ಗಂಡ ಹೆಂಡತಿಯ ನಡುವೆ ಜಗಳ ಅವರ ದೈನಂದಿನ ಜೀವನದ ಒಂದು ಭಾಗವೇ ಆಗಿದೆ. ಅವರು ಯಾವುದನ್ನೂ ಯೋಚಿಸದೇ ಜಗಳವಾಡುತ್ತಾರೆ. ಅಂಥ ಸ್ಥಿತಿಯಲ್ಲಿ ಪ್ರೀತಿಯ ಒಂದು ಅಪ್ಪುಗೆ ಬಹುದೊಡ್ಡ ಚಮತ್ಕಾರವನ್ನೇ ಮಾಡುತ್ತದೆ. ಅದು ಚಿಕ್ಕಪುಟ್ಟ ಜಗಳಗಳು ದೊಡ್ಡ ರೂಪ ಪಡೆಯುವ ವೇಗಕ್ಕೆ ಬ್ರೇಕ್ ಹಾಕುತ್ತದೆ.
ಮನೋತಜ್ಞರು ಹೇಳುವುದೇನೆಂದರೆ, ನಾವು ಯಾರನ್ನಾದರೂ ಅಪ್ಪಿಕೊಂಡಾಗ ನಮ್ಮ ದೇಹದಿಂದ ಕೋಪ ಹೆಚ್ಚಿಸುವ ಹಾರ್ಮೋನುಗಳು ಸರಕ್ಕನೇ ಇಳಿಯಲಾರಂಭಿಸುತ್ತವೆ. ಎದುರಿಗಿನ ವ್ಯಕ್ತಿ ಕೋಪವನ್ನು ಮರೆತು ನಿಮ್ಮ ಪ್ರೀತಿಯ ಅನುಭೂತಿ ಮಾಡಿಕೊಳ್ಳುತ್ತಾರೆ. ಅಂದರೆ ನಿಮ್ಮ ಪ್ರೀತಿಯ ಅಪ್ಪುಗೆ ಕ್ಷಣಾರ್ಧದಲ್ಲಿಯೇ ಕೋಪವನ್ನು ದೂರಗೊಳಿಸುತ್ತದೆ ಹಾಗೂ ನಿಮ್ಮನ್ನು ಕ್ಷಮಿಸುತ್ತದೆ.
ಮೌನವಾಗಿಯೇ ಎಲ್ಲವನ್ನೂ ಹೇಳುತ್ತದೆ
ಗಂಡ ಹೆಂಡತಿಯ ನಡುವೆ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಪರಿಣಾಮಕಾರಿ ಉಪಾಯವೆಂದರೆ ಪ್ರೀತಿಯ ಅಪ್ಪುಗೆ. ಆ ಸ್ಥಿತಿಯಲ್ಲಿ ನೀವು ಯಾವೊಂದೂ ಶಬ್ದವನ್ನೂ ಉಚ್ಚರಿಸದೇ ನಿಮ್ಮ ಭಾವನೆಗಳನ್ನು ಪ್ರಕಟಪಡಿಸಬಹುದು. ಹೆಂಡತಿ ಒಳ್ಳೆಯ ಅಡುಗೆ ಮಾಡಿದ್ದರೆ ಅದನ್ನು ಪ್ರಶಂಸಿಸುವ ಉದ್ದೇಶದಿಂದ ಒಂದು ಅಪ್ಪುಗೆ ಹಾಗೂ ಗಂಡ ಯಾವುದಾದರೊಂದು ಒಳ್ಳೆಯ ಯೋಜನೆಯಲ್ಲಿ ಹಣ ತೊಡಗಿಸಿದ್ದರೆ ಆಗ ಹೆಂಡತಿ ಒಂದು ಅಪ್ಪುಗೆಯ ಪ್ರೀತಿ ತೋರಿಸಿದರೆ ಅದರ ಫಲಶ್ರುತಿಯೇ ಬೇರೆ ಆಗುತ್ತದೆ. ಗಂಡ ಹೆಂಡತಿಯ ನಡುವೆ ಹೆಲ್ದೀ ಮತ್ತು ಹ್ಯಾಪಿ ಮಾರೀಡ್ ಲೈಫ್ನ ಅತ್ಯಂತ ಪರಿಣಾಮಕಾರಿ ಉಪಾಯವೆಂದರೆ ಪ್ರೀತಿಯ ಅಪ್ಪುಗೆ. ಅದನ್ನು ಯಾವಾಗ, ಎಲ್ಲೆಂದರಲ್ಲಿ ಬೇಕಾದರೂ ಅನುಸರಿಸಬಹುದು.
