ಎಷ್ಟೋ ಸಲ ನಾವು ಜೀವನದಲ್ಲಿ ದೊರೆಯಬಹುದಾದಷ್ಟು ಸಂತೋಷವನ್ನು ಅನುಭವಿಸಲಾಗುವುದಿಲ್ಲ. ಜೀವನ ನೀಡುವ ಉತ್ತಮವಾದ ಕೊಡುಗೆಯನ್ನು ನಾವು ಪಡೆದುಕೊಳ್ಳುವುದಿಲ್ಲ. ಇದಕ್ಕೆ ನಾವೇ ಜವಾಬ್ದಾರರು. ನಾವು ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಂಡರೆ ನಮ್ಮ ಬಾಳು ಖಂಡಿತವಾಗಿ ಹೆಚ್ಚು ಮನೋಹರವಾಗುವುದು. ಅಂತಹ ಅಂಶಗಳನ್ನು ತಿಳಿಯೋಣ ಬನ್ನಿ :
ಹದಿಹರೆಯದ ಮಕ್ಕಳೊಂದಿಗೆ 18 ವರ್ಷದಂತೆ ಮಾತನಾಡಿ ಹೆಲ್ತ್ ಕೇರ್ ಒಂದರ ಡೈರೆಕ್ಟರ್ ಆಗಿರುವ ಡಾ. ಗೋಪಾಲಕೃಷ್ಣ ಹೀಗೆ ಹೇಳುತ್ತಾರೆ, “ಮಕ್ಕಳು 17-18 ವರ್ಷದವರಾದಾಗ ಅವರೊಂದಿಗೆ ನಿಮ್ಮ ವ್ಯವಹಾರ ತಾಯಿಯಂತಿರದೆ ಒಬ್ಬ ಅಕ್ಕನಂತಿರಲಿ. ಆಗ ವಯಸ್ಸಿನ ಅಂತರ ಗೋಚರಿಸುವುದಿಲ್ಲ. ಅವರು ತಮ್ಮ ಮನಸ್ಸಿನೊಳಗಿನ ಮಾತನ್ನು ಯಾವುದೇ ಅಳುಕಿಲ್ಲದೆ ನಿಮ್ಮೊಡನೆ ಹಂಚಿಕೊಳ್ಳುತ್ತಾರೆ. ನಿಮ್ಮ ಬಗೆಗಿನ ಗೌರವ ಮಾತ್ರ ಉಳಿದಿರಲಿ. ಹದಿಹರೆಯದ ವಯಸ್ಸು ಬಹಳ ಸೂಕ್ಷ್ಮವಾದುದು. ಮಕ್ಕಳು ಯೌವನಕ್ಕೆ ಕಾಲಿಡುತ್ತಿರುತ್ತಾರೆ. ಅವರಲ್ಲಿ ಉತ್ಸಾಹ ತುಂಬಿರುತ್ತದೆ. ಆದರೆ ಜೀವನದ ಬಗೆಗಿನ ಅವರ ಯೋಚನಾಧಾಟಿ ಪಕ್ವವಾಗಿರುವುದಿಲ್ಲ. ಕೆಲವು ಸಲ ಅವರು ಇಡುವ ಹೆಜ್ಜೆಯಿಂದ ಗಂಭೀರ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಮಕ್ಕಳ ಮೇಲೆ ನಿಮ್ಮ ಭಾವನೆಗಳನ್ನೇ ಹೇರದೆ ಅವರ ದೃಷ್ಟಿಕೋನವನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅವರಿಗೆ ನಿಮ್ಮ ಸಾಂಗತ್ಯ ಮತ್ತು ಸಂರಕ್ಷಣೆಯ ಅವಶ್ಯಕತೆ ಇದೆ ನಿಜ. ಆದರೆ ಅವರು ವಿಕಸಿತರಾಗಲು ಅವಕಾಶ ಮಾಡಿಕೊಡಿ. ಅವರು ತಮ್ಮದೇ ಆದ ರೀತಿಯಲ್ಲಿ ಆಲೋಚಿಸಲು ಮತ್ತು ಕೆಲಸ ಮಾಡಲು ಬಿಡಿ. ಆದರೆ ಅವರಿಗೆ ತಪ್ಪು ಸರಿಗಳ ವ್ಯತ್ಯಾಸ ಅರ್ಥ ಮಾಡಿಸಿಕೊಡಿ.
