ಒಬ್ಬ ಪ್ರಸಿದ್ಧ ಫ್ರೆಂಚ್ ಲೇಖಕರು, ನೀವೆಷ್ಟೇ ಬಿಝಿ ಆಗಿರಲಿ, ದಿನದ 24 ಗಂಟೆಗೆಳಲ್ಲಿ ಕನಿಷ್ಠ ಒಂದು ಗಂಟೆ ಕಾಲವನ್ನಾದರೂ ನಿಮಗಾಗಿ ಮೀಸಲಿರಿಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ಇದೆಂಥ ಯಾಂತ್ರಿಕ ಜೀವನ? ಎಂದಿದ್ದಾರೆ. ಶುಷ್ಕ ಕೈಗಳು, ನಾಜೂಕಲ್ಲದ ಉಗುರು, ಕಳೆಗುಂದಿದ ಮುಖ, ಬಿಂದಿ, ಕಾಡಿಗೆ, ಮೇಕಪ್ ಎಳ್ಳಷ್ಟೂ ಇರದ ಕಾಂತಿಹೀನ ಮುಖ ಯಾರಿಗೆ ಇಷ್ಟವಾದೀತು?
ಹೆಂಗಸರು ದಿನವಿಡೀ ಏನಾದರೊಂದು ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ತಮಗಾಗಿ 1-2 ಗಂಟೆ ಕಾಲ ಮೀಸಲಾಗಿ ಇರಿಸಿಕೊಳ್ಳುವುದು ಅಸಾಧ್ಯದ ಮಾತೇನಲ್ಲ. ಇದರಲ್ಲಿ ಲೈಟ್ ಮ್ಯೂಸಿಕ್, ಭಾವಗೀತೆ, ಚಿತ್ರಗೀತೆಗಳಂಥ ಸ್ವರ ಲಹರಿ ಇದ್ದರೆ ಒಳ್ಳೆಯದು. ತುಸು ಆರಾಮ ಪಡೆಯುವುದು, ರಿಲ್ಯಾಕ್ಸ್ಡ್ ಆಗಿ ಪುಸ್ತಕ ಓದುವುದು, ಮೆನಿಕ್ಯೂರ್, ಪೆಡಿಕ್ಯೂರ್, ಬಾಡಿ ಮಸಾಜ್, ಫೋನ್‌ನಲ್ಲಿ ಮಾತುಕಥೆ….. ಏನೋ ಒಂದು ಮನರಂಜನೆ ಇದ್ದರೆ ಒಳಿತು. ಏನೇ ಆಗಲಿ ಈ 1-2 ಗಂಟೆಗಳ ಕಾಲ, ಅದು ಕೇವಲ ನಿಮಗಾಗಿ ಮೀಸಲಿರಬೇಕು.
ಒಂದು ವಿಷಯಕ್ಕೆ ರೇಖಾಳಿಗೆ ಬಹಳ ಆಶ್ಚರ್ಯವಾಗಿತ್ತು. ತಾನು ಇಮೇಲ್ ಅಕೌಂಟ್ ತೆರೆದು 1-2 ತಾಸು ಕೂಡ ಆಗಿಲ್ಲ. ಆಗಲೇ ವಿದೇಶದಲ್ಲಿ ನೆಲೆಸಿದ್ದ ತನ್ನ ಓರಗಿತ್ತಿ ಅತಿ ಮುಖ್ಯವಾದ ವಿಷಯಗಳನ್ನು ಇಮೇಲ್ ಮೂಲಕ ಕಳುಹಿಸಿದ್ದಳು. ಅಲ್ಲಿ ಮನೆಗೆ ಕೆಲಸದವಳೂ ಇರಲಿಲ್ಲ, ಆಕೆ ಹೊರಗಿನ ಆಫೀಸ್ ಕೆಲಸಕ್ಕೂ ಹೊರಡಬೇಕಿತ್ತು. ಹಾಗಿರುವಾಗ ತನ್ನ ಮೆಸೇಜ್‌ಗೆ ಇಷ್ಟು ಬೇಗ ಜವಾಬು ಸಿಕ್ಕಿದ್ದು ಹೇಗೆ? ಆಕೆಯನ್ನು ಫೋನ್‌ನಲ್ಲಿ ಸಂಪರ್ಕಿಸಿದಾಗ ಆಫೀಸ್‌ಗೆ ಹೊರಡುವ ಅರ್ಧ ಗಂಟೆ ಮುಂಚೆ ಇಮೇಲ್, ಫೇಸ್‌ಬುಕ್, ವಾಟ್ಸ್ಆ್ಯಪ್ ಗಮನಿಸುತ್ತೇನೆ. ಅದು ನನ್ನ ಫ್ರೆಂಡ್ ಸರ್ಕಲ್‌ಗೆ ಹಾಯ್ ಹಲೋ ಹೇಳಲು ಸೂಕ್ತ ಅವಕಾಶ ಕಲ್ಪಿಸುತ್ತದೆ, ಅದರಿಂದ ತಾಜಾ ಆಗಿ ಆಫೀಸ್‌ಗೆ ಹೋಗಲು ಅನುಕೂಲ ಎಂದಳು.
ಅದೇ ರೀತಿ ಒಮ್ಮೆ ಭಾನುವಾರ ಮಂಗಳೂರಿನ ಸುನಂದಾ, ಬೀಚ್ ಕಾಣುವಂತಿದ್ದ ತನ್ನ ಹೊಸ ಮನೆಯ ಬಾಲ್ಕನಿಯಲ್ಲಿ ಕುಳಿತು, ರಿಲ್ಯಾಕ್ಸ್ ಆಗಿ ಭಾನುವಾರದ ಬೆಳಗಿನ ಚಹಾಗಾಗಿ ಕಾಯುತ್ತಿದ್ದಳು. ಸಮುದ್ರ ತೀರದಿಂದ ಬೀಸಿ ಬಂದ ತಂಗಾಳಿ ಆಹ್ಲಾದಕರ ವಾತಾವರಣ ಸೃಷ್ಟಿಸಿತ್ತು. ಆಗ ಕೆಲಸದ ಕಮಲಾ ನೀಟಾಗಿ ಅಲಂಕರಿಸಿದ್ದ ಟೀ ಸೆಟ್ ಇದ್ದ ಟ್ರಾಲಿ ತಳ್ಳಿಕೊಂಡು ಬಾಲ್ಕನಿಗೆ ಬಂದಳು. ಟ್ರಾಲಿಯಲ್ಲಿ ಟೀ ಸೆಟ್ ಜೊತೆ ಕನ್ನಡಿ, ಕಾಟನ್ ಬಡ್ಸ್, ನೇಲ್ ಕಟರ್, ನೇಲ್ ಪಾಲಿಶ್ ಇತ್ಯಾದಿ ಇರಿಸಿಕೊಂಡು ಬಂದಿದ್ದಳು.
ಆಗ ಸುನಂದಾ ನಗುತ್ತಾ ಕೇಳಿದಳು, “ಬೆಳಗ್ಗೆಯೇ ಟೀ ಜೊತೆ ಬ್ಯೂಟಿ ಟ್ರೀಟ್‌ಮೆಂಟ್ ಪ್ರೋಗ್ರಾಂ ಇದೆಯೇನು?”
ಕಮಲಾ ನಗುತ್ತಾ ಹೇಳಿದಳು, “ಹೌದು ಮೇಡಂ, ಇದರಲ್ಲಿ ತಪ್ಪೇನು? ಬೆಳಗ್ಗೆ ಟೀ ಕುಡಿದು ರಿಲ್ಯಾಕ್ಸ್ ಆಗಿ 10 ನಿಮಿಷ ನಿಮ್ಮ ಅಗತ್ಯಗಳನ್ನು ವಿಚಾರಿಸಿಕೊಳ್ಳಬಾರದೇಕೆ? ಎದುರಿನ ಫ್ಲಾಟ್‌ನ ಉಷಾ ಮೇಡಂ ದಿನ 15-20 ನಿಮಿಷ ಹೀಗೇ ಮಾಡುತ್ತಾರೆ.
“ಆ ಸಮಯದಲ್ಲಿ ಎಷ್ಟೋ ಸಲ ಮೊಟ್ಟೆ ಜೇನು ಬೆರೆತ ಪ್ಯಾಕ್‌ನ್ನು ಮುಖಕ್ಕೆ ಹಚ್ಚುತ್ತಾರೆ. ಫೇಶಿಯಲ್ ಜೊತೆ ಟೀ ಕುಡಿದ ಹಾಗೂ ಆಯ್ತು. ನಂತರ ತಣ್ಣೀರಲ್ಲಿ ಮುಖ ತೊಳೆದು ಈ ಬೀಚ್ ಹತ್ತಿರ 10 ನಿಮಿಷ ವಾಕ್ ಮಾಡಿ ಬಂದರೆ ಫ್ರೆಶ್ ಆಗಿಬಿಡ್ತಾರೆ.”
