ಕಥೆ – ಪಲ್ಲವಿ ಸುಧೀಂದ್ರ

ಎಷ್ಟೋ ದಿನಗಳಿಂದ ಒಂದೇ ವಿಷಯ ಮನದಲ್ಲಿ ಗುಂಗಿ ಹುಳುವಿನಂತೆ ಕೊರೆಯುತ್ತಿತ್ತು. ನಾವು ಮಾಡಿದ ಪಾಪಕ್ಕೆ ಇನ್ಯಾವಾಗಲೋ ಶಿಕ್ಷೆ ಎಂಬುದು ಗೊತ್ತಿಲ್ಲ. ಈ ಜನ್ಮದಲ್ಲಿ ಮಾಡಿದ ತಪ್ಪುಗಳಿಗೆ ಸಾಯುವುದಕ್ಕೆ ಮುನ್ನ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ ಎಂಬುದು ಇದರರ್ಥ. ನಾನು ಟಿ.ವಿಯ. ರೆಗ್ಯುಲರ್‌ ಕ್ರೈಂ ಮತ್ತು ಭಕ್ತಿಪ್ರಧಾನ ಕಾರ್ಯಕ್ರಮ ನೋಡಿ ಮಾತನಾಡುತ್ತಿದ್ದೇನೆ, ಪ್ರಭಾವಿತನಾಗಿದ್ದೇನೆ ಎಂದೇನಲ್ಲ. ಧಾರ್ಮಿಕ ಗ್ರಂಥ ಓದಿ, ಪ್ರವಚನಗಳನ್ನು ಕೇಳಿಸಿಕೊಂಡು ಹೇಳುತ್ತಿರುವ ಮಾತೂ ಇದಲ್ಲ. ಯಾವುದೇ ಸ್ವಾಮೀಜಿ, ಬಾಬಾಗಳ ಬೋಧನೆಗೆ ಒಳಗಾಗಿಯೂ ಅಲ್ಲ. ಪಶ್ಚಾತ್ತಾಪದ ಭಾವನೆಯಿಂದ ಬಡಬಡಿಸುತ್ತಿದ್ದೇನೆ ಎಂದೂ ಭಾವಿಸಬೇಡಿ.

ಅಸಲಿಗೆ ವಿಷಯ ಇಷ್ಟೆ. ಇತ್ತೀಚೆಗೆ ನನ್ನ ಮಗಳು ಸ್ವಾತಿ ತನ್ನ ಸಹೋದ್ಯೋಗಿ ರಮಣ್‌ ಜೊತೆ ತುಂಬಾನೇ ಕ್ಲೋಸ್‌ ಎಂದು ಗೊತ್ತಾಯಿತು. ಎಲ್ಲಕ್ಕೂ ದೊಡ್ಡ ಚಿಂತೆ ಕಾಡಿದ್ದು ಎಂದರೆ ರಮಣ್‌ ಈಗಾಗಲೇ ವಿವಾಹಿತ ಎಂಬುದು.

ಸ್ವಾತಿ ಒಂದು ಖ್ಯಾತ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್‌. ಅದೇ ಬ್ಯಾಂಕಿನಲ್ಲಿ ರಮಣ್‌ ಸೀನಿಯರ್‌ ಮ್ಯಾನೇಜರ್‌. ನನ್ನ ಮಗಳು ಸ್ವಾತಿ ತನ್ನ ಕೆಲಸ ಕಾರ್ಯದಲ್ಲಿ ಬಹಳ ಶ್ರದ್ಧೆಯುಳ್ಳವಳು. ಆದರೆ ಹೋಗಿ ಹೋಗಿ ರಮಣ್‌ನಂಥ ಪ್ರೌಢ ವ್ಯಕ್ತಿಯಲ್ಲಿ ಅವಳು ವಹಿಸುತ್ತಿರುವ ಸ್ನೇಹ, ಸಲಿಗೆ ನನ್ನಲ್ಲಿ ಗಾಬರಿ ಹುಟ್ಟಿಸುತ್ತಿದೆ. ನನ್ನ ಪತ್ನಿ ಶೋಭಾ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನೆಲೆಸಿರುವ ನಮ್ಮ ಮಗನ ಬಳಿ ಹೋಗಿದ್ದಾಳೆ.

ಅವಳ ಅನುಪಸ್ಥಿತಿಯಲ್ಲಿ ಈ ಬೆಳವಣಿಗೆಗಳು ಇಲ್ಲಿ ಹೀಗೆ ನಡೆದಿವೆ. ಈಗ ಅವರಿಬ್ಬರಿಗೂ ಫೋನ್‌ ಮಾಡಿ ಈ ವಿಷಯವನ್ನು ಏನೆಂದು ವಿವರಿಸಲಿ? ಅವಳು ಮರಳುವಷ್ಟರಲ್ಲಿ ಈ ಪರಿಸ್ಥಿತಿಯನ್ನು ನಾನೇ ಹೇಗಾದರೂ ಸರಿದೂಗಿಸಬೇಕಿತ್ತು. ಇಂಥದೇ ಸ್ಥಿತಿಯ ಸಂಧಿಗ್ಧ ಹಿಂದೊಮ್ಮೆ ನನಗೆ ಎದುರಾಗಿತ್ತು……

ಆಗ ನನ್ನ ತರಬೇತಿ ಮುಗಿದ ನಂತರ ಮೊದಲ ಪೋಸ್ಟಿಂಗ್‌ ಮುಂಬೈನಲ್ಲೇ ಆಗಿತ್ತು. ನಮ್ಮ ಮನೆಯವರೆಲ್ಲ ಬೆಂಗಳೂರಿನಲ್ಲೇ ಇದ್ದರು. ಮನೆಯ ಬಿಸ್‌ನೆಸ್‌ಗಿಂತ ನನಗೆ ಎಂ.ಬಿ.ಎ. ದೊರಕಿಸಿಕೊಟ್ಟ ನೌಕರಿಯೇ ಪ್ರಧಾನವಾಗಿತ್ತು. ಹೀಗಾಗಿ ಮದುವೆ ಆಗಿದ್ದರೂ, ತಕ್ಷಣ ಶೋಭಾಳನ್ನು ಜೊತೆಗೆ ಕರೆದೊಯ್ಯಲಿಲ್ಲ. ಅಲ್ಲಿ ಹೋಗಿ ಮನೆ ಸರಿಪಡಿಸಿಕೊಂಡು ನಂತರ ಕರೆಸೋಣ ಎಂದುಕೊಂಡೆ. ತವರಿಗೆ ಹೋಗಿದ್ದ ಶೋಭಾ ತಾನು ಗರ್ಭವತಿ ಎಂದು ಫೋನ್‌ ಮಾಡಿದ್ದಳು. ಒಳ್ಳೆಯದಾಯಿತು, ಹೆರಿಗೆ ಆಗಿ ಮಗುವಿಗೆ 4-5 ತಿಂಗಳಾಗಲಿ, ನಂತರ ಕಾಣದ ದೇಶ ಮುಂಬೈಗೆ ಕರೆಸಿಕೊಳ್ಳುವುದೆಂದು ಸುಮ್ಮನಾದೆ. 2-3 ವರ್ಷಗಳಲ್ಲಿ ನನಗೆ ಹೇಗೂ ಬೆಂಗಳೂರಿಗೆ ವರ್ಗ ಆಗುವುದಿತ್ತು.

ಬಾಂಧ್ರಾದಲ್ಲೇ ನಾನೊಂದು ಪುಟ್ಟ ಫ್ಲಾಟ್‌ ಬುಕ್‌ ಮಾಡಿಕೊಂಡೆ. ಅಲ್ಲಿಂದ ನನ್ನ ಬ್ಯಾಂಕ್‌ ಕೇವಲ 15 ಕಿ.ಮೀ. ದೂರವಷ್ಟೆ. ಮುಂಬೈನಲ್ಲಿ ದಿನನಿತ್ಯ 30 ಕಿ.ಮೀ. ಓಡಾಟ ಏನೇನೂ ಅಲ್ಲ.

ನಮ್ಮ ಫ್ಲೋರ್‌ಗೆ ಮತ್ತೊಂದು ಹೊಸ ಪರಿವಾರ ಬಂದು ಸೇರಿತು. ಒಬ್ಬ ಹೆಂಗಸು, 3ನೇ ಕ್ಲಾಸ್‌ ಕಲಿಯುವ ಇಬ್ಬರು ಅವಳಿ ಗಂಡು ಮಕ್ಕಳು ಅಷ್ಟೇ ಇದ್ದರು. ಅದೇ ಫ್ಲಾಟ್‌ನಲ್ಲಿ ನಮ್ಮ ಬ್ಯಾಂಕಿನ ಸೀನಿಯರ್‌ ಸಹೋದ್ಯೋಗಿ ರಮೇಶ್‌ ಬಾಬು ಇದ್ದರು. ಅವರಿಂದಲೇ ನನಗೆ ಈಕೆಯ ಬಗ್ಗೆ ತಿಳಿದದ್ದು. ಮರಾಠಿಗರ ಕುಟುಂಬದ ಈಕೆ ವಿಧವೆ. ಈಕೆಯ ಪತಿ ಸಹ ನಮ್ಮ ಬ್ಯಾಂಕಿನಲ್ಲೇ ಕೆಲಸದಲ್ಲಿದ್ದರಂತೆ, ಅವರ ಕೆಲಸವನ್ನೇ ಇನ್ನೂ ಜೂನಿಯರ್‌ ಲೆವೆಲ್‌ನಲ್ಲಿ ಈಕೆಗೆ ನೀಡಲಾಗಿದೆ ಎಂದು ತಿಳಿಯಿತು. ಇಷ್ಟು ದಿನ ತನ್ನ ತವರುಮನೆಯಲ್ಲಿದ್ದವಳು ಈಗ ನೌಕರಿ ಸಿಕ್ಕ ನಂತರ ಮತ್ತೆ ಮುಂಬೈಗೆ ಮರಳಿದ್ದಳು.

