ಕಥೆ –  ಮಾಧುರಿ ಮೂರ್ತಿ 

“ಆನಂದ್‌, ನೀವು ನಿಮ್ಮ ಆರೋಗ್ಯದ ಕಡೆ ಗಮನವೇ ಕೊಡೋವುದಿಲ್ಲ. ಮದುವೆಯಾಗಿ 10 ವರ್ಷಗಳಾದರೂ ನಾನು ಅಜಯ್ ವಿಜಯ್‌ಗಿಂತ ಹೆಚ್ಚಾಗಿ ನಿಮ್ಮನ್ನು ನೋಡಿಕೊಳ್ಳಬೇಕಾಗಿದೆ,” ಬೇಗ ಬೇಗನೆ ಊಟದ ಡಬ್ಬಿ ಕಟ್ಟುತ್ತಿದ್ದ ಕೋಮಲಾ ಹೇಳಿದಳು. ಆ ವೇಳೆಗೆ ಫೋನ್‌ ಕಾಲ್‌ ಬರಲು ಆನಂದ್‌ ತರಾತುರಿಯಿಂದ ಹೊರಗೆ ಹೋದ.

“ಓಹೋ! ಕ್ಯಾರಿಯರ್‌ ತೆಗೆದುಕೊಂಡು ಹೋಗಿ,” ಎನ್ನುತ್ತಾ ಕೋಮಲಾ ಪತಿಯ ಟಿಫಿನ್‌ ಬ್ಯಾಗ್‌ ಹಿಡಿದುಕೊಂಡು ಅವನ ಹಿಂದೆ ಓಡಿದಳು.

ಬ್ಯಾಗ್‌ ಕೈಗೆ ತೆಗೆದುಕೊಂಡ ಆನಂದ್‌ ಗಾಡಿ ಸ್ಟಾರ್ಟ್‌ ಮಾಡಿದ. ಗಾಡಿ ಅಲ್ಲೆಲ್ಲ ಹೊಗೆ ಹರಡಿ ಮಾಯವಾಯಿತು.

ಕೋಮಲಾಳಿಗೆ ಈಗ ಆರಾಮವಾಗಿ ಕಾಫಿ ಕುಡಿಯಲು ಸಮಯ ದೊರೆಯಿತು. ಮೊದಲೆಲ್ಲ ಆನಂದ್‌ ಮತ್ತು ಕೋಮಲಾ ಜೊತೆಯಲ್ಲಿ ಕುಳಿತು ಬೆಳಗಿನ ಕಾಫಿ ಸವಿಯುತ್ತಿದ್ದರು. ಮದುವೆಯಾದ 5 ವರ್ಷಗಳವರೆಗೆ ಅವರಿಗೆ ಮಕ್ಕಳಿರಲಿಲ್ಲ. ಆ ನೋವು ಕೋಮಲಾಳಿಗೆ ಇದ್ದೇ ಇತ್ತು. ನೆರೆಮನೆಯ ಶೀಲಾ ಆಂಟಿಯ ವಿಷಯವನ್ನು ಪತಿಗೆ ಹೇಳುತ್ತಾ, ತನ್ನ ನೋವನ್ನು ಹಂಚಿಕೊಳ್ಳುತ್ತಿದ್ದಳು, “ಆನಂದ್‌, ಶೀಲಾ ಆಂಟಿಯ ಇಬ್ಬರು ಗಂಡು ಮಕ್ಕಳೂ ವಿದೇಶದಲ್ಲಿ ನೆಲೆಸಿದ್ದಾರೆ. ಶೀಲಾ ಆಂಟಿ ಇಲ್ಲಿ ಒಬ್ಬರೇ ವಾಸಿಸುತ್ತಿದ್ದರೂ ಸಹಾ, ಮಕ್ಕಳು ಜೊತೆಯಲ್ಲಿ  ಇಲ್ಲದ್ದಿದರೇನಂತೆ…. ಹೇಗೋ ದೇವರು ನನಗೆ 2 ಮಕ್ಕಳು ಅಂತ ಕೊಟ್ಟಿದ್ದಾನಲ್ಲವೇ ಎನ್ನುತ್ತಾರೆ,” ಎಂದು ಹೇಳುತ್ತಾ ಕೋಮಲಾಳ ಕಣ್ಣಂಚಿನಲ್ಲಿ ನೀರು ಇಣುಕುತ್ತಿತ್ತು.