ಗಂಡ ಹೆಂಡತಿ ಪರಸ್ಪರರ ಬಗ್ಗೆ ತೋರಿಸುವ ಪ್ರೀತಿಯ ಪ್ರತೀಕವೆಂದರೆ ಅದು ಪ್ರೀತಿಯ ಅಪ್ಪುಗೆ. ಇದರರ್ಥ ನೀನು ನನಗೆ ಎಲ್ಲಕ್ಕೂ ಪ್ರೀತಿಪಾತ್ರ ಎಂದು. ಪ್ರೀತಿಯ ಅಪ್ಪುಗೆ ಕೊಡುವ ಸಮಯದಲ್ಲಿ ನಾನು ಎಲ್ಲಿದ್ದೇನೆ, ಯಾರ ಎದುರು ಇದ್ದೇನೆ ಎಂದು ಯಾವುದೇ ಕಾರಣಕ್ಕೂ ಯೋಚಿಸಲು ಹೋಗಬೇಡಿ. ಸ್ನೇಹಿತರ ಎದುರು ನೀವು ನಿಮ್ಮ ಪ್ರೀತಿಯನ್ನು ಪ್ರದರ್ಶಿಸಲು ಪರಸ್ಪರರನ್ನು ತಬ್ಬಿಕೊಳ್ಳುತ್ತೀರೆಂದರೆ ಸ್ನೇಹಿತರ ಎದುರು ನಿಮ್ಮ ಗೌರವ ಹೆಚ್ಚುತ್ತದೆ. ನಿಮ್ಮಿಬ್ಬರ ನಡುವಿನ ನಿಕಟತೆ ಮತ್ತು ಪ್ರೀತಿ ಇನ್ನಷ್ಟು ಜಗಜ್ಜಾಹೀರಾಗುತ್ತದೆ.
ಸುಖ ದುಃಖದ ಸಂಗಾತಿ
ಕೇವಲ ಖುಷಿಯ ಸಂದರ್ಭದಲ್ಲಷ್ಟೇ ಪ್ರೀತಿಯ ಅಪ್ಪುಗೆ ಹಾಗೂ ನಿಕಟತೆ ಪ್ರಕಟಪಡಿಸುತ್ತಾರೆ ಎಂದುಕೊಳ್ಳಬೇಡಿ. ಅವರು ಕಷ್ಟದ ಸಂದರ್ಭ, ದುಃಖದ ಗಳಿಗೆಯಲ್ಲೂ ಕೂಡ ಪರಸ್ಪರರನ್ನು ತಬ್ಬಿಕೊಂಡು ಸಾಂತ್ವನ ಹೇಳುತ್ತಾರೆ.
ಆಸ್ಟ್ರೇಲಿಯಾದ ವಿಜ್ಞಾನಿಗಳು ಒಂದು ಸಂಶೋಧನೆಯಿಂದ ಕಂಡುಕೊಂಡ ಸಂಗತಿಯೆಂದರೆ, ನಾವು ದುಃಖ ಅಥವಾ ಕಷ್ಟದ ಸಂದರ್ಭದಲ್ಲಿ ಅಪ್ಪಿಕೊಂಡಾಗ ಅವರಲ್ಲಿ ನಿರಾಳತೆಯ ಭಾವನೆ ಮೂಡಿರುವುದು ಸ್ಪಷ್ಟವಾಗುತ್ತದೆ. ತಾಯಿ ಹಾಗೂ ಮಗುವೊಂದರ ಉದಾಹರಣೆಯನ್ನು ಸ್ಪಷ್ಟಪಡಿಸುತ್ತಾ ಮಗುವಿಗೆ ಏಟು ತಗುಲಿದ ಸಂದರ್ಭದಲ್ಲಿ ತಾಯಿ ಅದನ್ನು ಬಾಚಿ ತಬ್ಬಿಕೊಂಡರೆ, ಅದರ ನೋವು ಹಾಗೂ ದುಃಖ ಸಾಕಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ. ವಿಜ್ಞಾನಿಗಳ ಪ್ರಕಾರ, ನಾವು ಸಂಗಾತಿಯನ್ನು ತಬ್ಬಿಕೊಂಡಾಗ ರಕ್ತದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನು ಸ್ರಾವವಾಗುತ್ತದೆ. ಅದರಿಂದಾಗಿ ಅತಿರಕ್ತದೊತ್ತಡ ಕಡಿಮೆಯಾಗುತ್ತದೆ. ಸ್ಮರಣಶಕ್ತಿ ಅತ್ಯುತ್ತಮಗೊಳ್ಳುತ್ತದೆ.
