ರಜನಿ ತನ್ನ ಅಕ್ಕನನ್ನು ನೋಡಲೆಂದು ಅವಳ ಮನೆಗೆ ಹೋದಳು. ಅಕ್ಕನ ಚಿಂತಿತ ಮುಖವನ್ನು ಕಂಡು ಕಾರಣ ಕೇಳಿದಳು. ಅದಕ್ಕೆ ನಳಿನಿ ನೋವಿನಿಂದ ಹೇಳಿದಳು, “ನಿಕಿತಾ (ಅವಳ 13 ವರ್ಷದ ಮಗಳು) ಕಳೆದ ಕೆಲವು ದಿನಗಳಿಂದ ಸಪ್ಪಗಿರುತ್ತಾಳೆ. ಮಾತು ಕಡಿಮೆ ಮಾಡಿಬಿಟ್ಟಿದ್ದಾಳೆ. ಮೊದಲಿನ ಹಾಗೆ ನಗುನಗುತ್ತಾ ಇರೋದಿಲ್ಲ. ಗೆಳತಿಯರ ಜೊತೆ ಬೆರೆಯುತ್ತಿಲ್ಲ. ಕೇಳಿದರೆ ಸರಿಯಾಗಿ ಉತ್ತರ ಕೊಡೋದಿಲ್ಲ.”
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ತಾಯಂದಿರು ತಮ್ಮ ಟೀನೇಜ್ ಮಕ್ಕಳ ಬಗ್ಗೆ ಚಿಂತಿತರಾಗಿರುವುದು ಕಂಡುಬರುತ್ತಿದೆ. `ಸ್ನೇಹಿತರ ಜೊತೆಯಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾರೆ. ಚ್ಯಾಟಿಂಗ್ ಮಾಡುತ್ತಾರೆ. ನಾವು ಕೇಳಿದರೆ ಏನೂ ಇಲ್ಲ ಅಮ್ಮ ಎಂದು ಬಿಡುತ್ತಾರೆ,’ ಎಂದು ತಾಯಂದಿರು ಬೇಸರಿಸಿಕೊಳ್ಳುತ್ತಾರೆ.
“ನಮ್ಮ ಕಾಲದಲ್ಲಿ ಹೀಗಿರಲಿಲ್ಲ ರಜನಿ. ಅಮ್ಮ ನಮಗೆ ಸ್ನೇಹಿತೆಯ ಹಾಗೆ ಇದ್ದರು. ನಮ್ಮ ಒಳ್ಳೆಯದು ಕೆಟ್ಟದ್ದು ಎಲ್ಲ ಅವರಿಗೆ ಚೆನ್ನಾಗಿ ಗೊತ್ತಿತ್ತು. ನಮ್ಮ ಗೆಳೆತಿಯರು ಮನೆಗೆ ಬಂದರೆ ಅಮ್ಮ ಅವರ ಜೊತೆ ಕುಳಿತು ಎಲ್ಲ ವಿಷಯವನ್ನೂ ಮಾತನಾಡುತ್ತಿದ್ದರು. ಈಗಿನ ಮಕ್ಕಳು ತಂದೆ ತಾಯಿ ಜೊತೆ ವ್ಯವಹರಿಸುವುದನ್ನು ನೋಡಿದರೆ ನನಗೆ ಬೇಸರವಾಗುತ್ತದೆ,” ಎಂದು ನಳಿನಿ ದುಗುಡದಿಂದ ಹೇಳಿದಳು.
ಕಾರಣವೇನು?
ಈ ಬಗ್ಗೆ ವಾಸ್ತವಾಂಶವನ್ನು ತಿಳಿಯಲು ಯುವಜನರನ್ನು ಸಂದರ್ಶಿಸಲಾಯಿತು.
ಪ್ರಶ್ನೆ ಹಾಕುತ್ತಿದ್ದಂತೆ 14 ವರ್ಷದ ನೇಹಾ ದೂರಿದಳು, “ನಮ್ಮ ಅಮ್ಮನಿಗೆ ಗೊತ್ತಿರೋದೆಲ್ಲ ಒಂದೇ. ಇದು ಮಾಡಬೇಡ. ಅಲ್ಲಿಗೆ ಹೋಗಬೇಡ, ಅಡುಗೆಮನೆ ಕೆಲಸ ಕಲಿತುಕೊ ಅನ್ನುವುದು.”
