ರಜನಿ ಕಳೆದ 7-8 ತಿಂಗಳಿಂದ ತವರುಮನೆಯಲ್ಲಿ ಠಿಕಾಣಿ ಹೂಡಿದ್ದಾಳೆ. ಅವಳ ಮದುವೆ 5 ವರ್ಷಗಳ ಹಿಂದೆ ರಾಜೇಶ್ ಜೊತೆಗೆ ಅದ್ಧೂರಿಯಾಗಿ ನಡೆದಿತ್ತು. ರಾಜೇಶ್ ಒಬ್ಬ ಶಾಲಾ ಶಿಕ್ಷಕ. ರಜನಿ ಕೂಡ ಆಂಗ್ಲಭಾಷೆಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಳು. ಮದುವೆಯಾದ ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಶುರುವಾಯಿತು. ಎರಡೂ ಮನೆಯವರು ಅವರಿಗೆ ತಿಳಿವಳಿಕೆ ಹೇಳಿ ನೋಡಿದರು. ಆದರೆ ಅವರು ಅದಕ್ಕೆ ತಲೆಬಾಗಲು ಸಿದ್ಧರಿರಲಿಲ್ಲ. ಅದೊಂದು ದಿನ ಗಂಡ ಕೋಪದಲ್ಲಿ ಅವಳ ಮೇಲೆ ಕೈ ಎತ್ತಿದ. ಗಂಡ ತನ್ನ ಮೇಲೆ ಕೈ ಮಾಡಿದ ಎಂಬ ಕಾರಣದಿಂದ ಅವಮಾನ ತಡೆಯಲಾರದೆ ಅವಳು ಗಂಡನ ಮನೆ ಬಿಟ್ಟು ತವರಿಗೆ ಬಂದುಬಿಟ್ಟಳು.
ಅದೊಂದು ದಿನ ರಜನಿಯ ಅಣ್ಣನ ಮಗಳು ಸ್ನೇಹಾ ತನ್ನ ಅಮ್ಮನ ಮುಂದೆ, “ಅಮ್ಮಾ, ನಮ್ಮ ಅತ್ತೆ ಮಹಾದೇವಿಯ ಪೂಜೆ ಏಕೆ ಮಾಡಬಾರದು? ಅದರಿಂದ ಅವರ ಎಲ್ಲ ದುಃಖ ಕಮ್ಮಿ ಆಗಬಹುದಲ್ವಾ?” ಎಂದಳು.
ಪುಟ್ಟ ಹುಡುಗಿಯ ಮಾತುಗಳನ್ನು ಕೇಳಿ ಅವಳಮ್ಮನಿಗೆ ಆಶ್ಚರ್ಯವಾಯಿತು. ಆ ಬಳಿಕ ಅವರು ಮಗಳಿಗೆ, “ನಿನಗೆ ಮಹಾದೇವಿಯ ಬಗ್ಗೆ ಏನು ಗೊತ್ತು?” ಎಂದು ಅಚ್ಚರಿಯಿಂದ ಕೇಳಿದರು.“ನಾನು ಒಂದು ಧಾರಾವಾಹಿಯಲ್ಲಿ ನೋಡಿದೆ. ಒಬ್ಬಳು ದೇವಿಯ ಪೂಜೆ ಮಾಡುತ್ತಾಳೆ. ದೇವಿ ಅವಳ ಕಷ್ಟವನ್ನೆಲ್ಲ ನಿವಾರಣೆ ಮಾಡುತ್ತಾಳೆ. ಅತ್ತೆ ಕೂಡ ಹಾಗೆಯೇ ಪೂಜೆ ಮಾಡಿದರೆ ಅವರ ಕಷ್ಟಗಳು ನಿವಾರಣೆ ಆಗಬಹುದಲ್ಲವೇ?”
