ನಮ್ಮ ಸುತ್ತಮುತ್ತ ಇಂದು ಅನೇಕ ಕ್ರೀಚ್‌ಗಳು ಕಂಡುಬರುತ್ತಿವೆ. ಅಂತಹ ಒಂದು ಕ್ರೀಚ್‌ನಲ್ಲಿ ಕೆಲವು ಸಮಯದ ಹಿಂದೆ ಒಂದು ಚಿಕ್ಕ ಮಗುವಿಗೆ ಥಳಿಸಿದ ಘಟನೆ ಬೆಳಕಿಗೆ ಬಂದಿತು. ಮಗುವಿನ ಪೋಷಕರು ಪೊಲೀಸರ ನೆರವಿನಿಂದ ಅಲ್ಲಿಯ ಸಿಸಿ ಟಿವಿ ಕ್ಯಾಮೆರಾದ ಫುಟೇಜ್ ನೋಡಿ ಬಿಚ್ಚಿಬಿದ್ದರು. ಫುಟೇಜ್‌ನಲ್ಲಿ ಡೇ ಕೇರ್ ಸೆಂಟರ್‌ನ ಆಯಾ ಮಗುವಿಗೆ ಹೊಡೆದು ಬಡಿದು ಮಾಡುತ್ತಿದ್ದುದು ಕಂಡುಬಂದಿತು. ಇಂತಹ ಘಟನೆ ನಡೆಯುತ್ತಿರುವುದು ಇದೇನೂ ಮೊದಲಲ್ಲ. ಈ ಹಿಂದೆಯೂ ಮತ್ತೊಂದು ಕ್ರೀಚ್‌ನಲ್ಲಿ 5 ವರ್ಷದ ಮಗುವಿಗೆ ಕೆಣಕಿ ಕೆಣಕಿ ಪರಿಹಾಸ್ಯ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ವಿಷಯ ತಿಳಿದುಬಂದು, ದೂರಿನ ಆಧಾರದ ಮೇಲೆ ಪೊಲೀಸರು ಅಪರಾಧಿಯನ್ನು ದಸ್ತಗಿರಿ ಮಾಡಿದ್ದರು.
ಇಂದು ಹೆಚ್ಚಿನ ಮಹಿಳೆಯರು ಉದ್ಯೋಗ ಮಾಡಲು ಹೊರಟಿದ್ದಾರೆ. ಅವರು ಅತ್ತೆ ಮಾವಂದಿರೊಂದಿಗೆ ಇರಲು ಇಷ್ಟಪಡುತ್ತಿಲ್ಲ. ಹೀಗಾಗಿ ಮಕ್ಕಳನ್ನು ಕ್ರೀಚ್‌ನಲ್ಲಿ ಬಿಡುವ ಪರಿಸ್ಥಿತಿ ಉಂಟಾಗಿದೆ. ಕ್ರೀಚ್‌ನಲ್ಲಿ ಆಟ ಊಟಗಳಿಗೆ ವ್ಯವಸ್ಥೆ ಇರುತ್ತದೆ. ಜೊತೆಗೆ ಇತರೆ ಆಕ್ಟಿವಿಟೀಸ್ ಕಲಿಸಲು ಪ್ರತ್ಯೇಕ ಏರ್ಪಾಡು ಮಾಡಲಾಗುತ್ತದೆ. ಹೀಗಾಗಿ ತಮ್ಮ ಮಕ್ಕಳು ಅಲ್ಲಿ ಸುರಕ್ಷಿತ ಎಂಬ ಭಾವನೆ ತಂದೆತಾಯಿಯರಿಗಿರುತ್ತದೆ. ಬೆಳಗ್ಗೆ ಆಫೀಸ್‌ಗೆ ಹೋಗುವಾಗ ಮಗುವನ್ನು ಕ್ರೀಚ್‌ನಲ್ಲಿ ಬಿಟ್ಟು, ಮತ್ತೆ ಸಾಯಂಕಾಲ ಮನೆಗೆ ಹಿಂದಿರುಗುವಾಗ ಕರೆತರುತ್ತಾರೆ. ಮನೆಗೆ ಬಂದ ಮೇಲೆ ತಮ್ಮ ಉಳಿದ ಮನೆಗೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಾರೆ. ಮಗುವಿನೊಂದಿಗೆ ಕಾಲ ಕಳೆಯಲು ಅವರಿಗೆ ಸಮಯವೇ ಇರುವುದಿಲ್ಲ. ಏನಿದ್ದರೂ ಭಾನುವಾರದ ದಿನ ಮಾತ್ರ ಮಗುವಿನೊಂದಿಗೆ ಇರುತ್ತಾರೆ.