10ನೇ ತರಗತಿಯಲ್ಲಿ ಓದುತ್ತಿರುವ ಸ್ವಾತಿ ತನ್ನ ತಾಯಿ ಬಗ್ಗೆ ಗೌರವವನ್ನೇನೋ ಇರಿಸಿಕೊಂಡಿದ್ದಾಳೆ. ಆದರೆ ಎಲ್ಲ ವಿಷಯಗಳನ್ನೂ ಅವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. 17 ವರ್ಷದ ಶೈಲಾಳ ದೂರೆಂದರೆ, “ಅಣ್ಣ ರಾತ್ರಿ 9 ಗಂಟೆಗೆ ಮನೆಗೆ ಬಂದರೂ ಅಮ್ಮ ಏನೂ ಅನ್ನುವುದಿಲ್ಲ. ಆದರೆ ನನಗೆ ಮಾತ್ರ, ನೀನು ಹೆಣ್ಣು ಹುಡುಗಿ, ಟೈಮಿಗೆ ಸರಿಯಾಗಿ ಮನೆಗೆ ಬರಬೇಕು. ನಾವು ತಲೆ ತಗ್ಗಿಸುವ ಹಾಗೆ ಮಾಡಬೇಡ,” ಎನ್ನುತ್ತಾರೆ.
ಯಾವುದೇ ವೈಯಕ್ತಿಕ ಸಮಸ್ಯೆ ಅಥವಾ ಶಾಲೆಯ ಬಗೆಗಿನ ಸಮಸ್ಯೆ ಉಂಟಾದಾಗ ಆ ಬಗ್ಗೆ ಯಾರೊಡನೆ ಚರ್ಚಿಸಲು ಇಷ್ಟಪಡುತ್ತೀಯೆ ಎಂದು 17 ವರ್ಷದ ಮುಕ್ತಾಳನ್ನು ಪ್ರಶ್ನಿಸಲು, “ಜ್ವರ ಬಂದಾಗ ಅಥವಾ ಯಾವುದಾದರೂ ಸಮಸ್ಯೆ ಉಂಟಾದಾಗ ಎಲ್ಲಕ್ಕೂ ಮೊದಲು ತಾಯಿಯ ನೆನಪಾಗುತ್ತದೆ. ಅವರು ತಾಳ್ಮೆಯಿಂದ ಕೇಳುವರಲ್ಲದೆ, ಕೆಲವೇ ನಿಮಿಷಗಳಲ್ಲಿ ಪರಿಹಾರ ಸೂಚಿಸಿ ಟೆನ್ಶನ್‌ಫ್ರೀಗೊಳಿಸುತ್ತಾರೆ. ಅಮ್ಮನಂತೆ ಬೇರೆ ಯಾರೂ ಇರಲಾರರು,” ಎಂದು ಹೇಳುತ್ತಾಳೆ. ಈ ಯುವತಿಯರೊಂದಿಗೆ ಮಾತನಾಡಿದ ನಂತರ ತಿಳಿದು ಬಂದುದೆಂದರೆ ಇವರೆಲ್ಲ ತಿರುಗಾಡಲು, ಸಿನಿಮಾ ನೋಡಲು, ಹರಟೆ ಹೊಡೆಯಲು ಅಥವಾ ಮಜಾ ಮಾಡಲು ಸ್ನೇಹಿತರನ್ನು ಹುಡುಕುತ್ತಾರೆ, ಅದರೆ ಯಾವುದಾದರೂ ಸಮಸ್ಯೆ ಎದುರಾದಾಗ ತಾಯಿಯ ಬಳಿಗೆ ಓಡುತ್ತಾರಲ್ಲದೆ ತಂದೆ, ಸೋದರ ಸೋದರಿಯರು ಅಥವಾ ಆಪ್ತ ಸ್ನೇಹಿತರ ಬಳಿಗಲ್ಲ. ಹೀಗಾಗಿ ಟೀನೇಜರ್ಸ್ ಗೆ ತಾಯಿಯೇ ಗೈಡ್‌ಮತ್ತು ಬೆಸ್ಟ್ ಫ್ರೆಂಡ್‌ಆಗಿರುತ್ತಾರೆ.
