ರಂಗೋಲಿ ಇಲ್ಲದ ಹಬ್ಬಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಇದಕ್ಕೆ ವಿಭಿನ್ನ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ ಹಾಗೂ ಉ. ಭಾರತದ ಬಹು ಭಾಗಗಳಲ್ಲಿ ಇದು ರಂಗೋಲಿ ಎಂದೇ ಪ್ರಸಿದ್ಧ. ಕೇರಳ, ತಮಿಳುನಾಡಿನಲ್ಲಿ ಕೋಲಂ, ಆಂಧ್ರದಲ್ಲಿ ಮೊಗ್ಗುಲು, ಬಂಗಾಳದಲ್ಲಿ ಅಲ್ಪನಾ, ರಾಜಸ್ಥಾನದಲ್ಲಿ ಮಾಂಡ್ನಾ, ಹಿ. ಪ್ರದೇಶದಲ್ಲಿ ಅರೂಪ್ನಾ, ಉ. ಪ್ರದೇಶದಲ್ಲಿ ಚಾಕ್‌, ಬಿಹಾರದಲ್ಲಿ ಏಪನ್‌….. ಇತ್ಯಾದಿ.

ದ. ಭಾರತ ರಂಗೋಲಿಯ ತವರೂರು. ಅಲ್ಲಿಂದ ಮುಂದೆ ಇದು ಮಹಾರಾಷ್ಟ್ರ, ಗುಜರಾತ್‌ ತಲುಪಿತು. ಮಧ್ಯ/ಉತ್ತರ ಪ್ರದೇಶ ದಾಟಿ ಇದೀಗ ಈ ಕಲೆ ದೇಶಾದ್ಯಂತ ಹರಡಿದೆ. ಮಹಾರಾಷ್ಟ್ರ, ದ. ಭಾರತದ ಗೃಹಿಣಿಯರು ಪ್ರತಿದಿನ ಅಥವಾ ಸಮಯಾಭಾವ ಇದ್ದರೆ ಅಗತ್ಯವಾಗಿ ಮಂಗಳವಾರ, ಶುಕ್ರವಾರ ಮನೆ ಮುಂದೆ ನೀರು ಚಿಮುಕಿಸಿ, ರಂಗೋಲಿ ಬಿಡಿಸಿದ ನಂತರವೇ ಮನೆಯ ದೈನಂದಿನ ಕಾರ್ಯ ಶುರುಮಾಡುತ್ತಾರೆ. `ರಂಗ ನೀ ಒಲಿ’ ಎನ್ನುವುದರ ಸಮಾಸ ರೂಪವೇ ರಂಗೋಲಿ. ದೇವರ ಕೋಣೆ ಮುಂದೆ ಆರಂಭವಾದ ಈ ಕಲೆ ಇಂದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ವಿಶ್ವಾದ್ಯಂತ ತನ್ನದೇ ಛಾಪು ಹೊಂದಿದೆ. ಬಣ್ಣಗಳ ಮಾಧ್ಯಮದಿಂದ ಗೃಹಿಣಿಯ ಮನಸ್ಸಿನ ಭಾವನೆಗಳ ಚಿತ್ತಾರವಾಗಿದೆ ಈ ರಂಗೋಲಿ ಯಾ ರಂಗವಲ್ಲಿ! ಇದರ ವಿಭಿನ್ನ  ರೂಪಗಳು ಹೀಗಿವೆ :

ಫ್ರೀ ಹ್ಯಾಂಡ್‌ ರಂಗೋಲಿ : ಇದರ ಮೂಲಕವಾಗಿ ನೀವು ಯಾವುದೇ ಹೂಬಳ್ಳಿ, ಕಲಾಕೃತಿ ಇತ್ಯಾದಿಗಳ ಡಿಸೈನ್‌ ಬಿಡಿಸಬಹುದು. ಯಾವುದರ ಸ್ಕೆಚಿಂಗ್‌, ಡ್ರಾಯಿಂಗ್‌, ಕಲರಿಂಗ್‌ ಅತ್ಯುತ್ತಮವೋ ಅದು ಹೆಚ್ಚು ಜನಪ್ರಿಯವಾಗುತ್ತಾ ಹೋಗುತ್ತದೆ.

