ಕಥೆ – ಕರುಣಾ ಶರ್ಮ 

ಆಫೀಸಿನಿಂದ ಬಂದ ನರೇಶ ಖುಷಿಯಿಂದ ಪತ್ನಿ ಅನಿತಾಳಿಗೆ, “ನಾವಿಬ್ಬರೂ ನಾಳಿದ್ದು ಮಡಿಕೇರಿಗೆ ಹೋಗ್ತಿದ್ದೇವೆ. ಎಲ್ಲಾ ಸಿದ್ಧತೆ ಮಾಡಿಕೋ ಪ್ರಾಣೇಶ್ವರಿ,” ಎಂದ.

“ಇದ್ದಕ್ಕಿದ್ದ ಹಾಗೆ ಈ ಕಾರ್ಯಕ್ರಮ ಹೇಗೆ ಮಾಡಿದಿರಿ?” ನರೇಶನ ಟೈನ ಗಂಟು ಸಡಲಿಸುತ್ತಾ ಅನಿತಾ ನಗುನಗುತ್ತಾ ಕೇಳಿದಳು.

“ಇವತ್ತು ಶಿಲ್ಪಾಳ ಫೋನ್‌ ಬಂದಿತ್ತು. ಅವಳಿಗೆ ನಮ್ಮ ಮದುವೆಗೆ ಬರಲು ಆಗಿರಲಿಲ್ಲ. ಏಕೆಂದರೆ ಅವಳ ಗಂಡ ಸಮೀರ್‌ 2 ತಿಂಗಳು ತರಬೇತಿಗೆ ಹೋಗಿದ್ದ. ಅದಕ್ಕೆ ಇವಳು ತನ್ನ ತವರುಮನೆಗೆ ಹೊರಟುಹೋಗಿದ್ದಳು.”

“ಇವರಿಬ್ಬರಲ್ಲಿ ಯಾರಾದರೂ ನಿಮ್ಮ ಸಂಬಂಧಿಕರಾ?” ಅನಿತಾ ಕುತೂಹಲದಿಂದ ಕೇಳಿದಳು.

“ಇಲ್ಲ. ಸಂಬಂಧಿಕರೇನಲ್ಲ, ಶಿಲ್ಪಾ ಮತ್ತು ನಾನು ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದೆವು. ಬಹಳ ಚಟುವಟಿಕೆಯ ಹುಡುಗಿ, ಸಮೀರ್ ಕೂಡಾ ಬಹಳ ತಿಳಿವಳಿಕೆಯ ವ್ಯಕ್ತಿ. ಅವರು ತಮ್ಮ ಕಾರಿನಲ್ಲಿ ಸುತ್ತಾಡಲು ಹೋಗ್ತಿದಾರೆ. ನಾನು ನನ್ನ ಪತ್ನಿಯನ್ನೂ ಹನಿಮೂನ್‌ಗೆ  ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ ಎಂದು ಹೇಳಿದ್ದೆ. ಅವಳು ತಕ್ಷಣ ನಮ್ಮನ್ನೂ ತಮ್ಮ ಜೊತೆ ಬರಲು ಆಹ್ವಾನಿಸಿದಳು. ನೀನು ನೋಡ್ತಿರು, ಬಹಳ ಚೆನ್ನಾಗಿರುತ್ತೆ. ಅವರು ಮೂವರ ಜೊತೆ ತಿರುಗಾಡುವುದು ತುಂಬಾ ಚೆನ್ನಾಗಿರುತ್ತೆ,” ನರೇಶನಿಗೆ ತನ್ನ ಸಂತೋಷವನ್ನು ಬಚ್ಚಿಡಲು ಆಗುತ್ತಿರಲಿಲ್ಲ.

“ಮೂರನೆಯವರು ಅಂದರೆ ಅವರ ಮಗುವೇ?”

“ಇಲ್ಲಮ್ಮ, ಶಿಲ್ಪಾಳ ಮದುವೆಯಾಗಿ ಇನ್ನೂ 8-9 ತಿಂಗಳಾಗಿವೆ. ಈ ಕಾಲದಲ್ಲಿ ಬುದ್ಧಿವಂತರಾದವರು 3 ವರ್ಷಕ್ಕಿಂತ ಮೊದಲು ಮಗುವಿನ ಜಂಜಾಟದಲ್ಲಿ ಬೀಳಲು ಇಷ್ಟಪಡುವುದಿಲ್ಲ . ಈ ಮೂರನೆಯವ ಶಿಲ್ಪಾಳ ಚಿಕ್ಕಮ್ಮನ ಮಗ. ಅವನು ನಿಮ್ಮೂರಿನವನೆ. ಸುತ್ತಾಡಲು ಶಿಲ್ಪಾಳ ಊರಿಗೆ ಬಂದಿದಾನೆ.”

“ಅವರ ಗಾಡೀಲಿ ಸುತ್ತಾಡಲು ಹೋಗುವುದಕ್ಕೆ ಅನುಕೂಲಗಳೇನೋ ಇರುತ್ತೆ. ಆದರೆ ಈ ಮೂವರು ಬೋರ್‌ ಹೊಡಿಸುವವರಾದರೆ ಹನಿಮೂನ್‌ ಮಜಾನೇ ಇರಲ್ಲ,” ಅನಿತಾ ಸಂದೇಹ ವ್ಯಕ್ತಪಡಿಸಿದಳು.

“ಶಿಲ್ಪಾ ಜೊತೆ ಇದ್ದರೆ ಯಾರಿಗಾದರೂ ಬೋರ್‌ ಆಗಲು ಸಾಧ್ಯವೇ? ಅಸಂಭವ. ನಿನಗೆ ಅವಳು ಗೊತ್ತಿಲ್ಲ. ಅದಕ್ಕೆ ಹೀಗೆ ಹೇಳ್ತಿದೀಯ. ಅರರೆ, ಅವಳು ಕಲ್ಲನ್ನು ಕೂಡಾ ಮಾತನಾಡಿಸಿಬಿಡ್ತಾಳೆ. ನಗು ತಮಾಷೆ ಅಂದರೆ ಅವಳಿಗೆ ತುಂಬಾ ಇಷ್ಟ. ಈ ವಿಷಯ ಚಿಂತೆ ಮಾಡಬೇಡ. ನಾಳೆ ಹೊರಡುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೋ,” ನರೇಶನ ತೋಳುಗಳಲ್ಲಿ ಬಂಧಿಯಾದ ಅನಿತಾಳ ಮನದಲ್ಲಿ ಅನುಮಾನ ಹಾರಿಹೋಯಿತು.

ಪ್ರಯಾಣ ಹೊರಡುವ ಮೊದಲ ದಿನವೇ ಅನಿತಾಳ ಹೃದಯಕ್ಕೆ ಒಂದಾದ ಮೇಲೊಂದರಂತೆ ಅನೇಕ ಬಲವಾದ ಪೆಟ್ಟುಗಳಾದವು.

ಶಿಲ್ಪಾಳ ಚಿಕ್ಕಮ್ಮನ ಮಗ ರಾಜೀವನನ್ನು ನೋಡುತ್ತಲೇ ಅವಳ ಮುಖ ಬಿಳಿಚಿಕೊಂಡಿತು. ರಾಜೀವ ಅವಳ ಮದುವೆಗೆ ಮುಂಚಿನ ಪ್ರೇಮಿ. ಜಾತಿ ಧರ್ಮಗಳಿಂದಾಗಿ ಅವರಿಬ್ಬರ ಮದುವೆ ಸಾಧ್ಯವಾಗಲಿಲ್ಲ. ತಂದೆಯ ಮುಂಗೋಪಿ ಸ್ವಭಾವದಿಂದಾಗಿ ಅನಿತಾ ರಾಜೀವನಿಂದ ದೂರವಾಗಲು ನಿರ್ಧರಿಸಿದ್ದಳು. ಕಡೆಯ ಭೇಟಿಯಾದಾಗ ಅಗಲುವಿಕೆಯ ವೇದನೆಯಿಂದ ರಾಜೀವ ಕಣ್ಣೀರು ಸುರಿಸಿದ್ದನ್ನು ಅನಿತಾಳಿಗೆ ಇನ್ನೂ ಮರೆಯಲಾಗಿಲ್ಲ.