ಆಗ ಆನಂದ್‌ ಅವಳ ಕೈ ಅದುಮುತ್ತಾ, “ನಮ್ಮ ಮನೆಗೂ ಮುದ್ದು ಮಗು ಬರುತ್ತದೆ ಅಂತ ಡಾಕ್ಟರ್‌ ಹೇಳಿದ್ದಾರೆ ತಾನೇ? ನೀನು ಬೇಜಾರು ಮಾಡಿಕೊಳ್ಳಬೇಡ…” ಎನ್ನುತ್ತಿದ್ದ.

ಆನಂದನ ಮೃದುವಾದ ಮಾತು, ಕೋಮಲವಾದ ಸ್ಪರ್ಶದಿಂದ ಅವಳು ತನ್ನ ನೋವನ್ನು ಮರೆಯುತ್ತಿದ್ದಳು. ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡುತ್ತಿತ್ತು. ಕೋಮಲಾಳ ಪಕ್ಕದ ಮನೆಯಲ್ಲಿ ವಾಸವಾಗಿದ್ದ ದಿವ್ಯಾ ರೇಡಿಯೋ ಆರ್‌.ಜೆ. ಆಗಿ ಕೆಲಸ ಮಾಡುತ್ತಿದ್ದಳು. ಅವಳ ಪುಟ್ಟ ಮಗಳು ವಿನಿತಾಳನ್ನು ಕಂಡರೆ ಕೋಮಲಾಳಿಗೆ ಬಲು ಪ್ರೀತಿ.

ಒಂದು ದಿನ ಮಧ್ಯಾಹ್ನ ಕೋಮಲಾ ಪಕ್ಕದ ಮನೆಯತ್ತ ದೃಷ್ಟಿ ಹಾಯಿಸಿದಾಗ ವಿನಿತಾ ಸ್ಕೂಲ್ ‌ಬ್ಯಾಗ್‌ನೊಂದಿಗೆ ಬಾಗಿಲಲ್ಲಿ ಕಾಯುತ್ತಾ ನಿಂತಿರವುದು ಕಾಣಿಸಿತು. ಕೋಮಲಾಳ ಹೃದಯದಲ್ಲಿ ಮಮತೆ ಉಕ್ಕಿ ಬಂದಿತು. ವಿನಿತಾಳನ್ನು ಒಳಗೆ ಕರೆದೊಯ್ದು ಮುದ್ದು ಮಾಡಿ ತಿಂಡಿ ತಿನ್ನಿಸಿದಳು. ನಂತರ ದಿವ್ಯಾಳಿಗೆ ಫೋನ್‌ ಮಾಡಿದಾಗ, ಇದ್ದಕ್ಕಿದ್ದಂತೆ ಒಂದು ಮೀಟಿಂಗ್‌ನಿಂದಾಗಿ ಮನೆಗೆ ಬರಲು ತಡವಾಗಿದೆ ಎಂದು ಹೇಳಿದಳು. “ನೀನೇನು ಯೋಚಿಸಬೇಡ, ವಿನಿತಾ ನನ್ನ ಜೊತೆ ಇರುತ್ತಾಳೆ,” ಎಂದಳು ಕೋಮಲಾ.

ಮೀಟಿಂಗ್‌ ಮುಗಿಸಿ ಬಂದ ದಿವ್ಯಾ ತನ್ನ ಮಗಳನ್ನು ನೋಡಿಕೊಂಡದ್ದಕ್ಕೆ ಕೋಮಲಾಳಿಗೆ “ಥ್ಯಾಂಕ್ಸ್” ಹೇಳಿದಳು.

“ಇರಲಿ ದಿವ್ಯಾ, ನಿನಗೆ ಹೀಗೆ ತಡವಾಗುವ ಸಂದರ್ಭ ಬಂದರೆ ನನಗೆ ತಿಳಿಸು. ವಿನಿತಾಳನ್ನು ನನ್ನ ಜೊತೆ ಇಟ್ಟುಕೊಳ್ಳುವುದಕ್ಕೆ ನನಗೆ ಖುಷಿಯಾಗುತ್ತದೆ.” ಎಂದಳು ಕೋಮಾ.