ಮೂಢನಂಬಿಕೆಯ ಜಾಲ
ವಿಜ್ಞಾನ ವಿಷಯದ 16 ವರ್ಷದ ವಿದ್ಯಾರ್ಥಿನಿ ಮೋನಿತಾ ತನ್ನ ತಾಯಿಯ ಬಳಿ, “ಅಮ್ಮಾ, ನಾನು ಇನ್ಮುಂದೆ ಮುಟ್ಟಾದಾಗ ಯಾವುದೇ ಕೆಲಸ ಮಾಡೊಲ್ಲ, ದೇವರ ಕೋಣೆಗೂ ಹೋಗಲ್ಲ,” ಎಂದಳು.
ಅದಕ್ಕೆ ಕಾರಣ ಕೇಳಿದಾಗ, ಒಂದು ಧಾರಾವಹಿಯಲ್ಲಿ ಹೀಗೆ ಮಾಡುವುದರಿಂದ ಬಹುದೊಡ್ಡ ಪಾಪ ತಗುಲುತ್ತದೆ, ನರಕಕ್ಕೂ ಹೋಗಬೇಕಾಗುತ್ತದೆ ಎಂದು ತೋರಿಸಲಾಗಿತ್ತು. ಮಗಳ ಮಾತನ್ನು ಕೇಳಿ ಅವರು ಚಕಿತರಾದರು. ಸ್ನೇಹಾ ಹಾಗೂ ಮೋನಿಕಾ ಅಷ್ಟೇ ಅಲ್ಲ, ಎಳೆಯ ವಯಸ್ಸಿನ ಸಾಕಷ್ಟು ಮಕ್ಕಳು ಧಾರಾವಾಹಿಗಳು ಪಸರಿಸುವ ಮೂಢನಂಬಿಕೆಯ ಜಾಲದಲ್ಲಿ ಸಿಲುಕಿದ್ದಾರೆ.
2013ನೇ ಸಾಲಿನಲ್ಲಿ ರಾಜಾಸ್ತಾನ ರಾಜ್ಯದ ಒಂದು ಪಟ್ಟಣದಲ್ಲಿ ಕುಟುಂಬವೊಂದು ಕೇವಲ ಧಾರ್ಮಿಕ ಧಾರಾವಾಹಿಗಳನ್ನಷ್ಟೇ ನೋಡುತ್ತಿತ್ತು. ಭಗವಾನ್ ಶಿವನನ್ನು ಕಾಣಲೇಬೇಕೆಂಬ ಇಚ್ಛೆಯಿಂದ 8 ಜನರು ವಿಷ ಸೇವಿಸಿದರು. ಅದರಲ್ಲಿ ಐವರು ಸತ್ತುಹೋದರು.
ಇಂದಿನ ಯುಗದಲ್ಲಿ ಟಿವಿ ಮನರಂಜನೆ ಅತ್ಯಂತ ಅಗ್ಗದ ಹಾಗೂ ಸುಲಭದಲ್ಲಿ ಲಭ್ಯವಾಗುವ ಸಾಧನವಾಗಿದೆ. ಪ್ರತಿಯೊಂದು ಮನೆಯ ಡ್ರಾಯಿಂಗ್ ರೂಮ್, ಬೆಡ್ ರೂಮುಗಳಲ್ಲಿ ಪ್ರತಿಷ್ಠಾಪನೆಗೊಳ್ಳು ಟಿವಿ, ಹೆಚ್ಚಾಗಿ ಮಹಿಳೆಯರನ್ನು, ಮಕ್ಕಳನ್ನು ತನ್ನ ಕಪಿಮುಷ್ಟಿಗೆ ಸೆಳೆದುಕೊಳ್ಳುತ್ತಿದೆ. ಪುರುಷರು ಅದಕ್ಕೆ ಮೋಹಿತರಾಗುವುದಿಲ್ಲ ಎಂದೇನಿಲ್ಲ. ಆದರೆ ಅವರು ತಮ್ಮ ಹೆಚ್ಚಿನ ಸಮಯವನ್ನು ನ್ಯೂಸ್ ಚಾನೆಲ್, ಸ್ಪೋರ್ಟ್ಸ್ ಚಾನೆಲ್‌ನಲ್ಲಿಯೇ ಕಳೆಯುತ್ತಾರೆ. ಇನ್ನು ಕೆಲವರು ಬಿಸ್‌ನೆಸ್ ಚಾನೆಲ್ ನೋಡುತ್ತಾರೆ. ಒಂದು ವಾಸ್ತವ ಸಂಗತಿಯೆಂದರೆ, ಬಹಳಷ್ಟು ಪುರುಷರಿಗೆ ಟಿ.ವಿ. ನೋಡಲು ಸಮಯವೇ ಇರುವುದಿಲ್ಲ. ಆದರೆ ಮಕ್ಕಳು ಮತ್ತು ಮಹಿಳೆಯರು ಅದರಲ್ಲೂ ವಿಶೇಷವಾಗಿ ಗೃಹಿಣಿಯರು ಇದರ ಹೆಚ್ಚಿನ ಆಸಕ್ತರಾಗಿದ್ದಾರೆ.
