ಸ್ವಪ್ನಾ ಕೃಷ್ಣ ನಿರ್ದೇಶಕಿ, ನಿರ್ಮಾಪಕಿ
ದೇಹ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಎಲ್ಲರ ಪ್ರೀತಿ ವಿಶ್ವಾಸವನ್ನು ಗೆಲ್ಲುತ್ತದೆ. ಇಂಥ ಒಂದು ಸಂದೇಶ ಒಂದು ಧಾರಾವಾಹಿಯ ಜೀವಾಳವಾಗಿ ಮೂಡಬಹುದು ಎಂಬುದನ್ನು ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ ನಿರ್ದೇಶಕಿ ಸ್ವಪ್ನಾ ಕೃಷ್ಣ. ಝೀ ಚಾನೆಲ್‌ನಲ್ಲಿ ಮೂಡಿಬರುತ್ತಿರುವ `ಸುಬ್ಬಲಕ್ಷ್ಮಿ ಸಂಸಾರ’ ಹೆಂಗಳೆಯರ ಮನಸ್ಸನ್ನು ಹಿಡಿದು ಕೂಡಿಸಿದೆ. ಪ್ರತಿನಿತ್ಯ ಸಂಜೆ ತಪ್ಪದೇ ಎಲ್ಲರೂ ನೋಡುವ `ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿ ಒಬ್ಬ ಮುಗ್ಧ ಗೃಹಿಣಿಯ ಅಸಹಾಯಕತೆ, ಸಂಸಾರದಲ್ಲಿ ಪ್ರೀತಿಗಾಗಿ ಹಂಬಲಿಸುವ ಪತ್ನಿಯಾಗಿ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗನಿಗಾಗಿ ತನ್ನ ಬದುಕನ್ನು ಸವೆಸುವ ಸುಬ್ಬಲಕ್ಷ್ಮಿಯ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಅಂದಹಾಗೆ ಈ ಸ್ವಪ್ನಾ ಕಿರುತೆರೆಯ ಜನಪ್ರಿಯ ನಟಿ. ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ಣ ಅವರ ಪತ್ನಿ. ತಮ್ಮದೇ ಆದ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ಸೀರಿಯಲ್‌ಗಳನ್ನು ಕಿರುತೆರೆಗೆ ನೀಡುತ್ತಿದ್ದಾರೆ. `ಗಂಗಾ’ ಧಾರಾವಾಹಿ ಕೂಡಾ ಇವರ ಸಂಸ್ಥೆಯಿಂದ ಆಗಿದೆ. ಯಾವುದೇ ಅಬ್ಬರವಿಲ್ಲದೆ ಸರಳವಾಗಿ ಜನರ ಮನ ಮುಟ್ಟುವಂತೆ ಧಾರಾವಾಹಿ ನೀಡುತ್ತಿರುವ ಸ್ವಪ್ನಾ ಕ್ಯಾಮೆರಾ ಹಿಂದೆ ನಿಂತು ಕ್ರಿಯೇಟೀವ್ ಆಗಿ ಏನಾದರೂ ಉತ್ತಮ ಕೆಲಸ ಮಾಡಬೇಕೆಂದು ನಿರ್ದೇಶನದ ಜವಾಬ್ದಾರಿ ಕೈಗೆತ್ತಿಕೊಂಡರಂತೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿದಾಗ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು. ನಾನು ಹುಟ್ಟಿ ಬೆಳೆದದ್ದು ಎಲ್ಲ ಬೆಂಗಳೂರಲ್ಲೇ. ಅಪ್ಪ ಅಮ್ಮ ಇಬ್ಬರೂ ಉದ್ಯೋಗದಲ್ಲಿದ್ದರು. ಪಿ.ಯು.ಸಿ ಓದುತ್ತಿರುವಾಗಲೇ ನಾನು ಫಣಿ ರಾಮಚಂದ್ರರ `ದಂಡಪಿಂಡಗಳು’ ಧಾರಾವಾಹಿಯಲ್ಲಿ ನಟಿಸಿದ್ದೆ. ಅಲ್ಲಿಂದ ನನ್ನ ಆ್ಯಕ್ಟಿಂಗ್ ಜರ್ನಿ ಶುರುವಾಯಿತು. ಇಲ್ಲಿಯತನಕ ಸುಮಾರು 30-40 ಸೀರಿಯಲ್‌ಗಳಲ್ಲಿ ನಟಿಸಿದ ಅನುಭವ.
