ನಾವು ಆಚರಿಸುವ ಹಬ್ಬಗಳ ಬಗ್ಗೆ ಚರ್ಚಿಸುವುದಾದರೆ, ಬಹುತೇಕ ಎಲ್ಲ ಹಬ್ಬಗಳು ಪರಸ್ಪರ ಖುಷಿ ಮತ್ತು ಪ್ರೀತಿಯನ್ನು ನೀಡುತ್ತವೆ. ರಕ್ಷಾಬಂಧನ ಅಣ್ಣತಂಗಿಯರ ಪ್ರೀತಿಯನ್ನು ಬಿಂಬಿಸಿದರೆ, ದೀಪಾವಳಿ ಕೆಟ್ಟದ್ದರ ಮೇಲೆ ಒಳ್ಳೆಯತನದ ಗೆಲುವು, ಹೋಳಿಹಬ್ಬ ಖುಷಿಯ ಬಣ್ಣಗಳ ಸಿಂಪರಣೆಯ ಸಂಕೇತವಾಗಿದೆ. ಇದರ ಹೊರತಾಗಿ ಸಂಕ್ರಾಂತಿ, ಯುಗಾದಿ, ದಸರಾ ಮುಂತಾದ ಹಬ್ಬಗಳನ್ನೂ ಆಚರಿಸುತ್ತೇವೆ. ನಮ್ಮ ಬಹುತೇಕ ಹಬ್ಬಗಳು ಕೃಷಿ ಚಟುವಟಿಕೆಯ ಜೊತೆಗೆ ನಿಕಟತೆ ಹೊಂದಿವೆ. ಕೃಷಿ ಚಟುವಟಿಕೆಯಲ್ಲಿ ಸಂಪೂರ್ಣ ತಲ್ಲೀನರಾಗಿ ಒಂದು ಹಂತದವರೆಗೆ ಕೆಲಸ ಮಾಡುವುದು, ಫಸಲು ಬಂದ ಬಳಿಕ ಅಥವಾ ಬಿಡುವಿನ ಅವಧಿಯಲ್ಲಿ ಮನಸ್ಸಿಗೆ ಖುಷಿ ಕೊಡಲು ಹಬ್ಬಗಳ ಆಚರಣೆ ಸರ್ವೇ ಸಾಮಾನ್ಯ. ಆದರೆ ಈ ಸುಂದರ ಹಬ್ಬಗಳನ್ನು ಧರ್ಮ, ಸಮಾಜ ಹಾಗೂ ಭಾಷೆಗಳ ಹೆಸರಿನಲ್ಲಿ ಇಬ್ಭಾಗ ಮಾಡಿದರೆ ಬಹಳ ವ್ಯಥೆಯಾಗುತ್ತದೆ.
ಇದು ನನ್ನ ಧರ್ಮ ಅದು ನಿನ್ನ ಧರ್ಮ
ಕೆಲವು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಒಂದು ಘಟನೆ. ಯುಗಾದಿ ಹಬ್ಬದ ಆಚರಣೆಗಾಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಭರ್ಜರಿ ಸಿದ್ಧತೆ ನಡೆದಿತ್ತು. ಈ ಕುರಿತಂತೆ ಎರಡು ಗುಂಪುಗಳ ನಡುವೆ ವಿವಾದ ಶುರುವಾಯಿತು. ಒಂದು ಗುಂಪು ಮೊದಲಿನಿಂದ ಈ ಆಚರಣೆಯನ್ನು ನಡೆಸಿಕೊಂಡು ಬಂದಿತ್ತು. ಆಗ ಇನ್ನೊಂದು ಗುಂಪು ಮಧ್ಯೆ ಪ್ರವೇಶಿಸಿ ತನ್ನದೇ ಆದ ಬೇರೆ ರೀತಿಯಲ್ಲಿ ಹಬ್ಬ ಆಚರಿಸಲು ಮುಂದಾಯಿತು. ಬಳಿಕ ಹೆಚ್ಚು ಜನ ಯಾವ ಗುಂಪಿನ ಆಚರಣೆಯನ್ನು ಇಷ್ಟುಪಡುತ್ತಾರೋ ಅದೇ ರೀತಿ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಕೊನೆಗೊಮ್ಮೆ ಹಳೆಯ ರೀತಿಯಲ್ಲಿಯೇ ಆಚರಿಸಲಾಯಿತು. ಸಾಕಷ್ಟು ಹೂಗಳ ಅಲಂಕಾರ ಮಾಡಲಾಯಿತು. ಪುರೋಹಿತರ ಪೂಜೆ ಪುನಸ್ಕಾರ, ಟಿ.ವಿ.ಯಲ್ಲಿ ಅದರ ನೇರ ಪ್ರಸಾರ ಮಾಡಲಾಯಿತು. ಇದೆಲ್ಲ ಸಾಧ್ಯವಾದದ್ದು ಗುಂಪು ಸಂಗ್ರಹ ಮಾಡಿದ ಹಣದಿಂದ.