ಮಹಿಳೆಯರಲ್ಲಿ ಧರ್ಮದ ಬಗೆಗಿನ ಆಸ್ಥೆ ಅತಿ ಹೆಚ್ಚು ಇರುವುದು ಕಂಡುಬರುತ್ತದೆ. ಹೀಗಾಗಿ ಅವರು ಧಾರ್ಮಿಕ ಧಾರಾವಾಹಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಒಂದು ರೀತಿಯಲ್ಲಿ ಅವರು ಇದನ್ನು ಮನೆಯಲ್ಲಿಯೇ ಕುಳಿತು ಗಂಗಾಸ್ನಾನ ಎಂಬಂತೆ ಭಾವಿಸುತ್ತಾರೆ. ಅಂದರೆ ಮನರಂಜನೆಯ ಜೊತೆ ಭಕ್ತಿಯನ್ನು ತೋರ್ಪಡಿಸಿಕೊಂಡ ಧನ್ಯತಾಭಾವ ಅವರಲ್ಲಿ. ಮಕ್ಕಳಲ್ಲಂತೂ ಹೇಳತೀರದಷ್ಟು ಜಿಜ್ಞಾಸೆ ಇರುತ್ತದೆ. ಅವರಿಗೆ ಕಥಾನಕ ಚಿತ್ರಗಳು, ಅಸಂಭನೀಯ ಘಟನೆಗಳು, ಚಿತ್ರವಿಚಿತ್ರ ಪಾತ್ರಗಳು ಬಹಳ ಹಿಡಿಸುತ್ತವೆ. ಮಕ್ಕಳು ಹಾಗೂ ಮಹಿಳಾ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು ಚಾನೆಲ್‌ಗಳು ಈ ತೆರನಾದ ಕಾರ್ಯಕ್ರಮಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ತೋರಿಸುತ್ತವೆ. ಇಡೀ ದೇಶದ ಮೂಲೆ ಮೂಲೆಯನ್ನೂ ತಲುಪುವ ಹಿಂದಿ ಭಾಷೆಯಲ್ಲಂತೂ ಪ್ರತಿಯೊಂದು ಚಾನೆಲ್‌ನಲ್ಲಿ ಅದ್ಧೂರಿ ಸೆಟ್‌ನಲ್ಲಿ ನಿರ್ಮಾಣಗೊಂಡ ಒಂದಿಲ್ಲೊಂದು ಧಾರ್ಮಿಕ ಧಾರಾವಾಹಿಗಳು ಪ್ರಸಾರವಾಗುತ್ತಿರುತ್ತವೆ.
ಟಿಆರ್ಪಿಗಾಗಿ ದುರಾಸೆ
ಕೇವಲ ಧಾರ್ಮಿಕ ಧಾರಾವಾಹಿಗಳಷ್ಟೇ ಅಲ್ಲ, ಬೇರೆ ಕೆಲವು ಧಾರಾವಾಹಿಗಳು ಕೂಡ ಮೂಢನಂಬಿಕೆಗಳನ್ನು ಪಸರಿಸುವಲ್ಲಿ ಹಿಂದೆ ಬಿದ್ದಿಲ್ಲ. ನಂದಿನಿ, ಯಾರೇ ನೀ ಮೋಹಿನಿ, ಮಹಾದೇವಿ, ನಿಗೂಢ ರಾತ್ರಿ, ಅಂಜಲಿ, ನೀಲಿ…. ಹೀಗೆ ಇನ್ನೂ ಹತ್ತು ಹಲವು ಧಾರಾವಾಹಿಗಳು ಮೂಢನಂಬಿಕೆಯ ಊಟವನ್ನು ಯಥೇಚ್ಛವಾಗಿ ಬಡಿಸುವ ಕೆಲಸ ಮಾಡುತ್ತಿವೆ.
