ನೀಳ್ಗಥೆ – ಶಾರದಾ ಶೇಖರ್‌

ಡಿಸೆಂಬರ್‌ 13, ಕೆಲಸ ಮಾಡಲು ಆರಂಭಿಸಿ 8 ವರ್ಷಗಳು ಮುಗಿದಿವೆ. ಯೋಚಿಸುತ್ತಲೇ ಶರೀರದಲ್ಲಿ ಕಂಪನ ಉಂಟಾಯಿತು. ಕೆಲಸಕ್ಕೆ ಸೇರಿದಾಗ ಅವಳಿಗೆ 24 ವರ್ಷ. ಇಷ್ಟವಿಲ್ಲದಿದ್ದರೂ ಮನದಲ್ಲಿ ಮುಂದಿನ ತಿಂಗಳಿಗೆ ತಾನೂ 32 ವರ್ಷದವಳಾಗುತ್ತೇನೆ ಎಂಬ ವಿಚಾರ ಬಂತು. ಈ 8 ವರ್ಷಗಳಲ್ಲಿ ಜೀವನ ಬದಲಾಗಲೇ ಇಲ್ಲ. ಅಮ್ಮ ಮೊದಲಿನ ಹಾಗೇ ಇದ್ದಾರೆ, ತೀಕ್ಷ್ಣ ಮಾತಿನ ಮುಂಗೋಪಿ. ತಮ್ಮ ಕೂಡಾ ಹಾಗೇ ಇದ್ದಾನೆ. ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಸ್ವಭಾವ. ಮುಂಚೆಯಿಂದಲೇ ತಾಯಿಯ ಮೇಲೆ ಅವಲಂಬಿಸಿರುವಾತ. ಅಪ್ಪ ತೀರಿಹೋಗಿ 6 ವರ್ಷಗಳಾದವು. ಅವರೇ ಮನೆ ಕಟ್ಟಿಸಿದ್ದು. ಮನೆಯಲ್ಲಿ ಅಗತ್ಯದ ಸಾಮಾನುಗಳೆಲ್ಲಾ ಇವೆ. ಇದರ ನಂತರ ಕಾಲ ಸ್ಥಬ್ಧವಾಗಿದೆ.

ತನ್ನ ಜೀವನದಲ್ಲಿ ಬದಲಾವಣೆ ಬರಲಿ ಎಂದು ವಿದ್ಯಾ ಎಷ್ಟೋ ಪ್ರಯತ್ನಪಟ್ಟಿದ್ದಳು. ತನ್ನನ್ನು ತ್ಯಾಗಮೂರ್ತಿ ಎಂದು ಕರೆಯುವುದು ಅವಳಿಗಿಷ್ಟವಿರಲಿಲ್ಲ. ತಾನು ಮನೆಯ ಭಾರ ಹೊತ್ತಿದ್ದೇನೆ ಎಂದು ಅಕ್ಕಪಕ್ಕದವರು, ಬಂಧುಬಳಗ ಭಾವಿಸುವುದು ಅವಳಿಗೆ ಬೇಕಾಗಿರಲಿಲ್ಲ. ತಾನು ದೇವಿಯಾಗುವುದು ಅವಳಿಗೆ ಬೇಡವಾಗಿತ್ತು. ಆದರೆ ಅವಳ ಕೈಲಿ ಏನೂ ಇರಲಿಲ್ಲ.

ಆಫೀಸಿಗೆ ಹೋಗಲು ತಡವಾಗುತ್ತಿತ್ತು. ಅವಳು ತೀರಾ ಸಾದಾ ಆಗಿರುವ ತಿಳಿ ಗುಲಾಬಿ ಬಣ್ಣದ ಚೂಡಿದಾರ್‌ ಹಾಕಿಕೊಂಡಿದ್ದಳು. ದುಪ್ಪಟ್ಟಾವನ್ನು ಹರಡಿ ಹೊದ್ದುಕೊಂಡಿದ್ದಳು. ಚಪ್ಪಲಿ ಮೆಟ್ಟಿ ಕೈನೆಟಿಕ್‌ ಏರಿದಳು. ನೋಡಲು ತೆಗೆದುಹಾಕುವ ಹಾಗಿರಲಿಲ್ಲ ವಿದ್ಯಾ. ಅವಳೆಂದೂ ಅಲಂಕಾರ, ಮೇಕಪ್‌ ಮಾಡಿಕೊಂಡವಳಲ್ಲ.

ಕಾರಣ, ಸ್ವಲ್ಪ ಮಟ್ಟಿಗೆ ತಾಯಿ. ಆಕೆಗೆ ಅಲಂಕರಿಸಿಕೊಳ್ಳುವ ಹುಚ್ಚು ಬಹಳ. ಈ ವಯಸ್ಸಿನಲ್ಲೂ ಹೊಂದಾಣಿಕೆಯ ಸೀರೆ ಬ್ಲೌಸ್ ಜೊತೆಗೆ ಮ್ಯಾಚಿಂಗ್‌ ಒಡವೆಗಳನ್ನು ಧರಿಸುತ್ತಿದ್ದಳು. ತುಟಿಗಳಿಗೆ ಗಾಢ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುತ್ತಿದ್ದಳು. ನಡೆಯುವುದೂ ಕೂಡ ಸ್ಟೈಲೇ. ಅವಳಿಂದಾಗಿ ವಿದ್ಯಾಗೆ ಅಲಂಕಾರದಲ್ಲಿ ಆಸಕ್ತಿ ಹೊರಟುಹೋಗಿತ್ತು. ಅವಳಿಗೆ ತಾಯಿಯ ಜೊತೆ ಎಲ್ಲಿಗೆ ಹೋಗಲೂ ಇಷ್ಟವಿರಲಿಲ್ಲ. ಆದರೆ ತಾಯಿಗೆ ಏನೂ ಅನ್ನಿಸುತ್ತಿರಲಿಲ್ಲ. ಹೀಗೆಲ್ಲಾ ಅಲಂಕಾರ ಮಾಡಿಕೊಳ್ಳಬೇಡಿ ಎಂದು ಆಕೆಗೆ ಹೇಳುವುದು ಕಷ್ಟವಾಗುತ್ತಿತ್ತು. ಅವಳು ಯಾರ ಮಾತು ತಾನೇ ಕೇಳುತ್ತಿದ್ದಳು? ಅಪ್ಪನಿಗೆ ಇದ್ದದ್ದು ಇದೇ ದೂರು. ಅದೇ ಪ್ರಾಣವನ್ನೂ ತೆಗೆದುಕೊಂಡಿತು. ವಿದ್ಯಾ ಆಫೀಸು ತಲುಪಿದಳು. ಎಂದಿನಂತೆ ಎಲ್ಲರಿಗಿಂತ ಮುಂಚೆ ಬಂದಿದ್ದಳು. ತನ್ನ ಜಾಗದಲ್ಲಿ ಕುಳಿತು ಕಂಪ್ಯೂಟರ್‌ ಆನ್‌ ಮಾಡಿದಳು. ಸ್ಕ್ರೀನ್‌ಮೇಲೆ ಒಂದು ಚೀಟಿ ಅಂಟಿಸಲಾಗಿತ್ತು. ಕುಮಾರ್‌ಫೋನ್‌ಮಾಡಿದ್ದ. ನಿನ್ನ  ಹತ್ತಿರ ಅರ್ಜೆಂಟ್‌ ಕೆಲಸವಿದೆ ಎಂದು ಬರೆದಿದ್ದ ಚೀಟಿ. ಕೆಳಗೆ ಮೊಬೈಲ್‌ ನಂಬರ್‌ ಕೂಡಾ ಇತ್ತು.

ಹಿಂದಿನ ಸಂಜೆ ಹೊತ್ತಾದ ನಂತರ ಫೋನ್‌ ಬಂದಿತ್ತು. ಸಮಯ ಸರಿಯಾಗಿ ಹೇಳಬೇಕೆಂದರೆ 6 ಗಂಟೆ 40 ನಿಮಿಷ. ವಿದ್ಯಾ ಕೇವಲ 10 ನಿಮಿಷ ಮುಂಚೆ ಆಫೀಸಿನಿಂದ ಹೊರಟಿದ್ದು. ಹಾಗಾದರೆ ಕುಮಾರ್‌ ಇದೇ ಊರಲ್ಲಿದ್ದಾನೆ. ಅವನಿಗೆಂತಹ ಅರ್ಜೆಂಟ್‌ ಕೆಲಸವಿದೆ? ಹೀಗೆ ಎಂದೂ ಕುಮಾರ್‌ ಫೋನ್‌ ಮಾಡಿದವನಲ್ಲ. ಅವನಿಗೆ ಫೋನ್‌ ಮಾಡುವುದೋ ಬೇಡವೋ ಎಂಬ ಯೋಚನೆಯಲ್ಲಿ ಬಿದ್ದಳು. ಅವನಿಗೇನು ಬೇಕೋ ಯಾರಿಗ್ಗೊತ್ತು? ಅವನೇ ಫೋನ್‌ ಮಾಡಲಿ ಎಂದು ಯೋಚಿಸಿದಳು. ಊಟದ ಬಿಡುವಿನವರೆಗೆ ಅವಳು ಕುಮಾರನ ಫೋನನ್ನು ಅಸಹನೆಯಿಂದ ಕಾಯುತ್ತಿದ್ದಳು. ನಂತರ ಸುಮ್ಮನಿರಲಾಗಲಿಲ್ಲ. ಎರಡೂವರೆ ಗಂಟೆಗೆ ಅವಳೇ ಫೋನ್‌ ಮಾಡಿದಳು. ಕುಮಾರನ ದನಿ ಸ್ವಲ್ಪವೂ ಬದಲಾಗಿರಲಿಲ್ಲ. ಅವನ ದನಿ ಕೇಳುತ್ತಲೇ ವಿದ್ಯಾ ಜಡವಾದಳು. ಏನು ಮಾತನಾಡಬೇಕೆಂದು ತೋಚಲಿಲ್ಲ.

ಕುಮಾರನೇ ಮಾತು ಆಂಭಿಸಿದ. “ಹೇಗಿದೀಯಾ? ಅಮ್ಮ ಮತ್ತು ತಮ್ಮ  ಹೇಗಿದ್ದಾರೆ?”

ವಿದ್ಯಾ ಕೂಡಾ ಔಪಚಾರಿಕವಾಗಿ ಉತ್ತರಿಸಿದಳು, “ಎಲ್ಲರೂ ಚೆನ್ನಾಗಿದ್ದಾರೆ.”

ಕೆಲವು ನಿಮಿಷ ತಡೆದು ಕುಮಾರ್‌, “ನಿನ್ನನ್ನು ಭೇಟಿಯಾಗಬೇಕು. ಯಾವಾಗ ಸಿಗ್ತೀಯಾ? ನೀನು ಹೋಟೆಲಿಗೆ ಬಂದರೆ ಒಳ್ಳೆಯದು. ನನ್ನ ಮನೆಗೆ ಬರೋದು ಸರಿಯಾಗಿರಲ್ಲ.”

ವಿದ್ಯಾಗೆ ಏನೂ ಹೇಳದೆ ಇರಲು ಆಗಲಿಲ್ಲ. ಯೋಚಿಸಿ ಅವಳಂದಳು, “ಸರಿ, ಆಫೀಸಿನಿಂದ ಹೋಗುವಾಗ ಬರ್ತೀನಿ.”