ತಕರಾರುಗಳನ್ನು ನಿವಾರಿಸುತ್ತದೆ
ಆಫೀಸಿನಿಂದ ಮನೆಗೆ ತಲುಪಲು ತಡವಾಯಿತು. ಹೆಂಡತಿ ಮಾರುಕಟ್ಟೆಯಿಂದ ಕೆಲವು ಅಗತ್ಯ ಸಾಮಾನುಗಳನ್ನು ತರಲು ಹೇಳಿದ್ದಳು. ಆದರೆ ನೀವು ಅದನ್ನು ತರಲು ಮರೆತುಬಿಟ್ಟಿರಿ. ಆಗ ಹೆಂಡತಿ ಮುನಿಸಿಕೊಳ್ಳುವುದು ಸಹಜವೇ. ಇಂತಹ ಸಂದರ್ಭದಲ್ಲಿ ಪತ್ನಿಯನ್ನು ಒಲಿಸಿಕೊಳ್ಳುವ ಏಕೈಕ ಉಪಾಯವೆಂದರೆ, ಪ್ರೀತಿಯ ಒಂದು ಅಪ್ಪುಗೆ. ಆ ಬಳಿಕ ಅವಳ ಕೋಪ ಎಷ್ಟು ಬೇಗ ನಿವಾರಣೆಯಾಗುತ್ತದೆಂದು ನೋಡಿ. ಹೆಂಡತಿಯ ಕೋಪವನ್ನು ತಣ್ಣಗಾಗಿಸುವ ಸೂಕ್ತ ಉಪಾಯವೆಂದರೆ ಆಕೆಯನ್ನು ತಬ್ಬಿಕೊಂಡು ಕ್ಷಮೆ ಯಾಚಿಸಬೇಕು. ನಿಮ್ಮ ಈ ಅಪ್ಪುಗೆ ಆಕೆಯ ಕೋಪವನ್ನು ಮಂಜಿನ ರೀತಿಯಲ್ಲಿ ಕರಗಿಸಿಬಿಡುತ್ತದೆ. ಏಕೆಂದರೆ ಅದರಲ್ಲಿ ನಿಮ್ಮ ಪ್ರೀತಿಯ ಬಿಸುಪು ಬರುತ್ತದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಒಂದು ಸಂಶೋಧನೆಯ ಪ್ರಕಾರ, ಅಪ್ಪುಗೆ ಮತ್ತು ಸ್ಪರ್ಶದ ಸಂಬಂಧ ಎಂತಹ ಆರೋಗ್ಯಕರ ಗುಣಗಳ ಜೊತೆಗೆ ಇದೆಯೆಂದರೆ, ಅದು ಒತ್ತಡ ಮತ್ತು ನೋವು ನಿವಾರಿಸುತ್ತದೆ. ಸಂಶೋಧನೆಯ ಪ್ರಕಾರ, ಇದರ ಅತಿ ಹೆಚ್ಚಿನ ಪರಿಣಾಮ ಮಹಿಳೆಯರ ಮೇಲಾಗುತ್ತದೆ. ಅಂದರೆ ಹೆಂಡತಿ ಕೋಪಗೊಂಡಳೆಂದರೆ ಪ್ರೀತಿಯ ಅಪ್ಪುಗೆಯಿಂದ ಅವಳನ್ನು ಕ್ಷಣಾರ್ಧದಲ್ಲಿಯೇ ಮನವೊಲಿಸಬಹುದು.