“ಮಿ. ವಿನಯ್‌, ನೀವು ಈಕೆಯ ಹತ್ತಿರ ಸ್ವಲ್ಪ ಜೋಪಾನವಾಗಿಯೇ ಇರಬೇಕು. ಮಹಾ ಚಾಲಾಕಿ ಹೆಂಗಸು. ಬೆರಳು ತೋರಿದರೆ ಹಸ್ತ ನುಂಗುವವಳು!” ಎಂದು ರಮೇಶ್‌ ಬಾಬು ಎಚ್ಚರಿಸಿದ್ದರು. ಆಕೆಯೊಡನೆ ಇವರ ವ್ಯವಹಾರ ಯಾಕೋ ಸರಿಹೋಗಿರಲಿಲ್ಲ ಎನಿಸುತ್ತದೆ, ಅದಕ್ಕೆ ನನಗೂ ಎಚ್ಚರಿಸಿದ್ದರು. ಮತ್ತೊಂದು ಮಿಕ ಬಲೆಗೆ ಬೀಳದಿರಲಿ ಎಂದಿರಬಹುದು. ಮೊದಲಿನಿಂದಲೂ ಸೌಜನ್ಯ, ಸ್ನೇಹಪರತೆ ಎಂಬುದು ನಮ್ಮ ಜೊತೆ ಬೆರೆತು ಹೋಗಿರುವುದರಿಂದ ನೆರೆಹೊರೆಯವರೊಂದಿಗೆ ಸೌಹಾರ್ದ ವ್ಯವಹಾರ, ಅದರಲ್ಲೂ ಇಬ್ಬರು ಪುಟ್ಟ ಮಕ್ಕಳಿರುವ ಮನೆಯವರ ಜೊತೆ ಆತ್ಮೀಯತೆ ತೋರದಿರಲು ಸಾಧ್ಯವೇ? ಅದರಲ್ಲೂ ಪಕ್ಕದ ಮನೆಯಲ್ಲಿ ಒಬ್ಬ ಸುಂದರ ಸ್ತ್ರೀ ಇರುವಾಗ ಗಂಡಸರಾದ ನಾವು ಸುಮ್ಮನಿದ್ದುಬಿಡಲು ಸಾಧ್ಯವೇ?

ಹೀಗಾಗಿ ಅವಕಾಶ ಸಿಕ್ಕಿದೊಡನೆ ಆ ಮಕ್ಕಳನ್ನು ಬಾಯಿ ತುಂಬಾ ಮಾತನಾಡಿಸಿದ್ದಾಯಿತು.

ಒಮ್ಮೆ ಆಫೀಸಿನಿಂದ ಮರಳಿದಾಗ, ಆಕೆ ಒಬ್ಬಳೇ ಮೆಟ್ಟಿಲ ಬಳಿ ಕುಳಿತಿದ್ದಳು.

“ಇದೇನು ನೀವು….. ಇಲ್ಲೇ ಕುಳಿತುಬಿಟ್ಟಿದ್ದೀರಿ?”

“ಅದೂ….. ಸಾರ್‌…. ನನ್ನ ಕೀ ಕಳೆದುಹೋಗಿದೆ. ಇನ್ನೇನು ಮಕ್ಕಳು ಬರುವ ಹೊತ್ತು. ಏನು ಮಾಡಲಿ ಅಂತ ತಿಳಿಯದೆ ಕಂಗಾಲಾಗಿದ್ದೇನೆ…..”

“ನೀವೇನೂ ಚಿಂತಿಸಬೇಡಿ….. ನಮ್ಮ ಮನೆಯಲ್ಲಿ ಬಂದು ಕುಳಿತಿರಿ, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಿರಿ, ಪರ್ಯಾಯ ಕೀಗಾಗಿ ವ್ಯವಸ್ಥೆ ಮಾಡೋಣ…..”

“ಅದು…. ಬೇಡಿ…. ಪರವಾಗಿಲ್ಲ….. ನಿಮಗೆ ಸುಮ್ಮನೆ ತೊಂದರೆ……”

“ಇದರಲ್ಲಿ ತೊಂದರೆ ಏನು ಬಂತು? ನೀವೇನೂ ಸಂಕೋಚ ಪಡಬೇಡಿ, ಬನ್ನಿ. ಅದೂ ಅಲ್ಲದೆ ಈಗ ಮಕ್ಕಳು ಬರುತ್ತಾರೆ ಅಂತೀರಿ….”

ಬಹಳ ಸಂಕೋಚದಿಂದ ಆಕೆ ಒಳಗೆ ಬಂದರು. ಆಕೆಗೆ ಫ್ರಿಜ್‌ನಿಂದ ತಣ್ಣಗೆ ನೀರು, ಜೂಸ್‌ ಕೊಟ್ಟು, “ನೀವು ಸ್ವಲ್ಪ ಪೇಪರ್‌ನೋಡುತ್ತಿರಿ…. ನಾನು ಇಲ್ಲೇ ರಸ್ತೆ ಕೊನೆಯಲ್ಲಿರುವ ಕೀ ರಿಪೇರಿಯವನನ್ನು ಕರೆದುಕೊಂಡು ಬರ್ತೀನಿ……” ಎಂದು ನಾನು ಕೆಳಗೆ ಹೊರಟಾಗ ಆಕೆ ಬಲು ಸಂಕೋಚದಿಂದ ಅಲ್ಲೇ ಪೇಪರ್‌ ನೋಡುತ್ತಾ ಉಳಿದರು.

ಅಂತೂ ಎಲ್ಲಿಂದಲೋ ಕೀ ರಿಪೇರಿಯವನನ್ನು ಹಿಡಿದು ತಂದು, ಅವರ ಮನೆಯ ಬೀಗಕ್ಕೆ ನಕಲಿ ಕೀ ಮಾಡಿಸಿ, ಬಾಗಿಲು ತೆರೆದದ್ದಾಯಿತು.

ಆಕೆಗೆ ಬಹಳ ಸಂತೋಷವಾಗಿ, ಕೃತಜ್ಞತೆಯಿಂದ ನನಗೆ ಮತ್ತೆ ಮತ್ತೆ ಥ್ಯಾಂಕ್ಸ್ ಹೇಳಿದಳು. ನಾನು ಹೆಮ್ಮೆಯಿಂದ ಪೋಸ್‌ಕೊಡುತ್ತಾ ಅವರ ಟಿ.ವಿ. ನೋಡುತ್ತಾ ಅಲ್ಲೇ ಉಳಿದೆ. ಆಕೆ ಫ್ರೆಶ್‌ ಆಗಿ ಆಗತಾನೇ ಟೀ ಮಾಡಿ ತಂದಳು. ನಾವು ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ, ಟ್ಯೂಷನ್‌ ಮುಗಿಸಿಕೊಂಡು ಆಕೆಯ ಮಕ್ಕಳು ಬಂದರು. ಅವರಿಬ್ಬರೂ ನನ್ನ ಮಗ ವರುಣನಿಗಿಂತ ತುಸು ದೊಡ್ಡವರೆನ್ನಬಹುದು. ಸ್ವಲ್ಪ ಹೊತ್ತು ಅವರೊಂದಿಗೆ ಮಾತನಾಡುತ್ತಾ, ಅವರಿಗೆ ಕೇಕ್‌ ತಂದುಕೊಟ್ಟೆ. ಈ ಹೊಸ ಅಂಕಲ್ ಅವರಿಗೆ ಬಲು ಬೇಗ ಆತ್ಮೀಯರಾದರು.