ಈಗ ಸುನಂದಾಳಿಗೆ ಎದುರಮನೆ ಉಷಾ ಸದಾ ಫ್ರೆಶ್ ಆಗಿ ಹೇಗೆ ಕಂಡುಬರುತ್ತಾಳೆಂಬ ರಹಸ್ಯದ ಅರಿವಾಯಿತು. ಇದರಲ್ಲಿ ಹೊಸತೇನು ಬಂತು ಎಂದು ನಿಮಗೆ ಅನಿಸಬಹುದು. ನಾವೆಲ್ಲರೂ ನಮಗಾಗಿ ಸ್ವಲ್ಪ ಕಾಲಾವಕಾಶ ಮಾಡಿಕೊಳ್ಳಬೇಕು ಎಂಬುದನ್ನು ಮರೆಯಬಾರದು. `ಅಯ್ಯೋ…. ಯಾರು ಏನಂದುಕೊಳ್ಳುವರೋ? ಮನೆಯಲ್ಲಿ ಖಂಡುಗ ಕೆಲಸ ಉಳಿದಿರುವಾಗ ಈ ಮಹಾರಾಣಿ ತನಗಾಗಿ ರಿಲ್ಯಾಕ್ಸ್ ಆಗಿ, ಆರೈಕೆ ಮಾಡಿಕೊಳ್ಳುವುದಾ?’ ಎಂಬ ಖಯಾಲಿಯಲ್ಲೇ ನಾವು ಇಂಥದೇನೂ ಮಾಡುವುದಿಲ್ಲ. ಹಾಗಾದರೆ ತಾನೇ ಏನಂತೆ? ಸದಾ ಟೆನ್ಶನ್‌ನಲ್ಲಿ ಬೇಯುತ್ತಾ ಕಷ್ಟಪಡುವ ಬದಲು ನಮಗಾಗಿ ಸಮಯ ಮಾಡಿಕೊಳ್ಳುದು ತಪ್ಪೇ? `ನಾಳಿನ ಕೆಲಸ ಇಂದೇ ಮಾಡಿ…. ಇಂದಿನ ಕೆಲಸ ಈಗಲೇ ಮಾಡಿ!’ ಎಂಬ ನಾಣ್ಣುಡಿಯಂತೆ ಈ ಕೆಳಗಿನ ಕೆಲಸಗಳನ್ನು ನಿಮಗಾಗಿ ಮಾಡಿಕೊಳ್ಳಲು ಆರಂಭಿಸಿ……
ಸ್ವಲ್ಪ ಹೊತ್ತು ಮಲಗಿ : ಗೃಹಿಣಿ ಇರಲಿ ಅಥವಾ ಉದ್ಯೋಗಸ್ಥ ವನಿತೆ, ಸಾಮಾನ್ಯವಾಗಿ ಅವಳ ದೂರು ಎಂದರೆ `ಇವತ್ತು ಸರಿಯಾಗಿ ನಿದ್ದೆ ಮಾಡಲು ಆಗಲಿಲ್ಲ….’ ಕಾರಣ….. ಮಗು ಇರಬಹುದು,
ಲೇಟ್ ನೈಟ್ ಡಿನ್ನರ್, ಆಫೀಸ್ ಡ್ಯೂಟಿ, ಹಿರಿಯರ ಸೇವೆ ಇತ್ಯಾದಿ. ಡೈರಿ ಬರೆಯುವುದೇ ಆಗಿರಬಹುದು, ಅಭ್ಯಾಸ ಬಿಟ್ಟು ಹೋಗಿದ್ದರೆ ಅದನ್ನು ಮುಂದುವರಿಸಿ. ಯಾರದಾದರೂ ವಿವಾಹ ವಾರ್ಷಿಕೋತ್ಸವ, ಜನ್ಮದಿನಕ್ಕೆ ಶುಭ ಕೋರುವ ಗ್ರೀಟಿಂಗ್ ಕಾರ್ಡ್ ಕಳುಹಿಸುವುದಿದ್ದರೆ ನಿಮ್ಮ ಕೈಯಾರೆ ಅದನ್ನು ಈ ಸಮಯದಲ್ಲಿ ತಯಾರಿಸಬಹುದು. ನಿಮ್ಮ ಮನದಾಳದ ಕ್ಯಾಪ್ಶನ್ ಇಲ್ಲಿ ನಮೂದಿಸಬಹುದು. ಅಂದರೆ ನಿಮ್ಮ ಅಭಿರುಚಿಗೆ ತಕ್ಕಂತೆ ನಿಮ್ಮ ಐಡಿಯಾ ಪ್ರಕಾರ ಇದನ್ನು ನೀವೇ ತಯಾರಿಸಿದ ತೃಪ್ತಿ ಇರುತ್ತದೆ. ಇದರಿಂದ ಸಿಗುವ ಆನಂದಕ್ಕೆ ಎಣೆಯೇ ಇಲ್ಲ.
