ತಂದೆ ತಾಯಿಯ ಸ್ಥಾನವನ್ನು ಯಾರಿಂದಲೂ ಭರ್ತಿ ಮಾಡಲು ಸಾಧ್ಯವಿಲ್ಲ. ಯಾವುದೇ ತಂದೆ ತಾಯಿಗಳಿಗೆ ತಮ್ಮ ಮಗುವೇ ಸರ್ವಸ್ವವಾಗಿರುತ್ತದೆ. ಮಗುವೊಂದರ ಉಪಸ್ಥಿತಿಯಿಂದಲೇ ಅವರ ಜೀವನ ಅರ್ಥಪೂರ್ಣವಾಗುತ್ತದೆ.

ತಂದೆ ತಾಯಿ ತಮ್ಮ ಮಗುವಿನ ಬಹುತೇಕ ಅಪೇಕ್ಷೆಗಳನ್ನು ಈಡೇರಿಸಲು ಸಾಧ್ಯವಿದ್ದಷ್ಟು ಮಟ್ಟಿಗೆ ಪ್ರಯತ್ನ ಮಾಡುತ್ತಾರೆ. ಈ ಪ್ರಯತ್ನಕ್ಕಾಗಿಯೇ ಅವರು ಮಗುವನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟು ಹೋಗುವ ಕಠೋರ ನಿರ್ಧಾರ ಕೂಡ ಮಾಡಬೇಕಾಗಿ ಬರುತ್ತದೆ.

ಮನೆಯಲ್ಲಿ ಮಗುವನ್ನು ಬಿಟ್ಟು ಹೋಗುವ ನಿರ್ಧಾರ 21ನೇ ಶತಮಾನದ ಅವಶ್ಯಕತೆ ಹಾಗೂ ಪೋಷಕರಿಗೆ ಅನಿವಾರ್ಯ ಆಗಿದೆ. ಆದರೆ ಈ ನಿಮ್ಮ ವಿವಶತೆ ನಿಮ್ಮ ಪುಟ್ಟ ಕಂದಮ್ಮನ ವ್ಯಕ್ತಿತ್ವ ಮತ್ತು ವರ್ತನೆಯಲ್ಲಿ ಬದಲಾವಣೆ ತರಬಹುದು ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಇದೆ.

ಶಾಲಾ ಸಂಸ್ಥೆಯೊಂದರ ನಿರ್ದೇಶಕಿ ಶ್ಯಾಮಲಾ ಅವರ ಪ್ರಕಾರ, ತಂದೆ ತಾಯಿಯರ ಅನುಪಸ್ಥಿತಿಯಲ್ಲಿ ಮಕ್ಕಳ ವರ್ತನೆಯಲ್ಲಿ ಕೆಳಕಂಡ ಬದಲಾವಣೆಗಳು ಕಂಡುಬರಬಹುದು.

ಹೆದರುವ ಪ್ರವೃತ್ತಿ

ಮನೆಯಲ್ಲಿ ಏಕಾಂಗಿಯಾಗಿರುವ ಮಕ್ಕಳಲ್ಲಿ ಖಾಲಿ ಮನೆಯ ಸಾಮಾನ್ಯ ಸದ್ದು ಕೂಡ ಅವರಲ್ಲಿ ಭಯವನ್ನುಂಟು ಮಾಡಬಹುದು, ಅದು ಹಾಗೆಯೇ ಮುಂದುವರಿಯಬಹುದು. ಏಕೆಂದರೆ ಅವರಿಗೆ ಬಾಹ್ಯ ಜಗತ್ತಿನ ಅನುಭವ ಅರಿವು ಇರುವುದಿಲ್ಲ. ಇದರ ಹೊರತಾಗಿ ಮಕ್ಕಳು ಪೋಷಕರೊಂದಿಗೆ ತಮ್ಮ ಭಯದ ಬಗ್ಗೆ ಹೇಳಿಕೊಳ್ಳುವುದಿಲ್ಲ. ಏಕೆಂದರೆ ತಮ್ಮನ್ನು ಇನ್ನೂ ಮಕ್ಕಳು ಎಂದು ಭಾವಿಸಬಾರದು, ತಮ್ಮ ಸುರಕ್ಷತೆಯ ಬಗ್ಗೆ ಅಪ್ಪಅಮ್ಮ ಚಿಂತೆ ಮಾಡುವುದು ಅವರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಅವರು ತಮ್ಮ ಮನಸ್ಸಿನ ಮಾತನ್ನು ಮನಸ್ಸಿನಲ್ಲಿಯೇ ಉಳಿಸಿಕೊಂಡಿರುತ್ತಾರೆ.