ಈ ತೆರನಾದ ಹಬ್ಬಗಳನ್ನು ಜನರು ಬೇರೆ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ. ಆದರೆ ಅವರೆಲ್ಲರ ಉದ್ದೇಶ ಒಂದೇ ಆಗಿರುತ್ತದೆ. ಆದರೆ ಪೂಜಾರಿ ಪುರೋಹಿತರು ಹೇಳಿದ ರೀತಿರಿವಾಜುಗಳು ಮತ್ತು ಜಾತಿ, ಭಾಷೆ ಅಥವಾ ಪ್ರಾಂತ್ಯದ ಅಹಂನ್ನು ಬಿಂಬಿಸದ ಹೊರತು ಅವರಿಗೆ ಹಬ್ಬದ ಮಜವೇ ಬರುವುದಿಲ್ಲ.
ಈ ರೀತಿರಿವಾಜುಗಳು ಮತ್ತು ಧರ್ಮ ಬಂದದ್ದಾದರೂ ಎಲ್ಲಿಂದ ಎಂದು ಕೇಳಿದರೆ, ಅವರಿಗೆ ಅದರ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ಒಂದು ವಾಸ್ತವ ಸಂಗತಿಯೆಂದರೆ, ಸರಿಯಾದ ರೀತಿ ನೀತಿಗಳು ಯಾರಿಗೂ ಗೊತ್ತೇ ಇರುವುದಿಲ್ಲ. ಪೂಜಾರಿ ಪುರೋಹಿತರು ಏನು ಹೇಳಿರುತ್ತಾರೊ, ಅವರಿಗೆ ಅದೇ ಸತ್ಯ. ಅದಕ್ಕೆ ಪುರೋಹಿತರಿಗೆ ಸಾಕಷ್ಟು ದಕ್ಷಿಣೆ ಸಿಗುತ್ತದೆ.
ಗಣೇಶ ಉತ್ಸವಕ್ಕಾಗಿ ಚಂದಾ ವಸೂಲಿ ಮಾಡಲಾಗುತ್ತಿತ್ತು. ಆಗ ಕೆಲವು ಪಂಜಾಬಿ ಜನರು ಇಲ್ಲಿ ಲೋಹರಿ ಹಬ್ಬವನ್ನೇನೂ ಆಚರಿಸುವುದಿಲ್ಲ. ನಾವ್ಯಾಕೆ ಹಣ ಕೊಡಬೇಕು ಎಂದು ಹೇಳಿ ಚಂದಾ ಕೊಡಲು ನಿರಾಕರಿಸಿದರು. ಹಾಗೆ ನೋಡಿದರೆ ಧರ್ಮ ಒಂದೇ ಎಂದಾದರೂ, ಇಬ್ಬರ ನಡುವೆ ಸೂಕ್ಷ್ಮ ವೈಮನಸ್ಸು ಮೂಡಿತು.
