ಪಲ್ಲವಿ ಪ್ರಥಮ ದರ್ಜೆ ವಿಶ್ರಾಂತಿ ಕೋಣೆಯಲ್ಲಿ ಕುಳಿತು ರೈಲಿಗಾಗಿ ಕಾಯುತ್ತಿದ್ದಳು. ರೈಲು ಬರುವುದಕ್ಕೆ ಇನ್ನೂ 2 ಗಂಟೆ ಬಾಕಿ ಇತ್ತು. ಅವಳು ಸಮ್ಮೇಳನಕ್ಕಾಗಿ ಬಂದಿದ್ದಳು. ಸಮ್ಮೇಳನ 4 ಗಂಟೆಗೆ ಮುಗಿದುಹೋಗಿತ್ತು. ನಗರವನ್ನು ಸುತ್ತಾಡುವ ಮನಸ್ಸು ಇರಲಿಲ್ಲ. ಅವಳ ಜೊತೆ ಬಂದಿದ್ದವರು ಊರು ಸುತ್ತಲು ಹೋಗಿದ್ದರು. ವಿಶ್ರಾಂತಿ ಕೋಣೆಯಲ್ಲಿ ಬೇರಾರೂ ಇರಲಿಲ್ಲ. ಆದ್ದರಿಂದ ಅವಳು ನಿಶ್ಚಿಂತಳಾಗಿದ್ದಳು. ಆಗ ಒಬ್ಬ ಕೂಲಿ ಸಾಮಾನು ಹೊತ್ತುಕೊಂಡು ಬಂದ. ಏಕಾಂತಕ್ಕೆ ಭಂಗ ಬರುವುದು ಅವಳಿಗಿಷ್ಟವಿರಲಿಲ್ಲ. ಆದರೆ ಸಾರ್ವಜನಿಕ ಸ್ಥಳದಲ್ಲಿ ಯಾರ ಪ್ರವೇಶವನ್ನೂ ತಡೆಯುವುದಕ್ಕಾಗುವುದಿಲ್ಲ. ಕೂಲಿಯ ಹಿಂದೆ ಒಳಗೆ ಬಂದ ವ್ಯಕ್ತಿಯನ್ನು ನೋಡಿ ಪಲ್ಲವಿಗೆ ಮುಜುಗರವಾಯಿತು. ಅದ್ಯಾರೂ ಅಲ್ಲ, ನರೇಂದ್ರ! ಪಲ್ಲವಿಯನ್ನು ನೋಡಿ ಅವನಿಗೂ ಒಂದು ರೀತಿಯಾಯಿತು. ಒಂದು ಕ್ಷಣ ತಡೆದು ನರೇಂದ್ರ ಔಪಚಾರಿಕವಾಗಿ “ಹೇಗಿದ್ದೀಯ?” ಎಂದು ಕೇಳಿದ.

“ಚೆನ್ನಾಗಿದ್ದೀನಿ,“ ಪಲ್ಲವಿ ಸಪ್ಪೆ ನಗು ಬೀರುತ್ತಾ ಹೇಳಿದಳು. ಯಾವುದೋ ಹಳೆಯ ಭಾವನೆಗಳಿಂದ ಪಲ್ಲವಿಯ ಮನದಲ್ಲಿ ಸಂಗೀತ ಕೇಳಿದಂತಾಯಿತು. ಆದರೆ ಅವಳಿಗೆ ಅದರ ಮಾಧುರ್ಯವನ್ನು ಅನುಭವಿಸಲಾಗಲಿಲ್ಲ. ಆತನ ಹಿಂದಿನಿಂದ ಒಬ್ಬ ಯುವತಿ ಮತ್ತು 3-4 ವರ್ಷದ ಒಬ್ಬ ಮುದ್ದಾದ ಬಾಲಕನೂ ಒಳಬಂದರು. ನರೇಂದ್ರ ಹೆಸರಿಗೆಂಬಂತೆ ಪರಿಚಯ ಮಾಡಿಸಿದ. “ಶೀಲಾ, ಇವರನ್ನು ಪರಿಚಯ ಮಾಡಿಕೋ, ನನ್ನ ಹಳೇ ಸ್ನೇಹಿತೆ ಪಲ್ಲವಿ”

ಶೀಲಾ ನಮಸ್ಕರಿಸಿದಳು, ನಂತರ ಸಾಮಾನನ್ನು ಒಂದು ಕಡೆ ಇಡುವುದರಲ್ಲಿ ಮಗ್ನಳಾದಳು. ಹಿಂದೆ ತಾನು ನರೇಂದ್ರನಿಗೆ ಸರ್ವಸ್ವ ಆಗಿದ್ದವಳು ಇಂದು ಬರೀ ಹಳೆ ಸ್ನೇಹಿತೆಯಾಗಿದ್ದೇನೆ ಎಂದು ತಿಳಿದು ಪಲ್ಲವಿಗೆ ಒಂದು ರೀತಿಯ ಆಘಾತವಾಯಿತು. ಆಮೇಲೆ ಅವಳಿಗೆ ಸರಿಯಾಗೇ ಹೇಳಿದ ಅನ್ನಿಸಿತು. ಈಗ ಅವರಿಬ್ಬರ ನಡುವೆ ಉಳಿದಿರುವ ಸಂಬಂಧವಾದರೂ ಏನು? ಅವಳು ತನ್ನನ್ನು ಶೀಲಾಳಿಗೆ ಹೋಲಿಸಿ ನೋಡಿದಳು. ಅವಳಿಗೆ ಅಸೂಯೆಯಾಯಿತು. ನೆಪ ಮಾತ್ರಕ್ಕೆ ಅವಳು ಪುಸ್ತಕ ಓದುವಂತೆ ಇದ್ದಳು. ಆದರೆ ಅವಳ ಮನಸ್ಸು ಅವಳ ಹತೋಟಿ ಮೀರಿ ಕಳೆದು ಹೋದ ಕಾಲದತ್ತ ಹೋಯಿತು.

