ದೀಪಾವಳಿ ಹಬ್ಬವಾಗಲಿ ಅಥವಾ ಬೇರೆ ಯಾವುದೇ ಕಾರ್ಯಕ್ರಮವಾಗಲಿ, 10-20 ಜನರು ಸಡಗರದಿಂದ ಕೂಡಿರದಿದ್ದರೆ, ಸಂತೋಷದ ವಾತಾವರಣ ಇರುವುದಿಲ್ಲ. ಉತ್ಸಾಹ ಹೆಚ್ಚಲು ಉತ್ಸಾಹಿತ ಮಂದಿಯೂ ಅಗತ್ಯ. ಈಗಿನ ಕಾಲದಲ್ಲಿ ಮಕ್ಕಳು ವಿದ್ಯೆ ಮತ್ತು ಉದ್ಯೋಗಕ್ಕಾಗಿ ಮನೆಯಿಂದ ದೂರದಲ್ಲಿರುತ್ತಾರೆ. ವಿಶಾಲವಾದ ಮನೆಗಳಲ್ಲಿ ಒಂಟಿತನವನ್ನು ಅನುಭವಿಸುವ ಹಿರಿಯರು ಮಕ್ಕಳು ಮನೆಗೆ ಬಂದು ಮನೆಯನ್ನು ಕಲರವಗೊಳಿಸುವ ಅವಕಾಶಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಮಕ್ಕಳೊಂದಿಗೆ ಇತರೆ ಆಪ್ತ ವರ್ಗದವರನ್ನೂ ಸೇರಿಸಿ ಸಂತಸಪಡುವ ಸಮಯ ಇದಾಗಿರುತ್ತದೆ.

ಸಂಭ್ರಮದ ಸಾಮೂಹಿಕ ಸೆಲೆಬ್ರೇಶನ್

ನೆರೆಹೊರೆಯರೊಂದಿಗೆ ಸೆಲೆಬ್ರೇಶನ್‌: ಈ ಬಾರಿ ನಿಮ್ಮ ನೆರೆಹೊರೆಯವರೊಡನೆ ಹಬ್ಬವನ್ನಾಚರಿಸಲು ಆಲೋಚಿಸಿ. ನಿಮ್ಮ ಮನೆಯ ಹತ್ತಿರದ ಪಾರ್ಕ್‌ಅಥವಾ ಆಟದ ಮೈದಾನದಲ್ಲಿ ಪಾರ್ಟಿಯನ್ನು ಏರ್ಪಡಿಸಿ. ಮಿಠಾಯಿ, ಪಟಾಕಿ, ಲೈಟಿಂಗ್‌ಗಳ ಖರ್ಚನ್ನು ಎಲ್ಲರೂ ಸೇರಿ ಹಂಚಿಕೊಳ್ಳಿ. ನಿಮ್ಮೆಲ್ಲರ ಮಕ್ಕಳು ಒಟ್ಟಿಗೆ ಸೇರಿ ಪಟಾಕಿ ಹತ್ತಿಸಿ ಆನಂದಿಸುವ ದೃಶ್ಯ ಅಪೂರ್ವವಾಗಿರುತ್ತದೆ. ಇದೇ ರೀತಿ ನೀವಿರುವ ಊರಿನಲ್ಲಿ ವಾಸಿಸುತ್ತಿರುವ ನಿಮ್ಮೆಲ್ಲ ಬಂಧುಮಿತ್ರರನ್ನು ಸಹ ಸಾಮೂಹಿಕ ಸೆಲೆಬ್ರೇಶನ್‌ಗೆ ಆಮಂತ್ರಿಸಬಹುದು.