ಇಲ್ಲೇ ಉದ್ಭವಿಸುವ ಒಂದು ಮುಖ್ಯ ಪ್ರಶ್ನೆ ಎಂದರೆ ನಾವು ಧರ್ಮ, ರಾಜ್ಯ, ಭಾಷೆ, ಜಾತಿಯ ಆಧಾರದ ಮೇಲೆ ಹಬ್ಬಗಳನ್ನು ಏಕೆ ಇಬ್ಭಾಗಿಸುತ್ತೇವೆ? ಹಬ್ಬಗಳನ್ನು ಆಚರಿಸುವುದರ ಹಿಂದಿನ ಉದ್ದೇಶ ಕೇವಲ ಖುಷಿಯ ಭಾವನೆಯೊಂದೇ ಅಲ್ಲ, ಎಲ್ಲರೊಂದಿಗೆ ಬೆರೆಯಿರಿ. ಸೂಕ್ತ ಪೋಷಾಕು ಧರಿಸಿ, ಮುಖದಲ್ಲಿ ಮುಗುಳ್ನಗೆ ತನ್ನಿ. ಆದರೆ ನಮ್ಮ ಧರ್ಮ, ಸಮಾಜ, ಭಾಷೆ ಇದರ ನಡುವೆ ಕಾಲುಗಾರನಾಗಿ ಕೆಲಸ ಮಾಡುತ್ತದೆ. ಹಬ್ಬಗಳಲ್ಲಿ ಈ ಜಗಳಗಳಿಂದ ಲಾಭವಾಗುವುದು ಪೂಜಾರಿ, ಪುರೋಹಿತರು ಮತ್ತು ಧರ್ಮದ ಗುತ್ತಿಗೆದಾರರಿಗೆ ಮಾತ್ರ. ಇಂತಹ ಧರ್ಮ ಹಾಗೂ ಸಮಾಜದ ಗುತ್ತಿಗೆದಾರರು ತಮ್ಮ ಮಠಗಳಲ್ಲಿ ಖುಷಿ ಖುಷಿಯಿಂದ ಬೇರೆ ಧರ್ಮಗಳ ಮುಖಂಡರನ್ನು ಹಾಡಿ ಹೊಗಳುತ್ತಾರೆ. ಅವರಿಗೆ ಧರ್ಮ ಗುರುಗಳಿಂದ ಒಂದಿಷ್ಟು ಲಾಭ ಬೇಕು. ಇನ್ನೊಂದೆಡೆ ಅವರೇ ತಮ್ಮ ಚೇಲಾಗಳನ್ನು ಬೇರೆ ಧರ್ಮದ ವಿರುದ್ಧ ಛೂ ಬಿಡುತ್ತಾರೆ. ಅವರು ಸ್ವತಃ ಒಂದಿಷ್ಟು ಲಾಭಕ್ಕಾಗಿ ಬೇರೆ ಧರ್ಮಗಳ ಗುತ್ತಿಗೆದಾರರಿಗೆ ತಮ್ಮ ಕಾರ್ಯಕ್ರಮಗಳ ವೇದಿಕೆಯಲ್ಲಿ ಹೂಮಾಲೆ ಹಾಕುತ್ತಾರೆ. ಸಮಾಜದ ಬಗ್ಗೆ ಹೇಳಬೇಕೆಂದರೆ, ಸಮಾಜವಂತೂ ಸಂಸ್ಕೃತಿಯ ಮುಖವಾಡ ಧರಿಸಿ ಒಂದು ಕ್ಷಣ ಈ ಕಡೆ, ಇನ್ನೊಂದು ಕ್ಷಣ ಆ ಕಡೆ ಇರುತ್ತದೆ. ಹಣವುಳ್ಳವ ಅಥವಾ ಬೇರಾವುದೇ ಶಕ್ತಿ ತನ್ನ ಕೈಯಲ್ಲಿ ಹಿಡಿದುಕೊಂಡು ಬಂದರೆ, ಆಗ ಧರ್ಮದ ನಿಯಮ ಕಾನೂನುಗಳು ಬದಲಾಗಿಬಿಡುತ್ತದೆ.
