ಕಥೆ – ಪ್ರತಿಭಾ ಸುಹಾಸ್
“ಮಾಯಾ, ನೀನು ಮೊದಲು ಹತ್ತು, ನಾನು ಮಕ್ಕಳನ್ನು ಮೆಲ್ಲಗೆ ಹತ್ತಿಸುತ್ತೇನೆ……”
ರೈಲು ಹೊರಡಲು 5 ನಿಮಿಷ ಉಳಿದಿತ್ತು. ಸೀಮಾ ತನ್ನ ಸೀಟ್‌ನಲ್ಲಿ ಕುಳಿತು ಸಾಮಾನುಗಳನ್ನು ಸರಿಪಡಿಸಿಕೊಳ್ಳುತ್ತಿರುವಾಗ ಬಾಗಿಲ ಕಡೆಯಿಂದ ಕೇಳಿ ಬಂದ ಧ್ವನಿ ಅವಳನ್ನು ಪುಳಕಿತಗೊಳಿಸಿತು.
ಈ ಧ್ವನಿ ಸೀಮಾಳಿಗೆ ಬಹಳ ಮೆಚ್ಚುಗೆಯಾಗಿತ್ತು. ಈ ಧ್ವನಿಯಲ್ಲಿ ಗಾಂಭೀರ್ಯ ಇತ್ತು. ಹೃದಯಕ್ಕೆ ಮುಟ್ಟುವಂತೆಯೂ ಇತ್ತು. ಕಾಲ ಮುಂದೋಡಿದರೂ ಈ ಧ್ವನಿಯ ಆಕರ್ಷಣೆಯಿಂದ ಸೀಮಾ ಹೊರಬರಲು ಆಗಿರಲಿಲ್ಲ. ಮತ್ತೊಮ್ಮೆ ಆ ಧ್ವನಿಯನ್ನು ಕೇಳುವ ತವಕ ಅವಳಲ್ಲಿ ಸದಾ ಮನೆ ಮಾಡಿತ್ತು.
ಇಂದು ಅನೇಕ ವರ್ಷಗಳ ನಂತರ ಅದೇ ಧ್ವನಿ ಕೇಳಿ ಬಂದಿದೆ. ಆದರೆ ಸೀಮಾಳಿಗೆ ಆ ಧ್ವನಿಯಲ್ಲಿ ಹಿಂದಿನ ಮಾಧುರ್ಯವಿಲ್ಲದೆ, ಗಡಸುತನವಿರುವಂತೆ ಭಾಸವಾಯಿತು. ಜೀವನದ ಹಾದಿಯಲ್ಲಿ ಬೀಳುವ ಪೆಟ್ಟುಗಳಿಂದ ಸ್ವರದ ಕೋಮಲತೆ ಕುಂದಿರುವುದೇ ಅಥವಾ ತಾವಿಬ್ಬರೂ ದೂರ ದೂರವಾಗಿರುವ ನೋವಿನ ಅನುಭವ ಆತನಿಗೂ ಆಗಿದೆಯೇನೊ ಎಂದು ಅವಳು ಯೋಚಿಸಿದಳು.
ಕೆಲವು ಸಲ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಅವ್ಯಕ್ತವಾಗಿ ಉಳಿದುಬಿಡುತ್ತದೆ. ಅಂತರ ಕಡಿಮೆಯಾಗದೆ ಮನಸ್ಸಿನ ನೋವು ಮನಸ್ಸಿನಲ್ಲೇ ಮನೆ ಮಾಡಿಕೊಳ್ಳುತ್ತದೆ. ಸೀಮಾ ಮತ್ತು ಆ ಧ್ವನಿಯ ಯಜಮಾನ ಅಂದರೆ ವಿನಯ್‌ಗೆ ಇದ್ದದ್ದು ಇಂತಹದೇ ಸಂಬಂಧ.
ಸೀಮಾ ಅವನನ್ನು ನೋಡಲು ಕಾತರಳಾದಳು. 10 ವರ್ಷಗಳು ಕಳೆದುಹೋಗಿದ್ದವು. ಅವಳು ಸೀಟ್‌ನಿಂದ ಎದ್ದು ಸ್ವಲ್ಪ ಮುಂದೆ ಬಂದು, ಧ್ವನಿ ಬಂದ ದಿಕ್ಕಿನತ್ತ ನೋಡಿದಳು. ಒಬ್ಬ ವ್ಯಕ್ತಿ ತನ್ನ ಹೆಂಡತಿ ಮಕ್ಕಳೊಂದಿಗೆ ಬರುತ್ತಿದ್ದುದು ಕಾಣಿಸಿತು.
