ಕಥೆ – ವೇದಾ ಮಂಜುನಾಥನ್
ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ನಿಮ್ಹಾನ್ಸ್ ನಲ್ಲಿ ಅಡ್ಮಿಟ್ ಆಗಿದ್ದ ತಮ್ಮನನ್ನು ನೋಡಿಹೋಗಲೆಂದು ಅಂದು ಆಸ್ಪತ್ರೆಗೆ ಬಂದಿದ್ದಳು ಸಂಜನಾ. ಅಲ್ಲಿ ಅನಿರೀಕ್ಷಿತವಾಗಿ ಕಣ್ಣಿಗೆ ಬಿದ್ದಳು ಮಾನ್ಸಿ. ಅದೂ ಹುಚ್ಚಿಯಾಗಿ! ಸಂಜನಾಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಮಾನ್ಸಿಯ ಹತ್ತಿರ ಹೋಗಿ ಮಾತನಾಡಿಸಿದಾಗ, ಅವಳು ತನ್ನ ಕಾಲೇಜು ಗೆಳತಿ ಸಂಜನಾಳನ್ನು ಗುರುತು ಹಿಡಿಯಲಿಲ್ಲ.
ನರ್ಸ್ ಬಂದು ಮಾನ್ಸಿಯನ್ನು ಎಳೆದುಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿದಾಗ, ಅವಳು ಸ್ವಲ್ಪ ಹೊತ್ತಿನಲ್ಲೇ ಮಂಪರಿನ ನಿದ್ದೆಗೆ ಜಾರಿಹೋದಳು. ಸಂಜನಾ ನರ್ಸ್‌ನ ಕೈಹಿಡಿದು ಬೇಡಿಕೊಳ್ಳುವಂತೆ ಮಾನ್ಸಿಗೆ ಏನಾಯಿತೆಂದು ಹೇಳಲೇಬೇಕು ಎಂದು ಕೇಳಿಕೊಂಡಳು. ನರ್ಸ್ ಸಂಜನಾಳಿಗೆ ಮಾನ್ಸಿಯ ಕಥೆಯನ್ನೆಲ್ಲಾ ಹೇಳತೊಡಗಿದಳು. ಮಾನ್ಸಿಗೆ ಚಿಕ್ಕಂದಿನಲ್ಲಿ ಆದ ಲೈಂಗಿಕ ಕಿರುಕುಳದಿಂದ ಇಂದು ಅವಳು ಹುಚ್ಚಿಯಾಗಿದ್ದಾಳೆ ಎಂದು ಹೇಳಿದಾಗ, ಸಂಜನಾಗೆ ಅರ್ಥವಾಗಲಿಲ್ಲ. ನರ್ಸ್ ಬಿಡಿಸಿ ಹೇಳಿದಳು. ಮಾನ್ಸಿ ತನ್ನ ಎರಡನೇ ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ದುರ್ದೈವಿ! ಮಾನ್ಸಿ ಬೆಳೆಯುವ ವಯಸ್ಸಿನಲ್ಲಿ ಅವಳ ತಂದೆ ಅವಳನ್ನು ಮನೆ ಕೆಲಸದವಳ ಕೈಗೆ ಒಪ್ಪಿಸಿ ತಾನು ಸದಾ ಬಿಸ್‌ನೆಸ್‌ನಲ್ಲಿ ಮುಳುಗಿರುತ್ತಿದ್ದರು. ಮಗಳು ಮನೆಯಲ್ಲಿ ಏನು ಮಾಡುತ್ತಿದ್ದಾಳೆ, ಸರಿಯಾಗಿ ಬೆಳೆಯುತ್ತಿದ್ದಾಳಾ, ಅವಳ ಆಟಪಾಠಗಳನ್ನು ಗಮನಿಸದಷ್ಟೂ ಬಿಝಿಯಾಗಿರುತ್ತಿದ್ದರು ಅವಳ ತಂದೆ. ಮಾನ್ಸಿಗೆ ಚಿಕ್ಕಂದಿನಲ್ಲಿ ಯಾರಿಂದಲೋ ಆಗಿರುವ ಲೈಂಗಿಕ ಕಿರುಕುಳದಿಂದ ಅವಳು ಇಂದು ಈ ಸ್ಥಿತಿಗೆ ಬಂದಿದ್ದಾಳೆಂದು ಹೇಳಿ, ಮಾನಸಿಕ ತಜ್ಞರು ಅವಳಿಗೆ ಮಾಡಿದ ಪರೀಕ್ಷೆಗಳಿಂದ ಇದನ್ನೆಲ್ಲಾ ತಿಳಿದುಕೊಂಡಿದ್ದಾರೆಂದು ಹೇಳಿದ ನರ್ಸ್ ತನಗೆ ಬೇರೆ ಪೇಶೆಂಟ್‌ಗಳನ್ನು ನೋಡಿಕೊಳ್ಳುವುದು ಇದೆ ಎಂದು ಹೇಳಿ ಹೊರಟುಹೋದಳು.