“ಓಹ್‌! ಥ್ಯಾಂಕ್ಯೂ ಕೋಮಲಾ. ಆದರೆ ಇನ್ನು ಮುಂದೆ ಹೀಗೆ ಆಗೋದಿಲ್ಲ. ನಾವು ಒಂದು ಡೇ ಕೇರ್‌ನವರ ಜೊತೆ ಮಾತನಾಡಿದ್ದೇವೆ. ವಿನಿತಾ ಸ್ಕೂಲ್‌ನಿಂದ ನೇರವಾಗಿ ಡೇ ಕೇರ್‌ಗೆ ಹೋಗುತ್ತಾಳೆ. ನಾನು ಆಫೀಸ್‌ನಿಂದ ಬರುವಾಗ ಅವಳನ್ನು ಕರೆದುಕೊಂಡು ಬರುತ್ತೇನೆ.”

“ಹಾಗಾದರೆ ವಿನಿತಾ ನನ್ನ ಜೊತೆ ಇರೋದು ನಿನಗೆ ಇಷ್ಟವಿಲ್ಲ. ಅಂತ ಕಾಣುತ್ತದೆ,” ಕೋಮಲಾ ಸಪ್ಪೆ ಮುಖ ಮಾಡಿಕೊಂಡು ಕೇಳಿದಳು.

ದಿವ್ಯಾ ಪ್ರೀತಿಯಿಂದ ಅವಳ ಹೆಗಲ ಮೇಲೆ ಕೈಯಿರಿಸಿ, “ಅದು ಖಂಡಿತ ಹಾಗಲ್ಲ ಕೋಮಲಾ, ನೀನು ಯಾವಾಗ ಬೇಕಾದರೂ ವಿನಿತಾಳನ್ನು ನಿನ್ನ ಜೊತೆ ಇಟ್ಟುಕೋ. ಆದರೆ ನನ್ನ ಅಭಿಪ್ರಾಯ ಏನೆಂದರೆ ನಮ್ಮ ಅಗತ್ಯಗಳಿಗೆ ನಾವೇ ಜವಾಬ್ದಾರರಾಗಿರಬೇಕು. ನನ್ನ ಪತಿ ದೊಡ್ಡ ಫ್ಯಾಕ್ಟರಿ ನಡೆಸುತ್ತಾರೆ. ನಾನು ಬೇಕಾದರೆ ಉದ್ಯೋಗ ಮಾಡದೆ ಆರಾಮವಾಗಿ ಮನೆಯಲ್ಲಿರಬಹುದು. ಆದರೆ ನಾನು ಸ್ವಾವಲಂಬಿಯಾಗಿ ಇರುವುದಕ್ಕೆ ಇಷ್ಟಪಡುತ್ತೇನೆ. ನಾನು ದುಡಿದು ಗಳಿಸುವ ಹಣದಿಂದ ಸಿಗುವ ಸುಖವನ್ನು ಕಳೆದುಕೊಳ್ಳೋದಕ್ಕೆ ಇಷ್ಟವಿಲ್ಲ,” ಎಂದಳು.

ದಿವ್ಯಾಳ ಮಾತು ಕೋಮಲಾಳ ಮನಸ್ಸಿನ ಮೇಲೆ ಪ್ರಭಾವವನ್ನುಂಟು ಮಾಡಿತು. ಸ್ವಾವಲಂಬಿಯಾಗುವ ಇಚ್ಛೆ ಅವಳಿಗೂ ಮೂಡಿತು. ಶೀಘ್ರದಲ್ಲೇ ಅವಳಿಗೆ ಅವಕಾಶ ದೊರೆಯಿತು.

ದಿವ್ಯಾಳ ಸಹೋದ್ಯೋಗಿಯೊಬ್ಬಳು ಅಕಸ್ಮಾತ್ತಾಗಿ ಕಾಯಿಲೆ ಬಿದ್ದಳು. ಕೋಮಲಾಳನ್ನು ತಾತ್ಕಾಲಿಕವಾಗಿ ತಮ್ಮ ಆಫೀಸ್‌ನಲ್ಲಿ ಕೆಲಸ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದಾಗ, ಅವಳು ಕೂಡಲೇ ಒಪ್ಪಿದಳು.