ಡ್ಯಾನ್ಸ್ ಪಾರ್ಟಿ : ನಮಗೆಲ್ಲ ನೃತ್ಯ ಸಂಗೀತಗಳ ಬಗ್ಗೆ ಆಸಕ್ತಿ ಇದ್ದೇ ಇದೆ. ಹಾಗಿರುವಾಗ ಸಮಾರಂಭಕ್ಕೆ ಮತ್ತಷ್ಟು ಬೆಡಗು ತುಂಬಲು ಮ್ಯೂಸಿಕ್‌, ಡ್ಯಾನ್ಸ್ ಪಾರ್ಟಿಯನ್ನು ಏರ್ಪಡಿಸಬಹುದಲ್ಲವೇ? ಬಂಧುಗಳೊಂದಿಗೆ  ನೆರೆಹೊರೆಯವರನ್ನೂ  ಸೇರಿಸಿಕೊಂಡರೆ ಪಾರ್ಟಿಗೆ ಕಳೆಕಟ್ಟಿ, ಅದು ನೆನಪಿನಲ್ಲಿ ಉಳಿಯುವಂತಾಗುತ್ತದೆ. ಮಕ್ಕಳು, ಯುವಕರು ಮತ್ತು ಹಿರಿಯರ ಬೇರೆ ಬೇರೆ ಗುಂಪುಗಳನ್ನು ಮಾಡಿ. ಅವುಗಳಿಗೆ ತಕ್ಕಂತೆ ಸಂಗೀತದ ವ್ಯವಸ್ಥೆ ಮಾಡಬಹುದು. ಹಿರಿಯರಿಗೆ ಹಳೆಯ ಚಿತ್ರಗೀತೆಗಳು ಮತ್ತು ಯುವಜನರಿಗೆ ಲೌಡಾದ ಮತ್ತು ಉತ್ತೇಜಿತವಾದ ಆಧುನಿಕ ಸಿನಿಮಾ, ಡ್ಯಾನ್ಸ್ ನಂಬರ್ಸ್ ಸೂಕ್ತವಾಗಿರುತ್ತವೆ. ಅಂತ್ಯಾಕ್ಷರಿ ಮತ್ತು ಡ್ಯಾನ್ಸ್ ಕಾಂಪಿಟೇಶನ್‌ನ್ನು ಸಹ ಆಯೋಜಿಸಬಹುದು.

ಕಾಂಪಿಟೇಶನ್ಸ್ : ಸಮಾರಂಭವನ್ನು ಸೆಲೆಬ್ರೇಟ್‌ಮಾಡುವ ಮತ್ತೊಂದು ವಿಧಾನವೆಂದರೆ ಬಗೆ ಬಗೆಯ ಕಾಂಪಿಟೇಶನ್‌ಗಳನ್ನು  ಏರ್ಪಡಿಸುವುದು. ಉದಾಹರಣೆಗೆ ಸಿಹಿ ತಿನಿಸು ತಯಾರಿಕೆ ಸ್ಪರ್ಧೆ, ಈಟಿಂಗ್‌ ಕಾಂಪಿಟೇಶನ್‌, ರಂಗೋಲಿ ಸ್ಪರ್ಧೆ ಇತ್ಯಾದಿ…. ನಿಮಗೆ ಇಷ್ಟವಿದ್ದರೆ ಗೆದ್ದರಿಗೆ ಬಹುಮಾನದ ಜೊತೆ ಉಡುಗೊರೆಗಳನ್ನೂ ಕೊಡಬಹುದು.

ಒನ್‌ ಡೇ ಟ್ರಿಪ್‌: ನಿಮ್ಮ ಊರಿಗೆ ಹತ್ತಿರವಾಗಿರುವ ಒಂದು ಟೂರಿಸ್ಟ್ ಸ್ಪಾಟ್‌ನಲ್ಲಿ ಸಹ ಹಬ್ಬದ ಆನಂದವನ್ನು ಅನುಭವಿಸಬಹುದು. ಮೊದಲೇ ಬುಕ್‌ಮಾಡಲಾದ ಗೆಸ್ಟ್ ಹೌಸ್‌ ಅಥವಾ ರೆಸಾರ್ಟ್‌ನಲ್ಲಿ ನೀವೆಲ್ಲ ಬಂಧುಮಿತ್ರರು ಸೇರಿ ಸೆಲೆಬ್ರೇಟ್‌ ಮಾಡಬಹುದು. ಹಬ್ಬವನ್ನಾಚರಿಸುವ ಈ ವಿಧಾನ ಮಕ್ಕಳಿಗೆ ವಿಶೇಷವಾಗಿ ಮೆಚ್ಚುಗೆಯಾಗುವುದು.