ಸೀಮಾ ಅವನನ್ನೇ ಗಮನಿಸಿ ನೋಡಿದಳು. ಕೇವಲ ಕಣ್ಣುಗಳು ಮಾತ್ರ 10 ವರ್ಷಗಳ ಹಿಂದಿನ ವಿನಯ್‌ನನ್ನು ನೆನಪಿಸಿದವು. ಉಳಿದಂತೆ ಅವನು ಹೆಚ್ಚು ವಯಸ್ಸಾದವನಂತೆ ಕಂಡ. ಮುಂದಿನ ಕೂದಲು ಮಾಯವಾಗಿತ್ತು. ಮುಖದಲ್ಲಿ ಹಿಂದಿನ ಮುಗ್ಧತೆಯ ಬದಲು ಹೆಮ್ಮೆ ಮತ್ತು ಚಾತುರ್ಯ ತೋರಿಬರುತ್ತಿತ್ತು. ದೇಹ ಸ್ಥೂಲವಾಗಿ ಬೊಜ್ಜು ಬೆಳೆದಿತ್ತು. ಕಾಲೇಜು ದಿನಗಳ ಸ್ಮಾರ್ಟ್‌ಹ್ಯಾಂಡ್‌ಸಮ್ ವಿನಯ್ ಅವನಾಗಿರಲಿಲ್ಲ.
ವಿನಯ್ ಸಹ ಸೀಮಾಳನ್ನು ನೋಡಿದ. ಆದರೆ ಅವನ ದೃಷ್ಟಿಯಲ್ಲಿ ಪರಿಚಯದ ಭಾವವಿರಲಿಲ್ಲ. ಬದಲಾಗಿ ಒಬ್ಬ ಸುಂದರ ಯುವತಿಯನ್ನು ಕಂಡಾಗ ಕೆಲವು ಕಾಮುಕ ಪುರುಷರು ನೋಡುವಂತೆ ನೋಡಿದ. ಅದರಿಂದ ಸೀಮಾಳಿಗೆ ಅಸಹನೆ ಉಂಟಾಯಿತು. ಅವಳು ಸುಮ್ಮನೆ ತನ್ನ ಸೀಟ್‌ನಲ್ಲಿ ಕುಳಿತು ಹಿಂದಿನ ವಿಷಯದ ಬಗ್ಗೆ ಯೋಚಿಸತೊಡಗಿದಳು….
ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ವಿನಯ್ ಒಬ್ಬ ಸುಂದರ, ಆಕರ್ಷಕ ಯುವಕನಾಗಿದ್ದ. ಬೇರೆ ಗಂಡು ಹುಡುಗರೊಡನೆ ಎಂದೂ ಮಾತನಾಡದಿದ್ದ ಸೀಮಾ ವಿನಯ್‌ನೊಡನೆ ಮಾತ್ರ ಯಾವುದಾದರೂ ನೆಪದಿಂದ ಮಾತನಾಡುತ್ತಿದ್ದಳು. ಆದರೆ ಅವನ ಬಗ್ಗೆ ತನ್ನ ಮನಸ್ಸಿನಲ್ಲಿ ಹುದುಗಿದ್ದ ಭಾವನೆಯನ್ನು ಎಂದೂ ವ್ಯಕ್ತಪಡಿಸಲಿಲ್ಲ. ವಿನಯ್ ಸಹ ಅವಳೊಡನೆ ಒಬ್ಬ ಸಹಪಾಠಿಯಂತೆ ವ್ಯವಹರಿಸುತ್ತಿದ್ದ.
