ್ಚಿತಾರ್ಥಕ್ಕೆ ತವರಿಗೆ ಹೋದವಳು ಪುನಃ ವಾಪಸ್‌ ಬರಲೇ ಇಲ್ಲ.

“ಮಹಿಳಾ ಆಯೋಗದ ಮುಖಾಂತರ ಶೃತಿ ನಮಗೆ ನೋಟೀಸ್‌ ಕಳಿಸಿಕೊಟ್ಟಳು. ನಮ್ಮ ವಿರುದ್ಧ  ಅನುಚ್ಛೇದ 498ಎ, 406 ಹಾಗೂ 34ರ ಅನ್ವಯ ಆರೋಪ ಹೊರಿಸಲಾಗಿತ್ತು.

“ಮೇ 30, 2002ರಂದು ನಾನು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ದಾಖಲಿಸಿದೆ. ಕೆಲವು ದಿನಗಳ ಬಳಿಕ ನಮಗೆ ಜಾಮೀನು ದೊರಕಿತು. ವಿಚ್ಛೇದನ ಮತ್ತು ಜೀವನಾಂಶ ಎರಡರ ಬಗೆಗೂ ವಿಚಾರಣೆ ನಡೆಯುತ್ತಿತ್ತು.

“ಹಲವು ವರ್ಷಗಳ ಬಳಿಕ ಯಾವುದೇ ತೀರ್ಪು ಹೊರಬರದೇ ಇದ್ದಾಗ ನಾವಿಬ್ಬರೂ ಪರಸ್ಪರ ಒಂದು ತೀರ್ಮಾನಕ್ಕೆ ಬರಲು ನಿರ್ಧರಿಸಿದೆವು. ನಾನು 2009ರಲ್ಲಿ 2 ಲಕ್ಷ ರೂ. ಕೊಟ್ಟು ಫುಲ್ ಫೈನಲ್ ಸೆಟಲ್‌ಮೆಂಟ್‌ ಮಾಡಿಕೊಂಡೆ.

“ಅಷ್ಟೊಂದು ದೀರ್ಘಕಾಲ ನಡೆದ ಈ ಕೇಸ್‌ನ ಓಡಾಟಕ್ಕಾಗಿ ನನಗೆ 10-15 ಲಕ್ಷ ರೂ. ಖರ್ಚಾಯಿತು. ನಾನು ಮಾನಸಿಕವಾಗಿ ಸಿಕ್ಕಾಪಟ್ಟೆ ತೊಂದರೆ ಅನುಭವಿಸಿದೆ. ನಾನು ವಿಚ್ಛೇದನ ಕೊಟ್ಟು 9 ವರ್ಷ ಆಯಿತು. ಆದರೆ ಇದುವರೆಗೂ ನಾನು ಪುನಃ ಮದುವೆಯಾಗಲಿಲ್ಲ.

“ನನ್ನ ತಂದೆತಾಯಿಯರು ಇದೇ ನೋವಿನಲ್ಲಿ ಅಸುನೀಗಿದರರು. ಎಷ್ಟೋ ಸಲ ನ್ಯಾಯಾಲಯದಲ್ಲಿ ಪ್ರಕರಣಗಳು ಎಷ್ಟೊಂದು ವರ್ಷ ನಿರ್ಣಯವಾಗದೆ ಹಾಗೆಯೇ ಉಳಿದುಬಿಡುತ್ತವೆಂದರೆ, ಮನುಷ್ಯನ ಸಹನೆಯ ಕಟ್ಟೆ ಒಡೆದುಬಿಡುತ್ತದೆ. ಅದಕ್ಕೆ ಮೇಲಾಗಿ ಪ್ರಕರಣ ನಮ್ಮ ಪರವಾಗಿ ಆಗದೇ ಹೋದರೆ ವ್ಯಕ್ತಿಯ ಮನಃಸ್ಥಿತಿ ಹೇಗಿರುತ್ತದೆಂದು ಊಹಿಸುವುದು ಕಷ್ಟ.”

