ಅಷ್ಟಕ್ಕೂ ಮೀನಾ ಬಾಯಿ ಹೇಳಿದ್ದಾದರೂ ಏನು? ಅತಿಥಿಗಳನ್ನು ಸ್ವಾಗತಿಸುವ ಭರದಲ್ಲಿ ಹಾಲ್‌ನಿಂದ ಮುಖ್ಯದ್ವಾರದತ್ತ ಲಗುಬಗೆಯಲ್ಲಿ ಓಡಾಡುತ್ತಿದ್ದ ರೋಹಿಣಿ ತುಂಬಾ ಸುಸ್ತಾದ ಳಂತೆ ಕಾಣುತ್ತಿದ್ದಳು. ಒಂದೇ ಸಮನೆ ಅತ್ತಿಂದಿತ್ತ ಓಡಾಡುತ್ತಿದ್ದುದರಿಂದ ಸ್ವಲ್ಪ ಹೊತ್ತು ರೆಸ್‌್ಟ ತಗೋಬೇಕೆಂದು ಅನಿಸಿತು. ಬಂದ ಅತಿಥಿಗಳ ಹೊಗಳುವಿಕೆ, ಪ್ರಶಂಸೆಯ ಮಾತುಗಳಿಂದ ರೋಹಿಣಿಯ ಸಂತಸಕ್ಕೆ ಪಾರೀ ಇರಲಿಲ್ಲ.ಈ ಸಂತಸಕ್ಕೆ ಕಾರಣ ಏನಂದ್ರೆ ರೋಹಿಣಿಯ ಸೊಸೆ ಪೂರ್ವಿ ಎಂ.ಬಿ.ಎ ಪಾಸು ಮಾಡಿದ್ದು.ಹೀಗಾಗಿ ರೋಹಿಣಿಗೆ ಗಳಿಕೆಯ ಮಹಾಪೂರೀ ಹರಿದುಬಂದಿತ್ತು. ಪೂರ್ವಿಗಂತೂ ಒಂದೇ ಒಂದು ಕ್ಷಣ ಬಿಡುವಿಲ್ಲದೆ ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ, ಅಡುಗೆಮನೆ ಹಾಗೂ ಹಾಲ್ ನಡುವೆ ಓಡಾಡುತ್ತಿದ್ದಳು. ನಡುನಡುವೆ ಶುಭಾಶಯ ಹೇಳಲು ಬಂದ ಅತಿಥಿಗಳನ್ನು ಸತ್ಕರಿಸುತ್ತಾ, ಮಂದಹಾಸ ಬೀರುತ್ತಾ, ಕೈ ಜೋಡಿಸಿ ಧನ್ಯವಾದ ಸಮರ್ಪಿಸಬೇಕಾಗಿತ್ತು. ಔತಣಕೂಟಕ್ಕೆ ಆಗಮಿಸಿದ ಅತಿಥಿಗಳಲ್ಲಿ ಹೆಚ್ಚಿನವರು ಮಹಿಳಾ ಕ್ಲಬ್‌ನ ಸದಸ್ಯರೇ ಆಗಿದ್ದರು. ಜೊತೆಗೆ ಸ್ನೇಹಿತರು, ನೆರೆಹೊರೆಯವರು ಹಾಗೂ ಬಂಧುಗಳು ಸೇರಿಕೊಂಡಿದ್ದರು. ಸಂಭ್ರಮದ ಗುಂಗಿನಲ್ಲಿದ್ದ ರೋಹಿಣಿಗೆ ಈ ಅದ್ಭುತ ಸಂಭ್ರಮದೊಂದಿಗೆ ತನ್ನ ಬದುಕಿನ ನವಿರು ಪಯಣದ ನೆನಪು ಹಾದುಹೋಯಿತು.

ಮಹಿಳಾ ಕ್ಲಬ್‌ನ ಚುನಾವಣೆಯಲ್ಲಿ ತಾನು ಅವಿರೋಧವಾಗಿ ಆಯ್ಕೆಯಾದಾಗ ರೋಹಿಣಿಗೆ ಆಶ್ಚರ್ಯವಾಗಿತ್ತು. ಅನಾಯಾಸವಾಗಿ ಬಂದ ಗೆಲುವಿಗೆ ಆಶ್ಚರ್ಯಪಟ್ಟಳು. ಧನ್ಯವಾದ ಹೇಳಲು ಮೈಕ್‌ ಬಳಿ ಬಂದ ರೋಹಿಣಿಗೆ ಬಾಯಿಂದ ಮಾತೇ ಹೊರಡಲಿಲ್ಲ. ಅತ್ಯಂತ ವಿನೀತಳಾಗಿ ಅತೀ ಭಾವುಕತೆಯಿಂದ, “ಸ್ನೇಹಿತರೆ…. ನೀವೆಲ್ಲರೂ ನನ್ನ ಮೇಲೆ ಇಷ್ಟೊಂದು ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಕ್ಕೆ ನಾನು ನಿಮಗೆ ತುಂಬಾ ಆಭಾರಿಯಾಗಿದ್ದೀನಿ. ನಿಮ್ಮ ಈ ವಿಶ್ವಾಸ ಎಂದೂ ಮರೆಯುವಂಥದ್ದಲ್ಲ.. ನೀವು ಹೊರಿಸಿರುವ ಈ ಜವಾಬ್ದಾರಿಯನ್ನು ನಿಭಾಯಿಸುವ ನಂಬಿಕೆ ನನಗಿದ್ದು, ನಿಮ್ಮ ಅಪೇಕ್ಷೆಯನ್ನು ಈಡೇರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ,” ಎನ್ನುತ್ತಾ ವಾಗ್ದಾನ ನೀಡಿದಳು.

ಈ ರೀತಿಯ ವಾಗ್ದಾನ, ಪೊಳ್ಳು ಭರವಸೆಯಿಂದ ತನ್ನ ಹೊಟ್ಟೆ ತುಂಬುವುದಿಲ್ಲ ಅನ್ನುವ ಸತ್ಯ ಗೊತ್ತಿತ್ತು. ಈ ಪದವಿಯಲ್ಲಿದ್ದುಕೊಡೇ ಎಂತಹ ಸಾಧನೆ ಮಾಡಬೇಕು ಅಂದ್ರೆ ಇಡೀ ಊರೇ ತನ್ನ ತಿರುಗಿ ನೋಡುವಂತಿರಬೇಕು. ಗೆಳತಿಯರೆಲ್ಲಾ `ಭೇಷ್‌…. ಭೇಷ್‌’ ಎನ್ನುತ್ತಾ ಬೆನ್ನು ತಟ್ಟುವಂತಿರಬೇಕು. ಅಂತಹ ಒಂದು ವಿಶೇಷ ಸಾಧನೆ ಮಾಡಿದರೆ ಮಾತ್ರವೇ ಈ ಪದವಿಗೊಂದು ನೆಲೆ, ಬೆಲೆ, ಎಲ್ಲವೂ ದಕ್ಕುತ್ತದೆ ಎನ್ನುವ ಸತ್ಯ ಅಂದಾಜು ಮಾಡತೊಡಗಿದಳು.