ಹಾಗಾದರೆ ಈ ಹದಿ ವಯಸ್ಸಿನ ಮಕ್ಕಳು ತಮ್ಮ ತಾಯಿಯೊಂದಿಗಿನ ಸ್ನೇಹ ಸಂಬಂಧವನ್ನು ಉಳಿಸಕೊಳ್ಳುವುದಿಲ್ಲವೇಕೆ? ಎಂದರೆ, ಈ ಕಾಲಕ್ಕೆ ತಕ್ಕಂತೆ ತಾವು ಎಲ್ಲವನ್ನೂ ತಿಳಿದಿದ್ದೇವೆ ಮತ್ತು ತಮ್ಮ ತಾಯಿಗೆ ಆಧುನಿಕ ವಿಚಾರಗಳು ಏನೂ ತಿಳಿದಿಲ್ಲ ಎಂಬ ಭಾವನೆ ಅವರಿಗಿದೆ.
15 ವರ್ಷ ವಯಸ್ಸಿನ ಸಾನ್ವಿ ಹೇಳುತ್ತಾಳೆ, “ಕಾಲಕ್ಕೆ ತಕ್ಕಂತೆ ನಡೆಯಲು ಅಮ್ಮ ಸಿದ್ಧರಿಲ್ಲ. ನಾವು ಆಧುನಿಕ ಪ್ರಪಂಚಕ್ಕೆ ತಕ್ಕ ಹಾಗೆ ಡ್ರೆಸ್ ಮಾಡಿಕೊಂಡು ಕಾಲೇಜ್‌ಗೆ ಹೋಗಬೇಕು. ಸ್ನೇಹಿತರೊಡನೆ ಫೋನ್‌ನಲ್ಲಿ ಮಾತನಾಡುತ್ತಿರಬೇಕು. ಸಿನಿಮಾ, ಹೋಟೆಲ್‌ಗೆ ಹೋಗಬೇಕು. ಆದರೆ ಅಮ್ಮ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.”
ನವೀನ್ ಹೇಳುತ್ತಾನೆ, “ಪಿಜ್ಜಾ ಮತ್ತು ಮ್ಯಾಕ್ ಡೊನಾಲ್ಡ್ ನ ಬರ್ಗರ್ ರುಚಿಯ ಬಗ್ಗೆ ಅಮ್ಮನಿಗೆ ಏನು ತಾನೇ ಗೊತ್ತು?”
ತಾಯಿ ತಂದೆಯರ ತಪ್ಪು
ಇಂದು ಪದವಿ, ಪ್ರತಿಷ್ಠೆಗಳ ಹಿಂದೆ ಓಡುತ್ತಿರುನ ತಾಯಿ ತಂದೆಯರು ತಮ್ಮ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಸಂಸ್ಕಾರನನ್ನು ಬಿತ್ತುವ ಬದಲು ಹಣ, ಅಂತಸ್ತುಗಳ ಬಯಕೆಯನ್ನು ಹುಟ್ಟಿಸುತ್ತಿದ್ದಾರೆ. ಮಕ್ಕಳಿಗೆ ಶಿಸ್ತು, ನಿಯಮಗಳನ್ನು ಕಲಿಸುನ ಬದಲು ತಾವು ಏನು ಮಾಡಿದರೂ ನಡೆಯುವುದೆಂಬ ಭಾವನೆ ವ್ಯಕ್ತಪಡಿಸುತ್ತಾರೆ.
ಸ್ಕೂಲ್ ಟೀಚರ್‌ನಿರ್ಮಲಾ ಹೇಳುತ್ತಾರೆ, “ನಮ್ಮ ಶಾಲೆಯ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ದಿನ ಶಾಲೆಗೆ 15-20 ನಿಮಿಷಗಳು ತಡವಾಗಿ ಬರುತ್ತಿದ್ದಳು. ಅವಳ ತಾಯಿ ತಂದೆ ಆ ತಪ್ಪನ್ನು ಸಮರ್ಥಿಸಿಕೊಳ್ಳುತ್ತಾ, ಸ್ವಲ್ಪ ತಡವಾದರೆ ಏನಾಯಿತು ಎನ್ನುತ್ತಾರೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದೆಂದರೆ ಊಟ ತಿಂಡಿ ಬಟ್ಟೆ ಚೆನ್ನಾಗಿ ಕೊಟ್ಟರೆ ಸಾಲದು, ಒಳ್ಳೆಯ ಜೀವನ ಮೌಲ್ಯವನ್ನು ಕೊಡುವುದೂ ಮುಖ್ಯ.”