`ಸಪ್ತಪದಿ’ ನನಗೆ ಹೆಸರು ತಂದುಕೊಟ್ಟಿದ್ದಲ್ಲದೇ, ಆ ಸೀರಿಯಲ್‌ನಲ್ಲಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದ ಕೃಷ್ಣರವರ ಸ್ನೇಹ ಬೆಳೆದು ಇಬ್ಬರು ಮದುವೆಯಾದೆವು. ಎರಡನೇ ಮಗ ಹುಟ್ಟಿದಾಗ ನಾನು ನಟನೆಯಿಂದ ಬ್ರೇಕ್ ತೆಗೆದುಕೊಂಡೆ, ಆ ಸಮಯದಲ್ಲಿ ನಮ್ಮದೇ ಆದ ಪ್ರೊಡಕ್ಷನ್ ಹೌಸ್ ಶುರು ಮಾಡಿದೆ. `ಗೃಹಲಕ್ಷ್ಮಿ’ ಸೀರಿಯಲ್ ಮಾಡಿದ್ದೆ. ಹಾಗೆಯೇ ನಾನು ಕ್ಯಾಮೆರಾ ಹಿಂದೆ ಸಾಕಷ್ಟು ಕೆಲಸ ಮಾಡುತ್ತಾ ಟೆಕ್ನಿಷಿಯನ್ ಆಗಿ ಬೆಳೆದೆ. ಎಡಿಟಿಂಗ್ ನೋಡಿಕೊಳ್ತಿದ್ದೆ. ನನ್ನ ಪತಿ ಕೃಷ್ಣ ತುಂಬಾನೆ ಎನ್‌ಕರೇಜ್‌ಮಾಡುತ್ತಿದ್ದರು. ನಾನು ನಿರ್ದೇಶಕಿಯಾಗುವಂತೆ ಉತ್ಸಾಹ ತುಂಬಿದ್ದೇ ಅವರು. ಒಂದೇ ಫೀಲ್ಡ್ ನಲ್ಲಿ ಇದ್ದುದರಿಂದ ಇಬ್ಬರಲ್ಲೂ ಒಳ್ಳೆ ಅಂಡರ್ ಸ್ಟಾಂಡಿಂಗ್ ಇತ್ತು.
`ಗಂಗಾ’ ನನ್ನ ಮೊದಲ ನಿರ್ದೇಶನದ ಧಾರಾವಾಹಿ. ಬಹಳ ವರ್ಷಗಳಿಂದ ನನಗೆ ನಿರ್ದೇಶನ ಮಾಡುವ ಆಸೆ ಇದ್ದೇ ಇತ್ತು. ಅದರ ಜೊತೆಗೆ ಕೃಷ್ಣರ ಪ್ರೋತ್ಸಾಹ ಮತ್ತು ಅವರಿಂದ ಸಾಕಷ್ಟು ಕಲಿತುಕೊಳ್ಳುವ ಅವಕಾಶ ಸಿಕ್ಕಿತು.`ಗಂಗಾ’ ಸೀರಿಯಲ್ ಸಾಕಷ್ಟು ಜನಪ್ರಿಯವಾಗಿದೆ. ನನಗೂ ಖುಷಿ ಕೊಟ್ಟಿದೆ. ಅದರ ಜೊತೆಯಲ್ಲೇ ಮತ್ತೊಂದು ಸೀರಿಯಲ್ ಶುರು ಮಾಡಿದೆ. ಅದೇ `ಸುಬ್ಬಲಕ್ಷ್ಮಿ ಸಂಸಾರ!’ ನನ್ನ ನಿರ್ದೇಶನದ ಎರಡನೇ ಧಾರಾವಾಹಿ.