ಫೆಬ್ರವರಿ 26, 1999ರಂದು ಸಂಜಯ್‌ ಮದುವೆ ಸುಮಾ ಜೊತೆ ಜರುಗಿತು. ಸಂಜಯ್‌ ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಸುಮಾಳಿಗೆ ಯಾವುದೇ ಉದ್ಯೋಗ ಇರಲಿಲ್ಲ. ಈ ದಂಪತಿಗೆ 2002ರಲ್ಲಿ ಮೊದಲನೇ ಮಗಳು, 2006ರಲ್ಲಿ 2ನೇ ಮಗಳು ಜನಿಸಿದಳು. ಮದುವೆಯಾದಾಗಿನಿಂದಲೇ ಗಂಡಹೆಂಡತಿ ನಡುವೆ ಮನಸ್ತಾಪ ಇತ್ತು. ಜುಲೈ 10, 2010ರಲ್ಲಿ ಸಂಜಯ್‌ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆಯಬೇಕೆಂದು ಫ್ಯಾಮಿಲಿ ಕೋರ್ಟ್‌ನಲ್ಲಿ ಅರ್ಜಿ ಹಾಕಿದ. ಅವನು ತನ್ನ ಹೆಂಡತಿಯ ವಿರುದ್ಧ 9 ಮಾನಸಿಕ ಕ್ರೌರ್ಯದ ಆರೋಪಗಳನ್ನು ಮಾಡಿದ್ದ.

ಸುಮಾ ತನ್ನ ವಿರುದ್ಧ ಮಾಡಿದ್ದ ಎಲ್ಲ 9 ಆರೋಪಗಳನ್ನು ಸುಳ್ಳು ಎಂದು ಲಿಖಿತ ಹೇಳಿಕೆ ಮೂಲಕ ಈ ಮದುವೆಯನ್ನು ಉಳಿಸಬೇಕೆಂದು ಫ್ಯಾಮಿಲಿ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಳು. ಆದರೆ ಮಾನಸಿಕ ಕ್ರೌರ್ಯದ ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿತು.

ಸುಮಾ ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಳು. ಹೈಕೋರ್ಟ್‌ ಅವಳ ಮನವಿಯನ್ನು ಪುರಸ್ಕರಿಸದೆ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.

ಸುಮಾ ಸುಮ್ಮನೆ ಕುಳಿತುಕೊಳ್ಳದೆ ಸುಪ್ರಿಂ ಕೋರ್ಟ್‌ಗೆ ಮೊರೆ ಹೋಗಿ ತನ್ನ ಮದುವೆಯನ್ನು ಉಳಿಸಬೇಕೆಂದು ಗೋಗರೆದಳು. ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ `8-10 ವರ್ಷಗಳ ಹಿಂದೆ ನಡೆದ ಕೆಲವು ಘಟನೆಗಳು ಮತ್ತೆ ಮರುಕಳಿಸಲಿಲ್ಲ ಎಂಬುದರ ಆಧಾರದ ಮೇಲೆ ಇದನ್ನು ಮಾನಸಿಕ ಕ್ರೌರ್ಯ,’ ಎನ್ನಲಾಗದು ಎಂದು ಹೇಳುವುದರ ಮೂಲಕ ಆ ಮದುವೆಯನ್ನು ಮತ್ತು ಪತ್ನಿಯ ರೂಪದಲ್ಲಿ ಸುಮಾಳ ವೈವಾಹಿಕ ಹಕ್ಕುಗಳನ್ನು ರಕ್ಷಿಸಿತು.

ಈ ಪ್ರಕರಣದಲ್ಲಿ ಸುಮಾಳಿಗೆ ನ್ಯಾಯವೇನೋ ಸಿಕ್ಕಿತು. ಆದರೆ ನ್ಯಾಯಾಲಯ ಅವಳ ಅಮೂಲ್ಯ 7 ವರ್ಷಗಳನ್ನು ವಾಪಸ್‌ಕೊಡಿಸುತ್ತದೆಯೇ? ವಿಚ್ಛೇದನ ಬಯಸಿದ್ದ ಸಂಜಯ್‌ ಸಹ 7 ವರ್ಷ ಕಾಯಬೇಕಾಯಿತು. ಆದರೆ ತೀರ್ಪು ಅವನ ಪರವಾಗಿರಲಿಲ್ಲ.