ಕುಮಾರನನ್ನು ಭೇಟಿಯಾಗುವುದರಲ್ಲಿ ಅಡ್ಡಿಯೇನಿದೆ? ಈಗಲೂ ಅವನು ತನ್ನ ಪತಿಯೇ. 4 ವರ್ಷಗಳಿಂದ ಬೇರೆ ಬೇರೆ ಇದ್ದರೇನಂತೆ? ಅವರ ಮದುವೆ ಕೂಡಾ ವಿಚಿತ್ರವಾಗಿ ನಡೆದಿತ್ತು. ತಂದೆಯ ಆಪ್ತ ಸ್ನೇಹಿತನ ಮಗ ಕುಮಾರ್‌, ಅಪ್ಪನಿಗೆ ಹೃದಯಾಘಾತವಾದಾಗ ಅವರನ್ನು ನೋಡಲು ಕುಮಾರನ ತಂದೆ ಬಂದಿದ್ದರು. ಮಾತಿನಲ್ಲಿ ವಿದ್ಯಾಳ ವಿಷಯ ಬಂತು. ಆಗ ವಿದ್ಯಾಳ ತಂದೆ ತನ್ನ ಸ್ನೇಹಿತನ ಕೈ ಹಿಡಿದುಕೊಂಡು, `ಮಹೇಶ, ನನ್ನ ಮಗಳ ವಿಷಯ ಏನು ಮಾಡಲಿ? ನಾನು ಹೋದ ಮೇಲೆ ನನ್ನ ಹೆಂಡತಿ ವಿದ್ಯಾಳ ಮದುವೆ ಖಂಡಿತ ಮಾಡುವುದಿಲ್ಲ. ನನ್ನ ಮಗ ಅಪ್ರಯೋಜಕ ಅನ್ನುವುದು ನಿನಗೂ ಗೊತ್ತು. ನನ್ನ ಮಗಳದೇ ನನಗೆ ದೊಡ್ಡ ಚಿಂತೆಯಾಗಿಬಿಟ್ಟಿದೆ. ಪ್ರಪಂಚ ಅರಿಯದವಳು. ಒಬ್ಬಳೇ ಹೇಗೆ ಬದುಕುತ್ತಾಳೆ?’ ಎಂದಿದ್ದರು.

ಮಹೇಶ ತಂದೆಗೆ ತಮ್ಮ ಮಗನ ಜೊತೆಗೆ ವಿದ್ಯಾಳ ಮದುವೆ ಮಾಡುವುದಾಗಿ ಅಲ್ಲೇ ಮಾತುಕೊಟ್ಟರು. ಕುಮಾರ್‌ ಪಿ.ಎಚ್‌.ಡಿ. ಮಾಡುತ್ತಿದ್ದ. ಓದು ಮುಗಿದ ಕೂಡಲೇ ಇಬ್ಬರ ಮದುವೆ ಮಾಡುತ್ತೇನೆಂದರು. ಇದಾದ ನಂತರ ತಂದೆ ಹೆಚ್ಚು ದಿನ ಬದುಕಲಿಲ್ಲ. ಮಹೇಶ್‌ ಕೂಡ ತಮ್ಮ ಮಾತು ಮರೆತ ಹಾಗಿತ್ತು. 2 ವರ್ಷಗಳ ನಂತರ ಇದ್ದಕ್ಕಿದಂತೆ ಅವರು ಕುಮಾರನ ಜೊತೆ ಮನೆಗೆ ಬಂದರು. ವಿದ್ಯಾಳ ತಂದೆಗೆ ಏನು ಇಷ್ಟವಿತ್ತೆಂಬುದನ್ನು ತಾಯಿಗೆ ಹೇಳಿದರು. ತಾಯಿಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಕುಮಾರನಿಗೆ ಕೆಲಸ ಸಿಕ್ಕಿರಲಿಲ್ಲ. ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ. ಅವನ ತಾಯಿಗೂ ಈ ಮದುವೆಯಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಆದರೂ ಅವರ ಮದುವೆ ಸರಳವಾಗಿ ನಡೆದುಹೋಯಿತು. ವಿದ್ಯಾ ಕುಮಾರನ ಮನೆಗೆ ಬಂದಳು.

ಮದುವೆಯ ದಿನವೇ ಅವಳಿಗೆ ಅತ್ತೆಮನೆಯಲ್ಲಿ ಯಾರೂ ತನ್ನನ್ನು ಇಷ್ಟಪಡುವುದಿಲ್ಲವೆಂಬುದು ತಿಳಿಯಿತು. ಇತ್ತ ತವರಿನಲ್ಲಿ ಕೂಡಾ ಯಾರಿಗೂ ಕುಮಾರ ಇಷ್ಟವಾಗುತ್ತಿರಲಿಲ್ಲ. ವಿದ್ಯಾ ಮನಸ್ಸಿಲ್ಲದೆ ಸಂಸಾರ ಆರಂಭಿಸಿದಳು. ಮನೆ ತುಂಬಾ ಜನ. ಅತ್ತೆ, ಮಾವ, ಇಬ್ಬರು ನಾದಿನಿಯರು, ಒಬ್ಬ ಮೈದುನ ಮತ್ತು ಪತಿ. ಕುಮಾರ್‌ ಸರಿಯಾದ ನೌಕರಿ ಸಿಗದೆ ಯಾವಾಗಲೂ ಬೇಜಾರಿನಲ್ಲಿರುತ್ತಿದ್ದ. ವಿದ್ಯಾಳ ಪ್ರತಿ ಮಾತಿಗೂ ಟೀಕೆಟಿಪ್ಪಣಿ ನಡೆಯುತ್ತಿತ್ತು. ಅತ್ತೆ ಮತ್ತು ನಾದಿನಿಯರಿಗೆ ಅವಳ ಉಡುಗೆತೊಡುಗೆ, ನಡೆದುಕೊಳ್ಳುವ ರೀತಿ ಯಾವುದೂ ಇಷ್ಟವಾಗುತ್ತಿರಲಿಲ್ಲ. ಅತ್ತೆ ಅವಳನ್ನು ಬೈಯುತ್ತಿದ್ದಳು. ಕುಮಾರ ಉದಾಸೀನ ತೋರುತ್ತಿದ್ದ. ಗಂಡ ಅಲಂಕಾರ ಮಾಡಿಕೊಳ್ಳಲು ಹೇಳಿದರೆ, ಹೊರಗೆ ಹೋಗಲು ಕರೆದರೆ ಹಾಗೇ ಮಾಡುವುದಾಗಿ ವಿದ್ಯಾ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಳು. ತನ್ನ ಕಡೆಯೇ ಅವನ ಗಮನ ಇರಲಿಲ್ಲವೆಂದರೆ ತಾನು ಯಾರಿಗಾಗಿ ಅಲಂಕರಿಸಿಕೊಳ್ಳಬೇಕು? 1 ವರ್ಷ ಹೇಗೋ ಕಳೆದಳು. ಅದರಲ್ಲೂ ಅರ್ಧ ಸಮಯ ತವರಿನಲ್ಲಿರುತ್ತಿದ್ದಳು.. ಅತ್ತೆ ಒಮ್ಮೆ ಕಳಿಸಿದರೆ, ಇನ್ನೊಮ್ಮೆ ತಾಯಿ ಕರೆಸಿಕೊಳ್ಳುತ್ತಿದ್ದಳು.

ಮದುವೆಯಾದ ನಂತರ ಮಹೇಶ ಎಂದೂ ಸೊಸೆಯ ಪಕ್ಷ ವಹಿಸಲಿಲ್ಲ. ಅವಳ ಜೊತೆ ತನಗೇನೂ ಸಂಬಂಧವಿಲ್ಲದಂತೆ ಇದ್ದುಬಿಟ್ಟ. ಹೇಗಿದ್ದೀಯ? ನಿನಗೇನು ಬೇಕು? ಎಂದು ಕೂಡಾ ಕೇಳಲಿಲ್ಲ. ವಿದ್ಯಾ ಬೆಳಗ್ಗೆ ಎದ್ದವಳೇ ಮನೆ ಕೆಲಸ ಮುಗಿಸಿಕೊಂಡು ಕೆಲಸಕ್ಕೆ ಹೊರಟುಹೋಗುತ್ತಿದ್ದಳು. ಆಗ ಕುಮಾರ್‌ ಮಲಗಿರುತ್ತಿದ್ದ. ಸಂಜೆ ಅವಳು ಬಂದಾಗ ಅವನು ಮನೆಯಲ್ಲಿರುತ್ತಿರಲಿಲ್ಲ.  ರಾತ್ರಿ ಅವನು ಬಹಳ ತಡವಾಗಿ ಬರುತ್ತಿದ್ದ. ಏನಾದರೂ ಕೇಳಿದರೆ, “ಕೆಲಸ ಹುಡುಕಲು ಹೋಗಿದ್ದೆ, ಪೋಲಿ ಅಲೆಯೋಕಲ್ಲ,” ಎಂಬ ಉತ್ತರ ಬರುತ್ತಿತ್ತು.

ವಿದ್ಯಾ ಅಲ್ಲಿ ಕಳೆದ ದಿನಗಳು ಬಹಳ ಕೆಟ್ಟದಾಗಿದ್ದವು. ತವರಿನಲ್ಲಿ ಎಲ್ಲಾ ಸರಿಯಾಗಿತ್ತು ಅಂತಲ್ಲ. ಸೋಮಾರಿ ತಮ್ಮ ಮತ್ತು ಫ್ಯಾಶನೆಬಲ್ ತಾಯಿ, ಜೀವನ ಸುಲಭವಾಗಿರಲಿಲ್ಲ. ತಮ್ಮ ದುಡ್ಡು ಕೇಳಲು ಆಫೀಸಿಗೆ ಬರುತ್ತಿದ್ದ. ತಾಯಿ ಮಗ ಸೇರಿಕೊಂಡು ತಂದೆ ಕಷ್ಟಪಟ್ಟು ಸಂಪಾದಿಸಿಟ್ಟಿದ್ದ ಹಣವನ್ನು ಮಜಾ ಉಡಾಯಿಸುತ್ತಿದ್ದರು. ಒಂದು ದಿನ ವಿದ್ಯಾಗೆ ತಾನಿನ್ನು ಕುಮಾರನ ಜೊತೆ ಆ ಮನೆಯಲ್ಲಿ ಇರಲು ಸಾಧ್ಯವಿಲ್ಲ ಅನ್ನಿಸಿತು. ಅತ್ತೆ ನಾದಿನಿಯರ ಬೈಗುಳಕ್ಕೆ ಅವಳು ಜವಾಬು ಕೊಡುತ್ತಿರಲಿಲ್ಲ. ಆದರೆ ಆ ದಿನ….. ವಿದ್ಯಾಳ ಆಫೀಸಿನಲ್ಲಿ ಆಡಿಟಿಂಗ್‌ ಕೆಲಸ ನಡೀತ್ತಿತ್ತು. ಅವಳು 2 ದಿನ ಮೊದಲೇ ತಾನು ಇಡೀ ವಾರ ಮನೆಗೆ ಬರುವುದು ತಡವಾಗುತ್ತೆ ಎಂದು ಹೇಳಿದ್ದಳು. ಅತ್ತೆ ಏನೂ ಹೇಳಿರಲಿಲ್ಲ.