ನಿರ್ದೇಶನ ನನಗೇನು ಕಷ್ಟ ಅನಿಸುತ್ತಿಲ್ಲ. ತುಂಬಾನೇ ಇಂಟರೆಸ್ಟಾಗಿದೆ. ಹೊಸ ಹೊಸ ಭಾವನೆಗಳನ್ನು ಎಕ್ಸ್ ಪ್ಲೋರ್ ಮಾಡುತ್ತಾ ಹೋಗಬಹುದು. ನಟಿಯಿಂದ ಒಂದು ಪ್ರಮೋಷನ್ ಸಿಕ್ಕಿದೆ. ನಿರ್ಮಾಪಕಿಯಾಗಿ, ನಿರ್ದೇಶಕಿಯಾಗಿ, ಅದಕ್ಕೆಲ್ಲ ಸಪೋರ್ಟ್, ನನ್ನ ಫ್ಯಾಮಿಲಿ, ನನ್ನ ಅತ್ತೆ ಮನೆ, ಮೇಜರ್ ಆಗಿ ಕೃಷ್ಣ.
ಡೈರೆಕ್ಷನ್ ಸ್ಥಾನದಲ್ಲಿ ನಿಂತಾಗ….
ಹೆಣ್ಣುಮಕ್ಕಳಿಗೆ ಇದು ಕಷ್ಟದ ಕೆಲಸ ಅಂತ ಬಹಳ ಜನ ಭಾವಿಸಿದ್ದಾರೆ. ಆದರೆ ನನ್ನ ದೃಷ್ಟಿಯಲ್ಲಿ ಕ್ಯಾಮೆರಾ ಹಿಂದೆ ಒಬ್ಬ ಟೆಕ್ನಿಷಿಯನ್ನಾಗಿ ನಿಂತುಕೊಂಡಾಗ ಅಲ್ಲಿ ಹೆಣ್ಣು, ಗಂಡು ಅಂತ ಡಿಫರೆನ್ಸ್ ಕಾಣಿಸೋದಿಲ್ಲ. ನಾವು ಮಾಡುವ ಕೆಲಸ ಮುಖ್ಯವಾಗುತ್ತೆ. ನಾನು ಪ್ರೀತಿಯಿಂದ ಕೆಲಸ ಮಾಡಿದರೆ ಅದು ನನ್ನನ್ನು ಪ್ರೀತಿಯಿಂದ ಕಾಣುತ್ತೆ ಎಂದು ನಾನು ನಂಬಿದ್ದೇನೆ.
ಯಾವುದೇ ಕೆಲಸವಿರಲಿ ಅದನ್ನು ಪ್ರೀತಿ, ಗೌರವದಿಂದ ಮಾಡುತ್ತಾ ಕಲಿತುಕೊಳ್ಳಬೇಕು. ಡೈರೆಕ್ಷನ್ ಅಂದಾಕ್ಷಣ ಯಾವುದೇ ಸ್ಕೂಲಿಗೆ ಹೋಗಿ ಕೋರ್ಸ್ ಮಾಡಿ ಕಲಿತುಕೊಳ್ಳುವುದಲ್ಲ. ಗ್ರಹಿಸುವ ಶಕ್ತಿ ಇರಬೇಕು. ನಮ್ಮ ಭಾವನೆಗಳನ್ನು ಹೇಗೆ ಪಾತ್ರಗಳ ಮುಖಾಂತರ ತೆರೆ ಮೇಲೆ ತರಬೇಕು ಎಂಬಷ್ಟು ಬೇಸಿಕ್ ಇದ್ದರೆ ಸಾಕು. ಜೊತೆಗೆ ಕ್ಯಾಮೆರಾ ಸೆನ್ಸ್ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಟೀಮ್ ವರ್ಕ್. ಒಂದು ಟೀಮ್ ಇಲ್ಲದೇ ಯಾವ ಡೈರೆಕ್ಟರ್ ಏನೂ ಮಾಡಲು ಸಾಧ್ಯವಿಲ್ಲ. ನನ್ನೊಬ್ಬಳಿಂದಾನೇ ಆಗಿರೋದು ಅಂತ ನಾನು ಯಾವತ್ತೂ ಹೇಳಿಲ್ಲ. ನನ್ನ ಎಲ್ಲದರ ಹಿಂದೆ ಒಂದು ಟೀಮ್ ಇದ್ದೇ ಇರುತ್ತೆ. ನನ್ನ ಅಸೋಸಿಯೇಟ್ ಡೈರೆಕ್ಟರ್ಸ್, ಆರ್ಟಿಸ್ಟ್ ಗಳು, ಸಹಾಯ ಮಾಡುವ ಹುಡುಗರು ಎಲ್ಲರೂ ಸಹಾಯ ಮಾಡಿದಾಗಲೇ ಒಂದ ಉತ್ತಮ ಪ್ರಾಜೆಕ್ಟ್ ಮೂಡಿ ಬರಲು ಸಾಧ್ಯ.