ಆತ್ಮವಿಶ್ವಾಸದಿಂದ ಕೂಡಿದ ಕೋಮಲಾಳ ಧ್ವನಿ ರೇಡಿಯೋದಲ್ಲಿ ಜನಪ್ರಿಯವಾಯಿತು. ಬಾಸ್‌ ಕೂಡ ಅದರಿಂದ ಪ್ರಭಾವಿತರಾದರು. ಕೆಲವೇ ದಿನಗಳಲ್ಲಿ ಅವಳ ನೌಕರಿ ಖಾಯಂ ಆಯಿತು. ಇದರಿಂದ ಅವಳಿಗೆ ಬಹಳ ಸಂತೋಷವಾಯಿತು. ಇದಕ್ಕೆ ಆನಂದನಿಂದಲೂ ಪ್ರೋತ್ಸಾಹ ದೊರೆಯಿತು. ರೇಡಿಯೋ ಪ್ರಪಂಚದಲ್ಲಿ ಕೋಮಲಾ ತನ್ನ ಛಾಪು ಮೂಡಿಸುತ್ತಾ ನಡೆದಳು.

ಈ ಆನಂದದ ಅನುಭವದಲ್ಲಿ ತೇಲುತ್ತಿರುವಾಗಲೇ ಮತ್ತೊಂದು ಸಿಹಿ ಸುದ್ದಿ ಅವಳನ್ನು ಅರಸಿ ಬಂದಿತು. ಕೋಮಲಾ ತಾಯಿಯಾಗಲಿದ್ದಳು. ಅವಳ ಗರ್ಭದಲ್ಲಿ ಅವಳಿ ಮಕ್ಕಳು ಅಂಕುರಿಸಿದ್ದವು.

ಕೋಮಲಾ ತನ್ನ ಕೌಟುಂಬಿಕ ಜೀವನಕ್ಕೆ ಪ್ರಾಧಾನ್ಯತೆ ನೀಡಿದಳು. ಅವಳು ವಿನಮ್ರಳಾಗಿ ತನ್ನ ಉದ್ಯೋಗಕ್ಕೆ ರಾಜೀನಾಮೆ ಪತ್ರ ಕೊಟ್ಟು ಬಂದಳು.

ನವಮಾಸ ಕಳೆದು ಇಬ್ಬರು ಪುಟ್ಟ ರಾಜಕುಮಾರರು ಕೋಮಲಾಳ ಮಡಿಲು ತುಂಬಿದರು. ಬಯಸಿದುದೆಲ್ಲ ದೊರೆಯಿತೆಂಬ ಸಂತೃಪ್ತಿ ಅವಳಿಗಾಯಿತು.

ಎರಡೆರಡು ಪುಟ್ಟ ಕಂದಮ್ಮಗಳನ್ನು ಲಾಲಿಸಿ ಪಾಲಿಸುವ ಹೊಣೆಯಿಂದ ಕೋಮಲಾ ಬಳಲಿದಳು. ಮಕ್ಕಳ ಕೆಲಸದಲ್ಲಿ ಆನಂದ ಯಾವುದೇ ನೆರವು ನೀಡುತ್ತಿರಲಿಲ್ಲ. ಸೊರಗಿ ಕುಳಿತ ಕೋಮಲಾಳಿಗೆ ಸಮಾಧಾನದ ಮಾತು ಆಡುತ್ತಿರಲಿಲ್ಲ. ಬದಲಾಗಿ ತನ್ನ ಆಫೀಸ್‌ ಮತ್ತು ಹೊರಗಿನ ಕೆಲಸಗಳಲ್ಲೇ ಕಾಲ ಕಳೆಯತೊಡಗಿದ. ಕೋಮಲಾ ತನ್ನ ಪುಟ್ಟ ಮಕ್ಕಳ ಲೀಲೆಗಳನ್ನು ಪತಿಯೊಡನೆ ಹಂಚಿಕೊಳ್ಳಲು ತವಕಿಸಿದರೆ, ಆನಂದನಿಗೆ ಅದನ್ನು ಕೇಳುವ ತಾಳ್ಮೆ ಇರುತ್ತಿರಲಿಲ್ಲ. ಕೋಮಲಾ ಪತಿಗೆ ಹತ್ತಿರವಾಗಲು ಬಯಸಿದಷ್ಟೂ ಆನಂದ್‌ ಅವಳಿಂದ ದೂರ ಸರಿಯುತ್ತಿದ್ದ. `ಆನಂದ್‌ ತನ್ನಿಂದೇಕೆ ದೂರವಾಗುತ್ತಿದ್ದಾರೆ? ಅವಳಿ ಮಕ್ಕಳನ್ನು ಹೆತ್ತದ್ದೇ ತನ್ನ ತಪ್ಪೇ?’ ಎಂದು ಕೋಮಲಾ ಚಿಂತಿಸುವಂತಾಯಿತು. ಪತಿಗೆ ತನ್ನ ಸಾಮೀಪ್ಯ ಸ್ಪರ್ಶಗಳು ಇಷ್ಟವಾಗುತ್ತಿಲ್ಲ ಎಂಬುದು ಕ್ರಮೇಣ ಅವಳಿಗೆ ಅರ್ಥವಾಗತೊಡಗಿತು.