18ರ ವಯಸ್ಸಿನ ಮಾನಸಿಕತೆ ನಿಮಗಿರಲಿ
ಡಾ. ಆನಂದ್ ಹೇಳುತ್ತಾರೆ, “ದೊಡ್ಡವರಾದಾಗ ನಾವು ಸಾಮಾನ್ಯವಾಗಿ ಜೀವನಲ್ಲಿ ರೂಪಿತವಾಗಿರುವ ನಿಯಮಗಳನ್ನು ಅನುಸರಿಸತೊಡಗುತ್ತೇವೆ. ಹೀಗಾಗಿ ನಮ್ಮ ರಚನಾತ್ಮಕ ಕೌಶಲ್ಯ ಮರೆಯಾಗುತ್ತದೆ. ನಾವು ನೆನಪಿಡಬೇಕಾದ ವಿಷಯವೆಂದರೆ ನಮ್ಮೆಲ್ಲರಲ್ಲೂ ಮಕ್ಕಳಂತಹ ಮನಸ್ಸು ಹುದುಗಿದೆ ಮತ್ತು ಅದು ತನಗೆ ಬೇಕಾದಂತೆ ನಡೆದುಕೊಳ್ಳಲು ಬಯಸುತ್ತದೆ. ಹೊಸ ಹೊಸ ರೀತಿಗಳಿಂದ ಕೆಲಸ ಮಾಡಲು ಇಷ್ಟಪಡುತ್ತದೆ. ನೀವು ಯಾವ ವಯಸ್ಸಿನವರೇ ಆಗಿರಲಿ, ಈ ಮಾನಸಿಕತೆಯನ್ನು ಕಾಪಾಡಿಕೊಳ್ಳಿ. ಆಗ ಮಾತ್ರ ನಿಮ್ಮಲ್ಲಿ ಹಿಂದಿನ ಉತ್ಸಾಹ ಉಳಿದು, ನೀವು ಒಂದು ಉತ್ತಮವಾದ ಜೀವನ ನಡೆಸಬಲ್ಲಿರಿ.”
ಮನಸ್ಸು, ಬುದ್ಧಿ ದೃಢವಾಗಿರಲಿ
ನೀವು 25 ವರ್ಷ ವಯಸ್ಸಿನವರಾಗಿರಿ ಅಥವಾ 55, ನಿಮ್ಮ ಮನಸ್ಸು ಮತ್ತು ಬುದ್ಧಿ ಆರೋಗ್ಯವಾಗಿರಲಿ. ಬುದ್ಧಿ ಚುರುಕಾಗಿರಿಸಲು ನಿಯಮಿತವಾಗಿ ಮೆಂಟಲ್ ಎಕ್ಸರ್ ಸೈಜ್ ಮಾಡುತ್ತಿರಿ. ಹೊಸ ಪದ, ಹೊಸ ಮಾತುಗಳನ್ನು ಕಲಿಯಿರಿ. ಹೊಸದನ್ನು ಕಲಿಯಬೇಕೆಂಬ ಹುಮ್ಮಸ್ಸು ಇರಲಿ. ಒವೊಮ್ಮೆ ಕೆಲಸದಿಂದ ಬ್ರೇಕ್ ಪಡೆದು ಮನೆಯವರೊಂದಿಗೆ ಹೊರಗೆ ಸುತ್ತಾಡಿ ಬನ್ನಿ. ಸಕಾರಾತ್ಮಕವಾಗಿ ಯೋಚಿಸುತ್ತಿರಿ. ನಗು ಮುಖದಿಂದಿರಿ ಮತ್ತು ಎಲ್ಲರೊಂದಿಗೆ ಸೋಶಿಯಲ್ ಆಗಿರಿ. ನಿಮ್ಮ ಫಿಸಿಕಲ್ ಆಕ್ಟಿವಿಟೀಸ್ ಚೆನ್ನಾಗಿರಲಿ.
ಸಮಯದ ಉತ್ತಮ ಬಳಕೆ
ದಿನದ 24 ಗಂಟೆಗಳಲ್ಲಿ ನಾವು ಸಾಮಾನ್ಯವಾಗಿ 7-8 ಗಂಟೆಗಳನ್ನು ನಿದ್ರೆಯಲ್ಲಿ ಕಳೆಯುತ್ತೇವೆ. ಉಳಿದ ಸಮಯವನ್ನು ಉತ್ತಮವಾಗಿ ಬಳಸಲು ಈ ಕೆಲವು ಚಿಕ್ಕಪುಟ್ಟ ವಿಷಯಗಳ ಬಗ್ಗೆ ಗಮನಹರಿಸಬೇಕಾಗುತ್ತದೆ:
ಬೆಳಗಿನ ವೇಳೆ ನಿಮ್ಮ ಎನರ್ಜಿ ಲೆವೆಲ್ ಅತ್ಯಂತ ಮೇಲಿರುವಾಗ ಮುಖ್ಯವಾದ ಕೆಲಸಗಳನ್ನು ಮಾಡಿಕೊಳ್ಳಿ. ವಾಟ್ಸ್ಆ್ಯಪ್, ಫೇಸ್ಬುಕ್, ಈಮೇಲ್ ಇತ್ಯಾದಿ ಚೆಕ್ ಮಾಡುವ ಕೆಲಸವನ್ನು ಮಧ್ಯಾಹ್ನ ಲಂಚ್ ಟೈಮ್ ನಲ್ಲಿ ಮಾಡಬಹುದು.
