ಪುರುಷರಲ್ಲೂ ಬೇಬಿ ಬ್ಲೂಸ್

ಮಗುವಿಗೆ ಜನ್ಮವಿತ್ತ ನಂತರ ಮಹಿಳೆಯರಲ್ಲಿ ಒಂದು ಬಗೆಯ ಆತಂಕ, ಚಿಂತೆ, ಕಳವಳ ಮತ್ತು ಒತ್ತಡ ಉಂಟಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆಯಷ್ಟೆ. ಇದನ್ನು ಪೋಸ್ಟ್ ಪಾರ್ಟಮ್ ಡಿಪ್ರೆಶನ್‌ ಎಂದು ಹೇಳಲಾಗುತ್ತದೆ. ಆದರೆ ಮನೋವಿಜ್ಞಾನಿಗಳು ಮತ್ತು ಸಮಾಜಶಾಸ್ತ್ರಜ್ಞರ ಪ್ರಕಾರ, ತಂದೆಯಾದ ಬಳಿಕ ಅನೇಕ ಪುರುಷರು ಸಹ ಪ್ಯಾನಿಕ್‌ ಅಟ್ಯಾಕ್‌ ಮತ್ತು ಡಿಪ್ರೆಶನ್‌ಗೆ ಗುರಿಯಾಗುತ್ತಾರೆ.

ಪೀಡಿಯಾಟ್ರಿಕ್ಸ್ ಜರ್ನಲ್‌ನ ಒಂದು ಅಧ್ಯಯನದ ಮೂಲಕ ತಿಳಿದುಬಂದಿರುವುದೆಂದರೆ, ಸುಮಾರು 25 ವರ್ಷ ವಯಸ್ಸಿನಲ್ಲಿ ತಂದೆಯಾಗುವ ಪುರುಷರಲ್ಲಿ ಮಗು ಹುಟ್ಟಿದ ನಂತರ ಡಿಪ್ರೆಶನ್‌ ಉಂಟಾಗುವ ಸಾಧ್ಯತೆ ಶೇ.68ರಷ್ಟಿರುತ್ತದೆ. ಅಧ್ಯಯನದ ಮುಖ್ಯಸ್ಥ ಡಾ. ಕ್ರೆಗ್‌ ಗಾರ್‌ಫೀಲ್ಡ್ ಹೇಳುತ್ತಾರೆ, “ಮಗುವಿನ ಜನನದ ನಂತರ ಮಹಿಳೆಯರಂತೆ ಪುರುಷರಿಗೂ ಭಾವನಾತ್ಮಕ ಆಸರೆಯ ಅಗತ್ಯವಿರುತ್ತದೆ. ಆದರೆ ಅವರ ಅವಶ್ಯಕತೆಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ.”

ಬೇಸರ ಮತ್ತು ನಿರುತ್ಸಾಹ

2 ಮಕ್ಕಳ ತಂದೆಯಾಗಿರುವ ರೋಹನ್‌ ಶೆಟ್ಟಿ ತಂದೆಯಾದ ಬಳಿಕ ತಮ್ಮ ಜೀವನದಲ್ಲಿ ಆದ ಬದಲಾವಣೆಗಳಿಂದ ಬಹಳ ತೊಂದರೆಗೀಡಾದರು, ಅವರು ಭಾವನಾತ್ಮಕ ಅಲ್ಲೋಲ ಕಲ್ಲೋಲಗಳನ್ನು ಎದುರಿಸಬೇಕಾಯಿತು. ಈ ಕಠಿಣ ಸಂದರ್ಭಗಳಿಂದ ಪಾರಾದ ನಂತರ ಅವರು ತಮ್ಮ ಅನುಭವಗಳನ್ನು ಹೊರಗೆಡವಿದರು ಮತ್ತು ಅವುಗಳ ಬಗ್ಗೆ `ವಿಸ್ಡಮ್ ಫ್ರಮ್ ಡ್ಯಾಡೀಸ್‌’ ಎಂಬ ಪುಸ್ತಕವನ್ನು ಬರೆದರು.