ಮಾನಸಿಕ ವಿಕಾರಕ್ಕೆ ನಾಂದಿ
ಜನರಿಗೆ ಹೇಳುವುದರ ತಾತ್ಪರ್ಯ ಇಷ್ಟೆ, ಈ ಧಾರಾವಾಹಿಗಳನ್ನು ನೋಡಿ ಅನಿಸುವುದೇನೆಂದರೆ, ಮೂಢನಂಬಿಕೆ ಕೇವಲ ಅನಕ್ಷರಸ್ಥರಲ್ಲಷ್ಟೇ ಅಲ್ಲ, ಸಾಕ್ಷರರು, ಉನ್ನತ ಹುದ್ದೆಯಲ್ಲಿರುವವರು, ಆಧುನಿಕ ಸಲಕರಣೆಗಳನ್ನು ಬಳಸುವವರು ಕೂಡ ಈ ಧಾರಾವಾಹಿಗಳ ಮೂಢನಂಬಿಕೆಗೆ ತುತ್ತಾಗುತ್ತಿದ್ದಾರೆ.
ಈ ತೆರನಾದ ಧಾರಾವಾಹಿಗಳನ್ನು ನೋಡಿ ಬೆಳೆಯುತ್ತಿರುವ ಮಕ್ಕಳ ಮನಸ್ಸಿನಲ್ಲಿ ಈ ಘಟನೆಗಳು ಮತ್ತು ಅದರ ಪಾತ್ರಧಾರಿಗಳು ಬಹು ಆಳವಾಗಿ ಬೇರೂರುತ್ತಾರೆ. ದೊಡ್ಡವರಾದ ಬಳಿಕ ಅವರಿಗೆ ಅದೆಷ್ಟೇ ತಿಳಿವಳಿಕೆ ಹೇಳಿದರೂ ಅವರ ಸುಪ್ತ ಮನಸ್ಸಿನಿಂದ ಆ ಘಟನೆಗಳನ್ನು ಅಳಿಸಿ ಹಾಕಲು ಆಗುವುದಿಲ್ಲ. ಅದು ಒಂದಿಲ್ಲೊಂದು ರೀತಿಯಲ್ಲಿ ಪ್ರತ್ಯಕ್ಷವಾಗುತ್ತಲೇ ಇರುತ್ತದೆ.
ಈಗ ಹೆಚ್ಚು ಕಡಿಮೆ ಎಲ್ಲಾ ಚಿಕ್ಕ ದೊಡ್ಡ ಚಾನೆಲ್‌ಗಳೂ ಮನರಂಜನೆಯ ಹೆಸರಿನಲ್ಲಿ ತಮ್ಮ ಬೊಕ್ಕಸ ತುಂಬಿಸಿಕೊಳ್ಳುವುದಾಗಿದೆ.
ಕೆಲವು ದಿನಗಳ ಹಿಂದೆ ಪಕ್ಕದ್ಮನೆಯಲ್ಲಿ ವಾಸಿಸುವ 8ನೇ ತರಗತಿ ಕಲಿಯುತ್ತಿರುವ ಮಮತಾ ಬೆಳಗ್ಗೆಯೇ ದೇವಸ್ಥಾನದಿಂದ ವಾಪಸ್ ಬರುತ್ತಿರುವುದನ್ನು ನೋಡಿ ನಿನಗೆ ಶಾಲೆಗೆ ತಡ ಆಗುವುದಿಲ್ಲವೇ? ಎಂದು ಕೇಳಿದಾಗ ಅವಳು, “ಏನ್ಮಾಡಲಿ, ಅಮ್ಮನ ಹಠ ಏನೆಂದರೆ, ಪ್ರತಿ ಸೋಮವಾರ ನಾನು ವ್ರತ ಮಾಡಲಿ, ಬಿಡಲಿ ಶಿವಮಂದಿರಕ್ಕೆ ಮಾತ್ರ ಹೋಗಲೇಬೇಕು. ನಾನು ಅದಕ್ಕೆ ವಿರೋಧ ಮಾಡಿದಾಗ ನನಗೆ `ಮಹಾದೇವಿ’ ಧಾರಾವಾಹಿ ನೋಡಲು ಹೇಳುತ್ತಾರೆ. ವ್ರತ ಉಪವಾಸ ಮಾಡುವುದರಿಂದ ನಾವು ಬಯಸಿದ್ದೆಲ್ಲ ನೆರವೇರುತ್ತದೆ ಎಂದು ಆ ಧಾರಾವಾಹಿಯಲ್ಲಿ ತೋರಿಸುತ್ತಾರೆ,” ಎಂದಳು.