ರಾಜೀವ ಸಾಮಾನನ್ನು ಗಾಡಿಯೊಳಗಿಡಲು ಸಹಾಯ ಮಾಡಿದ. ಏಕಾಂತದಲ್ಲಿ ಅವನು ಅನಿತಾಗೆ ಮೃದುವಾದ ಸ್ವರದಲ್ಲಿ, “ನೀನು ನರೇಶನ ಹೆಂಡತಿ ಅಂತ ನನಗೆ ಗೊತ್ತಿರಲಿಲ್ಲ. ನನಗೆ ಈ ವಿಷಯ ಮೊದಲೇ ಗೊತ್ತಿದ್ದರೆ ನಾನು ಈ ಪ್ರವಾಸಕ್ಕೆ ಬರುತ್ತಲೇ ಇರಲಿಲ್ಲ,” ಎಂದ.

“ಶಿಲ್ಪಾಗೆ ನನ್ನ ಮತ್ತು ನಿನ್ನ ಬಗ್ಗೆ…” ಗಾಬರಿಯಿಂದ ಅನಿತಾ ಪ್ರಶ್ನೆಯನ್ನು ಪೂರ್ತಿ ಕೇಳಲಾಗಲಿಲ್ಲ.

“ನಾನು ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದೆ,  ಎನ್ನುವುದು ಶಿಲ್ಪಾಗೆ ಗೊತ್ತಿತ್ತು. ಆದರೆ ನೀನೇ ಎನ್ನುವುದು ಅವಳಿಗೆ ಖಂಡಿತಾ ಗೊತ್ತಿಲ್ಲ. ನೀನು ಯೋಚನೆ ಮಾಡಬೇಡ. ನಮ್ಮ ಕಳೆದುಹೋದ ಜೀವನ ನಿನಗೆ ಯಾವ ಸಮಸ್ಯೆಯನ್ನೂ ತರುವುದಿಲ್ಲ.”

ರಾಜೀವನ ಈ ಆಶ್ವಾಸನೆ ಅನಿತಾಳ ಆತಂಕವನ್ನು ಕಡಿಮೆ ಮಾಡಲಿಲ್ಲ. ಅವರಿನ್ನೂ ಊರಿನ ಗಡಿ ದಾಟಿರಲಿಲ್ಲ. ಶಿಲ್ಪಾಳ ಜೊತೆ ಮಾತನಾಡುತ್ತಿರುವಾಗ ಅನಿತಾಗೆ ಇನ್ನೊಂದು ಅಘಾತವಾಯಿತು.

ಶಿಲ್ಪಾ ಎತ್ತರದ ನಿಲುವಿನ, ಸುಂದರ, ತಮಾಷೆ ನಗುವಿನ ಸ್ವಭಾವದ ಹುಡುಗಿ. ಕಾರಿನಲ್ಲಿ ಹೊರಡುತ್ತಿದ್ದ ಹಾಗೆ ಅವಳು ತನ್ನ ವಿಶಿಷ್ಟ ರೀತಿಯಲ್ಲಿ ಹರಟಲು ಆರಂಭಿಸಿದಳು. ಹೊಸದಾಗಿ ಮದುವೆಯಾದ ಅನಿತಾ ಮತ್ತು ನರೇಶ್‌ರನ್ನು ಚುಡಾಯಿಸಲು ಅವಳಿಗೆ ಸಾಕಷ್ಟು ವಿಷಯಗಳಿದ್ದವು. ವಿಶೇಷವಾಗಿ ನರೇಶನನ್ನು ರೇಗಿಸುತ್ತಿದ್ದುದ್ದನ್ನು ಇತರರ ಜೊತೆ ಅನಿತಾ ಕೂಡಾ ಎಂಜಾಯ್‌ ಮಾಡುತ್ತಿದ್ದಳು.

“ಇವರ ಕಾಲೇಜು ದಿನಗಳ ಎಷ್ಟೊಂದು ವಿಷಯ ನಿಮಗೆ ಗೊತ್ತಿದೆ. ನಿಮ್ಮಿಬ್ಬರಿಗೂ ಒಳ್ಳೆಯ ಸ್ನೇಹವಿತ್ತೇ?” ಅನಿತಾಳ ಈ ಸೀದಾಸಾದಾ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಶಿಲ್ಪಾ ಜೋರಾಗಿ ನಗತೊಡಗಿದಳು. ಅನಿತಾಗೆ ಇವಳಿಗೇನಾದರೂ ಹುಚ್ಚು ಹಿಡಿದಿದೆಯೇ ಎಂದು ಅನುಮಾನ ಬರುವಷ್ಟು ಜೋರು ನಗೆಯಾಗಿತ್ತು ಅದು.

ಅನಿತಾ ಪ್ರಶ್ನಾರ್ಥಕವಾಗಿ ಗಂಡನ ಕಡೆ ನೋಡಿದಳು. ಅವನು ಉತ್ತರಿಸದೇ ಸುಮ್ಮನೆ ನಗುತ್ತಿದ್ದ. ಆಗ ಶಿಲ್ಪಾಳ ಪತಿ ಸಮೀರ್‌ಉತ್ತರಿಸಿದ, “ಇವರಿಬ್ಬರ ಸ್ನೇಹ ಹೆಚ್ಚಾಗಿತ್ತೋ ಕಡಿಮೆ ಇತ್ತೋ ಅನ್ನುವುದರ ಬಗ್ಗೆ ಯಾಕೆ ಪ್ರಶ್ನೆ ಕೇಳ್ತಿದೀಯ. ನಿನ್ನ ಪತಿ ಮತ್ತು ನನ್ನ ಈ ಪತ್ನಿಯ ಪ್ರೇಮದ ಚರ್ಚೆ ಇಡೀ ಕಾಲೇಜಿನಲ್ಲಿ ನಡೆಯುತ್ತಿತ್ತು.”

ಈ ಉತ್ತರ ಕೇಳಿ ಅನಿತಾಳ ಮನಸ್ಸಿನಲ್ಲಿ ವಿಚಿತ್ರವಾದ ಗಾಬರಿ ಉಂಟಾಯಿತು. ಅವಳು ಸಮೀರನ ಮಾತು ನಿಜವೇ ಎಂದು ಕೇಳಲು ಗಂಡನತ್ತ ನೋಡಿದಳು.

ನರೇಶ ನಾಚಿಕೆಯಿಂದ ನಗುತ್ತಾ ಹೇಳಿದ. “ನಮ್ಮ ಪ್ರೇಮದ ಚರ್ಚೆಗಳು ಅಂತೇನೂ ನಡೆಯುತ್ತಿರಲಿಲ್ಲ. ಎಲ್ಲರೂ ನಾವು ಒಳ್ಳೆ ಸ್ನೇಹಿತರು ಎಂದು ಒಪ್ಪಿಕೊಂಡಿದ್ದರು.”

“ಸುಳ್ಳು!” ಶಿಲ್ಪಾ ತುಂಟತನದಿಂದ ನರೇಶನ ತಲೆಗೊಂದು ಏಟು ಕೊಟ್ಟಳು.

“ನರೇಶ ನಾನು ಅಂದರೆ ಹುಚ್ಚನಾಗಿದ್ದ, ಮಜ್ನೂ ಹಾಗೆ. ಇದರಿಂದಾಗಿ ಕಾಲೇಜಿನಲ್ಲಿ ಇವನನ್ನು ಎಲ್ಲರೂ ತಮಾಷೆ ಮಾಡ್ತಿದ್ದರು, ನನಗೂ ಕೂಡ. ಇವನ ಹುಚ್ಚಿನ ಬಗ್ಗೆ ನಿಮಗೆ ಒಂದು ಪ್ರಸಂಗ ಹೇಳಲಾ?”