ಅಂದಿನಿಂದ ಆ ಮಕ್ಕಳು ನನ್ನ ಮನೆಗೆ ಆಗಾಗ ಬಂದು ಹೋಗುವುದು, ಅವರಿಗೆ ಶಾಲೆಯ ಹೋಂವರ್ಕ್‌ನಲ್ಲಿ ನನ್ನಿಂದ ಸಹಾಯ ಪಡೆಯುವುದು ಮಾಮೂಲಾಯಿತು. ನನ್ನ ಮಗನಿಗೆ ಕೊಡುವಂತೆಯೇ ಇಷ್ಟು ದೂರದಲ್ಲಿದ್ದ ಕಾರಣ, ಇವರೊಂದಿಗೆ ಸಂಜೆ ಆಫೀಸ್‌ನಿಂದ ಬಂದ ನಂತರ ಹೆಚ್ಚಿನ ಸಮಯ ನೀಡತೊಡಗಿದೆ. ಅಖಿಲ್ ‌ನಿಖಿಲ್ ‌ನನಗೂ ಬಹಳ ಇಷ್ಟವಾದರು. ಮಕ್ಕಳೊಂದಿಗೆ ನನ್ನ ಸ್ನೇಹ ಬೆಳೆದಿದ್ದು ಆಕೆಗೂ ಬಹಳ ಸಂತೋಷ ನೀಡಿತು. ಭಾನುವಾರಗಳಲ್ಲಿ ಅವರೊಂದಿಗೆ ಕೇರಂ, ಕ್ರಿಕೆಟ್‌ ಆಡುವುದು, ಹೊರಗಿನ ಜುಹೂ ಬೀಚ್‌ಗೆ ಕರೆದೊಯ್ಯುವುದು ಇವೆಲ್ಲ ಹೆಚ್ಚತೊಡಗಿತು. ಮಕ್ಕಳ ಜೊತೆ ರತ್ನಾ ಸಹ ಈಗ ನನ್ನೊಂದಿಗೆ ಚಾಟ್‌ ಸವಿಯಲು ಸಲೀಸಾಗಿ ಬರುತ್ತಿದ್ದಳು. ಎಂದಿನ ಸ್ನೇಹ ಸಲಿಗೆಯಾಗಿ ಮುಂದುವರಿದಿತ್ತು. ಈಗ ಅವರ ಮನೆಯಲ್ಲಿ ಏನೇ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ನನ್ನೊಂದಿಗೆ ಚರ್ಚಿಸಿ ಸಲಹೆ ಪಡೆಯುತ್ತಿದ್ದರು. ಮಕ್ಕಳನ್ನು 2 ದಿನಗಳ ಶಾಲಾ ಟೂರ್‌ಗೆ ಕಳುಹಿಸುವುದೋ ಬೇಡವೋ ಎನ್ನುತ್ತಿದ್ದವಳಿಗೆ, ನಾನೇ ಧೈರ್ಯ ತುಂಬಿ ಬೆಳಗ್ಗೆ 6 ಗಂಟೆಗೆ ಮಕ್ಕಳನ್ನು ಶಾಲೆ ಬಳಿ ಕರೆದೊಯ್ದು ಬಸ್‌ ಹತ್ತಿಸಿ, ಮರುದಿನ ರಾತ್ರಿ 9 ಗಂಟೆಗೆ ಶಾಲೆಯಿಂದ ಮರಳಿ ಕರೆತಂದಿದ್ದೆ.

ಎಂದಿನಂತೆ ಸರ್ಕಾರಿ ಬ್ಯಾಂಕ್‌ ಆದ್ದರಿಂದ ನಮ್ಮಲ್ಲಿಯೂ ಸಹ ಸ್ಟ್ರೈಕ್‌ ಇತ್ತು. 2 ದಿನಗಳ ಈ ಮುಷ್ಕರದ ಕಾರಣ, ನಾನು ಮನೆಯಲ್ಲೇ ಉಳಿಯಬೇಕಾಯಿತು. ರಜೆ ಇದ್ದಾಗ ನಾನು ರತ್ನಾ ಮನೆಯಲ್ಲೇ ಊಟ ಮಾಡುವುದು ವಾಡಿಕೆಯಾಗಿತ್ತು. ಆದರೆ ಈ ದಿನ ಮನೆಯಲ್ಲಿ ಮಕ್ಕಳೂ ಇಲ್ಲದ ಕಾರಣ ನನಗೂ ಸಂಕೋಚವಾಗಿತ್ತು.

“ರತ್ನಾ…. ಒಳಗೆ ಬರಬಹುದೇ?”

“ಅರೆ ವಿನಯ್‌…. ಇದೇನು ಅಪರಿಚಿತರ ಹಾಗೆ ಅಪ್ಪಣೆ ಕೇಳಿಕೊಂಡು ಬರ್ತಿದ್ದೀರಿ, ಇಷ್ಟು ಫಾರ್ಮಲ್ ಆದರೆ ಹೇಗೆ?”

ಊಟ ಮುಗಿಸಿದ ನಂತರ ಇಬ್ಬರೂ ಟಿ.ವಿ ನೋಡತೊಡಗಿದೆವು. ಸ್ವಲ್ಪ ಹೊತ್ತಿನ ನಂತರ ರತ್ನಾ ತುಸು ಅಸಹನೆಯಿಂದ ಚಡಪಡಿಸುತ್ತಿರುವ ಹಾಗೆ ಅನ್ನಿಸಿತು.

“ಏನಾಯ್ತು ರತ್ನಾ, ಆರೋಗ್ಯ ಸರಿ ಇಲ್ಲವೇ?”

“ಹಾಗೇನಿಲ್ಲ…. ಸ್ವಲ್ಪ ತಲೆ ನೋವು ಅಷ್ಟೆ….”

ಆಗ ನಾನು ಸಹಜವಾಗಿ ಎದ್ದು ಬಂದು ಅಲ್ಲಿದ್ದ ಬಾಮ್ ತೀಡಿ, ಆಕೆಯ ತಲೆ ಒತ್ತತೊಡಗಿದೆ. ಅವಳು ಬೇಡ ಎನ್ನದ ಕಾರಣ ಹಿತವಾಗಿ ಹಾಗೇ ಒತ್ತತೊಡಗಿದೆ. ತಲೆ ಒತ್ತುವಾಗ ಕೈ ಯಾವಾಗ ಭುಜದವರೆಗೆ ಇಳಿದಿತ್ತೋ ಗೊತ್ತೇ ಆಗಲಿಲ್ಲ. ಅವಳು ಹಾಗೇ ಕಣ್ಣು ಮುಚ್ಚಿ ಸೋಫಾಗೆ ಒರಗಿದ್ದಳು. ಹಾಗೇ ನಾವಿಬ್ಬರೂ ಬೇರೊಂದು ಲೋಕಕ್ಕೆ ಜಾರಿದೆವು. ಅಷ್ಟರಲ್ಲಿ ಎಚ್ಚೆತ್ತ ರತ್ನಾ ಬೇಡ ಎನ್ನುವಂತೆ ಅಲ್ಲಿಂದ ಏಳಲು ಪ್ರಯತ್ನಿಸುವಷ್ಟರಲ್ಲಿ, ನಾನು ಬಾಗಿ ಅವಳ ತುಟಿಗೆ ತುಟಿ ಒತ್ತಿ ಚುಂಬಿಸಿದೆ.

ಅದಾದ ಮೇಲೆ ರತ್ನಾ ನಿರಾಕರಿಸಲೇ ಇಲ್ಲ. ನಾನು ಹಾಗೆಯೇ ಕರಗುತ್ತಾ ಅವಳ ಮೇಲೆ ಒರಗಿದೆ. ನಮ್ಮಿಬ್ಬರಲ್ಲೂ ಯಾವ ಸಂಕೋಚ ಉಳಿಯಲಿಲ್ಲ. ಎಷ್ಟೋ ವರ್ಷಗಳಿಂದ ಹಳೆಯ ಪ್ರೇಮಿಗಳು ಎಂಬಂತೆ ಇಬ್ಬರೂ ಮೈ ಮರೆತು ಒಂದಾದೆವು. ದೇಹಗಳು ಬೆಸೆದಂತೆ ಮನಗಳೂ ಬೆರೆತುಹೋದವು.

ಬಹಳು ಹೊತ್ತು ಹಾಗೆ ಮೈ ಮರೆತು ಮಲಗಿದ್ದ ನಾವು ಕಣ್ತೆರೆದಾಗ ಪರಸ್ಪರ ದಿಟ್ಟಿಸಲು ಸಂಕೋಚವಾಯಿತು. ಕೊನೆಗೆ ನಾನೇ ಮೌನ ಮುರಿದೆ.

“ರತ್ನಾ…. ನನ್ನ ಮೇಲೆ ಕೋಪವಿಲ್ಲ ತಾನೇ?”

“ಇಲ್ಲ…. ನಿಮ್ಮ ಮೇಲಲ್ಲ….. ಸಂಯಮ ಮರೆತ ನನ್ನ ಮೇಲೇ ನನಗೇ ಕೋಪ….”

“ಹಾಗೆಲ್ಲ ಭಾವಿಸಬೇಡ ರತ್ನಾ…… ಇದು ಇಬ್ಬರ ಬಯಕೆಯೂ ಹೌದು.”

“ಆದರೆ ನೀವು ಮದುವೆ ಆದವರು. ನಾನು…..”

“ಅದಕ್ಕೆ ನೀನು ವರಿ ಮಾಡಬೇಕಿಲ್ಲ. ಶೋಭಾ ಜೊತೆ ನನ್ನ ಮದುವೆ ಕೇವಲ ಔಪಚಾರಿಕವಷ್ಟೇ. ಹಿರಿಯರ ಒತ್ತಾಯಕ್ಕೆ ಮಣಿದು ಕಟ್ಟಿಕೊಂಡವಳನ್ನು ಬಿಡಲಾಗದೆ ಒದ್ದಾಡುತ್ತಿದ್ದೆ….. ಪ್ರೇಮ ಎಂದರೇನೆಂದು ನಿನ್ನನ್ನು ನೋಡಿಯೇ ತಿಳಿದುಕೊಂಡೆ.”