ಕಾಲೇಜಿನಲ್ಲಿ ಓದುತ್ತಿದ್ದಾಗ ಸಂಜನಾ ಮತ್ತು ಮಾನ್ಸಿ ಸ್ನೇಹಿತೆಯಾಗಿದ್ದರು. ಮಾನ್ಸಿ ಮಾತು ಕಡಿಮೆ. ರಿಸರ್ವ್ ನೇಚರ್‌ನವಳು. ಅವಳ ತಂದೆ ಆಗರ್ಭ ಶ್ರೀಮಂತರಾಗಿದ್ದುದರಿಂದ ಅವಳು ಜಂಭ ಪಡುತ್ತಿದ್ದಾಳೆಂದು ಬಹಳಷ್ಟು ಜನ ಭಾವಿಸಿದ್ದರು. ಮಾನ್ಸಿ, ಸಂಜನಾಳ ಹತ್ತಿರ ತುಂಬಾ ಕ್ಲೋಸಾಗಿರುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುತ್ತಿದ್ದ ಮಾನ್ಸಿಯ ಬಗ್ಗೆ ಯಾರಿಗೂ ಪೂರ್ತಿಯಾಗಿ ಗೊತ್ತಿರಲಿಲ್ಲ.
ಸಂಜನಾ ಬೇಸರದಿಂದ ಮಾನ್ಸಿ ಈ ದಿನ ಹುಚ್ಚಿಯಾಗಿ ಮಲಗಿರುವುದನ್ನು ನೋಡಿ ನೊಂದಳು. ಮಾನ್ಸಿಯ ಬೆಡ್ ಹತ್ತಿರ ಬಂದಳು. ಮಾನ್ಸಿಗೆ ಮಂಪರು ಇಂಜೆಕ್ಷನ್ ಕೊಟ್ಟಿದ್ದರಿಂದ ಅವಳು ನಿದ್ದೆ ಮಾಡುತ್ತಿದ್ದಳು. ಕಾಲೇಜಿನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸುಂದರ ಶ್ರೀಮಂತೆ ಇವಳೇನಾ ಎನಿಸಿತು ಸಂಜನಾಳಿಗೆ. ನಿಧಾನವಾಗಿ ಮಾನ್ಸಿಯ ಹಣೆಯ ಮೇಲಿದ್ದ ಕೆದರಿದ ಕೂದಲನ್ನು ಹಿಂದಕ್ಕೆ ತಳ್ಳಿದಳು. ಗೊಂದಲದಲ್ಲಿರುವ ಮುಖ ನಿದ್ದೆಯಲ್ಲೂ ಪ್ರಶಾಂತವಾಗಿರಲಿಲ್ಲ! ಮಾನ್ಸಿ ಸ್ವಲ್ಪ ಹೊತ್ತಿನ ನಂತರ ಕಣ್ಣುಬಿಟ್ಟಳು. ಸಂಜನಾ ತನ್ನ ಗುರುತು ಹೇಳಿ, ಮಾತನಾಡಿಸಿದಳು. ಮಾನ್ಸಿ ಬಹುಶಃ ಅವಳನ್ನು ಗುರುತು ಹಿಡಿದಿರಬಹುದು. ಸನ್ನೆ ಮಾಡಿ ಔಷಧಿ ಇಡುವ ಟೀಪಾಯಿಯ ಡ್ರಾನಲ್ಲಿದ್ದ ತನ್ನ ಡೈರಿಯನ್ನು ತೆಗೆಯುವಂತೆ ಹೇಳಿದಳು. ಸಂಜನಾ ಮಾನ್ಸಿಯ ಡೈರಿಯನ್ನು ತೆಗೆದುಕೊಂಡಳು. ಮಾನ್ಸಿ ಅದನ್ನು ತೆಗೆದುಕೊಂಡು ಹೋಗು ಎಂದು ಹೇಳಿದಳು. ಅಷ್ಟರಲ್ಲಿ ಡಾಕ್ಟರ್ ಬಂದರು. ಸಂಜನಾ ಮಾನ್ಸಿಯ ಡೈರಿಯನ್ನು ತನ್ನ ಹ್ಯಾಂಡ್ ಬ್ಯಾಗ್‌ನಲ್ಲಿ ಹಾಕಿಕೊಂಡು ಹೊರಟಳು.