ಧಾರ್ಮಿಕ ಸಮಾರಂಭಕ್ಕೆ ಸರ್ಕಾರಿ ಅಧಿಕಾರಿಯ ಸಹಾಯವಿದ್ದರೆ, ಹೇಳಲು ಇನ್ನೇನಿದೆ? ಇಡೀ ಸಮಾಜವೇ ಆ ಹಬ್ಬವನ್ನು ತನ್ನದೆಂದು ಹೇಳಿಕೊಳ್ಳುತ್ತದೆ. ಬೆನ್ನ ಹಿಂದೆ ಎಷ್ಟೇ ಬೈದುಕೊಂಡರೂ ಮುಖದಲ್ಲಿ ಮಾತ್ರ ಮುಗುಳ್ನಗೆ ತಂದುಕೊಂಡಿರುತ್ತಾರೆ.
ಸ್ವಭಾವಕ್ಕಾಗಿ ಹಬ್ಬಗಳಲ್ಲ
ಕೆಲವರಿಗೆ ವಿದೇಶ ವಸ್ತುಗಳ ಮೋಹ, ಒಬ್ಬ ಮಹಿಳೆಗೆ ವಿದೇಶಿ ಮಹಿಳೆಯ ಜೊತೆ ಸ್ನೇಹ ಬೆಳೆಯಿತು. ಕೆಲವು ದಿನಗಳ ಬಳಿಕ ಆ ಮಹಿಳೆ ತನ್ನ ಮಕ್ಕಳ ಜೊತೆ ಕ್ರಿಸ್‌ಮಸ್ ಟ್ರೀ ಅಲಂಕಾರಕ್ಕಾಗಿ ವಿದೇಶಿ ಮಹಿಳೆಯ ಮನೆಗೆ ಹೋಗುತ್ತಿರುವುದನ್ನು ಗಮನಿಸಲಾಯಿತು. ಅದೇ ಮಹಿಳೆ ಸ್ವತಃ ಪೂಜೆ ಪುನಸ್ಕಾರಕ್ಕಾಗಿ ಪೂಜಾರಿ ಪುರೋಹಿತರನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಿರುತ್ತಾಳೆ. ಒಮ್ಮೆ ಸತ್ಯ ನಾರಾಯಣ ವ್ರತವೆಂದೊ, ಇನ್ನೊಮ್ಮೆ ವರಮಹಾಲಕ್ಷ್ಮಿ ಪೂಜೆ ಎಂದು ಅಕ್ಕಪಕ್ಕದವರನ್ನು ಆಹ್ವಾನಿಸುತ್ತಾಳೆ. ಹಾಗೊಂದು ವೇಳೆ ಅವರಾರೂ ಬರದೇ ಇದ್ದರೆ ಅವರ ದೋಸ್ತಿ ಕಟ್.
ದೊಡ್ಡ ಉದ್ಯಮಿಯೊಬ್ಬರ ಪತ್ನಿಯಾಗಿದ್ದರಿಂದ ಬೇರೆ ಮಹಿಳೆಯರು ಆಕೆಯ ಮನೆಗೆ ಚೆನ್ನಾಗಿ ಅಲಂಕರಿಸಿಕೊಂಡು ಬರುತ್ತಿರುತ್ತಾರೆ. ಆ ಮನೆಗೆ ಬಂದ ಮಹಿಳೊಬ್ಬಳು ಬೆನ್ನ ಹಿಂದೆ ಮಾತನಾಡುತ್ತಿರುವುದು ಕೇಳಿಸಿತು. ವಿದೇಶಿ ವಸ್ತುಗಳ ಮೋಹದ ಮೇಡಂ ಕ್ರಿಸ್‌ಮಸ್ ಆಚರಿಸುತ್ತಾರೆ. ಜೊತೆಗೆ ಆ ಪರಂಗಿ ಮಹಿಳೆಯ ಜೊತೆ ಸ್ನೇಹ ಕೂಡ ಮಾಡಿದರು.
