ಸಂಕ್ರಾಂತಿ ಹಬ್ಬ ನಿಸರ್ಗದ ಹಬ್ಬವಾಗಿದೆ. ಪುಷ್ಯಮಾಸದಲ್ಲಿ ಸೂರ್ಯನು ಮಕರರಾಶಿಗೆ ಪ್ರವೇಶಿಸುತ್ತಾನೆ. ಅದಕ್ಕಾಗಿ ಈ ಹಬ್ಬಕ್ಕೆ ಮಕರ ಸಂಕ್ರಾಂತಿ ಎನ್ನುತ್ತಾರೆ. ಮುಂದಿನ ಶುಭ ಕಾರ್ಯಾರಂಭಕ್ಕೆ ಸೂರ್ಯನ ಪಥಚಲನೆಯ ಈ ಹಬ್ಬ ಪ್ರಮುಖವಾದುದು.  ಪ್ರಪಂಚಕ್ಕೆ ಬೆಳಕು ಶಾಖ ನೀಡುವ ಮೂಲಕ ಸೂರ್ಯ ಜನಪದರ ನಿಜ ದೈವ. ಜಗತ್ತಿನ ಎಲ್ಲಾ ಕಡೆಯಲ್ಲೂ ಸೂರ್ಯೋಪಾಸನೆ ನಡೆಯುತ್ತಿದೆ. ಸೂರ್ಯ ಆರೋಗ್ಯದ ಅಧಿದೇವತೆ. ಬೆಳಗಿನ ಹೊತ್ತಿನಲ್ಲಿ ಮಾಡುವ ಸೂರ್ಯ ನಮಸ್ಕಾರದಿಂದ ದೇಹ ಶಕ್ತಿಯುತವಾಗುತ್ತದೆ. ಈ ರೀತಿ ಜಗತ್ತಿಗೆ ಬೆಳಕು ನೀಡುವ ಸೂರ್ಯನ ಚಲನೆಗೆ ಸಂಬಂಧಿಸಿದ ದಿನದ ಹಬ್ಬವೇ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎಂದು ಪ್ರಸಿದ್ಧವಾಗಿದೆ. ಸಂಸ್ಕೃತದಲ್ಲಿ ಸಂಕ್ರಮಣ ಎಂದರೆ ಪಾದ ಚಲನೆ. ದೈವಸ್ಥಿತವಾಗಿ ನಡೆಯುವ ಚಲನೆಯೇ ಸಂಕ್ರಾಂತಿ. ಸಂಕ್ರಾಂತಿ ಎಂದರೆ ಸಮ್ಯಕ್‌+ ಕ್ರಾಂತಿ. ಸೂರ್ಯನ ಮಕರ ರಾಶಿ ಪ್ರವೇಶವೇ ಸಂಕ್ರಾಂತಿ. ಮಕರ ಎಂದರೆ ಮೊಸಳೆ, ಕ್ರಾಂತಿ ಎಂದರೆ ಬದಲಾವಣೆ. ಮಕರ ವಾಸ್ತವ ಪ್ರಪಂಚದ ಪ್ರತಿಬಿಂಬ. ಮಕರ ಸಂಕ್ರಮಣ ಎಂದರೆ ವಾಸ್ತವ ಪ್ರಪಂಚದ ಬಂಧನದಿಂದ ಹೊರಬರುವುದು. ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಾಗುತ್ತಾನೆ. ಸೂರ್ಯ ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸಿದ ಈ ಸಂದರ್ಭವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗಿದೆ. ಕೆಲವರು ಇದನ್ನು `ಬೋಗಿಹಬ್ಬ,’ `ಸುಗ್ಗೀಹಬ್ಬ’ ಎಂದೂ ಕರೆಯುತ್ತಾರೆ.