ಬಹಳ ಹೊತ್ತಿನವರೆಗೂ ಯೋಚಿಸಿ, ಯೋಚಿಸಿ ಒಂದು ನಿರ್ಧಾರಕ್ಕೆ ಬಂದೇಬಿಟ್ಟಳು. ಅದು ತನ್ನ ಸೊಸೆ ಪೂರ್ವಿಗೆ ಎಂಬಿಎ ಓದಿಸುವುದು. ಇದರಿಂದಾಗಿ ಸಮಾಜದಲ್ಲೂ ಪ್ರತಿಷ್ಠೆ ಜೊತೆಗೆ ತನ್ನ ಬಂಧುಗಳಿಂದಲೂ ಕೂಡ ವಿಶೇಷ ಮರ್ಯಾದೆ. ಅಲ್ಲದೆ ಅಧ್ಯಕ್ಷರ ಸೊಸೆ ಎಂ.ಬಿ.ಎ. ಮಾಡಿದ್ದಾರೆಂದರೆ ಆ ಪದವಿಗೂ ಕೂಡ ಒಂದು ಘನತೆ. ಇದರಿಂದ ಇಷ್ಟೆಲ್ಲಾ ಅನುಕೂಲ ಇರಬೇಕಾದರೆ ಪೂರ್ವಿಗೆ ಎಂ.ಬಿ.ಎ ಓದಿಸೋದು ಸರಿ ಅನ್ನಿಸಿತು.

ಮದುವೆಯಾಗಿ ಸುಮಾರು 4 ವರ್ಷದ ನಂತರ ಅದೂ ಒಂದು ಮಗುವಿನ ತಾಯಿಯಾದ ಮೇಲೆ ಈಗ ಕಾಲೇಜಿಗೆ ಸೇರಿಸುವ ಅತ್ತೆಯ ಪ್ರಸ್ತಾಪ ಪೂರ್ವಿಗೆ ಆಶ್ಚರ್ಯ ತಂದಿತ್ತು. ಅತ್ತೆಯ ಈ ನಿರ್ಧಾರವನ್ನು ಕಠಿಣ ಶಬ್ದಗಳಿಂದ ಖಂಡಿಸಬೇಕೆಂದುಕೊಂಡಿದ್ದ ಪೂರ್ವಿಗೆ ತಂಪಾದ `ಕೂಲ್ ‌ಡ್ರಿಂಕ್ಸ್’ ನೀಡಿ ಅವಳ ಬಾಯಿ ಮುಚ್ಚಿಸುವಲ್ಲಿ ಅತ್ತೆ ರೋಹಿಣಿ ಸಫಲಳಾದಳು.

“ಪೂರ್ವಿ ಈಗಾಗಲೇ `ಸಮಯ’ ಮೀರಿದೆ ಅಂತ ಯಾಕೆ ಅಂದ್ಕೋತೀಯಾ…. ನಾವು ಎದ್ದಾಗಲೇ  ಬೆಳಗಾಯಿತು ಅಂತ ತಿಳಿಬೇಕು ದಡ್ಡಿ….. ನಿಂಗೇನು ಮಾಹಾ ವಯಸ್ಸಾಗಿದೆ…. ನೀನಿನ್ನೂ ಚಿಕ್ಕ ಹುಡುಗಿ. ನಿನ್ನ ಮೊದಲ ಸಾರಿ ನೋಡಿದಾಗಲೇ ಅಂದ್ಕೊಂಡಿದ್ದೆ. ಮುಂದೆ ನಿನ್ನನ್ನು ಚೆನ್ನಾಗಿ ಓದಿಸಬೇಕೆಂದು ನಿರ್ಧರಿಸಿದ್ದೆ. ಆದರೆ ಮದುವೆಯಾದ ಹೊಸತರಲ್ಲಿ ಒಂದೆರಡು ವರ್ಷ ಜಾಲಿಯಾಗಿ, ಹಾಯಾಗಿರಲಿ ಆಮೇಲೆ ನೋಡೋಣ ಅಂತ ನಾನೇ ಸುಮ್ಮನಿದ್ದೆ. ಈ ಮಧ್ಯೆ ರಂಜೂ ಹುಟ್ಟಿದ. ಅವನ ಲಾಲನೆ ಪಾಲನೆಯಲ್ಲಿ ಎರಡೂವರೆ ವರ್ಷ ಕಳೆದುಹೋಯಿತು. ಇನ್ನೇನು ಸ್ವಲ್ಪ ದಿನದಲ್ಲೇ ಅವನು ಕೂಡ ನರ್ಸರಿಗೆ ಹೋಗ್ತಾನೆ. ಮನೆ ಕೆಲಸವನ್ನೆಲ್ಲಾ ನಾನು ನೋಡ್ಕೋತೀನಿ. ಹಾಗೇನಾದರೂ ಅವಶ್ಯಕತೆಯಿದ್ದರೆ ಯಾರಾದರೊಬ್ಬರು ಮನೆಗೆಲಸದವಳನ್ನು ಇಟ್ಟುಕೊಂಡರಾಯಿತು.”

“ಆದ್ರೆ…. ಎಂ.ಬಿ.ಎ ಓದಿ ನಾನು ಮಾಡುವುದಾದರೂ ಏನು? ನೌಕರಿ! ನಾನೆಂದೂ ಹೊರಗಡೆ ಕೆಲಸಕ್ಕೆ ಹೋದವಳೇ ಅಲ್ಲ….!” ಎನ್ನುತ್ತಾ ಅತ್ತೆಯ ಮನದ ಹುನ್ನಾರವನ್ನರಿಯದ ಪೂರ್ವಿ ಗೊಂದಲಕ್ಕೀಡಾದಳು.

“ಓದು ಕೇವಲ ನೌಕರಿಗಷ್ಟೇ ಅಲ್ಲಮ್ಮ. ಕೆಲಸಕ್ಕೆ ಸೇರೋದೂ ಬಿಡೋದು ಅದು ಮುಂದಿನ ಮಾತು. ಆದ್ರೆ ಹೆಚ್ಚು ಹೆಚ್ಚು ಓದಿ ಪದವಿ ಪಡೆದರೆ ಜ್ಞಾನ ಸಂಪತ್ತು ಹೆಚ್ಚುತ್ತೆ, ಜೊತೆಗೆ ಸಮಾಜದಲ್ಲಿ ನಮ್ಮ ಪ್ರತಿಷ್ಠೆನೂ ಹೆಚ್ಚಾಗುತ್ತೆ. ಅಷ್ಟೇ ಅಲ್ಲ ಕೈಯಲ್ಲಿ ಒಂದು ಪದವಿ ಇದ್ರೆ ಅದು ಮುಂದೆ ಎಂದಾದರೊಂದು ದಿನ ಕೆಲಸಕ್ಕೆ ಬರುತ್ತೆ. ಅರ್ಥವಾಯಿತಾ…?”

