ಶೇಖರ್‌ ಅಂದೂ ಸಹ ಆಫೀಸಿಗೆ ತಡವಾಗಿ ಬಂದಿದ್ದ. ಹಾಗೆ ಬಂದವನಿಗೆ ಅಚ್ಚರಿಯಾಗಿತ್ತು. ಆಫೀಸ್‌ ವಾತಾವರಣ ಗಂಭೀರ ಆಗಿರುವಂತೆ ಕಂಡಿತ್ತು. ಎಲ್ಲರೂ ಸೀರಿಯಸ್‌ ಆಗಿ ತಮ್ಮ ಕೆಲಸದಲ್ಲಿ ತೊಡಗಿದ್ದರು. ಸಾಧಾರಣವಾಗಿ ರಾಕೇಶ್‌, ಮಧುಮಿತಾ ಆಫೀಸ್‌ಗೆ ಬಂದು ಕೆಲಕಾಲ ಎಲ್ಲರೊಡನೆ ಹರಟಿ ಬಳಿಕ ಕೆಲಸ ಪ್ರಾರಂಭಿಸುತ್ತಿದ್ದರೂ ಈಗಾಗಲೇ ಬಿಝಿಯಾಗಿದ್ದರು.

ಶೇಖರ್‌ ತನ್ನ ಟೇಬಲ್‌ನಲ್ಲಿ ಕುಳಿತುಕೊಂಡವನೇ ಮೋಹನ್‌ಗೆ ಕೇಳಿದ, “ಏನಿಂದು ಇಷ್ಟೊಂದು ಸೈಲೆಂಟ್‌ ಆಗಿ ಕೆಲಸ ಸಾಗುತ್ತಿದೆ?” ಮೋಹನ್‌ ತಾನೇನೂ ಮಾತನಾಡದೆ ಮ್ಯಾನೇಜರ್‌ ಕೋಣೆಯತ್ತ ಕೈ ತೋರಿಸಿ ಏನೋ ಸನ್ನೆ ಮಾಡಿದ. ಶೇಖರ್‌ಗೆ ಮ್ಯಾನೇಜರ್‌ ಕೋಣೆಯಲ್ಲಿ ಬೇರೆ ಯಾರೋ ಇದ್ದಾರೆನ್ನುವಷ್ಟು ಅರ್ಥವಾಗಿತ್ತು. ಮತ್ತೆ ಕೆಲವು ನಿಮಿಷಗಳಲ್ಲಿ ಶೇಖರ್‌ಗೆ ಮ್ಯಾನೇಜರ್‌ ಕಡೆಯಿಂದ ಕರೆ ಬಂದಿತು. ಅತ್ತ ಹೋದ ಶೇಖರ್‌ಗೆ ವಿ.ಎಲ್. ರಾಜಾರಾಂ, ಮ್ಯಾನೇಜರ್‌ ಎನ್ನುವ ಫಲಕ ಕಾಣಿಸಿತು.

“ಕಮ್ ಇನ್‌….”

ಶೇಖರ್‌ ಒಳಹೋಗುತ್ತಿದ್ದಂತೆ ಸಂಸ್ಥೆಯ ಎಂ.ಡಿ. ಸತೀಶ್‌ ಚಂದ್ರ ಎದುರಿನ ಆಸನದಲ್ಲಿ ಕುಳಿತಿರುವುದು ಕಾಣಿಸಿತು. ಅವರ ಪಕ್ಕದಲ್ಲೇ ರಾಜಾರಾಂ ಆಸೀನರಾಗಿದ್ದರು.

“ಶೇಖರ್‌, ಏಕೆ ನೀವು ಒಂದು ವಾರದಿಂದ ತಡವಾಗಿ ಬರುತ್ತಿದ್ದೀರಿ?”