ಈ ವರ್ಷ ಕೂಡ ಕೆಲವು ಹೊಸ ವಿಚಾರಧಾರೆಯ ಜನರು ಗಣೇಶ ಉತ್ಸವದ ಸಂದರ್ಭದಲ್ಲಿ ವಿಭಿನ್ನ ಗಣಪತಿಯನ್ನು ಸೃಷ್ಟಿಸಿದರು. ಅವರು ತಯಾರಿಸಿದ್ದು ಮಣ್ಣಿನ ಗಣೇಶ. ಅದರಲ್ಲಿ ಒಂದಿಷ್ಟು ಗೊಬ್ಬರ ಮತ್ತು ಬೀಜಗಳನ್ನು ಸೇರಿಸಿದರು. ಗಣೇಶನ ಪೂಜೆಯ ಬಳಿಕ ಅವರು ನೇರವಾಗಿ ಗಣೇಶನ ಮೂರ್ತಿಯನ್ನು ಕುಂಡಕ್ಕೆ ಸ್ಥಳಾಂತರಿಸಿದರು. ಅದರಿಂದ ಮಾಲಿನ್ಯ ಆಗಲಿಲ್ಲ. ಆದರೆ ಸಂಪ್ರದಾಯವಾದಿಗಳು ಇದು ವಿಸರ್ಜನೆ ಹೇಗಾಗುತ್ತದೆ ಎಂದು ತಪ್ಪು ಹುಡುಕಿದರು.
ಯಾರೋ ಒಬ್ಬರು ಚಾಕಲೇಟ್ ಗಣೇಶನನ್ನು ಮಾಡಿದರು. ಪೂಜೆಯ ಬಳಿಕ ಅದೇ ಗಣೇಶನನ್ನು ಹಾಲಲ್ಲಿ ಮುಳುಗಿಸಿದರು. ಬಳಿಕ ಆ ಹಾಲನ್ನು ಬಡ ಮಕ್ಕಳಿಗೆ ವಿತರಿಸಲಾಯಿತು.
ಕೆಲವು ಮಹಿಳೆಯರು ಇದೇನು ಚಾಕಲೇಟ್ ಮಾರಾಟದ ವಿಧಾನ ಎಂದು ಪ್ರಶ್ನಿಸಿದರು. ಯಾವ ಗಣೇಶನ ಮೂರ್ತಿಯನ್ನು ಪೂಜಿಸುತ್ತೇವೆಯೋ, ಅದೇ ಗಣೇಶ ಮೂರ್ತಿಯನ್ನು ಹಾಲಿನ ರೂಪದಲ್ಲಿ ಸೇವಿಸುವುದು ಇದ್ಯಾವ ಪೂಜೆಯ ವಿಧಾನ? ಎಂದು ಇನ್ನೊಬ್ಬ ಮಹಿಳೆ ಪ್ರಶ್ನಿಸುತ್ತಾಳೆ. ಯೋಚಿಸಬೇಕಾದ ಸಂಗತಿಯೆಂದರೆ, ಹಬ್ಬಗಳಲ್ಲಿ ಖುಷಿಯನ್ನು ಹುಡುಕಬೇಕು. ಅದನ್ನು ಇತರರಿಗೂ ಹಂಚಬೇಕು. ಪರಸ್ಪರರಲ್ಲಿ ಕೊರತೆಯನ್ನು ಹುಡುಕಬೇಡಿ. ತಿರಸ್ಕರಿಸಬೇಡಿ ಸ್ವೀಕರಿಸಿ ಸಾಮಾನ್ಯವಾಗಿ ಕಂಡುಕೊಂಡ ಒಂದು ಸಂಗತಿಯೆಂದರೆ, ಒಂದೇ ಭಾಷೆಯ ಜನರು ಹಬ್ಬ ಅಥವಾ ಉತ್ಸವ ಆಚರಿಸುವಾಗ ತಮ್ಮದೇ ಆದ ರೀತಿ ರಿವಾಜು, ಪೋಷಾಕು, ಆಹಾರ ಎಲ್ಲ ಒಂದೇ ರೀತಿಯದ್ದಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಯಾರಾದರೂ ಬೇರೆ ಭಾಷೆಯ ಮಹಿಳೆ ಬಂದು ಸೇರಿಕೊಂಡರೆ ಅವಳನ್ನು ಸೇರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವಳು ತನ್ನದೇ ಆದ ರೀತಿಯಲ್ಲಿ ಅದೇ ಹಬ್ಬವನ್ನು ಆಚರಿಸಿಕೊಂಡರೆ ಅವಳಿಗೆ ಸಹಕಾರ ಕೊಡಿ, ಹೊರತು ಅವಳನ್ನು ತೆಗಳಬೇಡಿ. ಭಾಷೆ ಎನ್ನುವುದು ಒಂದು ಸಂಪರ್ಕ ಮಾಧ್ಯಮ ಅಷ್ಟೇ. ಅದರ ಬಗ್ಗೆ ಗುಂಪುಗಾರಿಕೆ ಮಾಡಲು ಹೋಗಬೇಡಿ. ಆ ಮಹಿಳೆಗೆ ಅವಳದೇ ಆದ ರೀತಿಯಲ್ಲಿ ಹಬ್ಬ ಆಚರಣೆಗೆ ಅವಕಾಶ ಕೊಡಿ. ಸಂಬಂಧದಲ್ಲಿ ಒಡಕು ಮೂಡಿಸದಂತೆ ಎಚ್ಚರಿಕೆ ವಹಿಸಿ. ನಮ್ಮ ಸಾಮಾಜಿಕ ಜಾಲತಾಣಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಿಂಥ ಉತ್ಸವವನ್ನು ಹೀಗ್ಹೀಗೆ ಆಚರಿಸಿ ಎಂದು ಮೊದಲೇ ಪೋಸ್ಟ್ ಮಾಡುತ್ತವೆ.
ಯಾವುದೇ ಧರ್ಮ, ಭಾಷೆ, ಜಾತಿ ಮತ್ತು ಸಮಾಜ ಹಿಂದೆ ಬಿದ್ದಿಲ್ಲ. ಎಲ್ಲರೂ ತಮ್ಮ ತಮ್ಮ ಮಾರ್ಕೆಟಿಂಗ್‌ನಲ್ಲಿ ತಲ್ಲೀನರಾಗಿದ್ದಾರೆ. ತಮ್ಮ ಹೆಸರಿನ ಧ್ವಜ ನೆಡಲು ಪ್ರಯತ್ನ ನಡೆಸಿದ್ದಾರೆ. ಮುಗ್ಧರನ್ನು ತಮ್ಮ ರಾಜಕೀಯದ ಬಲಿಪಶು ಆಗಿಸಲು ಸಿದ್ಧತೆ ನಡೆಸಿದ್ದಾರೆ.
ಕೆಲವರಿಗೆ `ನನ್ನ ಧರ್ಮ ಶ್ರೇಷ್ಠ’ ಎಂದು ಕೂಗಿ ಕೂಗಿ ಹೇಳದೇ ಇದ್ದರೆ ನನ್ನ ಧರ್ಮ ನಶಿಸಿಹೋಗುತ್ತದೆ ಎಂಬ ಭೀತಿ ಕಾಡುತ್ತಿರುತ್ತದೆ. ಹಾಗಾಗಿ ಆವೇಶದ ಜನ `ನನ್ನ ಧರ್ಮ ಶ್ರೇಷ್ಠ’ ಎಂಬ ಘೋಷಣೆ ಕೂಗುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಮತ ಹಾಕುವ ಸಂದರ್ಭದಲ್ಲಿ ಜನರನ್ನು ಪುಸಲಾಯಿಸಲು ಧರ್ಮವನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಗುತ್ತಿದೆ. ನಿಸರ್ಗದ ನಿಯಮಗಳನ್ನು ಧರ್ಮದ ಗುತ್ತಿಗೆದಾರರು ತಮ್ಮ ದುರ್ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನಿಸರ್ಗ ಎಲ್ಲರಿಗೂ ಸ್ವಾತಂತ್ರ್ಯ ಕೊಟ್ಟಿದೆ. ಪ್ರಾಣಿಪಕ್ಷಿಗಳು, ನದಿ ಸರೋವರಗಳು, ಗುಡ್ಡ ಪರ್ವತಗಳು ಇವುಗಳಿಗೆ ಯಾವುದೇ ಧರ್ಮವಿಲ್ಲ, ಸಮಾಜವಿಲ್ಲ, ಲಕ್ಷ ಲಕ್ಷ ವರ್ಷಗಳಿಂದ ಅವು ತಮ್ಮ ತಮ್ಮ ಕೆಲಸ ಮಾಡಿಕೊಂಡು ಹೊರಟಿವೆ.