ಯಾರೂ ಹ್ಞೂಂ ಅಥವಾ ಬೇಡ ಅನ್ನುವುದರ ನಿರೀಕ್ಷೆ ಮಾಡದೆ ಅವಳು ತಮಾಷೆಯ ರೀತಿಯಲ್ಲಿ ಕಾಲೇಜಿನ ಅನೇಕ ಘಟನೆಗಳ ಬಗ್ಗೆ ಹೇಳಿದಳು.

ತಮಾಷೆ ಹವ್ಯಾಸಗಳ ನಡುವೆ ಶಿಲ್ಪಾ ಬಹಳ ಹೊತ್ತು ಮಸಾಲೆಯುಕ್ತ ಚುರುಕು ಮಾತುಗಳನ್ನಾಡಿದಳು. ಅನಿತಾ ಕೂಡಾ ಎಲ್ಲರ ನಗುವಿನಲ್ಲಿ ಪಾಲ್ಗೊಂಡಿದ್ದಳು. ಆದರೆ ನರೇಶ ಮತ್ತು ಶಿಲ್ಪಾರ ಹಳೆಯ ಪ್ರೇಮ ಪ್ರಸಂಗದ ಬಗ್ಗೆ ತಿಳಿದು ಅವಳಿಗೆ ವ್ಯಾಕುಲವಾಯಿತು. ಅವಳಿಗೆ ಸಮೀರನ ನಡತೆಯಿಂದಲೂ ಆಶ್ಚರ್ಯವಾಗುತ್ತಿತ್ತು. ಅವನಿಗೆ ನರೇಶ ಮತ್ತು ಶಿಲ್ಪಾಳ ವಿವಾಹಕ್ಕೆ ಮೊದಲಿನ ಪ್ರೇಮದ ಬಗ್ಗೆ ಗೊತ್ತಿತ್ತು ಎನ್ನುವುದು ಸ್ಪಷ್ಟವಾಗಿತ್ತು. ಆದರೂ ಅವನು ತನ್ನ ಪತ್ನಿಯ ಮಾತುಗಳಿಗೆ ಸಹಜವಾಗಿ ನಗುತ್ತಿದ್ದ. ನರೇಶನ ಜೊತೆಯೂ ಬಹಳ ಸ್ನೇಹದಿಂದಿದ್ದ. ತನ್ನ ಪತ್ನಿಯ ಪೂರ್ವ ಪ್ರೇಮಿಯ ಜೊತೆ ಮಡಿಕೇರಿಯಲ್ಲಿ ತಿರುಗಾಡುವ ವಿಷಯ ಅನಿತಾಳಿಗೆ ಅರ್ಥವಾಗುತ್ತಿರಲಿಲ್ಲ.

“ಈ ಸೀದಾಸಾದಾ ಮಜ್ನೂಗೆ ನಿಮ್ಮ ಹೃದಯ ಕೊಟ್ಟ ಮೇಲೆ ಇವರನ್ಯಾಕೆ ಮದುವೆಯಾಗಲಿಲ್ಲ?” ಅನಿತಾ ಮನದಲ್ಲಿದ್ದ ಪ್ರಶ್ನೆಯನ್ನು ಕೇಳಿದಳು.

“ಮದುವೆಗಳು ಸ್ವರ್ಗದಲ್ಲಾಗುತ್ತಿದ್ದವಂತೆ. ಈ ಪೆದ್ದನಿಗೆ ನನಗಿಂತ ಸುಂದರಿಯಾದ ನೀನು ಸಿಗುವುದಿತ್ತು. ನನಗೆ ಈ ಫಿಲ್ಮೀ ಹೀರೋ ಸಿಗಬೇಕು ಅಂತಿತ್ತು,” ಶಿಲ್ಪಾ ಪ್ರೀತಿಯಿಂದ ಸಮೀರನ ಕೂದಲಲ್ಲಿ ಕೈಯಾಡಿಸಿದಳು.

“ಫಿಲ್ಮೀ ಹೀರೋ ಅಲ್ಲ ಮೈ ಡಿಯರ್‌ ಶಿಲ್ಪಾ, ನನಗಂತೂ ಸಮೀರನಲ್ಲಿ ಯಾವಾಗಲೂ ಶಕ್ತಿ ಕಪೂರ್‌ ಕಾಣಿಸ್ತಾನೆ. ಇವರು ಕಮೆಡಿಯನ್‌ ಕಡಿಮೆ ವಿಲನ್‌ ಜಾಸ್ತಿ ಅನ್ನಿಸ್ತಾರೆ,” ನರೇಶ ಹೇಳಿದ. ಶಿಲ್ಪಾ ನಾಟಕೀಯ ಭಂಗಿಯಲ್ಲಿ ಕಣ್ಣುಗಳನ್ನು ಹೊರಳಿಸಿ ನರೇಶನ ತೋಳು ಚಿವುಟದೇ ಇದ್ದಿದ್ದರೆ ಅವನು ಚುಡಾಯಿಸುವುದನ್ನು ಮುಂದುವರಿಸುತ್ತಿದ್ದ.

ಡ್ರೈವರ್‌ನೂ ಮೆಲುನಗೆ ಬೀರುತ್ತಿದ್ದುದನ್ನು ಅನಿತಾ ಗಮನಿಸಿದಳು. ಅವಳಿಗೆ ಅವನ ನಗು ಇಷ್ಟವಾಗಲಿಲ್ಲ. ಅವಳ ಮನಸ್ಸಿಗೆ ಬೇಸರವಾಯಿತು.

ರಾಜೀವನಿಗೆ ಅವಳ ಮನಸ್ಥಿತಿ ಅರ್ಥವಾಯಿತು. ಅವನು ಶಿಲ್ಪಾಳಿಗೆ, “ಈಗ ನೀವಿಬ್ಬರೂ ನಿಮ್ಮ ಹಳೆ ಕಥೆ ನಿಲ್ಲಿಸಿ. ನಿಮ್ಮಿಬ್ಬರ ಹರಟೆ ಕೇಳಿ ಅನಿತಾಗೆ ಕೋಪ ಬರಬಹುದು. ”

“ನನ್ನ ಈ ಅಣ್ಣ ಬಹಳ ಮೃದು ಹೃದಯದ ಮನುಷ್ಯ, ಸ್ನೇಹಿತರೆ, ಈ ಬಡಪಾಯಿ ಕೂಡ ಒಬ್ಬಳನ್ನು ಪ್ರೀತಿಸಿದ್ದ. ಅವಳು ಇವನಿಗೆ ಸಿಗದ್ದಕ್ಕೆ ಈ ಮಹಾಶಯ ಹಗಲು ರಾತ್ರಿ ನಿಟ್ಟುಸಿರು ಬಿಡುತ್ತಿರುತ್ತಾನೆ. ಪ್ರೀತಿಯ ಕಾರಣದಿಂದ ತನ್ನ ಜೀವನ ನೀರಸ ಮತ್ತು ದುಃಖದಾಯಕ ಅನಿಸುವಂತಹ ಇಂತಹ ಮಜ್ನೂ ಧನ್ಯ,” ಎಂದು ಅವನನ್ನು ರೇಗಿಸಿದರು.

ಶಿಲ್ಪಾ ನಾಟಕೀಯವಾಗಿ ಕೈ ಮುಗಿದಾಗ ಕಾರಿನಲ್ಲಿ ನಗೆಯ ಅಲೆಯೆದ್ದಿತು.

“ಪ್ರೇಮಿಗಳು ಪರಸ್ಪರ ದೂರಾದಾಗ ಅವರು ದುಃಖಿಗಳಾಗುತ್ತಾರೆ. ಆದರೆ ಈ ವಿಷಯ ನಿನಗೆ ಅರ್ಥವಾಗೋದಿಲ್ಲ,” ನರೇಶ ರೇಗಿಸುವ ಹಾಗೆ ಶಿಲ್ಪಾಗೆ ಹೇಳಿದ.