ಅಂದು ರಾತ್ರಿ ಅವಳು ಸುಸ್ತಾಗಿ 9 ಗಂಟೆಗೆ ಮನೆಗೆ ಬಂದಾಗ ಮನೆಗೆ ಬೀಗ ಹಾಕಿತ್ತು. ಅರ್ಧ ಗಂಟೆ ಬಾಗಿಲು ಕಾಯ್ದು ನಂತರ ಪಕ್ಕದ ಮನೆಯ ಬಾಗಿಲು ತಟ್ಟಿದಳು. ಆಗ ಮನೆಯವರೆಲ್ಲರೂ ಮೈಸೂರಿಗೆ ಹೋಗಿದ್ದಾರೆಂದು ತಿಳಿಯಿತು. ಸಂಜೆ ಅತ್ತೆಯ ಸೋದರತ್ತೆ ಮಗಳು ಬಂದಿದ್ದಳು. ಅವಳೇ ಎಲ್ಲರನ್ನೂ ಕರೆದುಕೊಂಡು ಹೋಗಿದ್ದಾಳೆ. ವಿದ್ಯಾಳಿಗೆ ಕೋಪ ಬಂತು. ಎಲ್ಲರೂ ಹೋಗಲಿ ಆದರೆ ಕುಮಾರ್‌ಹೇಗೆ ಹೋದರು? ಯಾರಿಗೂ ತನ್ನ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ? ಹೇಗೋ ಮಾಡಿ ಪಕ್ಕದ ಮನೆಯವಳನ್ನು ಕೇಳಿದಳು, “ನೀವು ಎಲ್ಲರೂ ಹೋಗುವುದನ್ನು ನೋಡಿದಿರಾ? ಇವರನ್ನು ಕೂಡಾ?”

“ಹೌದು, ಕುಮಾರನೇ ಸಾಮಾನು ಇಡುತ್ತಿದ್ದ. ಜೀಪಿನಲ್ಲಿ ಹೋಗಿದ್ದಾರೆ. 3 ದಿನದ ನಂತರ ಬರ್ತೀವಿ ಅಂತ ಹೋದರು. ನಾನು ಹಾಗೂ ಮೆಲ್ಲಗೆ, ವಿದ್ಯಾ ಎಲ್ಲಿ ಕಾಣ್ತಾ ಇಲ್ವಲ್ಲ ಅಂದೆ. ಅವಳು ಆಫೀಸಿನಿಂದ ಲೇಟಾಗಿ ಬರ್ತಾಳಲ್ಲ ಅಂತ ಹೇಳಿದರು. ಯಾರೂ ನನ್ನ ಮಾತಿಗೆ ಗಮನವನ್ನೇ ಕೊಡಲಿಲ್ಲ……. ನಿನಗೇ ಗೊತ್ತಲ್ಲ ನಿನ್ನತ್ತೆ ಹೇಗೆ ಅಂತ.”

ವಿದ್ಯಾಳ ಕಣ್ಣುಗಳು ತುಂಬಿಬಂದವು. ಎಲ್ಲರೂ ಹೋಗಿದ್ದಾರೆ. ಅದರಿಂದ ಏನೂ ದುಃಖವಿಲ್ಲ. ಆದರೆ ಕುಮಾರ್‌ಹೇಗೆ ಹೋದರು? ಹೃದಯದೊಳಗೆ ಕನ್ನಡಿ ಒಡೆದ ಹಾಗಾಯ್ತು. ಗಾಜಿನ ಚೂರುಗಳು ತೀಕ್ಷ್ಣವಾಗಿ ಚುಚ್ಚತೊಡಗಿದವು. ಅವಳಿಗೆ ಅಳಲೂ ಆಗಲಿಲ್ಲ. ಆದರೆ ಆ ದಿನದ ನಂತರ ಅವಳು ತನ್ನೊಳಗಿನ ದ್ವೇಷವನ್ನು ಬಚ್ಚಿಡುವುದನ್ನು ಚೆನ್ನಾಗಿ ಕಲಿತುಕೊಂಡಳು. ರಾತ್ರಿ 11 ಗಂಟೆಗೆ ಟ್ಯಾಕ್ಸಿ ಮಾಡಿಕೊಂಡು ಅವಳು ತಾಯಿಯ ಮನೆಗೆ ಹೋದಳು. ಅಲ್ಲಿಗೆ ಬರಲು ಯಾವ ಉತ್ಸಾಹ ಇರಲಿಲ್ಲ. ತಾಯಿಯೇ ಬಾಗಿಲು ತೆರೆದಳು. ಟಿವಿಯಲ್ಲಿ ಬರುತ್ತಿದ್ದ ಧಾರಾವಾಹಿ ನೋಡಿಯೇ ಎದ್ದಳು. ಧಾರಾವಾಹಿಯ ನಾಯಕಿಯ ಮೇಲೆ ದುಃಖಗಳ ಪರ್ವತವೇ ಮಗುಚಿ ಬಿದ್ದಿರುತ್ತದೆ. ಅತ್ತೆಯ ಮನೆಯವರು ಅವಳನ್ನು ಮನೆಯಿಂದ ಹೊರಹಾಕಿದ್ದಾರೆ. ಗಂಡ ಬೇರೊಬ್ಬ ಹೆಂಗಸಿನ ಜೊತೆ ಇರಲು ಶುರು ಮಾಡಿದ್ದಾನೆ. ಇದನ್ನು ನೋಡಿ ಅವಳು ಅಳುತ್ತಿದ್ದಳು. ಆದರೆ ತನ್ನ ಸ್ವಂತ ಮಗಳು ಯಾವ ಸ್ಥಿತಿಯಲ್ಲಿದ್ದಾಳೆ ಅನ್ನುವುದರ ಬಗ್ಗೆ ಅವಳಿಗೆ ಗಮನವೇ ಇರಲಿಲ್ಲ.

ತಾನು ಯಾವ ಸ್ಥಿತಿಯಲ್ಲಿರಬೇಕೆಂಬುದನ್ನು ವಿದ್ಯಾ ಅರ್ಥ ಮಾಡಿಕೊಂಡಳು. ಮರುದಿನ ಅವಳು ಅಲ್ಲಿಂದಲೇ ಆಫೀಸಿಗೆ ಹೊರಟಳು. ತಾಯಿ ಪ್ರಶ್ನಿಸಿದಾಗ ಸಹಜವಾಗಿ ಹೇಳಿದಳು, “ನಾನು ಅಲ್ಲಿಗೆ ಹೋಗುವುದಿಲ್ಲ ಅಮ್ಮ. ಇಲ್ಲೇ ಇರ್ತೀನಿ.”

ತಾಯಿ ವಿಷಯ ಏನು ಅಂತ ಕೆದಕಿ ಕೇಳಿದಳು. ಕುಮಾರನ ಜೊತೆ ಇರುವುದು ಕಷ್ಟ ಅಂತ ಉತ್ತರಿಸಿದಳು ವಿದ್ಯಾ. ಅವನಿಗೆ ತನ್ನ ಅಗತ್ಯವಿಲ್ಲ.

“ಗಂಡಸರ ಸ್ವಭಾವವೇ ಹಾಗೆ, ಬೇರೊಬ್ಬ ಹೆಂಗಸಿನೊಂದಿಗೆ ಏನೋ ಚಕ್ಕರ್‌ನಡೆಸಿದಾನೆ ಅಂತ ಕಾಣುತ್ತೆ,” ತಾಯಿ ಟೀಕೆ ಮಾಡಿದಳು.

ವಿದ್ಯಾ ಉತ್ತರಿಸಲಿಲ್ಲ. ಮೇಲ್ನೋಟಕ್ಕೆ ಅವಳ ಜೀವನ ಹಳಿಯ ಮೇಲೆ ಬಂದಿದೆ ಅನ್ನಿಸುತ್ತಿತ್ತು. ಆದರೆ ಹಾಗಾಗಿರಲಿಲ್ಲ. ಅವಳು ಕುಮಾರನನ್ನು ನೆನಪು ಮಾಡಿಕೊಳ್ಳದ ದಿನವೇ ಇರಲಿಲ್ಲ. ಒಮ್ಮೆ ಕೋಪದಿಂದ ಒಮ್ಮೆ ಆಕ್ರೋಶದಿಂದ ಮತ್ತೊಮ್ಮೆ ಸಂಶಯದಿಂದ. ಅವಳು ಕುಮಾರನ ಜೊತೆ ಕಳೆದ ಸ್ವಲ್ಪ ದಿನಗಳಲ್ಲಿ ಪ್ರೀತಿ ಅನ್ನುವುದು ಇರಲಿಲ್ಲ. ಹನಿಮೂನ್‌ಗೆಂದು ಅವರೆಲ್ಲಿಗೂ ಹೋಗಿರಲಿಲ್ಲ. ಆಮೇಲೆ ಹೋದರಾಯ್ತು, ಮೊದಲು ಒಳ್ಳೆ ಕೆಲಸ ಸಿಗಲಿ ಎಂದು ವಿದ್ಯಾಳೇ ಹೇಳಿದ್ದಳು. ಇಬ್ಬರೂ ಒಟ್ಟಿಗೆ ಒಂದು ಸಲ ಸಿನಿಮಾ ನೋಡಲು ಹೋಗಿದ್ದರು. 2 ಸಲ ಹೋಟೆಲಿಗೆ ಊಟ ಮಾಡಲು ಕುಮಾರನ ಜೊತೆ ಏಕಾಂತದಲ್ಲಿ ಕಳೆದ ಕ್ಷಣಗಳು ಅವಳಲ್ಲಿ ರೋಮಾಂಚನ ಉಂಟುಮಾಡಲಿಲ್ಲ.

ಬೇರೆಯಾದ ವಾರದ ನಂತರ ಕುಮಾರ್‌ಆಫೀಸಿಗೆ ಫೋನ್‌ಮಾಡಿದ್ದ. ಅವನು ಸಿಟ್ಟಿನಿಂದ ಕೇಳಿದ, “ನೀನ್ಯಾಕೆ ಮನೆಗೆ ಬರಲಿಲ್ಲ?”

ವಿದ್ಯಾ ತಣ್ಣಗೆ ಉತ್ತರಿಸಿದಳು, “ಅಲ್ಲಿ ಯಾರಿಗೂ ನನ್ನ ಅಗತ್ಯವಿಲ್ಲ.”

ತಡೆದು ಕುಮಾರ್‌ ಹೇಳಿದ, “ಹೀಗೇಕೆ ಮಾಡ್ತೀಯ? ಡಂಗೂರ ಬಾರಿಸಿ ಹೇಳಬೇಕಾದ ಅಗತ್ಯ ಇದೆಯಾ?”

“ಅಲ್ಲಿ ನಾನು ಬೇಡವಾದ ವ್ಯಕ್ತಿ ಅಂತ ಡಂಗೂರ ಬಾರಿಸಿ ಹೇಳುತ್ತಿರುವಾಗ ಇಲ್ಲಿ ಯಾಕೆ ಹೇಳಬಾರದು?”

ಇದಾದ ನಂತರ ಅಲ್ಲಿಂದ ಫೋನ್‌ ಬರಲಿಲ್ಲ. ವಿದ್ಯಾಳ ಜೀವನ ಖಾಲಿ ಹಳಿಗಳ ಮೇಲೆ ಸಾಗತೊಡಗಿತು. ಅದೇ ಆಫೀಸು, ಅದೇ ಅಮ್ಮ ಮತ್ತು ಅದೇ ತಮ್ಮ … ವ್ಯತ್ಯಾಸ ಆಗಿರುವುದೆಂದರೆ, ಮೊದಲಾದರೆ ಅವಳು ತಮ್ಮನ ಮಾತುಗಳನ್ನು ಎದುರಾಡದೆ ಕೇಳುತ್ತಿದ್ದಳು. ಈಗ ಜಗಳವಾಡಲು ಕಲಿತಿದ್ದಾಳೆ. ನಿನ್ನ ಕಾಲ ಮೇಲೆ ನೀನು ನಿಂತುಕೋಬೇಕು ಎಂದು ಆಗಾಗ ಹೇಳುತ್ತಿರುತ್ತಾಳೆ. ತಾಯಿಗೆ ತನ್ನ ವಯಸ್ಸಿಗೆ ತಕ್ಕ ಹಾಗೆ ಉಡುಗೆ ತೊಡುಗೆ ಮಾತುಕಥೆ ಇರಬೇಕು, ಅಂತ ತಿಳಿಸಿ ಹೇಳಿದ್ದಾಳೆ. ತಾಯಿ ಕೂಡ ವಿದ್ಯಾಳೆಂದರೆ ಈಗ ಸ್ವಲ್ಪ ಭಯಪಡುತ್ತಾಳೆ.