ಒಂಟಿ ಜೀವಿಗಳ ಬಾಳಿಗೆ ಬೆಳಕು : ಹಬ್ಬದ ದಿನ ಸಾಯಂಕಾಲ ನೀವು ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳಿಗೆ ಹೋಗಿ ಸ್ವಲ್ಪ ಕಾಲ ಕಳೆಯುವುದರ ಮೂಲಕ ಅಲ್ಲಿ ಒಂಟಿಯಾಗಿರುವ ವೃದ್ಧರು ಅಥವಾ ಅನಾಥ ಮಕ್ಕಳ ಬಾಳಿಗೆ ಬೆಳಕು ತರಬಲ್ಲರಿ. ಸಿಹಿ ತಿಂಡಿ, ಕ್ಯಾಂಡಲ್ಸ್, ಪಟಾಕಿಗಳೊಂದಿಗೆ ನೀವು ಅವರಲ್ಲಿಗೆ ಹೋದಾಗ ಅವರ ಉತ್ಸಾಹ ಕಂಡು ನಿಮಗೆಷ್ಟು ಸಂತೋಷವಾಗುವುದೆಂದು ಆಲೋಚಿಸಿ. ಮನುಷ್ಯ ಸಮಾಜ ಜೀವಿ. ಇತರರೊಡನೆ ಸುಖ ದುಃಖವನ್ನು ಹಂಚಿಕೊಂಡು ಅವನು ಸಂತೋಷ, ಸಮಾಧಾನ ಪಡೆಯಬಲ್ಲ. ದುಃಖಿತರು, ಒಂಟಿ ಜೀವಿಗಳಿಗೆ ನೀಡುವ ಸಂತೋಷದಿಂದ ಆತನ ಸಂತೋಷ ಇಮ್ಮಡಿಯಾಗುತ್ತದೆ.

ಸಾಮೂಹಿಕ ಸೆಲೆಬ್ರೇಶನ್‌ ಪ್ರಯೋಜನ ಆನಂದವೇ ಆನಂದ : ಮನೆಯ ಸದಸ್ಯರೇ ಅಲ್ಲದೆ ಇತರೆ ಬಂಧುಮಿತ್ರರೊಡನೆ ಸೇರಿ ಹಬ್ಬವನ್ನಾಚರಿಸುವ ಸಂತೋಷ ವಿಶೇಷವಾಗಿರುತ್ತದೆ. ಮನೆಯ ಅಲಂಕಾರ, ರಂಗೋಲಿ ಬಿಡುವುದು, ಸಿಹಿ ತಿಂಡಿ ತಯಾರಿಸುವುದು, ಶಾಪಿಂಗ್‌ ಮಾಡುವುದು ಮುಂತಾದ ಎಲ್ಲ ಕೆಲಸಗಳಲ್ಲೂ ಉತ್ಸಾಹ ತುಂಬಿರುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಎಲ್ಲರ ಸಹಕಾರವಿರುತ್ತದೆ. ಮನೆಯಲ್ಲಿ ಒಬ್ಬೊಬ್ಬ ಸದಸ್ಯರು ಒಂದೊಂದು ಕೆಲಸದಲ್ಲಿ ನಿಪುಣತೆ ಹೊಂದಿರುತ್ತಾರೆ. ಎಲ್ಲರೂ ಸೇರಿ ಉತ್ಸಾಹದಿಂದ ಸಿದ್ಧತೆ ಮಾಡುವುದನ್ನು ನೋಡಲು ಚೆನ್ನಾಗಿರುತ್ತದೆ.

ಹೀಗೆ ಹಬ್ಬ, ಸಮಾರಂಭಗಳಲ್ಲಿ ಒಟ್ಟಾಗಿ ಸೇರಿ ಆನಂದಿಸುವುದರಿಂದ ನಮ್ಮ ಮನಸ್ಸಿನಲ್ಲಿ ಉತ್ಸಾಹ ತುಂಬುವುದಲ್ಲದೆ, ನಮ್ಮ ಮಾನಸಿಕ ಒತ್ತಡ ದೂರಾಗುತ್ತದೆ.