ಎಲ್ಲದಕ್ಕೂ ಸ್ಛೂರ್ತಿ ಕೃಷ್ಣ
ನನಗೆ ಮೊದಲಿನಿಂದಲೂ ನಿರ್ದೇಶಕಿಯಾಗುವ ಆಸೆ ಇತ್ತು. ಕೃಷ್ಣರ ಜೊತೆ ಮದುವೆಯಾದ ಮೇಲೆ ಅವರು ನನ್ನಲ್ಲಿ ಇನ್ನಷ್ಟು ಉತ್ಸಾಹ ತುಂಬಿದರು. ಸಿನಿಮಾ ಬಗ್ಗೆ ಅವರಿಗಿರುವ ಆಸಕ್ತಿ, ಪ್ರಪಂಚದ ಉತ್ತಮ ಚಿತ್ರಗಳನ್ನು ತೋರಿಸುತ್ತಿದ್ದರು. ಅದರ ಬಗ್ಗೆ ಚರ್ಚೆ ಮಾಡುತ್ತಿದ್ದರು. ನನ್ನಲ್ಲಿ ಆಸಕ್ತಿ ಹುಟ್ಟಿಸುತ್ತಿದ್ದರು.
ಸುಬ್ಬಲಕ್ಷ್ಮಿ…
ಹಳ್ಳಿ ಸೊಗಡಿನ ಗಟ್ಟಿ ಹೆಣ್ಣು. ಈ ಕಥೆ ಚಾನೆಲ್‌ನವರು ಕೊಟ್ಟಿದ್ದು. ಅದನ್ನು ಎಗ್ಸಿಕ್ಯೂಟ್ ಮಾಡಿದೆ. ಸುಬ್ಬಲಕ್ಷ್ಮಿ ಸೀರಿಯಲ್ ನೋಡಿದೋರು ಕೇಳುತ್ತಾರೆ, `ಯಾಕೆ ಮೇಡಮ್ ಸುಬ್ಬಲಕ್ಷ್ಮಿ ಅಷ್ಟೊಂದು ಪೆದ್ದಿನಾ…?’ ಅಂತ. ಈಗ ನೋಡಿ ಸುಬ್ಬಲಕ್ಷ್ಮಿಯಂಥ ಎಷ್ಟೊಂದು ಹೆಣ್ಣುಮಕ್ಕಳನ್ನು ನಾವೇ ನೋಡುತ್ತಿರುತ್ತೇವೆ. ನನ್ನ ಗಂಡ ನನ್ನ ಸಂಸಾರ ಅಂತ ನಂಬಿಕೊಂಡು ಮೋಸ ಹೋಗುತ್ತಿರುತ್ತಾರೆ. ತಾವು ಮೋಸ ಹೋಗುತ್ತಿದ್ದೇವೆ ಅಂತ ಗೊತ್ತಿದ್ದರೂ ಸಹ ನನ್ನ ಗಂಡ ಒಳ್ಳೆಯವನು, ಬೇರೆ ಯಾರೋ ಅವನನ್ನು ಹಾಳು ಮಾಡ್ತಿದ್ದಾರೆ ಅಂತ ಭಾವಿಸಿಕೊಂಡು ಹೋಗುವ ಹೆಣ್ಣುಮಕ್ಕಳನ್ನು ತುಂಬಾ ನೋಡಿದ್ದೇನೆ…. ಸುಬ್ಬಲಕ್ಷ್ಮಿ ಒಬ್ಬ ಗ್ರಾಮೀಣ ಹೆಣ್ಣುಮಗಳು. ಅವಳಿಗೆ ಎಲ್ಲ ಅರ್ಥವಾಗುತ್ತೆ. ಆದರೆ ವಿರುದ್ಧವಾಗಿ ನಿಂತು ಹೋರಾಡುವ ಛಲವನ್ನು ಅವಳು ಬೇರೆ ರೀತಿಯಲ್ಲಿ ಮಾಡುತ್ತಾ ಹೋಗುತ್ತಾಳೆ. ಇಟ್ಟುಕೊಂಡವಳು ಇರೋತನಕ, ಕಟ್ಟಿಕೊಂಡವಳು ಕಡೆಯ ತನಕ ಎನ್ನುವುದಷ್ಟೇ ಈ ಸೀರಿಯಲ್‌ನ ಸಾರಾಂಶ. ಅದನ್ನೇ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿ ಮನರಂಜನೆಗೆ ಕೊರತೆ ಇರಬಹುದು. ಆದರೆ ಅದು ಮುಖ್ಯ ಅನಿಸುವುದಿಲ್ಲ. ಸುಬ್ಬಲಕ್ಷ್ಮಿ ತನ್ನ ಸಂಸಾರ, ಮನೆ, ಗಂಡನನ್ನು ಪಡೆದುಕೊಳ್ಳಲು ಎಷ್ಟು ದಾರಿಗಳನ್ನು ಆರಿಸಿಕೊಳ್ಳುತ್ತಾಳೆ, ಎಷ್ಟು ಶ್ರಮಪಡುತ್ತಾಳೆ ಎನ್ನುವುದೇ ಮುಖ್ಯವಾಗುತ್ತದೆ.