ವಿದ್ಯಾಳಿಗೆ ವಯಸ್ಸಾಗತೊಡಗಿತು. ಆಫೀಸಿನಲ್ಲಿ ಗೀತಾ ಹೇಳತೊಡಗಿದಳು, “ನೀನು ಎರಡನೇ ಮದುವೆ ಮಾಡಿಕೋ ವಿದ್ಯಾ, ಎಲ್ಲಿಯವರೆಗೆ ಒಂಟಿ ಜೀವನ ಸಾಗಿಸ್ತೀಯಾ?”

ವಿದ್ಯಾಳಿಗೂ ತನ್ನ ಒಂಟಿ ಜೀವನ ಸಾಕಾಗಿ ಹೋಗಿತ್ತು. ಅವಳ ವಯಸ್ಸಿನವರು, ಜೊತೆಗೆ ಕೆಲಸ ಮಾಡುವ ಗೆಳತಿಯರೆಲ್ಲರಿಗೂ ಮದುವೆಯಾಗಿತ್ತು. ಅವರಿಗೆ ಮಕ್ಕಳೂ ಇದ್ದರು. ಅವರ ಮಧ್ಯೆ ತಾನು ಒಂಟಿ ಅನಿಸುತ್ತಿತ್ತು.. ಅವರೆಲ್ಲ ಕುಟುಂಬ ಸಮೇತ ಸುತ್ತಾಡಲು ಹೋಗುತ್ತಿದ್ದರು. ಮಕ್ಕಳ ಪರೀಕ್ಷೆ ಮತ್ತು ರಜಾದಿನಗಳ ಬಗ್ಗೆ ಮಾತಾಡುತ್ತಿದ್ದರು. ವಿದ್ಯಾಳಿಗೆ ತಾನೂ ಅವರ ನಡುವೆ ಇದ್ದರೂ ಇಲ್ಲ ಎಂದೆನಿಸುತ್ತಿತ್ತು. ಅವರ ಮಧ್ಯದಿಂದ ಅವಳು ನಿರಾಶಳಾಗಿ ಏಳುತ್ತಿದ್ದಳು. ಎಲ್ಲರೂ ಚೆನ್ನಾಗಿ ಅಲಂಕರಿಸಿಕೊಂಡು ಬಂದರೆ ಇವಳು ಯಾವುದೋ ಚೂಡಿದಾರ್‌ ಹಾಕಿಕೊಂಡು ಹೋಗುತ್ತಿದ್ದಳು. ಗೀತಾ ಎಷ್ಟೋ ಸಲ ಹೇಳಿದ್ದಳು, “ಸರಿಯಾಗಿ ಇರಬಾರದೇ? ಇದೇನು ಬಟ್ಟೆ ಹಾಕಿಕೊಂಡು ಬಂದಿದೀಯ…..  ಒಳ್ಳೆ ಫಿಗರ್‌ ಇದೆ. ನಮ್ಮ ಹಾಗೆ ದಪ್ಪಗೂ ಇಲ್ಲ ನೀನು. ಒಳ್ಳೆ ಬಟ್ಟೆ ಹಾಕ್ಕೊಂಡರೆ ಎಷ್ಟು ಚೆನ್ನಾಗಿ ಕಾಣಿಸ್ತೀಯಾ.”

ವಿದ್ಯಾ ನಕ್ಕಳು, “ಚೆನ್ನಾಗಿ ಕಾಣಿಸಿ ಏನು ಮಾಡಲಿ? ಯಾರನ್ನು ಮೆಚ್ಚಿಸಬೇಕು ನಾನು? ಇರಲಿ ಬಿಡು. ನಾನೇನೂ ಫ್ಯಾಶನ್‌ಮಾಡಬೇಕಾಗಿಲ್ಲ.”

ಗೀತಾ ಆಗಾಗ ಅವಳನ್ನು ಗದರಿಸುತ್ತಿದ್ದಳು. “ಮನುಷ್ಯ ತಾನು ಚೆನ್ನಾಗಿ ಕಾಣಿಸಬೇಕು ಅಂತ ಬಟ್ಟೆ ಹಾಕ್ಕೋತಾನೆ. ದಪ್ಪ ಕನ್ನಡಕ, ಇಷ್ಟು ದೊಡ್ಡ ಕುಂಕುಮ ಇಟ್ಟುಕೋತೀಯ. ನಿನಗಾಗಿ ನೀನು ಚೆನ್ನಾಗಿ ಇರಬೇಕೂಂತ ನಿನ್ನ ಮನಸ್ಸು ಹೇಳಲಿಲ್ಲವೇನೇ ಪೆದ್ದಿ. ಇಷ್ಟು ಸಂಪಾದಿಸ್ತೀಯಾ ನಮ್ಮ ಹಾಗೆ ಯಾವ ಜವಾಬ್ದಾರೀನೂ ಇಲ್ಲ. ಜೀವನದ ಆನಂದ ಯಾಕೆ ಅನುಭವಿಸೋದಿಲ್ಲ? ನನ್ನ ಸೋದರತ್ತೆ ಮಗಳು ಮದುವೇನೇ ಮಾಡಿಕೊಂಡಿಲ್ಲ. ಎಷ್ಟು ಮಜವಾಗಿದ್ದಾಳೆ ಗೊತ್ತಾ? ವಿದೇಶಗಳಿಗೂ ಹೋಗಿ ಬಂದಿದ್ದಾಳೆ. ಜೋರಾಗಿ ಕಾರು ನಡೆಸ್ತಾಳೆ. ಸ್ವಂತ ಮನೇಲಿದ್ದಾಳೆ. ನೀನು ನೋಡು ಒಳ್ಳೆ ಸನ್ಯಾಸಿನಿ ತರಹ ಇದೀಯ.”

ವಿದ್ಯಾ ನಕ್ಕು ಸುಮ್ಮನಿರುತ್ತಿದ್ದಳು. ಗೀತಾಳ ಜೊತೆ ವಾದ ಮಾಡಿ ಗೆಲ್ಲುವುದು ಅವಳಿಗೆ ಸಾಧ್ಯವಿರಲಿಲ್ಲ. ಗೀತಾಳ ಇತರ ಗೆಳತಿಯರೂ ಇದೇ ಮಾತನಾಡಿದ್ದಾರೆ. ಕೆಲಸದ ಈ 3 ವರ್ಷಗಳಲ್ಲಿ ಅವಳಿಗೆ ಕೆಲವು ವರಗಳ ಸುದ್ದಿಯನ್ನೂ ತಂದಿದ್ದಾರೆ. ಆದರೆ ವಿದ್ಯಾಳೇ ಸಿದ್ಧಳಿಲ್ಲ. ಈಗ ಹೊಸ ಸಂಬಂಧ ಬೆಳೆಸಲು ಅವಳಿಗೆ ಭಯವಾಗುತ್ತದೆ. ಜೀವನ ಹೇಗೆ ನಡೀತಿದೆಯೋ ಹಾಗೇ ನಡೆಯಲಿ. ಅವಳು ಆದಷ್ಟೂ ಸಮಯ ಆಫೀಸಿನಲ್ಲಿ ಕಳೀತಾಳೆ. ಶ್ರಮಪಟ್ಟು ಕೆಲಸ ಮಾಡುತ್ತಾಳೆ. 3 ವರ್ಷಗಳಲ್ಲಿ ಎರಡು ಬಡ್ತಿ ದೊರೆತಿವೆ. ಇದರಲ್ಲೇ ಅವಳಿಗೆ ಸಂತೋಷ. ತನ್ನ ಸ್ನೇಹಿತೆಯರಿಗೆ ಸಹಾಯ ಮಾಡಲು ಇವಳು ಸದಾ ಸಿದ್ಧ.  ಅವರ ಮಕ್ಕಳಿಗೆ ಜನ್ಮದಿನದಂದು ಬೆಲೆ ಬಾಳುವ ಉಡುಗೊರೆ ಕೊಡುತ್ತಾಳೆ. ಅವರ ತೊಂದರೆಗಳನ್ನು ಕೇಳಿಕೊಳ್ಳುತ್ತಾಳೆ. ಆದರೆ ತನ್ನ ತೊಂದರೆಗೆ ಅವಳು ಯಾರಿಂದ ಪರಿಹಾರ ಕೇಳಬೇಕು? ಈ ಬಗ್ಗೆ ಅವಳು ಯೋಚಿಸಿಯೇ ಇಲ್ಲ. ವಿದ್ಯಾ ಸಂಜೆಯಾಗುವುದನ್ನೇ ಕಾಯುತ್ತಿರುವಳು. ಇಂದು ಅವಳಿಗೆ ಕೆಲಸ ಮಾಡಲು ಆಗುತ್ತಿರಲಿಲ್ಲ. 6 ಗಂಟೆಗೆ ಅವಳು ಆಫೀಸಿನಿಂದ ಹೊರಟಳು. ಕುಮಾರ್‌ಇದ್ದ ಹೋಟೆಲ್‌ತಲುಪಲು 15 ನಿಮಿಷ ಬೇಕಾಯಿತು. ತಾನು  ಜೀವನದ ಪರೀಕ್ಷೆ ಕೊಡುತ್ತಿದೇನೇನೋ ಎನ್ನುವ ಹಾಗೆ ಅವಳ ಕಾಲುಗಳು ನಡುಗುತ್ತಿದ್ದವು. ಅವಳು ಕುಮಾರನ ಕೋಣೆಯ ಬಾಗಿಲು ತಟ್ಟಿದಳು. ಬಾಗಿಲು ತೆರೆದ ಕುಮಾರ್‌, ಮೊದಲಿಗಿಂತ ಈಗ ದಪ್ಪಗಾಗಿದ್ದ. ದಪ್ಪನೆಯ ಮೀಸೆ ಬಿಟ್ಟಿದ್ದ. ಒಂದೆರಡು ಕೂದಲು ಬೆಳ್ಳಗಾಗಿದ್ದವು. ನೀಲಿ ಜೀನ್ಸ್ ಮತ್ತು ಬಿಳಿ ಶರ್ಟಿನಲ್ಲಿ ಬಹಳ ಚೆನ್ನಾಗಿ ಕಾಣುತ್ತಿದ್ದ.

ಕುಮಾರನೇ ಮಾತು ಆರಂಭಿಸಿದ, “ಹೇಗಿದಿಯಾ? ತುಂಬಾ ಸಣ್ಣಗಾಗಿದೀಯಾ……. ಯಾಕೆ ಅಷ್ಟು ಕೆಲಸ ಮಾಡುತ್ತೀಯಾ?”

ವಿದ್ಯಾ ನಕ್ಕಳು, “ಕೆಲಸ ಏನೂ ಜಾಸ್ತಿ ಮಾಡಲ್ಲ. ಸಣ್ಣಗಾಗುವುದು ಒಳ್ಳೆಯದು…”

ಕುಮಾರನೂ ನಕ್ಕ “ಅದೇನೋ ಸರಿ, ನೀನು ಮೀನಾ ಮತ್ತು ವೀಣಾರನ್ನು ನೋಡಬೇಕು ಎಷ್ಟು ದಪ್ಪಗಾಗಿದ್ದಾರೆ ಅಂದರೆ ಕುಳಿತುಕೊಳ್ಳೋದು ಏಳೋದು ಕೂಡಾ ಕಷ್ಟ ಆಗಿದೆ.”