ಕಸ್ಟಡಿ ವಾರ್‌ನಲ್ಲಿ ನಲುಗುತ್ತಿರುವ ಬಾಲೆ ವೈಶಾಲಿಗೆ 13 ವರ್ಷ. ಪ್ರಸ್ತುತ ಅವಳು ತನ್ನ ತಂದೆಯ ಬಳಿ ವಾಸಿಸುತ್ತಿದ್ದಾಳೆ. ಅವಳ ತಾಯಿ ಅಪ್ಪನ ಜೊತೆಗಿಲ್ಲ. ಲಂಡನ್‌ನಲ್ಲಿ ವಾಸಿಸುತ್ತಿದ್ದಾಳೆ. ಅವಳು ವೈಶಾಲಿಯನ್ನು ತನ್ನ ಜೊತೆಗೆ ಕರೆಸಿಕೊಳ್ಳಬೇಕೆನ್ನುತ್ತಾಳೆ. ಆದರೆ ವೈಶಾಲಿ ಅಪ್ಪನ ಜೊತೆಗೆ ಭಾರತದಲ್ಲಿಯೇ ಇರಲು ಇಷ್ಟಪಡುತ್ತಾಳೆ. 8 ವರ್ಷಗಳ ಕಾಲ ನಡೆದ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ ಫೆಬ್ರವರಿ 2017ರಲ್ಲಿ ಅಂತಿಮ ತೀರ್ಪು ನೀಡುತ್ತ ವೈಶಾಲಿ ತನ್ನ ತಂದೆಯ ಜೊತೆಗೆ ಇರಲು ಒಪ್ಪಿಗೆ ನೀಡಿತು.

ವಿಚ್ಛೇದನದ ಬಳಿಕ ಚೈಲ್ಡ್ ಕಸ್ಟಡಿಯ ಈ ತೆರನಾದ ಪ್ರಕರಣಗಳು ಮೇಲಿಂದ ಮೇಲೆ ಓದಲು ಸಿಗುತ್ತವೆ. ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ತಾಯಿಯ ವಶಕ್ಕೇ ಕೊಡಲಾಗುತ್ತದೆ. ಅದಕ್ಕೂ ಹೆಚ್ಚಿನ ವಯಸ್ಸಿನ ಮಕ್ಕಳನ್ನು ಯಾರ ಸುಪರ್ದಿಗೆ ಕೊಡಬೇಕು ಎಂಬುದರ ಬಗ್ಗೆ ಸ್ವತಃ ಮಕ್ಕಳ ಅಭಿಪ್ರಾಯವನ್ನೇ ಕೇಳಲಾಗುತ್ತದೆ.

ಇಲ್ಲಿ ಏಳುವ ಪ್ರಶ್ನೆಯೇನೆಂದರೆ, ಮಕ್ಕಳ ಕಸ್ಟಡಿಯ ಪ್ರಕರಣಗಳಲ್ಲಿ ಅವರ ಸುರಕ್ಷತೆ ಹಾಗೂ ಇಚ್ಛೆಯ ಜೊತೆ ಜೊತೆಗೆ ಅವರ ಮಾನಸಿಕ ಶಾಂತಿ ಮತ್ತು ಅತ್ಯುತ್ತಮ ಜೀವನವನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲಿ ಮಕ್ಕಳ ಕಸ್ಟಡಿಗೆ ಸಂಬಂಧಪಟ್ಟ ಕಾನೂನು ನಿರ್ಧಾರಗಳನ್ನು ಒಂದು ನಿಯಮಿತ ಸಮಯದ ಚೌಕಟ್ಟಿನೊಳಗೆ ಮಾಡಿ ಮುಗಿಸಬೇಕೆಂಬ ಕಟ್ಟುಪಾಡು ಇರಬೇಕಲ್ಲವೇ?