ಪಲ್ಲವಿ ಎಂ.ಎ ಕಡೆಯ ವರ್ಷದಲ್ಲಿದ್ದಳು. ಆಗ ಒಂದು ಮದುವೆಯ ಸಮಾರಂಭದಲ್ಲಿ ಅವಳ ರೂಪವನ್ನು ಮೆಚ್ಚಿಕೊಂಡು ಮದುಮಗಳ ಸೋದರತ್ತೆ, ತಮ್ಮ ಮಗ ನರೇಂದ್ರನಿಗೆ ಕೇಳಿದರು. ಸುಂದರ, ಸುಶೀಲ, ಸರ್ಕಾರಿ ಹುದ್ದೆಯಲ್ಲಿದ್ದ ನರೇಂದ್ರ ತಂದೆತಾಯಿಗೆ ಒಬ್ಬನೇ ಮಗ. ಇಷ್ಟು ಒಳ್ಳೆಯ ವರ ತಾನಾಗೇ ಬಂದಿರುವಾಗ ಪಲ್ಲವಿಯ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಮಗಳು ಬೇರೆ ಮನೆಯಲ್ಲಿ ಹೇಗಿರುತ್ತಾಳೋ ಎಂಬ ಚಿಂತೆ. ಈಗ ಅವಳು ತನ್ನ ಸಾಮಾನನ್ನೇ ಸರಿಯಾಗಿ ಇಟ್ಟುಕೊಳ್ಳುವುದಿಲ್ಲ. ಅಂತಹವಳು ಸಂಸಾರವನ್ನು ತೂಗಿಸಬಲ್ಲಳೇ? ಇತ್ತ ಪಲ್ಲವಿಯ ಮನಸ್ಸೂ ಹಾಗೇ ಚಿಂತಿಸುತ್ತಿತ್ತು. ನರೇಂದ್ರನಂತಹ ಪತಿ ಸಿಕ್ಕಿದರೆ ಅವಳ ಕನಸುಗಳೆಲ್ಲಾ ಸಾಕಾರವಾದಂತೆ. ಆದರೆ ತಾಯಿ ಒಬ್ಬಳೇ ಇರಬೇಕಾಗುತ್ತಲ್ಲ ಅನ್ನುವ ಚಿಂತೆ. ಅವಳಿಗೆ ಬುದ್ಧಿ ತಿಳಿದಾಗಿನಿಂದ ಅವಳು ಮತ್ತು ತಾಯಿ ಇಬ್ಬರೇ ಇರುತ್ತಿದ್ದುದು. ಅಪ್ಪನ ಮುಖದ ನೆನಪೂ ಅವಳಿಗಿಲ್ಲ.

ನಿಶ್ಚಿತಾರ್ಥದ ದಿನ ಬಂತು. ಬಂಧು ಮಿತ್ರರ ಗುಂಪಿನ ನಡುವೆ ಸಮಯ ನೋಡಿಕೊಂಡು ನರೇಂದ್ರ ಪಲ್ಲವಿಯನ್ನು “ನಾನು ನಿನಗೆ ಫೋನ್‌ ಮಾಡಬಹುದಾ?” ಎಂದು ಕೇಳಿದ.

ಪಲ್ಲವಿ ನಾಚಿಕೆಯಿಂದ ಮುಗುಳ್ನಕ್ಕು ಒಪ್ಪಿಗೆ ಸೂಚಿಸಿದಳು. ಅಂದು ರಾತ್ರಿ ಪಲ್ಲವಿಯ ಕನಸುಗಳ ತುಂಬಾ ನರೇಂದ್ರನೇ! ಮರುದಿನ ಬೆಳಗಿನಿಂದಲೇ ಅವಳು ಫೋನಿನ ನಿರೀಕ್ಷೆ ಮಾಡುತ್ತಿದ್ದಳು. ಯಾವಾಗ ಪೋನ್‌ ಗಂಟೆ ಬಾರಿಸಿದರೂ ಎಲ್ಲಾ ಕೆಲಸ ಬಿಟ್ಟು ಪಲ್ಲವಿ ಓಡಿ ಬರುತ್ತಿದ್ದಳು. ಕೆಲವು ದಿನಗಳು ತಾಯಿ ಸುಮ್ಮನಿದ್ದಳು. ಒಂದು ದಿನ ಫೋನ್‌ ಬರುತ್ತಲೇ ಅವಳು ಓಡಿದಾಗ ತಾಯಿಗೆ ಇದ್ದಕ್ಕಿದಂತೆ ಸಿಟ್ಟು ಬಂತು. ಫೋನ್‌ ನರೇಂದ್ರನದಾಗಿತ್ತು. ಆದರೆ ತಾಯಿಯ ಹಾಳಾದ ಮೂಡ್‌ ನೋಡಿ, ಪಲ್ಲವಿಗೆ ಏನೂ ತಿಳಿಯದಂತಾಯಿತು.

ತಾಯಿ ಹೇಳುತ್ತಿದ್ದಳು, “ನನ್ನನ್ನು ಬಿಟ್ಟು ಹೋಗುವುದಕ್ಕೆ ನಿನಗೆ ಸ್ವಲ್ಪವೂ ದುಃಖವಿಲ್ಲ. ಒಂದು ಸಲ ನರೇಂದ್ರನನ್ನು ಭೇಟಿಯಾಗಿದ್ದಕ್ಕೆ ಎಲ್ಲವೂ ಮರೆತು ಅವನ ನೆನಪಲ್ಲೇ ಕಳೆದುಹೋಗಿದೀಯ!”

ಪಲ್ಲವಿಯ ಹಾರಾಡುತ್ತಿದ್ದ ಆಕಾಂಕ್ಷೆಗಳು ರೆಕ್ಕೆ ಕತ್ತರಿಸಿದ ಹಕ್ಕಿಯಂತೆ ನೆಲದ ಮೇಲೆ ಉರುಳಿದವು. ತನ್ನಲ್ಲೇ ಮುಳುಗಿಹೋಗಿದ್ದ ಪಲ್ಲವಿಗೆ ತನ್ನ ಚಡಪಡಿಕೆ ಮತ್ತು ನರೇಂದ್ರ ಮತ್ತೆ ಮತ್ತೆ ಫೋನ್‌ ಮಾಡುವುದು ತಾಯಿಗೆ ಇಷ್ಟವಾಗುತ್ತಿಲ್ಲ, ಅನ್ನುವುದು ಗೊತ್ತಾಯಿತು.