“ಹೂಂ….., ಅತ್ತೆ.”

“ನಾನು ಈಗಾಗಲೇ ಒಂದೆರಡು ಕಾಲೇಜಿನಿಂದ ಅಡ್ಮಿಷನ್‌ಗೆ ಅರ್ಜಿಗಳನ್ನು ತಂದಿದೀನಿ. ಅದನ್ನು ಓದಿ ನಿಂಗೆ ಈ ಕಾಲೇಜು ಇಷ್ಟ ಅಂತ ಹೇಳು, ಅದೇ ಕಾಲೇಜಿಗೆ ನಿನ್ನನ್ನು ಸೇರಿಸ್ತೀನಿ… ಸರೀನಾ?”

“ಆದ್ರೆ…. ಅತ್ತೆ ಮನೆಯಲ್ಲಿದ್ದುಕೊಂಡೇ ಪರೀಕ್ಷೆ ಕಟ್ಟಿ ಪಾಸು ಮಾಡಬಹುದ್ವಾ?”

“ಇಲ್ಲಾ…. ಇಲ್ಲಾ…. ಮನೆಯಲ್ಲೇ ಕೂತು ಪರೀಕ್ಷೆ ಬರೆದರೆ ನೀನು ಎಂ.ಬಿ.ಎ ಓದೋ ವಿಚಾರ ಯಾರಿಗೂ ಗೊತ್ತಾಗಲ್ಲ. ಎಲ್ಲರಿಗೂ ಗೊತ್ತಾಗಬೇಕಂದ್ರೆ…. ನೀನು ಕಾಲೇಜಿಗೆ ಹೋಗಲೇ ಬೇಕು ಪುಟ್ಟಿ….”

“ಗೊತ್ತಾಗಿಲ್ಲ ಅಂದ್ರೆ… ನಾವೇ ಎಲ್ಲರಿಗೂ ಹೇಳಿಕೊಂಡು ಬಂದರಾಯಿತು ಅತ್ತೆ…..” ಎನ್ನುತ್ತಾ ಅತ್ತೆಯ ತಂತ್ರವನ್ನರಿಯದ ಪೂರ್ವಿ ಪೆದ್ದಪೆದ್ದಾಗಿ ನೋಡತೊಡಗಿದಳು.

“ನೋಡು ಪೂರ್ವಿ…. ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡು ಪಾಸಾದ ಡಿಗ್ರಿಗಳಿಗೆ `ವ್ಯಾಲ್ಯೂ’ ಇರಲ್ಲ. ಜೊತೆಗೆ ಮಾನ್ಯತೆಯೂ ಇರಲ್ಲ ಅನ್ನೋ ಸಂದೇಹ ನನಗಿರುವುದರಿಂದ ರೆಗ್ಯುಲರ್‌ ಕಾಲೇಜು ವಿದ್ಯಾರ್ಥಿನಿಯಂತೆ ಓದಿ ಡಿಗ್ರಿ ಪಡೆದರೆ ಹೆಚ್ಚು ಉಪಯುಕ್ತ,” ಎನ್ನುತ್ತಾ ಪೂರ್ವಿಯ ಮುಖದಲ್ಲಿ ಮೂಡಿರೋ ಗೊಂದಲದ ಗೆರೆಗಳನ್ನು ಗಮನಿಸಿದ ರೋಹಿಣಿ, ಮತ್ತೆ ಮತ್ತೆ ಅದೇ ವಿಚಾರವನ್ನು  ಮುಂದುರಿಸುವ ಪ್ರಯತ್ನ ಮಾಡಲಿಲ್ಲ. ಒಂದೇ ಬಾರಿಗೆ ಎಲ್ಲಾ ವಿಚಾರವನ್ನು ಅವಳ ತಲೆಗೆ ತುಂಬಿಸಿ `ಕನ್‌ಫ್ಯೂಸ್‌’ ಮಾಡುವುದಕ್ಕಿಂತ, ನಿಧಾನವಾಗಿ ತಿಳಿ ಹೇಳುವುದೇ ವಾಸಿ ಅನ್ನಿಸಿತು.

“ಒಮ್ಮೆ ಕಾಲೇಜಿಗೆ ಹೋಗುವುದಕ್ಕೆ ಶುರು ಮಾಡಿದ್ರೆ ಸಾಕು. ಹೋಗ್ತಾ ಹೋಗ್ತಾ ಎಲ್ಲ ಸರಿ ಅನ್ನಿಸುತ್ತೆ. ಅಡೆತಡೆಗಳೆಲ್ಲಾ ತಾನಾಗೆ ನಿವಾರಣೆಯಾಗುತ್ತೆ. ಆಗ ನಿನಗೆ ಇಷ್ಟವಾಗುತ್ತಾ ಹೋಗುತ್ತೆ.” ಗಡಿಯಾರದ ಮುಳ್ಳು ಒಂದು ಬಾರಿ ಸುತ್ತಿ ಬಂದಷ್ಟೇ ವೇಗವಾಗಿ ಪೂರ್ವಿ ಪುನಃ ಕಾಲೇಜಿಗೆ ಹೋಗಲು ಆರಂಭಿಸಿದಳು. ದಿನಗಳು ಕಳೆದವು, ವರ್ಷಗಳೂ ಕಳೆದವು ಅಂತೂ ಇಂದು ಪೂರ್ವಿ ಎಂ.ಬಿ.ಎ ಪದವಿ ಪಡೆದಳು. ಈ ಪದವಿ ಪಡೆದ ಆನಂದವೇ ಇಂದಿನ ಸಂಭ್ರಮಕ್ಕೆ ಕಾರಣವಾಗಿತ್ತು. ರಾಜಕೀಯ ಧುರೀಣರು, ಸ್ನೇಹಿತರು, ಕ್ಲಬ್‌ನ ಸದಸ್ಯರು, ಆತ್ಮೀಯರು, ಅಕ್ಕಪಕ್ಕದ ಮನೆಯವರು, ಪೂರ್ವಿಯ ಗೆಳತಿಯರು….. ಹೀಗೆ ಎಲ್ಲರೂ ಈ ಔತಣಕೂಟದಲ್ಲಿ ಹಾಜರಿದ್ದು ಸಂಭ್ರಮವನ್ನು ಆಚರಿಸಿದರು. ಪೂರ್ವಿಗಿಂತ ಹೆಚ್ಚಾಗಿ ಅತ್ತೆ ರೋಹಿಣಿಯ ಗುಣಗಾನವೇ  ಇಂದಿನ ಕಾರ್ಯಕ್ರಮದ ಹೈಲೈಟಾಗಿತ್ತು. ಎಲ್ಲರ ಹೊಗಳಿಕೆ, ಪ್ರಶಂಸೆಯ ಮಾತುಗಳಿಂದ ಮೈಮರೆತು ಹೋದ ರೋಹಿಣಿಗೆ  ಸ್ವರ್ಗ ಮೂರೇ ಗೇಣು ಎಂಬಂತಾಯಿತು. ಕ್ಲಬ್‌ನ ಇನ್ನೋರ್ವ ಸದಸ್ಯೆ ಸುರಭಿ ಕೈಗೆ ಮೈಕ್‌ ಎತ್ತಿಕೊಳ್ಳುತ್ತಾ, “ಸ್ನೇಹಿತರೇ…. ಅತ್ತೆ ಅಂದ್ರೆ ರೋಹಿಣಿಯರ ಹಾಗಿರಬೇಕು. ಹಾವು ಮುಂಗುಸಿಯಂತೆ ಕಚ್ಚಾಡುವ ಎಂದಿನ ಅತ್ತೆ ಸೊಸೆಯರ ನಡುವೆ ಈ ಅತ್ತೆ ಸೊಸೆ ತೀರ ವಿಭಿನ್ನ. ರೋಹಿಣಿ ತಮ್ಮ ಸೊಸೆಯ ಉನ್ನತಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ `ಮಹಾಮಾತೆ’ ಯಾಗಿ ಕಾಣುತ್ತಾರೆ. ಸಾಮಾನ್ಯವಾಗಿ ಅತ್ತೆಯಂದಿರೆಲ್ಲಾ, ಓದಿರುವ, ಕೆಲಸದಲ್ಲಿರುವ, ಉನ್ನತ ಪದವಿಯಲ್ಲಿರುವ ಸೊಸೆಯಂದಿರನ್ನು ಕೆಲಸ ಬಿಡಿಸಿ ಮನೆಯಲ್ಲೇ ಇಟ್ಟುಕೊಳ್ಳುತ್ತಾರೆ. ಹಾಗೇ ಮನೆಯ ಜವಾಬ್ದಾರಿಯನ್ನೆಲ್ಲಾ ಅವರ ಮೇಲೆ ಹೇರಿ `ಅತ್ತೆ’ ಎನ್ನುವ ಅಧಿಕಾರ ಚಲಾಯಿಸುತ್ತಾ ಬದುಕುತ್ತಿರುವ ಅತ್ತೆಯಂದಿರ ನಡುವೆ, ರೋಹಿಣಿ `ಮಾದರಿ ಅತ್ತೆ’ಯಾಗಿ ನಿಲ್ಲುತ್ತಾರೆ.