ಶೆಟ್ಟಿ ಹೇಳುತ್ತಾರೆ, “ಬಹಳಷ್ಟು ಯುವಕರು ತಂದೆಯಾದ ನಂತರ ಡಿಪ್ರೆಶನ್‌ ಮತ್ತು ಆತಂಕಕ್ಕೆ ಸಿಲುಕುತ್ತಾರೆ. ಹೆಚ್ಚಿನ ಆರ್ಥಿಕ ಹೊಣೆಗಾರಿಕೆ, ವೈವಾಹಿಕ ಜೀವನದ ಮೇಲೆ ಉಂಟಾಗುವ ಪ್ರಭಾವ, ಸೆಕ್ಸ್ ಕೊರತೆ, ಇತರೆ ಜವಾಬ್ದಾರಿಗಳು, ರಾತ್ರಿಯ ವೇಳೆ ಮಗುವಿನ ಗಲಾಟೆಯಿಂದಾಗಿ ನಿದ್ರಿಸಲಾಗದಿರುವುದು, ಮುಂತಾದ ಕಾರಣಗಳಿಂದಾಗಿ ಅವರು ಚಿಂತೆಗೀಡಾಗುತ್ತಾರೆ.”

`ಜರ್ನಲ್ ಆಫ್‌ ದ ಅಮೆರಿಕನ್‌ ಮೆಡಿಕಲ್ ಅಸೋಸಿಯೇಷನ್‌’ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, 3 ರಿಂದ 6 ತಿಂಗಳ ಮಗುವಿನ ತಂದೆಯಲ್ಲಿ ಹೆಚ್ಚು ಡಿಪ್ರೆಶನ್‌ ಕಂಡುಬರುತ್ತದೆ. ಮಗುವಿನ ಆಗಮನದ ನಂತರ ಅವರಿಗೆ ತಮ್ಮ ಪ್ರಾಮುಖ್ಯತೆ ಕಡಿಮೆಯಾಗಿರುವುದು ಕಂಡುಬರುತ್ತದೆ. ಏಕೆಂದರೆ ಪತ್ನಿಯ ಆಸಕ್ತಿಯೆಲ್ಲ ಮಗುವಿನ ಕಡೆಗಿದ್ದು, ಪತಿಯ ಕಡೆ ಗಮನವಿರುವುದಿಲ್ಲ. ಪತಿ ರಾತ್ರಿ ಪೂರ್ತಿ ಸರಿಯಾಗಿ ನಿದ್ರೆ ಮಾಡದಿರುವುದು, ಆಯಾಸ, ಬೇಸರ ಮತ್ತು ನಿರುತ್ಸಾಹದ ಬಗ್ಗೆ ದೂರುತ್ತಾನೆ.

ಲೈಫ್ಸ್ಟೈಲ್ ಬದಲಾವಣೆ

ಫೋರ್ಟಿಸ್‌ ಆಸ್ಪತ್ರೆಯ ಮನೋತಜ್ಞ ಸಂಜಯ್‌ ಪಾಟೀಲ್ ‌ಹೇಳುತ್ತಾರೆ, “ಈಗ ಚಿಕ್ಕ ಕುಟುಂಬದ ಕಾಲ. ಮಕ್ಕಳನ್ನು ನೋಡಿಕೊಳ್ಳಲು ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ ಯಾರೂ ಇರುವುದಿಲ್ಲ. ಮಗುವಿಗೆ ಅನಾರೋಗ್ಯವಾದಾಗ ಡಾಕ್ಟರ್‌ ಬಳಿ ಕರೆದೊಯ್ಯಲು ಪತಿಪತ್ನಿಯರ ಮೇಲೇ  ಹೆಚ್ಚಿನ ಜವಾಬ್ದಾರಿ ಬೀಳುತ್ತದೆ. ಇದರಿಂದ ಅವರ ಸ್ವಾಂತಂತ್ರ್ಯ, ಮನರಂಜನೆ ಎಲ್ಲ ಕುಂಠಿತವಾಗುತ್ತದೆ. ಇದ್ದಕ್ಕಿದ್ದಂತೆ ಎದುರಾಗುವ ಈ ಒತ್ತಡದಿಂದ ಯುವ ದಂಪತಿ ಗಾಬರಿಯಾಗುತ್ತಾರೆ ಮತ್ತು ಭಾವನಾತ್ಮಕವಾಗಿ ಚಿಂತೆಗೀಡಾಗುತ್ತಾರೆ.