ಇದಕ್ಕೊಂದು ಸೂಕ್ತ ಉದಾಹರಣೆ ವೈಶಾಲಿ. ವೈಶಾಲಿಯ ತಂದೆತಾಯಿಗಳ ಮದುವೆ ಆದದ್ದು 1999ರಲ್ಲಿ. 2000ತನಕ ಅವರು ಫರೀದಾಬಾದ್‌ನಲ್ಲಿಯೇ ಇದ್ದರು. ಮಾರ್ಚ್‌ರಲ್ಲಿ ಅವರು ಬ್ರಿಟನ್‌ಗೆ ಹೋದರು. ಜನವರಿ 2002ರಲ್ಲಿ ವೈಶಾಲಿ ಜನಿಸಿದಳು. ಅವಳು ಹುಟ್ಟಿದ ಕೆಲವೇ ದಿನಗಳಲ್ಲಿ ದಂಪತಿ ಪುನಃ ಬ್ರಿಟನ್‌ಗೆ ಹೊರಟುಹೋದರು. 2007ರಲ್ಲಿ ವೈಶಾಲಿಯ ತಂಗಿಯ ಜನನ. ಈ ಮಧ್ಯೆ ಗಂಡಹೆಂಡತಿಯ ಸಂಬಂಧದಲ್ಲಿ ಬಿರುಕು ಉಂಟಾಯಿತು. ಆ ಬಿರುಕು ಅದೆಷ್ಟು ದೊಡ್ಡದಾಯಿತೆಂದರೆ, ಅವಳ ತಾಯಿ ಬ್ರಿಟನ್ನಿನ ಒಂದು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದಳು.

ವೈಶಾಲಿಯ ತಂದೆ ಅವಳನ್ನು ಭಾರತಕ್ಕೆ ಕರೆತಂದರು. 2010ರಲ್ಲಿ ವೈಶಾಲಿಯ ತಾಯಿ ಪಂಜಾಬ್‌ನ ಉಚ್ಚ ನ್ಯಾಯಾಲಯದಲ್ಲಿ ಮಗಳನ್ನು ತನ್ನ ವಶಕ್ಕೆ ಕೊಡಬೇಕೆಂದು ಅರ್ಜಿ ಸಲ್ಲಿಸಿದಳು. ವೈಶಾಲಿಯನ್ನು ತಾಯಿಯ ವಶಕ್ಕೆ ಒಪ್ಪಿಸಬೇಕೆಂದು ಕೋರ್ಟ್‌ಹೇಳಿತು. ಆ ತೀರ್ಪಿನ ವಿರುದ್ಧ ವೈಶಾಲಿಯ ತಂದೆ ಸುಪ್ರೀಂ ಕೋರ್ಟ್‌ಗೆ ಹೋದರು.

ಸುಪ್ರೀಂ ಕೋರ್ಟ್‌ ಪಂಜಾಬ್‌ ಹೈಕೋರ್ಟ್‌ನ ತೀರ್ಪಿಗೆ ತಡೆಯಾಜ್ಞೆ ನೀಡಿ, ವೈಶಾಲಿ ತನ್ನ ತಂದೆಯ ಜೊತೆಗೇ ಇರಲು ಒಪ್ಪಿಗೆ ನೀಡಿತು. ಆದರೆ ಅವಳ ತಾಯಿಗೆ ಕಾಲಕಾಲಕ್ಕೆ ಬಂದು ಮಗಳನ್ನು ಭೇಟಿ ಮಾಡಲು ಅವಕಾಶ ಕೊಟ್ಟಿತು. ತಾಯಿ ಅದೆಷ್ಟೇ ಹೇಳಿದರೂ ವೈಶಾಲಿ ಇಂಗ್ಲೆಂಡ್‌ಗೆ ಹೋಗಲು ಒಪ್ಪಲಿಲ್ಲ.