ಕನಸು ಕಾಣಿರಿ : ಹೌದು, ಕುಳಿತಿದ್ದ ಕಡೆಯೇ ಕಣ್ಣು ತೆರೆದುಕೊಂಡು ಕನಸು ಕಾಣಬಹುದು. ಹೀಗೆ ಹಗಲುಗನಸು ಕಾಣುವ ಹಕ್ಕು ಎಲ್ಲರಿಗೂ ಇದೆ. ಕರೀನಾರಂಥ ಸಿನಿಮಾ ನಟಿಯರು ತಮ್ಮ 90 ಕಿಲೋ ತೂಕ ಕರಗಿಸಬಹುದಂತೆ, ಹಾಗಾದರೆ ನಾವು ನೀವು ಏಕೆ ಆ ನಿಟ್ಟಿನಲ್ಲಿ ಟ್ರೈ ಮಾಡಬಾರದು? ಅಗತ್ಯವಿರುವುದೆಲ್ಲ ಒಂದು ದೃಢ ನಿಶ್ಚಯವಷ್ಟೆ. ಹೀಗೆ ನಿಮಗೆ ನೀವು ಸಮಯ ಕೊಟ್ಟುಕೊಂಡು ಇಂಥದ್ದನ್ನು ನಿರ್ಧರಿಸಿ.
ಸಂವಾದ ಉಳಿಸಿಕೊಳ್ಳಿ : ನೀವು ನಿಮ್ಮ ಗೆಳತಿ, ದೂರದ ಫ್ರೆಂಡ್, ನೆಂಟರಿಷ್ಟರು, ಒಡಹುಟ್ಟಿದವರು ಯಾರೇ ಆಪ್ತರಿರಲಿ, ಅಂಥವರ ಜೊತೆ ಸಂಬಂಧ ಸುಧಾರಿಸಲು ಈ ಸದವಕಾಶ ಬಳಸಿಕೊಳ್ಳಿ. ಅವರಿಗೆ ಫೋನ್ ಮಾಡಿ. ಮೆಸೇಜ್ ಮಾಡಿ, ಒಟ್ಟಾರೆ ಟಚ್‌ನಲ್ಲಿರಿ. ಈ ಕ್ಷಣಗಳು ನಿಮ್ಮ ಪಾಲಿಗೆ ಸದಾ ಹಸಿರಾಗಿರುತ್ತವೆ.
ಮಾರನೇ ದಿನಕ್ಕಾಗಿ ಪ್ಲಾನಿಂಗ್ : ನೀವು ಉದ್ಯೋಗಸ್ಥೆಯಾಗಿದ್ದು, ನಿಮ್ಮ ಪ್ರೊಡಕ್ಟಿವಿಟಿ ಹೆಚ್ಚಿಸಲು ಬಯಸಿದರೆ ಮಾರನೇ ದಿನದ ಎಲ್ಲಾ ಶೆಡ್ಯೂಲ್‌ನ್ನು ಇಂದೇ ಚೆಕ್ ಮಾಡಿ, ಅವನ್ನು ಅಪ್‌ಡೇಟ್ ಮಾಡಿ. ಯಾವುದು ಎಷ್ಟು ಅರ್ಜೆಂಟ್ ಎಂಬುದರತ್ತ ಫೋಕಸ್‌ಮಾಡಿ. ಇಂಥವನ್ನೆಲ್ಲ ನೀಟಾಗಿ ಪ್ಲಾನ್ ಮಾಡಲು ವಿಶೇಷ ಸಮಯ ಬೇಕು, ಈ ಸದವಕಾಶವನ್ನು ಅದಕ್ಕಾಗಿ ಬಳಸಿಕೊಳ್ಳಿ. ದಿನದ 24 ಗಂಟೆಗಳಲ್ಲಿ ನಿಮಗಾಗಿ ಮೀಸಲಿರಿಸಿಕೊಂಡ ಈ ಸಮಯದಿಂದಾಗಿ ಕೆಲಸದ ಕ್ವಾಲಿಟಿ ಇನ್ನಷ್ಟು ಸುಧಾರಿಸುತ್ತದೆ.