ಕಡಿಮೆ ಸಮಯದಲ್ಲಿ ಉತ್ತಮ ಕೆಲಸ ಮಾಡಬೇಕೆಂದಿದ್ದರೆ, ಮನೆ ಮತ್ತು ನೀವು ಉದ್ಯೋಗ ಮಾಡುವ ಸ್ಥಳಗಳನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿಡಿ. ಇದರಿಂದ ನಿಮ್ಮ ಅಗತ್ಯದ ವಸ್ತುಗಳನ್ನು ಹುಡುಕಲು ಸಮಯ ವ್ಯಯವಾಗುವುದಿಲ್ಲ. ಜೊತೆಗೆ ಶಾಂತ ಮನಸ್ಸಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಕೆಲಸ ಮಾಡುತ್ತಾ ಶರೀರಕ್ಕೆ ವಿಶ್ರಾಂತಿಯನ್ನೂ ನೀಡಿ. 90 ನಿಮಿಷಗಳ ಕೆಲಸದ ನಂತರ 10 ನಿಮಿಷಗಳ ಬ್ರೇಕ್ ನಿಮ್ಮನ್ನು ರಿಫ್ರೆಶ್ ಆಗಿಸಲು ಅಗತ್ಯ.
ಭೇಟಿ ಮಾಡುವ ವಿಷಯ ಬಂದಾಗ ಸದಾ ಆಗಲಿ ಎನ್ನುತ್ತಿರಬೇಡಿ, ಇಲ್ಲ ಎನ್ನುವುದನ್ನೂ ಕಲಿಯಿರಿ. ಜನರ ಗದ್ದಲದಿಂದ ದೂರವಾಗಿ ಒಂದು ಏಕಾಂತ ಸ್ಥಳದಲ್ಲಿ ಕೊಂಚ ಕಾಲ ಕಳೆಯಿರಿ. ಮೊಬೈಲ್, ಲ್ಯಾಪ್ಟಾಪ್ಗಳನ್ನು ದೂರವಿರಿಸಿ. ಆತ್ಮ ಚಿಂತನೆ ಮಾಡಿ. ರಚನಾತ್ಮಕ ಕೆಲಸ ಮಾಡಿ.
ಮನಸ್ಸಿಗೆ ಒತ್ತಡ ತಂದುಕೊಳ್ಳಬೇಡಿ. ಇನ್ನೊಬ್ಬರೊಡನೆ ಮಾಡಿದ ವಾದದಿಂದ ಅಥವಾ ಕೆಲಸ ಕೆಟ್ಟಿತೆಂಬ ಭಾವನೆಯಿಂದ ಮನಸ್ಸಿಗೆ ಹಿಂಸೆ ಪಟ್ಟುಕೊಳ್ಳುವುದಕ್ಕಿಂತ, ಇನ್ನೂ ಕಡಿಮೆ ಸಮಯದಲ್ಲಿ ಹಾಳಾದ ಕೆಲಸವನ್ನು ಅಥವಾ ಸಂಬಂಧವನ್ನು ಸರಿಪಡಿಸಬಹುದು.
ಆಫೀಸ್ನಲ್ಲಿ 18ರ ಉತ್ಸಾಹವಿರಲಿ
18ರ ವಯಸ್ಸಿನ ಉತ್ಸಾಹ ಕೊಂಚ ವಿಶಿಷ್ಟ ರೀತಿಯದು ಎಂದು ಹೇಳುವುದುಂಟು. ನಿಜ, ಈ ವಯಸ್ಸಿನಲ್ಲಿ ವ್ಯಕ್ತಿಯು ತನ್ನ ಪ್ರಾಥಮಿಕತೆಗಳನ್ನು ಅರ್ಥ ಮಾಡಿಕೊಂಡು, ಅವುಗಳನ್ನು ಪೂರೈಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾನೆ. ತನ್ನ ಗುರಿ ಮತ್ತು ಸಾಧನೆಗಳ ಬಗ್ಗೆ ಉತ್ಸಾಹಿತನಾಗಿರುತ್ತಾನೆ. ಆದರೆ ವಯಸ್ಸಾದಂತೆ ಮನುಷ್ಯನಲ್ಲಿ ಸ್ವಲ್ಪ ಅಲಸ್ಯ ಉಂಟಾಗುತ್ತದೆ. ಅರ್ಧ ಮನಸ್ಸಿನಿಂದ ಕೆಲಸದಲ್ಲಿ ತೊಡುಗುತ್ತಾನೆ. ಇದು ಸರಿಯಲ್ಲ. ಮನುಷ್ಯನಿಗೆ ಯೌವನದ ಉತ್ಸಾಹ ಮತ್ತು ಕೆಲಸ ಮಾಡಿ ತೋರಿಸಬೇಕೆಂಬ ಇಚ್ಛೆ ಸದಾ ಮನಸ್ಸಿನಲ್ಲಿರಬೇಕು. ಆಗ ಮಾತ್ರ ಅವನು ಯಾವುದೇ ವಯಸ್ಸಿನಲ್ಲಿಯೂ ಆಕಾಶದೆತ್ತರಕ್ಕೆ ಏರಬಹುದು.