“ಆದರೆ….. ಮದುವೆ ಅನ್ನೋದು ದೊಡ್ಡದು…..”

“ರತ್ನಾ…. ಮದುವೆ ಆದ ಮಾತ್ರಕ್ಕೆ ಅದೊಂದು ಶಾಶ್ವತ ಬಂಧನವೇ? ಮದುವೆ ಆದ ಮೇಲೆ ಪತಿಪತ್ನಿ ನಡುವೆ ಸೆಕ್ಸ್ ನಡೆಯಬಹುದೇ ಹೊರತು ಪ್ರೇಮ ಬೆಳೆಯಲೇಬೇಕು ಅಂತೇನಿಲ್ಲ. ನಿನಗೆ ಈಗ ಪಶ್ಚಾತ್ತಾಪ ಆಗುತ್ತಿದೆಯೇ….?”

“ಪ್ರೇಮ ಎಂಬುದು ಹೆಚ್ಚಿನ ಮಾನಸಿಕ ಶಕ್ತಿ ನೀಡುತ್ತದೆ. ಅದು ಮಾನವರನ್ನು ದುರ್ಬಲ ಮಾಡಲ್ಲ. ಆದರೆ ಕಾಮುಕ ಭಾವನೆ ಮುಂದೆ ಪಶ್ಚಾತ್ತಾಪ ತರುತ್ತದೆ. ಯಾವ ವ್ಯಕ್ತಿಯನ್ನು ನಾನು ಮದುವೆ ಆಗಿದ್ದೆನೋ ಅವರಿಗೆ ನನ್ನ ದೇಹ ಮಾತ್ರ ಒಪ್ಪಿಸಿದೆ, ಮನಸ್ಸು ಒಲಿದು ಒಂದಾಗಲೇ ಇಲ್ಲ. ಆತನ ಸಾವಿನ ನಂತರ ನನ್ನ ಬಳಿ ಬರಲು ಯತ್ನಿಸಿದ ಗಂಡಸರೆಲ್ಲ ಕೇವಲ ಕಾಮಾಂಧ ದೃಷ್ಟಿಯಿಂದಲೇ ನೋಡಿದರು.

“ಆದರೆ ನೀವು ನನ್ನನ್ನು ಒಂದು ದೇಹ ಎಂದು ಗುರುತಿಸದೆ ಒಬ್ಬ ವ್ಯಕ್ತಿಯಾಗಿ ಆದರಿಸಿದಿರಿ. ಆದ್ದರಿಂದ ನನಗೆ ನಿಮ್ಮ ಬಗ್ಗೆ ಪ್ರೇಮ ಪ್ರೀತಿ ಹೆಚ್ಚುತ್ತಿದೆ. ಆದರೆ ಇಷ್ಟು ದಿನ ನಾನು ನಂಬಿಕೊಂಡು ಬಂದಿದ್ದ ಸಂಸ್ಕಾರಗಳ ದೃಷ್ಟಿಯಲ್ಲಿ ಇಂದು ನಾನೇ ಕಳಂಕಿತೆಯಾದೆ. ಸಮಾಜದ ದೃಷ್ಟಿಯಲ್ಲಿ ನಾನು ನಡತೆಗೆಟ್ಟವಳಾದೆ….” ಬಿಕ್ಕಳಿಸುತ್ತಿದ್ದ ರತ್ನಾಳನ್ನು ನಾನು ಸಂತೈಸಿ ಎದೆಗೆ ಒರಗಿಸಿಕೊಂಡೆ.

ಹೀಗೆ ನಮ್ಮ ನಡುವೆ ಹೊಸ ಬಾಂಧವ್ಯ ಚಿಗುರಿತು. ಅವಕಾಶ ಸಿಕ್ಕಿದಾಗೆಲ್ಲ ನಾವು ಒಟ್ಟೊಟ್ಟಿಗೆ ಸಮಯ ಕಳೆಯತೊಡಗಿದೆವು. ಎಲ್ಲಾ ಕಡೆ ಓಡಾಟ, ಶಾಪಿಂಗ್‌, ಸಿನಿಮಾ, ಬೀಚು….. ಮನೆಗೆ ಬಂದ ಮೇಲೆ ಊಟ ಮುಗಿಸಿ ಅವಳ ಮಕ್ಕಳಿಬ್ಬರನ್ನೂ ಬೇಗ ಮಲಗಿಸಿ, ನಂತರ ನಾವು ಆನಂದದ ಅಲೆಗಳಲ್ಲಿ ತೇಲಿ ಹೋಗುತ್ತಿದ್ದೆವು. ಈ ಕ್ರಮ ನಿರಂತರವಾಯಿತು. ಅದೇ ರೀತಿ ಬ್ಯಾಂಕಿನಲ್ಲಿ ಕೆಲಸ ಮಾಡುವಾಗಲೂ ನಾವು ಮೌನವಾಗಿ ಕಂಗಳಲ್ಲೇ ಮಾತಾಡಿಕೊಳ್ಳುತ್ತಾ, ಪ್ರೇಮದ ಕಳ್ಳಾಟ ನಡೆಸುತ್ತಿದ್ದೆವು. ಇದನ್ನು ಎಷ್ಟು ಜನ ಗಮನಿಸಿದರೋ ಏನೋ…. ನಾವಂತೂ ಎಲ್ಲೂ ಸಿಕ್ಕಿಹಾಕಿಕೊಳ್ಳಲಿಲ್ಲ.

ನಡುನಡುವೆ ನಾನು ಬೆಂಗಳೂರಿಗೂ ಹೋಗಿ ಬರುತ್ತಿದ್ದೆ. ಅಲ್ಲಿ ಅನುಕೂಲವಾದ ಮನೆ ಸಿಕ್ಕಿಲ್ಲ, ಇಟ್ಟಿಗೆ ಗೂಡಿನಂಥ ಒಂಟಿ ರೂಮಿನಲ್ಲಿ ಹೇಗೋ ಕಾಲ ಕಳೆಯುತ್ತಿದ್ದೇನೆ, ಇನ್ನೇನು ಬೆಂಗಳೂರಿಗೇ ವರ್ಗ ಆಗಿಬಿಡುತ್ತದೆ ಎಂದು ನಂಬಿಸುತ್ತಲೇ ಎರಡೂ ದೋಣಿಗಳಲ್ಲಿ ಕಾಲಿಟ್ಟು ನೆಮ್ಮದಿ ಅರಸುತ್ತಿದ್ದೆ. ಹೀಗೆ ಸ್ವಾತಿ ಹುಟ್ಟಿ 2 ವರ್ಷದ ಮಗುವಾದಳು. ಪ್ರತಿ ಸಲ ಮನೆಗೆ ಹೋಗುವಾಗಲೂ ಎಲ್ಲರಿಗೂ ಉಡುಗೊರೆ ಕೊಂಡು ಹೋಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ.

ಈ ನಡುವೆ ಶೋಭಾ ನನಗೆ ಆಗಾಗ ಒತ್ತಾಯಿಸಿ ಬೆಂಗಳೂರಿಗೆ ವರ್ಗ ಪಡೆಯುವಂತೆ ಜಗಳವಾಡುತ್ತಿದ್ದಳು. ನಾನು ಅವಳಿಗೆ ಏನೋ ಒಂದು ಸಮಜಾಯಿಷಿ ನೀಡಿ ನುಣುಚಿಕೊಳ್ಳುತ್ತಿದ್ದೆ. ಇವತ್ತು ರತ್ನಾ ಸಹ ನಮ್ಮ ಈ ಸಂಬಂಧ ಹೀಗೆ ಕದ್ದುಮುಚ್ಚಿ ಮುಂದುವರಿಸುವ ಬದಲು ಮದುವೆ ಆಗಿಬಿಡೋಣ ಎಂದು ಒತ್ತಾಯಿಸತೊಡಗಿದಳು. ಈ 2 ದೋಣಿಗಳ ಯಾನ ಈಗ ನನಗೆ ಜೀವಕ್ಕೆ ಕುತ್ತು ತಂದಿತ್ತು. ಯಾವುದಾದರೂ ಒಂದರಿಂದ ಇಳಿಯಲೇ ಬೇಕಿತ್ತು. ಇಲ್ಲದಿದ್ದರೆ ನಾನು ಮುಳುಗಿಹೋಗುವ ಸಂಭವವಿತ್ತು.