“ತನ್ನ ಸೊಸೆಯ ಅಭ್ಯುದಯಕ್ಕಾಗಿ ಮಕ್ಕಳ ಜವಾಬ್ದಾರಿ, ಮನೆವಾರ್ತೆ ಕೆಲಸ ಜೊತೆಗೆ ಹತ್ತು ಹಲವಾರು ಸಮಸ್ಯೆಗಳನ್ನು ಬಗೆಹರಿಸುತ್ತಾ ಸೊಸೆಗೆ ಎಲ್ಲಾ ಸ್ವಾತಂತ್ರ್ಯವನ್ನು ನೀಡಿ ಇಂದು ಎಂ.ಬಿ.ಎ. ಪದವಿ ಪಡೆಯಲು ಕಾರಣರಾದ ಇವರ `ಆದರ್ಶಮಯ ತ್ಯಾಗವ’ನ್ನು ಎಲ್ಲಾ ಅತ್ತೆಯಂದಿರೂ ಅನುಕರಿಸಬೇಕು. ಎಲ್ಲರಿಗೂ ಇಂತಹ `ಅತ್ತೆ’ ಸಿಗೋದಿಲ್ಲ….” ಎನ್ನುತ್ತಾ ಮೈಕ್‌ ಕೆಳಗಿಟ್ಟಾಗ ರೋಹಿಣಿಗೆ ತಾನಿನ್ನೂ ಈ ಭೂಮಿ ಮೇಲೆ ನಿಂತಿದ್ದೀನಿ ಅಂತ ಅನ್ನಿಸಿದ್ದು.

“ಸ್ನೇಹಿತರೇ…. ನಂಗೆ ಬಾಯಿಂದ ಮಾತೆ ಹೊರಡುತ್ತಿಲ್ಲ. ನಿಮ್ಮ  ಈ ಹೊಗಳಿಕೆಗೆ ನಾನು ಎಷ್ಟು ಮಾತ್ರ ಯೋಗ್ಯಳು ಅನ್ನೋದು ಗೊತ್ತಿಲ್ಲ. ಆದ್ರೆ ನಿಮ್ಮ ಈ ಅಭಿಮಾನ ನನ್ನ ಜನ್ಮ ಸಾರ್ಥಕವಾಗಿಸಿತು. ಈ ನಿಮ್ಮ ಹಾರೈಕೆಗೆ ನಾನು ಧನ್ಯವಾದವನ್ನಷ್ಟೆ ಸಮರ್ಪಿಸುತ್ತಿದ್ದೇನೆ,” ಎನ್ನುತ್ತಾ ತನಗೆ ದೂರಕಿದ ಅಭೂತಪೂರ್ವ ಹೊಗಳಿಕೆಯಿಂದ ಕರಗಿಹೋದ ರೋಹಿಣಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ಅರ್ಥವಾಗದೆ ಮುಸಿ ಮುಸಿ ನಗತೊಡಗಿದಳು.

“ನೀವು ತಿಳಿಯದ ಇನ್ನೂ ಒಂದು ವಿಚಾರವನ್ನು ನಮ್ಮ ರೋಹಿಣಿಯರು ಈಗಾಗೇ ಸಾಬೀತುಪಡಿಸಿದ್ದಾರೆ. ಅದೇನೆಂದರೆ…” ಸುರಭಿ ಎಲ್ಲರ ಕುತೂಹಲವನ್ನು ತನ್ನತ್ತ ಸೆಳೆಯುತ್ತಾ ಹೇಳುತ್ತಿದ್ದಂತೆ, “ಏನು…..ಏನು….?” ಎನ್ನುವಂತೆ ಕುತೂಹಲ ತಡೆಯಲಾರದೆ ಎಲ್ಲರೂ ಸುರಭಿಯತ್ತ ದೃಷ್ಟಿಹರಿಸಿದರು.