ಕಾಲೇಜು ವಿದ್ಯಾಭ್ಯಾಸ ಮುಗಿದ ಮೇಲೆ ಸೀಮಾ ಎಂದೂ ವಿನಯ್‌ನ ಬಗ್ಗೆ ಯೋಚಿಸಲೇ ಇಲ್ಲ. ಫೇಸ್‌ಬುಕ್‌ನಲ್ಲಿ 1-2 ಸಲ ಅವನ ವಿಷಯ ನೋಡಿ ಅವನ ಪ್ರಸಕ್ತ ಜೀವನದ ಬಗ್ಗೆ ತಿಳಿದುಕೊಂಡಿದ್ದಳು. ಅವನ ಫೋನ್ ನಂಬರ್‌ನ್ನೂ ನೋಟ್ ಮಾಡಿಕೊಂಡಿದ್ದಳು. ಆದರೆ ಎಂದೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಿಲ್ಲ ಮತ್ತು ಫೋನ್ ಸಹ ಮಾಡಲಿಲ್ಲ.
ಈಗ ರೈಲಿನಲ್ಲಿ ಬಿಡುವಾಗಿ ಕುಳಿತಿದ್ದ ಸೀಮಾ, ವಿನಯ್‌ನೊಡನೆ ಚ್ಯಾಟಿಂಗ್ ಮಾಡಬಹುದಲ್ಲ ಎಂದು ಯೋಚಿಸಿದಳು. ಅದರಿಂದ ಇಲ್ಲಿರುವವನು ವಿನಯ್ ಹೌದೋ ಅಲ್ಲವೋ ಎನ್ನುವುದಾದರೂ ತಿಳಿಯುತ್ತದೆ ಎಂದು ಆಲೋಚಿಸಿ ವಾಟ್ಸ್ಆ್ಯಪ್‌ನಲ್ಲಿ ಅವನಿಗೆ, “ಹಾಯ್,” ಎಂದು ಮೆಸೇಜ್ ಮಾಡಿದಳು.
ಕೂಡಲೇ ಉತ್ತರ ಬಂದಿತು, “ಹೇಗಿದ್ದೀಯಾ ನೀನು? ಎಲ್ಲಿದ್ದೀಯಾ?”
ಫೋಟೋನಲ್ಲಿ ಸೀಮಾಳ ಮುಖ ಸ್ಪಷ್ಟವಾಗಿರಲಿಲ್ಲ. ಆದರೂ ವಿನಯ್ ಒಂದೇ ಕ್ಷಣದಲ್ಲಿ ಅವಳನ್ನು ಗುರುತಿಸಿದ್ದ. ಬಹುಶಃ ಮೆಸೇಜ್ ಜೊತೆ ಇದ್ದ ಹೆಸರು ಅವನು ನೆನಪು ಮಾಡಿಕೊಟ್ಟಿರಬಹುದು.
ಆ ಮೆಸೇಜ್‌ಗೆ ಸೀಮಾ ಉತ್ತರಿಸಿದಳು, “ನನ್ನ ಗುರುತು ಸಿಕ್ಕಿತಾ? ನನ್ನ ನೆನಪಿದೆಯಾ?”“100% ನೆನಪಿದೆ. ಉಳಿದದ್ದೂ ಸಹ……”
“ಉಳಿದದ್ದೂ ಅಂದರೆ….?” ಸೀಮಾ ಬೆಚ್ಚಿದಳು.
“ಅದೇ, ನೀನು ಮತ್ತು ನಾನು ಯೋಚಿಸಿದ್ದುದು…”
ಅದೇನೆಂದು ಸೀಮಾ ಯೋಚಿಸತೊಡಗಿದಳು.
“ನೀನು ಎಲ್ಲಿದ್ದೀಯಾ… ಏನು ಮಾಡಿಕೊಂಡಿದ್ದೀಯಾ..?” ವಿನಯ್ ಪ್ರಶ್ನಿಸಿದ.
“ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದೇನೆ….”
“ಗುಡ್….” ಅವನೊಂದು ಸ್ಮೈಲೀ ಕಳುಹಿಸಿದ.
“ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ನಿನಗೆ ಇಬ್ಬರು ಮಕ್ಕಳಿದ್ದಾರಲ್ಲವೇ?”
“ಹೌದು. ನಿನಗೆ ಹೇಗೆ ಗೊತ್ತು?” ವಿನಯ್ ಆಶ್ಚರ್ಯದಿಂದ ಕೇಳಿದ.
“ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಆಯಿತು…”
“ನೀನು ಮದುವೆ ಮಾಡಿಕೊಂಡೆಯಾ…?” ಅವನು ಕೂಡಲೇ ಕೇಳಿದ.
“ಇಲ್ಲ…. ಇನ್ನೂ ಇಲ್ಲ. ಕೆಲಸದಲ್ಲೇ ಬ್ಯುಸಿಯಾಗಿದ್ದೇನೆ…..”
“ನಿನ್ನನ್ನು ಕಾಂಟ್ಯಾಕ್ಟ್ ಮಾಡುವುದಕ್ಕೆ ಆಗುತ್ತದೋ ಇಲ್ಲವೋ ಅಂತ ನಾನು ಯಾವಾಗಲೂ ಯೋಚಿಸುತ್ತಾ ಇರುತ್ತಿದ್ದೆ. ನೀನು ಈಗಲೂ ನನಗಾಗಿ ಫ್ರೀ ಆಗಿದ್ದೀಯ…..?”
ವಿನಯ್‌ನ ಫೀಲಿಂಗ್ಸ್ ಹೊರಬರ ತೊಡಗಿದವು. ಆದರೆ ಸೀಮಾಳಿಗೆ ಅವನ ಮಾತಿನ ರೀತಿ ಇಷ್ಟವಾಗಲಿಲ್ಲ.
“ತಪ್ಪು ತಿಳಿದುಕೊಂಡಿದ್ದೀಯ…. ನಾನು ಯಾರಿಗೂ ಫ್ರೀಯಾಗಿಲ್ಲ. ನಿನ್ನ ಜೊತೆ ಮಾತನಾಡೋಣ ಅಂತ ಕಾಂಟ್ಯಾಕ್ಟ್ ಮಾಡಿದೆ ಅಷ್ಟೆ…” ಎಂದಳು ಸೀಮಾ.
“ನಾನೂ ಅದನ್ನೆ ಹೇಳಿದ್ದು….”
“ಅಂದರೆ….?”
“ಅದೇ… ನಿನ್ನ ಮನಸ್ಸಿನಲ್ಲಿ ನಾನೇ ಇದ್ದೇನೆ…. ವರ್ಷಗಳ ಹಿಂದೆ ಏನು ಇತ್ತೋ ಅದೇ ಈಗಲೂ ಇದೆ…..”
ಇದನ್ನು ಓದಿ ಸೀಮಾ ಸುಮ್ಮನಾಗಿಬಿಟ್ಟಳು. ವಿನಯ್ ಮತ್ತೆ ಮೆಸೇಜ್ ಮಾಡಿದ, “ನಿನ್ನ ಜೊತೆ ಮಾತನಾಡಿ ಬಹಳ ಖುಷಿಯಾಗುತ್ತಿದೆ. ಯಾವಾಗಲೂ ಚ್ಯಾಟಿಂಗ್ ಮಾಡುತ್ತಾ ಇರೋಣ.”
“ಓ.ಕೆ. ಶ್ಯೂರ್.” ಸೀಮಾಳ ಮನಸ್ಸಿನಲ್ಲಿ ಗೊಂದಲ ಉಂಟಾಯಿತು. ಸಂತೋಷ, ಆಶ್ಚರ್ಯಗಳೆರಡೂ ಆಗುತ್ತಿದ್ದವು. ಹೇಗೆ ರಿಯಾಕ್ಟ್ ಮಾಡಬೇಕೆಂದು ತಿಳಿಯಲಿಲ್ಲ.
“ಈಗ ಎಲ್ಲಿದ್ದೀಯಾ?” ಎಂದು ಮತ್ತೆ ಮೆಸೇಜ್ ಮಾಡಿದಳು.
“ಸದ್ಯ ರೈಲಿನಲ್ಲಿದ್ದೇನೆ… ಮೈಸೂರಿಗೆ ಹೋಗುತ್ತಿದ್ದೇನೆ….? ”
“ವಿತ್ ಫ್ಯಾಮಿಲಿ….?”
“ಹೌದು…..”
