ಕಥೆ - ಜಿ.ಎನ್‌. ಪವಿತ್ರಾ

ವಾದ್ಯದ ಸದ್ದು ಹತ್ತಿರವಾಗುತ್ತಿರುವುದನ್ನು ಕೇಳಿ ನಿಶಾ ಸೀರೆ ಸರಿಪಡಿಸಿಕೊಂಡು ಕುಳಿತಳು. ಅವಳ ತಂದೆತಾಯಿಯರು ವರನನ್ನು ಎದುರುಗೊಂಡು ಸ್ವಾಗತಿಸಲು ಆರತಿಯೊಡನೆ ನಿಂತಿದ್ದರು. ವರ ಪವನ್‌ನನ್ನು ತೋಳು ಹಿಡಿದು ನಡೆಸಿಕೊಂಡು ಬರುತ್ತಿರುವುದನ್ನು ನೋಡಿ ವೆಂಕಟರಮಣರಿಗೆ ಆತಂಕವಾಯಿತು. `ಆರೋಗ್ಯ ಸರಿ ಇಲ್ಲವೇ...?' ಎಂದು ಮನಸ್ಸಿನಲ್ಲೇ ಚಿಂತಿಸಿದರು.

ಹೆಂಗಳೆಯರು ಆರತಿ ಬೆಳಗಿದ ನಂತರ ಮಂಟಪದತ್ತ ಕರೆದೊಯ್ಯುವಾಗ ಅವರಿಗೆ ವಿಷಯ ಅರ್ಥವಾಯಿತು. ವರ ಮಹಾಶಯ ಕಂಠಪೂರ್ತಿ ಕುಡಿದಿದ್ದ ಎಂದು. ಹಾಗಾಗಿ ಅವನ ನಡಿಗೆಯಲ್ಲಿ ತೂರಾಟವಿತ್ತು. ವರನ ಜೊತೆಯವರು ಹೇಗೋ ಮಾಡಿ ಅವನನ್ನು ಸ್ಟೇಜ್‌ ಮೇಲೆ ಹತ್ತಿಸಿ ಕುರ್ಚಿಯಲ್ಲಿ ಕುಳ್ಳಿರಿಸಿದರು. ತಂದೆಯ ಮುಖದಲ್ಲಿ ಮೂಡಿದ್ದ ಚಿಂತೆಯ ರೇಖೆಗಳನ್ನು ಕಂಡು ಅವರ ಹಿರಿಯ ಮಗ ಸಮಾಧಾನ ಮಾಡುತ್ತಾ, ``ಅಂಥದ್ದೇನೂ ಆಗಿಲ್ಲ ಅಪ್ಪಾ.... ಖುಷಿಗೆ ಸ್ನೇಹಿತರ ಜೊತೆ ಸ್ವಲ್ಪ ಜಾಸ್ತಿ ಕುಡಿದಿರಬಹುದು....'' ಎಂದ.

ಅಷ್ಟರಲ್ಲಿ ಪುರೋಹಿತರು ಮದುಮಗಳನ್ನು ಕರೆತರಲು ಆದೇಶಿಸಿದರು. ಸರ್ವಾಲಂಕೃತಳಾದ ನಿಶಾಳನ್ನು ಅವಳ ಸೋದರಮಾವ ಕೈಹಿಡಿದು ಕರೆತಂದರು. ವಧೂವರರು ಹೂಮಾಲೆ ಬದಲಾಯಿಸುವ ಶಾಸ್ತ್ರವಿಧಿಗಾಗಿ ಪವನ್‌ ಕುರ್ಚಿಯಿಂದ ಮೇಲೆದ್ದ. ಮರುಕ್ಷಣವೇ ನಿಲ್ಲಲಾರದೆ ಧೊಪ್ಪನೆ ಕುಸಿದು ಕುಳಿತ. ಅವನ ಅಕ್ಕಪಕ್ಕದಲ್ಲಿ ನಿಂತಿದ್ದ ಇಬ್ಬರು ಅವನನ್ನು ಹಿಡಿದೆತ್ತಿ ನಿಲ್ಲಿಸಿದರು.

ಅವನು ನಿಶಾಳಿಗೆ ಹೂಮಾಲೆ ಹಾಕಲು ಕೈಯೆತ್ತಿದ. ಆದರೆ ಅವನ ಕೈಗಳು ಅವಳ ಕೊರಳನ್ನು ತಲುಪಲಾರದೆ ಗಾಳಿಯಲ್ಲಿ ಆಡಿ ಹಿಂದೆ ಬಂದವು. 2-3 ಸಲ ಇದೇ ಪುನರಾವರ್ತನೆಯಾದಾಗ ಸುತ್ತಲಿದ್ದವರು ಪರಸ್ಪರ ಮುಖ ನೋಡಿಕೊಂಡರು. ಕಿವಿಯಲ್ಲಿ ಗುಸುಗುಸು ಮಾತನಾಡಿಕೊಂಡರು.

