ಉಡುಗೊರೆಗಳ ಕೊಡುವ ತೆಗೆದುಕೊಳ್ಳುವಿಕೆ ಕುಟುಂಬಗಳ ನಡುವೆ ಇರಬಹುದು, ಸಂಬಂಧಿಕರ ಮಧ್ಯೆ ಆಗಿರಬಹುದು ಅಥವಾ ಅಕ್ಕಪಕ್ಕದವರಿಗೆ ಇರಬಹುದು. ಇದು ಒಂದು ರೀತಿಯಲ್ಲಿ ಸಂಬಂಧ ಬೆಸೆಯುವಲ್ಲಿ ಸಹಾಯಕವಾಗಿದೆ. ಆದರೆ ನಿಮ್ಮ ಸ್ನೇಹ ಮತ್ತು ಪ್ರೀತಿಯನ್ನು ಪ್ರದರ್ಶಿಸಲು ನೀವು ದುಬಾರಿ ಉಡುಗೊರೆಯನ್ನೇ ಕೊಡಬೇಕೆಂದೇನಿಲ್ಲ. ಅತ್ಯಂತ ಬೆಲೆ ಬಾಳುವ ಉಡುಗೊರೆ ಕೊಟ್ಟು ನೀವು ಬೇರೆಯವರನ್ನು ಕೃತಜ್ಞರನ್ನಾಗಿಸಬಹುದು. ಆದರೆ ಅದೇ ವ್ಯಕ್ತಿ ನಿಮಗೆ ಉಡುಗೊರೆ ಕೊಡಬೇಕಾಗಿ ಬಂದಾಗ ಅವರು ಅಷ್ಟು ದುಬಾರಿ ಉಡುಗೊರೆ ಕೊಡಲಾಗದೆ ಪರಿತಪಿಸುವಂತಾಗುತ್ತದೆ. ದುಬಾರಿ ಉಡುಗೊರೆ ಕೊಟ್ಟು ನಿಮ್ಮ ಹಕ್ಕನ್ನು ಪ್ರತಿಪಾದಿಸಬೇಡಿ.
ಉಡುಗೊರೆ ಕೊಡುವ ಉದ್ದೇಶ ಸೌಹಾರ್ದತೆ ಬಿಂಬಿಸುವುದಾಗಿರಬೇಕೇ ಹೊರತು, ಇತರರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಆಗಬಾರದು. ಇದರ ಜೊತೆ ಜೊತೆಗೆ ಉಡುಗೊರೆ ಸ್ವೀಕರಿಸುವ ವ್ಯಕ್ತಿ ಅದು ದುಬಾರಿ ಅಥವಾ ಕಡಿಮೆ ಬೆಲೆಯದ್ದು ಎಂಬುದರ ಕಡೆ ಗಮನ ಕೊಡದೆ, ನಿಮ್ಮ ಪ್ರೀತಿ ವಿಶ್ವಾಸವನ್ನಷ್ಟೇ ಗಮನಿಸುವಂತಾಗಬೇಕು. ಏಕೆಂದರೆ ನೀವು ಉಡುಗೊರೆಯ ಮುಖಾಂತರ ಅವರನ್ನು ಗೌರವಿಸುತ್ತಿರುವಿರಿ, ಪ್ರೀತಿಯನ್ನು ಹಂಚುತ್ತಿರುವಿರಿ. ನಿಮ್ಮ ಉಡುಗೊರೆ ಕಡಿಮೆ ಬೆಲೆಯದ್ದಾಗಿದ್ದರೂ ಸರಿ, ಆದರೆ ಅದು ಅವರಿಗೆ ಉಪಯುಕ್ತ ಎನಿಸುವಂತಾಗಿರಬೇಕು. ನಿಮ್ಮ ಜೊತೆಗಿನ ನಿಕಟತೆಯನ್ನು ಆ ಉಡುಗೊರೆ ಸದಾ ನೆನಪಿಗೆ ತರುವಂತಿರಬೇಕು.