“ಕ್ಷಮಿಸಿ, ನನ್ನ ತಾಯಿಯ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಅವರಿಗೆ ಹಾರ್ಟ್‌ ಆಪರೇಷನ್‌ಗೆ ಎರಡು ಲಕ್ಷ ಬೇಕು. ಆ ದುಡ್ಡು ಹೊಂದಿಸುವ ಓಡಾಟದಲ್ಲಿ ನನಗೆ ಸರಿಯಾಗಿ ಕೆಲಸಕ್ಕೆ ಬರಲು ಸಾಧ್ಯವಾಗುತ್ತಿಲ್ಲ,” ಎಂದ.

“ಸರಿ, ಆದರೆ ನಮ್ಮ ಸಂಸ್ಥೆಯ ಕೆಲಸ ಮುಖ್ಯ ತಾನೇ? ರಾವ್ಸ್ ಅಂಡ್‌ ರಾವ್ಸ್ ಸಂಸ್ಥೆಯ ಪ್ರಾಜೆಕ್ಟ್ ನ ಫೈನಲ್ ರಿಪೋರ್ಟ್ ಇಂದು ಸಂಜೆ ತಯಾರಿಸಬೇಕೆಂದು ತಿಳಿದಿದೆಯಲ್ಲವೇ?” ಎಂ.ಡಿ. ಸತೀಶ್‌ ಚಂದ್ರ ಕೇಳಿದರು.

“ಹೌದು…. ನಾನದನ್ನು ತಯಾರಿಸಿದ್ದೇನೆ. ಇನ್ನರ್ಧ ಗಂಟೆಯಲ್ಲಿ ಅದನ್ನು ಕೊಡುತ್ತೇನೆ, ಮತ್ತೆ ಇನ್ನು ಮೇಲೆ ಪ್ರತಿ ದಿನ ಬೇಗನೇ ಬರುತ್ತೇನೆ,” ಶೇಖರ್‌ ವಿನೀತನಾಗಿ ನುಡಿದ.

“ಶೇಖರ್‌ ನೀವು ಬಹಳ ಒಳ್ಳೆಯ ಕೆಲಸಗಾರರು. ನೀವು ಇದುವರೆಗೂ ನಮ್ಮ ಸಂಸ್ಥೆಗೆ ಬಹಳಷ್ಟು ಉತ್ತಮ ಪ್ರಾಜೆಕ್ಟ್ ಗಳನ್ನು ತಂದಿದ್ದೀರಿ. ಕೆಲಸದಲ್ಲಿನ ನಿಮ್ಮ ಆಸಕ್ತಿ ಶ್ರದ್ಧೆಗಳು ನನಗೆ ಹಿಡಿಸಿದೆ. ಆದರೆ ಈಗ ನಿಮ್ಮ ಕುಟುಂಬದೊಡನೆ ಕೆಲಸವನ್ನು ತಳುಕು ಹಾಕುತ್ತೀರುವಿರಿ. ಏಕೆ? ಹೀಗೆ ಮಾಡಬೇಡಿ, ” ಎಂದು ಎಂ.ಡಿ. ಹೇಳಿದಾಗ ಶೇಖರ್‌ ಮೌನವಾಗಿ ತಲೆ ಆಡಿಸಿದ.

ಶೇಖರ್‌ ಅಲ್ಲಿಂದ ಹಿಂತಿರುಗಲು ಒಪ್ಪಿಗೆ ಪಡೆದು ತನ್ನ ಟೇಬಲ್ ಬಳಿ ಬಂದ, ಅವನ ಹಿಂದೆಯೇ ಬಂದ ಸತೀಶ್‌ ಚಂದ್ರ, “ಅಂದಹಾಗೆ ನಿಮ್ಮ ತಾಯಿ ಯಾವ ಆಸ್ಪತ್ರೆಯಲ್ಲಿದ್ದಾರೆ?” ಕೇಳಿದರು.

“ಸರ್‌, ನಮ್ಮ ತಾಯಿ ಪೀಪಲ್ಸ್ ಟ್ರೀ ಆಸ್ಪತ್ರೆಯಲ್ಲಿದ್ದಾರೆ. ಡಾ. ಮಧುಸೂದನ್‌ರಿಂದ ಟ್ರೀಟ್‌ಮೆಂಟ್‌ ನಡೆಯುತ್ತಿದೆ.”