ಆದ್ದರಿಂದ ನರೇಂದ್ರನ ಫೋನ್‌ ಬಂದಾಗ ಸ್ವಲ್ಪ ದಿನಗಳ ನಂತರ ಫೋನ್‌ ಮಾಡುವಂತೆ ಹೇಳಿದಳು. ತಾಯಿಯ ದುಃಖ ಅವಳಿಗೆ ಅರ್ಥವಾಗುತ್ತಿತ್ತು. ಬಾಲ್ಯದಿಂದ ಇದುವರೆಗೂ ಆಸೆಗಳನ್ನು ಅದುಮಿಟ್ಟು ತನ್ನ ಸೀಮಿತ ವರಮಾನದಲ್ಲೇ ತಾಯಿ ಪಲ್ಲವಿಯ ಪ್ರತಿಯೊಂದು ಇಚ್ಛೆಯನ್ನೂ ಪೂರೈಸುತ್ತಿದ್ದಳು. ಗೆಳತಿ ಮಧುವಿನ ಜನ್ಮದಿನದ ಪಾರ್ಟಿಗಾಗಿ ಅವಳು ಹೋಗಬೇಕಾಗಿತ್ತು. ಅಲ್ಲಿ ತನ್ನ ಗೆಳತಿಯರೆಲ್ಲಾ ಹೊಸ ಫ್ರಾಕ್‌ಗಳನ್ನು ಹಾಕಿಕೊಂಡು ಬರುತ್ತಾರೆ. ತಾನು ಮಾತ್ರ ಹಳೆಯ ಫ್ರಾಕ್‌ ಹಾಕಿಕೊಂಡು ಹೋಗಬೇಕು ಎಂದು ಅವಳು ಒಂದು ಸಲ ಮಾತ್ರ ಹೇಳಿದ್ದಳು. ತಕ್ಷಣ ತಾಯಿ ಹೊಸ ಬಟ್ಟೆ ತಂದು ಇಡೀ ರಾತ್ರಿ ಕುಳಿತು ಅವಳಿಗೆ ಫ್ರಾಕನ್ನು ಹೊಲಿದಳು. ಪಾರ್ಟೀಲಿ ಅವಳು ಎಲ್ಲರಿಗಿಂತ ಚೆನ್ನಾಗಿ ಕಾಣುತ್ತಿದ್ದಳು.

ಕಾಲೇಜಿಗೆ ಬರುವ ಹೊತ್ತಿಗೆ ತಾಯಿ ಅವಳಿಗೆ ಆಪ್ತ ಸ್ನೇಹಿತೆಯಂತಾಗಿದ್ದಳು. ಇಡೀ ದಿನದ ಘಟನೆಗಳ ಬಗ್ಗೆ ಹೇಳದಿದ್ದರೆ ಅವಳಿಗೆ ನಿದ್ರೆಯೇ ಬರುತ್ತಿರಲಿಲ್ಲ. ಒಂದು ದಿನ ಕಾಲೇಜಿನಿಂದ ಬಂದಾಗ ತಾಯಿ ಮನೆಯಲ್ಲಿ ಇರಲಿಲ್ಲ. ಪಲ್ಲವಿಗೆ ತುಂಬಾ ಕೋಪ ಬಂದಿತ್ತು. “ಅಮ್ಮಾ, ನಿನಗೆ ಗೊತ್ತಲ್ಲಾ ನೀನಿಲ್ಲದೇ ನಾನು ಊಟ ಮಾಡೋದಿಲ್ಲ ಅಂತ, ಮತ್ಯಾಕೆ ನೀನು ಹೊರಗೆ ಹೋಗಿದ್ದೆ?” ತಾಯಿ ಮನೆಗೆ ಬಂದಾಗ ಪಲ್ಲವಿ ಕೇಳಿದಳು.

ಅಂದಿನಿಂದ ಪಲ್ಲವಿ ಮನೆಗೆ ಬರುವ ಹೊತ್ತಿಗೆ ತಾಯಿ ಎಲ್ಲಿಗೂ ಹೋಗುತ್ತಿರಲಿಲ್ಲ. ಮಗಳು ಈಗ ನರೇಂದ್ರನ ನೆನಪಿನಲ್ಲಿ ಮುಳುಗಿ ಹೋದರೆ ಅವಳಿಗೆ ಬೇಸರವಾಗುವುದು ಸಹಜ.

ನರೇಂದ್ರನ ಫೋನ್‌ ಬಂದಾಗೆಲ್ಲಾ ಪಲ್ಲವಿ ತಾಯಿಯನ್ನು ಕರೆಯುತ್ತಿದ್ದಳು. ಪಲ್ಲವಿಯ ಪರೀಕ್ಷೆ ಆರಂಭವಾಗುವುದರಲ್ಲಿತ್ತು. ನರೇಂದ್ರ ವಿಶ್‌ ಮಾಡಲು ಫೋನ್‌ ಮಾಡಿದ. ತಾಯಿ ಫೋನ್‌ ಎತ್ತಿಕೊಂಡಳು. “ನೋಡು ನರೇಂದ್ರ, ನಾಳೆಯಿಂದ ಪಲ್ಲವಿಗೆ ಪರೀಕ್ಷೆ ಇದೆ. ನೀನು ಹೀಗೆ ಫೋನ್‌ ಮಾಡ್ತಿದ್ದರೆ ಅವಳಿಗೆ ಓದುವುದರಲ್ಲಿ ಮನಸ್ಸಿರುವುದಿಲ್ಲ,” ಎಂದಳು.