ಏಕಾಂಗಿತನ

ಮನೆಯಲ್ಲಿ ಏಕಾಂಗಿಯಾಗಿರುವ ಮಕ್ಕಳಿಗೆ ಅವರ ಸ್ನೇಹಿತರನ್ನು ಭೇಟಿಯಾಗುವ, ಯಾವುದಾದರೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಮಾಡಿಕೊಡುವುದಿಲ್ಲ. ಇದರಿಂದಾಗಿ ಅವರ ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಅವರು ಏಕಾಂಗಿತನಕ್ಕೆ ತುತ್ತಾಗುತ್ತಾರೆ. ಇಂತಹ ಮಕ್ಕಳು ತಮ್ಮ ಬಳಿ ಇರುವ ಸಲಕರಣೆಗಳು, ತಿಂಡಿಗಳನ್ನು ಇತರೆ ಮಕ್ಕಳಿಗೆ ಕೊಡಲು ಇಷ್ಟಪಡುವುದಿಲ್ಲ. ಅವರು ತಮ್ಮಷ್ಟಕ್ಕೆ ತಾವು ಎಂಬಂತೆ ಇರುತ್ತಾರೆ. ಬಾಹ್ಯ ಪ್ರಪಂಚದ ಸಂಪರ್ಕದಿಂದ ದೂರ ಇರುವ ಕಾರಣದಿಂದ ಇವರು ಸ್ವಾರ್ಥಿಗಳು, ಸಂಕೋಚ ಪ್ರವೃತ್ತಿಯವರು ಹಾಗೂ ಸಿಡಿಮಿಡಿ ಸ್ವಭಾವದವರೂ ಆಗುತ್ತಾರೆ.

ಆರೋಗ್ಯಕ್ಕೆ ಅಪಾಯಕಾರಿ

ಮನೆಯಲ್ಲೇ ಇರುವ ಮಕ್ಕಳು ದೇಹವನ್ನು ಚುರುಕಾಗಿಡುವ ಯಾವುದೇ ಚಟುವಟಿಕೆ ಅಥವಾ ವ್ಯಾಯಾಮ ಮಾಡುವುದಿಲ್ಲ. ಹೀಗಾಗಿ ಅವರಲ್ಲಿ ಆಲಸ್ಯತನ ಮನೆ ಮಾಡುತ್ತದೆ. ಇಂತಹ ಹೆಚ್ಚಿನ ಮಕ್ಕಳು ಬೊಜ್ಜಿಗೆ ತುತ್ತಾಗುತ್ತಾರೆ. ಇಂತಹ ಮಕ್ಕಳಲ್ಲಿ ಆಹಾರ, ಆರೋಗ್ಯ ಮತ್ತು ಬೆಳವಣಿಗೆಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡುಬರುತ್ತವೆ. ಏಕಾಂಗಿಯಾಗಿರುವ ಕಾರಣದಿಂದ ಇಂತಹ ಮಕ್ಕಳು ಖಿನ್ನತೆಗೂ ತುತ್ತಾಗುವ ಸಾಧ್ಯತೆ ಇರುತ್ತದೆ. ಅವರ ದೈನಂದಿನ ಜೀವನ ಅಸ್ತ್ಯಸ್ತಗೊಳ್ಳುತ್ತದೆ. ಎಷ್ಟೋ ಸಲ ಪೋಷಕರು ತಮ್ಮ ಧಾವಂತದ ಜೀವನಶೈಲಿಯಿಂದಾಗಿ ಅವರ ಪ್ರತಿಯೊಂದು ಬೇಡಿಕೆಯನ್ನೂ ಈಡೇರಿಸುತ್ತಾರೆ. ತಮ್ಮ ಸಮಯವನ್ನಂತೂ ಕೊಡಲಾಗುತ್ತಿಲ್ಲ, ಕೇಳಿದ್ದನ್ನು ಕೊಡಿಸಿಬಿಡೋಣ ಎಂಬ ಕೃತಕ ಸಮಾಧಾನವಿರುತ್ತದೆ.