ಅಂದೆಲ್ಲ ಶೇಖರ್‌ಗೆ ಕೆಲಸ ನಿರ್ವಹಿಸಲು ಮನಸ್ಸೇ ಇರಲಿಲ್ಲ.

ರಾಕೇಶ್‌ ಕೇಳಿದ, “ಏನಾಯ್ತು? ಎಂದಿನಂತೆ ಇಲ್ಲವಲ್ಲ,” ಎಂದಾಗ ಶೇಖರ್‌ ತನ್ನ ತಾಯಿ ಆರೋಗ್ಯದ ಕುರಿತು ಹೇಳಿದ. ರಾಕೇಶ್‌ತನ್ನ ತಮ್ಮನಿಗೆ ಎಂಜಿನಿಯರಿಂಗ್‌ ಓದಿಸಬೇಕಾದಾಗ ಇದೇ ರೀತಿ ಕಷ್ಟವಾಗಿತ್ತು. ಆಗ ಯಾರೋ ಅನಾಮಧೇಯರಿಂದ ನನಗೆ ಸಹಾಯ ಸಿಕ್ಕಿತು ಎಂದದ್ದನ್ನು ಕೇಳಿ ಶೇಖರ್‌ಗೆ ಅಚ್ಚರಿ ಎನಿಸಿತಾದರೂ ಮತ್ತೆ ಹೆಚ್ಚೇನೂ ಕೇಳಲು ಹೋಗಲಿಲ್ಲ.

ಅಂದು ಸಂಜೆ ನೇರವಾಗಿ ಆಸ್ಪತ್ರೆಗೆ ಹೋದ ಶೇಖರ್‌ಗೆ ಹೇಗೆ ದುಡ್ಡು ಹೊಂದಿಸುವುದೆನ್ನುವುದೇ ತಿಳಿಯದಾಗಿತ್ತು. ಎರಡರಿಂದ ಎರಡೂವರೆ ಲಕ್ಷ ಬೇಕಿತ್ತು. ಯಾರನ್ನು ಕೇಳಿದರೂ ಹಣ ಸಿಕ್ಕಿರಲಿಲ್ಲ. ಹೀಗಿರಲು ತಂದೆಯ ಸೋದರ ಸಂಬಂಧಿ ಶ್ರೀಕಂಠಯ್ಯ ಎನ್ನುವವರು ಮೈಸೂರಿನಲ್ಲಿ ವ್ಯಾಪಾರ ಮಾಡಿಕೊಂಡಿರುವುದು ನೆನಪಿಗೆ ಬಂದಿತು. ಆದರೆ ಕೆಲವು ವರ್ಷಗಳಿಂದ ಅವರು ಶೇಖರ್ ಕುಟುಂಬದವರೊಂದಿಗ ಅಷ್ಟು ಒಳ್ಳೆಯ ಸಂಬಂಧ ಇಟ್ಟುಕೊಂಡಿರಲಿಲ್ಲ. ಆದರೂ ಕಡೆಯ ಪ್ರಯತ್ನ ಎನ್ನುವಂತೆ ಅವರನ್ನೇ ಕೇಳುವುದೆಂದು ತೀರ್ಮಾನಿಸಿದ.

ಮೈಸೂರಿನಲ್ಲಿರುವ ಶ್ರೀಕಂಠಯ್ಯನವರ ಮನೆಗೆ ಹೋದ ಶೇಖರ್‌ನನ್ನು ಕಂಡು ಅವರೂ ನಗುಮೊಗದಿಂದ ಸ್ವಾಗತಿಸಿ, “ಏನಪ್ಪಾ ಶೇಖರ್‌, ಅಪರೂಪಕ್ಕೆ ಇಷ್ಟು ದೂರ ಬಂದಿದೀಯಾ?” ಎಂದರು.