ಕಾಲೇಜ್ ಲೆಕ್ಚರರ್ ಮೋಹಿನಿಯ ಅಭಿಪ್ರಾಯವೆಂದರೆ, “ಇಂದಿನ ಮಕ್ಕಳು ತಮ್ಮ ತಾಯಿಯೊಡನೆ ವಿಷಯವನ್ನು ಹಂಚಿಕೊಳ್ಳದಿರಲು ಸ್ವಲ್ಪ ಮಟ್ಟಿಗೆ ತಾಯಂದಿರೂ ಕಾರಣರಾಗಿದ್ದಾರೆ. ಉದ್ಯೋಗಸ್ಥ ಮಹಿಳೆಯರು ಮಕ್ಕಳಿಗಾಗಿ ಸಮಯ ಕೊಡಲು ಸಾಧ್ಯವಾಗದಿರುವುದರಿಂದ ಅವರಿಗೆ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ಒದಗಿಸಿ ಆ ಕೊರತೆಯನ್ನು ಮುಚ್ಚಲು ಪ್ರಯತ್ನಿಸುತ್ತಾರೆ.”
ಮನೋವಿಜ್ಞಾನಿ ಸ್ನೇಹಾ ಮಕ್ಕಳ ದಾರ್ಷ್ಟ್ಯವನ್ನು ಕುರಿತು ಹೇಳುತ್ತಾರೆ, “ಇಂದಿನ ಮಕ್ಕಳು ತಂದೆ ತಾಯಿಯರಿಗೇ ಜೋರು ಮಾಡುವಂಥವರಾಗಿದ್ದಾರೆ. ಶಾಲೆಯಲ್ಲಿ ಪೇರೆಂಟ್ಸ್ ಮೀಟಿಂಗ್ ಇದ್ದರೆ, ತಾಯಿ ಯಾವ ಬಟ್ಟೆ ತೊಟ್ಟು ಹೇಗೆ ಬರಬೇಕೆಂದು ತಿಳಿಸುತ್ತಾರೆ.”
ಹೀಗೆ ಮಕ್ಕಳನ್ನು ಬೆಳೆಸುವಲ್ಲಿ ತಾಯಿ ತಂದೆಯರು ತಪ್ಪು ಮಾಡುತ್ತಿದ್ದಾರೆ. ಕೆಲವರು ಮಕ್ಕಳಿಗೆ ಪದೇ ಪದೇ ನೀವು ಈಗ ದೊಡ್ಡವರಾಗಿರುವಿರಿ ಎಂದು ಹೇಳುತ್ತಿರುತ್ತಾರೆ. ಅದನ್ನು ಕೇಳಿದ ಮಕ್ಕಳು ಸಹಜವಾಗಿ ದೊಡ್ಡವರಂತೆ ವರ್ತಿಸಲು ತೊಡಗುತ್ತಾರೆ. ಟಿವಿಯಲ್ಲಿ ನೋಡುವ ಸೆಕ್ಸ್, ಫೈಟಿಂಗ್‌ಗಳ ಕಡೆಗೆ ಆಕರ್ಷಿತರಾಗುತ್ತಾರೆ.
ಅವರ ಮಾತನ್ನೂ ಆಲಿಸಿ
ಅವರು ನಿಮ್ಮ ಮಕ್ಕಳು, ಅವರಿಗಾಗಿ ಸ್ವಲ್ಪ ಸಮಯ ಕೊಟ್ಟು ಅವರ ಕಿಶೋರಾವಸ್ಥೆಯ ಹೆಜ್ಜೆಯನ್ನು ನಿಮ್ಮ ಹೆಜ್ಜೆಯೊಂದಿಗೆ ಸೇರಿಸಿ. ಅವರನ್ನು ಸ್ನೇಹಿತರಂತೆ ನೋಡಿ, ಸರಿ ತಪ್ಪುಗಳ ವಿವೇಕ ಬೆಳೆಸಿ. ಅವರ ಕೆಲವು ಮಾತುಗಳನ್ನು ಒಪ್ಪಿಕೊಳ್ಳಿ, ನಿಮ್ಮ ಮಾತುಗಳನ್ನು ತಿಳಿಸಿಕೊಡಿ.