ಹಾಸ್ಯ ತಮಾಷೆಯ ಮಾತುಗಳು ಹೀಗೆ ಮುಂದುವರಿದವು. ಅನಿತಾ ಕೂಡ ನಿಧಾನವಾಗಿ ಮೌನವಾಗತೊಡಗಿದಳು. ಸಮೀರ, ಶಿಲ್ಪಾ ಮತ್ತು ನರೇಶ ಆಗಾಗ ಮಾತನಾಡುತ್ತಾ ಇದ್ದರು.

ಅನಿತಾ ಮನಸ್ಸು ಅಶಾಂತವಾಗಿತ್ತು. ಒಂದು ಕಡೆ ಗಂಡನಿಗೆ ತನ್ನ ಮದುವೆಗೆ ಮೊದಲಿನ ಪ್ರೇಮ ಪ್ರಸಂಗ ತಿಳಿದುಬಿಡುತ್ತೇನೋ ಅನ್ನುವ ಭಯ, ಇನ್ನೊಂದು ಕಡೆ ಶಿಲ್ಪಾ ನರೇಶನ ಜೊತೆ ಅಷ್ಟೊಂದು ಸಲಿಗೆಯಿಂದಿರುವುದು. ಅವರಿಬ್ಬರಲ್ಲಿ ಇನ್ನೂ ಮೊದಲಿನ ಪ್ರೀತಿಯ ಬೇರು ಜೀವಂತವಾಗಿರಬಹುದು ಎನ್ನುವ ಸಂದೇಹ ಮೂಡುತ್ತಿತ್ತು.

ಅವಳ ಮನಸ್ಥಿತಿಯನ್ನರಿಯದ ಶಿಲ್ಪಾ ತನ್ನ ಚುರುಕು ಮಾತುಗಳಿಂದ ತಮಾಷೆ ಮಾಡುತ್ತಿದ್ದಳು. ಅವಳು ಅನಿತಾಳ ಆತಂಕವನ್ನು ಜಾಸ್ತಿ ಮಾಡುತ್ತಿದ್ದಳು. ಮಧ್ಯಾಹ್ನ ಅವರು ಮಡಿಕೇರಿ ತಲುಪುವ ಮೊದಲು ನದಿಯಲ್ಲಿ ಸ್ನಾನ ಮಾಡಿದರು. ನರೇಶ ಮತ್ತು ಶಿಲ್ಪಾ ಮಕ್ಕಳಂತೆ ಪರಸ್ಪರರ ಮೇಲೆ ನೀರೆರಚಿಕೊಳ್ಳುತ್ತ ಸ್ನಾನ ಮುಗಿಸಿದರು. ಹೋಟೆಲಲ್ಲಿ ತಿಂಡಿ ತಿನ್ನುವಾಗ ಕೂಡ ಅವರ ಮಧ್ಯೆ ತಮಾಷೆ ನಡೆದೇ ಇತ್ತು. ಇಷ್ಟ ಬಂದರೆ ಒಬ್ಬರು ಇನ್ನೊಬ್ಬರ ತಟ್ಟೆಯಿಂದ ತೆಗೆದುಕೊಂಡು ತಿನ್ನುತ್ತಿದ್ದರು. ಸಂದರ್ಭ ಬಂದಾಗ ಶಿಲ್ಪಾ ನರೇಶನಿಗೆ ಮೆಲ್ಲಗೆ ಏಟು ಹಾಕುವುದು, ಅವನ ಭುಜದ ಮೇಲೆ ಕೈಹಾಕಿ ಮಾತನಾಡುವುದು ನಡೆದೇ ಇತ್ತು.

ಶಿಲ್ಪಾ ರಾಜೀವ್ ಮತ್ತು ಸಮೀರರ ಜೊತೆಯೂ ಹಾಗೇ ನಡೆದುಕೊಳ್ಳುತ್ತಿದ್ದಳು. ಆದರೆ ಅನಿತಾಗೆ ಅವಳು ನರೇಶನ ಜೊತೆ  ನಡೆದುಕೊಳ್ಳುವ ರೀತಿ ಮಾತ್ರ ಕಣ್ಣು ಚುಚ್ಚುತ್ತಿತ್ತು. ಅರ್ಧ ದಿನ ಕಳೆಯುತ್ತಿದ್ದ ಹಾಗೆ ಅವಳ ಮನಸ್ಸಲ್ಲಿ, ಶಿಲ್ಪಾಳ ಬಗ್ಗೆ ಕೋಪದ ಭಾವನೆ ತುಂಬಿಕೊಂಡಿತ್ತು. `ಸಮೀರ ಯಾಕೆ ಪತ್ನಿಯ ಈ ವ್ಯವಹಾರವನ್ನು ತಡೆಯುತ್ತಿಲ್ಲ’ ಎಂಬ ಭಾವನೆ ಬಂದು ಸಮೀರನ ಬಗ್ಗೆಯೂ ಅಭಿಪ್ರಾಯ ಬದಲಾಗತೊಡಗಿತು. ಊರು ತಲುಪುತ್ತಿದ್ದಂತೆ ಎಲ್ಲರಿಗೂ ಸಾಕಾಗಿಹೋಗಿತ್ತು. ಹೋಟೆಲ್ ಕೋಣೆಯೊಳಗೆ ವಿಶ್ರಾಂತಿ ತೆಗೆದುಕೊಂಡರೆ ಸಾಕು ಎನ್ನುವಂತಾಗಿತ್ತು. ಸ್ವಲ್ಪ ತಿಂಡಿ ತಿಂದು ಎಲ್ಲರೂ ತಂತಮ್ಮ ಕೋಣೆಗಳಿಗೆ ಹೋದರು.

ಶಿಲ್ಪಾ ಅನಿತಾಳನ್ನು ಭೇಟಿಯಾಗಲೆಂದು ಬಂದಾಗ ನರೇಶ ಫ್ರೆಶ್‌ ಆಗಲು ಬಾತ್‌ರೂಮಿನೊಳಗೆ ಹೋಗಿದ್ದ.

“ನಾನು ಮಧ್ಯದಲ್ಲಿರುವ ಕೋಣೆಯನ್ನು ನಮ್ಮಿಬ್ಬರಿಗೆ ಆರಿಸಿಕೊಂಡಿದ್ದು ಯಾಕೆ ಅಂತ ಹೇಳ್ತಿಯಾ?” ಶಿಲ್ಪಾ ಕಣ್ಣುಗಳಲ್ಲಿ ತುಂಟತನವಿತ್ತು.

“ಇಲ್ಲಾ,” ತಲೆ ಅಲ್ಲಾಡಿಸಿದಳು ಅನಿತಾ.

“ನಮ್ಮ ಮದುವೆಯಾಗಿ 9 ತಿಂಗಳಾಗಿವೆ. ಅದೇ ನಿಮ್ಮ ಮದುವೆಯಾಗಿ ತಿಂಗಳಾಗಿದೆ ಅಷ್ಟೇ. ನಿಮ್ಮಿಬ್ಬರಿಗೂ ಅನುಭವ ಇನ್ನೂ ಹೆಚ್ಚಾಗಿ ಆಗಿಲ್ಲ. ಮಧ್ಯದ ಕೋಣೆ ನಿಮ್ಮದಾಗಿದ್ದರೆ ನೀವು ಉತ್ಸಾಹ ಜಾಸ್ತಿಯಾಗಿ ಶಬ್ದ ಮಾಡಿದರೆ ಪಾಪ ಬ್ರಹ್ಮಚಾರಿ ರಾಜೀವನಿಗೆ ನಿದ್ರೆ ಹಾಳಾಗುತ್ತೆ . ಈ ಕೋಣೆ ನಿನಗೆ ಕೊಟ್ಟಿದ್ದು ಸರಿಯಾಯಿತು ತಾನೆ?” ಶಿಲ್ಪಾ ಎಡಗಣ್ಣು ಮಿಟುಕಿಸಿದಳು.