`ತಮಸೋಮಾ ಜ್ಯೋತಿರ್ಗಮಯ’ ಎಂದರೆ ಕತ್ತಿಯಿಂದ ಬೆಳಕಿನ ಕಡೆಗೆ ಪ್ರಯಾಣ ಮಾಡುವ ಈ ಸುದಿನ ಕತ್ತಲೆಯು ನಿಧಾನವಾಗಿ ಕಡಿಮೆಯಾಗಿ ಹಗಲು ಅಧಿಕವಾಗಿರುತ್ತದೆ. ಪುರಾಣ ಪುಣ್ಯ ಕಥೆಗಳಲ್ಲಿ ಸಂಕ್ರಾಂತಿಯ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ದೇವರು ಮಲಗಿದ್ದವನು ಈ ದಿನ ಏಳುತ್ತಾನೆ. ಈ ಶುಭ ದಿವಸದಿಂದ ಒಳ್ಳೆಯ ಕೆಲಸವನ್ನು ಪ್ರಾರಂಭಿಸುತ್ತಾನೆ. ಹಾಗಾಗಿ ಇದನ್ನು `ಉತ್ತರಾಯಣ’ ಪುಣ್ಯಕಾಲ ಅಥವಾ `ದೇವಾಯನ ಕಾಲ’ ಎಂದು ಕರೆಯುತ್ತಾರೆ.

ನಮ್ಮ ಪಂಚಾಂಗಗಳಲ್ಲಿ ಸಂಕ್ರಾಂತಿ ದೇವತೆಯ ರೂಪ, ಜನನ, ಅಲಂಕಾರ, ಆಹಾರ, ಉಡುಪು, ಪ್ರಯಾಣ ಮಾಡುವ ದಿಕ್ಕು. ಕುಡಿಯುವ ನೀರು, ಹೆಸರು ಇದರಿಂದಾಗುವ ಫಲಗಳು ಎಲ್ಲವನ್ನೂ ವಿವರವಾಗಿ ತಿಳಿಸುತ್ತಾರೆ. ಇದು ದೇವತೆಗಳು ಮತ್ತು ಮನುಷ್ಯರು ಇಬ್ಬರಲ್ಲೂ ವಿಶಿಷ್ಟವಾದ ಹಬ್ಬ ಎಂದು ಇದರಿಂದ ತಿಳಿಯುತ್ತದೆ.

ಸಂಕ್ರಾಂತಿ ಹಬ್ಬದಂದು ದೇವರಿಗರ್ಪಿಸುವ ಆ ಸಂಕ್ರಾಂತಿಯಲ್ಲಿ ಎಳ್ಳುಬೆಲ್ಲ ಕರ್ಮದ ಹೊರೆಯನ್ನು ಕಿರಿದಾಗಿಸಿ (ಎಳ್ಳು) ದೈವೀಗುಣ ಮೈಗೂಡಿಸಿಕೊಳ್ಳುವ (ಬೆಲ್ಲ), ಪ್ರಕೃತಿಗಾಗಿ ಹಂಬಲಿಸುತ್ತ (ಕಬ್ಬು) ತಾಳ್ಮೆಗೆಡದೆ ಮುನ್ನಡೆಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟಿದ್ದು ಎಂಬ ಸಂದೇಶವನ್ನು ಬಿಂಬಿಸುತ್ತದೆ.

ಪ್ರಾದೇಶಿಕ ವಿಭಿನ್ನತೆ

ಮಕರ ಸಂಕ್ರಾಂತಿ ಒಂದು ರಾಷ್ಟ್ರೀಯ ಹಬ್ಬ. ಈ ಸಂಕ್ರಾಂತಿ ಹಬ್ಬವನ್ನು ಭಾರತವಲ್ಲದೆ, ವಿದೇಶಗಳಲ್ಲಿಯೂ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಗ್ರೀಕರು ಸಂಕ್ರಾಂತಿಯನ್ನು `ಬೆಕನ್‌’ ಎಂಬ ಹೆಸರಿನಿಂದ ಆಚರಿಸಿದರೆ, ರೋಮ್ ನಲ್ಲಿ  `ಬ್ಯಾಕಿನ್‌ ಡೇ’ ಎಂಬ ಹೆಸರಿನಿಂದ ಆಚರಿಸುತ್ತಾರೆ. ಈಜಿಫ್ಟ್ ನಲ್ಲಿ `ನಮ್ ಫೆಸ್ಟಿವ್‌’ ಎಂಬ ಹೆಸರಿನಿಂದ ಆಚರಿಸುತ್ತಾರೆ.