ಮೀನಾ ಮತ್ತು ವೀಣಾ ಅವಳ ನಾದಿನಿಯರು. ಇಬ್ಬರೂ ಅವಳಿಗಿಂತ ಚಿಕ್ಕವರು. ಇಬ್ಬರೂ ಅವಳ ಜೀವನವನ್ನು ನರಕ ಮಾಡುವುದರಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು.“ಕುಳಿತುಕೋ ವಿದ್ಯಾ, ಏನು ತರಿಸಲಿ ಹೇಳು? ಕಾಫಿನೋ ಜ್ಯೂಸೋ?”

“ಕಾಫಿ,” ವಿದ್ಯಾ ನಿಸ್ಸಂಕೋಚವಾಗಿ ಹೇಳಿದಳು.

ವಿದ್ಯಾ ಕಾಫಿ ಕುಡಿದ ಮೇಲೆ ಕೇಳಿದಳು, “ಇಷ್ಟು ದಿನಗಳ ಮೇಲೆ ನನ್ನ ನೆನಪು ಹೇಗೆ ಬಂತು? ಏನಾದರೂ ವಿಶೇಷ ಕಾರಣ?”

ಕುಮಾರ ತಡೆದು ಹೇಳಿದ, “ವಿಷಯ ಇದೆ. ಆದರೆ ಹೇಗೆ ಹೇಳೋದು ಅರ್ಥ ಆಗ್ತಿಲ್ಲ.”

ವಿದ್ಯಾ ಅಚ್ಚರಿಯಿಂದ ಅವನನ್ನೇ ನೋಡಿದಳು. ಕುಮಾರ ನಿಧಾನವಾಗಿ ನುಡಿದ, “ನೋಡು ವಿದ್ಯಾ, 4 ವರ್ಷಗಳಿಂದ ನಾವು ಬೇರೆ ಬೇರೆ ಇದ್ದೇವೆ. ನಾವು ಒಟ್ಟಿಗೆ ಇದ್ದದ್ದಾದರೂ ಯಾವಾಗ ಅಂತ ನೀನು ಕೇಳಬಹುದು. ಕೆಲವು ದಿನಗಳಿಂದ ಅಮ್ಮ ನನ್ನನ್ನು ಮತ್ತೆ ಮದುವೆ ಮಾಡಿಕೋ ಅಂತಿದ್ದಾಳೆ….” ಕುಮಾರ್‌ ಅವಳ ಮುಖವನ್ನೇ ನೋಡಿದ.

ಅವಳು ಶಾಂತವಾಗಿದ್ದಳು, “ನಿನಗೆ ಗೊತ್ತಲ್ಲಾ ನನಗೀಗ ಗೆಜೆಟೆಡ್‌ ಆಫೀಸರ್‌ ಹುದ್ದೆ ಸಿಕ್ಕಿದೆ ಅಂತ. ಸೆಟಲ್ ಆಗಿದಿನಿ ಈಗ. ಮೀನಾ, ವೀಣಾರದು ಆಗಲೇ ನಿಶ್ಚಿತಾರ್ಥ ಆಗಿತ್ತು. ಮನೆ ನೋಡಿಕೊಳ್ಳುವವರು ಯಾರೂ ಇಲ್ಲ. ಜೀವನ ಸಂಗಾತಿ ಇಲ್ಲದೆ ಜೀವನದ ಗಾಡಿ ನಡೆಸೋದು ಕಷ್ಟ ಅಂತ ನನಗೂ ಅನ್ನಿಸ್ತಿದೆ.” ಕುಮಾರ ಮುಂದುವರಿಸಿ ಹೇಳಿದ.

ವಿದ್ಯಾಳ ಮುಖ ಬಿಳಿಚಿಕೊಂಡಿತು. ಅವಳೀಗ ಬಿದ್ದು ಬಿಡ್ತಾಳೇನೋ ಅನ್ನುವಂತಿತ್ತು. ಕಮಾರ್‌ಮತ್ತೆ ಮದುವೆಯಾಗಲು ಇಷ್ಟಪಡ್ತಿದಾನೆ. ಅಂದರೆ ಅವನು….ಕುಮಾರನಿಗೆ ಅವಳ ಮನದ ಮಾತು ಅರ್ಥವಾಯಿತು.,

“ ನಿನಗೂ ಒಬ್ಬ ಸಂಗಾತಿಯ ಅವಶ್ಯಕತೆ ಇದೆ ವಿದ್ಯಾ. ನೀನು ಮೊದಲಿದ್ದ ಹಾಗೆ ಇದ್ದೀಯ. ಬದಲಾಗಿಲ್ಲ, ನಾವು ವಿಚ್ಛೇದನ ಪಡೆದರೆ ಇಬ್ಬರೂ ಹೊಸ ಜೀವನ ಶುರು ಮಾಡಬಹುದು.”

ವಿದ್ಯಾಳ ಕಣ್ಣುಗಳಲ್ಲಿ ಬಿಸಿ ಕಣ್ಣೀರು ತುಂಬಿಕೊಂಡು ಮುಖ ಬಿಸಿಯಾದಂತಾಯಿತು. ಮುಖ ಮುಚ್ಚಿಕೊಂಡು ಕಣ್ಣೀರು ಒರೆಸಿಕೊಂಡಳು. ಕುಮಾರನ ಎದುರಿಗೆ ತನ್ನ ದೌರ್ಬಲ್ಯ ತೋರಿಸಬಾರದು.

ಕುಮಾರನ ದನಿಯಲ್ಲಿ ವಿನಯವಿತ್ತು. “ಐ ಯಾಮ್ ಸಾರಿ ವಿದ್ಯಾ, ನಿನಗಿ  ದುಃಖ ಕೊಡಲು ನನಗಿಷ್ಟವಿಲ್ಲ. ಆದರೆ ಇದನ್ನು ಬಿಟ್ಟರೆ ಬೇರೆ ದಾರಿಯೂ ಇಲ್ಲ.  .”

ವಿದ್ಯಾ ಬಲಂತದ ನಗೆ ಬೀರಿದಳು, “ನೀವು ಮೊದಲ ಸಲ ನನಗೆ ದುಃಖವಾಗಬಾರದೆಂದು ಯೋಚಿಸಿದಿರಿ. ನನಗೆ ತುಂಬಾ ಸಂತೋಷಾಗುತ್ತಿದೆ. ಹೇಳಿ, ಎಲ್ಲಿ ಸಹಿ ಮಾಡಲಿ?”

ಕುಮಾರ ಅದಕ್ಕೆ, “ನಾವು ನಾಳೆ ವಕೀಲರ ಹತ್ತಿರ ಹೋಗೋಣ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ತಗೋಳೋದು ಸುಲಭ. ಕೋರ್ಟು ಕಛೇರಿ ಅಂತ ಅಲೆಯುವುದು ತಪ್ಪುತ್ತೆ.”

ವಿದ್ಯಾ ಎದ್ದಳು. “ಸರಿ, ನಿಮಗೆ ಹೇಗೆ ಸರಿ ಅನ್ನಿಸುತ್ತೋ ಹಾಗೆ ಆಗಲಿ, ನಾನೀಗ ಹೊರಡಲಾ?”

ಕುಮಾರ್‌ ಅವಳನ್ನು ತಡೆದ, “ಕೂತುಕೋ, ಇಷ್ಟು ಅವಸರ ಏನು? ಮನೇಲಿ ಏನಾದರೂ ಕೆಲಸ ಇದೆಯಾ?”

“ಅಂತಹ ವಿಶೇಷ ಏನೂ ಇಲ್ಲ. ಹೋಗಿ ಸ್ವಲ್ಪ ಹೊತ್ತು ಟಿವಿ ನೋಡ್ತೀನಿ. ಆಮೇಲೆ ಏನಾದರೂ ಓದುತ್ತಾ ಮಲಗ್ತೀನಿ……. ಅಷ್ಟೇ ನನ್ನ ದಿನಚರಿ.”

“ನೀನು ಎಂದೂ ಇನ್ನೊಂದು ಮದುವೆ ಬಗ್ಗೆ ಯೋಚಿಸಲಿಲ್ಲವೇ?”

“ನಿಜ ಹೇಳುವುದಾದರೆ ಮೊದಲನೆ ಮದುವೆಯದು ಎಷ್ಟು ಕೆಟ್ಟ ಅನುಭವ ಆಗಿದೆಯೆಂದರೆ ಇನ್ನೊಂದು ಮದುವೆ ಹೆಸರು ಕೇಳಿದರೇ ನಡುಕ ಬರುತ್ತೆ.”

“ನಾನು ಅಷ್ಟು ಕೆಟ್ಟನಾಗಿದ್ದೆನಾ?” ಕುಮಾರ್‌ ವಿಸ್ಮಯದಿಂದ ಕೇಳಿದ.

“ಹೌದು, ನನ್ನೊಂದಿಗಂತೂ ಎಂದೂ ಒಳ್ಳೆಯವರಾಗಿ ನಡೆದುಕೊಳ್ಳಲಿಲ್ಲ,” ವಿದ್ಯಾ ಸ್ಪಷ್ಟವಾಗಿ ಹೇಳಿದಳು.

“ನಿಜವಾಗಲೂ? ಆಗ ನನ್ನ ಬುದ್ಧಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಅನ್ನುವುದು ನಿನಗೆ ಗೊತ್ತಾ? ನೀನು ಕೆಲಸ ಮಾಡ್ತಿದ್ದೆ. ನಾನು ನಿರುದ್ಯೋಗಿಯಾಗಿದ್ದೆ. ಅಷ್ಟೊಂದು ಓದಿದ್ದರೂ ಪ್ರಯೋಜನವಾಗಲಿಲ್ಲ. ಅಪ್ಪ ಹೇಳಿದರೂಂತ ನಾನು ಮದುವೆಯಾದೆ. ಆದರೆ ಜವಾಬ್ದಾರಿ ಹೊರಲು ಮನಸ್ಸನ್ನು ಸಿದ್ಧಗೊಳಿಸಿರಲಿಲ್ಲ.”

“ನಿಮಗೇನಾದರೂ ತೊಂದರೆ ಇದ್ದರೆ ನನ್ನ ಜೊತೆ ಹಂಚಿಕೊಳ್ಳಬಹುದಿತ್ತಲ್ಲ. ನೀವು ನನ್ನ ಜೊತೆ ಎಂದೂ ಮಾತಾಡಲೇ ಇಲ್ಲ,” ವಿದ್ಯಾ ದೂರಿದಳು.

“ಹೌದು, ತಪ್ಪು ನನ್ನದೇ ಆಗಿತ್ತು. ಆದರೇನು ಮಾಡಲು ಸಾಧ್ಯವಿತ್ತು? ಆಗ ಮನದಲ್ಲೇನೋ ಗೊಂದಲವಿತ್ತು.”

“ಚೆನ್ನಾಗಿಲ್ಲದಿರುವ ಹುಡುಗಿ ಜೊತೆ ಮದುವೆ ಮಾಡಿಸಿದರು ಅಂತ ನಿಮಗೆ ಅನಿಸಿರಬಹುದು,” ವಿದ್ಯಾ ಮೆಲುವಾಗಿ ನುಡಿದಳು.