“ಅದು ಏನಂದ್ರೆ…. ರೋಹಿಣಿಯವರನ್ನು ನಮ್ಮ ಕ್ಲಬ್‌ನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದು ಸಮಯೋಚಿತ ಆಯ್ಕೆಯಾಗಿತ್ತು. ಯಾಕಂದ್ರೆ ಆ ಸ್ಥಾನಕ್ಕೆ ಅರ್ಹರಾಗಿದ್ದರು. ಅಲ್ಲದೆ, ಅವರ ಈ ಪ್ರಗತಿಶೀಲ ಹೆಜ್ಜೆಯಿಂದಾಗಿ ಅಧ್ಯಕ್ಷ ಸ್ಥಾನದ ಹಿರಿಮೆಯನ್ನು ಆಕಾಶದೆತ್ತರಕ್ಕೆ ಕೊಂಡೊಯ್ದಿದ್ದಾರೆ. ನಮಗೆಲ್ಲರಿಗೂ ಇವರ ಈ ಸಾಧನೆ ಬಗ್ಗೆ ಅತೀ ಹೆಮ್ಮೆ ಇದೆ,” ಎನ್ನುತ್ತಿದ್ದಂತೆ ಎಲ್ಲಾ ಸದಸ್ಯರು ಚಪ್ಪಾಳೆ ಹೊಡೆಯುವ ಮೂಲಕ ತಮ್ಮ ಅಭಿಮಾನವನ್ನು ಮೆರೆದರು.ಇಂತಹ ಅದ್ಭುತಗಳಿಗಾಗಿ ರೋಹಿಣಿಯ ಪದವಿ ವ್ಯಾಮೋಹದ ತಪಸ್ಸು ಫಲ ನೀಡಿತ್ತು. ತಕ್ಷಣವೇ ಹಾರೈಕೆ ಪ್ರತಿಯಾಗಿ, “ಸ್ನೇಹಿತರೆ… ನನ್ನ ಈ ಚಿಕ್ಕ ಸಾಧನೆಯನ್ನು ಇಷ್ಟು ದೊಡ್ಡದಾಗಿಸಿ, ನನ್ನನ್ನು ಹರಸಿದಿರಿ. ಇದು ನಿಮ್ಮ ಅಭಿಮಾನ, ನಿಮಗೆ ಸೇರಬೇಕಾಗಿದ್ದು. ನಿಜ ಹೇಳಬೇಕೆಂದರೆ ನನ್ನ ಸೊಸೆಗೆ ಎಂ.ಬಿ.ಎ ಓದಿಸಬೇಕು ಅಂತ ನಿರ್ಧರಿಸಿದಾಗ ಇದೆಲ್ಲದರ ಕಲ್ಪನೆಯೇ ಇರಲಿಲ್ಲ. ಕೇವಲ ಮನಸ್ಸು ಹೇಳಿರುವುದಷ್ಟನ್ನೇ ನಾನು ಮಾಡಿದೆ, ಮಾಡ್ತಾನೆ ಹೋದೆ…. ಇಂದು ಈ ಮಟ್ಟಕ್ಕೆ ನನ್ನನ್ನು ತಂದು ನಿಲ್ಲಿಸಿದೆ. ನನ್ನ ಬದುಕು ಸಾರ್ಥಕವಾಯಿತು,” ಎನ್ನುತ್ತಾ ಮಾತು ಮುಗಿಸಿ ಎಲ್ಲರನ್ನೂ ಊಟಕ್ಕೆ ಕೂರುವಂತೆ ಕರೆದಳು.

ಎಲ್ಲರೂ ತಟ್ಟೆಯನ್ನು ಕೈಗೆತ್ತಿಕೊಂಡು ಊಟ ಆರಂಭಿಸಿದರು. ಇತ್ತ ರೋಹಿಣಿ ಒಬ್ಬೊಬ್ಬರನ್ನೂ ಮಾತನಾಡಿಸುತ್ತಾ “ಸಂಕೋಚಪಡಬೇಡಿ…. ಏನು ಬೇಕಾದರೂ ಕೇಳಿ ಹಾಕಿಸಿಕೊಳ್ಳಿ,” ಎನ್ನುತ್ತಾ ಸುರಭಿ ಬಳಿ ಬಂದು, “ಏನು ತಿಂದೇ ಇಲ್ಲಾ ನೀನು… ಯಾಕಮ್ಮ…” ಎನ್ನುತ್ತಾ ಒತ್ತಾಯ ಪೂರ್ವಕವಾಗಿ ಒಂದು ಜಾಮೂನ್‌ನನ್ನು ಅವಳ ತಟ್ಟೆಗೆ ತುರುಕಿದಳು. ಬಹುಶಃ ತನ್ನನ್ನು ವಿಪರೀತವಾಗಿ ಹೊಗಳಿದ್ದಕ್ಕೆ ಪ್ರತಿಯಾಗಿ ಸುರಭಿಗೆ ದಕ್ಕಿದ ಬಹುಮಾನವಿರಬೇಕು. ಹೊಗಳಿಕೆಯ `ಹ್ಯಾಂಗ್‌ ಓವರ್’ನಿಂದ ಹೊರಬಾರದೆ ಅತ್ತಿಂದಿತ್ತ ಓಲಾಡುತ್ತಿದ್ದ ರೋಹಿಣಿ, “ನಾನು ನಿಮಗಾಗಿ ಬಿಸಿ ಬಿಸಿ ಟೀ ಮಾಡ್ಕೊಂದು ಬರ್ತೀನಿ,” ಎಂದಳು.

“ಬೇಡ….ಬೇಡ…. ಟೀ ಬೇಕಾದ್ರೆ ಮನೆಗೆ ಹೋಗಿ ಮಾಡಿಕೊಂಡು ಕುಡಿಯಬಹುದು. ಆದ್ರೆ ನಿಮ್ಮೊಂದಿಗೆ ಮಾತನಾಡುವ ಈ ಅವಕಾಶ ನಮಗೆ ತುಂಬಾ ಅಪರೂಪವಾಗಿದೆ. ನೀವಂತೂ ಯಾವಾಗಲೂ ಬಿಝಿ ಸೆಲೆಬ್ರಿಟಿ.”

“ನೀವು ಕೂತ್ಕೊಳ್ಳಿ ಅತ್ತೆ… ನಾನೇ ಟೀ ಮಾಡ್ಕೊಂಡು ಬರ್ತೀನಿ,” ಎಂದಳು ಪೂರ್ವಿ.

“ಬೇಡ…. ಬೇಡ…. ನೀನು ಕೂತ್ಕೊ ನಾನೇ ಟೀ ಮಡ್ಕೊಂಡು ಬರ್ತೀನಿ…” ಎನ್ನುವ ಹೊತ್ತಿಗೆ ಪೂರ್ವಿ ಅದಾಗಲೇ ಅಡುಗೆಮನೆಯತ್ತ ಹೋಗಿಯಾಗಿತ್ತು.

“ಬೆಳಗ್ಗೆಯಿಂದ ನಾನು ಯಾವುದೇ ಕೆಲಸವನ್ನು ಮಾಡಲು ಬಿಡ್ತಾ ಇಲ್ಲ. ಅಲ್ಲದೆ, `ಯಾವಾಗಲೂ ಎಲ್ಲಾ ಜವಾಬ್ದಾರಿಯನ್ನೂ ನೀವೇ ತಗೋತೀರಿ… ಸ್ವಲ್ಪ ನನಗೂ ಬಿಟ್ಟುಕೊಡಿ,’ ಅಂತಾಳೆ,” ಎನ್ನುತ್ತಾ ಸೊಸೆಯ ಬಗ್ಗೆ ಎಲ್ಲರ ಎದುರು ರೋಹಿಣಿ ಅಭಿಮಾನದ ನಗೆ ಬೀರಿದಳು.