8 ವರ್ಷದ ಮಗಳಿಗಾಗಿ ತಂದೆತಾಯಿ 7 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದರು. ತಾಯಿ ನಡುನಡುವೆ ಮಗಳನ್ನು ಭೇಟಿ ಮಾಡಲು ಬಂದು ಅವಳ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿದಳು. ಆದರೆ ಅದರಲ್ಲಿ ಯಶ ಕಾಣಲಿಲ್ಲ.

ಅತ್ತ ಕೋರ್ಟ್‌ ವೈಶಾಲಿಯ ಇಚ್ಛೆಗೆ ವಿರುದ್ಧವಾಗಿ ವಿದೇಶಕ್ಕೆ ಕಳಿಸಿಕೊಡುವ ರಿಸ್ಕ್ ತೆಗೆದುಕೊಳ್ಳಲು ಇಚ್ಚಿಸಲಿಲ್ಲ. ಈ ಇಡೀ ಘಟನಾ ಚಕ್ರದಲ್ಲಿ ದೀರ್ಘಕಾಲದ ತನಕ ಯಾವೊಂದೂ ನಿರ್ಧಾರಕ್ಕೆ ಬರಲಾಗಲಿಲ್ಲ. 7 ವರ್ಷದ ಬಾಲಕಿ ವೈಶಾಲಿ ಈಗ 15 ವರ್ಷದವಳಾಗಿದ್ದಾಳೆ. ಈಗ ಅವಳು ಮಾನಸಿಕವಾಗಿ ಎಷ್ಟೊಂದು ಪರಿಪಕ್ವಳಾಗಿದ್ದಾಳೆಂದರೆ, ಒಳ್ಳೆಯದು ಕೆಟ್ಟದ್ದು ಅವಳಿಗೆ ಗೊತ್ತಾಗುವಷ್ಟರ ಮಟ್ಟಿಗೆ. ಇನ್ನು 3 ವರ್ಷದ ಬಳಿಕ ಅವಳು ಪ್ರಾಪ್ತ ವಯಸ್ಕಳಾಗುತ್ತಾಳೆ. ಆಗ ಅವಳ ಕಸ್ಟಡಿಯ ಅವಧಿಯೂ ತಂತಾನೇ ರದ್ದಾಗುತ್ತದೆ.

ಇಲ್ಲಿ ಏಳುವ ಪ್ರಶ್ನೆಯೆಂದರೆ, ಅಂತಿಮ ತೀರ್ಪು ಹೊರಬರಲು ಇಷ್ಟೊಂದು ಸಮಯ ಏಕೆ ತಗಲುತ್ತದೆ?

ಮಕ್ಕಳ ಮನಸ್ಸಿನ ಮೇಲೆ ಪರಿಣಾಮ

ಅಂದಹಾಗೆ ಚೈಲ್ಡ್ ಕಸ್ಟಡಿ ಮತ್ತು ವಿಚ್ಛೇದನಕ್ಕೆ ಸಂಬಂಧಪಟ್ಟ ಪ್ರಕರಣಗಳು ಸಾಮಾನ್ಯವಾಗಿ ಕಹಿ ಅನುಭವ ಹೊಂದಿರುತ್ತವೆ. ಆದರೆ ಪ್ರಕರಣ ಹೆಚ್ಚು ದೀರ್ಘವಾಗುತ್ತಾ ಹೋದಂತೆ ಅದರ ಪರಿಣಾಮ ಮಕ್ಕಳ ಮೇಲೆ ಗಾಢವಾಗಿ ವ್ಯಾಪಿಸುತ್ತ ಹೋಗುತ್ತದೆ. ಶೇ.10 ರಷ್ಟು ಪ್ರಕರಣಗಳಲ್ಲಿ ವಿಚ್ಛೇದನ ಪಡೆಯವ ದಂಪತಿಗಳು ಅದೆಷ್ಟು ಕೆಟ್ಟದಾಗಿ ಜಗಳವಾಡುತ್ತಾರೆ ಹಾಗೂ ಪರಸ್ಪರರ ವಿರುದ್ಧ ವಿಷ ಕಕ್ಕುತ್ತಾರೆಂದರೆ ಅದರ ಕೆಟ್ಟ ಪರಿಣಾಮ ಮಗುವಿನ ಮೇಲೆ ದೀರ್ಘಕಾಲದ ತನಕ ಉಳಿದಿರುತ್ತದೆ. ಮೆಸಾಚುಸೆಟ್ಸ್ ಜನರಲ್ ಹಾಸ್ಪಿಟಲ್‌ನಲ್ಲಿ ನಡೆಸಲಾದ ಒಂದು ಸಂಶೋಧನೆಯ ಪ್ರಕಾರ, ಗಂಭೀರ ವಿವಾದವಿರುವ ಕಸ್ಟಡಿಯ ಪ್ರಕರಣಗಳಿಗೆ ಸಂಬಂಧಪಟ್ಟ ಶೇ.65ರಷ್ಟು ಮಕ್ಕಳಲ್ಲಿ ಚಿಂತೆ, ಕ್ರೋಧ, ನಿದ್ರಾಹೀನತೆ, ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ, ಅವಧಿಗೆ ಮುನ್ನವೇ ಲೈಂಗಿಕ ಕ್ರಿಯೆಯಲ್ಲಿ ಆ್ಯಕ್ಟಿವ್‌ ಆಗಿರುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.

