ಓಟ್ಸ್ ರವೆ ಢೋಕ್ಲಾ
ಸಾಮಗ್ರಿ : 1-1 ಕಪ್ ಓಟ್ಸ್, ಮೊಸರು, ಅರ್ಧ ಕಪ್ ಹುರಿದ ಸಣ್ಣರವೆ, ತುಸು ನೀರು, ಒಂದಿಷ್ಟು ತುರಿದ ಕ್ಯಾರೆಟ್, ಶುಂಠಿ, ಹಸಿಮೆಣಸಿನ ಪೇಸ್ಟ್, ತುಸು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಈನೋ ಫ್ರೂಟ್ ಸಾಲ್ಟ್.
ಒಗ್ಗರಣೆಗಾಗಿ : ಅಗತ್ಯವಿದ್ದಷ್ಟು ಎಣ್ಣೆ, ಸಾಸುವೆ, ಜೀರಿಗೆ, 6-7 ಎಸಳು ಕರಿಬೇವು, ಉದ್ದಕ್ಕೆ ಸೀಳಿದ ಹಸಿ ಮೆಣಸಿನಕಾಯಿ 2, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಬಾಣಲೆಯಲ್ಲಿ ಓಟ್ಸ್ ಹಾಕಿ ಮಂದ ಉರಿಯಲ್ಲಿ ಹುರಿದು, ಕೆಳಗಿಳಿಸಿ. ಆರಿದ ನಂತರ ಮಿಕ್ಸಿಯಲ್ಲಿ ಪೌಡರ್ ಮಾಡಿ. ಓಟ್ಸ್, ಹುರಿದ ರವೆ ಮತ್ತು ಮೊಸರು ಬೆರೆಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಇದನ್ನು ಮತ್ತೆ ಗೊಟಾಯಿಸಿ. ಆಮೇಲೆ ಇದಕ್ಕೆ ಕ್ಯಾರೆಟ್, ಉಪ್ಪು, ಶುಂಠಿ, ಹಸಿಮೆಣಸಿನ ಪೇಸ್ಟ್, ಎಣ್ಣೆ, ನೀರು ಎಲ್ಲಾ ಬೆರೆಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರಗೊಳಿಸಿ. ಇದು ಸಾಕಷ್ಟು ಗಟ್ಟಿ ಎನಿಸಿದರೆ ತುಸು ನೀರು ಬೆರೆಸಿಕೊಳ್ಳಿ. ಇಡ್ಲಿ ಪಾತ್ರೆಗೆ ಅಗತ್ಯವಿದ್ದಷ್ಟು ನೀರು ತುಂಬಿಸಿ ಕುದಿಸಿರಿ. ಇಡ್ಲಿ ತಟ್ಟೆಗಳಿಗೆ ಜಿಡ್ಡು ಸವರಿಕೊಳ್ಳಿ. ಅದಕ್ಕೆ ಮಿಶ್ರಣ ತುಂಬಿಸುವ ಮೊದಲು ಈನೋ ಫ್ರೂಟ್‌ಸಾಲ್ಟ್ ಬೆರೆಸಿ ಇಡ್ಲಿ ತರಹ ಸೆಟ್ ಮಾಡಿ ಹಬೆಯಲ್ಲಿ 10-15 ನಿಮಿಷ ಬೇಯಿಸಿ. ಕೆಳಗಿಳಿಸಿ ತಣಿದ ನಂತರ, ಬರ್ಫಿ ತರಹ ಕಟ್ ಮಾಡಿ. ಇದರ ಮೇಲೆ ಒಗ್ಗರಣೆ ಹಾಕಿ, ಕಾಯಿಚಟ್ನಿ ಜೊತೆ ಸವಿಯಲು ಕೊಡಿ.
ದಾಲ್ ಕಚೋಡಿ ವಿತ್ ಆಲೂ ಭಾಜಿ
ಕಚೋರಿಗಾಗಿ ಸಾಮಗ್ರಿ : 200 ಗ್ರಾಂ ಮೈದಾ, 4 ಚಮಚ ತುಪ್ಪ, ತುಸು ಬೆಚ್ಚಗಿನ ನೀರು, ರುಚಿಗೆ ಉಪ್ಪು, ಕರಿಯಲು ಎಣ್ಣೆ.
ಹೂರಣಕ್ಕೆ ಸಾಮಗ್ರಿ : 50 ಗ್ರಾಂ ಹೆಸರುಬೇಳೆ, 4 ಚಮಚ ಕಡಲಹಿಟ್ಟು, ರುಚಿಗೆ ತಕ್ಕಷ್ಟ ಉಪ್ಪು, ಖಾರ, ಅಮ್ಚೂರ್‌ಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಗರಂಮಸಾಲ, ಧನಿಯಾ ಪುಡಿ, ಇಂಗು, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ತುಸು ರೀಫೈಂಡ್ ಎಣ್ಣೆ.