“ಒಬ್ಬ ಪುರುಷ ಪ್ರಥಮ ಬಾರಿಗೆ ತಂದೆಯಾದಾಗ, ಅವನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಇದು ಹೇಗೆಂದರೆ ಒಂದೆರಡು ವರ್ಷದ ಹಿಂದೆಯಷ್ಟೇ ಒಂದು ಹೆಣ್ಣು ಪತ್ನಿಯ ರೂಪದಲ್ಲಿ ಅವನನ್ನು ಆಶ್ರಯಿಸಿ ಬಂದಿರುತ್ತಾಳೆ. ಮತ್ತೆ ಈಗ ಮಗುವೊಂದು ಅವನ ಬಾಳಿನಲ್ಲಿ ಕಾಲಿರಿಸಿದಾಗ, ಹೆಚ್ಚಿನ ಜವಾಬ್ದಾರಿ ಮತ್ತು ಖರ್ಚಿನಿಂದಾಗಿ ಅವನಿಗೆ ಚಿಂತೆಯಾಗುವುದು ಸಹಜವೇ.”

8 ತಿಂಗಳ ಹಿಂದೆಯಷ್ಟೇ ತಂದೆಯಾದ ನವೀನ್‌, “ಮಗು ಹುಟ್ಟುವ ಮೊದಲು ಬಲು ರೋಮಾಂಚನವಾಗುತ್ತಿತ್ತು. ಮೊದಲ ಬಾರಿಗೆ ನನ್ನನ್ನು ಪಪ್ಪಾ ಎಂದೂ ನನ್ನ ಪತ್ನಿಯನ್ನು ಮಮ್ಮಿ ಎಂದೂ ಕರೆಯುವ ಮಗು ಬರುತ್ತದೆ ಎಂದು ಯೋಚಿಸಿ ಆನಂದಿಸಿದ್ದೆ. ನಾವಿಬ್ಬರೂ ದಿನ ಹುಟ್ಟಲಿರುವ ಮಗುವಿನ ಹೆಸರಿನ ಬಗ್ಗೆ ಚರ್ಚಿಸುತ್ತಿದ್ದೆವು. ಅದರ ಬಗ್ಗೆ ಏನೇನೋ ಪ್ಲಾನಿಂಗ್‌ ಮಾಡುತ್ತಿದ್ದೆವು. ಆದರೆ ಮಗು ಹುಟ್ಟುತ್ತಿದ್ದಂತೆ ನನ್ನ ಜೀವನ ಕ್ರಮವೇ ಬದಲಾಗಿಬಿಟ್ಟಿತು. ಪತ್ನಿ ದಿನವಿಡೀ ಮಗುವನ್ನು ನೋಡಿಕೊಳ್ಳುತ್ತಿರುತ್ತಾಳೆ.  ನಾನು ಇರುವ, ಇಲ್ಲದಿರುವ ವ್ಯತ್ಯಾಸ ಅವಳಿಗೆ ಆಗುತ್ತಿಲ್ಲ. ಮಗುವನ್ನು ಚೈಲ್ಡ್ ಸ್ಪೆಶಲಿಸ್ಟ್ ಬಳಿಗೆ ಕರೆದೊಯ್ದರೆ, ಅಲ್ಲೇ 2-3 ಗಂಟೆಗಳ ಕಾಲ ಕಳೆದುಹೋಗುತ್ತದೆ. ಅದು ತನ್ನಿ, ಇದು ತನ್ನಿ ಎನ್ನುವುದನ್ನು ಕೇಳಿ ಕೇಳಿ ತಲೆಚಿಟ್ಟು ಹಿಡಿಯುತ್ತದೆ,” ಎನ್ನುತ್ತಾರೆ.