“ಹೇಗೆ ಹೇಳಲಿ? ನನಗೆ ಸ್ವಲ್ಪ ಹಣದ ಅವಶ್ಯಕತೆ ಇತ್ತು,” ಎಂದು ಶೇಖರ್‌ ತಾಯಿಯ ಆರೋಗ್ಯದ ಕುರಿತೂ ವಿವರಿಸಿದ.

“ಓಹೋ….! ಶೇಖರ್‌ ನಿಮ್ಮ ತಾಯಿಗೆ ಬೇಗ ಗುಣವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಈ ಸುದ್ದಿ ನನಗೂ ಬೇಸರ ತಂದಿದೆ. ಆದರೆ ನೀನು ಕೇಳುವಷ್ಟು ಹಣ ನನ್ನಲ್ಲಿ ಇಲ್ಲ. ನಾನು ಈಗಾಗಲೇ ಹಣವನ್ನೆಲ್ಲ ನನ್ನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದೇನೆ,” ಎಂದು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಶ್ರೀಕಂಠಯ್ಯ ಉತ್ತರಿಸಿದರು. ಶೇಖರ್‌ ನಿರಾಶೆಯ ಭಾರವನ್ನು ಹೊತ್ತು ಮರಳಿದ.

ಮರುದಿನ ಆಸ್ಪತ್ರೆಗೆ ಹೋಗಿದ್ದ ಶೇಖರ್‌ ಡಾಕ್ಟರ್‌ರೊಂದಿಗೆ ಮಾತನಾಡುತ್ತಾ ಕೇಳಿದ, “ಸರ್‌ ನನಗೀಗ ದುಡ್ಡು ಹೊಂದಿಸುವುದೇ ಚಿಂತೆಯಾಗಿದೆ. ನೀವು ನಿಗದಿಯಾದ ಸಮಯಕ್ಕೆ ಆಪರೇಷನ್‌ ಮಾಡಿಬಿಡಿ. ನಾನು ಅದೇ ದಿನ ಸಂಜೆಯೊಳಗಾಗಿ ಎಲ್ಲಿಂದಾದರೂ ದುಡ್ಡು ತಂದು ಕಟ್ತೀನಿ,” ಎಂದು ವಿನಂತಿಸಿಕೊಂಡ.

“ಅರೆ, ನೀವೇಕೆ ಹೀಗೆ ಹೇಳುತ್ತಿದ್ದೀರಿ. ನಿಮ್ಮ ತಾಯಿ ಆಪರೇಷನ್‌ಗೆ ಎಲ್ಲ ತಯಾರಾಗಿದೆ. ನಿಮ್ಮ ಬಿಲ್ ‌ಕೂಡ ಆಗಲೇ ಕ್ಲಿಯರ್ ಆಗಿದೆಯಲ್ಲ…..?” ಡಾಕ್ಟರ್‌ ಹೇಳಿದಾಗ ಶೇಖರ್‌ಗೆ ಅಚ್ಚರಿಯಾಗಿತ್ತು. ಡಾಕ್ಟರ್‌ ಮತ್ತೆ ಮುಂದುವರಿದು, “ನೀವೇನೂ ಚಿಂತಿಸಬೇಡಿ. ತಾಯಿಯವರು ಗುಣವಾಗಿ ಮನೆಗೆ ಮರಳುತ್ತಾರೆ,” ಎಂದರು.

ಮತ್ತೆ ಎರಡು ದಿನಗಳಲ್ಲಿ ಶೇಖರ್‌ ತಾಯಿಯ ಆಪರೇಷನ್‌ ಯಶಸ್ವಿಯಾಗಿ ಮುಗಿದಿತ್ತು. ಒಂದು ವಾರದ ವಿಶ್ರಾಂತಿ ಬಳಿಕ ಅವರು ಆರೋಗ್ಯವಾಗಿ ಮನೆಗೆ ಮರಳಿದರು.