ತಿಳಿದವರಿಗೆ ಸನ್ನೆಯೇ ಸಾಕು. ಇದಾದ ನಂತರ ನರೇಂದ್ರ ಮತ್ತೆ ಫೋನ್‌ ಮಾಡಲಿಲ್ಲ. ಆದರೆ ಅವನ ಮನದಲ್ಲಿ ಏನೋ ಗಂಟು ಸಿಕ್ಕಿಕೊಂಡ ಹಾಗಾಯಿತು. ಮದುವೆ ದಿನ ಸಮೀಪಿಸಿತು. ತಾಯಿ ತನ್ನ ಸಾಮರ್ಥ್ಯ ಮೀರಿ ಸಿದ್ಧತೆ ಮಾಡಿದ್ದಳು. ಹಗಲು ರಾತ್ರಿಯ ಪರಿವೆ ಇಲ್ಲದೆ ಕೆಲಸ ಮಾಡಿದಳು. ಮದುವೆಯ ಮಹೂರ್ತ ಬಂತು. ನರೇಂದ್ರ ದಿಬ್ಬಣದೊಂದಿಗೆ ಬಂದ. ಬೀಳ್ಕೊಡುವ ಸಮಯ ಎಂಥವರ ಮನಸ್ಸನ್ನೂ ಕರಗಿಸಿಬಿಡುತ್ತೆ. ಪಲ್ಲವಿ ಮತ್ತು ಅವಳ ತಾಯಿಗೆ ಬೇರೆಯಾಗುವುದು ಬಹಳ ಕಷ್ಟವಾಗಿತ್ತು. ತಾಯಿ ಮಗಳ ಅಗಲುವಿಕೆ ನೆನೆದು ಮೂರ್ಛಿತಳಾಗುತ್ತಿದ್ದಳು. ತಾಯಿ ಒಬ್ಬಳೇ ಇರಬೇಕಲ್ಲ ಎಂದು ಪಲ್ಲವಿ ವ್ಯಥೆ ಪಡುತ್ತಿದ್ದಳು.

ಪಲ್ಲವಿ ಅತ್ತೆ ಮನೆಗೆ ಬಂದಳು. ಹೊಸ ಸಂಸಾರ ಪಲ್ಲವಿಗೆ ಸಂತೋಷ ತಂದಿತು. ಅತ್ತೆ ಮನೆಯಲ್ಲಿ ಎಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅತ್ತೆ, ಮಾವ, ನರೇಂದ್ರ ಎಲ್ಲರೂ. 2 ದಿನಗಳ ನಂತರ ಬಂದ ನೆಂಟರೆಲ್ಲಾ ಹೋದ ಮೇಲೆ ನರೇಂದ್ರ ಊಟಿಗೆ ಹೋಗುವ ಕಾರ್ಯಕ್ರಮ ಹಾಕಿದ. ಹೊರಡುವ ಹಿಂದಿನ ದಿನ ಅವನು ಅತ್ತೆಗೆ ಫೋನ್‌ ಮಾಡಿ ವಿಷಯ ತಿಳಿಸಿದ. ಆಕೆ ಊಟಿ ಬೇಡ, ಮುಂಬೈಗೆ ಹೋಗಿ ಎಂದು ಹೇಳಿದರು. ಟಿಕೇಟ್‌ ರಿಸರ್ವ್ ಆಗಿದೆ ಎಂದು ನರೇಂದ್ರ ತಿಳಿಸಿದ್ದಕ್ಕೆ ಅವಳು ಪಲ್ಲವಿಗೆ ಬಹಳ ಬೇಗ ಶೀತವಾಗುತ್ತದೆ ನಿನಗೇನು ಗೊತ್ತು ಎಂದು ಹಟ ಹಿಡಿದಳು. ನರೇಂದ್ರ ಟಿಕೆಟ್‌ ವಾಪಸ್‌ ಮಾಡಿ ಮುಂಬೈಗೆ ಹೋಗಬೇಕಾಯಿತು. ಆದರೆ ಈ ಪ್ರಸಂಗ ಅತ್ತೆಯ ಮನೆಯಲ್ಲಿನ ಸಂತೋಷ ಉಲ್ಲಾಸದ ವಾತಾವರಣದಲ್ಲಿ ಕಹಿಭಾವನೆ ಉಂಟು ಮಾಡಿತು. ಪಲ್ಲವಿಯ ತಾಯಿ ಇವರ ಮನೆ ವಿಷಯದಲ್ಲಿ ತಲೆ ಹಾಕಿದ್ದು ಯಾರಿಗೂ ಇಷ್ಟವಿಲ್ಲವೆನ್ನುವುದು ಅವರ ಮುಖ ಮುದ್ರೆಗಳೇ ಹೇಳುತ್ತಿದ್ದವು.

ಪಲ್ಲವಿಯ ಅತ್ತೆಯಂತೂ, “ಅತ್ತೆ ಆದವಳು ಮಗಳು ಅಳಿಯನ ವಿಷಯಕ್ಕೆ ಬರಬಾರದು,” ಎಂದು ಮೆಲ್ಲಗೆ ಹೇಳಿದಳು. ಊರಿಂದ ಬಂದ ಮೇಲೆ ನರೇಂದ್ರನಿಗೆ ಇನ್ನೂ ಒಂದು ವಾರ ರಜಾ ಬಾಕಿ ಇತ್ತು. ಆದರೆ ಪಲ್ಲವಿಯ ತಾಯಿಯ ಆಗ್ರಹದಿಂದ ಅವಳಿಗೆ ವಾಪಸ್‌ ಹೋಗಲು ಮನ ತುಡಿಯುತ್ತಿತ್ತು. ತಾಯಿ ಮತ್ತೆ ಮತ್ತೆ ಫೋನ್‌ ಮಾಡುತ್ತಿದ್ದರಿಂದ ಅವಳು ಹಠ ಹಿಡಿದು ತಾಯಿ ಮನೆಗೆ ಹೋದಳು. ಇದು ಬಹುಶಃ ಅವಳು ಮಾಡಿದ ಮೊದಲನೆ ತಪ್ಪು. ಇದರ ಅರಿವು ಅವಳಿಗೆ ಈಗಾಗುತ್ತಿದೆ.