“ನನಗೆ ಎಂದೂ ಹಾಗನ್ನಿಸಲಿಲ್ಲ. ನಂಬು….. ನನಗೆ ಯಾವಾಗಲೂ ಅನಿಸುತ್ತಿತ್ತು, ನನ್ನ ಸಂಗಾತಿ ಬೇರೆಯವರಿಗಿಂತ ಭಿನ್ನವಾಗಿರಬೇಕು, ಗ್ರೇಸ್‌ಫುಲ್ ಆಗಿರಬೇಕು. ನೀಟಾಗಿ ಡ್ರೆಸ್‌ ಮಾಡಿಕೋಬೇಕು,” ಕುಮಾರ್‌ ಮಾತು ನಿಲ್ಲಿಸಿದ. ವಿದ್ಯಾ ಅವನ ಮುಖ ನೋಡಿದಳು. ಕುಮಾರ್‌ ಗೊಂದಲದಿಂದ ಸುಮ್ಮನಾದ.

ನಂತರ, “ನೀನು ಚೆನ್ನಾಗಿಲ್ಲ ಅಂತ ಯಾರು ಹೇಳಿದರು ವಿದ್ಯಾ? ನೀನು ಚೆನ್ನಾಗಿ ಕಾಣಿಸ್ತಿದೀಯಾ. ನಿನ್ನ ಸೌಂದರ್ಯ ಕಾಣಿಸದ ಹಾಗೆ ನೀನು ಇರ್ತೀಯ ಅಷ್ಟೇ ಮೊದಲನೇ ದಿನ ನಾನು ನಿನ್ನನ್ನು ನೋಡಲು ಬಂದಿದ್ದಾಗ ನೀನು ನಿಮ್ಮ ಮನೆ ಮೇಲೆ ನಿಂತಿದ್ದೆ. ಆಗ ತಾನೇ ಸ್ನಾನ ಮಾಡಿದ್ದೆ ಅನ್ನಿಸುತ್ತೆ. ಗುಲಾಬಿ ಬಣ್ಣದ ಚೂಡಿದಾರ್‌ ಹಾಕಿಕೊಂಡಿದ್ದೆ. ಬಿಚ್ಚಿದ ಕೂದಲು, ಮುಖದ ಮೇಲೆ ನೀರಿನ ಹನಿಗಳು ಹೊಳೆಯುತ್ತಿದ್ದವು. ನಾನು ನಿನ್ನ ನೋಡಿದ ತಕ್ಷಣ ಇಷ್ಟಪಟ್ಟೆ. ಆದರೆ ಆಮೇಲೆ ನೀನೆಂದೂ ಆ ರೂಪದಲ್ಲಿ ನನ್ನ ಎದುರು ಬರಲಿಲ್ಲ. ಯಾವಾಗಲೂ ಕೂದಲನ್ನು ಬಿಗಿಯಾಗಿ ಕಟ್ಟಿಕೊಂಡಿರುತ್ತಿದ್ದೆ. ಮಾಸಲು ಬಣ್ಣದ ಉಡುಪು ಹಾಕಿಕೊಳ್ಳುತ್ತಿದ್ದೆ.”

ವಿದ್ಯಾಳ ಮುಖ ಕೆಂಪಾಯಿತು. ಈ ವಯಸ್ಸಿನಲ್ಲೂ ಅವಳು ನಾಚಿಕೊಳ್ಳುವುದು ಸಾಧ್ಯವಿದೆ ಅನ್ನುವುದು ಅವಳಿಗೇ ಗೊತ್ತಿರಲಿಲ್ಲ.

ಕುಮಾರ್‌ ಮಾತನಾಡುತ್ತಲೇ ಇದ್ದ, “ನಿನಗ್ಗೊತ್ತಾ, ಮದುವೆ ದಿನ ನಾನು ನಿನಗಾಗಿ ಕಿತ್ತಲೆ ಬಣ್ಣದ ಸೀರೆ ಕೊಂಡುಕೊಂಡಿದ್ದೆ. ಆದರೆ ಕೊಡಲಾಗಲಿಲ್ಲ. ಅಮ್ಮ ಮತ್ತು ತಂಗಿಯರಿಗೆ ಸೀರೆ ತೋರಿಸಿದೆ. ಅವರು ವಿದ್ಯಾ ಈ ಬಣ್ಣದ ಸೀರೆ ಉಡ್ತಾಳಾ ಎಂದು ನಗತೊಡಗಿದರು. ಆ ಸೀರೆಯನ್ನು ನಾನಿನ್ನೂ ಇಟ್ಟುಕೊಂಡಿದ್ದೇನೆ.”

“ನೀವು ಯಾಕೆ ನನಗೆ ಕೊಡಲಿಲ್ಲ?” ವಿದ್ಯಾಳ ದನಿ ಭಾರವಾಗಿತ್ತು.

ಕುಮಾರನ ಬಳಿ ಉತ್ತರ ಇರಲಿಲ್ಲ. ಇದ್ದಕ್ಕಿದ್ದಂತೆ ಅವನು ಹೇಳಿದ, “ವಿದ್ಯಾ, ಹಳೇ ಸಂಬಂಧದ ಹೆಸರಲ್ಲಿ ಆಗಲಿಕೆ ಇತ್ತು ನೀನು ನನ್ನ ಜೊತೆ ಊಟ ಮಾಡಲು ಬರ್ತೀಯಾ?” ವಿದ್ಯಾ ಯೋಚಿಸತೊಡಗಿದಳು. ಇದರಲ್ಲಿ ತಪ್ಪೇನಿದೆ? ಒಂದು ಸಂಜೆಯನ್ನು ಅವಳು ತನಗಿಷ್ಟ ಬಂದ ಹಾಗೆ ಕಳೆಯಬಹುದು. ವರ್ಷಗಳ ನಂತರ ಅವಳು ಯಾರೊಂದಿಗೋ ಮನಬಿಚ್ಚಿ ಮಾತನಾಡುತ್ತಿದ್ದಾಳೆ. ಈ ಸಂಜೆಯನ್ನು ತಾನು ಕಳೆದುಕೊಳ್ಳಬಾರದು. ವಿದ್ಯಾ ಅಲ್ಲಿಂದಲೇ ಮನೆಗೆ ಫೋನ್‌ ಮಾಡಿ ರಾತ್ರಿ ತಾನು ಊಟಕ್ಕೆ ಬರುವುದಿಲ್ಲವೆಂದು ತಾಯಿಗೆ ಹೇಳಿದಳು. ಯಾವಾಗಿನಂತೆ ಅವಳು ಸತ್ಯನ್ನೇ ಹೇಳಿದಳು. ಕುಮಾರ್‌ ಬಂದಿದ್ದಾರೆ ತಾನು ಅವರ ಜೊತೆ ಹೊರಗೆ ಹೋಗುತ್ತಿದ್ದೇನೆ.

ತಾಯಿಗೆ ಕೋಪ ಬಂತು, “ಅವನ ಜೊತೆನಾ? ಅವನಿಗೆ ಏನು ಬೇಕಂತೆ? ಅವನ ಜೊತೆ ಹೋಗಬೇಕಾದ್ದಿಲ್ಲ. ಅಡುಗೆ ಮಾಡಿದೀನಲ್ಲ ಅದನ್ನೇನು ಮಾಡೋದು?”

ತಾಯಿ ತನಗೆ ಈ ವಯಸ್ಸಿನಲ್ಲೂ ಸ್ವತಃ ನಿರ್ಣಯ ತೆಗೆದುಕೊಳ್ಳಲು ಬಿಡುವುದಿಲ್ಲವೆಂದು ವಿದ್ಯಾಗೆ ಅವಳು ಬರುವಂತಾಯಿ. ಅವಳು ಸಂಭಾಳಿಸಿಕೊಂಡು, “ನಾಳೆ ಬೆಳಗ್ಗೆ ತಿನ್ನಬಹುದು, ಅಮ್ಮಾ, ನಾನು ಬರೋದು ಹೊತ್ತಾಗುತ್ತೆ. ಹೊರಗಿನ ಗೇಟಿಗೆ ಬೀಗ ಹಾಕಬೇಡ,” ಎಂದಳು.

ಕುಮಾರ್‌ ವಿದ್ಯಾಳನ್ನು ಚೈನೀಸ್‌ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋದ. ವಿದ್ಯಾಗೆ ಚೈನೀಸ್‌ ತಿನಿಸುಗಳು ಇಷ್ಟ. ಸೂಪ್‌, ಫ್ರೈಡ್ ರೈಸ್‌ ತಿಂದು ಹೊರಬಂದರು. ನಡೆದು ಬರುತ್ತಾ ಇರುವಾಗ ಕಾಫಿ ಕುಡಿಯಬೇಕೆನಿಸಿ ಅಲ್ಲೇ ಇದ್ದ ಹೋಟೆಲಿಗೆ ಹೋದರು. ಕಾಫಿ ಗುಟುಕರಿಸುತ್ತಲೇ ವಿದ್ಯಾಗೆ ಕಟ್ಟಿದ ಗಂಟಲು ಸರಿಯಾದ ಹಾಗಾಯಿತು. ವರ್ಷಗಳ ನಂತರ ಅವಳು ಸ್ವಚ್ಛಂದವಾಗಿದ್ದಾಳೆ. ಕುಮಾರ್‌ ಅವಳಿಗೆ ತನ್ನ ಕೆಲಸದ ಬಗ್ಗೆ ಹೇಳತೊಡಗಿದ ಅವನ ಮಾತಿನಿಂದ ಅವನು ಬಹಳ ಒಳ್ಳೆಯ ಕೆಲಸದಲ್ಲಿದ್ದಾನೆಂದು ತಿಳಿಯಿತು.

“ನಾನು ರಾತ್ರಿ ತಡವಾಗಿ ಮನೆಗೆ ಬಂದಾಗ ಬಹಳ ಒಂಟಿತನ ಕಾಡುತ್ತೆ. ಒಬ್ಬನೇ ಟಿವಿ ನೋಡೋದು ನನಗಿಷ್ಟವಿಲ್ಲ. ಜೊತೆಗೊಬ್ಬರು ಇದ್ದರೆ ಅದೇ ಬೇರೆ ಮಾತು. ನನ್ನ ಸ್ನೇಹಿತರೆಲ್ಲರೂ ಮದುವೆಯಾಗಿದ್ದಾರೆ. ರಾತ್ರಿ ವೇಳೆ ನಾನು ಅವರ ಮನೆಗಳಿಗೆ ಹೋಗಲಾಗುವುದಿಲ್ಲ.”

“ಹಾಗಾದರೆ ನೀವು ಒಬ್ಬರೇ ಯಾಕಿರುತ್ತೀರಿ? ಅಪ್ಪ ಅಮ್ಮನ ಜೊತೆ ಯಾಕಿಲ್ಲ?” ವಿದ್ಯಾ ಕೇಳಿದಳು.

“ಅದಕ್ಕೆ ಎರಡು ಕಾರಣ ಇದೆ. ನನಗೆ ಅಮ್ಮನ ಸ್ವಭಾವ ಇಷ್ಟವಿಲ್ಲ. ಅವರು ಎಲ್ಲಾ ವಿಷಯದಲ್ಲೂ ಬಾಯಿ ಹಾಕ್ತಾರೆ. ಇನ್ನೊಂದು ಕಾರಣ ಅಮ್ಮನಿಗೆ ತಮ್ಮ ಮನೆಯಲ್ಲೇ ಹೆಚ್ಚು ಸುಖ ಸಿಗುತ್ತೆ ಅನ್ನೋ ಭಾವನೆ. ತಮ್ಮನಿಗೂ ಮದುವೆಯಾಗಿಲ್ಲ. ಅವನು ದುಬೈಯಲ್ಲಿ ಕೆಲಸ ಮಾಡಲು ಹೋಗಿದ್ದಾನೆ. ಮೀನಾ ಗಂಡನ ಮನೇಲಿ ಇದ್ದಾಳೆ. ನಾನು ತಿಂಗಳಿಗೆ 1 ಸಲ ಅವರನ್ನು ನೋಡಲು ಹೋಗುತ್ತೇನೆ. ಕೆಲಸ ಇದ್ದರೆ ಉಳ್ಕೋತೀನಿ..”