ಸುಬ್ಬಲಕ್ಷ್ಮಿಯಂಥ ಮಹಿಳೆಯರು ತುಂಬಾ ಇದ್ದಾರೆ. ಅವರಿಗೆ ಸಂಸಾರ ಬೇಕಿರುತ್ತದೆ. ಈಗಿನ ಫಾಸ್ಟ್ ಜನರೇಶನ್ ನಡುವೆ ಇಂಥವರ ಹೋರಾಟ ಸಾಗಿದೆ. ಸಂಬಂಧಗಳನ್ನು ಕಳಚಿಕೊಂಡು ಹೊರಬರೋದು ಒಂದೇ ನಿಮಿಷ. ಆದರೆ ಸುಬ್ಬಲಕ್ಷ್ಮಿ ತನ್ನ ಗಂಡನನ್ನು ಬದಲಾಯಿಸುವ ಪ್ರಯತ್ನ ಮಾಡ್ತಿದ್ದಾಳೆ ಅಷ್ಟೆ. ಈಗಿನ ಫಾಸ್ಟ್ ಹುಡುಗಿಯಾಗಿ ಶನಾಯಾಳ ಪಾತ್ರ ಸೃಷ್ಟಿಯಾಗಿದೆ.
ಸಿನಿಮಾ ನಿರ್ದೇಶನದತ್ತ….!
ನನ್ನಿಂದ ಒಂದು ಸಿನಿಮಾ ನಿರ್ದೇಶನ ಮಾಡಿಸಬೇಕೆಂಬ ಆಸೆ ಕೃಷ್ಣರಿಗೆ ಬಹಳ ಇದೆ. ನನಗೂ ಸಿನಿಮಾ ನಿರ್ದೇಶಿಸಬೇಕೆಂಬ ಆಸೆ ಇತ್ತು. ಕೃಷ್ಣ ಸ್ಕ್ಪಿಪ್ಟ್ ಮಾಡಿಸುತ್ತಿದ್ದಾರೆ. ಎಂಥ ಸಿನಿಮಾ ಮಾಡಿದರೆ ಸೂಕ್ತ ಎನ್ನುವುದರ ಬಗ್ಗೆ ಇಬ್ಬರೂ ಚರ್ಚೆ ಮಾಡುತ್ತಿರುತ್ತೇವೆ. ಸದ್ಯಕ್ಕೆ ಅವರು ಸುದೀಪ್ ನಾಯಕತ್ವದ `ಪೈಲ್ವಾನ್’ ಚಿತ್ರದ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಅದೂ ಕೂಡ ನಮ್ಮ ನಿರ್ಮಾಣದ ಸಂಸ್ಥೆಯಿಂದ ಬರಲಿದೆ. ನಮ್ಮ ಸಂಸ್ಥೆಯಲ್ಲಿ ಹೊಸಬರಿಗೂ ಅವಕಾಶ ಕೊಡಬೇಕೆಂಬ ಯೋಚನೆಗಳನ್ನು ಹಾಕಿಕೊಂಡಿದ್ದೇವೆ. ಪ್ರತಿಭೆ ಇರುವಂಥ ಯುವ ನಿರ್ದೇಶಕರನ್ನು ಪ್ರೋತ್ಸಾಹಿಸಿ ಅವಕಾಶ ಕೊಡಬೇಕೆಂಬುದೇ ನಮ್ಮ ಉದ್ದೇಶವಾಗಿದೆ.