ಈ ಎಲ್ಲಾ ವಿದ್ಯಮಾನಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪೂರ್ವಿಯ ಮನದಲ್ಲಿ ಹೊಗೆಯಾಡುತ್ತಿದ್ದ ಅಸಹನೆ ಇಂದು ಆವಿಯಾಗಿ ಹೊರಬರಲು ಆರಂಭಿಸಿತು. ಎಲ್ಲರೆದುರು ಪ್ರಗತಿಶೀಲೆ, ಮಮತಾಮಯಿ, ಮಾದರಿ ಅತ್ತೆ ಇನ್ನೂ ಹಲವಾರು ಬಿರುದುಗಳಿಂದ ಬೀಗುತ್ತಿರುವ ಅತ್ತೆಯನ್ನು ಕಂಡಾಗೆಲ್ಲಾ ಪೂರ್ವಿ ಕೀಳರಿಮೆಯಿಂದ ಕುಗ್ಗಿ ಹೋದಳು. `ತಾನು ಪಡೆದಿರುವುದು ಒಂದೇ ಒಂದು ಡಿಗ್ರಿ. ಆದರೆ ನನಗೆ ದೊರಕಿದ ಪದವಿಯನ್ನು `ಎನ್‌ ಕ್ಯಾಶ್‌’ ಮಾಡಿಕೊಂಡ ಅತ್ತೆಯ ಹೆಸರಿನ ಮುಂದೆ ಎಷ್ಟೊಂದು ಬಿರುದುಗಳು ಬಂದವು. ನನ್ನನ್ನು ಬಲವಂತವಾಗಿ ಕಾಲೇಜಿಗೆ ಕಳುಹಿಸಿರುವ ಅತ್ತೆಯ ತಂತ್ರದ ಹಿಂದೆ ಎಂಥ ಸ್ವಾರ್ಥವಿತ್ತು. ಛೇ…. ಇವರು ಹೀಗೆಲ್ಲಾ ಮಾಡಬಾರದಾಗಿತ್ತು,’ ಎಂದುಕೊಂಡಳು.

“ನಾನು ಸ್ವಲ್ಪ ಹೆಲ್ಪ್ ಮಾಡ್ಲಾ ಪೂರ್ವಿ,” ಹೊರಗಡೆಯಿಂದ ಬಂದ ದನಿ ಕೇಳುತ್ತಿದ್ದಂತೆ ಪೂರ್ವಿ ತನ್ನ ದೀರ್ಘ ಯೋಚನಾಲಹರಿಯಿಂದ ಹೊರಬಂದು, ಲಗುಬಗೆಯಲ್ಲಿ ಟ್ರೇನಲ್ಲಿ ಗ್ಲಾಸ್‌ಗಳನ್ನು ಜೋಡಿಸುತ್ತಾ, “ಬೇಡ ಅತ್ತೆ… ಚಹಾ ರೆಡಿಯಾಗಿದೆ. ಈಗ್ಲೆ ತರ್ತಾ ಇದೀನಿ…” ಎನ್ನುತ್ತಾ  ಚಹಾ ಟ್ರೇ ಹಿಡಿದುಕೊಂಡು ಹಾಲ್‌ಗೆ ಬಂದ ಪೂರ್ವಿ ಎಲ್ಲರಿಗೂ ಚಹಾ ನೀಡಿದಳು. ಟೀ ಕುಡಿದು ಎಲ್ಲರೂ ಹೊರಡುತ್ತಿದ್ದಂತೆ ರೋಹಿಣಿ ಎಲ್ಲರಿಗೂ “ಥ್ಯಾಂಕ್ಸ್ ಫಾರ್‌ ಕಮಿಂಗ್‌,” ಎನ್ನುತ್ತಾ ನಗುನಗುತ್ತಲೇ ಬೀಳ್ಕೊಟ್ಟಳು.

ಒಡನೆಯೇ ಒಳಬಂದ ರೋಹಿಣಿ, “ಅಬ್ಬಾ, ಸಾಕಾಯಿತು. ಎಲ್ಲರನ್ನೂ ವಿಚಾರಿಸಿಕೊಳ್ಳೋ ಹೊತ್ತಿಗೆ ಸಾಕು ಸಾಕಾಯಿತು,” ಎನ್ನುತ್ತಾ ಬೆಡ್‌ ಮೇಲೆ ಹಾಗೆಯೇ ಮೈ ಚೆಲ್ಲಿದಳು. ತಕ್ಷಣ ಏನೋ ನೆನಪಾದವಳಂತೆ, “ಮೀನಾಬಾಯಿ ಇನ್ನೂ ಬಂದಿಲ್ವಾ…” ರೋಹಿಣಿಗೆ ಕೆಲಸದಾಕೆಯ ನೆನಪಾಯಿತು.

“ಇಲ್ಲ ಅತ್ತೆ……”

“ಹಾಗಾದ್ರೆ… ನಾವು ಇಂದು ಸತ್ತಂತೆ. ಅಡುಗೆಮನೆಯಲ್ಲಿ ಪಾತ್ರೆಗಳ ರಾಶಿ ಬಿದ್ದಿದೆ,” ಎನ್ನುತ್ತಿದ್ದಂತೆ ಕಾಲಿಂಗ್‌ ಬೆಲ್ ‌ಸದ್ದಾಯಿತು.

“ನೀನು ಅಡುಗೆಮನೆಗೆ ಹೋಗು. ನಾನು ಹೋಗಿ ಬಾಗಿಲು ತೆರೆಯುತ್ತೀನಿ,” ಎನ್ನುತ್ತಾ ರೋಹಿಣಿ ನಿಧಾನವಾಗಿ ಬಾಗಿಲು ತೆರೆಯುತ್ತಿದ್ದಂತೆ ಎದುರಿಗೆ ನಿಂತಿದ್ದ ಪೂರ್ವಿಯ ತಂದೆತಾಯಿಯರನ್ನು ನೋಡಿ ನಮಸ್ಕರಿಸುತ್ತಾ, “ಬನ್ನಿ…. ಬನ್ನಿ…” ಎನ್ನುತ್ತಾ ಅವರನ್ನು ಸ್ವಾಗತಿಸಿ ಒಳಕರೆಯುತ್ತಾ, “ನಿಮ್ಮ ಮಗಳು ಪೂರ್ವಿ ಎಂತಹ ಸಾಧನೆ ಮಾಡಿದ್ದಾಳೆ ಅಂದ್ರೆ… ಮೊದಲ ಬಾರಿಗೆ ಎಂ.ಬಿ.ಎ. ಪಾಸು ಮಾಡಿ ನಮ್ಮೆಲ್ಲರ ಗೌರವವನ್ನು ಆಕಾಶದೆತ್ತರಕ್ಕೆ ಕೊಂಡೊಯ್ದಿದ್ದಾಳೆ. ಇಂತಹ ಮಗಳನ್ನು ಹೆತ್ತ ನೀವು ನಿಜಕ್ಕೂ ಪುಣ್ಯವಂತರು…” ಎಂದಳು.