ಯೂನಿರ್ಸಿಟಿಯ ಸೈಕಾಲಜಿ ಡಿಪಾರ್ಟ್‌ಮೆಂಟ್‌ನಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿರುವ ಡಾ. ಕೋಮಾ, “ಹಬ್ಬದ ಸಮಯದಲ್ಲಿ ದೊರೆಯುವ ಹಿರಿಯರ ಆಶೀರ್ವಾದ ಮತ್ತು ಪರಿಜನರ ಸಾಂಗತ್ಯ ನಮಗೆ ಸಂತೋಷ ಉತ್ಸಾಹ ಮತ್ತು ಸಕಾರಾತ್ಮಕ ಭಾವನೆಗಳನ್ನು ಒದಗಿಸುತ್ತದೆ. ಒಟ್ಟಾಗಿ ಹಬ್ಬವನ್ನು ಆಚರಿಸುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಿಂದ ನಮ್ಮ ಜೀವನದ ಬಗೆಗಿನ ಸಕಾರಾತ್ಮಕ ಆಲೋಚನೆ ಹೆಚ್ಚುತ್ತದೆ. ಸೋಶಿಯಲ್ ನೆಟ್‌ವರ್ಕ್‌ ಉತ್ತಮಗೊಳ್ಳುತ್ತದೆ. ಸಂತೋಷದಿಂದ ಜೀವನ ನಡೆಸಲು ಪ್ರೇರಣೆ ದೊರೆಯುತ್ತದೆ,’ ಎನ್ನುತ್ತಾರೆ.

ಅಮೆರಿಕಾದಲ್ಲಿ ನಡೆಸಿರುವ ಒಂದು ಸಂಶೋಧನೆಯ ಪ್ರಕಾರ, ಸಕ್ರಿಯ ಸಾಮಾಜಿಕ ಜೀವನದಲ್ಲಿ ತೊಡಗಿರುವವರು ಮಾನಸಿಕ ರೋಗಗಳಿಗೆ ಗುರಿಯಾಗುವ ಶಂಕೆ ಕಡಿಮೆಯಾಗಿರುತ್ತದೆ. 15 ನಿಮಿಷಗಳ ಕಾಲ ಸಾಮೂಹಿಕ ನಗೆ ಹಾಸ್ಯಗಳಲ್ಲಿ ತೊಡಗುವವರಲ್ಲಿ ನೋವನ್ನು ಭರಿಸುವ ಸಾಮರ್ಥ್ಯ ಶೇ.10 ರಷ್ಟು ಹೆಚ್ಚುತ್ತದೆ ಎಂದು ಸಂಶೋಧನೆಯು ತಿಳಿಸುತ್ತದೆ.

ನಮ್ಮವರೆಂಬ ಅನುಭವ : ಇಂದಿನ ಅತಿ ಯಾಂತ್ರಿಕ ಜೀವನಶೈಲಿಯಲ್ಲಿ ನಮಗೆ ನಮ್ಮವರು ತಮ್ಮವರೆಂಬ ಅನುಭವವೇ ಇಲ್ಲವಾಗಿದೆ. ಬೆಳಗಿನಿಂದ ಸಂಜೆಯವರೆಗೆ ಕೆಲಸದಲ್ಲಿಯೇ ತೊಡಗಿರುತ್ತೇವೆ. ಒಟ್ಟಿಗೆ ಸೇರಿ ಹಬ್ಬವನ್ನಾಚರಿಸುವ ಸಂದರ್ಭದಲ್ಲಿ ನಾವೆಷ್ಟು ಬಂಧುಗಳಿಂದ ಸುತ್ತುವರೆದಿದ್ದೇವೆ, ಎಷ್ಟು ಸಂತೋಷಕ್ಕೆ ಭಾಜನರಾಗಿದ್ದೇವೆ ಎಂಬುದು ಅನುಭವಕ್ಕೆ ಬರುತ್ತದೆ. ಆನಂದ, ಉತ್ಸಾಹ, ಉಡುಗೊರೆಗಳ ಮೂಲಕ ನಮ್ಮ ಸಂಬಂಧಗಳ ಸಾಮೀಪ್ಯ ಪ್ರಕಟಗೊಳ್ಳುತ್ತದೆ. ಇತರರ ಜೀವನದಲ್ಲಿ ನಮ್ಮ ಪ್ರಾಮುಖ್ಯತೆಯ ಅರಿವು ಮೂಡಿ, ನಾವು ಸ್ವತಃ ನಮ್ಮ ಒಂದು ಗುರುತನ್ನು ಬಿಂಬಿಸಿಕೊಳ್ಳುತ್ತೇವೆ. ಇದರಿಂದ ನಾವು ಒಂದು ಹೊಸ ಬಗೆಯಲ್ಲಿ ಜೀವಿಸುವುದನ್ನು ಕಲಿಯುತ್ತೇವೆ.