ಭಾರತದಲ್ಲಿ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಉತ್ತರ ಪ್ರದೇಶದಲ್ಲಿ `ಕಿಚ್ಚಡಿ’ ಎಂದು ಆಚರಿಸಿದರೆ, ಪಂಜಾಬ್‌ ರಾಜ್ಯದಲ್ಲಿ ಮೊದಲನೆ ದಿನವನ್ನು `ಲೋಹ್ರೀ’ ಎಂದೂ, ಎರಡನೇ ದಿನವನ್ನು `ಮಾಗಿ’ ಎನ್ನುವ ಹೆಸರಿನಿಂದಲೂ ಆಚರಿಸುತ್ತಾರೆ. ಪಂಜಾಬಿಗಳು ಅಂದು ತಮ್ಮ ಮನತಣಿಯು ತನಕ `ಬಾಂಗ್ರಾ ನೃತ್ಯ’ ಮಾಡುತ್ತಾರೆ.

ಮಧ್ಯಪ್ರದೇಶದಲ್ಲಿ ಇದನ್ನು `ಸುಕಾರತ್‌’ ಎನ್ನುವ ಹೆಸರಿನಿಂದ ಆಂಧ್ರಪ್ರದೇಶದಲ್ಲಿ `ಪೆದ್ದ ಪಂಡುಗ’ ಎಂಬ ಹೆಸರಿನಿಂದ ನಾಲ್ಕು ದಿನಗಳ ಹಬ್ಬವನ್ನಾಗಿ ಆಚರಿಸುತ್ತಾರೆ. ಅಸ್ಸಾಂ ಕಡೆಯಲ್ಲಿ  `ಬೋಗಾಲೀ ಬಿಹು’ ಎನ್ನುವ ಹೆಸರಿನಿಂದ ಆಚರಿಸುತ್ತಾರೆ. ಒರಿಸ್ಸಾದಲ್ಲಿ ಮಕರ ಮೇಳ ನಡೆದರೆ, ಬಂಗಾಳದಲ್ಲಿ ಗಂಗಾಸಾಗರ ಮೇಳ ನಡೆಯುತ್ತದೆ. ಗುಜರಾತ್‌ನಲ್ಲಿ ಗಾಳಿಪಟ ಹಾರಿಸುವುದರ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಅಲಹಾಬಾದ್‌ನ ಸಂಗಮದಲ್ಲಿ ಅಂದು ಮುಳುಗಿ ಏಳುವುದರಿಂದ ಪಾಪಗಳು ತೊಡೆದು ಪವಿತ್ರರಾಗುತ್ತೇವೆ ಎಂದು ಭಾವಿಸಲಾಗಿದೆ. ತಮಿಳುನಾಡಿನಲ್ಲಿ `ಪೊಂಗಲ್ ಪಂಡಿಗೆ’ ಎನ್ನುವ ಹೆಸರಿನಿಂದ ಮೂರುದಿನಗಳ ಕಾಲ ಆಚರಿಸುತ್ತಾರೆ. ಕೇರಳದಲ್ಲಿ `ಮಕರ ಜ್ಯೋತಿ’ ವಿಶೇಷ. ಈ ದಿನ ಪುಣ್ಯಕಾಲವಾದ್ದರಿಂದ ಜ್ಯೋತಿ ಹಾಗೂ ಸೂರ್ಯನನ್ನು ಆರಾಧಿಸುತ್ತಾರೆ. ಲಕ್ಷಾಂತರ ಭಕ್ತರು ಶಬರಿಮಲೆ ಬೆಟ್ಟಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಂದ್ರಮಾನ ಸೌರಮಾನ ಸಂಕ್ರಾಂತಿಗಳೆರಡೂ ಆಚರಣೆಯಲ್ಲಿವೆ.