“ಓ.ಕೆ….. ಎಂಜಾಯ್,” ಎಂದು ಸೀಮಾ ಫೋನ್ ಆಫ್ ಮಾಡಿದಳು. ರೈಲಿನಲ್ಲಿರುವವನು ವಿನಯನೇ ಎಂದು ಖಾತ್ರಿಯಾಯಿತು. ಆದರೆ ಅವನ ಸ್ವಭಾವ ಬದಲಾಗಿರುವಂತೆ ಅವಳಿಗೆ ಭಾಸವಾಯಿತು. ಆ ಬಗ್ಗೆಯೇ ಬಹಳ ಹೊತ್ತು ಯೋಚಿಸುತ್ತಾ ಕುಳಿತಿದ್ದಳು. ಬೆಂಗಳೂರು ಸ್ಟೇಷನ್‌ನಲ್ಲಿ ರೈಲು ಇಳಿದು ಸೀಮಾ ಮನೆಗೆ ಹೋದಳು. ಬೆಳಗ್ಗೆ ಎದ್ದು ಆಫೀಸಿಗೆ ಹೊರಡುವ ಕಡೆ ಗಮನವಿದ್ದುದರಿಂದ ವಿನಯ್‌ನ ವಿಷಯ ಮರೆತಂತಾಗಿತ್ತು. ಆದರೆ ಮರುದಿನ ಬೆಳಗಾಗುತ್ತಿದ್ದಂತೆ ಅವಳಿಗೆ `ಗುಡ್ ಮಾರ್ನಿಂಗ್’ ಮೆಸೇಜ್ ಬಂದಿತು. ಸೀಮಾ ಅದಕ್ಕೆ ಉತ್ತರಿಸಿ ಆಫೀಸ್‌ಗೆ ಹೊರಟಳು. ಸಾಯಂಕಾಲ ಆಫೀಸ್‌ನಿಂದ ಹಿಂದಿರುಗಿ ಟಿ.ವಿ. ನೋಡುತ್ತಾ ಕುಳಿತಿರುವಾಗ ಮತ್ತೆ ವಿನಯ್‌ನಿಂದ, “ಏನು ಮಾಡುತ್ತಿದ್ದೀಯಾ?” ಮೆಸೇಜ್ ಬಂದಿತು.
“ಟಿ.ವಿ. ನೋಡುತ್ತಿದ್ದೇನೆ. ನೀನು….?”
“ನಾನು ನಿನಗೋಸ್ಕರ ಕಾಯುತ್ತಾ ಇದ್ದೇನೆ.”
“ಛೇ…! ನಿನ್ನ ಮಾತು ಕೇಳಿದರೆ ನೀನು ಅದೇ ವಿನಯ್‌ನಾ ಅಥವಾ ಬೇರೆಯವನಾ ಅಂತ ಅನುಮಾನ ಆಗುತ್ತಿದೆ. ನಿನ್ನದೊಂದು ಫೋಟೋ ಕಳುಹಿಸು. ಆಗ ಗ್ಯಾರಂಟಿ ಆಗುತ್ತದೆ.”
“ನಾನು ನಾಳೆ ಕಳುಹಿಸುತ್ತೇನೆ….. ಈಗ ನಿನ್ನ ಫೋಟೋ ಕಳುಹಿಸು ಪ್ಲೀಸ್. ನೋಡಬೇಕು ಅನ್ನಿಸುತ್ತಿದೆ…”
ಸೀಮಾ ತನ್ನದೊಂದು ಫೋಟೋ ಕಳುಹಿಸಿದಳು. ಕೂಡಲೇ ಕಮೆಂಟ್ ಬಂದಿತು, “ಬೊಂಬಾಟ್ ಆಗಿ ಕಾಣುತ್ತಿದ್ದೀಯ….”
“ಬೊಂಬಾಟ್ ಅಲ್ಲ…. ಸ್ಮಾರ್ಟ್,” ಸೀಮಾ ಅವನ ಮಾತನ್ನು ತಿದ್ದಿ, “ಗುಡ್‌ನೈಟ್….” ಹೇಳಿದಳು.
ಮುಂದೆ 2 ದಿನಗಳು ವಿನಯ್‌ನಿಂದ ಮೆಸೇಜ್ ಬರಲಿಲ್ಲ. ಮೂರನೆಯ ದಿನ ಗುಡ್ ಮಾರ್ನಿಂಗ್ ಮೆಸೇಜ್ ನೋಡಿ ಸೀಮಾ ಕೇಳಿದಳು, “ಹೇಗಿದ್ದೀಯಾ?”