ಹಠಮಾರಿತನ ಮತ್ತು ಸ್ವಾರ್ಥ

ಏಕಾಂಗಿಯಾಗಿರುವ ಮಕ್ಕಳಿಗೆ ಅವರ ಪೋಷಕರು ಕೆಲವೊಂದು ನಿಯಮಗಳನ್ನು ಹಾಕುತ್ತಾರೆ. ಉದಾಹರಣೆಗೆ ಟಿ.ವಿ. ನೋಡುವ ಮೊದಲು ಹೋಮ್ ವರ್ಕ್‌ಮಾಡಿ ಮುಗಿಸಬೇಕು, ಅಪರಿಚಿತರೊಂದಿಗೆ ಮಾತನಾಡಬಾರದು, ತಮ್ಮ ಅನುಪಸ್ಥಿತಿಯಲ್ಲಿ ಹೊರಗಿನ  ಯಾವುದೇ ವ್ಯಕ್ತಿಗಳಿಗೆ ಮನೆಯ ಒಳಗಡೆ ಬರಲು ಅವಕಾಶ ಕೊಡಬಾರದು ಮುಂತಾದವು. ಇಂತಹದರಲ್ಲಿ ಅವರ ಮೇಲೆ ಕಣ್ಣಿಡುವವರು ಯಾರೂ ಇರದೇ ಇದ್ದರೆ, ಅವರಿಗೆ ಏನಾದರೂ ಮಾಡುವ ಸ್ವಾತಂತ್ರ್ಯ ಸಿಕ್ಕುಬಿಡುತ್ತದೆ. ಇದರ ಅಪಾಯಕಾರಿ ಪರಿಣಾಮಗಳು ಗೋಚರಿಸಬಹುದು.

ಅಂದಹಾಗೆ ಇಬ್ಬರು ಮಕ್ಕಳು ಒಂದೇ ರೀತಿ ಇರುವುದಿಲ್ಲ. ಅವರು ಬೇರೆಬೇರೆ ಸ್ಥಿತಿಗಳಲ್ಲಿ ವಿಭಿನ್ನ ರೀತಿಯಲ್ಲಿ ವರ್ತಿಸುತ್ತಾರೆ. ಹೀಗಾಗಿ ತಮ್ಮ ಮಗು ಮನೆಯಲ್ಲಿ ಏಕಾಂಗಿಯಾಗಿ ಇರಲು ಸಿದ್ಧವಾಗಿದೆಯೇ ಎಂದು ತಿಳಿದುಕೊಳ್ಳುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿರುತ್ತದೆ. ಒಂದು ವೇಳೆ ಮಗು ಒಪ್ಪಿದರೆ ಪೋಷಕರು ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯವಶ್ಯ. ಉದಾಹರಣೆಗೆ ಅದರ ವಯಸ್ಸು ಹಾಗೂ ಪ್ರಬುದ್ಧತೆ.

ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟುಹೋಗುವ ಮಗುವಿನ ವಯಸ್ಸು 7 ವರ್ಷಕ್ಕಿಂತ ಕಡಿಮೆ ಇರಬಾರದು. 10-11 ವಯಸ್ಸಿನ ಮಕ್ಕಳನ್ನು ಕೆಲವೊಂದು ಗಂಟೆಗಳ ಮಟ್ಟಿಗೆ ನೀವು ಮನೆಯಲ್ಲಿ ಬಿಟ್ಟು ಹೋಗಬಹುದು. ಆದರೆ ಕೇವಲ ಹಗಲು ಸಮಯದಲ್ಲಿ ಮಾತ್ರ, ನಿಮ್ಮ ಮಗುವಿನ ಮೇಲೆ ಒಂದಿಷ್ಟು ಗಮನ ಕೊಡಿ ಎಂದು ಪಕ್ಕದ ಮನೆಯವರಿಗೆ ವಿನಂತಿಸಿಕೊಳ್ಳಿ. ಇವರದು ಏಕಾಂಗಿ ಮಕ್ಕಳ ದೃಷ್ಟಿಯಲ್ಲಿ ಮಹತ್ವದ್ದು.

ಒಂದು ವೇಳೆ ನೀವು ಮೇಲ್ಕಂಡ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಮಗುವನ್ನು ಏಕಾಂಗಿಯಾಗಿ ಮನೆಯಲ್ಲಿ ಬಿಟ್ಟು ಹೋಗುವ ನಿರ್ಧಾರ ಕೈಗೊಂಡರೆ, ಅವರ ಸುರಕ್ಷತೆಗಾಗಿ ಕೆಳಕಂಡ ಉಪಾಯಗಳನ್ನು ಅವಶ್ಯವಾಗಿ ಅನುಸರಿಸಿ.

ಮಗುವಿನ ಸಂಪರ್ಕಕ್ಕಾಗಿ ಒಂದು ನಿಶ್ಚಿತ ಸಮಯವನ್ನು ನಿಗದಿ ಮಾಡಿಕೊಳ್ಳಿ. ಮಗು ಸುರಕ್ಷಿತವಾಗಿದೆಯೋ ಇಲ್ಲವೋ ಎನ್ನುವುದು ಇದರಿಂದ ನಿಮಗೆ ಖಾತ್ರಿಯಾಗುತ್ತದೆ. ಅವರು ಊಟ ಮಾಡಿದರೊ ಇಲ್ಲವೋ, ಶಾಲೆಯಲ್ಲಿ ಇವತ್ತಿನ ದಿನ ಹೇಗೆ ಕಳೆಯಿತು, ಶಾಲೆ ಅಥವಾ ಓದಿನಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದಕ್ಕೆ ಪರಿಹಾರ ಸೂಚಿಸಿ. ನೀವು ಹೀಗೆ ಮಾಡುವುದರಿಂದ ಮಗುವಿನ ಜೊತೆಗಿನ ನಿಮ್ಮ ನಿಕಟತೆ ಹೆಚ್ಚುತ್ತದೆ.

ಅಪರಿಚಿತರು ಬಂದರೆ ಬಾಗಿಲು ತೆಗೆಯಲೇಬಾರದು ಎಂದು ಮಗುವಿಗೆ ತಿಳಿಸಿ ಹೇಳಿ. ಇದರ ಹೊರತಾಗಿ ಬಾಗಿಲು ಕರೆಗಂಟೆ ಸದ್ದು ಬಂದರೆ, ಹೊರಗೆ ಬಂದಿರುವವರು ಯಾರು ಎಂದು ಕಿಟಕಿಯ ಮುಖಾಂತರ ಅಥವಾ ಡೋರ್‌ ಐನಿಂದ ನೋಡಲು ಹೇಳಿ. ಒಂದುವೇಳೆ ಯಾರಾದರೂ ಗೊತ್ತಿರುವವರು, ಸಂಬಂಧಿಕರು ಅಥವಾ ನೆರೆಮನೆಯವರು ಬಂದಿದ್ದರೆ ತಕ್ಷಣವೇ ನಿಮಗೆ ತಿಳಿಸಲು ಸೂಚಿಸಿ.