ರೈತರ ಸಂಕ್ರಾಂತಿ

ಸಂಕ್ರಾಂತಿ ಬೆಳೆಗಳ ಹಬ್ಬ. ಅಂದರೆ ಸುಗ್ಗಿಯ ಹಬ್ಬ. ರೈತ ಅನೇಕ ಬೆಳೆಗಳನ್ನು ಈ ಚಳಿಗಾಲದಲ್ಲಿ ಬೆಳೆದಿರುತ್ತಾನೆ. ಒಂದೇ ರೀತಿಯ ವ್ಯವಸಾಯ ಜೀವನದಿಂದ ಬೇಸತ್ತ ಅವನ ಜೀವನದಲ್ಲಿ ಒಂದು ಬದಲಾವಣೆಯನ್ನು ತರುವುದಕ್ಕೆ ಈ ಹಬ್ಬ ಬೆಳಕಿಗೆ ಬಂದಿದೆ. ಪ್ರಕೃತಿ ದೇವತೆಗೆ ವಂದನೆ ಸಲ್ಲಿಸುವುದು ಈ ಹಬ್ಬದ ಉದ್ದೇಶ. ಮುಂದಿನದು ಬೋಗಿ ಹಬ್ಬ, ಅಂದು ರೈತರು ಇಂದ್ರ ದೇವನಿಗೆ ಮೊದಲು ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಇಂದ್ರನಿಗೆ ರೈತರ ಮೊದಲ ನಮನ. ಶುಭಕಾರಕವಾದ ಈ ಹಬ್ಬ ಮನಸ್ಸಿನ ಕೆಡುಕು, ದ್ವೇಷ ಅಸೂಯೆಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಗ್ರಾಮೀಣ ಪ್ರದೇಶದಲ್ಲಿದೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ರೈತರು ಸಂಕ್ರಾಂತಿಯನ್ನು ಸಂತೋಷ ಸಂಭ್ರಮದಿಂದ ಆಚರಿಸುತ್ತಾರೆ. ಈ ಸಂಭ್ರಮಕ್ಕಾಗಿ `ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಬೇಕು’ ಎಂಬ ಸಂಪ್ರದಾಯ ಬೆಳೆದು ಬಂದಿದೆ. ಎಳ್ಳು ಫಲವಂತಿಕೆಯನ್ನು, ಜೀರಿಗೆ ಹೆಣ್ಣು ಗಂಡುಗಳ ಸಂಬಂಧವನ್ನು ಬೆಸೆಯುವ ಧಾನ್ಯಗಳಾಗಿದ್ದು, ಅವನ್ನು ಬೆಳೆದು ಕೊಡುವ ಭೂಮಿ ಸಾಕ್ಷಾತ್‌ ತಾಯಿ ಆ ಕಾರಣಕ್ಕೆ….“ಬೆಳಗಾಗಿ ನಾನೆದ್ದು ಯಾರುಯಾರ ನೆನೆಯಾಲಿ ಎಳ್ಳು ಜೀರಿಗೆ ಬೆಳೆಯೋಳೆ ಭೂಮಿತಾಯಿ ಎದ್ದೊಂದು ಗಳಿಗೆ ನೆನೆದೇನು” ಎಂದು ಹಾಡಿ ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಬೆಳೆಗಳನ್ನು ಕೊಯ್ಲು ಮಾಡಿ ಕಣದಲ್ಲಿ ಹಾಕಿ ಶುದ್ಧ ಮಾಡಿ ದವಸ ಧಾನ್ಯಗಳನ್ನು ಮನೆಯಲ್ಲಿ ರಾಶಿ ಹಾಕಿ ಪೂಜಿಸಿ, ಬಂದ ಬಡ ಬಗ್ಗರಿಗೆ ದಾನ ಮಾಡಿ ಭೂತಾಯಿಯ ಋಣಸ್ಮರಣೆ ಮಾಡುವ ದಿನ. ದನಕರುಗಳನ್ನು ಚೆನ್ನಾಗಿ ಬಣ್ಣಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಗುತ್ತದೆ. ವರ್ಷವಿಡೀ ಬೇಸಾಯ ಕೆಲಸದಲ್ಲಿ ತಮ್ಮೊಂದಿಗೆ ಹೆಗಲು ಕೊಟ್ಟು ದುಡಿದ ದನಕರುಗಳಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅಂತೂ ಏನೇ ಆಗಲಿ ಸಂಕ್ರಾಂತಿ ಸುಗ್ಗಿ ರೈತ ಹಿಗ್ಗಿ ನಲಿಯುವ ಹಬ್ಬ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಬ್ಬದ ಆಚರಣೆ