ಆಫೀಸ್‌ ಕೆಲಸದ ಟೂರ್‌ ಎಂದು ಆನಂದ್‌ ಆಗಾಗ ಹೋಗತೊಡಗಿದ. ಇತರೆ ದಿನಗಳಲ್ಲೂ ತಡವಾಗಿ ಮನೆಗೆ ಬರುತ್ತಿದ್ದ. ಕೆಲವು ದಿನಗಳ ಹಿಂದೆಯಷ್ಟೇ ಮಕ್ಕಳ ನಾಲ್ಕನೇ ಹುಟ್ಟುಹಬ್ಬದ ದಿನ ದೂರದ ಅತಿಥಿಯಂತೆ ಕೊನೆಯಲ್ಲಿ ಬಂದಿದ್ದ. ಆ ದಿನ ಕೆಲವರು ಆನಂದನ ಬಗ್ಗೆ ಗುಸುಗುಸು ಮಾತನಾಡುತ್ತಿದ್ದುದನ್ನು ಕೋಮಲಾ ಗಮನಿಸಿದಳು. ಆದರೆ ಅದಕ್ಕೆ ಹೆಚ್ಚು ಗಮನ ಕೊಡಲಿಲ್ಲ.

ಒಂದು ದಿನ ದಿವ್ಯಾ ಒಂದು ಆಮಂತ್ರಣ ಪತ್ರವನ್ನು ಹಿಡಿದುಕೊಂಡು ಕೋಮಲಾಳ ಮನೆಗೆ ಬಂದಳು. ರೇಡಿಯೋ ಸ್ಟೇಷನ್‌ನಲ್ಲಿ ಒಂದು ಗೆಟ್‌ ಟು ಗೆದರ್‌ ಪಾರ್ಟಿ ಏರ್ಪಾಟಾಗಿತ್ತು. ಹಿಂದಿನ ಉದ್ಯೋಗಿಯಾಗಿದ್ದ ಕೋಮಲಾ ಸಹ ಪಾರ್ಟಿಗೆ ಆಮಂತ್ರಿತಳಾಗಿದ್ದಳು. ಆನಂದ್‌ ಆಫೀಸ್‌ ಟೂರ್‌ಗೆಂದು ಹೋಗಿದ್ದ. ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಟ್ಟು ಕೋಮಲಾ ಪಾರ್ಟಿ  ನಡೆಯಲಿದ್ದ ಹೋಟೆಲ್‌ ತಲುಪಿದಳು. ಅಲ್ಲಿ ಆನಂದ್‌ ಒಬ್ಬ ಹುಡುಗಿಯೊಂದಿಗೆ ಹೋಗುತ್ತಿದ್ದುದು ಅವಳ ದೃಷ್ಟಿಗೆ ಬಿತ್ತು. ಗಲಿಬಿಲಿಗೊಂಡ ಕೋಮಲಾ ಅವನನ್ನು ಹಿಂಬಾಲಿಸಿದಳು. ಅವರಿಬ್ಬರೂ ರೂಮ್ ನಂಬರ್‌ 512ಕ್ಕೆ ಹೋಗಿ ಬಾಗಿಲು ಮುಚ್ಚಿಕೊಂಡರು. ಅವಳು ಹೋಟೆಲ್‌ನ ರಿಸೆಪ್ಶನಿಸ್ಟ್ ನ್ನು ಕೇಳಿ ರಿಜಿಸ್ಟರ್‌ನಲ್ಲಿ ನೋಡಿದಾಗ, ರೂಮ್ ನಂಬರ್‌ 512ರ ಪಕ್ಕದಲ್ಲಿ `ಮಿಸ್ಟರ್‌ ಅಂಡ್‌ ಮಿಸೆಸ್‌ ಆನಂದ್‌’ ಎಂದು ಬರೆದಿರುವುದನ್ನು ಕಂಡು ಅವಳ ಮುಖ ಕೋಪದಿಂದ ಕೆಂಪಾಯಿತು.