ಮಕ್ಕಳಲ್ಲಿ ಶೇರಿಂಗ್‌ನ ಅಭ್ಯಾಸ : ನಿಮ್ಮ ಮಕ್ಕಳು ಇತರರೊಡನೆ ಸೇರಿ ಹಬ್ಬವನ್ನಾಚರಿಸಿದಾಗ ಅವರಲ್ಲಿ ಒಟ್ಟಾಗಿ ತಿನ್ನುವುದು, ಬಾಳುವುದು ಮತ್ತು ಇತರರ ಬಗ್ಗೆ ಕಾಳಜಿ ವಹಿಸುವ ಅಭ್ಯಾಸ ಉಂಟಾಗುತ್ತದೆ. ಇದರಿಂದ ಅವರು ಉತ್ತಮ  ನಾಗರಿಕರಾಗುತ್ತಾರೆ.

ಮಕ್ಕಳು ಇತರರ ಸುಖದುಃಖಗಳಲ್ಲಿ ಭಾಗಿಗಳಾಗುವುದನ್ನು ಕಲಿಯುತ್ತಾರೆ. ಅವರಲ್ಲಿ ಮುಂದಾಳುತನದ ಸಾಮರ್ಥ್ಯ ಹುಟ್ಟಿಕೊಳ್ಳುತ್ತದೆ. ಪರಿವಾರದ ಹಿರಿಯರೊಂದಿಗೆ ಸೇರಿದಾಗ ಒಳ್ಳೆಯ ನಡೆನುಡಿಗಳನ್ನು, ಹಬ್ಬಗಳಿಗೆ ಸಂಬಂಧಿಸಿದ ಆದರ್ಶ, ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆಯುತ್ತದೆ.

ಮನಸ್ತಾಪವನ್ನು ದೂರಗೊಳಿಸುವ ಅವಕಾಶ : ನಮ್ಮ ಮುನಿಸು ಮನಸ್ತಾಪಗಳನ್ನು ಮರೆತು ಸ್ನೇಹ ಸಂಬಂಧಗಳನ್ನು ಪುನಃ ಪ್ರಾರಂಭಿಸಲು ಅವಕಾಶ ನೀಡುವ ಸಂದರ್ಭವೆಂದರೆ ಈ ಹಬ್ಬ ಉತ್ಸವಗಳು. ಹಬ್ಬದ ಹೆಸರಿನಲ್ಲಿ ತಬ್ಬಿಕೊಂಡು ಶತ್ರುವನ್ನೂ ಮಿತ್ರರನ್ನಾಗಿಸಿಕೊಳ್ಳಬಲ್ಲ ಅವಕಾಶವಿದು. ಅವರಿಗೆ ಸಿಹಿ ತಿನ್ನಿಸಿ, ಉಡುಗೊರೆ ನೀಡಿ ನಿಮ್ಮ ಜೀವನದಲ್ಲಿ ಅವರಿಗೂ ಒಂದು ಸ್ಥಾನವಿದೆ ಎಂಬುದನ್ನು ನೀವು ತೋರಿಸಿಕೊಡಬಹುದು. ಸಾಮೂಹಿಕ ಸೆಲೆಬ್ರೇಶನ್‌ಗಾಗಿ ಅವರನ್ನು ನಿಮ್ಮ ಮನೆಗೆ ಆಹ್ವಾನಿಸಿ ಮುರಿದುಹೋದ ಸಂಬಂಧದ ತಂತಿಯನ್ನು ಪುನಃ ಜೋಡಿಸಬಹುದು.

