ದಕ್ಷಿಣ ಭಾರತದ ನಿರ್ದೇಶಕರಲ್ಲಿ ದಿಗ್ಗಜರೆನಿಸಿದ ಎಸ್.ಎಸ್. ರಾಜ್ಮೌಳಿ, ಎಸ್. ಶಂಕರ್ ಅಭೂತಪೂರ್ವ ಎನಿಸುವಂಥ ಬಾಹುಬಲಿ, ರೋಬೋ ಮಾದರಿಯ ಚಿತ್ರ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ಖ್ಯಾತಿ ಗಳಿಸುತ್ತಾರೆ. ಇಂಥವರು `ಸಂತೆ ಹೊತ್ತಿಗೆ 3 ಮೊಳ’ ಎಂಬಂತೆ ಚಿತ್ರಗಳನ್ನು ಹೊಸೆಯುವುದಿಲ್ಲ. ಹೀಗಾಗಿಯೇ ಇವರ ಚಿತ್ರಗಳಲ್ಲಿ ಪರಿಪಕ್ವತೆ ಕಂಡುಬರುತ್ತದೆ. ಅದೇ ತರಹ ಆಮೀರ್ ಖಾನ್, ದಬಂಗ್ ತಾರೇ ಜಮೀನ್ ಪರ್ ತರಹದ ಚಿತ್ರಗಳಿಂದ ಬಾಕ್ಸ್ ಆಫೀಸ್ ರೆಕಾರ್ಡ್ ಸೃಷ್ಟಿಸುತ್ತಾರೆ. ಅದರಲ್ಲಿ ಅವರ ಅಪಾರ ಪರಿಶ್ರಮ, ಪರ್ಫೆಕ್ಷನ್ ಕಂಡುಬರುತ್ತದೆ. ವರ್ಷಕ್ಕೆ 4-5 ಚಿತ್ರ ಹೊಸೆಯುವ ಬದಲು ಒಂದೇ ಚಿತ್ರ ಮಾಡುತ್ತಾರೆ. ಸೀನ್ ನಿಮಿಷದ್ದಿರಲಿ ಅಥವಾ 10 ನಿಮಿಷ ಅದರಲ್ಲಿ ವಾಸ್ತವಿಕತೆ ತೋರುವಲ್ಲಿ ಈ ಮಹಾನ್ ನಿರ್ದೇಶಕರಾರೂ ಹಿಂದೆ ಬೀಳುವುದಿಲ್ಲ. ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳ ಬಗ್ಗೆಯೂ ಅಷ್ಟೆಲ್ಲ ತಲೆ ಕೆಡಿಸಿಕೊಳ್ಳುವುದರಿಂದಲೇ ಇವರ ಚಿತ್ರಗಳಿಗೆ ಈ ಮಟ್ಟದ ಹೆಸರು ಬರಲು ಸಾಧ್ಯ.
ಇಂದಿನ ಯುವಜನತೆ ಇಂಥ ಪರ್ಫೆಕ್ಷನಿಸ್ಟ್ ಗಳಿಂದ ಕಲಿಯಬೇಕಾದುದು ಬಹಳಷ್ಟಿದೆ. ಇಂದಿನ ಯುವಜನತೆಗೆ ತುಸು ಧೈರ್ಯದ ಕೊರತೆ ಇದೆ. ಅವರಿಗೆ ಎಲ್ಲಾ ಕೆಲಸದಲ್ಲೂ ಅವಸರವೇ ಪ್ರಧಾನ. ಊಟತಿಂಡಿ ಸೇವಿಸುವಾಗ ಅರ್ಜೆಂಟ್, ಎಲ್ಲಿಗಾದರೂ ಹೊರಡಬೇಕೆಂದರೆ ಅವಸರ, ರಸ್ತೆ ಮೇಲೆ ಗಾಡಿ ಓಡಿಸುವಾಗ ಅತಿ ವೇಗ, ಗರ್ಲ್/ಬಾಯ್ಫ್ರೆಂಡ್ಗಳನ್ನು ಮಾಡಿಕೊಳ್ಳುವುದರಲ್ಲೂ ಫಾಸ್ಟ್ ನೆಸ್, ಅಷ್ಟೇ ವೇಗವಾಗಿ ಬ್ರೇಕ್ ಅಪ್ನಲ್ಲೂ ತರಾತುರಿ…. ಈ ಪಟ್ಟಿಗೇ ಕೊನೆಯೇ ಇಲ್ಲ.