ಅಷ್ಟೇ ಅಲ್ಲ ಶೇ.56ರಷ್ಟು ವಿವಾದವಿರುವ ಕಸ್ಟಡಿ ಕೇಸ್‌ಗಳಿಗೆ ಸಂಬಂಧಪಟ್ಟ ಮಕ್ಕಳಲ್ಲಿ ಅಟ್ಯಾಚ್‌ಮೆಂಟ್‌ ಡಿಸಾರ್ಡರ್‌ ಕಂಡು ಬರುತ್ತದೆ. ಈ ಕಾರಣದಿಂದ ಅವರ ಮನಸ್ಸಿನಲ್ಲಿ ತಮ್ಮ ಪ್ರೀತಿಪಾತ್ರರು ದೂರ ಹೋದ ಭಯ ಅವರಲ್ಲಿ ಎಷ್ಟೊಂದು ಇರುತ್ತದೆಂದರೆ, ಅವರು ಬೇರಾರೊಂದಿಗೂ ಸ್ನೇಹ ಮಾಡಲು ಹೆದರುತ್ತಾರೆ.

ವಿಚ್ಛೇದನ ಹಾಗೂ ಕಸ್ಟಡಿ ವಾರ್‌ನ ಪರಿಣಾಮ ಮಕ್ಕಳ ಮೇಲೆ ಒಂದೇ ರೀತಿಯಲ್ಲಿ ಆಗುವುದಿಲ್ಲ. ಸೂಕ್ಷ್ಮ ಮನಸ್ಸಿನ ಮಕ್ಕಳ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ಶಾಲೆಯಲ್ಲಿ ಅವರ ಪರ್ಫಾರ್ಮೆನ್ಸ್ ಅಷ್ಟೊಂದು ಚೆನ್ನಾಗಿರುವುದಿಲ್ಲ. ಅವರು ಯಾವುದೇ ಕೆಲಸದಲ್ಲಿ ಆಸಕ್ತಿ ತೋರಿಸಲಾರರು. ಸ್ನೇಹಿತರಿಂದ ದೂರ ಉಳಿಯಲು ಪ್ರಯತ್ನಿಸುತ್ತಾರೆ.

ಈ ಅವಧಿಯಲ್ಲಿ ಇಬ್ಬರೂ ಪೋಷಕರು ಮಕ್ಕಳೊಂದಿಗೆ ಪರಸ್ಪರರ ವಿರುದ್ಧ ಸಾಕಷ್ಟು ಕೆಟ್ಟದಾಗಿ ಮಾತನಾಡುತ್ತಾರೆ. ಪರಸ್ಪರರ ವಿರುದ್ಧ ಮಗುವಿನ ಮುಂದೆ ತಮ್ಮ ಕೆಟ್ಟ ಮುಖವನ್ನು ಪ್ರಸ್ತುತಪಡಿಸುತ್ತಾರೆ.