ತವರಿಗೆ ಬಂದು ಅವಳು ಮೊದಲಿನಂತೆ ಮಾತಿನ ಮಲ್ಲಿಯಾದಳು. ಅವಳ ಮಾತುಗಳ ವಿಷಯ ಬದಲಾಗಿತ್ತು. ಹೆಚ್ಚಾಗಿ ನರೇಂದ್ರ, ಅತ್ತೆ ಮತ್ತು ಮಾವನನ್ನು ಹೊಗಳುತ್ತಿದ್ದಳು, “ಅಮ್ಮಾ, ಅತ್ತೆ ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಾರೆ ಗೊತ್ತಾ…. ಅವರು ಅತ್ತೆಗಿಂತ ಅಮ್ಮ ಅಂತ ಅನ್ನಿಸುತ್ತೆ. ಅಮ್ಮಾ, ನಾನು ಒಂದು ದಿನ ಹಾಲು ಕುಡಿಯಲು ಮರೆತಾಗ ಅವರೇ ಹಾಲು ತಗೊಂಡು ಬಂದು ನನಗೆ ಕುಡಿಸಿದರು.”

ಇದನ್ನೆಲ್ಲಾ ಕೇಳಿ ತಾಯಿಗೆ ಸಂತೋಷವಾಗುತ್ತದೆಂದು ಅವಳಿಗೆ ಅನ್ನಿಸಿತು. ಆದರೆ ತಾಯಿಯ ಮುಖ ಇಳಿದುಹೋಯಿತು. ಪುಟ್ಟ ಹುಡುಗಿಯ ಕೈಯಿಂದ ಅವಳಿಗೆ ಬಹಳ ಇಷ್ಟವಾದ ಗೊಂಬೆಯನ್ನು ಕಿತ್ತುಕೊಂಡಾಗ ಆಗುವ ಸ್ಥಿತಿ ಅವಳದಾಗಿತ್ತು. ಆದರೆ ತನ್ನ ಹೊಸ ಸಂಸಾರದಲ್ಲಿ ಮುಳುಗಿದ್ದ ಪಲ್ಲವಿಗೆ ತಾಯಿಯ ವ್ಯಥೆ ಅನುಭವಕ್ಕೆ ಬರಲಿಲ್ಲ.

ಒಂದು ದಿನ ಮಾತನಾಡುತ್ತಾ ಪಲ್ಲವಿ, “ಹೋದ ವಾರ ಅತ್ತೆಗೆ ತಲೆನೋವಿತ್ತು. ನಾನೇ ಅಡುಗೆ ಮಾಡಿದ್ದೆ. ಮಾವ ಮತ್ತು ಇವರು ಬೆರಳು ನೆಕ್ಕಿದರು, ಅತ್ತೆ, `ನಾನೀಗ ನಿಶ್ಚಿಂತಳಾಗಿ ಇದೀನಿ. ನನ್ನ ಸೊಸೆ ಸೊಗಸಾಗಿ ಅಡುಗೆ ಮಾತ್ತಾಳೆ,’ ಎಂದರು.”

ತಾಯಿ ಬೆರಗಾದಳು, “ಏನು, ಅವರು ಈಗಲೇ ನಿನ್ನಿಂದ ಅಡುಗೆ ಮಾಡಿಸ್ತಿದಾರಾ? ಅದಕ್ಕೆ ನಾನು ನಿನಗೇನೂ ಗೊತ್ತಾಗಲ್ಲ ಅಂತ ಹೇಳೋದು, ನೋಡ್ತಾ ಇರು, ಇದೇ ರೀತಿ ಹೊಗಳುವ ನೆಪದಲ್ಲಿ ನಿನ್ನಿಂದ ಎಲ್ಲಾ ಕೆಲಸಾನೂ ಮಾಡಿಸ್ತಾರೆ.”

ತಾಯಿ ಮಾತು ಕೇಳಿ ಮೊದಲ ಸಲ ಪಲ್ಲವಿ ಮನಸ್ಸು ಶಂಕೆಗೊಳಗಾಯಿತು, `ಅಮ್ಮ ಹೇಳ್ತಿರೋದು ಸರಿಯೇ ಇರಬಹುದು, ಏಳಕ್ಕೇ ಆಗದಂತಹ ತಲೆ ನೋವು ಅತ್ತೆಗೆ ಬಂದಿತ್ತಾ? ಅಮ್ಮ ಎಷ್ಟು ತಲೆನೋವಿದ್ದರು ನನ್ನ ಕೈಯಲ್ಲಿ ಯಾವ ಕೆಲಸಾನೂ ಮಾಡಿಸ್ತಿರಲಿಲ್ಲ,’ ಅಂದುಕೊಂಡಳು.

ಆಮೇಲೆ ಒಂದು ದಿನ, “ನರೇಂದ್ರ ಸಂಬಳಾನ ಯಾರ ಕೈಗೆ ಕೊಡ್ತಾನೆ?” ಎಂದು ಕೇಳಿದಳು.

ಪಲ್ಲವಿ ಹೇಳಿದಳು, “ಅತ್ತೆ ಕೈಗೆ”

ತಾಯಿಗೆ ಚಿಂತೆಯಾಯಿತು. “ನಿಮ್ಮತ್ತೆ ಮಗನ್ನ ಪೂರ್ಣ ಕೈಯಲ್ಲಿಟ್ಟುಕೊಂಡಿದ್ದಾರೆ ಅನ್ನಿಸುತ್ತೆ. ಈಗ ನೀನು ಬಂದಿದೀಯ. ನಿನಗೆ ಅವನ ಮೇಲೆ ಹಕ್ಕಿದೆ. ಮನೆ ಖರ್ಚಿಗೆ ಅಂತ ಹಣ ತಗೋಳೋದು ಬೇರೆ ಮಾತು.”