ಇವರು ಕೆಲಸಗಳಿಗೆ ತಂತಮ್ಮ ಸಂಪೂರ್ಣ ಸಮಯ ನೀಡಿ ಅದನ್ನು ಅಚ್ಚುಕಟ್ಟು ಮಾಡಿಕೊಳ್ಳುವ ಬದಲು, ಫಟಾಫಟ್ ಅದನ್ನು ಮಾಡಿ ಮುಗಿಸಿ ಕೈ ತೊಳೆದು ಕೊಳ್ಳುತ್ತಾರೆ. ಗೂಗಲ್ನಲ್ಲಿ ಒಂದು ಕ್ಲಿಕ್ನಿಂದ ಎಲ್ಲಾ ಕಠಿಣ ಪ್ರಶ್ನೆಗಳಿಗೂ ಉತ್ತರ ಸಿಗುವ ಹಾಗೆ, ಅದೇ ತರಹ ನಿಜ ಜೀವನದಲ್ಲೂ ಪ್ರತಿ ಕೆಲಸವನ್ನೂ ಅತಿ ತರಾತುರಿಯಿಂದ ಮಾಡಿ ಮುಗಿಸಿ, ಉಳಿದ ಸಮಯ ಎಂಜಾಯ್ ಮಾಡಬೇಕೆಂಬುದು ಉದ್ದೇಶ. ನಿಧಾನವಾಗಿ ಯೋಚಿಸಿ, ವಿಚಾರ ವಿಮರ್ಶೆ ಮಾಡಿ, ಕಾರ್ಯಗಳನ್ನು ಒಂದು ಯೋಜನಾಬದ್ಧವಾಗಿ ಮಾಡುವುದು ಹಳೆ ಕಾಲದ ಗೊಡ್ಡು ಕೆಲಸ. ಇವರುಗಳಂತೂ ಈಗಿನ ಯಂಗ್ ಜನರೇಶನ್, ಬಿಸಿ ರಕ್ತದ ಕುದಿ ಉಕ್ಕುತ್ತಿರುತ್ತದೆ. ಯಾವುದೇ ವಿಚಾರವಾಗಿ ಪೋಷಕರು ಒಂದಿಷ್ಟು ಸಲಹೆ ನೀಡಿದರೂ, `ಅಯ್ಯೋ ಹೋಗಮ್ಮ…. ಯಾರ ಹತ್ತಿರ ಅಷ್ಟೊಂದು ಸಮಯವಿದೆ, ನಿಧಾನವಾಗಿ ಯೋಚಿಸಿ ಮಾಡಲು ಯಾರಿಗೆ ವ್ಯವಧಾನವಿದೆ,’ ಎನ್ನುತ್ತಾರೆ. ಬೇಗ ಬೇಗ ಮಾಡಿದರೆ ಮಾತ್ರ ಪ್ರಗತಿ ಸಾಧ್ಯ ಎಂಬುದು ಅವರ ವಾದ. ಅವಸರದಲ್ಲಿ ಯುವಜನತೆ ಕೆಲಸವನ್ನೇನೋ ಬೇಗ ಮುಗಿಸುತ್ತಾರೆ, ಆದರೆ ತರಾತುರಿಯ ಕೆಲಸ ಕುಂದುಕೊರತೆಗಳಿಂದ ಕೂಡಿರುತ್ತದೆ ಎಂಬುದನ್ನು ಅವರು ಒಪ್ಪುವುದಿಲ್ಲ.