“ನೀವು ಹುಡುಗಿ ನೋಡಿದ್ದೀರಾ?” ವಿದ್ಯಾ ಕೇಳಿದಳು. ಕುಮಾರ್‌ ತಲೆ ಅಲ್ಲಾಡಿಸಿದ.

“ಇಲ್ಲ… ಅಮ್ಮ ಮತ್ತು ಮೀನಾ ನೋಡಿದ್ದಾರೆ. ವರ್ಷದ ಹಿಂದೆ ಅವಳು ವಿಚ್ಛೇದನ ತೆಗೆದುಕೊಂಡಿದ್ದಾಳೆ. ನಾನೆಲ್ಲಿಂದ ಹುಡುಕಲಿ ಹುಡುಗೀನಾ? ನನ್ನದು ನಿನ್ನ ಸ್ಥಿತಿಯ ಹಾಗೇ ಇದೆ. ಒಬ್ಬ ಹುಡುಗಿ ಒಮ್ಮೆ ಇಷ್ಟವಾಗಿದ್ದಳು. ಗುಲಾಬಿ ಬಣ್ಣದ ಚೂಡಿದಾರ್‌ಹಾಕಿದಾಕೆ. ಬಹುಶಃ ಆಗ ಪರಿಸ್ಥಿತಿ ಸರಿಯಾಗಿರಲಿಲ್ಲ. ಸರಿ ಬಿಡು. ಇವತ್ತು ನಿನ್ನ ಜೊತೆ ಹೀಗೆ ಮಾತಾಡ್ತಿರೋದು ಬಹಳ ಹಿತವಾಗಿದೆ. ವಿದ್ಯಾ, ಜೀವನದಲ್ಲಿ ಬಹುಶಃ ಮೊದಲ ಬಾರಿ ನಾವಿಬ್ಬರೂ ಇಷ್ಟು ಹೊತ್ತಿನ ತನಕ ಮನಬಿಚ್ಚಿ ಮಾತನಾಡಿದೀವಿ ಅಲ್ವಾ?”

“ಹೌದು…” ವಿದ್ಯಾಗೆ ಇಷ್ಟೇ ಹೇಳಲು ಸಾಧ್ಯವಾಯಿತು. ಅವಳು ಸ್ವಲ್ಪ ಯೋಚಿಸಿ ಹೇಳಿದಳು, “ನನ್ನ ಮನಸ್ಸಿನಲ್ಲಿ ಒಂದು ನೋವಿದೆ. ನಿಮ್ಮಲ್ಲಿ ಬಹಳ ಕೆಟ್ಟ ವಿಷಯ ಯಾವುದು ಗೊತ್ತಾ? ಎಲ್ಲರೂ ನನಗೆ ಹೇಳದೆ ಮೈಸೂರಿಗೆ ಹೋಗಿದ್ದು ನನಗೆ ಬೇಜಾರಿಲ್ಲ. ಆದರೆ ನೀವು ನನ್ನ ಪರ ನಿಲ್ಲಲಿಲ್ಲ. ನೀವು ಎಲ್ಲರ ಜೊತೆ ಹೊರಟು ಹೋದಿರಿ. ನನಗೆ ಎಷ್ಟು ದುಃಖವಾಯಿತೆಂದರೆ ಆತ್ಮಹತ್ಯೆ  ಮಾಡಿಕೊಳ್ಳೋಣವೆನಿಸಿತು. ಅವತ್ತೇ ನಾನು ನನ್ನ ಮತ್ತು ನಿಮ್ಮ ದಾರಿ ಬೇರೆ ಬೇರೆ ಎಂದು ತೀರ್ಮಾನಿಸಿದೆ.”

ಕುಮಾರ್‌ ಆಶ್ಚರ್ಯದಿಂದ ಅವಳ ಮುಖ ನೋಡಿದ, “ಆದರೆ ನಾನು ಅವತ್ತೇ ವಾಪಸ್‌ ಬಂದೆ. ನಾನು ಹೋಗುವ ಪ್ಲಾನೇ ಇರಲಿಲ್ಲ. ಆ ದಿನಗಳಲ್ಲಿ ನೀನು ಆಫೀಸಿನಿಂದ ತಡವಾಗಿ ಬರುತ್ತಿದ್ದೆ. ಅದಕ್ಕೆ ನಾನು ಮರುದಿನ ಇಂಟರ್ ವ್ಯೂಗೆ ತಯಾರಾಗಲು ಸ್ನೇಹಿತನ ಮನೆಗೆ ಹೋಗೋಣ ಎಂದುಕೊಂಡೆ.

“ನಾನು ವಾಪಸು ಬಂದಾಗ ನೀನು ತವರಿಗೆ ಹೋಗಿದೀಯ ಅಂತ ಪಕ್ಕದ ಮನೆಯವರು ಹೇಳಿದರು. ಅದ್ಹೇಗೆ ನೀನು ಹೋದೆ ಅಂತ ತುಂಬ ಕೋಪ ಬಂತು. ಆದಕ್ಕೆ 2 ದಿನ ನಿನಗೆ ಫೋನ್‌ ಮಾಡಲಿಲ್ಲ. ಅಮೇಲೆ ಫೋನ್‌ ಮಾಡಿದಾಗ ನೀನು ಒರಟಾಗಿ ಮಾತಾಡಿದೆ. ನಾನು ಹೇಳಿದ್ದು ಕೂಡ ನಿನ್ನ ಮೇಲೆ ಪ್ರಭಾವ ಬೀರಲಿಲ್ಲ.”

“ನೀವು ಆವತ್ತು ವಾಪಸ್‌ಬಂದಿದ್ದಿರಾ?” ವಿದ್ಯಾಳ ಕಣ್ಣುಗಳು ಅಗಲವಾದವು.

“ಹೌದು, ಬೇಕಾದರೆ ಪಕ್ಕದ ಮನೆಯವರನ್ನು ಕೇಳು. ರಾತ್ರಿ ನಾನು ಅವರ ಮನೆಯಲ್ಲೇ ಊಟ ಮಾಡಿದೆ.”

ವಿದ್ಯಾ ಸುಮ್ಮನಾದಳು. ಇಬ್ಬರ ನಡುವೆ ತಪ್ಪು ಅಭಿಪ್ರಾಯದ ಎಷ್ಟು ದೊಡ್ಡ ಗೋಡೆ ಇತ್ತೆಂಬುದು ಬಹುಶಃ ಇಬ್ಬರಿಗೂ ಗೊತ್ತಿರಲಿಲ್ಲ. ಮೌನವಾಗಿ ಕಾಫಿ ಕುಡಿದು ಹೊರಬಂದರು. ಇಬ್ಬರೂ ತಂತಮ್ಮ ವಿಚಾರಗಳಲ್ಲಿ ಮುಳುಗಿದ್ದರು. ಇಂದು ಎಷ್ಟು ಚೆನ್ನಾಗಿ ಕಳೆಯಿತು. ನಾಳೆ ಇಬ್ಬರೂ ಬೇರೆ ಬೇರೆ ದಾರಿಗಳ ಪಯಣಿಗರಾಗುತ್ತೇವೆಂದು ವಿದ್ಯಾ ಯೋಚಿಸುತ್ತಿದ್ದಳು.

ಕುಮಾರ್‌ ನಿಧಾನವಾಗಿ ನಡೆಯುತ್ತಾ ವಿದ್ಯಾಳ ತೋಳಿಗೆ ತೋಳು ತಾಗಿಸಿದ. ಅವನ ಮುಖದ ಮೇಲೆ ತೆಳುವಾದ ನಗೆ ಮೂಡಿತ್ತು. ವಿದ್ಯಾಳೂ ಕೂಡ ಮುಗುಳ್ನಕ್ಕಳು.

“ನಾವಿಬ್ಬರೂ ನಮ್ಮ ತಪ್ಪು ವಿಚಾರಗಳನ್ನು ದೂರ ಮಾಡಬೇಕೆಂದು ಮನಸು ಮಾಡಿರುವಾಗ ನೀನು ನಿನ್ನ ಹಳೆಯ ರೂಪವನ್ನು ನೋಡುವ ಅವಕಾಶ ನನಗೆ ಕೊಡಬಾರದೇಕೆ ಎಂದು ಯೋಚಿಸುತ್ತಿದ್ದೇನೆ.” ವಿದ್ಯಾ ತಲೆಯೆತ್ತಿ ಅವನನ್ನು ನೋಡಿದಳು. ಅಲ್ಲೇ ಇದ್ದ ಸಿಮೆಂಟ್‌ ಬೆಂಚಿನ ಮೇಲೆ ಕುಳಿತಳು ವಿದ್ಯಾ. ಕುಮಾರ್‌ ಅವಳ ಕನ್ನಡಕ ತೆಗೆದು ಪಕ್ಕದಲ್ಲಿಟ್ಟ. ಕೂದಲಿಗೆ ಹಾಕಿದ್ದ ಕ್ಲಿಪ್‌ತೆಗೆದು ಕೂದಲನ್ನು ಚದುರಿಸಿದ. ವಿದ್ಯಾ ಮಾತಾಡದೇ ನೋಡುತ್ತಿದ್ದಳು ಕುಮಾರ್‌ ತನ್ನ ಮುಖವನ್ನು ಅವಳ ಮುಖದ ಸಮೀಪ ತಂದ. ಬಾಗಿದ ಅವಳ ಮುಖನ್ನು ಬೊಗಸೆಯಲ್ಲಿ ಹಿಡಿದು ಮೇಲೆತ್ತಿ ಅವಳನ್ನೇ ನೋಡತೊಡಗಿದ.

ವಿದ್ಯಾ ಯಂತ್ರದಂತೆ ಅವನನ್ನೇ ನೋಡತೊಡಗಿದಳು. ಮನಸ್ಸು ಆರ್ದ್ರವಾಯಿತು. ಆ ಕ್ಷಣವನ್ನು ಅವಳು ತನ್ನ ಮನದಲ್ಲಿ ಬಂಧಿಸಿಟ್ಟುಕೊಂಡಳು. ಇದೇ ಅವಳ ಪ್ರೇಮದ ಆಸ್ತಿಯಾಗುತ್ತದೆ. ನಾಳೆಯಿಂದ ಅವಳು ತನ್ನ ಹಳೆಯ ಜೀವನದಲ್ಲಿ ಕೈದಿಯಾಗುತ್ತಾಳೆ.

ಕುಮಾರ ಪಿಸುಗುಟ್ಟಿದ “ನೀನೆಷ್ಟು ಚೆನ್ನಾಗಿ ಕಾಣಿಸ್ತಿದೀಯ…… ಹೀಗೆ ಇರು!”

ಅವನ ಕೈ ಮುಖದಿಂದ ಜಾರಿ ರೇಶಿಮೆಯಂತೆ ನಯವಾಗಿದ್ದ ಕೂದಲನ್ನು ಸವರತೊಡಗಿತು. ವಿದ್ಯಾ ಕಣ್ಣುಮುಚ್ಚಿಕೊಂಡಳು. ಕುಮಾರನ ದನಿ ಮೆಲುವಾಗಿತ್ತು. “ನೀನು ನನ್ನ ಜೀವನದಲ್ಲಿ ಬಂದಾಗ ನಾನು ನಿನಗೇನೂ ಕೊಡಲಾಗಲಿಲ್ಲ, ಇದು ನನ್ನನ್ನು ಚುಚ್ಚುತ್ತಿದೆ. ಇಂದು ಕೊಡುವ ಸ್ಥಿತಿಯಲ್ಲಿದ್ದೇನೆ. ಆದರೆ ನೀನು ಬಹಳ ದೂರ ಹೋಗಿಬಿಟ್ಟಿದೀಯ.”