ಪಲ್ಲವಿಯ ಪ್ರೀತಿ ಅಲುಗಾಡತೊಡಗಿತು. ಮನಸ್ಸಿನಲ್ಲಿ ಮಾತು ಜಾಗೃತಗೊಂಡಿತು. ಅತ್ತೆಮನೆಗೆ ಹಿಂದಿರುಗಿದ ಪಲ್ಲವಿ ಎಚ್ಚರಿಕೆಯಿಂದಿರುತ್ತಿದ್ದಳು. ಅವಳ ದೃಷ್ಟಿಕೋನ ಬದಲಾಯಿತು. ಅವಳು ನರೇಂದ್ರನ ಜೊತೆ ಯಾವುದಾದರು ವಿಷಯಕ್ಕೆ ತನ್ನ ಹಕ್ಕಿಗಾಗಿ ಜಗಳವಾಡುತ್ತಿದ್ದಳು. ಒಮ್ಮೊಮ್ಮೆ ಅತ್ತೆ ಮಾತನ್ನು ಕೇಳುತ್ತಿರಲಿಲ್ಲ. ಇದರಿಂದ ಅತ್ತೆಯ ಸ್ನೇಹ ಕಡಿಮೆಯಾಗತೊಡಗಿತು. ಏನಾದರೂ ಬೇಕಿದ್ದರೆ ನರೇಂದ್ರನ ಹತ್ತಿರ ಹೇಳುತ್ತಿದ್ದಳು. ಪಲ್ಲವಿಯ ಜೊತೆ ಅಗತ್ಯವಿದ್ದಷ್ಟು ಮಾತ್ರ ಮಾತನಾಡುತ್ತಿದ್ದಳು. ಆಫೀಸಿನಿಂದ ಬಂದ ಮೇಲೆ ತಾಯಿಯ ಬಳಿ ಕುಳಿತು ಮಾತನಾಡಿ ನಂತರ ಪಲ್ಲವಿಯ ಬಳಿ ಬರುವುದು ನರೇಂದ್ರನ ಅಭ್ಯಾಸವಾಗಿತ್ತು.

ಒಂದು ದಿನ ನರೇಂದ್ರ ಅಫೀಸಿನಿಂದ ಬಂದವನೇ ನೇರವಾಗಿ ತಾಯಿಯ ಬಳಿ ಹೋದ ಮತ್ತು 2 ಪ್ಯಾಕೆಟ್‌ಗಳನ್ನು ಕೊಟ್ಟು, “ಒಂದು ನಿನಗೆ, ಇನ್ನೊಂದು ಪಲ್ಲವಿಗೆ,” ಎಂದ. ತಾಯಿ ತಕ್ಷಣ ಪಲ್ಲವಿಯನ್ನು ಕರೆದು ನರೇಂದ್ರ 2 ಸೀರೆ ತಂದಿದ್ದಾನೆ ನಿನಗೆ ಇಷ್ಟವಾದುದನ್ನು ತಗೊ ಎಂದಳು. ಆದರೆ ಪಲ್ಲವಿಯ ಮನಸ್ಸು ತನ್ನ ತಾಯಿಯ ದೃಷ್ಚಿಯಿಂದ ನೋಡುತ್ತಿತ್ತು. ತಾಯಿ ಹೇಳುತ್ತಿದ್ದುದು ಸರಿ ಎನಿಸಿತು. ಅತ್ತೆ ತುಂಬಾ ಅತಿ ಮಾಡಿಕೊಂಡುಬಿಟ್ಟಿದ್ದಾರೆ. ನರೇಂದ್ರನಿಗೆ ನೀನೇ ಕೊಡು ಅಂತ ಹೇಳಲಿಲ್ಲ. ಪಲ್ಲವಿ ಸೀರೆ ತೆಗೆದುಕೊಳ್ಳಲಿಲ್ಲ. ಇದರಿಂದ ನರೇಂದ್ರನಿಗೆ ಕೋಪ ಬಂತು.

ಪಲ್ಲವಿ ಮೊದಲೇ ಸಿಟ್ಟಾಗಿದ್ದಳು. ಇಬ್ಬರ ನಡುವೆ ಜಗಳವಾಯಿತು. ಇಬ್ಬರ ನಡುವೆ ಅಹಂ ತಲೆ ಎತ್ತಿತು. ಅವಳು ತಕ್ಷಣ ತವರಿಗೆ ಹೋದಳು. ತಾಯಿಗೆ ನರೇಂದ್ರ ಕೋಪ ಮಾಡಿಕೊಂಡಿದ್ದು ಇಷ್ಟವಾಗಲಿಲ್ಲ. ಅವಳು ಮಗಳ ಜೊತೆ ಜೋರಾಗಿ ಮಾತನಾಡಿದವಳೂ ಅಲ್ಲ. ನರೇಂದ್ರ ಅವಳನ್ನು ಕರೆದುಕೊಂಡು ಹೋಗಲು ಬಂದಾಗ ತಾಯಿಯ ಪ್ರೋತ್ಸಾಹದಿಂದ ಪಲ್ಲವಿ ಬರಲು ಒಪ್ಪಲಿಲ್ಲ. ತಾವು ಬೇರೆ ಹೋಗೋಣ ಎಂದು ಹಟ ಹಿಡಿದಳು.

ಕಡೆಗೆ ನರೇಂದ್ರ ಒಪ್ಪಬೇಕಾಯಿತು. ಅವನಿಗಾಗಿದ್ದ ವ್ಯಥೆ ಮುಖದ ಮೇಲೆ ಕಾಣುತ್ತಿತ್ತು. ತನ್ನ ಸ್ವಾತಂತ್ರ್ಯ ಮತ್ತು ಜಯದ ಹೆಮ್ಮೆಯಿಂದ ಬೀಗುತ್ತಿದ್ದ ಪಲ್ಲವಿಗೆ ಇದು ಕಾಣಲಿಲ್ಲ.