ಕೆಲವು ದಿನಗಳು ಸರಿದವು. ಅದೊಂದು ಸಂಜೆ ಕೆಲಸ ಮುಗಿಸಿಕೊಂಡು ಬಂದ ಶೇಖರ್‌ಗೆ ತಾಯಿ ತಂದೆ ಇನ್ನು ಊಟ ಮುಗಿಸದೆ ಕಾದಿರುವುದು ಕಂಡು ಅಚ್ಚರಿಯಾಯಿತು.

“ಏಕಿನ್ನು ಊಟ ಮಾಡಿಲ್ಲ?”

“ಶೇಖರ್‌, ಇಂದು ಯಾರು ಬಂದಿದ್ದರೆಂದು ಊಹಿಸು…”

“ಯಾರು…? ಶ್ರೀಕಂಠಯ್ಯ…..?”

“ಅಯ್ಯೋ! ಅವರೇಕೆ ಅಲ್ಲಿಂದ ದುಡ್ಡು ಖರ್ಚು ಮಾಡಿಕೊಂಡು ಬರುತ್ತಾರೆ?”

“ಇನ್ನಾರು?”

“ಸತೀಶ್‌ ಚಂದ್ರ, ನಿಮ್ಮ ಎಂ.ಡಿ.”

“ಅರೇ….?!” ಶೇಖರ್‌ಗೆ ಮುಂದೆ ಮಾತನಾಡಲು ದನಿಯೇ ಹೊರಡಲಿಲ್ಲ.

“ನೀನು ಕೆಲಸ ಮಾಡುತ್ತಿರುವ ಸಂಸ್ಥೆ ಬಹಳ ಉತ್ತಮವಾದದ್ದು. ಆ ವ್ಯಕ್ತಿ ಬಹಳ ಹೃದಯವಂತರು. ನಿನ್ನ ತಾಯಿಯ ಆರೋಗ್ಯ ವಿಚಾರಿಸಿಕೊಂಡು ಹೋಗಲು ತಾವೇ ಖುದ್ದಾಗಿ ಬರಬೇಕೆಂದರೆ ಅವರು ಮಾನವೀಯತೆ ಉಳ್ಳವರಲ್ಲವೇ?” ತಂದೆ ನುಡಿದಾಗ ಶೇಖರ್‌ಗೆ ಮಾತುಗಳೇ  ಹೊರಡಲಿಲ್ಲ.

ಶೇಖರ್‌ ಆಫೀಸ್‌ನಲ್ಲಿ ಕೇಳಿದಂತೆ ಸತೀಶ್‌ ಚಂದ್ರ ಒಬ್ಬ ಕಟು ಮನುಷ್ಯ. ಯಾವುದಕ್ಕೂ ಮುಖ ನೋಡುವವರಲ್ಲ. ಆರು ಅಡಿ ಎತ್ತರವಿದ್ದ ಅವರನ್ನು ಬಿಲ್ಡಿಂಗ್‌ ಎಂದೇ ಕರೆಯುತ್ತಿದ್ದರು. ಭಾವನಾರಹಿತ ಜೀವಿ ಎಂದು ಇದರ ಹಿಂದಿನ ಅರ್ಥವಾಗಿತ್ತು. ಆದರೆ ಅವರೊಳಗೆ ಇನ್ನೊಬ್ಬ ಹೃದಯವಂತ ಇದ್ದಾನೆ ಎನ್ನುವುದು ಇದೀಗ ಅರ್ಥವಾಗಿತ್ತು.

ಒಮ್ಮೆ ಸತೀಶ್‌ ಚಂದ್ರ ಹೈದರಾಬಾದ್‌ನಿಂದ ಕರೆ ಮಾಡಿ ಶೇಖರ್‌ನನ್ನು ಖುದ್ದಾಗಿ ಭೇಟಿಯಾಗಬೇಕೆಂದು ಹೇಳಿದರು. ಶೇಖರ್‌ಹೈದರಾಬಾದ್‌ಗೆ ಹೊರಟ.