ಮಗುವನ್ನು ಡೇ ಕೇರ್‌ನ ಜವಾಬ್ದಾರಿಗೆ ಪೂರ್ತಿಯಾಗಿ ಒಪ್ಪಿಸುವುದು ಸರಿಯಲ್ಲ. ಹೀಗೆ ಮಾಡುವುದರಿಂದ ನಿಮ್ಮ ಮತ್ತು ಮಗುವಿನ ನಡುವೆ ಬಾಂಡಿಂಗ್ ಉಂಟಾಗುವುದಿಲ್ಲ. ಮಗು ನಿಮ್ಮೊಂದಿಗೆ ವಿಷಯಗಳನ್ನು ಶೇರ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತನ್ನೊಂದಿಗೆ ಆಗುವ ಶೋಷಣೆಯನ್ನು ಅರ್ಥ ಮಾಡಿಕೊಳ್ಳುವ ವಯಸ್ಸೂ ಆಗಿರದೆ, ಮಗುವಿನ ಮುಖ ಸಪ್ಪೆಯಾಗಿರುತ್ತದೆ.
ಕ್ರೀಚ್‌ನಲ್ಲಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹೊಸ ಹೊಸ ವಿಷಯಗಳನ್ನು ಕಲಿಸುತ್ತಾರೆ ಎಂಬ ಭರವಸೆ ನಿಮಗಿರುತ್ತದೆ. ಅದು ಸರಿಯೇ ಆದರೂ ನೀವು ಕ್ರೀಚ್‌ನಲ್ಲಿ ಮಗುವನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ. ಅಲ್ಲಿ ಮಗುವಿಗೆ ಏನಾದರೂ ತೊಂದರೆ ಆಗುತ್ತಿದೆಯೇ ಎಂಬುದನ್ನು ಪ್ರತಿನಿತ್ಯ ಮಾನಿಟರ್ ಮಾಡುತ್ತಿರಬೇಕು. ಏಕೆಂದರೆ ಮಕ್ಕಳು ಏನನ್ನೂ ಬಾಯಿಬಿಟ್ಟು ಹೇಳುವುದಿಲ್ಲ. ಸುಮ್ಮನೆ ಅಳುತ್ತಿರುತ್ತಾರೆ. ಕ್ರೀಚ್‌ಗೆ ಹೋಗಿರಲು ಇಷ್ಟವಿಲ್ಲದುದರಿಂದ ಅವರು ಅಳುತ್ತಾರೆ ಎಂದು ತಂದೆ ತಾಯಿಯರು ಭಾವಿಸುತ್ತಾರೆ. ಮಗು ಅಲ್ಲಿಗೆ ಹೋಗಲು ಏಕೆ ಇಷ್ಟಪಡುತ್ತಿಲ್ಲ ಎಂದು ತಿಳಿದುಕೊಳ್ಳುವುದು ತಂದೆತಾಯಿಯರ ಜವಾಬ್ದಾರಿ.