ಕಡಿಮೆ ಖರ್ಚಿನಲ್ಲಿ ಹೆಚ್ಚು ಸಂಭ್ರಮ : ನೀವು ಒಟ್ಟಾಗಿ ಹಬ್ಬವನ್ನು ಆಚರಿಸುವುದರಿಂದ ಸಡಗರ, ಉತ್ಸಾಹದ ಅವಕಾಶಗಳು ಹೆಚ್ಚಾಗಿರುತ್ತವೆ. ಎಲ್ಲರ ಜೊತೆ ಸೇರಿದಾಗ ಸಡಗರ ಸಂಭ್ರಮಪಡುವಷ್ಟನ್ನು ನಾವು ಒಬ್ಬರೇ ಇರುವಾಗ ಸಂಭ್ರಮಪಡಲು ಸಾಧ್ಯವಿಲ್ಲ. ಒಟ್ಟು ಕುಟುಂಬದಲ್ಲಿ ದೊರೆಯುವ ಆನಂದ ಇಂದಿನ 3-4 ಜನರ ಪುಟ್ಟ ಪರಿವಾರಗಳಲ್ಲಿ ದೊರೆಯಲಾರದು. ಸಾಮೂಹಿಕ ಸೆಲೆಬ್ರೇಶನ್‌ನಲ್ಲಿ `ವೆಚ್ಚ ಕಡಿಮೆ ಹೆಚ್ಚು ಖುಷಿ’ ಎಂಬ ಸೂತ್ರ ನಡೆಯುತ್ತದೆ.

– ಗಿರಿಜಾ ಶಂಕರ್‌

ಒಟ್ಟಾಗಿ ಸೇರಿ ದೀಪ ಬೆಳಗಿಸುವುದೇ ಒಂದು ಆನಂದ

ದೀಪಾವಳಿಯ ದಿನ ನಾವೆಲ್ಲರೂ ಚೆನ್ನಾಗಿ ಎಂಜಾಯ್‌ ಮಾಡುತ್ತೇವೆ. ಬಾಲ್ಯದಲ್ಲಿ ನಾನು ಅಲರ್ಜಿಯಿಂದಾಗಿ ಕಡಿಮೆ ಪಟಾಕಿ ಹತ್ತಿಸುತ್ತಿದ್ದಿ. ಈಗ ನಾವೆಲ್ಲರೂ ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿರುತ್ತೇವೆ. ಆದರೂ ದೀಪಾವಳಿಯ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಸಂತೋಷಿಸಲು ಪ್ರಯತ್ನಿಸುತ್ತೇವೆ. ಒಟ್ಟಾಗಿ ಸೇರಿ ದೀಪ ಬೆಳಗಿಸುವುದು, ಅಲಂಕರಿಸುವುದು, ರಂಗೋಲಿ ಬಿಡುವುದು ಮತ್ತು  ಸಿಹಿ ತಿಂಡಿ ತಿನ್ನುವ ಆನಂದವೇ ಒಂದು ವಿಶೇಷ!

– ಮಿತಾಲಿ

“ಹಬ್ಬ ಸಮಾರಂಭಗಳಲ್ಲಿ ಒಟ್ಟಾಗಿ ಸೇರಿ ಆನಂದಿಸುವುದರಿಂದ ನಮ್ಮ ಮನಸ್ಸಿನಲ್ಲಿ ಉತ್ಸಾಹ ತುಂಬುವುದಲ್ಲದೆ, ನಮ್ಮ ಮಾನಸಿಕ ಒತ್ತಡ ದೂರಾಗುತ್ತದೆ……”