ಕೇವಲ ಗೃಹಿಣಿಯಾಗಿರದೆ ಪ್ರೇಯಸಿಯಾಗಿ ವಯಸ್ಸು ಹೆಚ್ಚುತ್ತಿದ್ದಂತೆ ಮಹಿಳೆಯರು ಮನೆಯ ಕೆಲಸಗಳಲ್ಲಿ ತೊಡಗಿಕೊಂಡು ಜೀವನದ ಸುಖದುಃಖಗಳಲ್ಲಿ ಮುಳುಗಿಹೋಗುತ್ತಾರೆ. ಮನೆ ಮತ್ತು ಮಕ್ಕಳ ಜವಾಬ್ದಾರಿಯ ನಡುವೆ ತಮ್ಮ ಇಷ್ಟಾನಿಷ್ಟಗಳು ಹಾಗೂ ಬಾಳ ಸಂಗಾತಿಯ ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಲಾರದೆ ಹೋಗುತ್ತಾರೆ. ಪತಿಪತ್ನಿಯರ ಸಂಬಂಧದಲ್ಲಿ ಹೊಸತನ ಉಳಿಸಿಕೊಳ್ಳುವುದೂ ಅಗತ್ಯ. ನಿಮ್ಮ ಫಿಟ್ನೆಸ್ ಬಗ್ಗೆ ಗಮನ ನೀಡಿ. ಶಾರೀರಿಕ ಮತ್ತು ಮಾನಸಿಕವಾಗಿ ಫಿಟ್ ಆಗಿರಿ. ಜಿಮ್ ಗೆ ಸೇರಿ. ಹಿಂದಿನಂತೆ ನಿಮ್ಮ ಲುಕ್ ಬಗ್ಗೆ ಆಸಕ್ತಿ ತಳೆಯಿರಿ. ಟ್ರೆಂಡಿ ಡ್ರೆಸ್ ಮತ್ತು ಫುಟ್ವೇರ್ ಕೊಳ್ಳಿ. ನಿಮಗೆ ಪ್ರೇರಣೆ ನೀಡುವಂತಹ ಪುಸ್ತಕ ಓದಿ. ಆಗಾಗ್ಗೆ ಪತಿಯೊಡನೆ ಹಾಸ್ಯ ಮಾಡುತ್ತಾ ಸಂಬಂಧದ ಬಿಸುಪನ್ನು ಕಾಪಾಡಿಕೊಳ್ಳಿ.
ಸಂತಸಪಡಲು ಕಾರಣ ಹುಡುಕಿ
ಸಂತೋಷ ಒಂದು ಭಾವನಾತ್ಮಕ ಮತ್ತು ಮಾನಸಿಕ ಪ್ರಕ್ರಿಯೆ. ಇದು ನಿಮ್ಮ ಬಾಳನ್ನು ಸುಖಮಯವಾಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಂತೋಷವಾಗಿರುವುದೆಂದರೆ ಜೀವನದಲ್ಲಿ ಎಲ್ಲ ಸರಿಯಾಗಿದೆ ಎಂದಲ್ಲ, ನಿಮ್ಮ ತೊಂದರೆಗಳನ್ನು ಮರೆತು ನೀವು ಖುಷಿಯಾಗಿ ಬದುಕಬಹುದು ಎಂದರ್ಥ. ಇದರಿಂದ ನಿಮಗೆ ಕಷ್ಟಗಳೊಡನೆ ಹೋರಾಡುವ ಶಕ್ತಿ ದೊರೆಯುತ್ತದೆ. ಸಂತೋಷದಿಂದಿದ್ದಾಗ ಮನುಷ್ಯನಿಗೆ ತನ್ನ ಸುತ್ತಲ ಎಲ್ಲ ವಿಷಯಗಳೂ ಇಷ್ಟವಾಗುತ್ತವೆ. ಇದರಿಂದ ಅವನ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ದೂರವಾಗಿ, ಅವನು ಉತ್ತಮ ಬಾಳುವೆ ನಡೆಸಬಲ್ಲನಾಗುತ್ತಾನೆ.
ನೀವು ಸಂತೋಷದಿಂದಿರಲು ಕಾರಣಗಳನ್ನು ಹುಡುಕಿ. ಸಣ್ಣ ಪುಟ್ಟ ಸಂತೋಷವನ್ನೂ ಆಸ್ವಾದಿಸಿ. ನಿಮ್ಮಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಂಬುದನ್ನು ಆಲೋಚಿಸಿ ಸಂತಸಪಡಿ. ಕೈಕಾಲು ಗಟ್ಟಿಯಾಗಿವೆ. ಮನೆ ಇದೆ. ಹಣವಿದೆ. ಉದ್ಯೋಗವಿದೆ, ಮಕ್ಕಳಿದ್ದಾರೆ. ಬಂಧು ಮಿತ್ರರಿದ್ದಾರೆ. ಇವುಗಳನ್ನೆಲ್ಲ ಪಡೆದಿರುವುದಕ್ಕಾಗಿ ಸಂತೋಷಿಸಿ.