ಶೋಭಾಳಿಂದ ಸಿಗದ ತೃಪ್ತಿ, ನೆಮ್ಮದಿಗಳನ್ನು ನಾನು ರತ್ನಾಳಲ್ಲಿ ಕಂಡುಕೊಂಡಿದ್ದೆ. ಆದರೆ ಶೋಭಾಳ ಜೊತೆ ನನ್ನ ಸಂಸಾರದ ನಂಟಿತ್ತು. ತಾಯಿ ತಂದೆಯರ ಜವಾಬ್ದಾರಿ, ಮಕ್ಕಳ, ಸಂಸಾರದ ಹೊಣೆ ಇತ್ಯಾದಿ. ಆದರೆ ರತ್ನಾಳಿಂದ ಸದಾ ಪ್ರೀತಿ ಪಡೆಯುವುದೊಂದೇ ಆಗಿತ್ತು. ಹೀಗಾಗಿ ಸಹಜವಾಗಿಯೇ ನನ್ನ ಮನಸ್ಸು ಮುಂದಿನ ಭವಿಷ್ಯದ ಬಗ್ಗೆ ಗಾಬರಿಗೊಂಡು, ಆಸ್ಪತ್ರೆಗೆ ದಾಖಲಾಗಿದ್ದ ತಾಯಿತಂದೆಯರನ್ನು ಕೊನೆಗಾಲದಲ್ಲಿ ಹತ್ತಿರದಲ್ಲಿದ್ದು ನೋಡಿಕೊಳ್ಳೋಣ, ಶೋಭಾ ಒಬ್ಬಳೇ 2 ಮಕ್ಕಳೊಂದಿಗೆ ಎಷ್ಟೆಂದು ಸುಧಾರಿಸುತ್ತಾಳೆ ಎಂದು ಸೀರಿಯಸ್‌ ಆಗಿ ವರ್ಗಾವಣೆಗೆ ಯತ್ನಿಸತೊಡಗಿದೆ.

“ಓ….. ನೀನು ಬೆಂಗಳೂರಿಗೇ ಹೊರಡುವುದೆಂದು ನಿಶ್ಚಯಿಸಿದೆಯಾ?”

ರತ್ನಾಳಿಂದ ಈ ಆಕ್ಷೇಪಣೆಯ ನುಡಿಗಳನ್ನು ಎಂದಿನಿಂದಲೋ ಎದುರು ನೋಡುತ್ತಿದ್ದೆ. ಅವಳಿಗೆ ಗೊತ್ತಾಗಬಾರದೆಂದು ಆಫೀಸ್‌ನಲ್ಲಿ ನಾನು ವರ್ಗಾವಣೆಯ ವಿಷಯ ಎಷ್ಟೇ ಮುಚ್ಚಿಟ್ಟಿದ್ದರೂ, ಮತ್ಸರದ ಬುದ್ಧಿಯ ಯಾರೋ ಕಿಡಿಗೇಡಿಗಳು ಮದ್ದುಗುಂಡಿಗೆ ಬೆಂಕಿ ಹಚ್ಚಿದ್ದರು.

“ಹ್ಞೂಂ….. ಅದು ಸ್ವಲ್ಪ ಅರ್ಜೆಂಟ್‌ ಕೆಲಸವಿತ್ತು……”

“ಅದನ್ನು ನನಗೆ ಹೇಳಬೇಕು ಅಂತಲೂ ಅನ್ನಿಸಲಿಲ್ಲ…. ಅಲ್ಲವೇ?”

“ರತ್ನಾ, ಪೀಠಿಕೆ ಬೇಡ….. ನಾನು ನೇರವಾಗಿಯೇ ವಿಷಯಕ್ಕೆ ಬರುತ್ತೇನೆ. ನಮ್ಮ ಸಂಬಂಧ ಇಲ್ಲಿಗೇ ಸಾಕು, ನನ್ನ ತಾಯಿ ತಂದೆಗೆ ಹುಷಾರಿಲ್ಲ. ನಾನು ಬೆಂಗಳೂರಿನಲ್ಲಿ ಅವರ ಕೊನೆಗಾಲದಲ್ಲಿ ಬಳಿ ಇದ್ದು ನೋಡಿಕೊಳ್ಳಲೇಬೇಕು. ಹೀಗಾಗಿ…..”

“ಆದರೆ ನೀನು ನನ್ನನ್ನೇ ಹೆಚ್ಚು ಪ್ರೇಮಿಸುತ್ತಿರುವುದಾಗಿ ಎಂದೂ ಬಿಡಲಾರೆ ಎಂದು ಹೇಳುತ್ತಿದ್ದೆ…..!”

“ಹೌದು, ಅದು ಆ ಕಾಲಕ್ಕೆ ಆಯಿತು. ಆದರೆ ಈಗ…..”

“ಓ…. ಈ ಕಾಲಕ್ಕೆ ಎಲ್ಲಾ ಮುಗಿದುಹೋಯಿತು ಅಂತ್ಲೇ…..?”

“ರತ್ನಾ….. ಇದೆಂಥ ಮಾತುಗಳು…  ಇದು ನಮ್ಮಿಬ್ಬರ ಸಂಪೂರ್ಣ ಒಪ್ಪಿಗೆಯಿಂದ ನಡೆದ ಸಂಬಂಧ. ನಾನು ನಿನ್ನನ್ನು ಬೇಡಿಕೊಳ್ಳಲಿಲ್ಲ ಅಥವಾ ಬಲವಂತಪಡಿಸಲೂ ಇಲ್ಲ. ಹೌದು ತಾನೇ?”

“ಆಗ ಇಬ್ಬರಿಗೂ ಬೇಕಿತ್ತು, ಆದರೆ ಈಗ ನಿನಗೆ ಬೇಡವಾಗಿದೆ! ಆಯ್ತು ಬಿಡು, ನನಗೆ ಎಲ್ಲಾ ಅರ್ಥ ಆಗ್ತಿದೆ. ನಿನಗೆ ನಿನ್ನದೇ ಆದ ಸಂಸಾರವಿದೆ, ಜವಾಬ್ದಾರಿಗಳಿವೆ. ಆದರೆ ಇವನ್ನೆಲ್ಲ ನನಗೆ ಕನ್ವಿನ್ಸ್ ಆಗುವ ರೀತಿಯಲ್ಲಿ ಹೇಳಿ ಒಪ್ಪಿಸಬಹುದಿತ್ತು. ಅದೇನೂ ಮಾಡದೆ ಕದ್ದುಮುಚ್ಚಿ ಓಡಿ ಹೋಗಲು ಯತ್ನಿಸಿದೆ. ಯಾರೋ ಮೂರನೆಯವರಿಂದ ನೀನು ವರ್ಗಾವಣೆ ಆಗ್ತಿದ್ದಿ ಅಂತ ಗೊತ್ತಾಯಿತು. ಏನೂ ತಿಳಿಸದೆ ಹೋಗಿಬಿಡಬೇಕು ಅಂತ ತಾನೇ ನಿನ್ನ ಐಡಿಯಾ? ನನ್ನ ಪ್ರೇಮ ಈಗ ನಿನಗೆ ಕಾಲ ಕಸವಾಯ್ತೆ?”

“ನನ್ನ ಬಗ್ಗೆ ನೀನು ಯಾವುದೇ ಅಪೇಕ್ಷೆ ಇಟ್ಟುಕೊಳ್ಳಬಾರದು ಅಂತ ನಿನಗೂ ಗೊತ್ತಲ್ಲವೇ?”

“ಅಂದರೆ…. ನನ್ನನ್ನು ಬೇಕಾದಂತೆ ಬಳಸಿಕೊಂಡು ಈಗ ಕಸದಂತೆ ಬಿಸಾಡಿ ಹೋಗುವುದೇ ನ್ಯಾಯ! ಅಲ್ಲವೇ?”

“ಹೇಳಿದ್ದನ್ನೇ ಹೇಳ್ತೀಯಾ…. ನಾನು ಮಾತ್ರ ಮಜಾ ಮಾಡಿದೆ ಅಂತೀಯಲ್ಲ…. ನಿನಗೂ ಅದೂ ಮಜಾ ಆಗಿರಲಿಲ್ಲವೇ…. ಪ್ರತಿಯೊಂದಕ್ಕೂ ಹಣ ತೆತ್ತಿದ್ದೇನೆ, ನಾನೇನೂ ನಿನ್ನ ಋಣದಲ್ಲಿಲ್ಲ ಬಿಡು!”

ಛೇ….ಛೇ… ನಾನಾ ಈ ರೀತಿ ಮಾತನಾಡುತ್ತಿರುವುದು? ಹೀಗೆಲ್ಲ ಮಾತನಾಡಿದ್ದಕ್ಕೆ ನನ್ನ ಮೇಲೆ ನನಗೆ ಕೆಟ್ಟ ಕೋಪ ಬರುತ್ತಿದೆ…. ಆದರೆ ಸ್ವಾರ್ಥ ಸಾಧನೆ ಆಗಲೇಬೇಕಲ್ಲ? ರತ್ನಾ ಎಂದೂ ನನ್ನ ಬಳಿ ಊಟ, ಹೊರಗಿನ ಸುತ್ತಾಟದ ಖರ್ಚಿಗಾಗಿ ಹಣ ತೆಗೆದುಕೊಂಡವಳೇ ಅಲ್ಲ. ಅವಳ ಒಂಟಿತನ ನೀಗಿಸುವ ನೆಪದಲ್ಲಿ ನಾನೇ ಅವಳನ್ನು ಧಾರಾಳ ಲೂಟಿ ಮಾಡಿದ್ದೆ.