ಬನ್ನಿ, ಈ ರೀತಿ ಅವಸರದ ಕೆಲಸ ಎಂಥ ತೊಂದರೆಗಳಿಗೆ ಆಹ್ವಾನ ನೀಡುತ್ತದೆ ಎಂದು ತಿಳಿಯೋಣ :
ಅವಸರದಿಂದ ಕನ್ಫ್ಯೂಷನ್ಸ್ ಹೆಚ್ಚು : ಯಾರು ಅತಿ ವೇಗವಾಗಿ ಕೆಲಸ ಮಾಡುತ್ತಾರೋ, ಅವರು ಅಷ್ಟೇ ವೇಗವಾಗಿ ಬಡಬಡಿಸಿ ಮಾತನಾಡುತ್ತಾರೆ. ಎದುರಿಗೆ ಮಾತನಾಡುತ್ತಿರುವವರಿಗೆ ಉತ್ತರ ನೀಡಲು ಅವಕಾಶ ಕೊಡುವುದಿಲ್ಲ, ಮಧ್ಯೆ ಮಧ್ಯೆ ಏನಾದರೂ ಮಾತನಾಡಿಬಿಡುತ್ತಾರೆ. ಯಾರ ಮಾತನ್ನೂ ಗಮನವಿಟ್ಟು ಕೇಳಿಸಿಕೊಳ್ಳುವುದಿಲ್ಲ. ಇವರಿಗೆ ಯಾವುದಾದರೂ ತುರ್ತು ಕೆಲಸ ಬಂದಾಗ ಅದನ್ನು ಸಮರ್ಪಕವಾಗಿ ನಿರ್ವಹಿಸಲಾರರು. ಏನನ್ನು ಮಾಡುವುದು, ಬಿಡುವುದು ಎಂಬ ಕನ್ಫ್ಯೂಷನ್ ಇವರಿಗೆ ತಪ್ಪದು. ಎಷ್ಟೋ ಸಲ ಎದುರಿನವರ ಮಾತಿಗೆ ತಲೆದೂಗುತ್ತಾರೆ, ನಂತರ ಯಾಕಾದರೂ ಅದನ್ನು ಒಪ್ಪಿಕೊಂಡೆನೋ ಎಂದು ಪಶ್ಚಾತ್ತಾಪ ಪಡುತ್ತಾರೆ.
ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರು : ಅವಸರದಲ್ಲಿ ಮಾಡುವ ಕೆಲಸಗಳಿಗೆ ಒಂದು ಪರಿಪೂರ್ಣತೆ ಇರುವುದಿಲ್ಲ. ಇಂಥವರು ಯಾವ ಸಂದರ್ಭದಲ್ಲಿ ಎಂಥ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಯದೆ ಕಂಗಾಲಾಗುತ್ತಾರೆ. ಈ ಕಾರಣದಿಂದಲೇ ಕಠಿಣ ಪರಿಸ್ಥಿತಿಯನ್ನು ಎದುರಿಸಲಾಗದೆ ಸಿಡಿಮಿಡಿಗುಟ್ಟುತ್ತಾರೆ. ಸಮಯ ಸಂದರ್ಭ ನಿಭಾಯಿಸಲಾಗದೆ, ಮಹತ್ವಪೂರ್ಣ ಸಂಬಂಧಗಳನ್ನು ಕಳೆದುಕೊಳ್ಳುತ್ತಾರೆ.