ಅನಿತಾ ನಾಚಿಕೊಂಡಿದ್ದನ್ನು ನೋಡಿ ಜೋರಾಗಿ ನಕ್ಕಳು.

“ನಿನ್ನ ನರೇಶ ಕಿಸ್‌ ಕೊಡುವುದರಲ್ಲಿ ಎಕ್ಸ್ ಪರ್ಟ್‌. ಅನುಭವದಿಂದ ಇದನ್ನು ಹೇಳ್ತಿದೀನಿ. ಎಷ್ಟೋ ಸಲ ಉತ್ತೇಜಿತನಾದಾಗ ಹತೋಟಿಗೆ ತರಲು ಅವನನ್ನು ಚೆನ್ನಾಗಿ ಬೈಯ್ಯಬೇಕಾಗಿ ಬರುತ್ತಿತ್ತು. ಅವನ ಪ್ರೇಮಿಸುವ ಕಲೆಯನ್ನು ಪೂರ್ತಿ ಕಲಿಯಬೇಕು ಅಂತ ನನಗನ್ನಿಸುತ್ತೆ. ನೀನೇನಂತೀಯ ನಾಚಿಕೆ ಮುಳ್ಳೆ?” ಎಂದು ರೇಗಿಸಿದಳು.

ಅನಿತಾ ಉತ್ತರಿಸಲಿಲ್ಲ. ಶಿಲ್ಪಾ ನಗುತ್ತಾ, “ನಿನ್ನ ಗುಲಾಬಿ ಕೆನ್ನೆಗಳು ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿವೆ. ನೀವಿಬ್ಬರೂ ಹೆಚ್ಚು ಶಬ್ದ ಮಾಡಬೇಡಿ. ನನಗೆ ನಿದ್ರೆ ಭಂಗವಾದರೆ ಮತ್ತೆ ನಿದ್ರೆ ಬರುವುದು ಕಷ್ಟ.”

ಶಿಲ್ಪಾ ಹೊರಗೆ ಹೋಗುತ್ತಲೇ ಅನಿತಾಳ ನಗು ಮಾಯವಾಯಿತು. ಅವಳ ಮನಸ್ಸಿನ ಒಂದು ಭಾಗ ಶಿಲ್ಪಾಳನ್ನು ಇಷ್ಟಪಡುತ್ತಿತ್ತು. ಅವಳ ಮನಸ್ಸು ಮತ್ತೆ ಗೊಂದಲದ ಗೂಡಾಯಿತು. ಮಲಗುವುದಕ್ಕೆ ಮೊದಲು ನರೇಶ ಹೇಳಿದ, “ಶಿಲ್ಪಾ ಚುಡಾಯಿಸುವುದನ್ನು ಯಾರೂ ತಪ್ಪು ತಿಳಿದುಕೊಳ್ಳಲಿಲ್ಲ. ಏಕೆಂದರೆ ಅವಳ ಹೃದಯ ಶುದ್ಧವಾದದ್ದು. ಸಮೀರನಿಗೆ ಅವಳ ಮೇಲೆ ಪೂರ್ಣ ಭರವಸೆ ಇರುವುದರಿಂದ ಅವನು ಅವಳನ್ನು ತಪ್ಪು ತಿಳಿದುಕೊಳ್ಳಲಿಲ್ಲ. ನಿನಗೆ ಅವಳ ವಿಚಿತ್ರ ಸ್ವಭಾವ ಅರ್ಥವಾದರೆ ನೀನೂ ಅವಳನ್ನು ಮೆಚ್ಚಿಕೊಳ್ತೀಯ.”

ಮರುದಿನ ಎಲ್ಲರೂ ಜಲಪಾತ ನೋಡಲು ಹೋದರು. ಅನಿತಾ ಸಾಧ್ಯವಾದಷ್ಚು ನರೇಶ ತನ್ನ ಜೊತೆ ಇರುವಂತೆ ನೋಡಿಕೊಂಡಳು. ಅವಳಿಗೆ ಶಿಲ್ಪಾಳನ್ನು ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಅದರೆ ನರೇಶನ ಜೊತೆ ಇದ್ದರೂ ಮಾನಸಿಕ ತುಮುಲದಿಂದಾಗಿ ಅವಳಿಗೆ ಸಂತೋಷದ ಅನುಭವ ಆಗುತ್ತಿರಲಿಲ್ಲ.

ಊಟವಾದ ನಂತರ ಶಿಲ್ಪಾ ಮತ್ತು ನರೇಶ ಬೆಟ್ಟ ಹತ್ತುವ ಪ್ರಯತ್ನದಲ್ಲಿ ತೊಡಗಿಕೊಂಡರು. ಸ್ವಲ್ಪ ಹೊತ್ತಿಗೆ ಅವರಿಬ್ಬರೂ ಇತರರ ದೃಷ್ಚಿಯಿಂದ ದೂರವಾದರು. ರಾಜೀವನೂ ಏನೋ ಕೊಳ್ಳಬೇಕೆಂದು ಅಂಗಡಿ ಕಡೆ ಹೋದ. ಸಮೀರ ಮತ್ತು ಅನಿತಾ ಮಾತ್ರ ಉಳಿದರು.

ತಕ್ಕ ಅವಕಾಶ ನೋಡಿ ಅನಿತಾ ಸಮೀರನಿಗೆ, “ಶಿಲ್ಪಾ ಮತ್ತು ಇವರು ಕಾಲೇಜಿನಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಆಗಲೂ ಇಬ್ಬರೂ ಬಹಳ ಸಲಿಗೆಯಿಂದಿದ್ದರು. ಈಗಲೂ ಇಬ್ಬರೂ ಬಹಳ ಸಲಿಗೆಯಿಂದಿದ್ದಾರೆ. ಇದರಿಂದ ನಿಮ್ಮ ಮನಸ್ಸಿಗೆ ಯಾವಾಗಾದರೂ ಬೇಸರವಾಗುವುದಿಲ್ಲವೇ?” ಎಂದು ಹಿಂಜರಿಯುತ್ತಲೇ ಕೇಳಿದಳು.

“ನಿಮಗೆ ಬೇಸರವಾಗುತ್ತಾ?” ಸಮೀರ ಸಹಜವಾಗಿ ನಗುತ್ತಾ ಪ್ರಶ್ನಿಸಿದ.

“ಇಲ್ಲ” ಜೋರಾಗಿ ಹೇಳಿದಳು.

“ನಿಜ ಹೇಳ್ತಿದೀರಾ?” ಸಮೀರ ಅವಳ ಕಣ್ಣುಗಳನ್ನೇ ದೃಷ್ಟಿಸುತ್ತಾ ಕೇಳಿದ.

“ಬಹುಶಃ ಇಲ್ಲ,” ಅನಿತಾ ಸುಳ್ಳು ಹೇಳಿದ್ದನ್ನು ಒಪ್ಪಿಕೊಂಡಳು.