ಅಲ್ಲಿಗೆ ಹೋದ ಶೇಖರ್‌ ಅವರನ್ನು ಭೇಟಿಯಾಗಿ, “ಸರ್‌ ನಿಮ್ಮ ಬಗ್ಗೆ ನಾವೆಲ್ಲರೂ ಏನೇನೋ ಅಂದುಕೊಂಡಿದ್ದೆವು. ಒಬ್ಬೊಬ್ಬರೂ ಒಂದೊಂದು ರೀತಿ ಮಾತನಾಡುವುದನ್ನು ಕೇಳಿ ನನಗೂ ಸಹ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಿತ್ತು. ಆದರೆ ನೀವು ಯಾರು ಏನು ಎನ್ನುವುದು ತಿಳಿದ ಮೇಲೆ ನನ್ನ ನಿಲುವನ್ನು ಬದಲಾಯಿಸಿಕೊಂಡಿದ್ದೇನೆ. ನನ್ನ ತಾಯಿಯವರ ಆಪರೇಷನ್‌ ದುಡ್ಡನ್ನು ನಿಮಗೆ ಒಂದು ವರ್ಷದಲ್ಲಿ ವಾಪಸ್‌ ನೀಡುತ್ತೇನೆ. ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳು….” ಎಂದ.

“ಶೇಖರ್‌, ನಾನು ಹೃದಯವಿಹೀನ, ಭಾವನೆಗಳಿಲ್ಲದ ಕಲ್ಲು ಬಂಡೆ ಎಂದೆಲ್ಲ ನೀವುಗಳು ತಿಳಿದುಕೊಂಡಿದ್ದೀರಿ ಅಲ್ವಾ…..”

“ದಯವಿಟ್ಟು ಕ್ಷಮಿಸಿ ಸಾರ್‌….”

“ನನಗೂ ಈ ಎಲ್ಲ ವಿಷಯದ ಅರಿವಿದೆ ಶೇಖರ್‌, ಆದರೆ ನಾನು ನನ್ನ ಸಂಸ್ಥೆಯ ಉನ್ನತಿಗಾಗಿ ಯಾರ ಮುಂದೆಯೂ ಹೃದಯವನ್ನು ತೆರೆಯಲಾರೆ. ಆದರೆ ಈಗ ನಿನ್ನನ್ನು ಕರೆದದ್ದು ಸಹ ಇದೇ ವಿಷಯಕ್ಕೆ…..” ಎಂದು ಎರಡು ಕ್ಷಣ ಮೌನ ವಹಿಸಿದರು.

ನಂತರ ಮತ್ತೆ ಮೌನ ಮುರಿದ ಅವರು, “ನಾನು ನಿನ್ನ ತಾಯಿಯ ಚಿಕಿತ್ಸೆಗಾಗಿ ನೀಡಿದ ಹಣವನ್ನು ವಾಪಸ್‌ ಕೊಡುವುದು ಬೇಡ. ಆದರೆ ನೀನು ಈ ವಿಷಯವನ್ನು ನಿನ್ನ ಸಹೋದ್ಯೋಗಿಗಳಿಗಾಗಲಿ, ಸ್ನೇಹಿತರಿಗಾಗಲೀ ಹೇಳಬಾರದು. ಹಾಗೆಂದು ನನಗೆ ಭಾಷೆ ಕೊಡು.

“ನಾನು ಸಹ ನಿಮ್ಮಂತೆಯೇ ಮನುಷ್ಯ. ಕೆಲವು ವರ್ಷಗಳ ಹಿಂದೆ ನಾನು ಪ್ರೀತಿಸಿ ಮದುವೆಯಾದ ನನ್ನ ಮಡದಿ ನಂದಿನಿ, ಮಗ ಪ್ರೇಮ್ ಇಬ್ಬರೂ ಅಪಘಾತದಲ್ಲಿ ಮೃತರಾದರು. ಅಂದಿನಿಂದಲೂ ನನಗೆ ನನ್ನ ಸಂಸ್ಥೆ, ಅಲ್ಲಿನ ಸಿಬ್ಬಂದಿಗಳ ಸಂಸಾರವೇ ಸರ್ವಸ್ವವಾಗಿದೆ. ಆದರೆ ಸಂಸ್ಥೆಯನ್ನು ಒಂದು ಹಾದಿಗೆ ತರಬೇಕಾದಲ್ಲಿ ಅದರ ಮುಖ್ಯಸ್ಥ ಎಲ್ಲಾ ಜವಾಬ್ದಾರಿ ಹೊರುವುದು ಮಾತ್ರ ನಾಯಕತ್ವದ ಗುಣವನ್ನು ರೂಢಿಸಿಕೊಂಡು ಎಲ್ಲರನ್ನೂ ಒಂದುಗೂಡಿಸಬೇಕು. ಹೀಗಾಗಿ ನಾನು ಯಾರೊಡನೆಯೂ ಹೆಚ್ಚು ಬೆರೆಯದೆ ಡಿಫರೆಂಟ್‌ ಮ್ಯಾನ್‌ ಎನ್ನುವ ಇಮೇಜ್‌ನ್ನು ನನ್ನ ಸುತ್ತ ಬೆಳೆಸಿಕೊಂಡಿದ್ದೇನೆ.

“ಈಗ ಕೇಳು, ಇನ್ನು ಕೆಲವು ವರ್ಷಗಳಲ್ಲಿ ನಾನೇನಾದರೂ ಮರಣ ಹೊಂದಿದರೆ ಈ ಸಂಸ್ಥೆಯನ್ನು ಮುನ್ನಡೆಸುವಂಥ ಉತ್ತರಾಧಿಕಾರಿಗಳು ಯಾರೂ ಇಲ್ಲ. ಅದಕ್ಕೆ ನಾನೀಗ ಆ ಜವಾಬ್ದಾರಿ ಹೊರುವಂಥ ಒಬ್ಬ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ…..” ಎಂದು ಕೆಲವು ನಿಮಿಷ ಮಾತು ನಿಲ್ಲಿಸಿದರು.

ಶೇಖರ್‌ ತಡೆಯಲಾಗದೆ, “ಸಾರ್‌….., ಆ ವ್ಯಕ್ತಿ ಯಾರೆಂದು ಕೇಳಬಹುದೆ…..?”

“ಅದು…. ಅದೂ….. ಶೇಖರ್‌…. ನನ್ನ ನಂತರದಲ್ಲಿ ನೀನೇ ಈ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಬೇಕು…” ಎಂದರು.

ಇದನ್ನು ಕೇಳಿ ಶೇಖರ್‌ಗೆ ಸಂಭ್ರಮಾಶ್ಚರ್ಯ ಎರಡೂ ಒಟ್ಟಿಗೆ ಆಯಿತು.

ಮೂರು ತಿಂಗಳು ಕಳೆದವು. ಅಂದು ಆಫೀಸ್‌ನಲ್ಲೆಲ್ಲಾ ಗುಜುಗುಜು ಎಂ.ಡಿ. ಸತೀಶ್‌ ಚಂದ್ರರಿಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿದ್ದಾರಂತೆ ಎನ್ನುವುದೇ ಸುದ್ದಿಯಾಗಿತ್ತು.

ಆಫೀಸ್‌ನಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿಕೊಳ್ಳುತ್ತಿದ್ದರು. `ಹೃದಯ ಇಲ್ಲವೆಂದುಕೊಂಡಿದ್ದು ಸುಳ್ಳು. ಹೃದಯಾಘಾತವಾಗಿದೆ…?! ಬಿಲ್ಡಿಂಗ್‌ ಕುಸಿದು ಬೀಳುತ್ತಿದೆ….?’ ಇಂಥ ಮಾತುಗಳನ್ನು ಕೇಳಿ ಶೇಖರ್‌ ಒಳಗೊಳಗೆ ಬಹಳ ನೊಂದುಕೊಂಡ.

