ಕಥೆ - ಕರುಣಾ ಶರ್ಮ
ಆಫೀಸಿನಿಂದ ಬಂದ ನರೇಶ ಖುಷಿಯಿಂದ ಪತ್ನಿ ಅನಿತಾಳಿಗೆ, ``ನಾವಿಬ್ಬರೂ ನಾಳಿದ್ದು ಮಡಿಕೇರಿಗೆ ಹೋಗ್ತಿದ್ದೇವೆ. ಎಲ್ಲಾ ಸಿದ್ಧತೆ ಮಾಡಿಕೋ ಪ್ರಾಣೇಶ್ವರಿ,'' ಎಂದ.
``ಇದ್ದಕ್ಕಿದ್ದ ಹಾಗೆ ಈ ಕಾರ್ಯಕ್ರಮ ಹೇಗೆ ಮಾಡಿದಿರಿ?'' ನರೇಶನ ಟೈನ ಗಂಟು ಸಡಲಿಸುತ್ತಾ ಅನಿತಾ ನಗುನಗುತ್ತಾ ಕೇಳಿದಳು.
``ಇವತ್ತು ಶಿಲ್ಪಾಳ ಫೋನ್ ಬಂದಿತ್ತು. ಅವಳಿಗೆ ನಮ್ಮ ಮದುವೆಗೆ ಬರಲು ಆಗಿರಲಿಲ್ಲ. ಏಕೆಂದರೆ ಅವಳ ಗಂಡ ಸಮೀರ್ 2 ತಿಂಗಳು ತರಬೇತಿಗೆ ಹೋಗಿದ್ದ. ಅದಕ್ಕೆ ಇವಳು ತನ್ನ ತವರುಮನೆಗೆ ಹೊರಟುಹೋಗಿದ್ದಳು.''
``ಇವರಿಬ್ಬರಲ್ಲಿ ಯಾರಾದರೂ ನಿಮ್ಮ ಸಂಬಂಧಿಕರಾ?'' ಅನಿತಾ ಕುತೂಹಲದಿಂದ ಕೇಳಿದಳು.
``ಇಲ್ಲ. ಸಂಬಂಧಿಕರೇನಲ್ಲ, ಶಿಲ್ಪಾ ಮತ್ತು ನಾನು ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದೆವು. ಬಹಳ ಚಟುವಟಿಕೆಯ ಹುಡುಗಿ, ಸಮೀರ್ ಕೂಡಾ ಬಹಳ ತಿಳಿವಳಿಕೆಯ ವ್ಯಕ್ತಿ. ಅವರು ತಮ್ಮ ಕಾರಿನಲ್ಲಿ ಸುತ್ತಾಡಲು ಹೋಗ್ತಿದಾರೆ. ನಾನು ನನ್ನ ಪತ್ನಿಯನ್ನೂ ಹನಿಮೂನ್‌ಗೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ ಎಂದು ಹೇಳಿದ್ದೆ. ಅವಳು ತಕ್ಷಣ ನಮ್ಮನ್ನೂ ತಮ್ಮ ಜೊತೆ ಬರಲು ಆಹ್ವಾನಿಸಿದಳು. ನೀನು ನೋಡ್ತಿರು, ಬಹಳ ಚೆನ್ನಾಗಿರುತ್ತೆ. ಅವರು ಮೂವರ ಜೊತೆ ತಿರುಗಾಡುವುದು ತುಂಬಾ ಚೆನ್ನಾಗಿರುತ್ತೆ,'' ನರೇಶನಿಗೆ ತನ್ನ ಸಂತೋಷವನ್ನು ಬಚ್ಚಿಡಲು ಆಗುತ್ತಿರಲಿಲ್ಲ.
``ಮೂರನೆಯವರು ಅಂದರೆ ಅವರ ಮಗುವೇ?''
``ಇಲ್ಲಮ್ಮ, ಶಿಲ್ಪಾಳ ಮದುವೆಯಾಗಿ ಇನ್ನೂ 8-9 ತಿಂಗಳಾಗಿವೆ. ಈ ಕಾಲದಲ್ಲಿ ಬುದ್ಧಿವಂತರಾದವರು 3 ವರ್ಷಕ್ಕಿಂತ ಮೊದಲು ಮಗುವಿನ ಜಂಜಾಟದಲ್ಲಿ ಬೀಳಲು ಇಷ್ಟಪಡುವುದಿಲ್ಲ . ಈ ಮೂರನೆಯವ ಶಿಲ್ಪಾಳ ಚಿಕ್ಕಮ್ಮನ ಮಗ. ಅವನು ನಿಮ್ಮೂರಿನವನೆ. ಸುತ್ತಾಡಲು ಶಿಲ್ಪಾಳ ಊರಿಗೆ ಬಂದಿದಾನೆ.''