“ನಿಮಗೆ ಒಂದು ವಿಷಯ ಹೇಳ್ತೀನಿ ಅನಿತಾ, ಶಿಲ್ಪಾಳನ್ನು ನಾನು ಪ್ರೀತಿಸಿ ಮದುವೆಯಾಗಿದೀನಿ. ಮದುವೆಯ ಪ್ರಸ್ತಾಪ ಇಟ್ಟಾಗ ಶಿಲ್ಪಾ `ನಾನು ಜೀವನವನ್ನು ಪೂರ್ಣ ಆನಂದದಿಂದ ಮಜವಾಗಿ ಕಳೆಯಬೇಕು ಅಂತ ಇಷ್ಟಪಡ್ತೀನಿ. ಜನರ ಜೊತೆ ನಗುತ್ತಾ ತಮಾಷೆಯಾಗಿ ಮಾತನಾಡುವುದು ನನಗಿಷ್ಟ. ಆದರೆ ನಾನು ಚರಿತ್ರಹೀನಳಲ್ಲ. ನನ್ನ ಅತಿನಗುವಿನ ಕಾರಣದಿಂದ ನೀವು ನನ್ನ ಬಗ್ಗೆ ಎಂದಿಗೂ ಅನುಮಾನ ಪಡಬಾರದು. ನಿಮಗೆ ಮೋಸ ಮಾಡಬೇಕೆನ್ನುವ ಭಾವನೆ ನನ್ನಲ್ಲಿ ಎಂದಿಗೂ ಬರುವುದಿಲ್ಲ. ಬೇರೊಬ್ಬ ಪುರುಷನ ಬಗ್ಗೆ ನನಗೆ ಆಸಕ್ತಿ ಉಂಟಾದರೆ ಮೊದಲು ನಿಮಗೆ ವಿಚ್ಚೇದನ ಕೊಟ್ಟು ಅವನನ್ನು ಮದುವೆ ಆಗ್ತೀನಿ,’ ಎಂದಿದ್ದಳು. ಇದುವರೆಗೂ ಅವಳು ನನ್ನಿಂದ ವಿಚ್ಛೇದನ ಕೇಳಿಲ್ಲ. ನಾವಿಬ್ಬರೂ ತುಂಬಾ ಸುಖವಾಗಿದ್ದೇವೆ. ನನಗೂ ಒಮ್ಮೊಮ್ಮೆ ಅವಳ ಬಿಚ್ಚು ಮಾತುಗಳನ್ನು ಕೇಳಿ ಬೇಸರವಾಗುತ್ತೆ. ಆದರೆ ಮರುಕ್ಷಣವೇ ಅವಳ ಮೇಲಿನ ವಿಶ್ವಾಸ ಮತ್ತೆ ಗಟ್ಟಿಯಾಗುತ್ತೆ. ನೀವು ಕೂಡ ಅವರಿಬ್ಬರ ಸ್ನೇಹ ಸಂಬಂಧದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಶಿಲ್ಪಾ ತಾನೂ ದಾರಿ ತಪ್ಪುವುದಿಲ್ಲ. ನರೇಶನಿಗೂ ದಾರಿ ತಪ್ಪಿಸುವುದಿಲ್ಲ,” ಸಮೀರ ಬಹಳ ಆತ್ಮೀಯತೆಯಿಂದ ಹೇಳಿದ.

ಅನಿತಾ ಮೌನವಾಗಿ ಸಮೀರನ ಮಾತುಗಳ ಬಗ್ಗೆ, ಬಹಳ ಹೊತ್ತು ವಿಚಾರ ಮಾಡುತ್ತಿದ್ದಳು. ಅಷ್ಟರಲ್ಲಿ ರಾಜೀವ್ ಬಂದಿದ್ದರಿಂದ ಇಬ್ಬರಲ್ಲಿ ಮಾತು ಮುಂದುವರಿಯಲಿಲ್ಲ.“ನೀನು ಯಾವಾಗ ಮದುವೆ ಮಾಡ್ತಿಕೊಳ್ತೀಯಪ್ಪ ಮಾರಾಯಾ?” ಸಮೀರ ರಾಜೀವನ ಪಕ್ಕ ಕುಳಿತುಕೊಳ್ಳುತ್ತಾ ಕೇಳಿದ.

“ಯಾವಾಗ ಆಗಬೇಕೋ ಆಗ ಆಗುತ್ತೆ ಭಾವ.” ರಾಜೀವ ಉತ್ತರಿಸಿದ.

“ಒಂದು ಸಲ ಮನಸ್ಸು ಒಡೆದಿದ್ದರಿಂದ ಮದುವೆ ಮಾಡಿಕೊಳ್ಳಬಾರದು ಎಂದು ನಿರ್ಧರಿಸಿದೀಯ ಅಂತ ಶಿಲ್ಪಾ ಹೇಳ್ತಾಳೆ, ಅದು ನಿಜವೇ?”

“ಈಗಂತೂ ಮದುವೆಯಾಗುವ ಇಚ್ಛೆ ಇಲ್ಲ ಅಷ್ಚೇ” ಎಂದ ರಾಜೀವ.

“ಯಾರೋ ಕೈಕೊಟ್ಟರು ಅಂತ ನಿನಗೆ ನೀನೇ ಯಾಕೆ ಶಿಕ್ಷೆ ಕೊಟ್ಟುಕೋತೀಯ? ಸಂಸಾರಿಯಾಗುವುದನ್ನು ಬಹಳ ದಿನ ಮುಂದೂಡಬಾರದು ರಾಜೀವ್,” ಅನಿತಾ ಒತ್ತಿ ಹೇಳಿದಳು.

“ಮನಸ್ಸಿಗೆ ಬಹಳ ಒಪ್ಪಿಗೆಯಾಗುವಂತಹ ಹುಡುಗಿ ಮತ್ತೆ ಮತ್ತೆ ಪಡೆಯುವುದು ಎಲ್ಲಿ ಸಾಧ್ಯವಾಗುತ್ತೆ ಅನಿತಾ,” ರಾಜೀವ ಉದಾಸೀನವಾಗಿ ಹೇಳಿದ.

“ನೀನು ಹುಡುಕಿದರೆ ಖಂಡಿತಾಗಿ ಸಿಗುತ್ತಾಳೆ.” ಅನಿತಾ ಹೇಳಿದಳು.

“ನಿನಗೆ ಸಿಕ್ಕಿದರೆ ನನಗೆ ಹೇಳು,” ರಾಜೀವ ಹೇಳಿದ.

“ಆ ಹುಡುಗಿ ಬಗ್ಗೆ ಗೊತ್ತಿಲ್ಲದೆ ಇರುವಾಗ ಅಂತಹ ಹುಡುಗೀನಾ ಇವರು ಹೇಗೆ ಕಂಡುಹಿಡೀತಾರೆ?” ಸಮೀರನ ಈ ಪ್ರಶ್ನೆ ಕೇಳಿ ಅನಿತಾ ಮತ್ತು ರಾಜೀವರಿಗೆ ಒಂದು ಕ್ಷಣ ಗಾಬರಿಯಾಯಿತು. ನಂತರ ಸಂಭಾಳಿಸುತ್ತಾ ರಾಜೀವ ನಕ್ಕು ಹಗುರ ಧಾಟಿಯಲ್ಲಿ ಹೇಳಿದ.

“ನಿಮ್ಮ ಮಾತು ಸರಿ ಭಾವ. ಅನಿತಾ ತನ್ನ ಹಾಗೇ ಇರುವ ಹುಡುಗೀನ ಹುಡುಕಿದರೆ ಅವಳನ್ನು ಮದುವೆಯಾಗಲು ತಯಾರು,” ಎಂದ.

“ಅನಿತಾಳ ವ್ಯಕ್ತಿತ್ವ ತುಂಬಾ ಹಿಡಿಸಿದೆಯಾ ನಿನಗೆ” ಸಮೀರ ಕೇಳಿದ.

“ತುಂಬಾ,” ಎಂದ ರಾಜೀವ.

ಅವನ ಮಾತು ಕೇಳಿ ಅನಿತಾಳ ಹೃದಯ ಜೋರಾಗಿ ಬಡಿದುಕೊಂಡಿತು. ರಾಜೀವ ತನ್ನನ್ನು ಇನ್ನೂ ಇಷ್ಟಪಡುತ್ತಾನೆ ಎಂದು ಅವಳಿಗನ್ನಿಸಿತು. ಈ ವಿಚಾರ ಅವಳಲ್ಲಿ ಗಾಬರಿ ಮತ್ತು ಆತಂಕವನ್ನು ಮತ್ತೂ ಹೆಚ್ಚಿಸಿತು.

“ರಾಜೀವ್‌, ಸಮೀರ್‌ ಬೇಗ ಬನ್ನಿ! ನರೇಶ್‌ ಹಳ್ಳದೊಳಗೆ ಬಿದ್ದುಬಿಟ್ಟಿದ್ದಾನೆ… ಬೇಗ ಬನ್ನಿ.”