ಮನೆಯ ವಿಷಯವನ್ನು, ಮನೆಯವರ ಬಗೆಗಿನ ಮಾಹಿತಿಯನ್ನು ಇನ್ನೊಬ್ಬರ ಮುಂದೆ ಎಷ್ಟರಮಟ್ಟಿಗೆ ಹೇಳಬೇಕು, ಏನನ್ನು ಹೇಳಬಾರದು ಎಂಬುದರ ಬಗೆಗೂ ಅವರಿಗೆ ಕಲ್ಪನೆ ಕೊಡಿ. ಅಷ್ಟೇ ಅಲ್ಲ, ನಿಮ್ಮ ಅನುಪಸ್ಥಿತಿಯಲ್ಲಿ ಮಕ್ಕಳಿಗೆ ಗ್ಯಾಸ್‌ಒಲೆ ಹೊತ್ತಿಸುವ ಹಾಗೂ ಚೂಪಾದ ವಸ್ತುಗಳನ್ನು ಬಳಸುವುದಕ್ಕೆ ಅನುಮತಿ ಕೊಡಲೇಬೇಡಿ.

ಮನೆಯಲ್ಲಿ ಮದ್ಯ ಅಥವಾ ಯಾವುದೇ ಅಮಲು ಪದಾರ್ಥಗಳನ್ನು ಇಡಲೇಬೇಡಿ. ಕಾರು ಅಥವಾ ಬೈಕ್‌ನ ಕೀಯನ್ನು ಅವರಿಗೆ ಸಿಗುವಂತೆ ಇಡಬೇಡಿ.

ನಿಮ್ಮ ಅನುಪಸ್ಥಿತಿಯಲ್ಲಿ ಮಗು ಏಕಾಂಗಿಯಾಗಿ ನೆರೆಮನೆಗೆ ಹೋಗಬಾರದೆಂದು ಹೇಳಿ. ಆದರೆ ತುರ್ತುಸ್ಥಿತಿಯಲ್ಲಿ ನೆರೆಮನೆಯವರನ್ನು ಸಂಪರ್ಕಿಸಲು ಅವಶ್ಯ ತಿಳಿಸಿ. ಅವರು ನಿಮ್ಮನ್ನು ತುರ್ತಾಗಿ ಸಂಪರ್ಕಿಸಲು ಸಹಾಯವಾಗುತ್ತದೆ. ನೀವು ಅಲ್ಲಿಗೆ ತಲುಪುವತನಕ ಅವರ ಸಂಪರ್ಕದಲ್ಲಿರಲು ತಿಳಿಸಿ.

ತುರ್ತುಸ್ಥಿತಿಯಲ್ಲಿ ಕೇವಲ ನಿಮ್ಮ ನಂಬರ್‌ ಅಷ್ಟೇ ಅಲ್ಲ, ದೂರದ ಸಂಬಂಧಿಗಳ ನಂಬರ್‌ ಕೂಡ ಅವರಿಗೆ ಗೊತ್ತಿರಬೇಕು. ನಿಮ್ಮ  ಅನುಪಸ್ಥಿತಿಯಲ್ಲಿ ನಿಮ್ಮ ವಿಶ್ವಾಸಿ ಪಕ್ಕದ ಮನೆಯವರಿಗೆ ಗಮನಹರಿಸಲು ಸೂಚಿಸಿ. ಇದರಿಂದ ಮಗುವಿನ ಸುರಕ್ಷತೆಗೆ ಹೆಚ್ಚು ಒತ್ತು ದೊರೆಯುತ್ತದೆ.

ಪಿ. ವಸುಂಧರಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