ಡಾಟೆಡ್‌ ರಂಗೋಲಿ : ನೀರು ಚಿಮುಕಿಸಿದ ಅಂಗಳದ ಮೇಲೆ ಸಾಲಾಗಿ, ಕ್ರಮಬದ್ಧವಾಗಿ ಇರಿಸಿದ ಬಿಂದುಗಳನ್ನು ಚಿತ್ತಾಕರ್ಷಕವಾಗಿ ಜೋಡಿಸುವುದೇ ಡಾಟೆಡ್‌ರಂಗೋಲಿ. ಉತ್ತರಕ್ಕಿಂತ ದಕ್ಷಿಣದಲ್ಲೇ ಇದರ ಸೊಬಗು ಹೆಚ್ಚು. ಈ ಮೂಲಕ ಜ್ಯಾಮಿತೀಯ, ವರ್ಗಾಕಾರ, ಆಯತಾಕಾರ, ಶಿನ ಜಟೆಯಂಥ ಕ್ಲಿಷ್ಟಕರ ವಿನ್ಯಾಸಗಳನ್ನು ಬಿಡಿಸಬಹುದಾಗಿದೆ.

ರೆಡಿಮೇಡ್‌ ರಂಗೋಲಿ : ಇಂದಿನ ಮಾರುಕಟ್ಟೆಯಲ್ಲಿ ವೈವಿಧ್ಯಮಯ ವಿನ್ಯಾಸಗಳಲ್ಲಿ ಪೇಪರ್‌ ಯಾ ಪ್ಲಾಸ್ಟಿಕ್‌ ಶೀಟ್ಸ್ ಮೇಲೆ ಇವು ಲಭ್ಯ. ಡಿಸೈನ್ಸ್ ಗೆ ತಕ್ಕಂತೆ ಪೇಪರ್‌ನಲ್ಲಿ ರಂಧ್ರಗಳಿರುತ್ತವೆ. ಇದರ ಮೇಲೆ ಬಣ್ಣ ತುಂಬಿಸಿ, ಬದಿಯಿಂದ ತಟ್ಟುತ್ತಾ ವರ್ಣಮಯ ವಿನ್ಯಾಸಗಳನ್ನೂ ಬಿಡಿಸಬಹುದು. ಸ್ಟೀಲ್ ರೋಲರ್‌ಗಳಿಗೆ ಪುಡಿ ತುಂಬಿಸಿಯೂ ರೆಡಿಮೇಡ್‌ ರಂಗೋಲಿ ಬಿಡಿಸಿ, ನಂತರ ಬಣ್ಣ ತುಂಬಿಸಬಹುದು. ಮುಖ್ಯವಾಗಿ ಬಾರ್ಡರ್‌ ಚಿತ್ತಾರಕ್ಕೆ ಇದು ಪೂರಕ.

ಕೃತಕ ರಂಗೋಲಿ : ಇದು ಪ್ಲಾಸ್ಟಿಕ್‌ ಶೀಟ್ಸ್ ಮೇಲೆ ಹಲವಾರು ಡಿಸೈನ್‌ಗಳಲ್ಲಿ ಲಭ್ಯ. ಇದರಲ್ಲಿ ಒಂದು ಬದಿಗೆ ಗ್ಲೂ ಅಂಟಿಸಿರುತ್ತಾರೆ. ಅದರ ಮೇಲೆ ಮೆತ್ತಲಾದ ಕಾಗದವನ್ನು ಸರಿಸಿ, ಇದನ್ನು ನಿಮ್ಮ ಮನೆಯ ಬೇಕಾದ ಜಾಗದಲ್ಲಿ ಅಂಟಿಸಿಕೊಳ್ಳಬಹುದು.

ಹರ್ಬಲ್ ರಂಗೋಲಿ : ಇದು ಗುಲಾಬಿ, ಚೆಂಡು ಹೂಗಳಂಥ ಬಗೆಬಗೆಯ ಬಣ್ಣಗಳ ಹೂಗಳಿಂದ, ಎಲೆ ಬಳ್ಳಿಗಳಿಂದ ವಿನ್ಯಾಸಗೊಳ್ಳುತ್ತದೆ. ಎಲ್ಲಾ ವಿನ್ಯಾಸಗಳಿಗಿಂತ ಈ ವಿನ್ಯಾಸ ಅತಿ ವಿಶಿಷ್ಟವಾದುದು.

ಜಾಗ ಹೇಗಿರಬೇಕು?