ಪಟಾಕಿ ಹತ್ತಿಸಲು ಇಷ್ಡಪಡುವುದಿಲ್ಲ

ನನಗೆ ದೀಪಾವಳಿ ಎಂದರೆ ನಮ್ಮ ಆಪ್ತರೊಡನೆ ಸೇರಿ ಕಾಲಕಳೆಯುವುದು, ಸಿಹಿ ತಿನ್ನುವುದು, ರಂಗೋಲಿ ಬಿಡಿಸುವುದು ಮತ್ತು ದೀಪ ಬೆಳಗಿಸುವುದು. ನನಗೆ ಪಟಾಕಿ ಹತ್ತಿಸಲು ಇಷ್ಟವಿಲ್ಲ. ಚಿಕ್ಕವಳಿದ್ದಾಗ ನಾನು ಬಹಳ ಚೆನ್ನಾಗಿ ರಂಗೋಲಿ ಬಿಡಿಸುತ್ತಿದ್ದೆ, ಹೊಸ ಹೊಸ ಡಿಸೈನ್‌ಗಳನ್ನು ಮಾಡುತ್ತಿದ್ದೆ. ಆದರೆ ಈಗ ಸಮಯ ಸಿಗುವುದಿಲ್ಲ.

– ಸ್ನೇಹಲತಾ

ಎಲ್ಲ ಜಾತಿ ಧರ್ಮಗಳ ಜನರು ಸೇರಿ ದೀಪಾವಳಿ ಆಚರಿಸುತ್ತೇವೆ

ದೀಪಾವಳಿಯ ಒಂದು ದಿನವನ್ನು ನಮ್ಮ ಅಪಾರ್ಟ್‌ಮೆಂಟ್‌ನ ಎಲ್ಲ ಜನರೂ ಸೇರಿ ಆಚರಿಸುತ್ತೇವೆ. ಅಂದು ಒಂದು ಗೆಟ್‌ ಟು ಗೆದರ್‌ ಆಯೋಜಿಸಿ ಒಟ್ಟಿಗೆ ಊಟ ತಿಂಡಿ ಮಾಡುತ್ತಾ ಪರಸ್ಪರ ಪರಿಚಯವನ್ನು ಹೆಚ್ಚಿಸಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಡ್ಯಾನ್ಸ್ ಮತ್ತು ಮ್ಯೂಸಿಕ್‌ನ್ನು ಸಹ ಏರ್ಪಡಿಸಲಾಗುತ್ತದೆ. ಎಲ್ಲ ಜಾತಿ ಧರ್ಮಗಳ ಜನರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಆ ದಿನ ಯೂನಿವರ್ಸ್‌ ಬ್ರದರ್‌ ಹುಡ್‌ನ ಅನುಭವ ಉಂಟಾಗುತ್ತದೆ.

– ಫರ್ನಾಜ್‌ಶೆಟ್ಟಿ

“ಒಟ್ಟಾಗಿ ಹಬ್ಬವನ್ನಾಚರಿಸುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ನಮ್ಮ ಜೀವನದ ಬಗೆಗಿನ ಸಕಾರಾತ್ಮಕ ಆಲೋಚನೆ ಹೆಚ್ಚುತ್ತದೆ. ಸಂತೋಷದಿಂದ ಜೀವನ ನಡೆಸಲು ಪ್ರೇರಣೆ ದೊರೆಯುತ್ತದೆ……”

ದೀಪಾವಳಿಯಂದು ರುಚಿಕರ ತಿನಿಸು ತಿನ್ನಲು ಆನಂದವಾಗುತ್ತದೆ

ನನಗೆ ದೀಪಾಳಿಯಂದು ದೀಪ ಬೆಳಗಿಸಲು ಮತ್ತು ರುಚಿಕರವಾದ ತಿನಿಸು ತಿನ್ನುವುದೆಂದರೆ ಬಹಳ ಸಂತೋಷ! ಈ ದಿನದಲ್ಲಿ ಹಬ್ಬಕ್ಕಾಗಿ ವಿಶೇಷ  ಅಡುಗೆ ತಯಾರಾಗುತ್ತದೆ. ನಾನು ಯಾವಾಗಲೂ ನನ್ನ ಕುಟುಂಬದವರೊಡನೆ ಈ ಹಬ್ಬವನ್ನು ಆಚರಿಸುತ್ತೇನೆ ಇದು ನನಗೆ ಬಲು ಪ್ರಿಯವಾದ ಹಬ್ಬ.

– ಜ್ಯೋತಿ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