ದೂರದಲ್ಲೆಲ್ಲೋ ಗಂಟೆ ಬಾರಿಸಿದಾಗ ವಿದ್ಯಾ ಎಚ್ಚೆತ್ತಳು. ಕುಮಾರನ ಹೋಟೆಲಿನಲ್ಲಿ ತನ್ನ ಗಾಡಿ ನಿಲ್ಲಿಸಿದ್ದಳು. ಅವಳು ಬಹಳ ಆತ್ಮ ವಿಶ್ವಾಸದಿಂದ ಗಾಡಿ ನಡೆಸುತ್ತಾ ಹೊರಟಳು. ನಾಳೆ ಮಧ್ಯಾಹ್ನ ವಕೀಲರ ಬಳಿ ಹೊಗಲು ಬರುವುದಾಗಿ ಹೇಳಿದಳು.

ತಾಯಿ ಎಂದಿನಂತೆ ರಾತ್ರಿ ತಡವಾಗಿ ಬರುವ ಟಿವಿ ಧಾರಾವಾಹಿಯನ್ನು ನೋಡುತ್ತಿದ್ದಳು. ವಿದ್ಯಾ ಬರುತ್ತಲೇ ಕಟುವಾಗಿ, “ನೀನು ರಾತ್ರಿ ಬರೋದೇ ಇಲ್ಲಾಂತ ಅಂದುಕೊಂಡೆ.”

ವಿದ್ಯಾ ಬಹಳ ತಣ್ಣಗಿನ ದನಿಯಲ್ಲಿ ಉತ್ತರಿಸಿದಳು, “ಬರದೇ ಇದ್ದರೂ ಏನಾಗ್ತಿತ್ತಮ್ಮಾ? ನಾನು ನನ್ನ ಗಂಡನ ಜೊತೆ ತಾನೆ ಇದ್ದದ್ದು?”

ತಾಯಿ ಮೆತ್ತಗಾದಳು, “ನಾನು ನಿನಗೆ ಕೆಟ್ಟದಾಗಲಿ ಅಂತ ಬಯಸಲಿಲ್ಲ. ನೀನು ಹೇಗಿದೀಯ ಅಂತ ಇಷ್ಟು  ವರ್ಷಗಳಿಂದ ಕೇಳಲಿಲ್ಲ. ಈಗ ಯಾಕೆ ಬಂದ? ಖಂಡಿತಾ ಏನೋ ಕೆಲಸ ಇರುತ್ತೆ. ಅವನಿಗಿನ್ನು ಕೆಲಸ ಸಿಕ್ಕಿಲ್ಲ ಅಂತ ನನಗನ್ನಿಸುತ್ತೆ. ಹೆಂಡತಿ ಸಂಪಾದನೇಲಿ ಜೀವನ ಮಾಡಬಹುದಲ್ಲ ಅಂತ ಅಂದುಕೊಂಡಿರಬೇಕು ಅವನು…..”

ವಿದ್ಯಾಗೆ ತಾಯಿಯ ಮೇಲೆ ಕೋಪ ಬರಲಿಲ್ಲ, ಬದಲಿಗೆ ಅವಳು ತಾಯಿಯ ಕೊರಳನ್ನು ಪ್ರೀತಿಯಿಂದ ತೋಳಿನಿಂದ ಬಳಸುತ್ತಾ ಹೇಳಿದಳು, “ಹೆಂಡತಿ ಸಂಪಾದನೇಲಿ ತಿನ್ನುವ ಹಾಗಿದ್ರೆ 4 ವರ್ಷಗಳ ಹಿಂದೆಯೇ ತಿನ್ನಬಹುದಾಗಿತ್ತು.

“ಇವತ್ತು ಅವರು ನನ್ನಲ್ಲಿದ್ದ ತಪ್ಪು ಅಭಿಪ್ರಾಯ ದೂರಗೊಳಿಸಲು ಬಂದಿದ್ದರು. ವರ್ಷಗಳ ನಂತರ ನನಗೂ ಬೆಲೆ ಇದೆ ಅಂತ ಗೊತ್ತಾಯ್ತಮ್ಮ.”

ತಾಯಿ ಅಚ್ಚರಿಯಿಂದ ಅವಳನ್ನೇ ನೋಡಿದಳು. ವಿದ್ಯಾ ಮುಗುಳ್ನಕ್ಕು ಹೇಳಿದಳು, “ಏನಮ್ಮಾ ಹಾಗೆ ನೋಡ್ತಿದೀಯಾ?”

“ನೀನು ತುಂಬಾ ಬದಲಾಗಿದೀಯ ಅಂತ ಅನ್ನಿಸುತ್ತೆ. ಎಷ್ಟೋ ವರ್ಷಗಳ ನಂತರ ನೀನಿಷ್ಟು ಖುಷಿಯಾಗಿದೀಯ. ಅಂಥದೇನು ನಡೆಯಿತು?”

ವಿಷಯ ಏನು ಅಂತ ಅಮ್ಮನಿಗೆ ಹೇಳಿಬಿಡಲೇ ಎನಿಸಿತು ವಿದ್ಯಾಗೆ, ನಾಳೆ ವಿಚ್ಛೇದನದ ಪತ್ರಕ್ಕೆ ಸಹಿ ಹಾಕಲು ಹೋಗುತ್ತಿದ್ದಾಳೆ. ಕುಮಾರನ ಜೊತೆ ತನ್ನ ಸಂಬಂಧವನ್ನೂ ಶಾಶ್ವತವಾಗಿ ಕಡಿದುಕೊಳ್ಳುತ್ತಿದ್ದಾಳೆ. ಅದರೆ ಏಕೋ ಮನಸ್ಸಿನಲ್ಲಿ ಯಾವುದೇ ದೂರು ಇಲ್ಲ.

ಮರುದಿನ ಎದ್ದಾಗ ಮನಸ್ಸು ಭಾರವಾಗಿತ್ತು. ಆಫೀಸಿಗೆ ಫೋನ್‌ಮಾಡಿ ತನಗೆ ಇಂದು ರಜೆ ಬೇಕೆಂದು ಹೇಳಿದಳು. ಬೀರುವಿನಿಂದ ತಿಳಿ ಗುಲಾಬಿ ಬಣ್ಣದ ಸೀರೆ ತೆಗೆದು ಉಟ್ಟಳು.

ಕೂದಲನ್ನು ಚೆನ್ನಾಗಿ ತೊಳೆದು ಬಾಚಿಕೊಂಡಿದ್ದಳು. ಹಣೆಯಲ್ಲಿ  ಚಿಕ್ಕದಾಗಿ ಕುಂಕುಮ, ಕಣ್ಣುಗಳಿಗೆ ಕಾಡಿಗೆ, ಕುತ್ತಿಗೆಯಲ್ಲಿ ಚಿನ್ನದ ಸರ ಹಾಕಿಕೊಂಡು ಕನ್ನಡಿ ಎದುರು ನಿಂತಾಗ ನಿಜವಾಗಲೂ ಪ್ರತಿಬಿಂಬ ತಾನೇನಾ ಎಂದೆನಿಸಿತು.

ತಾಯಿಗೆ ಗಲಿಬಿಲಿಯಾಯಿತು. ಚೆನ್ನಾಗಿ ದೃಷ್ಟಿಸಿ ನೋಡಿ, “ನೀನೋಬ್ಬಳು ಹುಚ್ಚಿ, ಯಾವಾಗಲೂ ಹೀಗೆ ಅಲಂಕಾರ ಮಾಡಿಕೊಳ್ಳೋಕೆ ಏನು? ಎಷ್ಟು ಚೆನ್ನಾಗಿ ಕಾಣಿಸ್ತಿದೀಯ….”

ವಿದ್ಯಾ ಮನೆಯಿಂದ ಹೊರಟು ಕೈನೆಟಿಕ್‌ ಹತ್ತದೆ ಆಟೋ ಕರೆದಳು. ಕುಮಾರನ ಹೋಟೆಲ್‌ಗೆ ಬಂದು ಕುಮಾರನ ಕೋಣೆಯ ಬಾಗಿಲು ತಟ್ಟಿದಾಗ ಅವಳೆದೆ ಹೊಡೆದುಕೊಳ್ಳುತ್ತಿತ್ತು.

ಕುಮಾರ್‌ಬಾಗಿಲು ತೆರೆದ. ಅವನ ಕಣ್ಣುಗಳು ಅವಳ ಮೇಲೇ ಕೀಲಿಸಿದವು. ಬಾಯಿಂದ ಮಾತೇ ಹೊರಡಲಿಲ್ಲ. ಒಳಗೆ ಬಂದ ವಿದ್ಯಾಳನ್ನು ಮಂಚದ ಮೇಲೆ ಕುಳ್ಳಿರಿಸಿದ. ತಾನು ಕೆಳಗೆ ಕುಳಿತ. ಅವಳ ಕೈಯನ್ನು ತನ್ನ ಕೈಲಿ ತೆಗೆದುಕೊಂಡು, “ನನ್ನ ಬಗ್ಗೆ ಇದ್ದ ದೂರು ಆಕ್ಷೇಪಗಳು ಎಲ್ಲ ದೂರಾದವೋ ಅಥವಾ ಇನ್ನೂ ಬಾಕಿ ಇದೆಯೋ?” ಎಂದು ಕೇಳಿದ.

ವಿದ್ಯಾಳ ಕಣ್ಣುಗಳು ಹೊಳೆದವು, “ಇನ್ನೂ ಬಹಳ ಬಾಕಿ ಇದೆ.”

“ಇದಕ್ಕೆ ನಾವು ಒಂದು ಕೆಲಸ ಮಾಡಬೇಕಾಗುತ್ತದೆ.” ಕುಮಾರನ ಕಣ್ಣುಗಳಲ್ಲಿ ತುಂಟತನವಿತ್ತು.

“ಏನು?”

“ಜೀವನ ಪೂರ್ತಿ ಒಟ್ಟಿಗಿರಬೇಕು, ಹೇಳು ನಿನ್ನ ಅಭಿಪ್ರಾಯ ಏನು?”

ವಿದ್ಯಾಳ ಹೊಳೆಯುತ್ತಿದ್ದ ಕಣ್ಣುಗಳು ತೇವಗೊಂಡವು. ಕುಮಾರ್‌ ಎದ್ದು ಅವಳ ಬಳಿ ಬಂದ,“ನಾವಿಬ್ಬರೂ ಎಂದೂ ಪರಸ್ಪರ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ ವಿದ್ಯಾ. ಈಗ ಹತ್ತಿರವಾಗಿದೀವಿ. ಮೂರನೆಯವರ ಅಗತ್ಯ ಇಲ್ಲ ಅನ್ನಿಸುತ್ತೆ.”

ವಿದ್ಯಾಳ ಮೃದುವಾದ ಕೈ ಕುಮಾರನ ಬಲಿಷ್ಠ ಹಸ್ತದೊಳಗಿತ್ತು. ಅದು ಅವಳ ಅರಿವಿಗೇ ಬರಲಿಲ್ಲ. ತಾನಿನ್ನೂ ಮುಂದೆ ಕುಮಾರನಿಂದ ಬೇರೆಯಾಗುವುದಿಲ್ಲ ಅನ್ನುವುದು ಮಾತ್ರ ಅವಳ ಅರಿವಿನಲ್ಲಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