ವಿಚ್ಛೇದನದ ಪ್ರಕರಣಗಳು

ನ್ಯಾಯಾಲಯದಲ್ಲಿ ಹೆಚ್ಚು ವರ್ಷಗಳ ತನಕ ಕುಂಟುತ್ತ ಸಾಗುವ ಬಗ್ಗೆ ಬೆಂಗಳೂರಿನ ಹಿರಿಯ ನ್ಯಾಯವಾದಿ ನಾಗಭೂಷಣ್‌ ಹೀಗೆ ಹೇಳುತ್ತಾರೆ, ವಿಚ್ಛೇದನದ ಪ್ರಕರಣ ತಂತಾನೇ ರದ್ದಾಗಬೇಕು ಎಂಬುದು ನ್ಯಾಯಾಲಯದ ವಿಚಾರವಾಗಿರುತ್ತದೆ. ವಿವಾಹ ಎನ್ನುವುದು ಒಂದು ಸಂಸ್ಥೆ. ಆ ಸಂಬಂಧ ಮುರಿದು ಬೀಳಬೇಕೆಂದು ಅದು ಭಾವಿಸುವುದಿಲ್ಲ. ಅಷ್ಟೇ ಅಲ್ಲ, ವಿಚ್ಛೇದನದ ಜೊತೆಗೆ ಜೀವನಾಂಶ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, 498ಎ ದಂತಹ ಅನೇಕ ಪ್ರಕರಣಗಳು ಏಕಕಾಲಕ್ಕೆ ನಡೆಯುತ್ತಿರುತ್ತವೆ. ಇದೇ ಕಾರಣದಿಂದ ಅಂತಿಮ ತೀರ್ಪು ಹೊರಬರಲು ತಡವಾಗುತ್ತದೆ.

ಕಾರಣ ಏನೇ ಆಗಿರಲಿ, ಸಾಮಾನ್ಯ ಜನರ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಪ್ರಕರಣ ಇತ್ಯರ್ಥ ಮಾಡಬೇಕು, ಹೆಚ್ಚು ಸಂಖ್ಯೆಯಲ್ಲಿ ನ್ಯಾಯಾಧೀಶರ ನೇಮಕಾತಿಯ ಜೊತೆಗೆ ಕಾರ್ಯ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಜನರ ಮಾನಸಿಕತೆಯಲ್ಲಿ ಬದಲಾವಣೆ ಕೂಡ ಅಗತ್ಯವಾಗಿದೆ. ಪರಸ್ಪರ ರಾಜಿಯ ಮೂಲಕ ವಿಚ್ಛೇದನ ಕೂಡ ಪರ್ಯಾಯ ಆಗಬಹುದಾಗಿದೆ.

– ಗಿರಿಜಾ ಶಂಕರ್‌

ಏಕೆ ವಿಳಂಬವಾಗುತ್ತದೆ?

ಭಾರತದಲ್ಲಿ ವಿಚ್ಛೇದನ ಮತ್ತು ಚೈಲ್ಡ್ ಕಸ್ಟಡಿಯ ಪ್ರಕರಣಗಳಲ್ಲಿ ದೀರ್ಘಾವಧಿಯ ತನಕ ಎಳೆಯಲ್ಪಡುವ ಮತ್ತು ತೀರ್ಪು ತಡವಾಗಲು ಮುಖ್ಯ ಕಾರಣ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಕೆಲವು ಮೂಲಭೂತ ಕೊರತೆಗಳು ಮತ್ತು ದೇಶದಲ್ಲಿ ನ್ಯಾಯಾಧೀಶರ ಕೊರತೆ ಸಾಕಷ್ಟು ಪ್ರಮಾಣದಲ್ಲಿ ಇರುವುದು ಇದಕ್ಕೆ ಕಾರಣವಾಗಿದೆ.