ರಂಗೋಲಿಯ ಚಿತ್ತಾರ ಬಿಡಿಸಲು ನೀವು ಆರಿಸಿಕೊಳ್ಳುವ ಜಾಗ ಸಮತಲ ಆಗಿರಬೇಕು. ಇತ್ತೀಚೆಗೆ ಎಲ್ಲರ ಮನೆ ಮನೆಯಲ್ಲೂ ಟೈಲ್ಸ್ ರಾರಾಜಿಸುತ್ತಿರುತ್ತದೆ. ಎಷ್ಟೋ ಸಲ ಇವು ತರಿತರಿ, ಉಬ್ಬಿರುವ ಪದರ ಹೊಂದಿರುತ್ತದೆ. ಹೀಗಾದಾಗ ನೀವು ರಂಗೋಲಿ ಬಿಡಿಸಬೇಕಾದ ಜಾಗದಲ್ಲಿ, ಯಾವುದೇ ತೆಳ್ಳನೆ ಬಣ್ಣದ ಪ್ಲೇನ್‌ ಪ್ಲಾಸ್ಟಿಕ್‌ ಯಾ ಪೇಪರ್‌ ಶೀಟ್‌ ಫಿಕ್ಸ್ ಮಾಡಿ. ಟೇಪ್‌ನಿಂದ ಬಿಡದಂತೆ ಅಂಟಿಸಿಬಿಡಿ. ಈಗ ಇದರ ಮೇಲೆ ರಂಗೋಲಿ ಬಿಡಿಸಿ. ಹೊರ ಅಂಗಳದಲ್ಲಿ ಇದನ್ನು ಬಿಡಿಸಬೇಕಾದಾಗ, ಹೆಬ್ಬಾಗಿಲಿನ ಮುಂದೆ ಅಥವಾ ಕಾಂಪೌಂಡ್‌ ಗೇಟ್‌ಬಳಿ ರಸ್ತೆಗೆ ಎದುರಾಗುವಂತೆ ಜಾಗ ಆರಿಸಿ, ರಂಗೋಲಿ ಬಿಡಿಸಿ, ಬಣ್ಣ ಬಣ್ಣದ ಪುಡಿಗಳಿಂದ ಬಣ್ಣ ತುಂಬಿಸಿ. ಇಂಥ ರಂಗೋಲಿಗಳು ಅನೇಕ ವರ್ಷ ಉಳಿಯುತ್ತವೆ. ರಂಗೋಲಿಯ ಗಾತ್ರಕ್ಕೆ ತಕ್ಕಂತೆ ಜಾಗ ದೊಡ್ಡದು ಅಥವಾ ಚಿಕ್ಕದಾಗಿರಲಿ.

ಹೇಗೆ ಬಿಡಿಸುದು?

ರಂಗೋಲಿ ಬಿಡಿಸಲು ಬೇಕಾದ ಜಾಗ ಆರಿಸಿಕೊಂಡ ಮೇಲೆ, ಅಲ್ಲೆಲ್ಲ ಸುತ್ತಮುತ್ತಲೂ ನೀಟಾಗಿ ಕ್ಲೀನ್‌ ಮಾಡಿ. ಅದರ ಮೇಲೆ ಪೇಪರ್‌ ಯಾ ಪ್ಲಾಸ್ಟಿಕ್‌ ಶೀಟ್‌ ಅಂಟಿಸಿದ್ದರೆ, ಅದನ್ನೂ ಒಂದು ಒಣ ಬಟ್ಟೆಯಿಂದ ಶುಚಿಗೊಳಿಸಿ. ಬಿಳಿಯ ಬಣ್ಣದಿಂದ ಡಿಸೈನಿನ ಔಟ್‌ ಲೈನ್ಸ್ ಬಿಡಿಸಿ. ನೀವು ಡಾಟೆಡ್‌ ರಂಗೋಲಿ ಬಿಡಿಸುತ್ತಿದ್ದರೆ, ಮೊದಲು ಎಲ್ಲಾ ಚುಕ್ಕೆಗಳನ್ನೂ ಕ್ರಮಬದ್ಧವಾಗಿ ಜೋಡಿಸಿ. ನಂತರ ಇದಕ್ಕೆ ಸುಂದರ ಬಣ್ಣ ತುಂಬಿಸಿ. ಬಣ್ಣ ಪರಸ್ಪರ ಕ್ಲ್ಯಾಶ್‌ ಆಗಬಾರದು ಎಂದು ಗಮನವಿರಲಿ.

– ಜಿ. ಪಲ್ಲವಿ 

Tags:
COMMENT