ಎದುರಿಗೇ ನಿಂತಿದ್ದ ನಿಶಾಳಿಗೆ ಪರಿಸ್ಥಿತಿ ಅರಿವಾಯಿತು. ಮದ್ಯದ ವಾಸನೆ ಮೂಗಿಗೆ ಬಡಿಯುತ್ತಿತ್ತು. ಅವಳು ಅತೀ ಕೋಪದಿಂದ ಹೂಮಾಲೆಯನ್ನು ನೆಲಕ್ಕೆ ಅಪ್ಪಳಿಸಿ, ``ಇಂಥ ಕುಡುಕನನ್ನು ನಾನು ಮದುವೆಯಾಗುವುದಿಲ್ಲ!'' ಎಂದು ಹೇಳಿ ಸರಸರನೆ ಮಂಟಪದಿಂದ ಹೊರ ನಡೆದಳು. ನಾಟಕದಂತೆ ನಡೆದ ಘಟನೆಯನ್ನು ಕಂಡು ಅತಿಥಿಗಳು ಬೆರಗಾಗಿ ಕುಳಿತರು.

ಯಾರಾದರೂ ಬಂದು ತಡೆಯುವ ಮೊದಲೇ ನಿಶಾ ಕೋಣೆಗೆ ಹೋಗಿ ಅಗುಳಿ ಹಾಕಿಕೊಂಡಳು. ಎರಡೂ ಕಡೆಯವರು ಕಕ್ಕಾಬಿಕ್ಕಿಯಾಗಿ ನಿಂತರು. ಮದುವೆಯ ಮನೆಯಲ್ಲಿ ಗುಲ್ಲು ಪ್ರಾರಂಭವಾಯಿತು.

ನಿಶಾಳ ತಂದೆ ತಾಯಿ ``ನಿಶಾ... ನಿಶಾ...'' ಎಂದು ಕರೆದು ಬಾಗಿಲು ತಟ್ಟುತ್ತಾ, ``ಬಾಗಿಲು ತೆರೆ ನಿಶಾ.....'' ಎಂದು ಕರೆದರು.

ಯಾವುದಕ್ಕೂ ಪ್ರತಿಕ್ರಿಯಿಸದೆ ಕುಳಿತಿದ್ದ ನಿಶಾ ಸ್ವಲ್ಪ ಹೊತ್ತಿನ ನಂತರ, ``ನನ್ನ ತೀರ್ಮಾನವನ್ನು ಬದಲಾಯಿಸೋದಕ್ಕೆ ಒತ್ತಾಯ ಮಾಡುವುದಿಲ್ಲ ಅಂದರೆ ಮಾತ್ರ ಬಾಗಿಲು ತೆರೆಯುತ್ತೇನೆ,'' ಎಂದು ಷರತ್ತು ಹಾಕಿ ನಂತರವೇ ಬಾಗಿಲು ತೆರೆದಳು. ಮದುಮಗಳ ಉಡುಗೆತೊಡುಗೆಯನ್ನೆಲ್ಲ ಕಳಚಿ ಹಾಕಿ ಸಾಧಾರಣ ಉಡುಪಿನಲ್ಲಿ ನಿಂತಿದ್ದ ಅವಳನ್ನು ಕಂಡು ಎಲ್ಲರೂ ಸ್ತಂಭೀಭೂತರಾದರು.

ನಿಶಾಳ ಈ ಅವತಾರವನ್ನು ನೋಡಿ ಅವಳ ತಾಯಿ ಕೋಪದಿಂದ, ``ನಿನಗೇನು ತಲೆ ಕೆಟ್ಟಿದೆಯೇನೇ...? ಮದುವೆಯನ್ನು ನಿಲ್ಲಿಸಿ ಬಿಡೋದಕ್ಕೆ ಆಗುತ್ತೇನು? ಎಷ್ಟು ಕಷ್ಟಪಟ್ಟು ಇಷ್ಟೆಲ್ಲ ರೆಡಿ ಮಾಡಿದ್ದೇವೆ. ನೀನು ಎಲ್ಲವನ್ನೂ ಹಾಳು ಮಾಡೋದಕ್ಕೆ ಹೊರಟಿದ್ದೀಯಾ.... ಎಷ್ಟು ಹಣ ಖರ್ಚಾಗಿದೆ ಅಂತ ನಿನಗೆ ಗೊತ್ತಿದೆ ತಾನೇ? ನಿಮ್ಮ ಅಪ್ಪ ಇಷ್ಟು ಹಣವನ್ನು ಎಲ್ಲಿಂದ ತರುತ್ತಾರೆ? ಈ ಮದುವೆಗೋಸ್ಕರ ಜನ ಎಷ್ಟೆಷ್ಟು ದೂರದಿಂದ ಬಂದಿದ್ದಾರೆ. ನೆಂಟರಿಗೆಲ್ಲ ನಾವು ಮುಖ ತೋರಿಸೋದು ಹೇಗೆ ಅಂತೀನಿ..... ಈಗ ಏನೋ ಹೆಚ್ಚು ಕಡಿಮೆ ಆಗಿದೆ.... ಆಮೇಲೆ ಎಲ್ಲ ಸರಿಹೋಗುತ್ತದೆ..... ನೀನು ಹೀಗೆ ಆಡಿಕೊಂಡು ಕುಳಿತರೆ.... ಮುಂದೆ ಬೇರೆ ಸಂಬಂಧ ಸಿಗೋದೂ ಕಷ್ಟ ಆಗಿಬಿಡುತ್ತೆ.... ತಿಳಿದುಕೊ....''  ಎಂದು ಕಿರುಚಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