ಸೋಲು ಗೆಲುವು ಬಗ್ಗೆ…..
ಯಶಸ್ಸು ಸಿಕ್ಕರೂ ನನಗದು ಇನ್ನೂ ಹೆಚ್ಚಿನ ಜವಾಬ್ದಾರಿ ತರುತ್ತದೆ. ಸೋತರೆ ಗೆಲುವಿಗೆ ಮತ್ತೊಂದು ದಿನವಿದೆ ಅಂತ ತಿಳಿದುಕೊಂಡು ನನ್ನ ಕೆಲಸವನ್ನು ಮಾಡುತ್ತಾ ಹೋಗುತ್ತೇನೆ ಅಷ್ಟೆ. ಟಿ.ಆರ್.ಪಿ. ಸಕ್ಸಸ್ ಹೆಚ್ಚು ಮುಖ್ಯವಾಗುತ್ತೆ. ಜನ ಮೆಚ್ಚಿಕೊಂಡರೆ ಅಷ್ಟೇ ಸಾಕು.
ಆಸೆಗಳು….!
ನನಗೆ ಒಂದು ಮೈಥಾಲಜಿ ಸಬ್ಜೆಕ್ಟ್ ಮೇಲೆ ಧಾರಾವಾಹಿ ಮಾಡುವಾಸೆ. ಹಾಗೆಯೇ ಚೈಲ್ಡ್ ಅಬ್ಯೂಸ್ ಬಗ್ಗೆ ಸಬ್ಜೆಕ್ಟ್ ಮಾಡಬೇಕೆಂದಿರುವೆ. ಸಾಮಾಜಿಕ ಕಳಕಳಿ ಇರೋವಂಥ ಧಾರಾವಾಹಿ ಮಾಡಬೇಕೆಂಬ ಕಾಳಜಿ ನನಗಿದೆ.
ನನ್ನ ಸಂದೇಶ
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಾನು ಹೇಳೋದಿಷ್ಟೆ. ಸಮಾನತೆ ಎನ್ನುವುದು ಬಂದಾಗಿದೆ. ಆದರೆ ಅದನ್ನು ದುಡ್ಡಿನಲ್ಲಿ ಅಳೆಯಬೇಡಿ ಹೋಲಿಸಿಕೊಳ್ಳಬೇಡಿ. ಭಾವನೆಗಳಲ್ಲಿ ಸಮಾನತೆ ಹೊಂದಿರಬೇಕು. ಹೆಣ್ಣುಮಕ್ಕಳು ಸಾಕಷ್ಟು ಮುಂದೆ ಬರಬೇಕು, ಹೆಚ್ಚು ಹೆಚ್ಚು ಕೆಲಸ ಮಾಡಬೇಕು. ಧೈರ್ಯವಾಗಿ ಮುಂದೆ ಬಂದು ಸಾಧಿಸಿ ತೋರಿಸಿ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಿ ಎಂದಷ್ಟೇ ಹೇಳಬಲ್ಲೆ
ಶನಾಯಾ ತರಹದ ಹೆಣ್ಣುಮಕ್ಕಳಿಗೆ ನಾನು ಹೇಳೋದಿಷ್ಟೆ. ಒಂದು ಸಂಸಾರವನ್ನು ಒಡೆಯೋ ಕೆಲಸ ಮಾಡಬೇಡಿ. ಒಬ್ಬ ಹೆಣ್ಣು ಬಹಳ ಕಷ್ಟಪಟ್ಟು ಸಂಸಾರವನ್ನು ಕಟ್ಟಿರುತ್ತಾಳೆ. ಯಾರು ಏನೇ ತಪ್ಪು ಕೆಲಸ ಮಾಡಿದರೂ ಅದಕ್ಕೆ ತಕ್ಕನಾದ ಉತ್ತರ ಇಲ್ಲೇ ಪಡೆದುಕೊಳ್ಳುತ್ತಾರೆ. ಭಾವನೆಗಳ ಜೊತೆ ಆಟವಾಡಬೇಡಿ ಎಂದಷ್ಟೇ ಹೇಳುತ್ತೇನೆ.
– ಜಾಗೀರ್ದಾರ್