ಲಲಿತಾ ಪಾರ್ಟಿ ಮುಂತಾದವುಗಳಿಗೆ ಹೋಗಲು ಬಹಳ ಉತ್ಸಾಹದಿಂದಲೇ ಸನ್ನದ್ಧಳಾಗುತ್ತಾಳೆ. ಹಲವು ದಿನಗಳ ಮುಂಚೆಯೇ ಅವಳ ಶಾಪಿಂಗ್ ಶುರುವಾಗುತ್ತದೆ. ಆದರೆ ಪಾರ್ಟಿಯಿಂದ ಬಂದ ಬಳಿಕ ಹಲವು ದಿನಗಳ ತನಕ ಅವಳ ಮೂಡ್ ಆಫ್ ಆಗಿಬಿಡುತ್ತದೆ. ಇದಕ್ಕೆ ಕಾರಣ ಬೇರೆ ಮಹಿಳೆಯರು ಅವಳಿಗಿಂತ ಅಂದವಾಗಿ ಅಲಂಕರಿಸಿಕೊಂಡಿರುವುದು. ಗಂಡ ತನಗೆ ಕಡಿಮೆ ಹಣ ಕೊಟ್ಟಿದ್ದರಿಂದ ಹೀಗಾಯ್ತು ಎಂದು ಒಮ್ಮೆ ಅವಳು ಹೇಳಿದರೆ, ಇನ್ನೊಮ್ಮೆ ಬೇರೆಯವರ ಮೇಲೆ ಆರೋಪ ಹೊರಿಸುತ್ತಾಳೆ. ಅವಳ ಧೋರಣೆಯಿಂದ ಗಂಡ ಅಷ್ಟೇ ಅಲ್ಲ, ಮನೆಯವರೆಲ್ಲ ಮನಸ್ಸು ಕುಗ್ಗಿಸಿಕೊಳ್ಳುತ್ತಾರೆ.
ಬೇರೆ ಯಾರೋ ತನಗಿಂತ ಚೆನ್ನಾಗಿ ಅಲಂಕರಿಸಿಕೊಂಡಿದ್ದನ್ನು ನೋಡಿ ಕೀಳರಿಮೆ ಅಥವಾ ಅಸೂಯೆಯಿಂದ ಅವರನ್ನು ಪ್ರಶಂಸಿಸುವುದಿರಲಿ, ಅವರಿಂದ ಏನನ್ನಾದರೂ ಕಲಿತುಕೊಳ್ಳುವುದನ್ನು ಕೂಡ ಮಾಡುವುದಿಲ್ಲ.
ಬೇರೆಯವರ ಬಳಿ ಯಾವುದಾದರೂ ಒಳ್ಳೆಯ ಗುಣವಿದ್ದರೆ, ವಿಶೇಷವೆನ್ನುವಂತಹ ಕಲೆಯಿದ್ದರೆ ಅದನ್ನು ಕಲಿಯಲು ಪ್ರಯತ್ನ ಮಾಡಬೇಕು. ಅದರಲ್ಲಿ ಯಾವುದೇ ಸಂಕೋಚ ಪಟ್ಟುಕೊಳ್ಳಬಾರದು. ನಿಮ್ಮಲ್ಲಿ ಕೀಳರಿಮೆ ಭಾವನೆ ಬರುವುದು ಕಂಡುಬಂದರೆ, ನಿಮ್ಮೊಳಗಿನ ಉತ್ಸಾಹ ಕಡಿಮೆಯಾಗದಂತೆ ನೋಡಿಕೊಳ್ಳಿ. ಮನಸ್ಸಿನಲ್ಲಿ ಉದಾಸತನ ಪ್ರವೇಶಿಸದಂತೆ ನೋಡಿಕೊಳ್ಳಿ. ಏಕೆಂದರೆ ನಿಮ್ಮೊಳಗೂ ಬಹಳಷ್ಟು ಒಳ್ಳೆಯ ಸಂಗತಿಗಳಿವೆ. ಅವುಗಳ ಮೇಲೆ ದೃಷ್ಟಿಹರಿಸುವ ಅಗತ್ಯವಿದೆ ಅಷ್ಟೇ. ನಿಮ್ಮಲ್ಲಿ ಏನೆಲ್ಲ ವಿಶೇಷತೆಯಿದೆ ನೋಡಿ :
ನಿಮ್ಮೊಳಗೆ ಆತ್ಮವಿಶ್ವಾಸವಿದೆ : ಪಾರ್ಟಿಗೆ ಹೋಗಲು ನಿಮ್ಮನ್ನು ನೀವು ಸಿದ್ಧಪಡಿಸಿಕೊಂಡಿದ್ದರೆ ಅದು ಒಳ್ಳೆಯ ಸಂಗತಿಯೇ ಹೌದು. ಇದರಲ್ಲಿ ಉದಾಸತನದ ಮಾತೇಕೆ? ನಮಗೆ ನಮ್ಮದೇ ಆದ ಒಂದು ಸ್ಟೈಲ್ ಇದೆ, ಪ್ರೆಸೆಂಟೇಶನ್ ಇದೆ. ಇದನ್ನು ಬೇರೆಯವರಲ್ಲಿ ಹೋಲಿಸಿಕೊಳ್ಳುವುದೇಕೆ? ನಿಮ್ಮ ವ್ಯಕ್ತಿತ್ವಕ್ಕೆ ಹೇಗೆ ಚೆಂದ ಕಾಣುತ್ತೊ ಹಾಗೆ ನೀವು ಸಿದ್ಧರಾಗಿದ್ದೀರಾ!