ಪ್ರೀತಿಯನ್ನು ವ್ಯಕ್ತಪಡಿಸಿ
ಶಾರೂಖ್ ಗೌರಿ ಖಾನ್, ಅರ್ಬಾಜ್ ಹಾಗೂ ಮಲೈಕಾರಂತಹ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳದಲ್ಲಿ ಪರಸ್ಪರರನ್ನು ತಬ್ಬಿಕೊಂಡರೆ ನಿಮಗೆಷ್ಟು ರೋಮಾಂಚನ ಆಗುತ್ತದಲ್ಲವೇ? ನಿಮ್ಮ ಸಂಬಂಧದಲ್ಲೂ ಅದೇ ರೀತಿಯ ರೋಮಾಂಚನವನ್ನು ತಂದುಕೊಳ್ಳಿ. ಪರಸ್ಪರರಿಗೆ ಪ್ರೀತಿಯ ಅಪ್ಪುಗೆ ನೀಡುವ ಸಂದರ್ಭದಲ್ಲಿ ಯಾವುದೇ ರೀತಿಯ ಅಳುಕು, ಸಂದೇಹ ನಿಮ್ಮ ಮನಸ್ಸಿನಲ್ಲಿ ಮೂಡದಿರಲಿ. ಏಕೆಂದರೆ ಇದು ನಿಮ್ಮಿಬ್ಬರ ನಡುವೆ ಸುರಕ್ಷಾ ಕವಚವನ್ನು ನಿರ್ಮಿಸುತ್ತದೆ. ಅದು ನಿಮ್ಮ ನೈಜ ಪ್ರೀತಿಯನ್ನು ಬಿಂಬಿಸುತ್ತದೆ.
ನಿಮ್ಮ ಬಳಿ ಮದುವೆಯ ಸರ್ಟಿಫಿಕೇಟ್ ಇದ್ದರೆ, ಮುಕ್ತವಾಗಿ ಪ್ರೀತಿ ವ್ಯಕ್ತಪಡಿಸಿದರೆ ಅದರಲ್ಲಿ ಹೆದರುವುದೇನಿದೆ? ಎಂಬ ನಿಟ್ಟಿನಲ್ಲಿ ನಿಮ್ಮ ಪ್ರೀತಿ ವ್ಯಕ್ತಪಡಿಸಿ.
ಹಳೆಯ ದಿನಗಳನ್ನು ನೆನಪಿಸಿಕೊಳ್ಳಿ
ಮದುವೆಯಾದ ಕೆಲವು ವರ್ಷಗಳ ಬಳಿಕ ಆಫೀಸು ಹಾಗೂ ಮನೆಯ ಜವಾಬ್ದಾರಿಗಳ ನಡುವೆ ಗಂಡ ಹೆಂಡತಿಯ ಸಂಬಂಧ ಒಂದು ರೀತಿಯ ಹೊರೆ ಎಂಬಂತೆ ಭಾಸವಾಗುತ್ತದೆ. ಅಂತಹ ಸಂದರ್ಭದಲ್ಲಿ ಪ್ರೀತಿಯ ಅಪ್ಪುಗೆ ಹಳೆಯ ದಿನಗಳನ್ನು ಸ್ಮರಿಸುವಂತೆ ಮಾಡುತ್ತದೆ. ಅದು ಗಂಡ ಹೆಂಡತಿಯ ಸಂಬಂಧದಲ್ಲಿ ಇನ್ನಷ್ಟು ರೋಮಾಂಚನವನ್ನು ತುಂಬುತ್ತದೆ. ಸಿಹಿಯನ್ನು ಬೆರೆಸುತ್ತದೆ. ನೀವು ಖುಷಿಯ ಸಂದರ್ಭದಲ್ಲಿ ಹಾಗೂ ದುಃಖದ ಸಂದರ್ಭದಲ್ಲಿ ಪ್ರೀತಿಯ ಅಪ್ಪುಗೆ ನೀಡಿದರೆ, `ಸೆನ್ಸ್ ಆಫ್ ಟು ಗೆದರ್ನೆಸ್’ನ ಅನುಭೂತಿ ಮೂಡುತ್ತದೆ. ಪ್ರೀತಿಯ ಅಪ್ಪುಗೆ ಎಂತಹ ಒಂದು ರಾಮಬಾಣವೆಂದರೆ, ಅದರಿಂದ ಗಂಡಹೆಂಡತಿಯ ಜೀವನದಲ್ಲಿ ಮತ್ತೆ ಹಳೆಯ ಕ್ಷಣಗಳನ್ನು ಪುನರಾವರ್ತಿಸಬಹುದು.