ಮಿತ್ರರೊಡನೆ 18ರ ಮೋಜು
ಕ್ಲಿನಿಕ್ ಸೈಕಾಲಜಿಸ್ಟ್ ಡಾ. ಆನಂದ್ ಹೇಳುತ್ತಾರೆ, “ನಮಗೆ ವಯಸ್ಸು ಹೆಚ್ಚಿದಂತೆ ಜವಾಬ್ದಾರಿಗಳೂ ಹೆಚ್ಚುತ್ತವೆ. ಯೌವನದಲ್ಲಿ ನಾವು ಮಿತ್ರರೊಡನೆ ಮುಕ್ತವಾಗಿ ಮನಸ್ಸಿನ ವಿಷಯಗಳನ್ನು ಹಂಚಿಕೊಂಡು, ಹಾಸ್ಯ ಮಾಡುತ್ತಾ, ತಿರುಗಾಡುತ್ತಾ ಇರುತ್ತಿದ್ದುದರಿಂದ ನಮಗೆ ಹೊಸ ಚೈತನ್ಯ ದೊರೆಯುತ್ತಿತ್ತು. ಆದರೆ ಸಮಯದೊಂದಿಗೆ ಎಲ್ಲ ಇಲ್ಲವಾಗುತ್ತದೆ.”
ನಿಮ್ಮ ಹಳೆಯ ಗೆಳತಿಯರೊಂದಿಗೆ ಅದೇ ಬಗೆಯ ನಿರ್ಯೋಚನೆಯಿಂದ ಭೇಟಿ ಮಾಡಿ ನೋಡಿ. ಇದು ಒಂದು ಥೆರಪಿಯಂತೆ ನಿಮ್ಮಲ್ಲಿ ಹೊಸ ಉತ್ಸಾಹ ಮತ್ತು ಫ್ರೆಶ್ ಫೀಲಿಂಗ್ ತುಂಬುವಂತೆ ಮಾಡುತ್ತದೆ. ನಿಮ್ಮ ಜೀವನದ ದೃಷ್ಟಿಕೋನವೇ ಬದಲಾಗುತ್ತದೆ.
ಪತಿಯಲ್ಲೂ 18ರ ಲುಕ್ಸ್
ಪತಿಯ ಆಹಾರ, ಆರೋಗ್ಯ, ಉದ್ಯೋಗ ಮತ್ತು ಡ್ರೆಸ್ ಬಗ್ಗೆ ನೀವೇ ಗಮನವಿರಿಸಬೇಕಾಗುತ್ತದೆ. ಅವರಿಗೆ ಪೌಷ್ಟಿಕ ಆಹಾರ ನೀಡಿ. ಶುಗರ್/ಕೊಲೆಸ್ಟ್ರಾಲ್ ಹೆಚ್ಚಿಸುವ ತಿನಿಸುಗಳನ್ನು ಕಡಿಮೆ ಮಾಡಿ. ಕಾಲಕಾಲಕ್ಕೆ ತಮ್ಮ ಕೆಲಸ ಮುಗಿಸುವಂತೆ ಪ್ರೇರೇಪಿಸಿ. ಅವರು ಸ್ಮಾರ್ಟ್ ಆಗಿ ಕಾಣಿಸುವಂತಹ ಡ್ರೆಸ್ ಆರಿಸಿ. ವಾಕಿಂಗ್ ಮತ್ತು ಎಕ್ಸ್ರ್ ಸೈಜ್ಗಳಲ್ಲಿ ಅವರಿಗೆ ಜೊತೆ ನೀಡಿ, ಅವರು ಉತ್ಸಾಹಗೊಳ್ಳುವಂತೆ ಮಾಡಿ.
18ರ ವೈಚಾರಿಕತೆ ಅಗತ್ಯ
ಈ ವಿಷಯವಾಗಿ ಕ್ಲಿನಿಕ್ ಸೈಕಾಲಜಿಸ್ಟ್ ಡಾ. ಆನಂದ್ ಹೀಗೆ ಹೇಳುತ್ತಾರೆ, “ವಯಸ್ಸು ಕಡಿಮೆ ಇದ್ದಾಗ ನಾವು ಯಾವ ವಿಷಯವನ್ನೂ ನೇರವಾಗಿ ಒಪ್ಪುವುದಿಲ್ಲ. ಯಾವುದು ಸರಿ, ತಪ್ಪು ಎಂದು ಆಳವಾಗಿ ಯೋಚಿಸುತ್ತೇವೆ. ಸಾಮಾಜಿಕ ರೀತಿ ರಿವಾಜುಗಳನ್ನು ಬದಿಗೊತ್ತಿ ನಮಗೆ ಸರಿ ಎನಿಸಿದಂತೆಯೇ ಮಾಡುತ್ತೇವೆ. ಯಾವುದೇ ವಿಷಯವನ್ನು ತರ್ಕದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುತ್ತೇವೆ.
“ಕಡಿಮೆ ವಯಸ್ಸಿನಲ್ಲಿ ನಮಗೆ ಹೆಚ್ಚಿನ ಅನುಭವವಿರುವುದಿಲ್ಲ. ವಯಸ್ಸಾದಂತೆ ನಮಗೆ ಅನುಭವ ಮತ್ತು ಜ್ಞಾನ ಹೆಚ್ಚುತ್ತದೆ. ಅನುಭವದೊಂದಿಗೆ ತರ್ಕವನ್ನು ಬಳಸಿ ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಹಳೆಯ ಕಾಲದ ಆಲೋಚನಾಧಾಟಿಯನ್ನು ದೂರ ತಳ್ಳಿ. ಹೊಸ ವಿಧಾನದಲ್ಲಿ ನಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬಹುದು.”