ಬೇರೆ ಮನೆ ಮಾಡಿದ ಮೇಲೆ ಪಲ್ಲವಿ ಮೊದಲಿನ ಪಲ್ಲವಿಯಾದಳು. ಈಗ ಅವಳು ಅಮ್ಮನನ್ನು ಕೇಳದೆ ಅವಳು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ನರೇಂದ್ರ ಪ್ರತಿಯೊಂದಕ್ಕೂ ಅಮ್ಮನನ್ನೇ ಯಾಕೆ ಕೇಳ್ತಿಯಾ? ನಾವು ಸ್ವಾವಲಂಬಿಗಳಾಗೋಣ ಎಂದು ಹೇಳುತ್ತಿದ್ದ, ಕೋಪಿಸಿಕೊಳ್ಳುತ್ತಿದ್ದ. ಆದರೆ ಅವನ ಮಾತು ಗಾಳಿಗೆ ತೂರಿಹೋಗುತ್ತಿತ್ತು.. ಈಗ ಪಲ್ಲವಿ ತಾಯಿ ಹೆಚ್ಚು ಸಮಯ ಇಲ್ಲೇ ಕಳೆಯುತ್ತಿದ್ದಳು. ಪಲ್ಲವಿ ಒಬ್ಬಳಿಗೆ ಸಂಸಾರ ನಿಭಾಯಿಸಲಾರಳು ಎಂದು ಆಕೆಯ ಭಾವನೆಯಾಗಿತ್ತು. ಒಮ್ಮೆ ನರೇಂದ್ರ ಎಲ್ಲಿಗೋ ಹೊರಟಿದ್ದಾಗ ಆಕೆ, “ಕೋಟು ಹಾಕಿಕೋ, ಸ್ವೆಟರ್‌ ಚಳೀನ ತಡೆಯಲ್ಲ.” ಎಂದಿದ್ದಳು.

ಮಾತು ಸಾಮಾನ್ಯವಾಗಿದ್ದರೂ ನರೇಂದ್ರ ಸಿಡುಕಿದ, “ಅತ್ತೆ, ನಾನೇನೂ ಮಗು ಅಲ್ಲ, ನನಗನ್ನಿಸಿದ್ದನ್ನು ಮಾಡ್ತೀನಿ. ನೀವೇನು ಹೇಳಬೇಕಾಗಿಲ್ಲ!”

ಪಲ್ಲವಿ ಮತ್ತು ತಾಯಿ ಅವಾಕ್ಕಾದರು. ನರೇಂದ್ರ ಎಂದೂ ಈ ರೀತಿ ಮಾತನಾಡಿರಲಿಲ್ಲ. ತಾಯಿಗೆ ಯಾರಾದರೂ ಏನಾದರೂ ಅಂದರೆ ಪಲ್ಲವಿ ಸಹಿಸುತ್ತಿರಲಿಲ್ಲ. ಸಂಜೆ ನರೇಂದ್ರ ಬಂದಾಗ ಪಲ್ಲವಿ “ನೀವು ಅಮ್ಮನ ಕ್ಷಮೆ ಕೇಳಿ,” ಎಂದಳು. ನರೇಂದ್ರನಿಗೆ ಸಿಟ್ಟು ಬಂತು., “ನಿನ್ನಮ್ಮನ್ನ ಇನ್ನೂ ಸಹಿಸಿಕೊಳ್ಳಲಾಗಲ್ಲ ನನಗೆ. ಒಬ್ಬರೇ ಅಸಹಾಯಕರಾಗಿದ್ದಾರೆ ಅಂದರೆ ಅವರು ಇಲ್ಲೇ ಇರಲಿ. ಆದರೆ ತಮ್ಮ ಮಿತಿ ಅರಿತುಕೊಳ್ಳಲಿ.”

ಇಬ್ಬರ ಮಧ್ಯೆ ಮತ್ತೆ ಜೋರು ಜಗಳವಾಯಿತು. ಪಲ್ಲವಿಯ ತಾಯಿ ಸ್ವಾಭಿಮಾನಿ. ಆಕೆಗೆ ಅಸಹಾಯಕ ಅಂದಿದ್ದು, ಮನಸ್ಸಿಗೆ ಚುಚ್ಚಿತು. ಆಕೆ ಅವತ್ತೇ ತಮ್ಮ ಮನೆಗೆ ಹೊರಟುಹೋದಳು. ಪಲ್ಲವಿ ಕೂಡ ತಾಯಿಯ ಜೊತೆ ಹೋದಳು. ಅವಳು ನರೇಂದ್ರ ತನ್ನನ್ನು ತಡೆಯುತ್ತಾನೆಂದು ನಿರೀಕ್ಷಿಸಿದಳು. ಆದರೆ ಅವನು ಸುಮ್ಮನಿದ್ದ. ಸ್ವಲ್ಪ ದಿನಗಳ ನಂತರ ಬರುತ್ತಾನೆ ಎಂದು ಆಸೆ ಇತ್ತು. ಆದರೆ ಈ ಸಲ ದಿನ, ವಾರ ಮತ್ತು ತಿಂಗಳು ಕಳೆದವು.

ತಾಯಿಗೆ ಬಹಳ ದುಃಖವಾಗಿತ್ತು. ಮಗಳಿಗೆ, “ನೀನೇ ಹೋಗಮ್ಮ ಪಲ್ಲವಿ,” ಎಂದಳು.

ಪಲ್ಲವಿಯ ಪ್ರೀತಿ ಮತ್ತು ಸ್ವಾಭಿಮಾನಕ್ಕೆ ಪೆಟ್ಟಾಗಿತು. ಹೀಗೆ 7-8 ತಿಂಗಳು ಕಳೆದವು. ಒಂದು ದಿನ ನರೇಂದ್ರ ಬಂದ. ಪಲ್ಲವಿಗೆ ಖುಷಿಯಾಯಿತು. ಗಂಡನೇ ಬಂದಿದ್ದಾನೆ ತಕ್ಷಣ ಅವನ ಜೊತೆ ಹೋಗಿಬಿಡುತ್ತೇನೆ ಎಂದು ನಿಶ್ಚಯಿಸಿಕೊಂಡಳು. ಅವಳೂ ಗಂಡನ ಮನೆಗೆ ಹೋಗಲು ಕಾತರಳಾಗಿದ್ದಳು. ತಾನೇ ಹೋಗಲು ಅಹಂ ಅಡ್ಡ ಬರುತ್ತಿತ್ತು.