ಆಲೂ ಭಾಜಿಗಾಗಿ ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಶುಂಠಿ, ಹಸಿಮೆಣಸಿನ ಪೇಸ್ಟ್, ಟೊಮೇಟೊ ಪೇಸ್ಟ್, ತುಸು ಅರಿಶಿನ, ಒಗ್ಗರಣೆಗೆ ರೀಫೈಂಡ್ ಎಣ್ಣೆ, ಸಾಸುವೆ, ಜೀರಿಗೆ ತುಸು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೈದಾಗೆ ಉಪ್ಪು, ನೀರು ಬೆರೆಸಿ ಮೃದು ಪೂರಿ ಹಿಟ್ಟಿನ ಹದಕ್ಕೆ ಕಲಸಿ, ತುಪ್ಪ ಹಾಕಿ ಚೆನ್ನಾಗಿ ನಾದಿಕೊಳ್ಳಿ. ಇದನ್ನು ಅರ್ಧ ಗಂಟೆ ನೆನೆಯಲು ಬಿಡಿ. ಹೆಸರುಬೇಳೆ ಲಘುವಾಗಿ ಹುರಿದು, ಬಿಸಿನೀರಿಗೆ ಹಾಕಿ ಸುಮಾರಾಗಿ ಬೇಯಿಸಿ, ತುಂಬಾ ಮೆದು ಆಗಬಾರದು. ಇದರ ನೀರು ಬಸಿದಿಡಿ. ಒಂದು ನಾನ್‌ಸ್ಟಿಕ್ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಇಂಗಿನ ಒಗ್ಗರಣೆ ಕೊಡಿ. ಶುಂಠಿ, ಹಸಿ ಮೆಣಸಿನ ಪೇಸ್ಟ್ ಹಾಕಿ ಕೆದಕಿ. ಕಡಲೆಹಿಟ್ಟು ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಕೆದಕಿರಿ. ಆಮೇಲೆ ಬೆಂದ ಬೇಳೆ ಸೇರಿಸಿ 3-4 ನಿಮಿಷ ಕೆದಕಬೇಕು. ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ. ಮೈದಾ ಹಿಟ್ಟನ್ನು ನಾದಿಕೊಂಡು ಸಣ್ಣ ಉಂಡೆಗಳಾಗಿಸಿ. ಇದನ್ನು ಪುಟ್ಟ ಪೂರಿಗಳಾಗಿ ಲಟ್ಟಿಸಿ. ಇದರ ಮಧ್ಯೆ 2-3 ಚಮಚ ಹೂರಣ ತುಂಬಿಸಿ, ಚಿತ್ರದಲ್ಲಿರುವಂತೆ ಗುಂಡಗೆ ಬರುವಂತೆ ಮಾಡಿ, ತುಸು ಲಟ್ಟಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಇವನ್ನು ಹೊಂಬಣ್ಣ ಬರುವಂತೆ ಮಂದ ಉರಿಯಲ್ಲಿ ಕರಿಯಿರಿ. ಅಗತ್ಯ ಬಿದ್ದಾಗ ಇದನ್ನು 1-2 ದಿನ ಮೊದಲೇ ತಯಾರಿಸಿ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಬಹುದು. ಅತಿಥಿಗಳು ಬಂದಾಗ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ, ಆಲೂ ಭಾಜಿ ಜೊತೆ ಸವಿಯಲು ಕೊಡಿ.
ಆಲೂ ಭಾಜಿ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಾಸುವೆ, ಜೀರಿಗೆಯ ಒಗ್ಗರಣೆ ಕೊಡಿ. ನಂತರ ಡ್ರೈ ಮಸಾಲೆ, ಉಪ್ಪು ಹಾಕಿ ಕೆದಕಿ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಮಸೆದ ಆಲೂ, 2 ಕಪ್ ನೀರು ಬೆರೆಸಿ ಕೈಯಾಡಿಸುತ್ತಾ ಕುದಿಸಬೇಕು. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ, ಕಚೋಡಿ ಜೊತೆ ಸವಿಯಲು ಕೊಡಿ.