“ಇರಲಿ…. ಹೋಗು! ನಾನು ನಿನಗೆ ಎಂಥ ಪಾಠ ಕಲಿಸ್ತೀನಿ ಅಂತ ನೋಡ್ತಿರು. ಇಂದು ನನಗೆ ಮಾಡಿದ ಈ ವಿಶ್ವಾಸದ್ರೋಹವನ್ನು ಬೇರೆ ಯಾವ ಹೆಂಗಸಿಗೂ ಮಾಡಬೇಡ. ಇದಕ್ಕೆ ನಿನಗೆ ಶಿಕ್ಷೆ ಆಗಲೇಬೇಕು. ನಿನ್ನಂಥ ಸ್ವಾರ್ಥಿ ಎಂದೂ ಉದ್ಧಾರ ಆಗಲಾರ…. ನಿನ್ನಂಥ ವ್ಯಕ್ತಿಯನ್ನು ಪ್ರೇಮಿಸಿದೆನಲ್ಲ ಎಂದು ನನಗೆ ಅಸಹ್ಯವಾಗುತ್ತಿದೆ.”

ಅದಾಗಿ 2 ದಿನ ರತ್ನಾ ನನ್ನೊಂದಿಗೆ ಮಾತನಾಡಲೇ ಇಲ್ಲ. ಊರಿಗೆ ಹೊರಡಲು ನಾನು ಎಲ್ಲಾ ತಯಾರಿ ನಡೆಸಿದೆ.

ಅಷ್ಟರಲ್ಲಿ ನನ್ನ ಹೆಸರಿಗೆ ಒಂದು ಲಾಯರ್‌ ನೋಟೀಸ್‌ ಬಂತು. ಏನೆಂದು ತೆರೆದು ನೋಡಿದರೆ…. ರತ್ನಾ ನನ್ನ ಮೇಲೆ ರೇಪ್ ಕೇಸ್‌ ಹಾಕಿದ್ದಳು.

ನನ್ನ ಜಂಘಾಬಲವೇ ಉಡುಗಿದಂತಾಯಿತು. ಇದನ್ನು ನಾನು ಮನೆಯವರಿಗೆ ತಿಳಿಸಲೇಬೇಕಾಯಿತು. ಎಲ್ಲರೂ ಮುಂಬೈಗೆ ಬಂದಾಗ ನಾನು ಶೋಭಾ ಬಳಿ ನಿಜ ಒಪ್ಪಿಕೊಂಡು ಮತ್ತೆ ಮತ್ತೆ ಕ್ಷಮೆ ಯಾಚಿಸಿದೆ.

“ನೀವು ಎಷ್ಟು ಸುಲಭವಾಗಿ ಹೇಳಿಬಿಟ್ಟಿರಿ…. ಇದೇ ತರಹ ನಾನು ಪರಪುರುಷನ ಬಳಿ ಕಾಲುಜಾರಿ ನಡೆದುಕೊಂಡಿದ್ದು ನಿಮ್ಮ ಬಳಿ ಬಂದು ಕ್ಷಮೆ ಕೇಳಿದ್ದರೆ…. ಆಗ…. ಆಗ ನೀವು ನನ್ನ ಕ್ಷಮಿಸುತ್ತಿದ್ದಿರಾ?”

ನಾನಂತೂ ಬಾಯಿ ಬಿಡಲಾರದೆ ಸುಮ್ಮನಿದ್ದೆ. ಏನು ತಾನೇ ಜವಾಬು ನೀಡಲಿ?

“ಯಾಕೆ ಸುಮ್ಮನಾಗಿಬಿಟ್ರಿ? ಬೇಗ ಹೇಳಿ.”

“ಬಹುಶಃ ಇಲ್ಲ….”

“ಬಹುಶಃ…. ಹ…ಹ್ಹ….ಹಾ…. ಬಹುಶಃ ಏನು ಬಂತು? ಖಂಡಿತಾ ನೀವು ನನ್ನ ಕ್ಷಮಿಸುತ್ತಿರಲಿಲ್ಲ! ಗಂಡಸು ಹೀಗೆ ಹಾದಿ ತಪ್ಪಿದರೆ ಹೆಂಗಸು ಅವನನ್ನು ಅನುಸರಿಸಿಕೊಂಡು ಹೋಗಬೇಕು ಎನ್ನುತ್ತದೆ ಈ ಸಮಾಜ. ಆದರೆ ಅದೇ ತಪ್ಪನ್ನು ಒಬ್ಬ ಹೆಣ್ಣು ಮಾಡಿದಾಗ, ಈ ಸಮಾಜ ಅದಕ್ಕೆ ನಾನಾ ಹೆಸರಿಟ್ಟು ಅವಳನ್ನು ಚಿತ್ರವಧೆ ಮಾಡುತ್ತದೆ.

“ಈ ಕೇಸಿನಲ್ಲಿ ಯಾವ ಹೆಣ್ಣಿನಿಂದ ನನಗೆ ಅನ್ಯಾಯವಾಗಿದೆಯೋ ಅವಳ ಮೇಲೆ ನನಗೆ ಕೋಪ ಬರುತ್ತಿಲ್ಲ, ಆದರೆ ದಯೆ, ಹೆಮ್ಮೆ ಎನಿಸುತ್ತಿದೆ. ಇಂಥ ನೀಚ ಕೆಲಸ ಮಾಡಿ ಒಬ್ಬ ಗಂಡಸನ್ನು ತಲೆ ತಗ್ಗಿಸುವಂತೆ ಮಾಡಿದಳಲ್ಲ…. ಅದೂ ಸಾಹಸವೇ ಸರಿ.”

“ಅಂದರೆ…. ನೀನು ನನ್ನನ್ನು ಕ್ಷಮಿಸಲ್ಲವೇ….?”

“ನಾನು ಅವಳಂತೆ ಸಾಹಸಿಯಲ್ಲ….. ಆದರೆ ಒಂದು ಮಾತು ನೆನಪಿಡಿ…. ಮಕ್ಕಳ ಕಾರಣ ನಾನು ನಿಮ್ಮೊಂದಿಗೆ ಸಂಸಾರ ಮುಂದುವರಿಸುತ್ತೇನೆ, ಆದರೆ ಇನ್ನೆಂದಿಗೂ ದಾಂಪತ್ಯ ಹಂಚಿಕೊಳ್ಳಲಾರೆ…. ಸಮಾಜದ ದೃಷ್ಟಿಯಲ್ಲಿ ಮಾತ್ರ ನಾವು ದಂಪತಿಗಳು….” ಎಂದು ಅಳುತ್ತಾ ಒಳಗೆ ಹೋಗಿಬಿಟ್ಟಳು.

ನಾಚಿಕೆ, ಅಪಮಾನಗಳಿಂದ ನಾನು ತಲೆ ತಗ್ಗಿಸಿದ್ದೆ.

ಅಂತೂ ಕೇಸ್‌ ಕೋರ್ಟಿಗೆ ಬಂದಿತ್ತು. ಈ ಸಮಾಜ ಒಬ್ಬಂಟಿ, ಅಸಹಾಯಕ ವಿಧವೆಗೆ ಎಂದೂ ಅನುಕಂಪ ತೋರಿಸಲಾರದು. ಕೇಸ್‌ ಹಿಯರಿಂಗ್‌ ದಿನ ನಾನು ಕೇಳದೆಯೇ ನನ್ನ ಸಹೊದ್ಯೋಗಿಗಳು ನನ್ನ ಪರವಾಗಿ ಸಾಕ್ಷಿ ನುಡಿದಿದ್ದರು. ಅವರಿಗೆ ಅವಳು ಸೆರಗು ಹಾಸಿರಲಿಲ್ಲವಲ್ಲ…. ಆ ಸೇಡನ್ನು ಈ ರೀತಿ ತೀರಿಸಿಕೊಂಡರು. ನಾನು ಅವಳೊಂದಿಗೆ ಎಂದೂ ಅಸಭ್ಯವಾಗಿ ವರ್ತಿಸಿಯೇ ಇರಲಿಲ್ಲ, ರತ್ನಾ ತಾನೇ ಮೇಲೆ ಬಿದ್ದು ಎಲ್ಲರೊಂದಿಗೂ ಚೆಲ್ಲು ಚೆಲ್ಲಾಗಿ ಆಡುತ್ತಿದ್ದಳು ಎಂದರು.

ನನ್ನ ಮನೆಯ ನೆರೆಹೊರೆಯವರು ಸಹಜವಾಗಿ, ನಾನು ಆಕೆಯ ಬಳಿ ಎಂದೂ ಅನುಚಿತವಾಗಿ ವರ್ತಿಸಿದ್ದಿಲ್ಲ, ಇಬ್ಬರೂ ಅಂಥ ಗಲಾಟೆ ಮಾಡಿಕೊಂಡಿದ್ದಿಲ್ಲ, ಬದಲಿಗೆ ನಾನು ರತ್ನಾಳಿಗೆ ಬೇಕಾದಷ್ಟು ಸಹಾಯ ಮಾಡಿದ್ದನ್ನು ಕಣ್ಣಾರೆ ನೋಡಿದ್ದೇವೆ ಎಂದರು.

ರತ್ನಾಳ ಪರವಾಗಿ ಯಾವುದೇ ಗಟ್ಟಿ ಸಾಕ್ಷಿ ಆಧಾರಗಳಿಲ್ಲದ ಕಾರಣ, ಅವಳ ಮಕ್ಕಳೂ ನನ್ನನ್ನು ಕೋರ್ಟ್‌ನಲ್ಲಿ ಹಾರ್ದಿಕವಾಗಿ ಮಾತನಾಡಿಸಿದ್ದರಿಂದ ಕೇಸ್‌ ಬೇಗ ಬಿದ್ದುಹೋಯಿತು.