ಏಕಾಗ್ರತೆಯಲ್ಲಿ ಕೊರತೆ : ನೀವು ಅವಸರದಲ್ಲಿ ಏನೋ ಒಂದು ಮಾಡಿ ಮುಗಿಸಬೇಕು ಎಂದಿರುವಾಗ, ಖಂಡಿತಾ ಯಾವ ಕಡೆಯೂ ಗಮನ ಕೇಂದ್ರೀಕರಿಸಲಾಗದು. ನಿಮ್ಮ ಗಮನ ಚದುರಿಹೋಗುತ್ತದೆ. ಬೇಗ ಬೇಗ ಆ ಕೆಲಸ ಮುಗಿಸಿ, ಇನ್ನೊಂದು ಶುರು ಮಾಡಿದರೆ ಸಾಕು ಎಂದಿರುತ್ತದೆ. ಯಾವುದೇ ಕೆಲಸ ತುಸು ಹೆಚ್ಚಿನ ಸಮಯ ಬೇಡಿದರೆ, ಆ ಕೆಲಸ ಇವರಿಗೆ ದೊಡ್ಡ ಹೊರೆ ಎನಿಸುತ್ತದೆ, ಆಗ ಇಷ್ಟವಿಲ್ಲದೆಯೇ ಕಾಟಾಚಾರಕ್ಕೆ ಆ ಕೆಲಸ ಮಾಡಿ ಮುಗಿಸುತ್ತಾರೆ.
ವೈಫಲ್ಯ ಎದುರಿಸಬೇಕಾದಾಗ : ಹೀಗೆ ಯಾವ ಕೆಲಸವನ್ನೇ ತರಾತುರಿಯಲ್ಲಿ ಮುಗಿಸಲು ಹೋದರೂ ನೀವು ಅದಕ್ಕೆ ನಿಮ್ಮ 100% ಗಮನ ನೀಡಲಾಗದು. ಯಾವಾಗ ಅದು ವಿಫಲವಾಯಿತೋ, ತಕ್ಷಣ ಅದನ್ನು ಬಿಟ್ಟು ಬೇರೊಂದನ್ನು ಶುರು ಮಾಡುತ್ತೀರಿ. ಇದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಸಲ ಫೇಲ್ಯೂರ್ ಕಾರಣ ತಪ್ಪು ದಾರಿ ಹಿಡಿಯುವುದಕ್ಕೂ ಯೋಚಿಸುವುದಿಲ್ಲ.
ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲ : ನೀವು ಈ ರೀತಿ ಬೇಗ ಬೇಗ ಕೆಲಸ ಮುಗಿಸಿ ಬೇರೆಯವರ ಮೇಲೆ ಸಕಾರಾತ್ಮಕ ಪ್ರಭಾವ ಬೀರಬಹುದು ಎಂದು ಭಾವಿಸಿರುತ್ತೀರಿ. ಆದರೆ ಇದರಲ್ಲಿನ ಒಂದು ತೊಡಕು ಎಂದರೆ, ನೀವು ಈ ರೀತಿ ಅವಸರದಲ್ಲಿ ಕೆಲಸ ಮಾಡಿ ಬೇರೆಯವರ ಮೇಲೆ ಪ್ರಭಾವ ಬೀರಲಾಗದು ಎಂಬುದೂ ನಿಜ. ಉದಾ, ನಿಮ್ಮ ಡ್ರೈವರ್ ಬೇಗ ಕೆಲಸ ಮುಗಿಸುವ ಧಾವಂತದಲ್ಲಿ, ಅಗತ್ಯದ ಸಮಯಕ್ಕೆ ಮೊದಲೇ ನಿಮ್ಮನ್ನು ಆಫೀಸ್ ತಲುಪಿಸುತ್ತಾನೆ. ಅದೇ ಇನ್ನೊಬ್ಬ ಡ್ರೈವರ್ ತುಸು ನಿಧಾನವಾದರೂ ಸುರಕ್ಷತೆಯಿಂದ ನಿಮ್ಮನ್ನು ಸಮಯಕ್ಕೆ ತಲುಪಿಸಿದರೆ ಯಾರ ಕೆಲಸ ಒಳ್ಳೆಯದು? ಯಾರ ಬಗ್ಗೆ ನಿಮಗೆ ವಿಶ್ವಾಸ ಹೆಚ್ಚುತ್ತದೆ? ಖಂಡಿತಾ ಎರಡನೇ ಡ್ರೈವರ್ ಬಗ್ಗೆ. ಇದೇ ತರಹ ನಿಜ ಜೀವನದಲ್ಲೂ ನೀವು ಧೈರ್ಯ ಮತ್ತು ಸಂಯಮದಿಂದ ಬೇರೆಯವರ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುವಿರಿ.