ಸ್ವೀಟ್ ರವೆ ಇಡ್ಲಿ
ಸಾಮಗ್ರಿ : ಅರ್ಧ ಕಪ್ ಸಣ್ಣರವೆ, 4-5 ಚಮಚ ಮೈದಾ, 5-6 ಚಮಚ ಪುಡಿ ಸಕ್ಕರೆ, ಅರ್ಧ ಕಪ್ ಕೆನೆ ಮೊಸರು, 2 ಚಿಟಕಿ ಸೋಡ, 1 ಸಣ್ಣ ಚಮಚ ವೆನಿಲಾ ಎಸೆನ್ಸ್, ಅರ್ಧ ಸಣ್ಣ ಚಮಚ ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ ಅರ್ಧ ಕಪ್), ತುಸು ರೀಫೈಂಡ್ ಆಯಿಲ್, ಈನೋ ಫ್ರೂಟ್ ಸಾಲ್ಟ್.
ವಿಧಾನ : ರವೆಗೆ ಮೈದಾ, ಸೋಡ ಹಾಕಿ ಜರಡಿಯಾಡಿ. ಮೊಸರು ಕಡೆದು ಅದಕ್ಕೆ ಸಕ್ಕರೆ, ರೀಫೈಂಡ್ ಎಣ್ಣೆ ಬೆರೆಸಿ ಮಿಕ್ಸ್ ಮಾಡಿ. ಇದಕ್ಕೆ ನಿಧಾನವಾಗಿ ರವೆ ಮಿಶ್ರಣ ಸೇರಿಸಿ. 15 ನಿಮಿಷ ಹಾಗೇ ಬಿಡಿ. ನಂತರ ಇದು ಗಟ್ಟಿ ಎನಿಸಿದರೆ ತುಸು ಹಾಲು ಬೆರೆಸಿ. ಎಸೆನ್ಸ್, ಏಲಕ್ಕಿ, ಈನೋ ಫ್ರೂಟ್ ಸಾಲ್ಟ್ ಎಲ್ಲಾ ಸೇರಿಸಿ ಮಿಶ್ರಣವನ್ನು ಕೆದಕಬೇಕು. ಇಡ್ಲಿ ಸ್ಟ್ಯಾಂಡಿಗೆ ಜಿಡ್ಡು ಸವರಿ, ಇಡ್ಲಿ ಹಿಟ್ಟು ಹಾಕಿ. ಅದರ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ, ಬಿಸಿ ಬಿಸಿ ಇಡ್ಲಿಯನ್ನು ಬೇಯಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ನ್ಯೂಟ್ರೀಶಿಯಸ್ ವಡಾ ಪಾವ್
ಮೂಲ ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, 1 ಕಪ್ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ, ಹಸಿ ಮೆಣಸಿನ ಪೇಸ್ಟ್, ಅರಿಶಿನ, ಸೋಡ, ನಿಂಬೆರಸ, ಓಮ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕರಿಬೇವು, ತುಸು ಹೆಚ್ಚಿದ ಕೊ.ಸೊಪ್ಪು.
ಇತರ ಸಾಮಗ್ರಿ : 6 ಪಾವ್ (ಬನ್ನು), ಅರ್ಧ ಸೌಟು ಬೆಣ್ಣೆ, 2-3 ಪಾವ್ ಭಾಜಿ ಮಸಾಲ.
ವಿಧಾನ : ಕಡಲೆಹಿಟ್ಟಿಗೆ ಉಪ್ಪು, ಓಮ, ಖಾರ, ಸೋಡ ಸೇರಿಸಿ. ಇದಕ್ಕೆ ತುಸು ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ ಕರಿಬೇವಿನ ಒಗ್ಗರಣೆ ಕೊಡಿ. ನಂತರ ಇದಕ್ಕೆ ಉಳಿದೆಲ್ಲ ಮಸಾಲೆ ಸೇರಿಸಿ ಕೆದಕಿ, ಮಸೆದ ಆಲೂ ಹಾಕಿ ಬೆರೆಸಿಕೊಳ್ಳಿ. ನಂತರ ಕೆಳಗಿಳಿಸಿ ಆರಲು ಬಿಡಿ. ಕೊ.