ಹೇಗಾದರೂ ಈ ಕೇಸನ್ನು ಹೈಕೋರ್ಟ್‌ವರೆಗೂ ಎಳೆದೊಯ್ಯುವ ಸಾಹಸ, ಹಣ ರತ್ನಾಳ ಬಳಿ ಇರಲಿಲ್ಲ. ಹೀಗಾಗಿ ಅವಳು ಸುಮ್ಮನಾದಳು. ಇಷ್ಟೆಲ್ಲ ಅವಮಾನ ಆದ ಮೇಲೆ ಅವಳು ಅದೇ ಬ್ಯಾಂಕ್‌ನಲ್ಲಿ ಹೇಗೆ ತಾನೇ ಕೆಲಸ ಮುಂದುವರಿಸಲು ಸಾಧ್ಯ? ಅಲ್ಲಿಂದ ಅವಳು ದೆಹಲಿಗೆ ವರ್ಗಾವಣೆ ಪಡೆದು, ಮಕ್ಕಳೊಂದಿಗೆ ಹೊರಟುಹೋದಳು.

ಹೊರಡುವ ಮುಂಚೆ ನನ್ನೊಂದಿಗೆ ಕಡೆಯದಾಗಿ ಮಾತನಾಡ ಬಯಸಿದಳು, “ಇಂದು ನನ್ನೊಂದಿಗೆ ಏನೇ ಘಟಿಸಿದ್ದರೂ ಅದು ಮರೀಚಿಕೆಯ ಬೆನ್ನು ಹತ್ತಿ ಹೋಗುವ ನನ್ನಂಥ ಹೆಂಗಸರಿಗೆ ಒಂದು ಪಾಠ. ನನ್ನಂಥ ಮೂರ್ಖಳಿಗೆ ತಕ್ಕ ಶಿಕ್ಷೆ ಆಯಿತೆಂದೇ ಭಾವಿಸುತ್ತೇನೆ. ಆದರೆ ನೀನು ಮಾತ್ರ…. ಇರಲಿ, ಶಾಶ್ವತವಾಗಿ ನಾನು ದೂರ ಹೋಗುತ್ತಿದ್ದೇನೆ. ನಿನ್ನ ಈ ದುಷ್ಟ ಹಾವಿನ ಬುದ್ಧಿಯನ್ನು ನಿನ್ನ ಮಕ್ಕಳಿಗೆ ಕಲಿಸಬೇಡ. ನಿನಗೂ ಒಬ್ಬ ಮಗಳಿದ್ದಾಳೆ… ನಾಳೆ ಅವಳೂ ವಯಸ್ಸಿಗೆ ಬರುತ್ತಾಳೆ….” ಮುಂದೆ ಮಾತನಾಡಾಗದೆ ಅವಳು ಬಿಕ್ಕಳಿಸುತ್ತಾ ಹೊರಟುಹೋದಳು.

ಈ ಮಾತುಗಳು ನನ್ನ ಕಿವಿಗೆ ಕಾದ ಸೀಸ ಹೊಯ್ದಂತಾಯಿತು. ಅಸಹಾಯಕನಾಗಿ ಕೇಳಿಸಿಕೊಳ್ಳುತ್ತಾ ಇರಬೇಕಾಯಿತು. ನನ್ನ ಬಗ್ಗೆ ಧಿಕ್ಕಾರ ಎನಿಸಿತು. ಅಂತೂ ನಾನು ವರ್ಗಾವಣೆ ಪಡೆದು ಬೆಂಗಳೂರಿಗೆ ನನ್ನ ಮನೆಯವರ ಬಳಿ ಬಂದು ನೆಮ್ಮದಿಯಾಗಿ ಇರಲು ಬಯಸಿದೆ. ನನ್ನ ಶೋಭಾ ನಡುವೆ ಉಂಟಾದ ಕಂದಕ ಎಂದೂ ಮುಚ್ಚಿಕೊಳ್ಳಲೇ ಇಲ್ಲ. ಇಬ್ಬರೂ ನಮ್ಮ ಪಾಲಿನ ಕರ್ತವ್ಯ ನಿಭಾಯಿಸುತ್ತಿದ್ದೆವು. ಮಕ್ಕಳ ಮುಂದೆ ಎಂದೂ ಗುಟ್ಟು ಬಿಟ್ಟುಕೊಡಲಿಲ್ಲ. ಹೆಂಗಸಾಗಿ ಶೋಭಾ ನನ್ನನ್ನು ಎಂದೂ ಕ್ಷಮಿಸಲೇ ಇಲ್ಲ. ನಾನಾದರೂ ರತ್ನಾಳನ್ನು ಮರೆಯಲು ಸಾಧ್ಯವಾಯಿತೇ? ಇಬ್ಬರಿಗೂ ನ್ಯಾಯ ಒದಗಿಸದ ನಾನು ದ್ರೋಹಿಯೇ ಸರಿ.

ಇದೆಲ್ಲ ಹಳೆಯ ಪ್ರಸಂಗಗಳು ಪುಂಖಾನುಪುಂಖವಾಗಿ ನನ್ನೆದುರು ತೆರೆದುಕೊಂಡಿದ್ದವು. ಹಿಂದೆ ನಾನು ಒಬ್ಬ ಹೆಣ್ಣಿಗೆ ಮೋಸ ಮಾಡಿದ್ದೆ…. ಇಂದು ವಯಸ್ಸಿಗೆ ಬಂದ ನನ್ನ ಮಗಳು ತನ್ನಿಷ್ಟಕ್ಕೆ ನಡೆಯಬೇಕೆಂದು ಯಾರ ಬಳಿಯೋ ಮೋಸಹೋಗಲಿದ್ದಳು. ಇಲ್ಲ….. ನನ್ನ ಮಗಳು ಸ್ವಾತಿ ಹೀಗೆ ದಾರಿ ತಪ್ಪುದಕ್ಕೆ ನಾನೆಂದೂ ಬಿಡುವುದಿಲ್ಲ…. ಅದೂ ನನ್ನ ಹೆಂಡತಿ ಊರಲ್ಲಿ ಇಲ್ಲದಾಗ ಹೀಗೇನಾದರೂ ಅನಾಹುತವಾದರೆ ಶೋಭಾಳೆದುರು ನಾನು ಮತ್ತೆ ತಲೆ ಎತ್ತದಂತೆ ಆದೀತು…… ಹೇಗಾದರೂ ಮಾಡಿ ನಾನು ಸ್ವಾತಿಗೆ ತಿಳಿ ಹೇಳಲೇ ಬೇಕು.

ಅವಳು ನನಗಿಂತ ಬುದ್ಧಿವಂತೆ, ಖಂಡಿತಾ ಅರ್ಥ ಮಾಡಿಕೊಳ್ಳಬಲ್ಲಳು. ಮುಂದೆ ಅವಳು ಒಪ್ಪಿದವನನ್ನೇ ಕೈಹಿಡಿಯಲಿ, ಈಗ ಈ ಗಂಡಾಂತರದಿಂದ ಪಾರಾದರೆ ಸಾಕು.

ಅಕಸ್ಮಾತ್‌ ಅವಳು ನನ್ನ ಮಾತಿಗೆ ಒಪ್ಪದೆ ಹೋದರೆ? ಆ ರಮಣನನ್ನೇ ಮದುವೆ ಆಗ್ತೀನಿ ಅಂದ್ರೆ….. ಆಗ ಹೇಗಾದರೂ ರಮಣನನ್ನೇ ಒಪ್ಪಿಸಬೇಕು, ಅವನ ಕಾಲಿಗೆ ಬಿದ್ದಾದರೂ ಸರಿ…. ಅವನ ಹೆಂಡತಿಗೂ ವಿಷಯ ತಿಳಿಸಿ ಸಂಸಾರ ಒಡೆಯದಂತೆ ಉಳಿಸಿಕೋ ಎನ್ನಬೇಕು. ಆದರೆ ಇಂಥ ಘೋರ ಪರಿಸ್ಥಿತಿ ಬರಬಾರದು ಎಂದೇ ನನಗೆ ಅನಿಸುತ್ತಿತ್ತು. ನನ್ನ ಮಗಳು ಜಾಣೆ…. ನಾನು ಹಿಂದೆ ಮಾಡಿದ ಅನೈತಿಕ ಕಾರ್ಯ ಮಾಡಲಾರಳು.

ನಾನು ಅವಳ ಕೋಣೆಯ ಒಳಗೆ ಪ್ರವೇಶಿಸಬೇಕು, ಆಗ ಅವಳು ಬಾಲ್ಕನಿಯಲ್ಲಿ ನಿಂತು ತನ್ನ ಗೆಳತಿ ಜೊತೆ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡೆ. ಆ ಕೋಣೆಯ ಒಂದು ಮೂಲೆಯಲ್ಲಿ, ಬಾಲ್ಕನಿಯಲ್ಲಿದ್ದ ಅವರಿಗೆ ಕಾಣದಂತೆ, ಅವರ ಮಾತು ಕೇಳಿಸಿಕೊಳ್ಳುತ್ತಾ ನಿಂತಿದ್ದೆ……

“ಏನೇ ಅದು…. ಆ ರಮಣ್‌ ನಮ್ಮ ಬಾಸ್‌ ಅಂತ ಗೊತ್ತಿದ್ದರೂ ಸದಾ ಅವನ ಹಿಂದೆ ಸುತ್ತುತ್ತೀಯಾ…. ಜನ ಆಫೀಸ್‌ನಲ್ಲಿ ಏನೆಲ್ಲ ಮಾತನಾಡಿಕೊಳ್ತಾರೆ ಗೊತ್ತಾ?”