ಸಂಸಾರದ ಸುಖಕ್ಕಾಗಿ 18 ವಿಧಾನಗಳು
ಆಫೀಸಿನಿಂದ ಹಿಂದಿರುಗುವಾಗ ಒಮ್ಮೊಮ್ಮೆ ಮಕ್ಕಳಿಗೆ ತಿಂಡಿ ತಿನಿಸು ಅಥವಾ ಆಟಿಕೆಗಳನ್ನು ತನ್ನಿ.
ಬಾಳ ಸಂಗಾತಿಗೆ ಆಗಾಗ್ಗೆ ಸರ್ಪ್ರೈಸ್ ಗಿಫ್ಟ್ ಕೊಡುತ್ತಿರಿ.
ಸಾಂಸಾರಿಕ ಕಲಹವನ್ನು ಸಮಾಧಾನದಿಂದ ಪ್ರೀತಿಪೂರ್ವಕವಾಗಿ ನಿವಾರಿಸಿ.
ಕುಟುಂಬದ ಪ್ರತಿ ಸದಸ್ಯನಿಗೂ ತನ್ನ ಸ್ಥಾನ ಮತ್ತು ಔಚಿತ್ಯದ ಅನುಭವ ಮಾಡಿಸಿ.
ವಿರಾಮದ ಸಮಯವನ್ನು ಮೊಬೈಲ್/ ಇಂಟರ್ನೆಟ್/ ಮಿತ್ರರ ಜೊತೆ ಕಳೆಯುವ ಬದಲು ಕುಟುಂಬದವರೊಡನೆ ಕಳೆಯಿರಿ.
ಕುಟುಂಬದಲ್ಲಿ ಸದಸ್ಯರೆಲ್ಲರಿಗೂ ಗೌರವಿಸುವುದನ್ನು ಕಲಿಸಿಕೊಡಿ.
ಒಮ್ಮೊಮ್ಮೆ ಮನೆಯ ಅಡುಗೆಯ ಬದಲು ಆರ್ಡರ್ ಮಾಡಿ ಊಟ ತರಿಸಿ. ಮನೆಯಲ್ಲೇ ಪಾರ್ಟಿಯ ವಾತಾವರಣವನ್ನು ಸೃಷ್ಟಿಸಿ.
ಮನೆಯಲ್ಲಿ ಪ್ರತಿಯೊಬ್ಬರ ಜನ್ಮದಿನ ಅಥವಾ ವಿಶೇಷ ಸಂದರ್ಭವನ್ನು ವಿಶಿಷ್ಟವಾಗಿ ಆಚರಿಸಿ.
ಮನೆಯೇ ಮೊದಲ ಪಾಠಶಾಲೆ
ಮಕ್ಕಳಿಗೆ ಪ್ರಾಮಾಣಿಕತೆ ಮತ್ತು ಮೌಲ್ಯಗಳ ಪ್ರಾಮುಖ್ಯತೆಯನ್ನು ಕಲಿಸಿ.
ಮನೆಯ ಹಿರಿಯರಿಗೆ ಗೌರವ ನೀಡಿ.
ಟಿ.ವಿ. ನೋಡುವ ಸಮಯವನ್ನು ನಿರ್ಧರಿಸಿ.
ಮನೆಯಲ್ಲಿ ಶಿಸ್ತನ್ನು ಕಾಪಾಡಿ.
ಬಂಧುಗಳೊಂದಿಗೆ ಹಿತವಾದ ಸಂಪರ್ಕದಲ್ಲಿರಿ.
ಹೆಣ್ಣುಗಂಡು ಮಕ್ಕಳಲ್ಲಿ ಭೇದ ಮಾಡಬೇಡಿ.
ಸಮಸ್ಯೆ ಎದುರಾದಾಗ ಮನೆಯವರೊಂದಿಗೆ ಹಂಚಿಕೊಂಡು ಅವರ ಅಭಿಪ್ರಾಯ ಪಡೆಯಿರಿ.
ಮನೆಯಲ್ಲಿ ಎಲ್ಲರಿಗೂ ಉಳಿತಾಯ ಮಾಡುವ ಅಭ್ಯಾಸ ಬೆಳೆಸಿ.
ಪತಿಯ ಎಲ್ಲ ಕೆಲಸಗಳಲ್ಲೂ ಒತ್ತಾಸೆಯಾಗಿ ನಿಲ್ಲಿ. ಅಗತ್ಯವಾಗಿ ನಿಮ್ಮ ಸಲಹೆ ನೀಡಿ.