ಆರೋಗ್ಯಕ್ಕೂ ಹಾನಿ : ಯಾವುದು ಫಟಾಫಟ್ ಅಂತ ಬೇಗ ರೆಡಿ ಆಗುತ್ತದೋ ಅಂಥ ಫಾಸ್ಟ್ ಫುಡ್ ತಿನಿಸುಗಳೇ ಇಂದಿನ ಯುವಜನತೆಗೆ ಹೆಚ್ಚು ಇಷ್ಟ. ಯಾರು ಗಂಟೆಗಟ್ಟಲೇ ಅಡುಗೆಮನೆಯಲ್ಲಿ ಕೊಳೆಯುವವರು ಎಂಬುದು ಇವರ ವಾದ. ಫಟಾಫಟ್ ತಯಾರಿಸಿ, ಬೇಗ ಬೇಗ ಸೇವಿಸಿ. ಇಷ್ಟು ಮಾತ್ರವಲ್ಲ, ಎಲ್ಲೆಂದರಲ್ಲಿ ಬೀದಿ ಬದಿಯಲ್ಲೇ ಸಿಕ್ಕಿದ್ದನ್ನು ತಿಂದುಂಡು ನೆಮ್ಮದಿಯಾಗಿರುತ್ತಾರೆ. ಈ ಕಾರಣದಿಂದಲೇ ಚಿಕ್ಕ ವಯಸ್ಸಿಗೇ ಇವರು ಬೇಕಾದಷ್ಟು ರೋಗಗಳಿಗೆ ತುತ್ತಾಗುತ್ತಾರೆ.
ಕೆರಿಯರ್ನಲ್ಲಿ ತರಾತುರಿ….. ಆದೀತು ದುಬಾರಿ : ಇಂದಿನ ಯುವ ಜನತೆ ಕೆಲಸವನ್ನು ಸರಿಯಾಗಿ ಕಲಿಯುವ ಬದಲು, ಜಾಬ್ ಬದಲಾಯಿಸುವುದನ್ನೇ ಹವ್ಯಾಸವಾಗಿಸಿಕೊಂಡಿದ್ದಾರೆ. ಬಾಸ್ ಅಥವಾ ಸೀನಿಯರ್ಸ್ ಇವರ ಕೆಲಸಗಳಲ್ಲಿನ ಕುಂದುಕೊರತೆ ಬಗ್ಗೆ ಆಕ್ಷೇಪಿಸಿದರೆ, ಮನೆಗೆ ಬಂದು ದೊಡ್ಡ ಗಲಾಟೆ ಎಬ್ಬಿಸಿ, ನಾಳೆಯಿಂದ ನಾನು ಆ ಕಂಪನಿಗೆ ಹೋಗುವುದೇ ಇಲ್ಲ ಎಂದು ಕೆಲಸ ಬಿಟ್ಟುಬಿಡುತ್ತಾರೆ. ನಾನು ಇಷ್ಟೆಲ್ಲ ಕೆಲಸ ಮಾಡುತ್ತೇನೆ, ಆದರೆ ನನಗೆಂದಿಗೂ ಕ್ರೆಡಿಟ್ ಸಿಗಲ್ಲ….. ಇತ್ಯಾದಿ. ಯಾವುದೋ ಕಾರಣಕ್ಕಾಗಿ ಇದ್ದ ಕೆಲಸ ಬಿಡಬೇಕಾಗಿ ಬಂದರೆ, ಹಿಂದೆಮುಂದೆ ಏನೂ ಯೋಚಿಸುವುದಿಲ್ಲ. ಕೆಲಸ ಬಿಟ್ಟೇಬಿಡುತ್ತಾರೆ! ಯುವಜನತೆಯ ಇಂಥ ಹಾರಾಟ ಅವರ ಕೆರಿಯರ್ಗೆ ಖಂಡಿತಾ ಒಳ್ಳೆಯದಲ್ಲ. ಸಂಬಳದಲ್ಲಿ ಕೆಲವೊಂದು ಸಾವಿರಗಳ ವ್ಯತ್ಯಾಸದ ಕಾರಣ ಇವರು ಕೆಲಸ ಬಿಟ್ಟು ಆಗಾಗ ಹೊಸ ಕೆಲಸಕ್ಕೆ ಸೇರುವುದರಿಂದ, ನೀವು ಯಾವುದೇ ಕೆಲಸದಲ್ಲೂ ಎಕ್ಸ್ ಪರ್ಟ್ ಎನಿಸುವುದಿಲ್ಲ. ನಿಮಗೆ ಪ್ರತಿ ಕೆಲಸದಿಂದಲೂ ಅಲ್ಪಸ್ವಲ್ಪ ನಾಲೆಜ್ ಬರಬಹುದಷ್ಟೆ. ಆದ್ದರಿಂದ ನೀವು ಇರುವ ಕೆಲಸನ್ನೇ ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಯತ್ನಿಸಿ.