ಪ್ರತಿದಿನ ಹೀಗೆ ಮಾಡಿ
ಆಫೀಸಿನಿಂದ ಮನೆಗೆ ಬಂದ ನಂತರ, ನೀವೆಷ್ಟೇ ದಣಿದಿದ್ದರೂ ಕೂಡ ಮಗುವಿನೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಇಂದು ಕ್ರೀಚ್‌ನಲ್ಲಿ ಏನು ಮಾಡಿದೆ, ಏನು ತಿಂದೆ, ಏನು ಕಲಿತೆ, ಚೆನ್ನಾಗಿ ಆಟವಾಡಿದೆಯಾ ಎಂದೆಲ್ಲ ವಿಚಾರಿಸಿ. ಮಗುವಿನ ಉತ್ತರ ಸಮಂಜಸವಾಗಿಲ್ಲದ್ದಿದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ. ಬದಲು ಮಗು ಹೀಗೇಕೆ ಹೇಳುತ್ತಿದೆ ಎಂದು ತಿಳಿಯಿರಿ.
ಮಗುವನ್ನು ಮನೆಗೆ ಕರೆತಂದ ಮೇಲೆ ನೀವು ಕಳಿಸಿದ ತಿಂಡಿಯನ್ನು ತಿಂದಿದೆಯೇ ಎಂದು ನೋಡಿ. ಚಿಕ್ಕ ಮಗುವಾದರೆ ನ್ಯಾಪಿ ಬದಲಿಸಿದೆಯೇ ಎಂದು ಪರೀಕ್ಷಿಸಿ. ಮಗುವಿನ ಮೈಮೇಲೆ ಏನಾದರೂ ಗುರುತಿದ್ದರೆ, ಅದು ಹೇಗಾಯಿತೆಂದು ತಿಳಿಯಲು ಪ್ರಯತ್ನಿಸಿ.
ಕ್ರೀಚ್‌ನ ಆಯ್ಕೆ
ಕ್ರೀಚ್‌ನಲ್ಲಿರುವ ನೀರು ಮತ್ತು ಲೈಟ್‌ನ ವ್ಯವಸ್ಥೆ, ಹಾಸಿಗೆಯ ಸ್ವಚ್ಛತೆ ಮತ್ತು ಮಕ್ಕಳ ಆಟಿಕೆಗಳ ಸೌಲಭ್ಯವನ್ನು ಪರೀಕ್ಷಿಸಿ.
ಕ್ರೀಚ್‌ನಲ್ಲಿ ಗಾಳಿ, ಬೆಳಕು ಚೆನ್ನಾಗಿರಬೇಕು.
ಅಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಹೇಗಿದ್ದಾರೆ, ಮಕ್ಕಳೊಂದಿಗೆ ಅವರ ವ್ಯವಹಾರ ಹೇಗಿದೆ ಎಂದು ನೋಡಿ.
ಅಲ್ಲಿಗೆ ಬರುವ ಮಕ್ಕಳ ತಂದೆ ತಾಯಿಯರೊಂದಿಗೆ ಕ್ರೀಚ್ ಹೇಗಿದೆ? ಅವರು ಮಕ್ಕಳನ್ನು ಎಷ್ಟು ದಿನಗಳಿಂದ ಕಳುಹಿಸುತ್ತಿದ್ದಾರೆ ಎಂದು ವಿಚಾರಿಸಿಕೊಳ್ಳಿ.
ಮನೆಗೆ ಹತ್ತಿರವಿದೆ ಎಂಬ ಕಾರಣಕ್ಕಾಗಿ ಯಾವುದೋ ಕ್ರೀಚ್‌ನಲ್ಲಿ ಮಗುವನ್ನು ಬಿಡಬೇಡಿ. ಏಕೆಂದರೆ ನಿಮ್ಮ ಮಗು ದಿನವಿಡೀ ಅಲ್ಲಿರಬೇಕಾಗುತ್ತದೆ. ಆದ್ದರಿಂದ ಸ್ವಚ್ಛ ಮತ್ತು ಸುಂದರವಾದ ಡೇ ಕೇರ್ ಸೆಂಟರ್‌ನ್ನು ಆಯ್ಕೆ ಮಾಡಿಕೊಳ್ಳಿ.
– ಜಿ. ಸುಪ್ರಭಾ