ಸೊಪ್ಪು ಉದುರಿಸಿ ನಿಂಬೆ ಹಣ್ಣು ಹಿಂಡಿಕೊಳ್ಳಿ. ಇದರಿಂದ ಸಣ್ಣ ಉಂಡೆ ಮಾಡಿ ಕಡಲೆಹಿಟ್ಟಿನಲ್ಲಿ ಅದ್ದಿಕೊಂಡು ಬೊಂಬಾಯಿ ಬೋಂಡ ಕರಿಯಿರಿ. ಅವೆಲ್ಲ ಆರಿದ ಮೇಲೆ ತುಸು ಚಪ್ಪಟೆ ಒತ್ತಿಕೊಳ್ಳಿ. ಒಂದು ತವಾ ಮೇಲೆ ತುಸು ಬೆಣ್ಣೆ ಸವರಿ. ಇದರ ಮೇಲೆ ಪಾವ್ ಭಾಜಿ ಮಸಾಲೆ ಉದುರಿಸಿ. ಗುಂಡಗೆ ಬನ್ ಕತ್ತರಿಸಿ, ಇದರ ಮೇಲಿಟ್ಟು ಮಸಾಲೆ ಮೆತ್ತಿಕೊಳ್ಳುವಂತೆ ಮಾಡಿ. ಹೀಗೆ ಎಲ್ಲಾ ಬನ್ನುಗಳನ್ನೂ ಸಿದ್ಧಪಡಿಸಿ ನಡುವೆ 1-1 ಚಪ್ಪಟೆ ಮಾಡಿದ ಬೋಂಡ ಇರಿಸಿ, ತುಸು ಅದುಮಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಬ್ರೋಕನ್‌ವೀಟ್ ಪಿಕಲ್ ಪರೋಟ
ಮೂಲ ಸಾಮಗ್ರಿ : 1 ಕಪ್ ಗೋದಿಹಿಟ್ಟು, ಅಗತ್ಯವಿದ್ದಷ್ಟು ಉಪ್ಪು, ಖಾರ, ಅರಿಶಿನ, ಓಮ, ತುಪ್ಪ, ರೀಫೈಂಡ್ ಆಯಿಲ್, ಬೆಚ್ಚಗಿನ ನೀರು.
ಹೂರಣದ ಸಾಮಗ್ರಿ : ಅರ್ಧ ಕಪ್ ಬ್ರೋಕನ್‌ವೀಟ್, 2 ಚಮಚ ಉಪ್ಪಿನಕಾಯಿಯ ಮಸಾಲೆ, ಅದರ ಮೇಲ್ಭಾಗದ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, 1 ಈರುಳ್ಳಿ, ಒಂದಿಷ್ಟು ಕೊ.ಸೊಪ್ಪು.
ವಿಧಾನ : ಗೋಧಿಹಿಟ್ಟಿಗೆ ಎಲ್ಲಾ ಸಾಮಗ್ರಿ ಸೇರಿಸಿ ಮೃದು ಚಪಾತಿ ಹಿಟ್ಟು ಕಲಸಿ, ತುಪ್ಪ ಹಾಕಿ ನಾದಿಡಿ. ಅರ್ಧ ಗಂಟೆ ಹಾಗೆ ನೆನೆಯಲಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ಬ್ರೋಕನ್‌ವೀಟ್ ಹಾಕಿ ಬಾಡಿಸಿ, ಅರ್ಧ ಕಪ್ ನೀರು ಬೆರೆಸಿ ಬೇಯಲು ಬಿಡಿ. ಆಮೇಲೆ ಇದಕ್ಕೆ ಉಪ್ಪು ಖಾರ, ಉಪ್ಪಿನ ಕಾಯಿಯ ಮಸಾಲೆ, ಎಣ್ಣೆ ಸೇರಿಸಿ ಕೆದಕಿ ಕೆಳಗಿಳಿಸಿ. ಇದಕ್ಕೆ ಕೊ.ಸೊಪ್ಪು ಉದುರಿಸಿ. ಇದನ್ನು ಚೆನ್ನಾಗಿ ಆರಲು ಬಿಡಿ. ನೆನೆದ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ. ಮಧ್ಯೆ ಬ್ರೋಕನ್‌ವೀಟ್ ಹೂರಣವಿರಿಸಿ, ಹಿಟ್ಟನ್ನು ಗುಂಡಗೆ ಮಾಡಿ, ಉಲ್ಟಾ ಹಾಕಿ, ನಿಧಾನವಾಗಿ ಲಟ್ಟಿಸಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು ರೀಫೈಂಡ್ ಎಣ್ಣೆ ಹಾಕಿ ಪರೋಟ ತಯಾರಿಸಿ. ಚಿತ್ರದಲ್ಲಿ ಇರುವಂತೆ ಅಲಂಕರಿಸಿ, ಮಕ್ಕಳ ಟಿಫಿನ್ ಬಾಕ್ಸಿಗೆ ಪ್ಯಾಕ್ ಮಾಡಿ ಕೊಡಿ. ಬಿಸಿ ಇರುವಾಗ ಮೊಸರು, ಉಪ್ಪಿನಕಾಯಿ ಜೊತೆ ಸವಿಯಲು ಕೊಡಿ.