ನ್ಯಾಷನಲ್ ಜ್ಯೂಡಿಷಿಯಲ್ ಡಾಟ್‌ ಗ್ರಿಡ್‌ ಮತ್ತು ಡಿಪಾರ್ಟ್‌ಮೆಂಟ್‌ ಆಫ್‌ ಜಸ್ಟೀಸ್‌ ಟಾಡಾದ ಅಂಕಿಅಂಶಗಳ ಪ್ರಕಾರ 2016ರ ಜುಲೈ ತನಕ ಭಾರತದ ಅಧೀನಸ್ಥ ನ್ಯಾಯಾಲಯಗಳಲ್ಲಿ 16,438 ನ್ಯಾಯಾಧೀಶರು, ಉಚ್ಚ ನ್ಯಾಯಾಲಯದಲ್ಲಿ 621 ನ್ಯಾಯಾಧೀಶರು ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ  29 ನ್ಯಾಯಾಧೀಶರುಗಳು ಮಾತ್ರ ಇದ್ದರು. ಆದರೆ ದೇಶದಲ್ಲಿ ಇತ್ಯರ್ಥ ಆಗದೇ ಇರುವ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿದೆ. 2017ರಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳ ಸಂಖ್ಯೆ 2.81 ಕೋಟಿಗಿಂತಲೂ ಹೆಚ್ಚಾಗಿದ್ದವು.

2014 – 2015 ಜುಲೈ ತನಕ ಅಧೀನಸ್ಥ ನ್ಯಾಯಾಲಯಗಳಲ್ಲಿ 15,500  15,600ರಷ್ಟು ನ್ಯಾಯಾಧೀಶರು 1,87,30,046 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದರು. ಅದೇ ಅವಧಿಯಲ್ಲಿ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ 1,86,25,038 ಆಗಿತ್ತು.

ಹೆಚ್ಚಾಗುತ್ತ ಹೊರಟಿರುವ ಪ್ರಕರಣಗಳಿಗೆ ಹೋಲಿಸಿದಲ್ಲಿ ನ್ಯಾಯಾಧೀಶರ ಸಂಖ್ಯೆ ಇಲ್ಲ. ಈ ವಿಷಯಕ್ಕೆ ಸಂಬಂಧಪಟ್ಟಂತೆ 2016 ಜುಲೈನಲ್ಲಿ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ರವರು ನ್ಯಾಯ ಪ್ರಕ್ರಿಯೆಯಲ್ಲಿ ವಿಳಂಬ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು 70,000 ನ್ಯಾಯಾಧೀಶರ ಅವಶ್ಯಕತೆ ಇರುವುದರ ಬಗ್ಗೆ ಒತ್ತಿ ಹೇಳಿದ್ದರು.

2016 ಮೇ ತನಕ ದೇಶದ ಜನಸಂಖ್ಯೆ 120 ಕೋಟಿ ದಾಟಿದೆ. ಈ ಸಂಖ್ಯೆಗೆ ಹೋಲಿಸಿದಲ್ಲಿ ನ್ಯಾಯಾಧೀಶರ ಸಂಖ್ಯೆ ಅತ್ಯಂತ ಕಡಿಮೆ. 5 ಕೋಟಿ ಜನಸಂಖ್ಯೆಗೆ ಒಬ್ಬ ನ್ಯಾಯಾಧೀಶರ ಅಶ್ಯಕತೆ ಬಗ್ಗೆ ಒತ್ತು ಕೊಡಲಾಗುತ್ತದೆ.

ಭಾರತದಲ್ಲಿ ಪ್ರಸ್ತುತ ಇರುವ ನ್ಯಾಯಾಧೀಶರ ಸಂಖ್ಯೆಯನ್ನು 7 ಪಟ್ಟು ಹೆಚ್ಚಿಸಿದರೆ ಮಾತ್ರ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಬಹುದೆಂದು ಇಂಡಿಯನ್‌ ಜ್ಯೂಡಿಷಿಯಲ್ ಆ್ಯನ್ಯುವಲ್ ‌ರಿಪೋರ್ಟ್‌ ಹೇಳುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