ಶಾರದಾ ಸಾಯಂಕಾಲದಂದು ಒಂದು ಟಿವಿ ಸೀರಿಯಲ್ ನೋಡಬೇಕೆಂದುಕೊಂಡರೆ ಅವಳ ಮಗ ಸ್ಪೋರ್ಟ್ಸ್ ಚಾನೆಲ್‌ನೋಡುತ್ತಾ ಕುಳಿತಿರುತ್ತಿದ್ದ. ಅವನನ್ನು ಬೈಯುವ ಬದಲು ಅವಳು ಪ್ರೀತಿಯಿಂದ ತಿಳಿಸಿ ಹೇಳಿದಳು, “ಸಾಯಂಕಾಲ ನಾನು ಸೀರಿಯಲ್ ನೋಡುತ್ತೇನೆ. ಆಮೇಲೆ ನಿನ್ನ ಸ್ಪೋರ್ಟ್ಸ್ ಚಾನೆಲ್,” ಹೀಗೆ ಪ್ರೀತಿಯಿಂದ ಹೇಳಿದ ಮಾತು ಅವನಿಗೆ ಹಿಡಿಸಿತು. ಈಗ ಮಮ್ಮಿ ಅವನ ಬೆಸ್ಟ್ ಫ್ರೆಂಡ್ ಆಗಿದ್ದಾರೆ.
ಮತ್ತೊಂದು ಕಡೆ ಸುನೀತಾ ತನ್ನ ಮಕ್ಕಳಿಗೆ `ಸಿಲ್ಲಿ’ `ಸ್ಟುಪಿಡ್’ ಪದಗಳನ್ನು ಬಳಸುತ್ತಾಳೆ. ಅವೇ ಪದಗಳನ್ನು ಮಕ್ಕಳು ಬಳಸಿದಾಗ ಬಯ್ಯುತ್ತಾಳೆ. ಅದರ ಬದಲು ಅವಳೇ ಮೊದಲು ನಾಲಿಗೆ ಬಿಗಿಹಿಡಿದಿರಬೇಕಾಗಿತ್ತು. ಇಂದು ಟಿವಿಯಲ್ಲಿ ಸೆಕ್ಸ್ ಸಂಬಂಧಿ ಕಥೆಗಳು, ಜಾಹೀರಾತುಗಳು ಯಥೇಚ್ಛವಾಗಿ ಪ್ರಸಾರವಾಗುತ್ತವೆ. ಹದಿ ವಯಸ್ಸಿನ ಹೆಣ್ಣುಮಕ್ಕಳಿಗೆ ಆ ಬಗ್ಗೆ ಜಿಜ್ಞಾಸೆ ಹುಟ್ಟುವುದು ಸಹಜ. ಅವರು ಆ ಬಗೆಗಿನ ಪುಸ್ತಕ ಓದಿ, ಅದಕ್ಕಾಗಿ ಬೈಯುವ ಬದಲು ತಾಯಿಯೇ ಮಕ್ಕಳಿಗೆ ಆರೋಗ್ಯಕರ ಮಾಹಿತಿ ನೀಡುವುದು ಒಳ್ಳೆಯದು. ಆಗ ಯಾವುದೇ ಸಂದೇಹವಿದ್ದರೂ ತಾಯಿಯೊಡನೆ ಅವರು ಮುಕ್ತವಾಗಿ ಮಾತನಾಡಬಲ್ಲವರಾಗುತ್ತಾರೆ.
ಮಕ್ಕಳೊಂದಿಗೆ ಸಾಧ್ಯವಾದಷ್ಟೂ ಸಮಯ ಕಳೆಯಿರಿ ಮತ್ತು ಸ್ನೇಹಪೂರ್ಣ ವ್ಯವಹಾರ ಇರಿಸಿಕೊಳ್ಳಿ. ಅವರಿಗೆ ನಿಮ್ಮ ಸಂಬಂಧದ ಬೆಲೆ ಅರ್ಥವಾಗುತ್ತದೆ ಮತ್ತು ಈಗ ನೀವು ನಿಮ್ಮ ಪ್ರೀತಿಯ ಮಕ್ಕಳಿಗೆ ಫ್ರೆಂಡ್, ಫಿಲಾಸಫರ್ ಮತ್ತು ಗೈಡ್ ಆಗುವಿರಿ.
– ಮಂಜುಳಾ ಮಾಧವ