ಕೇವಲ ಮನುಷ್ಯನಿಗೆ ಮಾತ್ರ ಭಾಷೆ, ಧರ್ಮ, ಸಮಾಜ ಹಾಗೂ ಜಾತಿಯ ಅವಶ್ಯಕತೆ ಏಕಿದೆ? ನಾವು ಪೂಜಾರಿ ಪುರೋಹಿತರ ಹೊರತಾಗಿ ನಮಗೆ ಇಷ್ಟವಾದ ಪೂಜೆ ನೆರವೇರಿಸಲು ಆಗುವುದಿಲ್ಲ. ಒಂದು ವೇಳೆ ಮಾಡಿದರೆ ಜನರನ್ನು ತಿರಸ್ಕೃತರನ್ನಾಗಿ ಮಾಡುತ್ತಾರೆ. ಅವರು ಮಾತ್ರ ಸ್ವಯಂ ನಿಯಮ ರೂಪಿಸುತ್ತಾರೆ ಹಾಗೂ ತಾವೇ ಆ ನಿಯಮ ಮುರಿಯುತ್ತಾರೆ.
ನದಿ ಎಂದಾದರೂ ಝರಿಗೆ ಕೇಳುತ್ತದೆಯೇ, ನೀನು ಯಾವ ಗುಡ್ಡದಿಂದ ಹರಿದು ಬಂದೆ, ನಾನು ನಿನ್ನನ್ನು ನನ್ನ ಒಡಲಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಎಂದಾದರೂ ಹೇಳುತ್ತದೆಯೇ? ಪರ್ವತದಿಂದ ಕಳಚಿಬಿದ್ದ ಕಲ್ಲು ಎಲ್ಲಿ ಬೀಳುತ್ತದೋ ಅದೇ ಅದರ ಖಾಯಂ ಸ್ಥಳವಾಗುತ್ತದೆ. ಗಾಳಿ ತನ್ನ ಮನಸ್ಸಿಗೆ ಬಂದಂತೆ ಬೀಸುತ್ತದೆ. ಆಕಾಶ, ಸೂರ್ಯ, ಚಂದ್ರ, ನಕ್ಷತ್ರ ಇವು ಜಾತಿ ರಹಿತವಾಗಿ ಕಾಲಕಾಲಕ್ಕೆ ಏನೇನು ಆಗಬೇಕೊ ಅದೆಲ್ಲ ಆಗುವಂತೆ ಮಾಡುತ್ತಿದ್ದಾರೆ.
ಕೇವಲ ಮನುಷ್ಯನಿಗಷ್ಟೇ ಧರ್ಮ, ಸಮಾಜ, ಭಾಷೆಯ ಅವಶ್ಯಕತೆ ಏಕಿದೆ? ಪೂಜಾರಿ ಪುರೋಹಿತರ ನೆರವಿಲ್ಲದೆ ನಾವು ಯಾವುದೇ ಪೂಜೆ ಮಾಡಲು ಸಾಧ್ಯವಿಲ್ಲವೇ? ಹಾಗೊಂದು ವೇಳೆ ಮಾಡಿದರೆ ಅವರನ್ನು ತಿರಸ್ಕೃತರು ಎಂದು ಏಕೆ ಭಾವಿಸಲಾಗುತ್ತದೆ?
ಇವರೆಲ್ಲ ಅಧಿಕಾರ ದಾಹಿಗಳು. ಎಲ್ಲರೂ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡುತ್ತಾ ಹೋದರೆ, ತಮ್ಮ ಮಹತ್ವ ಕಡಿಮೆಯಾಗುತ್ತದೆಂಬ ಭೀತಿ ಅವರನ್ನು ಕಾಡುತ್ತದೆ.
– ರುಚಿತಾ ಪ್ರಮೋದ್