“ಏನೇ ಅಂತಾರೆ…. ಅನ್ನಲಿ ಬಿಡು. ಅವರ ಬಾಯಿಗೆ ಯಾರು ಬೀಗ ಹಾಕ್ತಾರೆ?”

“ಬಣ್ಣದ ಚಿಟ್ಟೆ ನೀನು…. ಬಾಸ್‌ನ್ನು ಬೇಕಾದಂತೆ ಕುಣಿಸುತ್ತೀಯ…. ನಿನ್ನನ್ನು ಮಾರಿಕೊಂಡಿದ್ದೀಯಾ ಅಂತ…..”

“ಯಾರಿಗೆ ಅದನ್ನು ನನ್ನ ಮುಂದೆ ಹೇಳುವ ಧೈರ್ಯವಿದೆಯೇ? ಬಾಸ್‌ ರೈಟ್‌ ಹ್ಯಾಂಡ್‌ ನಾನು! ಎಲ್ಲರ ಜುಟ್ಟು ನನ್ನ ಕೈಲಿ ಅಂತ ಎಲ್ಲರಿಗೂ ಗೊತ್ತು…..”

“ಆ ರಮಣ್‌ಗೆ ಮದುವೆ ಆಗಿದೆ ಅಂತ ನಿನಗೆ ಗೊತ್ತಿದೆ ತಾನೇ? ಹೋಗಿ ಹೋಗಿ ಆ 40+ನಾ…..”

“ಗೊತ್ತಿದೆ ಬಿಡೆ. ವಯಸ್ಸಲ್ಲ….. ಹಣ, ಅಧಿಕಾರ ಮುಖ್ಯ!”

“ಸ್ವಾತಿ, ಒಂದು ವಿಷಯ ನೆನಪಿಡು. ಯಾವ ವ್ಯಕ್ತಿ ತನ್ನ ಹೆಂಡತಿಗೇ ಹಿರಿದಾದ ಸ್ಥಾನ ನೀಡಿ ಗೌರವಿಸಲಿಲ್ಲವೋ ನಾಳೆ ನಿನ್ನಂಥ ಕೀಪ್‌ಗೆ ಬೆಲೆ ಕೊಡ್ತಾನೆಯೇ? ನಾಳೆ ಅವನ ಬುಡಕ್ಕೆ ಬಂದರೆ ಮೊದಲು ನಿನ್ನ ಕಾಲಿನಿಂದ ಒದೆಯುತ್ತಾನಷ್ಟೆ…..”

“ಹ….ಹ್ಹ…..ಹಾ! ಅವನ್ಯಾರೆ ನನ್ನ ಬಿಡಲಿಕ್ಕೇ? ನನ್ನನ್ನು ಗಂಡಸರು ಬಿಡೋದಲ್ಲ, ಅವರು ಬಾಯಿ ಬಿಡುತ್ತಿರುವ ಹಾಗೆಯೇ ಅವರನ್ನು ಬದಲಿಸಿ ನಾನು ಮುಂದೆ ಹೋಗಿಬಿಡುತ್ತೇನೆ. ಒಂದು ಸಣ್ಣ ಆ್ಯಡ್‌ ಏಜೆನ್ಸಿಯಿಂದ ಇಂದು ಈ ಕಂಪನಿಯಲ್ಲಿ ಈ ಮಟ್ಟಕ್ಕೆ ಸುಮ್ಮನೆ ಬಂದೆನೇ…?”

“ಏನು ಹೇಳ್ತಿದ್ದೀಯೇ…. ಮತ್ತೆ ನೀನು ರಮಣ್‌ ಜೊತೆ ಮದುವೆ ಆಗಲ್ವಾ?”

“ಮದುವೆ….? ಮೈ ಫುಟ್‌! ಯಾವಳಿಗೆ ಬೇಕು ಮದುವೆ?! ಈಗಾಗಲೇ ಜಯನಗರದ ನಮ್ಮ ಹೆಡ್‌ ಆಫೀಸ್‌ ಬಾಸ್‌ಗೆ ಮೊನ್ನೆ ಮೀಟಿಂಗ್‌ಗೆ ಬಂದಾಗಲೇ ಫಿಕ್ಸ್ ಮಾಡಿಸಿಕೊಂಡಿದ್ದೀನಿ. ಇನ್ನೊಂದು ವಾರದಲ್ಲಿ ನನ್ನ ವರ್ಗ ಹೆಡ್‌ ಆಫೀಸಿಗೆ ಆಗುತ್ತದೆ. ಆ ಸೀನಿಯರ್‌ ಬಾಸ್‌ಗೆ ನಾನು ಸೆಕ್ರೆಟರಿ ಆದ ಮೇಲೆ ರಮಣನಂಥ ಜುಜುಬಿ ನನಗೆ ಯಾವ ಲೆಕ್ಕ? ನೋಡ್ತಾ ಇರು…. ಇಂಥ ಒಂದಲ್ಲ 10 ರಮಣರನ್ನು ಬುಗುರಿ ಆಡಿಸ್ತೀನಿ….”

“ಆದರೆ ಎಷ್ಟು ದಿನ ಹೀಗಿರಬಲ್ಲೆ? ಆ ಬಾಸ್‌ ಕಣ್ಣಿಗೆ ಮಣ್ಣೆರೆಚುತ್ತಿದ್ದರೆ ನಿನ್ನ ಭವಿಷ್ಯ?”

“ನನ್ನ ಕಂಟ್ರೋಲ್‌ನಲ್ಲಿ ಆ ಮನುಷ್ಯ ಇರುವವರೆಗೂ ಎಲ್ಲಾ ಓ.ಕೆ. ನಾಳೆ ಇನ್ನೊಂದು ಕೋಟ್ಯಾಧಿಪತಿ ಕ್ಲೈಂಟ್‌ ಬಂದರೆ ಇವನಿಗೆ ಕೈ ಕೊಟ್ಟು ಅಲ್ಲಿಗೆ ಹಾರ್ತೀನಿ….. ಇಂಥವರ ವಿರುದ್ಧ ಎಲ್ಲ ಡಾಕ್ಯುಮೆಂಟ್ಸ್ ನನ್ನ ಪರವಾಗಿ ಇರುವಂತೆ ತಯಾರಿ ಮಾಡಿಕೊಳ್ತೀನಿ. ನನ್ನನ್ನು ಕೆಣಕಿದನೋ…. ಗೊತ್ತಲ್ಲ, ರೇಪ್‌ ಕೇಸ್‌ ಹಾಕಿಬಿಡ್ತೀನಿ! ಕಂಬಿ ಕಂಬಿ ಎಣಿಸುವಂತೆ ಮಾಡ್ತೀನಿ. ಈಗಿನ ಕಾಲದಲ್ಲಿ ಹೆಣ್ಣು ಮನಸ್ಸು ಮಾಡಿದರೆ ಯಾವ ಪದವಿಯಲ್ಲಿರುವ ಗಂಡಸನ್ನೂ ಈ ಷರತ್ತಿನ ಮೇಲೆ ಅಲ್ಲಾಡಿಸಬಹುದು, ಕೋರ್ಟ್ ಈಗ ಹೆಂಗಸರ ಪರ….. ಈ ಕೋರ್ಟ್‌ ಅಲ್ಲದಿದ್ದರೆ ಹೈ ಕೋರ್ಟ್‌….. ಸುಪ್ರೀಂ ಕೋರ್ಟ್‌…. ಹಣಕ್ಕೆ ನನಗೇನೂ ಬರವಿಲ್ಲ…..”

ನನ್ನ ಕಾಲ ಕೆಳಗಿನ ನೆಲ ಕುಸಿದಂತಾಯಿತು. ರತ್ನಾ ಹೇಳುತ್ತಿದ್ದ ಮಾತು ಇಂದಿಗೆ ನಿಜವಾಯ್ತೇ?

“ನಿನ್ನ ಹಾವಿನ ವಿಷ ಮಗಳಿಗೆ ಉಣಿಸಬೇಡ….” ನಾನು ಇಂಥ ಮಗಳೆದುರು ಏನು ತಾನೇ ಹೇಳಬಲ್ಲೆ?

ಎದೆ ನೋವಿನಿಂದ ಧಡಕ್ಕನೇ ಕುಸಿದು ಬಿದ್ದೆ. ಮಗಳು ಗೆಳತಿ ಸಮೇತ ಓಡಿಬಂದಳು. `ಹಿರಿಯ ನಾಗನ ನಂಜು…. ಕಿರಿಯ ನಾಗನ ಪಾಲು…’ ರೇಡಿಯೋ ಹಾಡುತ್ತಲೇ ಇತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