“ನೀನು ಹೇಗೆ ನನ್ನನ್ನು ಬಿಟ್ಟಿದ್ದಿಯೋ ಹಾಗೆ ಇದ್ದೇನೆ.”
“ನನಗೆ ಹಾಗೆ ಅನ್ನಿಸುವುದಿಲ್ಲ….. ನಿನ್ನಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ನಿನ್ನ ನಡೆ ನುಡಿ ಜೀವನ ಎಲ್ಲ….”
ಅವಳ ಮಾತನ್ನು ಲೆಕ್ಕಿಸದೆ, “ಅದೆಲ್ಲ ಬಿಡು. ಈಗ ಹೇಳು, ನೀನು ನನ್ನನ್ನು ಯಾವ ರೀತಿ ಸ್ವೀಕರಿಸುತ್ತೀಯಾ ಅಂತ,” ಕೇಳಿದ.
“ಇನ್ನು ಯಾವ ರೀತಿ…. ಫ್ರೆಂಡ್ ಆಗಿ….”
“ನಾವು ಈಗಾಗಲೇ ಫ್ರೆಂಡ್ಸ್ ಆಗಿಯೇ ಇದ್ದೇವೆ,” ಎಂದು ಹೇಳಿ ಅವನು ಹೃದಯದ ಚಿತ್ರವನ್ನು ಕಳುಹಿಸಿದ.
ಸೀಮಾಳಿಗೆ ಅದು ಇಷ್ಟವಾಗದೆ, “ನನಗೀಗ ಸ್ವಲ್ಪ ಕೆಲಸವಿದೆ. ಬೈ….” ಎಂದು ವಾಟ್ಸ್ಆ್ಯಪ್ ನಿಲ್ಲಿಸಲು ತೊಡಗಿದಳು.
ಅಷ್ಟರಲ್ಲಿ ವಿನಯ್ ಮೆಸೇಜ್ ಮಾಡಿದ, “ಒಂದು ನಿಮಿಷ…. ನಾನು ಮುಂದಿನ ವಾರ ಬೆಂಗಳೂರಿಗೆ ಬರುವವನಿದ್ದೇನೆ.”
“ಸರಿ. ಬಂದಾಗ ತಿಳಿಸು….”
“ಏನು ತಿಂಡಿ ಕೊಡಿಸುತ್ತೀಯಾ? ಎಲ್ಲೆಲ್ಲಿ ಸುತ್ತಾಡಿಸುತ್ತೀಯಾ?”
“ನಿನಗೇನು ಇಷ್ಟವೋ ಅದೆಲ್ಲ…….”
“ಓಹೋ! ನನಗೆ ನೀನೇ ಇಷ್ಟ.”
ಅವನ ಮಾತಿನ ರೀತಿ ಅವಳನ್ನು ಚಕಿತಗೊಳಿಸಿತು, “ನಿಜವಾಗಲೂ? ನೀನು ಮೊದಲಿಂದಲೂ ಹೀಗೆ ಹೇಳಲಿಲ್ಲವಲ್ಲ….?”
“ಏಕೆಂದರೆ ಅದು ನಿನಗೆ ಗೊತ್ತೇ ಇತ್ತು.”
“ಹೌದು. ನೀನು ಹೇಳುವುದು 100% ಸರಿ.”
“ಮತ್ತೆ…. ನೀನು ಯಾಕೆ ಹೇಳಲಿಲ್ಲ?” ವಿನಯ್ ಅವಳನ್ನು ಮರಳಿ ಪ್ರಶ್ನಿಸಿದ.
ಅದಕ್ಕೆ ಸೀಮಾ ಅವನದೇ ಧಾಟಿಯಲ್ಲಿ ಉತ್ತರಿಸಿದಳು, “ಏಕೆಂದರೆ ಅದು ನಿನಗೂ ಗೊತ್ತಿತ್ತು….”
ವಿನಯ್ ಈಗ ವಿಷಯ ಬದಲಿಸಿದ, “ಈಗ ನೀನು ಹೇಗೆ ಇರುತ್ತೀಯಾ….?”
“ಅಂದರೆ….?” ಸೀಮಾ ಕೇಳಿದಳು.