ಬೆಟ್ಟದ ಮೇಲೆ ನಿಂತಿದ್ದ ಶಿಲ್ಪಾಳ ಭಯದ ದನಿ ಕೇಳಿ ಮೂವರೂ ತಕ್ಷಣ ಎದ್ದರು. ರಾಜೀವ್ ಮತ್ತು ಸಮೀರ್ ಬೆಟ್ಟ ಹತ್ತಿ ಬೇಗ ಶಿಲ್ಪಾಳ ಬಳಿ ಬಂದರು. ಅನಿತಾ ಕಾಲ ಹಾದಿ ಹಿಡಿದು ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ತಲುಪಿದಳು.

ಅಲ್ಲಿ ತಲುಪಿದಾಗ ಅಲ್ಲಿನ ದೃಶ್ಯ ನೋಡಿ ಎಲ್ಲರಿಗೂ ಬಾಯಿ ಒಣಗಿಹೋಯಿತು. ನರೇಶ ಒಂದು ಆಳವಾದ ಒಣಗಿದ ಕಾಲುವೆಯಲ್ಲಿ ಬಿದ್ದಿದ್ದ. ಕಣ್ಣು ಮುಚ್ಚಿಕೊಂಡು ಅಲುಗಾಡದೆ ಎಡಕ್ಕೆ ತಿರುಗಿ ಮಲಗಿದಂತೆ ಕಂಡುಬರುತ್ತಿತ್ತು. ಅವನ ಹಣೆಯ ಮೇಲೆ ಆಗಿದ್ದ ಗಾಯದಿಂದ ರಕ್ತ ಹರಿಯುತ್ತಿತ್ತು. ಅವನ ಬಟ್ಟೆ ಅಲ್ಲಲ್ಲಿ ಹರಿದು ಹೋಗಿತ್ತು. ಪೆಟಿಕೋಟ್‌ ಮತ್ತು ಬ್ಲೌಸ್‌ನಲ್ಲಿದ್ದ ಶಿಲ್ಪಾ ಬಹಳ ಹೆದರಿದ್ದಳು. ಅವಳ ಸೀರೆ ಹಗ್ಗದ ತರಹ ಉಪಯೋಗಿಸಲಾಗಿತ್ತು. ರಾಜೀವ ಈ ಸೀರೆಯ ಸಹಾಯದಿಂದ ಹಳ್ಳದ ಒಳಗೆ ಇಳಿಯುತ್ತಿದ್ದ. ಸೀರೆಯ ಒಂದು ತುದಿಯನ್ನು ಸಮೀರ ಭದ್ರವಾಗಿ ಹಿಡಿದುಕೊಂಡಿದ್ದ. ಅದನ್ನು ನಿಧಾನವಾಗಿ ಸಡಿಲ ಬಿಡುತ್ತಿದ್ದಂತೆ ರಾಜೀವ ನಾಲೆಯ ಆಳದೊಳಕ್ಕೆ ಇಳಿಯತೊಡಗಿದ.

ಕಡೆಯ 8-10 ಅಡಿ ದೂರ ಉಳಿದಾಗ ಸೀರೆಯ ತುದಿ ಬಂತು. ಆಗ ರಾಜೀವ ಹಿಂಜರಿಯದೆ ತುದಿಯನ್ನು ಬಿಟ್ಟು ಜಾರುತ್ತಾ ನರೇಶನ ಬಳಿ ಬಂದ. ಅವನು ನರೇಶನನ್ನು ಸರಿಯಾಗಿ ಮಲಗಿಸಿ ಮಾತನಾಡಿಸಲು ಪ್ರಯತ್ನಿಸಿದ. ಜ್ಞಾನ ತಪ್ಪಿದ್ದ ನರೇಶನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಆಗ ಅವನು ತನ್ನ ಕರವಸ್ತ್ರ ತೆಗೆದು ನರೇಶನ ಹಣೆಯ ಗಾಯದ ಮೇಲೆ ಇಟ್ಟು ಶರ್ಟ್‌ನ್ನು ತೆಗೆದು ಅದರ ತೋಳಿನಿಂದ ಪಟ್ಟಿಯಂತೆ ಕಟ್ಟಿದ. ಮೇಲೆ ನಿಂತಿದ್ದ ಅನಿತಾ ಅಳುತ್ತಲೇ ಇದ್ದಳು. ಅವಳ ಶರೀರ ಭಯ, ಗಾಬರಿ ಹಾಗೂ ಚಿಂತೆಯಿಂದ ಥರಥರನೆ ನಡುಗುತ್ತಿತ್ತು.

“ ನರೇಶನಿಗೆ ಏನೂ ಆಗಿಲ್ಲ. ಅನಿತಾ ನೋಡಾತ್ತಾ ಇರು. ಅವನು ಚೆನ್ನಾಗೇ ಇರ್ತಾನೆ. ಧೈರ್ಯವಾಗಿರು ಅಳಬೇಡ,” ಶಿಲ್ಪಾ ಅನಿತಾಳನ್ನು ಅಪ್ಪಿಕೊಂಡು ಸಮಾಧಾನ ಮಾಡುತ್ತಿದ್ದಳು.

ಆಗ ಅಲ್ಲಿಗೆ ಸ್ಥಳೀಯ ವ್ಯಕ್ತಿಯೊಬ್ಬ ಬಂದ. ಸಮೀರನಿಗೆ ನಾಲೆಯಲ್ಲಿ ಇಳಿಯಲು ಸುಲಭ ರಸ್ತೆ ತೋರಿಸುತ್ತೇನೆಂದ. ಸಮೀರ ಲಗುಬಗನೆ ಓಡುತ್ತಾ ಅವನ ಜೊತೆ ಹೊರಟ. ಸುಮರು 10 ನಿಮಿಷದ ನಂತರ ಸಮೀರ ಮತ್ತು ಆ ವ್ಯಕ್ತಿ ನರೇಶನ ಬಳಿ ಬಂದರು. ಇನ್ನೂ ಜ್ಞಾನ ತಪ್ಪಿದ್ದ ನರೇಶನನ್ನು ಮೂವರು ಸೇರಿ ಎಚ್ಚರಿಕೆಯಿಂದ ಎತ್ತಿಕೊಂಡರು.

ಅವನನ್ನು ರಸ್ತೆಯವರೆಗೆ ಎತ್ತಿಕೊಂಡು ಬರುವುದು ಬಹಳ ಕಷ್ಟ ಮತ್ತು ಆಯಾಸಪಡಿಸುವ ಕೆಲಸವಾಗಿತ್ತು. ನಾಲೆಯೊಳಗೆ ಬಿದ್ದ ಸುಮಾರು 2 ಗಂಟೆಗಳ ನಂತರ ನರೇಶನನ್ನು ನರ್ಸಿಂಗ್‌ ಹೋಂಗೆ ಸೇರಿಸಲಾಗಿತ್ತು.

ನರ್ಸಿಂಗ್‌ ಹೋಂನಲ್ಲಿ ಹಿರಿಯ ವೈದ್ಯರು 1 ಗಂಟೆ ನಂತರ ನರೇಶನ ಪರಿಸ್ಥಿತಿ ಬಗ್ಗೆ ಮಾತನಾಡಿದರು. “ಅವರ ದೇಹದಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗಾಯಗಳಾಗಿವೆ, ಗಂಭೀರವಾಗಿಲ್ಲ. ತಲೆಯ ಎಕ್ಸ್ ರೇನಲ್ಲೂ ಏನೂ ತೊಂದರೆ ಕಂಡುಬಂದಿಲ್ಲ. ಎಲ್ಲೂ ಮೂಳೆ ಮುರಿದಿಲ್ಲ. ಚಿಂತೆ ಇರೋದು ಒಂದು ವಿಷಯದ್ದು.”

“ಯಾವ ವಿಷಯ ಡಾಕ್ಟರ್‌?” ಸಮೀರ ಕೇಳಿದ.