ಕೋಮಲಾ ನಿಧಾನವಾಗಿ ಕಾಲೆಳೆದುಕೊಂಡು ಪಾರ್ಟಿ ಹಾಲ್‌ ತಲುಪಿದಳು. ಅಲ್ಲಿ ದಿವ್ಯಾ ಅವಳಿಗಾಗಿ ಕಾಯುತ್ತಿದ್ದಳು. ಕೋಮಲಾಳನ್ನು ಕಂಡು ಬಾಸ್‌, “ಕೋಮಲಾ, ನಿಮ್ಮ ಧ್ವನಿಯನ್ನು ಈಗಲೂ ಜನರು ಜ್ಞಾಪಿಸಿಕೊಳ್ಳುತ್ತಿರುತ್ತಾರೆ. ಯಾವಾಗ ಬೇಕಾದರೂ ನೀವು ಬರಬಹುದು. ಯೂ ಆರ್‌ ಮೋಸ್ಟ್ ವೆಲ್‌ ಕಂ!” ಎಂದರು.

ಪಾರ್ಟಿಯಲ್ಲಿ ಕೋಮಲಾ ಅನ್ಯಮನಸ್ಕಳಾಗಿ ಕುಳಿತಿದ್ದಳು. ಮನೆಗೆ ಬರುತ್ತಿದ್ದಂತೆ ಅವಳ ಕಣ್ಣೀರು ಕಟ್ಟೆ ಒಡೆಯಿತು. ದಾಂಪತ್ಯ ಜೀವನದಲ್ಲಿ ಮೋಸ ಹೋಗಿರುವ ಸಂಗತಿ ಅವಳನ್ನು ಚುಚ್ಚಿ ಚುಚ್ಚಿ ಘಾಸಿಗೊಳಿಸಿತು. ಇದೀಗ ಮೊದಲ ಬಾರಿ ಹೆಣ್ಣಾಗಿ ಹುಟ್ಟಿದುದಕ್ಕಾಗಿ ಅವಳಿಗೆ ದುಃಖವಾಯಿತು.

ಆನಂದ್‌ ಮರುದಿನ ಮನೆಗೆ ಬಂದ. ಟೂರ್‌ ಬಗ್ಗೆ ಕೋಮಲಾ ಪ್ರಶ್ನಿಸಿದಳು. ಅವನು ಉತ್ತರಿಸಲು ತಡಬಡಿಸಿದ. ಆ ಹೋಟೆಲ್‌ನ ಹೆಸರೆತ್ತಿದಾಗ ಅವನು ಕೋಪಗೊಂಡು ಕೋಮಲಾಳಿಗೆ ಬಾಯಿಗೆ ಬಂದಂತೆ ಬಯ್ದು ಮನೆಯಿಂದ ಹೊರಗೆ ಹೋದ.

ಪತಿ ಏಕೆ ತನ್ನಿಂದ ದೂರ ಸರಿಯುತ್ತಿದ್ದನೆಂಬುದು ಕೋಮಲಾಳಿಗೆ ಈಗ ಅರ್ಥವಾಯಿತು. ಅವಳು ಪತಿಯೊಡನೆ ಮಾತನಾಡಲು, ತಿಳಿಹೇಳಲು ಪ್ರಯತ್ನಿಸಿದಳು. ಆದರೆ ಅವಳ ಯಾವ ಮಾತನ್ನೂ ಅವನು ಕೇಳಲು ಸಿದ್ಧನಿರಲಿಲ್ಲ. ಕೋಮಲಾ ಅತ್ತು ಕರೆದಳು. ಮಕ್ಕಳ ಹೆಸರು ಹೇಳಿ ಬೇಡಿದಳು, ಜಗಳವಾಡಿದಳು. ಆದರೆ ಆನಂದ್‌ ಯಾವುದಕ್ಕೂ ಜಗ್ಗಲಿಲ್ಲ.