ಕೌನ್ಸೆಲರ್‌ ಮತ್ತು ತಜ್ಞೆ ರೇಖಾ ಶ್ರೀವಾಸ್ತವ್ ಹೇಳುತ್ತಾರೆ, “ಪುರುಷನ ಬಾಳಿನಲ್ಲಿ ವಿವಾಹ ಎನ್ನುವುದು ಒಂದು ಮಹತ್ವಪೂರ್ಣ ಘಟನೆಯಾದರೆ, ತಂದೆಯಾಗುವುದು ಅದಕ್ಕಿಂತ ಹೆಚ್ಚಿನದು. ತಂದೆಯಾದ ಪುರುಷ ಅದಕ್ಕೆ ಮಾನಸಿಕವಾಗಿ ಸಿದ್ಧನಾಗಿಲ್ಲದಿರುವುದರಿಂದ ಸ್ಟ್ರೆಸ್‌ಗೆ ಗುರಿಯಾಗುತ್ತಾನೆ. ತಂದೆಯಾದ ಬಳಿಕ ಪರಿಸ್ಥಿತಿಯು ವೇಗವಾಗಿ ಬದಲಾಗುವುದರಿಂದ ಪುರುಷರಿಗೆ ಎಲ್ಲವೂ ತಮ್ಮ ಕೈ ಮೀರಿ ಹೋಗುತ್ತಿರುವಂತೆ ಭಾಸವಾಗುತ್ತದೆ. ಹೀಗಾಗಿ ಅವರು ಬೇಗನೆ ಡಿಪ್ರೆಶನ್‌ ಸ್ಥಿತಿಯನ್ನು ತಲುಪುತ್ತಾರೆ.”

ಎಮೋಷನ್‌ ಸ್ವಿಂಗ್‌ ಗೈನಕಾಲಜಿಸ್ಟ್ ಡಾ. ಸ್ಮಿತಾ ಹೇಳುತ್ತಾರೆ, “ಗಂಡಸರಲ್ಲಿ ಪೋಸ್ಟ್ ಪಾರ್ಟಮ್ ಡಿಪ್ರೆಶನ್‌ನ ಮುಖ್ಯ ಕಾರಣವೆಂದರೆ ಅವರ ಹಾರ್ಮೋನುಗಳಲ್ಲಿನ ಪರಿವರ್ತನೆ. ಅವರಲ್ಲಿ ಹೆಚ್ಚಿದ ಒತ್ತಡದಿಂದಾಗಿ ಟೆಸ್ಟೊಸ್ಟೆರಾನ್‌ ಲೆವೆಲ್ ‌ತಗ್ಗುತ್ತದೆ. ಆದರೆ ಈಸ್ಟ್ರೋಜನ್‌, ಪ್ರೊಲ್ಯಾಕ್ಟಿನ್‌, ಕಾರ್ಟಿಸೋಲ್‌ನ ಲೆವೆಲ್ ‌ಹೆಚ್ಚುತ್ತವೆ. ಹೀಗಾಗಿ ಅವರಲ್ಲಿ ಸ್ಟ್ರೆಸ್‌ ಹೆಚ್ಚುತ್ತದೆ.”

ಭಾರತೀಯ ರಕ್ಷಣಾ ಸೇನೆಯಲ್ಲಿ ಕಮಾಂಡೋ ಆಗಿರುವ ಲೇಖಕ (ಕೃತಿ : ಕಮಾಂಡೋ ಡ್ಯಾಡ್‌ ರಿಕ್ರೂಟ್ಸ್) ನೀಲ್‌ ಸಿಂಕ್ಲೇಯರ್‌ಹೇಳುತ್ತಾರೆ, “ಯುದ್ಧದ ಸಂದರ್ಭದಲ್ಲಿ ಸೇನಾ ತುಕಡಿಯ ಮೇಲ್ವಿಚಾರಣೆಯನ್ನು ನಿರ್ವಹಿಸಿದೆ. ಆದರೆ ತಂದೆಯಾದದ್ದು ನನ್ನ ಜೀವನದಲ್ಲಿ ಹೆಚ್ಚಿನ ಒತ್ತಡ ಉಂಟು ಮಾಡಿದ ಸಮಯವಾಗಿತ್ತು. ನನ್ನ ಮಗುವನ್ನು ನಾನು ಬಹಳ ಪ್ರೀತಿಸುತ್ತೇನೆ ನಿಜ, ಆದರೆ ಆಗ ನನಗೆ ಏನೋ ಒಂದು ಬಗೆಯ ಚಿಂತೆ ಕಾಡುತ್ತಿತ್ತು. ನಾನು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಾರೆ ಎನ್ನಿಸುತ್ತಿತ್ತು. ತೊಂದರೆ ಏನೆಂದರೆ, ಎಲ್ಲರೂ ಪುರುಷರನ್ನು ಶಕ್ತಿಶಾಲಿಗಳೆಂದು ತಿಳಿಯುತ್ತಾರೆ. ಹೀಗಾಗಿ ಅವರ ಮನಃಸ್ಥಿತಿಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಮತ್ತು ಯಾವುದೇ ಬಗೆಯ ಬೆಂಬಲ ನೀಡುವುದಿಲ್ಲ.”