ಬ್ರೋಕನ್‌ವೀಟ್ ಸ್ಟ್ರಾಬೆರಿ ಪುಡಿಂಗ್
ಸಾಮಗ್ರಿ : ಅರ್ಧ ಕಪ್ ಬ್ರೋಕನ್‌ವೀಟ್, 2 ಕಪ್ ಹಾಲು, 4 ಚಮಚ ಹಾಲಿನ ಪುಡಿ, 3 ಚಮಚ ಸಕ್ಕರೆ, 2 ಕಪ್ ಸ್ಟ್ರಾಬೆರಿ ಹೋಳು, ಅರ್ಧ ಕಪ್ ಮಿಶ್ರ ಹಣ್ಣಿನ ಹೋಳು.
ವಿಧಾನ : ಮೊದಲು ಚಿಕ್ಕ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ ಅದರಲ್ಲಿ ಬ್ರೋಕನ್‌ವೀಟ್ ಹುರಿಯಿರಿ. ಇದಕ್ಕೆ ಅರ್ಧ ಕಪ್ ನೀರು ಬೆರೆಸಿ 1 ಸೀಟಿ ಬರುವಂತೆ ಬೇಯಿಸಿ. ಅದೇ ಕುಕ್ಕರ್‌ನ ಬೆಂದ ಸಾಮಗ್ರಿಗೆ ಸಕ್ಕರೆ, ಹಾಲು ಬೆರೆಸಿ ಕೈಯಾಡಿಸಿ. ಆಮೇಲೆ ಹಾಲಿನ ಪುಡಿ ಹಾಕಿ ಕೆದಕಬೇಕು. 1-2 ಕುದಿ ಬಂದಾಗ ಕೆಳಗಿಳಿಸಿ ಆರಲು ಬಿಡಿ. ಒಂದು ಬಟ್ಟಲಿಗೆ ಸ್ಟ್ರಾಬೆರಿ, ಅದರ ಮೇಲೆ ಪುಡ್ಡಿಂಗ್‌ಮಿಶ್ರಣ, ಇದರ ಮೇಲೆ ಮಿಶ್ರ ಹಣ್ಣಿನ ಹೋಳು…. ಈ ರೀತಿ ಬೆರೆಸಿಕೊಳ್ಳಿ. ನಂತರ ಸರ್ವಿಂಗ್ ಬೌಲ್‌ಗಳಿಗೆ ಸುರಿದು, ಫ್ರಿಜ್‌ನಲ್ಲಿಟ್ಟು ತಣ್ಣಗೆ ಮಾಡಿ ಸವಿಯಲು ಕೊಡಿ.
ಡ್ರೈಫ್ರೂಟ್ ಬನಾನಾ ಶೇಕ್
ಸಾಮಗ್ರಿ : 2-3 ಮಾಗಿದ ಬಾಳೆಹಣ್ಣು, 10-12 ಬ್ಲಾಂಚ್‌ಗೊಳಿಸಿದ ಇಡೀ ಬಾದಾಮಿ, 2 ಕಪ್ ಫ್ರಿಜ್‌ನಲ್ಲಿರಿಸಿದ ಕೋಲ್ಡ್ ಹಾಲು, 2 ಚಮಚ ಶುಗರ್ ಸಿರಪ್, 6-7 ಎಸಳು ಕೇಸರಿ, ತುಸು ಏಲಕ್ಕಿ ಪುಡಿ, ಪಿಸ್ತಾ ಫ್ಲೇಕ್ಸ್.
ವಿಧಾನ : ಬಾಳೆಹಣ್ಣನ್ನು ಕಿವುಚಿ ಮಿಕ್ಸಿಗೆ ಹಾಕಿ. ಇದಕ್ಕೆ ಶುಗರ್ ಸಿರಪ್, ಬಾದಾಮಿ, 1 ಕಪ್ ಕೋಲ್ಡ್ ಹಾಲು ಬೆರೆಸಿ ಮಿಕ್ಸಿ ಚಲಾಯಿಸಿ. ನಂತರ ಉಳಿದ ಹಾಲು ಬೆರೆಸಿ ಮತ್ತೆ ಮಿಕ್ಸಿ ಚಲಾಯಿಸಿ. ಇದನ್ನು 2-3 ಗ್ಲಾಸುಗಳಿಗೆ ತುಂಬಿಸಿ, ಮೇಲೆ ಏಲಕ್ಕಿಪುಡಿ, ಹಾಲಲ್ಲಿ ನೆನೆದ ಕೇಸರಿ ಎಳೆಗಳು, ಪಿಸ್ತಾ ಫ್ಲೇಕ್ಸ್ ಉದುರಿಸಿ ಸವಿಯಲು ಕೊಡಿ.