ಲುಕ್ಸ್ ಕಡೆ ಗಮನ ಕೊಡಿ : ಏನೋ ಒಂದು ಡ್ರೆಸ್ ಧರಿಸಿ ಯಾವುದೋ ಆ್ಯಕ್ಸೆಸರೀಸ್ ಜೊತೆ ಹೊರಗೆ ಹೊರಟರಾಯಿತು ಎಂದುಕೊಳ್ಳಬೇಡಿ. ನಿಮ್ಮ ನೀಟಾದ ಉಡುಗೆಗೆ ತಕ್ಕಂತೆ ಮ್ಯಾಚಿಂಗ್ ಜ್ಯೂವೆಲರಿ ಅಥವಾ ಕಾಸ್ಟ್ಯೂಮ್ ಜ್ಯೂವೆಲರಿ, ಸ್ಯಾಂಡಲ್ಸ್, ಸ್ಕಾರ್ಫ್ ಇತ್ಯಾದಿ ಎಲ್ಲವನ್ನೂ ಸರಿಪಡಿಸಿಕೊಳ್ಳುವುದರಿಂದ ಸ್ವಲ್ಪವಲ್ಲ ಹೆಚ್ಚಿನ ಬದಲಾವಣೆ ಕಾಣಬಹುದು. ಹೀಗಾಗಿ ಉದ್ಯೋಗಸ್ಥೆಯರು ಈ ನಿಟ್ಟಿನಲ್ಲಿ ಡಬ್ಬಲ್ ಕೇರ್‌ಫುಲ್ ಆಗಿರಬೇಕು. ಬಿಡುವಿನ ಸಮಯದಲ್ಲಿ ನಿಮ್ಮ ಜ್ಯೂವೆಲರಿ, ಆ್ಯಕ್ಸೆಸರಿ ಇತ್ಯಾದಿಗಳನ್ನು ಮರೆಯದೆ ಪರೀಕ್ಷಿಸಿ. ಅವುಗಳಲ್ಲಿ ಬೇಕಾದ ಅಪ್‌ಡೇಟ್ಸ್ ಮಾಡಿಕೊಳ್ಳಿ. ಲೂಸ್ ಆದುದರ ಬಿಗಿ, ಸಣ್ಣಪುಟ್ಟ ರಿಪೇರಿ, ಮ್ಯಾಚಿಂಗ್ ಕ್ಲಿಪ್ಸ್, ಹೇರ್‌ಪಿನ್ಸ್ ಇತ್ಯಾದಿ ಎಲ್ಲವನ್ನೂ ರೀಅರೇಂಜ್ ಮಾಡಿಕೊಳ್ಳಿ ನಾಳೆಗೆ ಬೇಕಾದುದೆಲ್ಲವನ್ನೂ ಇಂದೇ ಎತ್ತಿರಿಸಿಕೊಂಡುಬಿಟ್ಟರೆ ಆಗ ಟೆನ್ಶನ್ ಇರುವುದಿಲ್ಲ. ಇದರಿಂದ ನಿಮ್ಮ ವ್ಯಕ್ತಿತ್ವ ಸುಧಾರಿಸುವುದಲ್ಲದೆ, ಆತ್ಮವಿಶ್ವಾಸ ಹೆಚ್ಚುತ್ತದೆ.
ಈ ರೀತಿ ಮನೆಯಲ್ಲೂ, ಹೊರಗಿನ ಕೆಲಸದಲ್ಲೂ ನಿಮಗೆ ಹೊಗಳಿಕೆ ಸಿಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಸಹಜವಾಗಿಯೇ ಮತ್ತಷ್ಟು ಉಜ್ವಲವಾಗುತ್ತದೆ. ಆದ್ದರಿಂದ ಬಿಡುವಿನ ವೇಳೆಯನ್ನು ಮೇಲೆ ತಿಳಿಸಿದಂತೆ ಬೇರೆ ಬೇರೆ ಬಗೆಗಗಳಲ್ಲಿ ಸದುಪಯೋಗ ಪಡಿಸಿಕೊಳ್ಳುವುದರಿಂದ ನಿಮಗಾಗಿ ಮೀಸಲಿರಿಸಿಕೊಂಡ ಸಮಯ ನಿಮಗೆ ಹೇಗೆ ಲಾಭದಾಯಕ ಆಯಿತು ಎಂಬುದು ನಿಮಗೇ ತಿಳಿಯುತ್ತದೆ.
– ಎಸ್. ಅಮೃತಾ