ಆ ದಿನ ಮನೆ ಕೆಲಸವನ್ನೆಲ್ಲಾ ತೀವ್ರವಾಗಿ ಮುಗಿಸಿದ ಸಂಜನಾ, ಮಾನ್ಸಿಯ ಡೈರಿಯನ್ನು ಕುತೂಹಲದಿಂದ ಓದಲಾರಂಭಿಸಿದಳು. ಮೊದಮೊದಲ ಪುಟಗಳಲ್ಲಿ ಅಷ್ಟಾಗಿ ಕುತೂಹಲಭರಿತವಾದ ವಿಷಯಗಳೇನೂ ಇರಲಿಲ್ಲ. ಮಾನ್ಸಿಯ ತಂದೆ ಯಾವಾಗಲೂ ಬಿಸ್‌ನೆಸ್ ಟೂರ್‌ನಲ್ಲಿ ಇರುತ್ತಿದ್ದುದರಿಂದ ತಾನು ಅವರ ಪ್ರೀತಿವಿಶ್ವಾಸಗಳಿಂದ ವಂಚಿತಳಾಗಿದ್ದೇನೆಂದು ಬರೆದಿದ್ದಳು. ತಾಯಿಯ ಪ್ರೀತಿಯನ್ನು ಕಂಡರಿಯದ ಮಾನ್ಸಿ, ತಂದೆಯಿಂದಲೂ ದೂರವೇ ಇದ್ದಳು! ಮನೆಯ ಕೆಲಸದವರೇ ಅವಳಿಗೆ ಆಪ್ತರಾಗಿದ್ದರು ಎನ್ನಬಹುದು.
ಮಾನ್ಸಿ ತನ್ನ ಮಾನಸಿಕ ತುಮುಲಗಳನ್ನು ಡೈರಿಯಲ್ಲಿ ಬರೆದಿದ್ದಳು. ಅವಳ ಹುಟ್ಟುಹಬ್ಬಕ್ಕೆ ತಂದೆ ಕೊಡಿಸಿದ್ದ ಬೆಲೆಬಾಳುವ ಉಡುಗೊರೆಗಳ ವಿವರ, ಅವಳು ಹೋಟೆಲ್, ಸಿನಿಮಾ, ಮಾಲುಗಳಿಗೆ ಸುತ್ತಿದ್ದು ಇತ್ಯಾದಿ, ಇತ್ಯಾದಿಗಳನ್ನೂ ಬರೆದಿದ್ದಳು. ಸಂಜನಾ ಅಷ್ಟೇನೂ ಸ್ವಾರಸ್ಯಕರವಲ್ಲದ ಆ ವಿಷಯಗಳನ್ನು ಹೆಚ್ಚಾಗಿ ಓದಲು ಹೋಗಲಿಲ್ಲ. ಡೈರಿಯ ಕೊನೆಯ ಪುಟಗಳಲ್ಲಿ ಮಾನ್ಸಿ ಏನನ್ನೋ ಗೀಚಿದ್ದಳು. ಸಂಜನಾ ಕಷ್ಟಪಟ್ಟು ಅದನ್ನು ಓದತೊಡಗಿದಳು.
`ಈ ಡೈರಿ ಸಿಕ್ಕವರು ಸುಲಭವಾಗಿ ಓದಬಾರದೆಂದು ಹೀಗೆ ಗೀಚಿದ್ದೇನೆ. ಸಹನೆ ಇರುವವರು, ನನ್ನನ್ನು ಹೆಚ್ಚಾಗಿ ಪ್ರೀತಿಸುವವರು ಮಾತ್ರ ಇದನ್ನು ಓದಬಹುದು. ಬಹುಶಃ ಈ ಡೈರಿ ಯಾರಿಗಾದರೂ ಸಿಕ್ಕಿ, ಓದುವ ವೇಳೆಗೆ ನಾನು ಮಾನಸಿಕ ರೋಗಿಯಾಗಿದ್ದರೂ ಆಗಿರಬಹುದು! ನನ್ನ ಮನಸ್ಸಿನ ತಳಮಳವನ್ನು ಹಂಚಿಕೊಳ್ಳುವ ವ್ಯಕ್ತಿ ನನಗೆ ದೊರೆಯದ್ದರಿಂದ ನನ್ನ ಅಂತರಾಳದ ಮಾತುಗಳು ಇಲ್ಲಿ ಧ್ವನಿಸಿವೆ…..