– ಲಲಿತಾ ರಾವ್
ಎಂಥದೇ ಸ್ಥಿತಿಯಲ್ಲೂ ನೀವು ನನಗಿಷ್ಟ…
ಗಂಡ ಹೆಂಡತಿ ನಡುವೆ ಪ್ರೀತಿಯ ಅಪ್ಪುಗೆ ವೈವಾಹೀಕ ಜೀವನಕ್ಕಾಗಿ `ಎಮೋಷನ್ ಕ್ಲೈಮೆಟ್’ ಆಗಿಬಿಡುತ್ತದೆ. ಪ್ರೀತಿಯ ಅಪ್ಪುಗೆಯ ಪ್ರೀತಿಭರಿತ ಸ್ಪರ್ಶ ಪರಸ್ಪರರ ನಡುವೆ ಪಾಸಿಟಿವ್ನೆಸ್ ಹೆಚ್ಚಿಸುವುದರ ಜೊತೆಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ. ಪ್ರೀತಿಭರಿತ ಅಪ್ಪುಗೆಯನ್ನು ದೈನಂದಿನ ರೂಢಿಯನ್ನಾಗಿಸಿಕೊಂಡರೆ, ನೀವಿಬ್ಬರು ಯಾವಾಗಲೂ ಪರಸ್ಪರರ ಜೊತೆಗಿರುತ್ತೀರಿ ಎಂಬುದನ್ನು ತೋರಿಸಿಕೊಡುತ್ತದೆ. ಹೀಗಾಗಿ ಬಿಝಿ ಶೆಡ್ಯೂಲ್ನಲ್ಲೂ ಪರಸ್ಪರರಿಗೆ `ನಾನು ಸದಾ ನಿಮ್ಮ ಜೊತೆಗೆ ಇರುತ್ತೇನೆ,’ `ನೀನು ನನಗೆ ವಿಶೇಷ,’ `ನಿನ್ನ ಮೇಲೆ ನನಗೆ ಪರಿಪೂರ್ಣ ವಿಶ್ವಾಸವಿದೆ,’ `ನೀನು ನನಗೆ ಯಾವುದೇ ಸ್ಥಿತಿಯಲ್ಲೂ ಇಷ್ಟ’ ಎಂಬಂತಹ ಮಾತುಗಳು ನೆನಪಿಗೆ ಬರಲಾರಂಭಿಸುತ್ತವೆ.
ವೈವಾಹಿಕ ಜೀವನದ ಜೀವಿತಾವಧಿ ಹೆಚ್ಚಿಸಬೇಕೆಂದಿದ್ದರೆ ಪ್ರೀತಿಯ ಅಪ್ಪುಗೆಯ ಡೋಸ್ನ್ನು ಪ್ರತಿದಿನ ಮುಂಜಾನೆ ಆಫೀಸಿಗೆ ಹೋಗುವಾಗ, ಸಂಜೆ ಆಫೀಸಿನಿಂದ ಮನೆಗೆ ಬಂದ ಬಳಿಕ ಹಾಗೂ ರಾತ್ರಿ ಮಲಗುವಾಗ ಕೊಟ್ಟು ನೋಡಿ. ಆಗ ಪ್ರೀತಿಯ ವಯೋಮಾನ ಇನ್ನಷ್ಟು ಹೆಚ್ಚುತ್ತದೆ.
– ಡಾ. ಮೀನಾಕ್ಷಿ, ಮನೋತಜ್ಞರು.