“ಅಂದರೆ…. ಈ ಡಿಸೆಂಬರ್ ಚಳಿಯಲ್ಲಿ….. ಅಂತ”
“ಯಾಕೆ, ಅಲ್ಲಿ ಚಳಿ ಇಲ್ಲವೇನು?” ಅವನ ಪ್ರಶ್ನೆ ಸೀಮಾಳಿಗೆ ವಿಚಿತ್ರವೆನಿಸಿತು.
“ನನಗಾದರೆ ಚಳಿ ತಡೆಯುವುದಕ್ಕೆ ಒಂದು ವಿಧಾನ ಇದೆ. ಆದರೆ ನೀನು ಏನು ಮಾಡುತ್ತೀಯಾ….?”
“ಎಂತಹ ಮಾತು ಆಡುತ್ತೀಯಾ…?” ಸೀಮಾ ಸಿಟ್ಟಾದಳು.
ವಿನಯ್ ವಿಚಲನಾಗದೆ, “ಈ ಮಾತುಗಳನ್ನೆಲ್ಲ ನಾವು ಮೊದಲೇ ಆಡಿದ್ದರೆ, ಇಂದಿನ ಪರಿಸ್ಥಿತಿ ಬೇರೆಯದೇ ಇರುತ್ತಿತ್ತು.”
“ನಿಜ…. ಆದರೆ ನಿನಗೀಗ ಹೆಂಡತಿ ಇದ್ದಾಳೆ ಅನ್ನುವುದನ್ನು ಮರೆಯಬೇಡ.”
“ಅವಳ ಜಾಗದಲ್ಲಿ ಅವಳು ಇರುತ್ತಾಳೆ. ನಿನ್ನ ಜಾಗದಲ್ಲಿ ನೀನು ಇರುತ್ತೀಯ… ನೀನು ಯಾವಾಗ ಬಾ ಅನ್ನುತ್ತೀಯೋ ಆಗ ನಾನು ಬಂದುಬಿಡುತ್ತೇನೆ,” ವಿನಯ್ ನೇರವಾಗಿ ಹೇಳಿದ.
ಸೀಮಾ ಏನೂ ಉತ್ತರಿಸಿದೆ ಫೋನ್ ಆಫ್ ಮಾಡಿದಳು.
ವಿನಯ್ ವಿವಾಹಿತನಾಗಿದ್ದೂ ಹೀಗೆ ಮುಕ್ತವಾಗಿ ಆಹ್ವಾನ ನೀಡಿದ್ದು ಸೀಮಾಳಿಗೆ ಇಷ್ಟವಾಗಲಿಲ್ಲ. ಹಿಂದೆ ಅವನೆಂದೂ ಇಂತಹ ಮಾತುಗಳನ್ನಾಡಿರಲಿಲ್ಲ. ಅವನ ಬಗ್ಗೆ ಮನಸ್ಸಿನಲ್ಲಿ ಫೀಲಿಂಗ್ಸ್ ಇದ್ದುದೇನೋ ನಿಜ. ಆದರೆ ಈ ಮಾತುಗಳನ್ನು ಕೇಳಿದ ಮೇಲೆ ಫೀಲಿಂಗ್ಸ್ ಮಾಯವಾದವು. ಅವನ ಬಗ್ಗೆ ಜಿಗುಪ್ಸೆ ಹುಟ್ಟಿಕೊಂಡಿತು.
ಎರಡು ಗಂಟೆಗಳು ಕಳೆಯುವಷ್ಟರಲ್ಲಿ ವಿನಯ್ ಮತ್ತೆ ಮೆಸೇಜ್ ಮಾಡಿದ, “ಹೇಗಿದ್ದೀಯಾ?”
“ಅರೆ. ಏನಾಗಿದೆ ನಿನಗೆ?” ಸೀಮಾ ಮರು ಮೆಸೇಜ್ ಕಳುಹಿಸಿದಳು.
“ರಾತ್ರಿಯನ್ನು ಹೇಗೆ ಕಳೆಯುತ್ತೀಯಾ?”