`ನೋಡುವವರ ಕಣ್ಣಿಗೆ ನಾನೊಂದು ಅಹಂಕಾರದ ಮೊಟ್ಟೆ. ಪ್ರತಿ ದಿನ ಶ್ರೀಮಂತಿಕೆಯ ಪ್ರದರ್ಶನ. ಮೈಬಿಗಿದಪ್ಪುವ ಮಾರ್ಡನ್‌ಉಡುಗೆತೊಡುಗೆಗಳಲ್ಲಿ ಅಂದವಾಗಿ ಕಾಣುತ್ತಿದ್ದ ಸುಂದರ ತರುಣಿ. ಆ ಸುಂದರ, ಸುಕೋಮಲ ದೇಹಕ್ಕೆ ಆದ ಗಾಯ, ಮಾಸಲಾರದಂತಹ ಮಾನಸಿಕ ಖಿನ್ನತೆ, ಘಾಸಿಯನ್ನು ಉಂಟು ಮಾಡಿದೆ ಎಂದರೆ ಯಾರೂ ನಂಬಲಾರರು. ನನ್ನ ವೇದನೆಯನ್ನು ಯಾರಿಗೂ ಹೇಳಲಾರದೆ ಒದ್ದಾಡುತ್ತಿರುವ ನಾನು, ನನ್ನ ಬದುಕಿನಲ್ಲಿ `ಮದುವೆ’ ಎಂಬ ಸುಂದರ ಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯುತ್ತದೆ ಎಂದು ಭಾವಿಸಿದ್ದೇನೆ. ಇದಕ್ಕೆ ಕಾರಣ ನನಗೆ ಚಿಕ್ಕವಯಸ್ಸಿನಲ್ಲಿ ಆದ ಲೈಂಗಿಕ ಕಿರುಕುಳ. ಅಬ್ಬಾ ಆ ದಿನಗಳನ್ನು ನೆನೆದರೆ ಈಗಲೂ ಮೈ ಜುಮ್ಮೆನಿಸುತ್ತದೆ!
`ಆಗ ನನಗೆ 3-4 ವರ್ಷ ವಯಸ್ಸು. ರೂಮಿನ ತುಂಬಾ ಅಪ್ಪ ತಂದುಕೊಟ್ಟ ಬೊಂಬೆಗಳು. ಅಮ್ಮ ಇಲ್ಲದಿದ್ದರೂ ಕೈ ತುತ್ತು ತಿನಿಸುತ್ತಿದ್ದ ಕೆಲಸದವಳನ್ನೇ `ಅಮ್ಮ’ ಎಂದು ಭಾವಿಸಿದ್ದೆ. ಅಪ್ಪ ಮೂರು, ನಾಲ್ಕು ದಿನಗಳಿಗೊಮ್ಮೆ ನನ್ನ ಕಣ್ಣಿಗೆ ಬಿದ್ದು, ಅಕ್ಕರೆಯಿಂದ ನಾಲ್ಕು ಮಾತುಗಳನ್ನಾಡಿ ಹೊಸ ಬೊಂಬೆ ತೆಗೆಸಿಕೊಡುತ್ತಿದ್ದರು. ನನಗೇನೋ ಈ ನೆನಪುಗಳೆಲ್ಲಾ ಮಸಕುಮಸಕು. ಆದರೆ ಆ ಕಹಿ ಘಟನೆಗಳು ಮಾತ್ರ ಮನಸ್ಸಿನಿಂದ ಮರೆಯಾಗದೆ ಕಾಡಿಸುತ್ತಲೇ ಇವೆ.