ನೆಂಟಸ್ತಿಕೆ ಕಾಪಾಡಿಕೊಳ್ಳಿ
ಜೀವನದಲ್ಲಿ ಯಾವಾಗ, ಯಾವ ನೆರವು ಅಗತ್ಯವಾಗುವುದೋ ತಿಳಿಯದು. ಆದ್ದರಿಂದ ಲಾಭ ನಷ್ಟಗಳನ್ನು ಯೋಚಿಸದೆ ಸಾಧ್ಯವಾದಷ್ಟು ಇತರರೊಡನೆ ಸಂಬಂಧ ಬೆಳೆಸಿಕೊಳ್ಳಿ. ತಿಂಗಳಲ್ಲಿ ಒಂದು ಸಲವಾದರೂ ನಿಮ್ಮ ಬಂಧುಗಳನ್ನು ಸಂಪರ್ಕಿಸಿ. ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಿ. ಅಪರಿಚಿತರಿಗೂ ನೆರವಾಗಿ.
ಸದಾ ಹೊಸತನ್ನು ಕಲಿಯಿರಿ
ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಅವಕಾಶ ಸಿಕ್ಕಿದಾಗ ಹೊಸದನ್ನು ಕಲಿಯಲು ಹಿಂದೆಗೆಯಬೇಡಿ. ಇಂದಿನ ಯುವಕರಂತೆ ಸಮಯದ ಜೊತೆಗೆ ಹೊಸ ಹೊಸ ಟೆಕ್ನಿಕ್ಗಳನ್ನು ಮೈಗೂಡಿಸಿಕೊಳ್ಳಿ. ಆಗ ನಿಮ್ಮ ಕೆಲಸಗಳಿಗಾಗಿ ಪತಿ ಅಥವಾ ಮಕ್ಕಳನ್ನು ಕಾಯುವುದು ತಪ್ಪುವುದೆಂದು ನಿಮಗೇ ತಿಳಿಯುತ್ತದೆ.
ಡಾ. ಆನಂದ್ ಹೇಳುತ್ತಾರೆ, “ಇಂದಿನ ಡೀ ಮಾನಿಟೈಸೇಶನ್ನಂತಹ ಪರಿಸ್ಥಿತಿಯಲ್ಲಿ ಕ್ಯಾಶ್ ಲೆಸ್ ಟ್ರಾನ್ಸಾಕ್ಷನ್ ವಿಧಾನವನ್ನು ಕಲಿಯುವುದು ಒಳ್ಳೆಯದು. ಈ ವಯಸ್ಸಿನಲ್ಲಿ ಇವುಗಳ ಜಂಜಾಟವೇಕೆ ಎಂದು ಯೋಚಿಸಿದರೆ ಅದು ನಿಮ್ಮ ತಪ್ಪು. ಇದು ಇಂದಿನ ಬೇಡಿಕೆಯಾಗಿದೆ. ಇದನ್ನು ನಿಮ್ಮದಾಗಿಸಿಕೊಂಡಾಗ ನಿಮ್ಮ ಜೀವನ ಸುಗಮವಾಗುತ್ತದೆ.”
ಮಕ್ಕಳು 18 ವಯಸ್ಸಿನವರಾದಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸಂಜಯ್ ಕುಮಾರ್ ಹೀಗೆ ಹೇಳುತ್ತಾರೆ, “ಮಕ್ಕಳು 18 ವರ್ಷ ವಯಸ್ಸಿನವರಾದಾಗ ಅವರೊಂದಿಗೆ ಹೆಚ್ಚು ಸಂಪರ್ಕದಲ್ಲಿರಿ. ಏಕೆಂದರೆ ಈ ವಯಸ್ಸಿನಲ್ಲಿ ಅವರು ಸರಿ ಮತ್ತು ತಪ್ಪು ಎಂಬುದರ ವ್ಯತ್ಯಾಸ ತಿಳಿಯಲಾರದವರಾಗಿರುತ್ತಾರೆ. ಹಿರಿಯರ ಜೊತೆ ಇದ್ದರೆ, ಆಗ ಅವರಿಗೆ ಬಹಳ ಒಳ್ಳೆಯದಾಗುತ್ತದೆ.”
ನಿಮಗಾಗಿ ಸಮಯ ಮಾಡಿಕೊಳ್ಳಿ
ಆಗಾಗ ನಿಮ್ಮನ್ನು ಯಾರೂ ಡಿಸ್ಟರ್ಬ್ ಮಾಡದಂತಹ ಸ್ಥಳದಲ್ಲಿ ಕುಳಿತು ಕೊಂಚ ಸಮಯ ಕಳೆಯಿರಿ. ಮೊಬೈಲ್, ಕಂಪ್ಯೂಟರ್ಗಳನ್ನು ದೂರವಿರಿಸಿ, ಶಾಂತ ಮನಸ್ಸಿನಿಂದ ಮುಂದಿನ ಕೆಲಸಗಳ ಬಗ್ಗೆ ಆಲೋಚಿಸಿ.
– ಜಿ. ಪಂಕಜಾ
“ಅನುಭವದೊಂದಿಗೆ ತರ್ಕವನ್ನು ಬಳಸುತ್ತಾ ಪುರಾತನ ಆಲೋಚನಾ ಧಾಟಿಯನ್ನು ದೂರ ತಳ್ಳಿದಾಗ ನಾವು ಜೀವನವನ್ನು ಉತ್ತಮಪಡಿಸಿಕೊಳ್ಳಬಹುದು……”
ಬಾಳ ಸಂಗಾತಿಯೊಂದಿಗೆ ಈ 18 ಮಾತುಗಳನ್ನು ಎಂದಿಗೂ ಆಡಬೇಡಿ ನಿಮ್ಮ ಡ್ರೆಸಿಂಗ್ ಸೆನ್ಸ್ ಸರಿಯಿಲ್ಲ.