“ಮೂತ್ರ ದ್ವಾರದಿಂದ ರಕ್ತ ಬರುತ್ತಿದೆ. ಎಡ ಮೂತ್ರಪಿಂಡಕ್ಕೆ ಕಲ್ಲು ಬಲವಾಗಿ ತಾಕಿರುವುದರಿಂದ ಗಾಯವಾಗಿದೆ. ರಕ್ತ ನಿಲ್ಲಿಸಲು ಚಿಕಿತ್ಸೆ ಶುರು ಮಾಡಿದೀವಿ. ನರೇಶನ ರಕ್ತದೊತ್ತಡ ಸರಿಯಾಗಿದೆ. ಒಳಗೆ ಆಗುತ್ತಿರುವ ಬ್ಲೀಡಿಂಗ್‌ ನಿಲ್ಲದಿದ್ದರೆ ಆಪರೇಶನ್‌ಮಾಡಬೇಕಾಗುತ್ತೆ.”

“ಆಪರೇಷನ್‌ಗೆ ಎಷ್ಟು ಖರ್ಚಾಗುತ್ತದೆ?”  “30 ಸಾವಿರ ಆಗಬಹುದು. ಹಣದ ವ್ಯವಸ್ಥೆ ಮಾಡಲು ತೊಂದರೆಯಾಗುತ್ತೇನು?”

“ಇಲ್ಲ ಡಾಕ್ಟರ್‌, ನೀವು ನರೇಶನಿಗೆ ಉತ್ತಮ ಚಿಕಿತ್ಸೆ ಮಾಡಿ ಚೆನ್ನಾಗಿ ನೋಡಿಕೊಳ್ಳಿ.”

ಡಾಕ್ಟರ್‌ ಹೋದ ಮೇಲೆ ಅನಿತಾ ಗಾಬರಿಯಿಂದ “ಇಷ್ಟೊಂದು ಹಣವನ್ನು ಎಲ್ಲಿಂದ ತರುವುದು?” ಎಂದು ಕೇಳಿದಳು.

“ಚಿಂತೆ ಮಾಡಬೇಡ ಅನಿತಾ, ಹಣ ಕಡಿಮೆ ಬಿದ್ದರೆ ಒಡವೆ ಮಾರಿ ಕೂಡಿಸೋಣ” ಎಂದಳು ಶಿಲ್ಪಾ.

“ನಾನು ಯಾವ ಒಡವೇನೂ ತಂದಿಲ್ಲ, ಇವರೇ ಬೇಡ ಅಂದಿದ್ದರು,”  ಅನಿತಾ ನುಡಿದಳು. ಶಿಲ್ಪಾ ಅವಳ ಕೆನ್ನೆ ತಟ್ಟುತ್ತಾ “ರಿಲ್ಯಾಕ್ಸ್ ಮಾಡಿಕೊ. ಈ ಚಿಂತೆಗಳನ್ನೆಲ್ಲಾ ನಮಗೆ ಬಿಟ್ಟುಬಿಡು. ನರೇಶನನ್ನು ಸ್ವಸ್ಥವಾಗಿ ಕರೆದುಕೊಂದು ಹೋಗುವುದು ನಮ್ಮ ಹೊಣೆ,” ಎಂದಳು.

ನರೇಶ 2 ದಿನ ನರ್ಸಿಂಗ್‌ ಹೋಂನಲ್ಲಿ ಇರಬೇಕಾಯಿತು. ಆಗ ಅನಿತಾಳಿಗೆ ರಾಜೀವ್, ಸಮೀರ್ ಮತ್ತು ಶಿಲ್ಪಾ ಧೈರ್ಯ ತುಂಬುತ್ತಾ ಇದ್ದರು. ಒಂದು ಕ್ಷಣವೂ ಅವಳೊಬ್ಬಳನ್ನೇ ಬಿಟ್ಟಿರಲಿಲ್ಲ. ಎರಡು ರಾತ್ರಿಗಳೂ ಸಮೀರ್ ಮತ್ತು ರಾಜೀವ್ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರು. ಶಿಲ್ಪಾ ಅಕ್ಕನಂತೆ ಜವಾಬ್ದಾರಿ ನಿರ್ವಹಿಸುತ್ತಾ ಅನಿತಾಳ ಮನೋಬಲ ಕುಗ್ಗದಂತೆ ನೋಡಿಕೊಂಡಳು. ನರೇಶ ಹುಷಾರಾಗುವುದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದರು. ಅವರಲ್ಲಿ ಅಂತಹ ಬಲವಾದ ಇಚ್ಛಾಶಕ್ತಿಯನ್ನು ಅನಿತಾ ಕಂಡಿದ್ದಳು.

ನರೇಶನ ಮೂತ್ರದಲ್ಲಿ ರಕ್ತ ಬರುವುದು ನಿಂತಿತು. ಡಾಕ್ಟರ್‌ ಅವನನ್ನು ವಿಶ್ರಾಂತಿಯಲ್ಲಿಟ್ಟು 2 ದಿನಗಳ ನಂತರ ಕಳಿಸಿದರು. ಅವನು ವಾಪಸು ಬರುತ್ತಾನೆಂದು ಸುದ್ದಿ ಕೇಳಿ ಅನಿತಾ ಭಾವುಕಳಾಗಿ, “ಪ್ರವಾಸ ಹೊರಟಾಗ ನಿಮ್ಮೆಲ್ಲರನ್ನೂ ಅರ್ಥ ಮಾಡಿಕೊಳ್ಳುವುದರಲ್ಲಿ ನಾನು ತಪ್ಪು ಮಾಡಿದ್ದೆ. ಅವರು ಮತ್ತು ಶಿಲ್ಪಾಳ ಸಲಿಗೆ, ಸ್ನೇಹ ಸಂಬಂಧದ ಬಗ್ಗೆ ಅನುಮಾನ ಪಟ್ಟೆ. ರಾಜೀವನಿಗೆ ಮೋಸ ಮಾಡಿದ ಪ್ರೇಮಿ ನಾನು. ಇವನು ಇನ್ನೂ ನನ್ನ ವೈವಾಹಿಕ ಬದುಕಿಗೆ, ಸಂತೋಷಕ್ಕೆ ದೊಡ್ಡ ಅಪಾಯ ಎಂದುಕೊಂಡಿದ್ದೆ,” ಎಂದಳು.

“ಕಳೆದು ಹೋಗಿದ್ದನ್ನು ನೆನೆಸಿಕೊಂಡು ವರ್ತಮಾನ ಹಾಳುಮಾಡಿಕೊಳ್ಳುವುದು ಸರಿಯಲ್ಲ ಅನಿತಾ, ಕಾಲೇಜು ದಿನಗಳಲ್ಲಿ ಸುಮಾರಾಗಿ ಎಲ್ಲರಿಗೂ ಯಾರ ಮೇಲಾದರೂ ಪ್ರೀತಿ ಉಂಟಾಗುತ್ತದೆ. ಮದುವೆ ನಂತರ ಇಂತಹ ಪ್ರೇಮ ಸಂಬಂಧವನ್ನು ಯುವಕ ಅಥವಾ ಯುವತಿಯರದು ಕೆಟ್ಟ ನಡತೆ ಎಂದು ತಿಳಿಯಬಾರದು. ನಮ್ಮೆಲ್ಲರ ಇವತ್ತಿನ ಸಂಬಂಧ ಒಳ್ಳೆಯ ಅನುಬಂಧವಾಗಿದೆ,” ಶಿಲ್ಪಾ ಹೇಳಿದಳು.

“ಮಾತೆ ಶಿಲ್ಪಾರವರ ಪ್ರವಚನ ಸಮಾಪ್ತಿಯಾಯಿತು. ಮಕ್ಕಳೇ,” ರಾಜೀವನ ಈ ಮಾತುಗಳಿಗೆ ಎಲ್ಲರೂ ಜೋರಾಗಿ ನಕ್ಕರು. ಅನಿತಾಳ ಮನದಲ್ಲಿ ಮೂವರ ಬಗ್ಗೆ ಸ್ನೇಹದ ಬೇರು ಬಹಳ ಆಳವಾಗಿ ಇಳಿಯಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