ನಿಮ್ಮಲ್ಲಿದೆ ಸಾಮಾನ್ಯಜ್ಞಾನ : ನೀವು ಸಂದರ್ಭಕ್ಕೆ ತಕ್ಕಂತೆ ತಯಾರಾಗಿರುವಿರಿ. ಏಕೆಂದರೆ ನಿಮ್ಮಲ್ಲಿ ಸಮಯಪ್ರಜ್ಞೆ, ಕಾಮನ್
ಸೆನ್ಸ್ ಇದೆ ಎಂದರ್ಥ. ಸಂದರ್ಭಕ್ಕನುಸಾರ ಪೋಷಾಕು, ಮೇಕಪ್, ಗಡಿಯಾರ, ಸ್ಯಾಂಡಲ್ ಹೀಗೆ ಮೇಲಿನಿಂದ ಕೆಳಗಿನತನಕ ನೀವು ನಿಮ್ಮದೇ ಆದ ಅಂದಾಜಿನಂತೆ ತಯಾರಾಗಿರುವಿರಿ. ಅದಕ್ಕಾಗಿ ಖುಷಿ ಹೊಂದಿ.
ನೀವು ಸನ್ನದ್ಧರಾಗಲು ಹೆಚ್ಚು ಸಮಯ ಮತ್ತು ಹಣ ಪೋಲು ಮಾಡಿಲ್ಲ : ನೀವು ಹೆಮ್ಮೆಪಡಬೇಕಾದ ಮತ್ತೊಂದು ಸಂಗತಿಯೆಂದರೆ, ಪಾರ್ಟಿಗೆ ಹೋಗಲು ನೀವು ಹೆಚ್ಚು ಹಣ ಖರ್ಚು ಮಾಡಿಲ್ಲ. ಜೊತೆಗೆ ಅದಕ್ಕಾಗಿ ಸಾಕಷ್ಟು ಸಮಯ ವ್ಯರ್ಥ ಕೂಡ ಮಾಡಿಲ್ಲ. ನಿಮ್ಮ ಮುಖದ ಅಂದಕ್ಕೆ ಮುಗುಳ್ನಗೆ ಅತ್ಯವಶ್ಯ. ಅದಕ್ಕಿಂತ ದೊಡ್ಡ ಆಭರಣ ಮತ್ತೊಂದಿಲ್ಲ. ಅದರ ಹೊಳಪಿನ ಮುಂದೆ ಬೇರೆಯದೆಲ್ಲ ಮಸುಕಾಗಿ ಗೋಚರಿಸುತ್ತದೆ.
ಅತಿಥಿಗಳು / ಆತಿಥ್ಯ ನೀಡಿದವರ ಜೊತೆ ಮಧುರ ಸಂಬಂಧ : ನೀವು ಯಾರ ಮನೆಗೆ ಹೋಗುತ್ತಿದ್ದೀರೋ, ಅಲ್ಲಿ ಆತಿಥ್ಯ ನೀಡುವವರು ಹಾಗೂ ಬೇರೆ ಅತಿಥಿಗಳ ಜೊತೆ ಸರಿಯಾದ ರೀತಿಯಲ್ಲಿ ವರ್ತಿಸಿ. ಅಲ್ಲಿ ಉತ್ಸಾಹದಿಂದ, ಖುಷಿಯಿಂದ ಶಾಮೀಲಾಗುವುದೇ ನಿಮ್ಮ ಪ್ರಥಮ ಕರ್ತವ್ಯವಾಗಬೇಕು. ಇಂತಹ ಸ್ಥಿತಿಯಲ್ಲಿ ನಿಮಗೆ ಕೀಳರಿಮೆ ಉಂಟಾದರೂ ಅದು ಅಷ್ಟೇ ಬೇಗನೇ ನಿವಾರಣೆಯಾಗುತ್ತದೆ.
ಪ್ರಶಂಸೆ ಮಾಡಲು ಜಿಪುಣತನವೇಕೆ? : ಇತರರನ್ನು ಪ್ರಶಂಸೆ ಮಾಡುವುದು ಹಾಗೂ ಒಳ್ಳೆಯ ದೃಷ್ಟಿಕೋನ ನಿಮಗೆ ಬಹಳಷ್ಟು ಉಪಯೋಗಕ್ಕೆ ಬರುತ್ತದೆ. ಸಾಧ್ಯವಾದರೆ ನೀವು ಅವರನ್ನೊಮ್ಮೆ ಪ್ರಶಂಸೆ ಮಾಡಿ. ಬೇರೆಯವರಿಂದ ಕಲಿತುಕೊಳ್ಳಬಹುದಾದ ಸಾಕಷ್ಟು ಸಂಗತಿಗಳಿವೆ. ಅದಕ್ಕೆ ಜಿಪುಣತನ ಬೇಡ. ಹಲವು ಒಳ್ಳೆಯ ಸಂಗತಿಗಳನ್ನು ತಿಳಿದುಕೊಳ್ಳುವುದರಿಂದ ನಮ್ಮ ಬುದ್ಧಿಮಟ್ಟ ಹೆಚ್ಚುತ್ತದೆ. ಇನ್ನೊಬ್ಬರ ಜೊತೆ ಹೇಗೆ ವರ್ತಿಸಬೇಕೆಂದು ಅರಿವಿಗೆ ಬರುತ್ತದೆ.