ಮನೋತಜ್ಞ ಅಮರನಾಥ್‌ ಹೇಳುತ್ತಾರೆ, “ಪುರುಷರಲ್ಲಿ ಇಂತಹ ಡಿಪ್ರೆಶನ್‌ ಯಾವಾಗಲೂ ಬೇಸರ ಮತ್ತು ಆತಂಕದ ರೂಪದಲ್ಲಿಯೇ ಇರುವುದಿಲ್ಲ. ಅದು ಒಂದು ಬಗೆಯ ಎವೋಶನಲ್ ಸ್ವಿಂಗ್‌ ಆಗಿರುತ್ತದೆ. ಅತ್ಯಂತ ಸಂತೋಷದ ಸ್ಥಿತಿಯಿಂದ ಇದಕ್ಕಿದ್ದಂತೆ ಅತ್ಯಂತ ಬೇಸರದ ಸ್ಥಿತಿಗೆ ಬದಲಾಗುತ್ತದೆ.”

ತಜ್ಞೆ ರೇಖಾ ಶ್ರೀವಾಸ್ತವ್ ಹೇಳುತ್ತಾರೆ, “ಪುರುಷರಲ್ಲಿ ಪೋಸ್ಟ್ ಪಾರ್ಟಮ್ ಸ್ಟ್ರೆಸ್‌ಗೆ ಮುಖ್ಯ ಕಾರಣವೆಂದರೆ, ಪ್ರತಿಯೊಬ್ಬರೂ ಅವರನ್ನು ಒಬ್ಬ ಒಳ್ಳೆಯ ಪತಿ ಮತ್ತು ತಂದೆಯಾಗಿರುವ ನಿರೀಕ್ಷೆ ಮಾಡುತ್ತಾರೆ. ಹಿಂದೆ ಕೇವಲ ಮಗುವಿನ ತಾಯಿ ಮಾಡುತ್ತಿದ್ದ ಕೆಲಸವನ್ನು ಈಗ ಮಗುವಿನ ತಂದೆಯೂ ಮಾಡುತ್ತಾನೆ. ಉದಾ : ನ್ಯಾಪಿ ಬದಲಾಯಿಸುವುದು, ಬಾಟಲ್‌ನಿಂದ ಹಾಲು ಕುಡಿಸುವುದು, ಮಗುವಿಗೆ ಬೊಟ್ಟು ಇಡುವುದು ಇತ್ಯಾದಿ.

`ನ್ಯೂ ಡ್ಯಾಡ್ಸ್ ಸರ್ ಲೈವ್ ‌ಗೈಡ್‌’ನ ಲೇಖಕ ರೋಬ್‌ ಕಾಂಪ್‌ ಹೇಳುತ್ತಾರೆ, “ತಂದೆಯಾದ ನಂತರ ನಾವು ಆಫೀಸಿನ ಕೆಲಸ ಮತ್ತು ಮನೆಯ ಕೆಲಸದ ಡಿಮ್ಯಾಂಡ್‌ನ ನಡುವೆ ಹೊಂದಾಣಿಕೆ ಮಾಡಲು ಕಲಿಯುತ್ತಿದ್ದೇವೆ. ಹೆಚ್ಚಿನ ಯುವಕರು ಪತ್ನಿಗೆ ಸಹಾಯ ಮಾಡಲು ಮತ್ತು ಒಳ್ಳೆಯ ತಂದೆಯಾಗಲು ಹೆಚ್ಚು ಶ್ರಮಪಡುತ್ತಾರೆ. ಈ ಕೆಲಸಗಳ ಮಧ್ಯೆ ಅವರು ಉತ್ಸಾಹ ಮತ್ತು ಸಂತೃಪ್ತಿಯನ್ನು ಕಾಣದಿದ್ದಾಗ ಡಿಪ್ರೆಶನ್‌ಗೆ ಒಳಗಾಗುವುದು ಸಹಜವಾಗಿದೆ.”