ದುರ್ಘಟನೆಯ ಭೀತಿ
ಮಮತಾ ದೊಡ್ಡವಳಾದ ಬಳಿಕ ಎಷ್ಟೇ ಓದಿ, ಎಷ್ಟೇ ಉನ್ನತ ಹುದ್ದೆಗೇರಿದರೂ ಪ್ರತಿ ಸೋಮವಾರ ಅವಳು ಶಿವ ದೇಗುಲಕ್ಕೆ ಹೋಗಿ ಪೂಜೆ ಮಾಡುತ್ತಾಳೆ ಅಥವಾ ಮನೆಯಲ್ಲೇ ಕುಳಿತು ಪೂಜೆ ಪುನಸ್ಕಾರ ನಡೆಸುತ್ತಾಳೆ. ಒಂದು ವೇಳೆ ಅವಳಿಗೆ ಅದೆಲ್ಲವನ್ನು ಮಾಡಲು ಆಗದೇ ಇದ್ದಾಗ ಅವಳ ಮನಸ್ಸಿನಲ್ಲಿ ಒಂದು ಬಗೆಯ ಆತಂಕ ಕಾಡುತ್ತದೆ.
ವೈವಿಧ್ಯತೆಯಿಂದ ಕೂಡಿದ, 125 ಕೋಟಿ ಜನಸಂಖ್ಯೆಯ ಭಾರತದಲ್ಲಿ ಕೇವಲ 33000 ಜನರಷ್ಟೇ ನಾಸ್ತಿಕರಾಗಿದ್ದಾರೆ. 2011ರ ಜನಗಣತಿ ಅಂಕಿಅಂಶಗಳ ಪ್ರಕಾರ, ದೇವರನ್ನು ನಂಬುವುದಿಲ್ಲ ಎನ್ನುವವರ ಸಂಖ್ಯೆ ಕೆಲವೇ ಕೆಲವು ಜನರು ಮಾತ್ರ. 2012ರಲ್ಲಿ ಪ್ರಕಟವಾದ ವಿಶ್ವ ಧಾರ್ಮಿಕ ಸೂಚ್ಯಂಕದಲ್ಲಿ ಭಾರತದಲ್ಲಿ ಕೇವಲ ಶೇ.3ರಷ್ಟು ಜನರು ಮಾತ್ರ ದೇವರನ್ನು ನಂಬುವುದಿಲ್ಲ.
ಆಸ್ಥೆ ಅಥವಾ ಶ್ರದ್ಧೆ ಮತ್ತು ಮೂಢನಂಬಿಕೆ ನಡುವೆ ವಿಭಜಿಸಲ್ಪಟ್ಟಿರುವ ರೇಖೆ ಅತ್ಯಂತ ಸೂಕ್ಷ್ಮವಾಗಿರುತ್ತದೆ. ನಾವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಈ ರೇಖೆಯನ್ನು ದಾಟಿ ಬಿಡುತ್ತೇವೆ. ನಮ್ಮ ಈ ಶ್ರದ್ಧೆ ಯಾವಾಗ ಮೂಢನಂಬಿಕೆಯಾಗಿ ಬದಲಾಗುತ್ತದೋ ಹೇಳಲಾಗದು.