ಸೀಮಾಳಿಗೆ ಇದು ವಿಚಿತ್ರ ಪ್ರಶ್ನೆ ಎನಿಸಿತು. ಇಂತಹ ಮಾತುಕತೆ ಅವಳಿಗೆ ಹಿಡಿಸುವುದಿಲ್ಲ. ಅವಳು ನೇರವಾಗಿ ಉತ್ತರಿಸಿದಳು, “ಮಲಗುತ್ತೇನೆ.”
“ನಿದ್ರೆ ಬರುವುದೇ?”
ಮೆಸೇಜ್ ಮುಂದುವರಿದಂತೆ ಸೀಮಾಳ ತಾಳ್ಮೆ ಕಳೆದುಕೊಂಡು, “ಚೆನ್ನಾಗಿ ನಿದ್ರೆ ಬರುತ್ತದೆ.” ಎಂದಳು.
“ಮತ್ತೇ…..”
ವಿನಯ್‌ನ ಅಶ್ಲೀಲ ಪ್ರಶ್ನೆಗಳಿಂದ ಸೀಮಾ ಸಿಟ್ಟಾದಳು.
“ಐ ಡೋಂಟ್ ಲೈಕ್ ದಿಸ್ ಟೈಪ್ ಆಫ್ ಗಾಸಿಪ್….”
“ನಿನ್ನನ್ನು ಫ್ರೆಂಡ್ ಅಂದುಕೊಂಡು ಚ್ಯಾಟಿಂಗ್ ಮಾಡುತ್ತಿದ್ದರೆ ನೀನು ಫಿಲಾಸಫರ್ ಆಗಿಬಿಟ್ಟೆಯಲ್ಲಾ,” ವಿನಯ್ ಹಾಸ್ಯ ಮಾಡಿದ.
“ಯಾವುದಕ್ಕೂ ಒಂದು ಮಿತಿ ಇರಬೇಕು,” ಎಂದು ಕಟುವಾಗಿ ಉತ್ತರಿಸಿದಳು.
“ಸ್ನೇಹಕ್ಕೆ ಮಿತಿ ಇರುವುದಿಲ್ಲ….”
“ಎಲ್ಲೆ ಇಲ್ಲದ ಸ್ನೇಹ ನನಗೆ ಬೇಕಾಗಿಲ್ಲ…..”
“ನೀನು ನನ್ನನ್ನು ಇಷ್ಟಪಡುತ್ತಿದ್ದೆ ಎನ್ನುವುದನ್ನು ಮರೆಯಬೇಡ ಸೀಮಾ.”
“ಇಷ್ಟಪಡುವುದು ಬೇರೆ. ಅದನ್ನು ತಪ್ಪು ದಾರಿಯಲ್ಲಿ ಬಳಸುವುದು ಬೇರೆ. ಇಂಥದ್ದು ಯಾವುದೂ ನನಗೆ ಖಂಡಿತ ಇಷ್ಟ ಇಲ್ಲ. ಈ ರೀತಿ ಮಾತನಾಡುವುದಾದರೆ ಪ್ಲೀಸ್ ಇನ್ನು ಮುಂದೆ ನನಗೆ ಮೆಸೇಜ್ ಮಾಡುವುದೇ ಬೇಡ!” ಎಂದು ಮೆಸೇಜ್ ಮಾಡಿ ಸೀಮಾ ಫೋನ್ ಆಫ್ ಮಾಡಿದಳು.
ಈಗ ಸೀಮಾಳ ಮನಸ್ಸೂ ಹಗುರಾಯಿತು. ವಿನಯ್‌ನನ್ನು ದೂರ ಮಾಡಿದುದಕ್ಕಾಗಿ ಅವಳಿಗೆ ಕೊಂಚವೂ ಬೇಸರವಾಗಲಿಲ್ಲ. ಹಿಂದೆ ವಿನಯ್‌ನನ್ನು ಮನಸಾರೆ ಮೆಚ್ಚಿದ್ದಳು ಮತ್ತು ಅವನನ್ನು ಪಡೆಯಬೇಕೆಂದು ಬಯಸಿಯೂ ಇದ್ದಳು. ಆದರೆ ಅವನೀಗ ಬದಲಾಗಿಬಿಟ್ಟಿದ್ದ ಅಥವಾ ಅವನ ನಿಜರೂಪವನ್ನು ಸೀಮಾ ಅರ್ಥಮಾಡಿಕೊಂಡಿರಲಿಲ್ಲ.