ಜವಾಬ್ದಾರಿಯುತ ತಂದೆಯಾಗಿ

ಗರ್ಭಧಾರಣೆ ಮಹಿಳೆಯರಿಗೆ ಸಂಬಂಧಿಸಿದ್ದು ಎಂದು ತಿಳಿಯಲಾಗಿದೆ. ಆದರೆ ಇದು ಸ್ತ್ರೀ ಪುರುಷರಿಬ್ಬರಿಗೂ ಸೇರಿದ ಜವಾಬ್ದಾರಿಯಾಗಿದೆ. ಆದ್ದರಿಂದ ಮಹಿಳೆಯು ಒಬ್ಬ ಯಶಸ್ವೀ ತಾಯಿಯಾಗಲು ತತ್ಪರಳಾಗಿರವಂತೆ ಪುರುಷರೂ ಸಫಲ, ಜವಾಬ್ದಾರಿಯುತ ತಂದೆಯಾಗಲು ಈ ಕೆಳಗಿನ ವಿಷಯಗಳನ್ನು ಗಮನಿಸಬೇಕು :

ಬಂಧುಮಿತ್ರರು ಮತ್ತು ಸಹೋದ್ಯೋಗಿಗಳೊಂದಿಗೆ ಚರ್ಚಿಸಿ, ಅವರ ಭಾವನಾತ್ಮಕ ಬೆಂಬಲ ಪಡೆಯಿರಿ. ಕೆಲವು ಕೆಲಸಗಳಲ್ಲಿ ಅವರ ಸಹಾಯ ಪಡೆಯಿರಿ.

ಸ್ಟ್ರೆಸ್‌ನ ಅನುಭವವಾದಾಗ, ಮನೋತಜ್ಞರ ಸಹಾಯ ತೆಗೆದುಕೊಳ್ಳಲು ಹಿಂಜರಿಯದಿರಿ.

ಮನಸ್ಸಿನಲ್ಲಿ ಯಾವುದೇ ಬಗೆಯ ಅಪರಾಧೀ ಪ್ರಜ್ಞೆ ಇರಿಸಿಕೊಳ್ಳಬೇಡಿ. ಕ್ರಮೇಣ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ.

ಪಲಾಯನ ಮಾಡುವ ಬದಲು ನಿಮ್ಮ ಕರ್ತವ್ಯವನ್ನು ಪಾಲಿಸಿ.

ಜೆ. ಚಂದ್ರಶೇಖರ್

ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಲಕ್ಷಣಗಳು

ನೀವು ಬಹು ಬೇಗನೆ ಕೋಪಗೊಳ್ಳುತ್ತೀರಿ ಅಥವಾ ಯಾವುದೇ ವಿಷಯಕ್ಕೂ ಸಿಡುಕುತ್ತೀರಿ.

ನಿಮ್ಮ ಪತ್ನಿ ಮತ್ತು ಮಗುವಿನಿಂದ ದೂರವಿರಲು ಕಾರಣ ಹುಡುಕುತ್ತೀರಿ.

ಹಿಂದಿಗಿಂತ ಹೆಚ್ಚು ಸ್ಮೋಕಿಂಗ್‌ ಮತ್ತು ಡ್ರಿಂಕಿಂಗ್‌ ಮಾಡತೊಡಗುತ್ತೀರಿ.

ಒಮ್ಮೆ ನಿಮ್ಮ ಮಗುವನ್ನು ನೋಡಿದಾಗ ಎಮೋಶನಲ್ ಆಗಿ ಅದನ್ನು ಮುದ್ದಿಸುತ್ತೀರಿ. ಮತ್ತೊಮ್ಮೆ ಇದ್ದಕ್ಕಿದ್ದಂತೆ ಸಿಡುಕುತ್ತಾ ಅದರಿಂದ ದೂರ ಹೋಗುತ್ತೀರಿ.

ಬೇಕೆಂದೇ ಆಫೀಸ್‌ನಿಂದ ತಡವಾಗಿ ಮನೆಗೆ ಬರುತ್ತೀರಿ ಅಥವಾ ಮನೆಯಿಂದ ದೂರಾಗಲು ಬೇರೆ ಊರಿನ ಕೆಲಸವನ್ನು ಹುಡುಕುತ್ತೀರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