ಏನು ಉಡುಗೊರೆ ಕೊಡಬೇಕು?
ನಾವು ಈ ಸಲ ದುಬಾರಿ ಉಡುಗೊರೆ ಕೊಡೋದು ಬೇಡ. 100 ರೂ.ನಿಂದ ಹಿಡಿದು 500 ರೂ. ಬೆಲೆ ಬಾಳುವ ಉಡುಗೊರೆ ಖರೀದಿಸಿ ಕೊಡೋಣ. ತೆಗೆದುಕೊಳ್ಳುವ ವ್ಯಕ್ತಿ ನಿಮ್ಮ ತಿಳಿವಳಿಕೆ ನೋಡಿ ಹೊಗಳದೆ ಇರಲಾರರು. ಒಂದು ವೇಳೆ ನೀವು ಆನ್‌ಲೈನ್ ಶಾಪಿಂಗ್ ಮಾಡಲು ಇಷ್ಟಪಡುವಿರಾದರೆ, ಅಂತಹ ಕೆಲವು ವಸ್ತುಗಳಿದ್ದು, ನೀವು ಮನೆಯಲ್ಲೇ ಕುಳಿತು ಆರ್ಡರ್‌ಮಾಡಬಹುದು. ಈಗ ಕ್ಯಾಂಡಲ್ಸ್ ನ ಬಹಳಷ್ಟು ವೆರೈಟಿ ಇದ್ದು, ನೀವು ಬಗೆಬಗೆಯ ಕ್ಯಾಂಡಲ್ಸ್ ಅಥವಾ ದೀಪಗಳ ಒಂದು ಹ್ಯಾಂಪರ್ ಸಿದ್ಧಪಡಿಸಿ ಅವರಿಗೆ ಉಡುಗೊರೆ ಕೊಡಬಹುದು.
ಇದರ ಹೊರತಾಗಿ ಗೃಹ ಬಳಕೆ ವಸ್ತುಗಳಾದ ಲ್ಯಾಂಪ್ ಶೇಡ್, ಪುಟ್ಟ ಎಮಲ್ಶನ್ ರಾಡ್, ಬುಕ್ ಸ್ಟ್ಯಾಂಡ್, ಚೈನೀಸ್ ಕೆಟಲ್ ಮತ್ತು ಕಾಫಿ ಮಗ್ ಕೂಡ ಒಳ್ಳೆಯ ಪರ್ಯಾಯ ಉಡುಗೊರೆಗಳಾಗಿವೆ. ಇದರಿಂದ ಪರ್ಸ್‌ಗೆ ಹೆಚ್ಚಿನ ಹೊರೆ ಅನಿಸದು. ಟೈಮ್ ಪೀಸ್, ಫೋಟೋ ಫ್ರೇಮ್, ಗಾಜಿನ ಅಲಂಕಾರಿಕ ವಸ್ತುಗಳು, ಅಡುಗೆಮನೆಯಲ್ಲಿ ಬಳಸುವ ಪರಿಕರಗಳನ್ನು ಕೊಡಬಹುದು. ಬಿಸ್ಕತ್ತು ಹಾಗೂ ಜ್ಯೂಸ್ ಪ್ಯಾಕ್‌ಗಳನ್ನು ಕೊಡಬಹುದು.