ನರೇಂದ್ರ ಕುಳಿತುಕೊಂಡ. ಅವನಿಗೆ ನೀರು ತರಲೆಂದು ಪಲ್ಲವಿ ಎದ್ದಳು. ಆಗ ನರೇಂದ್ರ ಗಂಭೀರವಾಗಿ ಹೇಳಿದ, “ಉಪಚಾರವೇನೂ ಬೇಡ. ಇಲ್ಲಿ ಸೈನ್‌ ಮಾಡು ಸಾಕು,” ಎಂದ. ಅವನು ಯಾವ ಭಾವನೆಯೂ ಇಲ್ಲದೆ ವಿಚ್ಛೇದನದ ಕಾಗದವನ್ನು ಮೇಜಿನ ಮೇಲಿಟ್ಟ. ಪಲ್ಲವಿಗೆ ಕೆಲವು ಕ್ಷಣ ಏನು ಹೇಳಲು ತೋಚಲಿಲ್ಲ. ಅವಳು ಯೋಚಿಸಿದ್ದೇನು, ಆಗಿದ್ದೇನು? ಅವಳು ಏನಾದರೂ ಯೋಚಿಸುವ ಮೊದಲೇ ಅಹಂ ಅಡ್ಡ ಬಂತು. ನರೇಂದ್ರ ಇಷ್ಟು ನಿಷ್ಠುರನಾಗಿರುವಾಗ ಇಂಥ ಸಂಬಂಧ ಯಾಕೆ? ಆದ್ದರಿಂದ ಪಲ್ಲವಿ ಏನೂ ಯೋಚಿಸದೆ ಸಹಿ ಮಾಡಿದಳು.

ತಾಯಿಗೆ ವಿಷಯ ತಿಳಿದು ತಲೆ ಮೇಲೆ ಕೈ ಹೊತ್ತು ಕುಳಿತಳು. ಆಕೆಗೆ ಮಗಳು ಸುಖವಾಗಿರಬೇಕೆನ್ನುವ ಹಂಬಲ ಪ್ರತಿ ಕ್ಷಣ ಇರುತ್ತಿತ್ತು. ಅತಿ ಮೋಹ ಮತ್ತು ಎಚ್ಚರಿಕೆಗಳು ಪಲ್ಲವಿಗೆ ಶಾಪವಾಗಿತ್ತು. ಪಲ್ಲವಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಸೇರಿದಳು. ಈಗ ಅವಳಿಗೆ ಕಾಲೇಜೇ ಜೀವನ. ಅಧ್ಯಯನ ಮತ್ತು ಬೋಧಿಸುವುದರಲ್ಲಿ ತನ್ನ ಪೂರ್ತಿ ಸಮಯ ಕಳೆಯುತ್ತಿದ್ದಳು. ವಿಚ್ಛೇದನವಾಗಿದ್ದು ತಾಯಿಗೆ ಬಹಳ ಪಶ್ಚಾತ್ತಾಪ ಮತ್ತು ದುಃಖ ಉಂಟುಮಾಡಿತ್ತು. ದುಃಖ ಸಹಿಸಲಾಗದೆ ಆಕೆ ತೀರಿಕೊಂಡಳು. ಯಾರಿಗಾಗಿ ಪಲ್ಲವಿ ಗಂಡನನ್ನು ದೂರ ಮಾಡಿದಳೋ ಆಕೆಯೇ ದೂರವಾಗಿದ್ದು ವಿಡಂಬನೆಯೇ ಸರಿ. ಕೆಲವರು ಅವಳಿಗೆ ಮರುಮದುವೆಯಾಗಲು ಹೇಳಿದರು. ಆದರೆ ಪಲ್ಲವಿ ಹೃದಯಪೂರ್ವಕವಾಗಿ ನರೇಂದ್ರನನ್ನು ಪ್ರೀತಿಸುತ್ತಿದ್ದಳು. ಈಗ ಸಂಬಂಧ ಕಡಿದು ಹೋದ ಮೇಲೆ ಅವಳಿಗೆ ಸಂಬಂಧಗಳ ಬಗ್ಗೆ ಇದ್ದ ನಂಬಿಕೆಯೇ ಹೊರಟುಹೋಯಿತು.

ನರೇಂದ್ರನ ಸುಖೀ ಕುಟುಂಬ ನೋಡಿ ಅವಳ ಒಣಗಿದ ಗಾಯ ಹಸಿಯಾಯಿತು. ಅವಳು ನರೇಂದ್ರನನ್ನು ಬಹಳ ಪ್ರೀತಿಸುತ್ತಿದ್ದಳು. ತಾಯಿಯನ್ನೂ ಪ್ರೀತಿಸುತ್ತಿದ್ದಳು. ತಾಯಿಗೆ ಮಗಳ ಸಂಸಾರ ಸುಖಕರವಾಗಿರಬೇಕೆಂಬ ಆಸೆ ಇತ್ತು. ನರೇಂದ್ರ ಪಲ್ಲವಿಯನ್ನು ಪ್ರೀತಿಸುತ್ತಿದ್ದ. ಆದರೆ ಬಹುಶಃ ಸಂಬಂಧದ ಸಮೀಕರಣವೇ  ಸ್ವಲ್ಪ ತೊಡಕಾಗಿತ್ತು. ಪಲ್ಲವಿಗೆ ಆ ಸಂಬಂಧಗಳ, ಪ್ರೀತಿಯ ಸಮತೋಲನ ಕಾಪಾಡಿಕೊಳ್ಳಲಾಗಲಿಲ್ಲ. ಅದರೆ ಇವನ್ನು ಅರ್ಥ ಮಾಡಿಕೊಳ್ಳಲು ಸಮಯ ಮೀರಿ ಹೋಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