“ಹಾಗೇನಿಲ್ಲ…. ಈ ಸಾಧನೆಯ ನಿಜವಾದ ಹಕ್ಕುದಾರರು ನೀವೇ. ಅವಳ ಆಸಕ್ತಿಗೆ ನೀವು ಪ್ರೋತ್ಸಾಹಿಸದೆ ಹೋಗಿದ್ದರೆ…. ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ.”

“ಥ್ಯಾಂಕ್ಯೂ…. ನಿಮ್ಮ ಹೊಗಳಿಕೆಯಿಂದ ನನಗೆ ತುಂಬಾ ಮುಜುಗರವಾಗ್ತಿದೆ. ನಾನು ಕೇವಲ ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೆ ಅಷ್ಚೆ,” ಎನ್ನುತ್ತಾ ಅಡುಗೆಮನೆ ಕಡೆ ತಿರುಗಿ, “ಅಮ್ಮಾ ಪೂರ್ವಿ….. ನಿಮ್ಮ ಅಮ್ಮ ಅಪ್ಪ ಬಂದಿದ್ದಾರಮ್ಮ. ಬೇಗ ಬಂದು ಇವರ ಬಾಯಿ ಸಿಹಿ ಮಾಡು. ಅಡುಗೆಮನೆ ಕೆಲಸ ಏನಿದ್ರೂ ನಾನು ನೋಡ್ಕೋತೀನಿ. ನೀನು ಬಂದು ಆರಾಮವಾಗಿ ಇವರ ಹತ್ತಿರ ಕೂತ್ಕೊಂಡು ಮಾತಾಡು ಬಾ….” ಎನ್ನುತ್ತಾ ಅಡುಗೆಮನೆಯತ್ತ ಹೋದ ರೋಹಿಣಿಗೆ ಪಾತ್ರೆಗಳ ರಾಶಿ ನೋಡಿ ತಲೆ ತಿರುಗುವಂತಾಯಿತು. ಮನಸ್ಸಿನಲ್ಲೇ ಮೀನಾಬಾಯಿಗೆ ಹಿಡಿ ಶಾಪ ಹಾಕುತ್ತಾ, ಬಂದಿದ್ದ ನೆಂಟರಿಗೆ ತಿಂಡಿ ರೆಡಿ ಮಾಡಲು ಅಣಿ ಮಾಡುತ್ತಿದ್ದಂತೆ ದೇವದೂತನ ಹಾಗೆ ದಿಢೀರ್‌ ಎಂದು ಅದು ಎಲ್ಲಿಂದಲೋ ಬಂದ ಮೀನಾಬಾಯಿ ಹಿಂದಿನ ಬಾಗಿಲಿನಲ್ಲಿ ಪ್ರತ್ಯಕ್ಷಳಾದಳು.

“ಎಲ್ಲಿ ಹೋಗಿದ್ದೆ ಮೀನಾ ಬಾಯಿ…! ಇವತ್ತು ಮನೆಯಲ್ಲಿ ಅತಿಥಿಗಳದ್ದೇ ಮೇಳವಾಗಿತ್ತು. ಒಳ್ಳೆ ಸಮಯದಲ್ಲಿ ನೀನು ಮಾಯವಾಗಿಬಿಟ್ಟೆ. ಸರಿ… ಸರಿ… ನಮಗಾಗಿ ಟೀ ಮಾಡು. ನಾನಂತೂ ತುಂಬ ಸುಸ್ತಾಗಿದ್ದೀನಿ. ಹೌದೂ… ನಿನ್ನೆಯಿಂದ ನೀನು ಎಲ್ಲಿ ಹೋಗಿದ್ದೆ…..?”

“ಎಲ್ಲಿಗೂ ಹೋಗಿಲ್ಲ…. ನನ್ನ ಸೊಸೆನಾ ಜೊತೆಯಲ್ಲಿ ಕರೆದುಕೊಂಡು ಆನಂದರಾಯರ ಮನೆಗೆ ಹೋಗಿದ್ದೆ. ಆದ್ದರಿಂದ ಲೇಟಾಯಿತು.”

“ಹೌದಾ…! ಸೊಸೆಗೇನಾದರೂ ಕೆಲಸ ಕೊಡ್ಸೋಕೆ ಹೋಗಿದ್ಯಾ?” ಎನ್ನುತ್ತಿದ್ದಂತೆ ಇತ್ತೀಚೆಗಷ್ಟೇ ಮೀನಾ ಬಾಯಿ ಮಗನಿಗೆ ಮದುವೆಯಾದ ವಿಚಾರ ನೆನಪಾಗಿ ತುಟಿಯಂಚಲ್ಲಿ ನಗುವೊಂದು ಹಾದುಹೋಯಿತು.

“ಇಲ್ಲ…. ಇಲ್ಲ ಅವಳನ್ನು ಮನೆಗೆಲಸಕ್ಕೆಲ್ಲಾ ಸೇರಿಸಲ್ಲ. ಅವಳು ಓದಿದವಳು. ಪಿಯುಸಿ ಪಾಸ್‌ ಮಾಡಿದ್ದಾಳೆ ಅಮ್ಮೋರೆ, ಅದಕ್ಕೆ ಅವಳನ್ನು ಮುಂದೆ ಓದಿಸಬೇಕು ಅಂತ ನಿರ್ಧಾರ ಮಾಡಿದ್ದೀನಿ. ಹಾಗಾಗಿ ಸ್ಕಾಲರ್‌ಶಿಪ್‌ ಪಡೆಯೋಕೆ, ಅರ್ಜಿ ಹಾಕಬೇಕು ಅಂತ ಆನಂದರಾಯರೇ ಸಲಹೆ ನೀಡಿದ್ದರು. ಅಪ್ಲಿಕೇಶನ್‌ ಕೂಡ ಅವರೇ ತಂದ್ಕೊಟ್ಟರು. ಸರ್ಕಾರದಿಂದ ಈ ಸ್ಕಾಲರ್‌ಶಿಪ್‌ ಸಿಕ್ಕಿದರೆ ಅವಳ ಓದಿನ ಖರ್ಚು ವೆಚ್ಚ ಸ್ವಲ್ಪ ಕಡಿಮೆ ಆಗುತ್ತೆ ಅಂದ್ರು…. ಅದಕ್ಕೆ ಅವರ ಮನೆಗೆ ಹೋಗಿದ್ವಿ…. ನನ್ನ ಮಗನಂತೂ 7ನೇ ಕ್ಲಾಸ್‌ವರೆಗೆ ಓದಿ ಈಗ ತಳ್ಳುಗಾಡಿ ನಡೆಸುತ್ತಿದ್ದಾನೆ. ಅವನನ್ನು ತುಂಬಾ ಓದಿಸಬೇಕೆಂಬ ಆಸೆ ಇತ್ತು. ಆದ್ರೆ ಅವನ ತಲೆಗೆ ಓದು ಹತ್ತಲೇ ಇಲ್ಲ. ಅದ್ಕೆ ನಾನೊಂದು ತೀರ್ಮಾನಕ್ಕೆ ಬಂದೆ. ನನ್ನ ಮಗ ಓದಿಲ್ಲಾಂದ್ರೂ ಚಿಂತೆ ಇಲ್ಲ. ಮನೆಗೆ ಬರೋ ನನ್ನ ಸೊಸೆಗೆ ಓದಿನಲ್ಲಿ ಆಸಕ್ತಿ ಇದ್ರೆ… ಅವಳು ಎಲ್ಲಿವರೆಗೆ ಓದುತ್ತಾಳೋ ಅಲ್ಲಿವರೆಗೂ ಓದಿಸ್ತೀನಿ ನೋಡ್ತಾ ಇರಿ,” ಎಂದಳು.