ಕುತೂಹಲಕಾರಿ ಉಡುಗೊರೆಗಳು
ಮಕ್ಕಳಿಗೆ ಉಡುಗೊರೆ ಕೊಡಬೇಕೆಂದರೆ ಏನು ಖರೀದಿಸಬೇಕೆಂದು ಹಲವು ಸಲ ಯೋಚಿಸಬೇಕಾಗುತ್ತದೆ. ಎಜುಕೇಶನಲ್ ಡಿವಿಡಿ, ಪ್ರೇರಣಾದಾಯಕ ಸಿನಿಮಾದ ವಿಡಿಯೋಗಳು ಒಳ್ಳೆಯ ಪುಸ್ತಕಗಳನ್ನು ಕೊಡಬಹುದು. ವೃದ್ಧರಿಗೆ ಏನಾದರೂ ಕೊಡಬೇಕಿದ್ದರೆ ಪುಸ್ತಕಗಳು, ಸ್ವೆಟರ್, ಶಾಲು, ನಿಯತಕಾಲಿಕೆಗಳು ಹಾಗೂ ಹಳೆಯ ಸಿನಿಮಾಗಳ ಡಿವಿಡಿಗಳನ್ನು ಕೊಡಬಹುದು. ಸಂಬಂಧಿಕರಿಗೆ, ಸ್ನೇಹಿತರಿಗೆ ಚಿಕ್ಕ ಗಿಫ್ಟ್ ಬ್ಯಾಸ್ಕೆಟ್‌ಗಳನ್ನು ಕೊಡಬಹುದು. ಎಲ್ಲಕ್ಕೂ ಒಳ್ಳೆಯ ಉಡುಗೊರೆಯೆಂದರೆ ಹಸಿರು ಸಸಿಯನ್ನು ಕೊಡುವುದಾಗಿದೆ. ಮಹಿಳೆಯರಿಗೆ ಸೌಂದರ್ಯ ಪ್ರಸಾಧನಗಳ ಉಡುಗೊರೆ ಕೊಡಬಹುದು. ವುಡನ್ ಡೆಕೋರೇಶನ್ ಪೀಸ್‌ಗಳು ಕೂಡ ನಿಮಗೆ ಕಡಿಮೆ ಬೆಲೆಯಲ್ಲಿ ಲಭಿಸುತ್ತವೆ. ವಾಲ್ ಹ್ಯಾಂಗಿಂಗ್ ಮತ್ತು ರಂಗೋಲಿಯ ಸ್ಟಿಕರ್‌ನ ಪ್ಯಾಕ್‌ನ್ನೂ ಕೊಡಬಹುದು.
ಸಾಕಷ್ಟು ಪರ್ಯಾಯಗಳು
ಪೇಪರ್ ಲ್ಯಾಂಪ್ ಮನೆಯಲ್ಲಿ ಬಹಳ ಚೆನ್ನಾಗಿಯೂ ಕಾಣುತ್ತದೆ. ಅದರ ನಿರ್ವಹಣೆ ಕೂಡ ಅಷ್ಟೇ ಸುಲಭ. ಮಾರುಕಟ್ಟೆಯಲ್ಲಿ ಇವು 100 ರೂ. ನಿಂದ 300 ರೂ. ರೇಂಜ್‌ನಲ್ಲಿ ದೊರೆಯುತ್ತವೆ. ಮ್ಯಾಜಿಕ್ ಫೋಲ್ಡಿಂಗ್ ಹೂಗುಚ್ಛ ಕೂಡ ಉಪಯುಕ್ತ ಉಡುಗೊರೆಯಾಗಿದೆ. ಏಕೆಂದರೆ ಇದು ಪ್ಲಾಸ್ಟಿಕ್ ಬ್ಯಾಗ್‌ನಿಂದ ತಯಾರಾದುದ್ದಾಗಿದೆ. ಇದು ಬಿದ್ದು ಒಡೆದು ಹೋಗುವ ಅಪಾಯ ಇರುವುದಿಲ್ಲ. ಇದನ್ನು ನೀವು ಹೂವಿನ ಜೊತೆಗೆ ಉಡುಗೊರೆಯಾಗಿ ಕೊಟ್ಟರೆ, ತೆಗೆದುಕೊಂಡ ವ್ಯಕ್ತಿಗೆ ಬಹಳ ಖುಷಿಯಾಗುತ್ತದೆ. 300-500 ರೂ.ಗಳ ನಡುವೆ ಇಂತಹ ಉಡುಗೊರೆಗಳನ್ನು ಖರೀದಿಸಬಹುದು. ನಿಮ್ಮ ಫ್ರೆಂಡ್ ಅಥವಾ ಸೋದರಿಗೆ ಗಿಫ್ಟ್ ಕೊಡಬೇಕೆಂದು ಯೋಚಿಸುತ್ತಿದ್ದರೆ, ಬ್ರೇಸ್ಲೆಟ್ ಕೊಡಬಹುದು. ಆನ್‌ಲೈನ್‌ನಲ್ಲಿ ಇವು 300-500ರಲ್ಲಿ ಲಭಿಸುತ್ತವೆ. ಇತ್ತೀಚೆಗೆ ಪ್ರತಿಯೊಬ್ಬರೂ ಹೆಡ್ ಫೋನ್‌ಗಳನ್ನು ಬಳಸುತ್ತಾರೆ. ಉಡುಗೊರೆಯ ರೂಪದಲ್ಲಿ ಅದನ್ನು ಕೊಡಬಹುದು.