`ಅಪ್ಪನ ಬಿಸ್‌ನೆಸ್ ಪಾರ್ಟ್‌ನರ್ ಸುರೇಶ್ ಅಂಕಲ್ ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ಅವರ ಮಗ ಚಿರಂತನ್. ಆಗ ಕಾಲೇಜು ಓದುತ್ತಿದ್ದ ತರುಣ. ಅವರ ತಂದೆಯ ಜೊತೆ ನಮ್ಮ ಮನೆಗೆ ಬರುತ್ತಿದ್ದ. ತಂದೆಯ ಬಿಸ್‌ನೆಸ್ ಕಲಿಯುತ್ತಿದ್ದನೆಂದು ತೋರುತ್ತದೆ. ನನ್ನನ್ನು ಕಂಡರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಕ್ರೀಮ್ ಬಿಸ್ಕೆಟ್ಸ್, ದೊಡ್ಡ ದೊಡ್ಡ ಫಾರಿನ್ ಚಾಕೋಲೆಟ್ ಗಳನ್ನು ತಂದು ತಿನ್ನಿಸುತ್ತಿದ್ದ. ನನ್ನನ್ನು ಸಕ್ಕರೆಯ ಗೊಂಬೆ ಎನ್ನುವಂತೆ ಎತ್ತಿ ಲೊಚಲೊಚನೆ ಮುದ್ದಿಸುತ್ತಿದ್ದ! ಅಪ್ಪ ಒಂದು ಬಾರಿ ಸುಮ್ಮನೆ ತಮಾಷೆಗೆಂದು ಸುರೇಶ್ ಅಂಕಲ್ ಬಳಿ ನನ್ನ ಮಗಳು ದೊಡ್ಡವಳಾಗಿದ್ದಿದ್ದರೆ ನಿನ್ನ ಮಗನಿಗೇ ಕೊಟ್ಟು ಮದುವೆ ಮಾಡಬಹುದಿತ್ತು ಎಂದಿದ್ದರು. ಚಿರಂತನ್ ನನ್ನನ್ನು ಎತ್ತಿ ಮುದ್ದಿಸಿ, ಈಗಲೂ ನಾನು ಈ ಬಾರ್ಬಿಡಾಲ್‌ನ ಮದುವೆಯಾಗಲು ಸಿದ್ಧ ಎಂದು ಹೇಳಿ ನಕ್ಕಿದ್ದ.
`ಒಂದೊಂದು ಸಲ ಚಿರಂತನ್ ಒಬ್ಬನೇ ನಮ್ಮ ಮನೆಗೆ ಬರುತ್ತಿದ್ದ. ಆಗೆಲ್ಲಾ ನನ್ನನ್ನು ಮುದ್ದಿಸಿ, ನನ್ನ ರೂಮಿಗೆ ಎತ್ತಿಕೊಂಡು ಹೋಗಿ ಮಲಗಿಸುತ್ತಿದ್ದ. ಬೆಳ್ಳಗೆ ಗುಂಡುಗುಂಡಾದ, ಕರ್ಲಿ ಹೇರ್ಸ್, ಬ್ಲೂ ಐಸ್‌ನ ಈ ಮಾನ್ಸಿ ಅವನ ಪಾಲಿಗೆ ಬೊಂಬೆಯೇ ಆಗಿದ್ದಳು! ಅವನು ತನ್ನ ತಾರುಣ್ಯ ಸಹಜ ಕಾಮನೆಗಳನ್ನು ಈ ಬಾರ್ಬಿಡಾಲ್ ಮೇಲೆ ತೀರಿಸಿಕೊಳ್ಳುತ್ತಿದ್ದ. ಇಡೀ ದೇಹವನ್ನೆಲ್ಲಾ ಹಿಂಡಿ ಹಿಪ್ಪೆ ಮಾಡುತ್ತಿದ್ದ. ಅದೆಷ್ಟೋ ನೋವಿನಿಂದ ಕಿರುಚಿದಾಗ, ಬಾಯಿಗೆ ಚಾಕೋಲೇಟ್ ತುರುಕುತ್ತಿದ್ದ. ಹಿಗ್ಗಾಮುಗ್ಗಾ ಎಳೆದಾಡಿ ಎಸೆದಾಡುತ್ತಿದ್ದ. ಅವನ ಒರಟುತನ ಹಿಂಸೆಯಿಂದ ನರಳುವಂತೆ ಮಾಡುತ್ತಿತ್ತು!
`ಮರುದಿನ ಕೆಲಸದಾಕೆ ತಲೆಗೆ ಸ್ನಾನ ಮಾಡಿಸಲು ಬಂದಾಗ, ಮೈ ಮೇಲಿನ ಗಾಯಗಳನ್ನು ನೋಡಿ ಕೇಳುತ್ತಿದ್ದಳು. ಏನನ್ನೂ ಹೇಳದೆ ಅಳುತ್ತಿದ್ದವಳ ಬಗ್ಗೆ ಆಕೆಯೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
`ಒಂದು ಸಲ ಅಪ್ಪನ ಪಕ್ಕದಲ್ಲಿ ಕುಳಿತುಕೊಂಡು ಚಿರಂತನ್ ಮಾಮ ತನ್ನನ್ನು ಮುದ್ದಿಸುವ ರೀತಿಯನ್ನು ಹೇಳಿದೆ. ಅಪ್ಪನಿಗೆ ಬಹುಶಃ ಏನು ನಡೆಯುತ್ತಿದೆ ಎಂದು ಅರ್ಥವಾಯಿತೆಂದು ತೋರುತ್ತದೆ. ಮರುದಿನ ಅವನನ್ನು ಕರೆಸಿ ಚೆನ್ನಾಗಿ ಬೈದು, ಮತ್ತೆಂದೂ ತನ್ನ ಮನೆಯ ಕಡೆ ಸುಳಿಯಬಾರೆಂದು ಬೆದರಿಕೆ ಹಾಕಿ ಕಳುಹಿಸಿದರು. ಜೊತೆಗೆ ಡಾಕ್ಟರ್ ಹತ್ತಿರ ತೋರಿಸಿದರು.