“ನಿನ್ನ ಮತ್ತು ಮಕ್ಕಳ ಖರ್ಚಿಗೆ ಹಣ ಕೊಡುತ್ತೇನೆ. ಆದರೆ ನನ್ನ ಸ್ವಂತ ವಿಷಯಕ್ಕೆ ಎಂದೂ ತಲೆ ಹಾಕಬೇಡ,” ಎಂದು ನಿಷ್ಠುರವಾಗಿ ನುಡಿದನು.

ಕೋಮಲಾಳಿಗೆ ದಿಕ್ಕೇ ತೋಚದಂತಾಯಿತು. ಹಗಲು, ರಾತ್ರಿ ಚಿಂತೆಯಲ್ಲಿ ಮುಳುಗಿದಳು. ತೌರಿಗೆ ಹೋಗಿಬಿಡಲೇ ಎಂದು ಯೋಚಿಸಿದಳು. ಇಂತಹ ಅವಮಾನವನ್ನು ಎಂದೂ ಅನುಭವಿಸಿರದ ಅವಳಿಗೆ ಈ ಸ್ಥಿತಿಯಲ್ಲಿ ಎಲ್ಲಿಗೆ ಹೋಗಲು ಮನಸ್ಸಾಗಲಿಲ್ಲ.

ಒಂದು ದಿನ ಕೋಮಲಾಳಿಗೆ ತನ್ನ ಬಾಸ್‌ ಹೇಳಿದ, `ಯೂ ಆರ್‌ ಮೋಸ್ಟ್ ವೆಲ್‌ ಕಂ’ ಎಂಬ ವಾಕ್ಯ ನೆನಪಾಯಿತು. ತಕ್ಷಣ ಅವಳು ಮೈ ಕೊಡವಿ ಎದ್ದು ನಿಂತಳು. ಬಾಸ್‌ಗೆ ಫೋನ್‌ ಮಾಡಿ ಕೆಲಸಕ್ಕಾಗಿ ಅನುಮತಿ ಕೋರಿದಳು. ಮತ್ತೆ ಅವಳಿಗೆ ಅದೇ ಮಾತು ಉತ್ತರವಾಗಿ ದೊರೆಯಿತು.

“ಯೂ ಆರ್‌ ಮೋಸ್ಟ್ ವೆಲ್‌ ಕಂ!”

ದುಃಖ ಅವಮಾನಗಳಿಂದ ಕಂಗೆಟ್ಟಿದ್ದ ಕೋಮಲಾ ಆತ್ಮಬಲದಿಂದ ಮುನ್ನಡೆದಳು. ಹರಿದು, ಚದರಿಹೋಗಿದ್ದ ತನ್ನ ಬಾಳ ಪುಟಗಳನ್ನು ಒಂದುಗೂಡಿಸಿ ತಲೆಯೆತ್ತಿ ನಿಂತಳು. ಮಕ್ಕಳ ಜವಾಬ್ದಾರಿ ತನಗಿರಲಿ ಎಂದು ಗಂಡನನ್ನು ಮನೆಯಿಂದ ಹೊರಗೆ ಹೋಗುವಂತೆ ತಿಳಿಸಿದಳು.

ಇಂದೂ ಸಹ ಕೋಮಲಾಳ ಹೃದಯದ ಒಂದು ಮೂಲೆಯಲ್ಲಿ ಆಶಾಭಾವನೆ ಮೇಲೇಳುತ್ತದೆ, `ಪತಿಗೆ ಎಂದಾದರೂ ತನ್ನ ತಪ್ಪಿನ ಅರಿವಾಗಬಹುದು,’ ಆದರೆ ಜೊತೆಗೇ ಅವಳ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತದೆ, `ನಾನು ಅವರನ್ನು ಕ್ಷಮಿಸಬಸಲ್ಲೆನೇ?’

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