ಹಾಗೆ ನೋಡಿದರೆ ಟಿವಿ ವಿಜ್ಞಾನದ ಕೊಡುಗೆ. ಆದರೆ ಈ ಟಿ.ವಿ. 21ನೇ ಶತಮಾನದತ್ತ ಸಾಗುತ್ತಿರುವ ಮಕ್ಕಳ ಮೇಲೆ ಮಾನಸಿಕ ಪ್ರಭಾವ ಬೀರುವುದರ ಮೂಲಕ ಅವರನ್ನು ಮೂಢನಂಬಿಕೆಯತ್ತ ನೂಕುತ್ತಿದೆ.
ಮೂಢನಂಬಿಕೆ ನಿರ್ಮೂಲನಾ ಸಮಿತಿಯೊಂದರ ಪದಾಧಿಕಾರಿಯಾಗಿರುವ ರಾಜೇಶ್ ಹೀಗೆ ಹೇಳುತ್ತಾರೆ, “ಇತ್ತೀಚಿನ ದಿನಗಳಲ್ಲಿ ಟಿ.ವಿ. ಧಾರಾವಾಹಿಗಳಲ್ಲಿ ಭೂತ, ನಾಗಿಣಿ, ಮಾಟಮಂತ್ರ, ಹಳೆಯ ಕಂದಾಚಾರಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಘಟನೆಗಳನ್ನು ತೋರಿಸಲಾಗುತ್ತಿದೆ.
“ಇದರ ಸಾಕಷ್ಟು ನಕಾರಾತ್ಮಕ ಪ್ರಭಾವಗಳು ಗೋಚರಿಸಲಾರಂಭಿಸಿವೆ. ಯಾವ ಒಂದು ತಂತ್ರಜ್ಞಾನವನ್ನು ಮೂಢನಂಬಿಕೆ ನಿರ್ಮೂಲನೆ ಮಾಡಲು ಬಳಸಬೇಕಿತ್ತೋ ಅದನ್ನು ಮೂಢನಂಬಿಕೆ ಪಸರಿಸಲು ಬಳಸುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.”
ಕಾನೂನಿಗಿಲ್ಲ ಬೆಲೆ
ವಿಶ್ವದಾದ್ಯಂತ ಭಾರತದ ವಿಜ್ಞಾನಿಗಳಿಗೆ ವಿಶೇಷ ಹೆಸರಿದೆ. ಆದರೆ ಭಾರತದ ಬಹುತೇಕ ಟಿ.ವಿ ಚಾನೆಲ್‌ಗಳು ಮೂಢನಂಬಿಕೆ ಪಸರಿಸುತ್ತಿವೆ. 1988ರಲ್ಲಿ ಪ್ರಸಾರವಾದ ಟಿ.ವಿ ಧಾರಾವಾಹಿ `ಹೋನಿ ಅನ್ ಹೋನಿ’ ಡಿಡಿ ಚಾನೆಲ್‌ನಲ್ಲಿ ಪ್ರಸಾರಕ್ಕೆ ತಡೆಹಿಡಿಯಲಾಗಿತ್ತು. ಏಕೆಂದರೆ ಅದರಲ್ಲಿ ಮೂಢನಂಬಿಕೆ, ಭೂತಪ್ರೇತದಂತಹ ಸಂಗತಿಗಳಿದ್ದವು. ಬಳಿಕ ನ್ಯಾಯಾಲಯ ಅದರ ಪ್ರಸಾರಕ್ಕೆ ಅನುಮತಿ ನೀಡಿತು. ಬ್ರಾಡ್ ಕಾಸ್ಟಿಂಗ್ ಕಂಟೆಂಟ್ ಕಂಪ್ಲೇಂಟ್ ಕೌನ್ಸಿಲ್ ಅಂದರೆ ಬಿಸಿಸಿಸಿ ಈ ಮುಂಚೆಯೇ ಟಿ.