“ಹೌದು…… ಪಿ.ಯು.ಸಿ. ಓದಿರೋ ನಿನ್ನ ಸೊಸೆ ಅರ್ಧಂಬರ್ದ ಓದಿರೋ ನಿನ್ನ ಮಗನನ್ನು ಮದುವೆಯಾಗಲು ಹೇಗೆ ಒಪ್ಪಿಕೊಂಡಳು?” ಎಂದು ಕೇಳಿದ ರೋಹಿಣಿಗೆ ಮನಸ್ಸಿನಲ್ಲೇ ಅಚ್ಚೊತ್ತಿದ್ದ ಅನುಮಾನದ ಚಿತ್ರ ಇನ್ನೂ ಹಾಗೇ ಇತ್ತು. ಪುಡಿಗಾಸು ಸಂಪಾದಿಸುವ ಮೀನಾಬಾಯಿ, ಕಡು ಕಷ್ಟದಲ್ಲೂ ಸೊಸೆಯನ್ನು ಓದಿಸಬೇಕು ಎನ್ನುವ ಅವಳ ಪ್ರಾಮಾಣಿಕ ಪ್ರಯತ್ನಕ್ಕೆ ರೋಹಿಣಿ ದಂಗಾಗಿಹೋದಳು. ಮುಂದೇನು ಮಾತನಾಡಲಾರದೆ ಹಾಗೇ ಕಲ್ಲಾಗಿ ನಿಂತುಕೊಂಡಳು.

“ನನ್ನ ಸೊಸೆ ತಂದೆ ತಾಯಿ ಇಲ್ಲದಿರೋ ಅನಾಥೆ ಅಮ್ಮೋರೆ….. ಹತ್ತಿರದ ಬಂಧುಗಳೆಲ್ಲಾ ಕೈ ಮೇಲಕ್ಕೆತ್ತಿ ಆಕಾಶ ತೋರಿಸುತ್ತಾ ತಂತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡ್ರು. ಆದರೆ ನಂಗೆ ಮಾತ್ರ ಅವಳು ಯಾವತ್ತೂ ಹೊರೆ ಅನ್ನಿಸಿಲ್ಲ. ಅವಳು ನನ್ನ ಸ್ವಂತ ಮಗಳಿದ್ದ ಹಾಗೆ.. ಎಲ್ಲೀವರೆಗೂ ಓದುತ್ತಾಳೋ ಅಲ್ಲೀವರೆಗೂ ಓದಿಸುತ್ತೀನಿ. ಅವಳನ್ನು ದೊಡ್ಡ ಅಧಿಕಾರಿಯನ್ನಾಗಿ ಮಾಡಿ… ಸಮಾಜದಲ್ಲಿ ಒಬ್ಬ ಗಣ್ಯ ವ್ಯಕ್ತಿಯಾಗಿ ಬಾಳುವೆ ಮಾಡೋ ಹಾಗೇ ಮಾಡ್ತೀನಿ….”

“ಮತ್ತೇ ನೀನು ಮಾತ್ರ ಒಬ್ಬಳೇ ಹೊರಗೆ ದುಡಿದು ದುಡಿದು ಸವೆದು ಹೋಗ್ತೀಯಾ….?”

“ಅಯ್ಯೋ ಅಮ್ಮೋರೇ, ಆ ವಿಚಾರ ಬಿಡಿ…. ನನ್ನ ಸೊಸೆ ಬರೋದಕ್ಕೂ ಮುಂಚೆನೂ ಹೀಗೇ ದುಡಿತಾ ಇದ್ದೆ. ಈಗಲೂ ದುಡಿತಾ ಇದ್ದೀನಿ. ಮುಂದೆ ಕೂಡ ದುಡಿತಾ ಇರ್ತೀನಿ…. ನಂಗೆ ಯಾವತ್ತೂ ಕಷ್ಟ ಅಂತ ಅನ್ನಿಸಲೇ ಇಲ್ಲ. ಅವಳಿಗೋಸ್ಕರ ನಾನು ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.

“ಆದರೆ ಒಂದು ಮಾತಂತೂ ನಿಜ ಅಮ್ಮೋರೆ…. ಒಳ್ಳೆ ಮನಸ್ಸಿನಿಂದ ಒಂದು ಒಳ್ಳೆ ಉದ್ದೇಶದ ಸಂಕಲ್ಪ ಮಾಡಿಕೊಂಡು  ಕೆಲಸ ಮಾಡೋಕೆ ಹೊರಟ್ರೆ ಕಷ್ಟಪಟ್ಟು ದುಡಿಯುವ ಈ ಕೈಗಳಿಗೆ ವಿಶೇಷ ಶಕ್ತಿ ಹಾಗೂ ಛಲ ಬರುತ್ತೆ. ನಿಸ್ವಾರ್ಥದಿಂದ ಮಾಡೋ ಕೆಲಸ ಯಾವಾಗಲೂ ನಮಗೆ ಆತ್ಮ ತೃಪ್ತಿ ಕೊಡುತ್ತೆ,” ಎನ್ನುತ್ತಾ ಹರಿಬರಿಯಲ್ಲಿ ಟ್ರೇ ತೆಗೆದುಕೊಂಡು, “ಅಯ್ಯೋ…. ನನ್ನ ಬುದ್ಧಿಗಿಷ್ಟು…. ಮಾತಿನ ರಭಸದಲ್ಲಿ ಟೀ ಕೊಡೋದೇ ಮರೆತಿದ್ದೆ. ಈಗ್ಲೆ ಅವರುಗಳಿಗೆಲ್ಲಾ ಟೀ ಕೊಟ್ಟು ಬರ್ತೀನಿ. ನಾನು ಮಾಡೋ ಖಡಕ್‌ ಚಹಾ ಕುಡಿದು ನೋಡಿ ಅಮ್ಮೋರೇ….. ಸುಸ್ತಾಗಿರೋ ನಿಮಗೆ ಹೊಸ ಚೈತನ್ಯ ಬರುತ್ತೆ,” ಎನ್ನುತ್ತಾ ಟೀ ಕಪ್‌ಗಳನ್ನು ಎತ್ತಿಕೊಂಡು ಹೊರಹೋಗುತ್ತಿದ್ದಂತೆ. ರೋಹಿಣಿಯ ತಲೆಗೇರಿದ್ದ ಪದವಿ ವ್ಯಾಮೋಹದ ನಶೆ ಕಾಲಿಗಿಳಿದಂತೆ ಭಾಸಾಯಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