ಮಾರ್ಕೆಟ್‌ನಲ್ಲಿ ಈಗ ಕಲರ್‌ಫುಲ್ ಹೆಡ್‌ಫೋನ್ ಲಭಿಸುತ್ತವೆ. 500 ರೂ. ಆಸುಪಾಸಿನ ಗುಣಮಟ್ಟದ ಹೆಡ್‌ಫೋನ್‌ನ್ನು ಉಡುಗೊರೆಯಾಗಿ ಕೊಡಬಹುದು.
ನೀವೂ ತಯಾರಿಸಬಹುದು
ಸಿಲ್ವರ್ ಕೋಟೆಡ್ ದೀಪಗಳು, ಗಡಿಯಾರ ಮುಂತಾದ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಗಿಫ್ಟ್ ಗಳ ವಿಶೇಷತೆಯೆಂದರೆ, ಇವು ಕಪ್ಪಗಾಗುವುದಿಲ್ಲ ಹಾಗೂ ಇವುಗಳ ಬೆಲೆ ಕೂಡ ಹೆಚ್ಚಿಗೆ ಇರುವುದಿಲ್ಲ.
ಗಿಫ್ಟ್ ಕಾರ್ಡ್ ಕೂಡ ಒಳ್ಳೆಯ ಆಪ್ಶನ್‌ಗಳಾಗಿವೆ. ನೀವು ಗಿಫ್ಟ್ ಕಾರ್ಡ್‌ಗಳನ್ನು ಬ್ಯಾಂಕ್‌ನ ಶಾಖೆಯ ಮುಖಾಂತರ ಅಥಾವಾ ನೆಟ್ ವರ್ಕಿಂಗ್‌ನ ಮುಖಾಂತರ ಪಡೆಯಬಹುದು. ಬೇರೆ ಬೇರೆ ಬ್ಯಾಂಕ್‌ಗಳು ಬೇರೆ ಬೇರೆ ಸಂದರ್ಭಕ್ಕೆ ತಕ್ಕಂತೆ ಇಂತಹ ಕಾರ್ಡ್‌ಗಳನ್ನೂ ಹೊರತರುತ್ತಿರುತ್ತವೆ. ಇಂತಹ ಕಾರ್ಡ್‌ಗಳನ್ನು ಸಿನಿಮಾ ಟಿಕೆಟ್, ರೆಸ್ಟೋರೆಂಟ್ ಬಿಲ್, ಆಫ್‌ಲೈನ್, ಆನ್‌ಲೈನ್‌ಶಾಪಿಂಗ್‌ನಲ್ಲಿ ಬಳಸಿಕೊಳ್ಳಬಹುದು. ಈ ಕಾರ್ಡ್‌ಗಳು ಡೆಬಿಟ್ ಕಾರ್ಡ್‌ಗಳಂತೆ ಬಳಕೆಯಾಗುತ್ತವೆ.
ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ತೋಟಗಾರಿಕೆಯ ಹವ್ಯಾಸವಿದ್ದರೆ, ಅವರಿಗೆ ಯಾವುದಾದರೂ ಔಟ್‌ಡೋರ್ ಪ್ಲಾಂಟ್‌ನ್ನು ಸುಂದರವಾದ ಕುಂಡದಲ್ಲಿ ಹಾಕಿ ಕೊಡಬಹುದು. ಒಂದು ವೇಳೆ ನೀವು ಉಡುಗೊರೆ ಕೊಡಬೇಕಾದ ವ್ಯಕ್ತಿಯ ಮನೆಯ ಮೇಲ್ಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೆ ಅವರಿಗೆ ಒಂದು ಕಿಟ್‌ನ್ನೇ ವಿಶೇಷ ಉಡುಗೊರೆಯಾಗಿ ಕೊಡಬಹುದು.
ನಿಮ್ಮ ಸಂಬಂಧಿಕರಿಗೆ ನಿಮ್ಮ ಕೈಯಾರೆ ತಯಾರಿಸಿದ ಚಾಕ್ಲೇಟ್, ಜಾಮ್, ಜೆಲ್ಲಿ ಮುಂತಾದವನ್ನು ಉಡುಗೊರೆಯಾಗಿ ಕೊಡಿ. ನಿಮಗೆ ಬೇಕಿಂಗ್ ಮಾಡಲು ಗೊತ್ತಿದ್ದರೆ ರುಚಿಕರ ಕೇಕ್ ತಯಾರಿಸಿ ಕೊಡಿ.
ವಿಶೇಷ ಉಡುಗೊರೆ
ನಿಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ಕಳೆದ ವಿಶೇಷ ಕ್ಷಣಗಳ ಸಿಡಿಯೊಂದನ್ನು ತಯಾರಿಸಿ, ಅದನ್ನು ಉಡುಗೊರೆಯಾಗಿ ಕೊಡಬಹುದು. ಫೋಟೋಗಳನ್ನು ಕೋಲಾಜ್ ಮಾಡಿ ಕೂಡ ದೀಪಾವಳಿಯ ಸಂದರ್ಭದಲ್ಲಿ ಉಡುಗೊರೆ ರೂಪದಲ್ಲಿ ಕೊಡಬಹುದು. ನಿಮ್ಮ ಸ್ನೇಹಿತರಿಗೆ ಹಾಡು ಕೇಳುವ ಆಸಕ್ತಿಯಿದ್ದರೆ, ಅವರ ಮೆಚ್ಚಿನ ಹಾಡುಗಳ ಒಂದು ಸಿಡಿ ತಯಾರಿಸಿ ಅದನ್ನು ಉಡುಗೊರೆ ರೂಪದಲ್ಲಿ ಕೊಡಬಹುದು.
ಈ ದೀಪಾವಳಿ ಸಂದರ್ಭದಲ್ಲಿ ನೀವು ನಿಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ನಿಮ್ಮ ಸಮಯವನ್ನು ಕೂಡ ಉಡುಗೊರೆ ರೂಪದಲ್ಲಿ ಕೊಡಬಹುದು. ಇತ್ತೀಚಿನ ದಿನಗಳಲ್ಲಿ ಎಲ್ಲಕ್ಕೂ ಅತ್ಯಮೂಲ್ಯವಾದುದು ಸಮಯವೇ ಆಗಿದೆ.
ದೀಪಾವಳಿಯ ಸಮಸ್ತ ಜವಾಬ್ದಾರಿಗಳ ನಡುವೆ ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಸಮಯ ಕಳೆಯಿರಿ. ಜೊತೆಗೆ ವಿಶೇಷ ತಿಂಡಿ ತಿನಿಸು ನೀಡಿ, ಸೇವಿಸಿ. ಅದು ನಿಮ್ಮ ನೆನಪಲ್ಲಿ ವಿಶೇಷವಾಗಿ ಉಳಿಯುತ್ತದೆ.
– ಸುಮನಾ ಶರ್ಮ