ವಿ. ಚಾನೆಲ್‌ಗಳಿಗೆ ಹಲವು ಸೂಚನೆಗಳನ್ನು ನೀಡಿತ್ತು. ಆ ಕಾರಣದಿಂದಾಗಿ ಬಿಸಿಸಿಸಿಗೆ ಸಾರ್ವಜನಿಕರಿಂದ ಭೂತ ಪ್ರೇತ, ಮಾಟಮಂತ್ರ, ಮೂಢನಂಬಿಕೆಗೆ ಸಂಬಂಧಿಸಿದಂತೆ ದೃಶ್ಯಗಳನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ನಕಾರಾತ್ಮಕ ರೂಪದಲ್ಲಿ ತೋರಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ಅವನ್ನು ಉತ್ಪೇಕ್ಷೆ ಎಂಬಂತೆ ತೋರಿಸಬೇಕು. ಕಥೆಗೆ ತೀರಾ ಅವಶ್ಯಕತೆ ಎನಿಸಿದರೆ, ಪ್ರಸಾರದ ಸಮಯದಲ್ಲಿ ಇದು ಕಾಲ್ಪನಿಕ ಎಂದು ಹಾಕಬೇಕಾಗುತ್ತದೆ. ಇಲ್ಲಿ ಏಳುವ ಒಂದು ಪ್ರಶ್ನೆಯೆಂದರೆ, ಯಾರಾದರೂ ದೂರು ಕೊಟ್ಟರೆ ಮಾತ್ರ ಬಿಸಿಸಿಸಿ ಕ್ರಮ ಜರುಗಿಸುತ್ತದೆಯೇ? ಸ್ವತಃ ಅದಕ್ಕೆ ಇದು ಗಮನಕ್ಕೆ ಬರುವುದಿಲ್ಲವೇ?
ರಕ್ಷಿಸಿಕೊಳ್ಳುವ ಉಪಾಯ
ಭಾರತೀಯ ಸಂವಿಧಾನದ ಅನುಚ್ಛೇದ 19(1) (ಎ) ಪ್ರಕಾರ, ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ಆದರೆ ಕ್ರಿಯೇಟಿವ್ ಫ್ರೀಡಂ ಹೆಸರಿನಲ್ಲಿ ತಡೆ ಒಡ್ಡಲೇಬೇಕು. ಅದರಲ್ಲೂ ವಿಶೇಷವಾಗಿ ಅದು ಮುಂದಿನ ಪೀಳಿಗೆ ಅಂದರೆ ಮಕ್ಕಳಿಗೆ ಸಂಬಂಧಿಸಿದ್ದಾಗಿದ್ದರೆ, ಇಂತಹ ಮೂಢನಂಬಿಕೆ ಪ್ರಸಾರವನ್ನು ತಡೆಯಬೇಕು.
ಜೊತೆಗೆ ಗೃಹಿಣಿಯರು ಕೂಡ ತಮ್ಮ ಅಮೂಲ್ಯ ಸಮಯವನ್ನು ಇಂತಹ ಧಾರಾವಾಹಿಗಳನ್ನು ನೋಡಲು ಕಳೆಯದೆ, ಯಾವುದಾದರೂ ಸೃಜನ್ಮಾತಕ ಚಟುವಟಿಕೆಗಳಲ್ಲಿ ತೊಡಗಬೇಕು. ಪೋಷಕರ ಜವಾಬ್ದಾರಿ ಎಂದರೆ, ಮಕ್ಕಳಿಗಾಗಿ ಇಂತಹ ಮೂಢನಂಬಿಕೆಯ ಧಾರಾವಾಹಿಗಳನ್ನು ನೋಡುವುದನ್ನು ನಿಲ್ಲಿಸಬೇಕು. ಜೊತೆಗೆ ಮಕ್ಕಳು ಅಂತಹುದನ್ನು ನೋಡುವುದನ್ನೂ ತಡೆಯಬೇಕು. ಒಳ್ಳೆಯ ಮನರಂಜನೆಯ ಜ್ಞಾನವರ್ಧಕ ಕಾರ್ಯಕ್ರಮ ನೋಡುವುದರಲ್ಲಿಯೇ ನಮ್ಮನಿಮ್ಮ ಹಿತ ಅಡಗಿದೆ.
– ಜಿ. ಆಶಾ ಶರ್ಮ