ಇಷ್ಟು ಮಾತ್ರವಲ್ಲ, ಪ್ರತಿ ಕೆಲಸದಲ್ಲೂ ತರಾತುರಿ ತೋರಿಸುವುದರಿಂದ, ನೀವು ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ದಿನೇದಿನೇ ಸ್ಟ್ರೆಸ್ ಲೆವೆಲ್ ಹೆಚ್ಚುತ್ತದೆ. ಹಾರ್ಮೋನ್ ಬದಲಾವಣೆ ಅನಿವಾರ್ಯವಾಗುತ್ತದೆ. ನಿಮ್ಮ ಪರ್ಸನಲ್ ರಿಲೇಶನ್ಶಿಪ್ ಸಹ ಪ್ರಭಾವಿತಗೊಳ್ಳುತ್ತದೆ. ನೀವು ಯಶಸ್ವಿ ಆಗಬಯಸುತ್ತೀರಿ ಎಂಬುದೇನೋ ಸರಿ, ಜೀವನದಲ್ಲಿ ಮುಂದುವರಿಯಲು ನೋಡುತ್ತೀರಿ. ಆದರೆ ಪ್ರತಿ ಕೆಲಸದಲ್ಲೂ ಅವಸರ ತೋರುವ ಬದಲು ನಿಮ್ಮ ಕೆಲಸದಲ್ಲಿ ತುಸು ಪರ್ಫೆಕ್ಷನ್ ತರಲು ಪ್ರಯತ್ನಿಸಿ. ಟೈಂ ಮ್ಯಾನೇಜ್ಮೆಂಟ್ ಗುಣ ಕಲಿಯಿರಿ. ಯಾವುದೇ ಕೆಲಸಕ್ಕೆ ತುಸು ಸಮಯ ತಗುಲುತ್ತಿದೆ ಎಂದರೆ ಅದರ ಅರ್ಥ ನೀವು ಸೋಮಾರಿ ಅಥವಾ ಲೇಟ್ ಲತೀಫ್ ಅಂತಲ್ಲ, ಬದಲಿಗೆ ಅದರರ್ಥ ನೀವು ಸಿಸ್ಟಮ್ಯಾಟಿಕ್ ವಿಧಾನದಿಂದ ಕೆಲಸ ಮಾಡುತ್ತಿದ್ದೀರಿ ಎಂದರ್ಥ. ಆದ್ದರಿಂದ ಇನ್ನು ಮುಂದೆ ನೀವು ಯಾವುದೇ ಕೆಲಸ ಶುರು ಮಾಡಿದರೂ, ಅದನ್ನು ಫಟಾಫಟ್ ಬೇಗ ಮುಗಿಸಿಬಿಡುವ ಬದಲು, ಅದಕ್ಕೆ ತುಸು ಹೆಚ್ಚಿನ ಸಮಯ ನೀಡಿ ಅಚ್ಚುಕಟ್ಟಾಗಿ ಮಾಡಿ ಮುಗಿಸಿ.
– ಎನ್. ಅಂಕಿತಾ