``ಅವರ ಗಾಡೀಲಿ ಸುತ್ತಾಡಲು ಹೋಗುವುದಕ್ಕೆ ಅನುಕೂಲಗಳೇನೋ ಇರುತ್ತೆ. ಆದರೆ ಈ ಮೂವರು ಬೋರ್ ಹೊಡಿಸುವವರಾದರೆ ಹನಿಮೂನ್ ಮಜಾನೇ ಇರಲ್ಲ,'' ಅನಿತಾ ಸಂದೇಹ ವ್ಯಕ್ತಪಡಿಸಿದಳು.
``ಶಿಲ್ಪಾ ಜೊತೆ ಇದ್ದರೆ ಯಾರಿಗಾದರೂ ಬೋರ್ ಆಗಲು ಸಾಧ್ಯವೇ? ಅಸಂಭವ. ನಿನಗೆ ಅವಳು ಗೊತ್ತಿಲ್ಲ. ಅದಕ್ಕೆ ಹೀಗೆ ಹೇಳ್ತಿದೀಯ. ಅರರೆ, ಅವಳು ಕಲ್ಲನ್ನು ಕೂಡಾ ಮಾತನಾಡಿಸಿಬಿಡ್ತಾಳೆ. ನಗು ತಮಾಷೆ ಅಂದರೆ ಅವಳಿಗೆ ತುಂಬಾ ಇಷ್ಟ. ಈ ವಿಷಯ ಚಿಂತೆ ಮಾಡಬೇಡ. ನಾಳೆ ಹೊರಡುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೋ,'' ನರೇಶನ ತೋಳುಗಳಲ್ಲಿ ಬಂಧಿಯಾದ ಅನಿತಾಳ ಮನದಲ್ಲಿ ಅನುಮಾನ ಹಾರಿಹೋಯಿತು.
ಪ್ರಯಾಣ ಹೊರಡುವ ಮೊದಲ ದಿನವೇ ಅನಿತಾಳ ಹೃದಯಕ್ಕೆ ಒಂದಾದ ಮೇಲೊಂದರಂತೆ ಅನೇಕ ಬಲವಾದ ಪೆಟ್ಟುಗಳಾದವು.
ಶಿಲ್ಪಾಳ ಚಿಕ್ಕಮ್ಮನ ಮಗ ರಾಜೀವನನ್ನು ನೋಡುತ್ತಲೇ ಅವಳ ಮುಖ ಬಿಳಿಚಿಕೊಂಡಿತು. ರಾಜೀವ ಅವಳ ಮದುವೆಗೆ ಮುಂಚಿನ ಪ್ರೇಮಿ. ಜಾತಿ ಧರ್ಮಗಳಿಂದಾಗಿ ಅವರಿಬ್ಬರ ಮದುವೆ ಸಾಧ್ಯವಾಗಲಿಲ್ಲ. ತಂದೆಯ ಮುಂಗೋಪಿ ಸ್ವಭಾವದಿಂದಾಗಿ ಅನಿತಾ ರಾಜೀವನಿಂದ ದೂರವಾಗಲು ನಿರ್ಧರಿಸಿದ್ದಳು. ಕಡೆಯ ಭೇಟಿಯಾದಾಗ ಅಗಲುವಿಕೆಯ ವೇದನೆಯಿಂದ ರಾಜೀವ ಕಣ್ಣೀರು ಸುರಿಸಿದ್ದನ್ನು ಅನಿತಾಳಿಗೆ ಇನ್ನೂ ಮರೆಯಲಾಗಿಲ್ಲ.
ರಾಜೀವ ಸಾಮಾನನ್ನು ಗಾಡಿಯೊಳಗಿಡಲು ಸಹಾಯ ಮಾಡಿದ. ಏಕಾಂತದಲ್ಲಿ ಅವನು ಅನಿತಾಗೆ ಮೃದುವಾದ ಸ್ವರದಲ್ಲಿ, ``ನೀನು ನರೇಶನ ಹೆಂಡತಿ ಅಂತ ನನಗೆ ಗೊತ್ತಿರಲಿಲ್ಲ. ನನಗೆ ಈ ವಿಷಯ ಮೊದಲೇ ಗೊತ್ತಿದ್ದರೆ ನಾನು ಈ ಪ್ರವಾಸಕ್ಕೆ ಬರುತ್ತಲೇ ಇರಲಿಲ್ಲ,'' ಎಂದ.