ನಿಮ್ಮ ಕೈಲಾಗುವುದಿಲ್ಲ ಬಿಡಿ, ನಾನೇ ಮಾಡುತ್ತೇನೆ.
ನೀವು ನನ್ನನ್ನು ಸ್ವಲ್ಪ ಕೇರ್ ಮಾಡುವುದಿಲ್ಲ.
ನೋಡಿ, ನಾನು ದಪ್ಪಗಾಗಿದ್ದೇನೆ.
ನಾನು ನಿಮ್ಮನ್ನು ಮದುವೆಯಾಗಲೇಬಾರದಿತ್ತು.
ನಿಮ್ಮ ಸ್ನೇಹಿತರು ನನಗೆ ಇಷ್ಟವಾಗುವುದಿಲ್ಲ.
ನಿಮ್ಮ ಕೆಲಸ ಬದಲಾಯಿಸಿ.
ವಾಟ್ ಈಸ್ ರಾಂಗ್ ವಿತ್ ಯೂ?
ಕೊಂಚ ಇರಿ. ಈ ಕೆಲಸ ಹೇಗೆ ಮಾಡಬೇಕೆಂದು ನಾನು ಹೇಳುತ್ತೇನೆ.
ಡೋಂಟ್ ಟಚ್ ಮಿ. ದೂರವಿರಿ.
ನಿಮ್ಮ ಸಂಪಾದನೆ ಇನ್ನಷ್ಟು ಹೆಚ್ಚಾಗಿದ್ದರೆ ಚೆನ್ನಾಗಿರುತ್ತಿತ್ತು.
ನೀವು ನಿಜವಾಗಲೂ ನನ್ನನ್ನು ಪ್ರೀತಿಸುತ್ತಿದ್ದರೆ, ಹೀಗೆ ಮಾಡುತ್ತಿರಲಿಲ್ಲ.
ನಿಮ್ಮ ಜೊತೆ ಹೊಂದುವುದಿಲ್ಲ ಅಂತ ನನ್ನ ತಾಯಿ ಮೊದಲೇ ಹೇಳಿದ್ದರು.
ನಿಮ್ಮ ತಂದೆ ಹಾಗೇ ನೀವು ಹಠಮಾರಿ.
ನಿಮ್ಮ ತಾಯಿ ಎಷ್ಟು ಮಾತನಾಡುತ್ತಾರೆ!
ನಿಮ್ಮ ಅಕ್ಕ ತಂಗಿಯರು ನನ್ನ ಬಾಳನ್ನು ನುಂಗಿಬಿಟ್ಟರು.
ನನ್ನ ತವರುಮನೆಯಲ್ಲಿ ಎಷ್ಟು ಹಾಯಾಗಿದ್ದೆ…..
ನನ್ನ ಫ್ರೆಂಡ್ಗೆ ಅವಳ ಪತಿ ಎಷ್ಟು ಒಳ್ಳೆಯ ಗಿಫ್ಟ್ ಕೊಡುತ್ತಿರುತ್ತಾರೆ ನೋಡಿ.
“ನಮ್ಮ ಜೀವನ ಉತ್ತಮವಾಗಲು ಮೊದಲು ನಾವು ಸಂತೋಷವಾಗಿರಲು ಕಲಿಯಬೇಕು. ನಮ್ಮ ಮನಸ್ಸಿನ ಬಾಗಿಲುಗಳನ್ನು ತರೆದಿಟ್ಟಾಗ ಮಾತ್ರ ಇದು ಸಾಧ್ಯವಾಗುತ್ತದೆ…..”
ಈ 18 ವಿಷಯಗಳಿಂದ ದೂರವಿರಿ
- ಈರ್ಷ್ಯೆ
- ಕೋಪ
- ಪಶ್ಚಾತ್ತಾಪ
- ನಕಾರಾತ್ಮಕ ಆಲೋಚನೆ
- ನೆಪ ಹೇಳುವ ಪ್ರವೃತ್ತಿ
- ಚಿಂತೆ
- ಚಾಡಿಕೋರ ಮಿತ್ರರು
- ಕೆಟ್ಟದ್ದನ್ನು ಬಯಸುವ ಜನರು
- ನಿರುತ್ಸಾಹಗೊಳಿಸುವ ಜನರು
- ಮೂಢನಂಬಿಕೆ
- ಒಣ ಆಡಂಬರ
- ಕೃತಘ್ನತಾ ನಡವಳಿಕೆ
- ಸೋಲಿನ ಭೀತಿ
- ಅನಿಶ್ಚಿತ ಸ್ಥಿತಿ
- ತಪ್ಪು ಆಲೋಚನೆಯ ವ್ಯಕ್ತಿಯ ಸಂಗ
- ವ್ಯರ್ಥ ಖರ್ಚು
- ಪ್ರತೀಕಾರ ಭಾವನೆ
- ದುರಭ್ಯಾಸ