`ಆದರೆ ಅದೆಲ್ಲ ಮಸುಕು ಮಸುಕಾದರೂ, ಆಗ ಅನುಭವಿಸಿದ ನರಕ ಯಾತನೆ ಮನಸ್ಸಿನಿಂದ ಮರೆಯಾಗದೆ, ಯಾರಿಗೂ ಹೇಳಲಾಗದೆ ಒದ್ದಾಡುವಂತೆ ಮಾಡಿತ್ತು. ಮುಂದೆ ಬೆಳೆದು ದೊಡ್ಡವಳಾದ ಮೇಲೂ ನನ್ನ ಮನಸ್ಸಿಗೆ ಆಗ ಆ ತೀವ್ರತರವಾದ ಆಘಾತ ನನ್ನಿಂದ ದೂರವಾಗಲಿಲ್ಲ. ಒಂದೊಂದು ದಿನ ರಾತ್ರಿ ಕೆಟ್ಟ ಕನಸು ಬಿದ್ದು ಕಿಟಾರನೆ ಕಿರುಚುತ್ತೇನೆ. ಕಾಲೇಜಿನಲ್ಲಿ ಚುಡಾಯಿಸುವ ಪಡ್ಡೆ ಹುಡುಗರನ್ನು ನೋಡಿದಾಗ, ನಾನೇನೋ ಇವರ ಎದುರು ಬೆತ್ತಲೆಯಲ್ಲಿ ನಿಂತಿರುವೆನೇ…..? ಹಸಿದ ಕಣ್ಣುಗಳು ನುಂಗುವಂತೆ ನೋಡುತ್ತಿವೆ ಎನಿಸುತ್ತದೆ….
`ಈ ನನ್ನ ಮಾನಸಿಕ ತುಮುಲವನ್ನು ಹೊರಹಾಕಲು ಡೈರಿಯ ಮೊರೆಹೋದೆ. ನನಗೆ ಮಾನಸಿಕ ಗೊಂದಲವಿದ್ದುದರಿಂದ ಮದುವೆಯಾಗುವುದೂ ಬೇಡವೆನಿಸಿತು. ಇತ್ತೀಚೆಗೆ ಅಪ್ಪ ತೀರಿಕೊಂಡ ಬಳಿಕ ಮತ್ತಷ್ಟು ಒಂಟಿತನ ಕಾಡಲಾರಂಭಿಸಿತು. ಈ ನನ್ನ ಒಂಟಿತನ, ಯಾತನೆಗಳಿಗೆ ಮುಕ್ತಿ ಎಂದು? ನನ್ನನ್ನು ಅರ್ಥ ಮಾಡಿಕೊಂಡು ಬಾಳು ಕೊಡುವ ಒಬ್ಬ ಸಂಗಾತಿ ಸಿಕ್ಕುತ್ತಾನೆಯೇ…..? ಎಂದು ಚಡಪಡಿಸುತ್ತಿರುವ ಒಂದು ವಿಧವಾದ ಮಾನಸಿಕ ರೋಗಿ ಮಾನ್ಸಿ….!!’