ಅವನು ಪ್ರತೀ ದಿನ ಆಸ್ಪತ್ರೆಗೆ ಹೋಗಿ ಸತೀಶ್‌ ಚಂದ್ರರ ಆರೋಗ್ಯ ವಿಚಾರಿಸಿಕೊಂಡು ಬರುತ್ತಿದ್ದ.

ಸ್ವಲ್ಪ ಗುಣಮುಖರಾದ ಸತೀಶ್‌ ಚಂದ್ರ ಒಂದು ದಿನ ಆಸ್ಪತ್ರೆಗೇ ತಮ್ಮ ಲಾಯರ್‌ನ್ನು ಕರೆಸಿ ತಮ್ಮ ಸಂಸ್ಥೆಯ ಉತ್ತರಾಧಿಕಾರಿ, ಎಂ.ಡಿ ಶೇಖರ್‌ ಎಂದು ನೇಮಕ ಮಾಡಿ ತಮ್ಮ ಹೆಸರಿನಲ್ಲಿದ್ದ ಪವರ್‌ ಆಫ್‌ ಅಟಾರ್ನಿಯನ್ನೆಲ್ಲ ಶೇಖರ್‌ ಹೆಸರಿಗೆ ವರ್ಗಾಯಿಸಿದರು.

ಇದೆಲ್ಲ ಆದ ಎರಡು ಮೂರು ವಾರಗಳ ಕಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದು ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾದರು. ಆದರೆ ಮತ್ತೆ ಎರಡು ತಿಂಗಳಲ್ಲಿಯೇ ಎರಡನೇ ಬಾರಿ ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಮರಣ ಹೊಂದಿದರು.

ಅಂದು ಸಂಜೆ ಅವರ ಅಂತ್ಯ ಸಂಸ್ಕಾರ ನಡೆಯುವ ಸ್ಥಳದಲ್ಲಿ ನೆರೆದಿದ್ದ ಜನಸ್ತೋಮ ನೋಡಿಯೇ ಶೇಖರ್‌ ಸೇರಿದಂತೆ ಆಫೀಸ್‌ನವರಿಗೆಲ್ಲ ಅಚ್ಚರಿಯಾಗಿತ್ತು. ಒಬ್ಬ ವ್ಯಕ್ತಿಯ ಪ್ರಸಿದ್ಧಿ ತಿಳಿಯಬೇಕೆಂದರೆ ಅವನ ಮರಣದಲ್ಲಿ ನೋಡಬೇಕು ಎಂಬಂತೆ ಸತೀಶ್ ಚಂದ್ರ ಇಷ್ಟೊಂದು ಜನರಿಗೆ ಬೇಕಾಗಿದ್ದರೆಂದು ತಿಳಿದು ಆಶ್ಚರ್ಯವಾಗಿತ್ತು. ಶೇಖರ್‌ನಂತೆಯೇ ಅವರಿಂದ ಸಹಾಯ ಪಡೆದ ಅನೇಕರು ಬಂದು ಅವರ ಅಂತಿಮ ನಮನ ಸಲ್ಲಿಸಿದರು.

ಶೇಖರ್‌ ಪಾಲಿಗಂತೂ ಅಪಾರ ದುಃಖ ಉಂಟಾಯಿತು. ಅವರ ಪಾಲಿಗೆ ಸ್ನೇಹಿತ, ಮಾರ್ಗದರ್ಶಕ, ಆದರ್ಶ ನಾಯಕ ಎಲ್ಲ ಆಗಿದ್ದ ಸತೀಶ್‌ ಚಂದ್ರ ಕಡೆಯವರೆಗೂ ಎಲೆಮರೆಯ ಕಾಯಿಯಂತೆ ತೆರೆಯ ಹಿಂದಿನ ಮನುಷ್ಯನಾಗಿಯೇ ಉಳಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