ಮಾನ್ಸಿಯ ಡೈರಿ ಓದಿ ಮುಗಿಸಿದ ಸಂಜನಾ, ಸ್ನೇಹಿತೆಯ ಸಮಸ್ಯೆಯ ಬಗ್ಗೆ ಚಿಂತಿಸತೊಡಗಿದಳು. ನಮ್ಮ ಸಮಾಜದಲ್ಲಿ ಅದೆಷ್ಟು ಹೆಣ್ಣುಮಕ್ಕಳು ಈ ರೀತಿ ಚಿಕ್ಕಂದಿನಲ್ಲಿ ಆದ ಲೈಂಗಿಕ ಕಿರುಕುಳದಿಂದ ನರಳುತ್ತಿದ್ದಾರೋ? ಅವರ ಮಾನಸಿಕ ಸ್ಥಿತಿ ಬೆಳೆದು ದೊಡ್ಡವರಾದ ಮೇಲೆ ಮಾನ್ಸಿಯ ಹಾಗೆ ಆಗಿರಲೂಬಹುದು ಎಂದುಕೊಂಡಾಗ, ಪುರುಷ ಜಾತಿಯ ಬಗ್ಗೆ ಸಿಟ್ಟು, ಬೇಸರ, ಅಸಹ್ಯ ಎಲ್ಲ ಏಕಕಾಲದಲ್ಲಿ ಬಂದಿತು ಸಂಜನಾಳಿಗೆ. ಇದಕ್ಕೆ ಹೆಣ್ಣಾದ ನಾನು ಏನಾದರೂ ಮಾಡಲೇಬೇಕು, ಕಡೆಯ ಪಕ್ಷ ಮಾನ್ಸಿಗೆ ಒಂದು ನೆಲೆಯನ್ನು ಕಾಣಿಸಬೇಕೆಂದು ನಿರ್ಧರಿಸಿದಳು. ಮಾನ್ಸಿ ಚಿಕ್ಕಂದಿನಲ್ಲಿ ಅನುಭವಿಸಿದ ಯಾತನೆಗೆ ನ್ಯಾಯ ದೊರಕಿಸಿಕೊಡಬೇಕೆನಿಸಿತು. ಮಾನ್ಸಿ ತನ್ನನ್ನು ಪೂರ್ತಿಯಾಗಿ ನಂಬಿ ತನ್ನ ಪರ್ಸನಲ್ ಡೈರಿಯನ್ನು ಕೊಟ್ಟು ತನ್ನೆಲ್ಲಾ ಕಷ್ಟವನ್ನು ಹೇಳಿಕೊಂಡಿದ್ದಾಳೆ ಎಂದೆಲ್ಲಾ ಯೋಚಿಸಿದ ಸಂಜನಾ, ಮರುದಿನ ಆಸ್ಪತ್ರೆಗೆ ಬಂದು ಮಾನ್ಸಿಯನ್ನು ಭೇಟಿ ಮಾಡಿ, ಅವಳಿಗೆ ಉತ್ತಮವಾದ ಭವಿಷ್ಯ, ಬದುಕನ್ನು ರೂಪಿಸಿ ಕೊಡಲು ಪ್ರಯತ್ನಿಸುತ್ತೇನೆಂದು ಭರವಸೆಯನ್ನು ತುಂಬಿದಳು. ಮಾನ್ಸಿಯ ಮಾನಸಿಕ ಸ್ಥಿತಿ ದಿನೇ ದಿನೇ ಚೇತರಿಸಿಕೊಂಡಿತು. ಸಂಜನಾ ಮಾನ್ಸಿಗೆ ಮದುವೆ ಮಾಡುವ ಪ್ರಯತ್ನ ನಡೆಸಿದಳು. ಮಾನ್ಸಿಯ ಕಥೆಯನ್ನು ಕೇಳಿಯೂ ಅವಳನ್ನು ವರಿಸುವಂತಹ ಹುಡುಗನಿಗಾಗಿ ಹುಡುಕಾಟ ನಡೆಸಿದಳು. ಮಾನ್ಸಿ, ತನಗಾದ ಈ ಅನ್ಯಾಯವನ್ನು ಇಷ್ಟುದಿನ ಮುಚ್ಚಿಟ್ಟುಕೊಂಡಿದ್ದೆ, ಅದನ್ನು ಹಾಗೆಯೇ ಮರೆಮಾಚಿ ತಾನು ಯಾರನ್ನಾದರೂ ಮದುವೆ ಆಗಬಹುದಿತ್ತು, ತನ್ನ ಆಸ್ತಿಗಾಗಿ ಯಾರಾದರೂ ತನ್ನನ್ನು ಮದುವೆಯಾಗಲು ಸಿಕ್ಕುತ್ತಿದ್ದರು, ಆದರೆ ತನಗೆ ಅಂತಹ ಗಂಡ ಬೇಕಾಗಿಲ್ಲ. ಮದುವೆ, ದಾಂಪತ್ಯದ ಬಗ್ಗೆ ತನಗೆ ಒಂದು ರೀತಿಯ ಭಯ, ಬೇಸರ ಏನೇನೋ ಇದೆ. ತಾನೂ ಎಲ್ಲರಂತೆ ಮದುವೆಯಾಗಿ ಸುಂದರ ಬದುಕು ಬಾಳಬಲ್ಲೆನೇ ಎಂದು ಸಂಜನಾಳನ್ನು ಕೇಳಿದಾಗ, ಸಂಜನಾ ಹಾಗೆ ಆಗುವಂತೆ ಮಾಡಿಯೇ ತೀರುತ್ತೇನೆ ಎಂದು ಅವಳಲ್ಲಿ ಭರವಸೆ ಮತ್ತು ಕನಸುಗಳನ್ನು ತುಂಬಿದಳು. ಸಂಜನಾಳ ಪ್ರಯತ್ನ ಬಲವಾಯಿತು. ಸಂಜನಾಳ ಸೋದರ ಸಂಬಂಧಿ ಅನಿಲ್ ಮಾನ್ಸಿಯ ಕಥೆಯನ್ನೆಲ್ಲಾ ಕೇಳಿದ ಮೇಲೆ ಅವಳನ್ನು ಮದುವೆಯಾಗಲು ಒಪ್ಪಿದ. ಇಂತಹ ಸಮಸ್ಯೆಗಳಲ್ಲಿ ತಪ್ಪಿಲ್ಲದ ಯಾವುದೇ ಮುಗ್ಧ ಹೆಣ್ಣಿಗೆ ಅನ್ಯಾಯವಾಗುವುದನ್ನು ಅವನು ಸಹಿಸುತ್ತಿರಲಿಲ್ಲ. ಸಂಜನಾ ಕೂಡ ತನ್ನದಲ್ಲದ ತಪ್ಪಿಗೆ ಜೀವನದುದ್ದಕ್ಕೂ ಮೂಕ ವೇದನೆಯನ್ನು ಅನುಭವಿಸುವ ಹೆಣ್ಣುಮಕ್ಕಳು ದಿಟ್ಟತನದಿಂದ ಮುಂದೆ ಬರಬೇಕೆಂದೂ, ಅವರಿಗೆ ಬಾಳು ಕೊಡುವಂತಹ ಪುರುಷರೂ ಮುಂದೆ ಬರಬೇಕೆಂದೂ ಬಯಸಿದಳು.
ಅಂತಹ ದಿಟ್ಟ ಪ್ರಯತ್ನದಲ್ಲಿ ಅನಿಲ್ ಮುಂದೆ ಬಂದು ಮಾನ್ಸಿಯನ್ನು ಮದುವೆಯಾಗಲು ತನ್ನ ಸಂಪೂರ್ಣ ಅನುಮತಿ ಇದೆ. ತಾನೇನೂ ಅವಳ ಮೇಲಿನ ಕನಿಕರದಿಂದ ಮದುವೆಯಾಗುತ್ತಿಲ್ಲ, ತನಗೆ ಮಾನ್ಸಿ ಸಂಪೂರ್ಣವಾಗಿ ಹಿಡಿಸಿದ್ದಾಳೆಂದು ಹೇಳಿದ. ಮಾನ್ಸಿ ಕೂಡ ತಾನೂ ಮದುವೆಯಾಗಿ ಎಲ್ಲರಂತೆ ಉತ್ತಮ ದಾಂಪತ್ಯ ಜೀವನ ನಡೆಸಬಹುದೆಂದು ಸಂತೋಷಪಟ್ಟಳು.
ಸಂಜನಾ ಮಾನ್ಸಿಯಂತಹ ದನಿಯಿಲ್ಲದ ಹೆಣ್ಣುಮಕ್ಕಳಿಗೆ ತನ್ನಂತಹ ದಿಟ್ಟ ಹೆಣ್ಣುಗಳು ದನಿಯಾಗಬೇಕು ಎಂದು ಆ ನಿಟ್ಟಿನಲ್ಲಿಯೇ ಇನ್ನು ಮುಂದೆ ಹೆಜ್ಜೆ ಹಾಕುತ್ತೇನೆಂಬ ನಿರ್ಧಾರವನ್ನು ಕೈಗೊಂಡಳು. ಮಾನ್ಸಿಯ ವೇದನೆಗೆ ಇವಳ ದನಿ ಬಲವಾಗಿತ್ತು. ಮಾನ್ಸಿ ಮೂಕ ವೇದನೆಯಿಂದ ಹೊರಬಂದಳು. ಮಾನ್ಸಿ ಇಂತಹದೊಂದು ಪ್ರಯತ್ನವನ್ನು ಎಂದೋ ಮಾಡಬಹುದಾಗಿತ್ತು ಎಂದುಕೊಂಡಳು ಸಂಜನಾ. ಮಾನ್ಸಿಯಂತೆ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಹೊತ್ತ ಮಹಿಳೆಯರಿಗೆ ತಾನು ದನಿಯಾಗುತ್ತೇನೆಂದು ಹೊರಟ ಸಂಜನಾಳ ಪ್ರಯತ್ನ ನಿಜಕ್ಕೂ ಮೊದಲ ಹೆಜ್ಜೆಯಲ್ಲಿಯೇ ಫಲಕಾರಿಯಾಗಿತ್ತು!