ಉತ್ತರಾಯಣವನ್ನು ಪುಣ್ಯಕಾಲವೆಂದು ಆ ಶುಭದಿನ ಮನೆಯನ್ನು ಶುಚಿ ಮಾಡಿ ಬಣ್ಣ ಬಣ್ಣದ ರಂಗೋಲಿ ಇಟ್ಟು ಹೊಸ್ತಿಲು ಬಾಗಿಲುಗಳಿಗೆ ತಳಿರುತೋರಣ, ಹೂಗಳಿಂದ ಅಲಂಕರಿಸಿ. ನಂತರ ಎಳ್ಳೆಣ್ಣೆಗೆ ಅರಿಶಿನವನ್ನು ಬೆರೆಸಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕೆಂಬ ಸಂಪ್ರದಾಯ ಬೆಳೆದುಬಂದಿದೆ. ಏಕೆಂದರೆ ಈ ಹಬ್ಬದಲ್ಲಿ ಸೂರ್ಯ ದಿಕ್ಕು ಬದಲಿಸುತ್ತಾನೆ. ಮುಂದೆ ಬಿಸಿಲಿನ ಧಗೆ ಹೆಚ್ಚಾಗುತ್ತದೆ. ಆ ಧಗೆಯನ್ನು ತಡೆಯಲು ಮೈಯಲ್ಲಿ ಶಕ್ತಿ ಬೇಕು. ಅದಕ್ಕಾಗಿ ದೇಹದಲ್ಲಿ ಎಣ್ಣೆ ಅಂಶವನ್ನು ಹೆಚ್ಚಿಸಿಕೊಳ್ಳಬೇಕು. ಹಾಗಾಗಿ ಹಬ್ಬದಲ್ಲಿ ಎಳ್ಳೆಣ್ಣೆ, ಅರಿಶಿನ ಹಚ್ಚಿ ಸ್ನಾನ ಮಾಡಿ ದೇವರ ಪೂಜೆ ಮಾಡಿ, ಪೊಂಗಲ್ ಮತ್ತು ಸಂಕ್ರಾಂತಿ ಎಳ್ಳು ಬೆಲ್ಲ ನೈವೇದ್ಯ ಮಾಡಿ, ಹಿರಿಯರಿಗೆ ನಮಸ್ಕರಿಸಿ, `ಎಳ್ಳು ಬೆಲ್ಲ ತಿನ್ನಿ, ಒಳ್ಳೊಳ್ಳೆ ಮಾತಾಡಿ,’ ಎಂದು ಹಾರೈಸುವ ಸಂಪ್ರದಾಯವಿದೆ. ನಂತರ ಎಳ್ಳಿನಿಂದ ತಯಾರಿಸಿದ ತಿಂಡಿಗಳನ್ನು ಸೇವಿಸಬೇಕು.

ಪೊಂಗಲ್ ವೈಶಿಷ್ಟ್ಯ

ಈ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಪೊಂಗಲ್ ಮತ್ತು ಖಾರಾ ಪೊಂಗಲ್ ಮಾಡಿ ನೇವೇದ್ಯ ಮಾಡುವುದೇ ವಿಶೇಷ. ಅಕ್ಕಿ ಮತ್ತು ಹೆಸರು ಬೇಳೆಯಿಂದ ಮಾಡುವ ಈ ಪೊಂಗಲ್‌ನ್ನು `ಹುಗ್ಗಿ’ ಎಂದೂ ಕರೆಯುತ್ತಾರೆ. ಇದಂತೂ ಧನುರ್ಮಾಸದಿಂದ ಆರಂಭವಾಗಿರುತ್ತದೆ. ಪೊಂಗಲ್ ನೈವೇದ್ಯ ಮಾಡುವ ಉದ್ದೇಶವೆಂದರೆ ಆ ದಿನ ಸೂರ್ಯ ಮತ್ತು ಮಡಕೆಯಾಕಾರದಲ್ಲಿ ರಂಗೋಲಿ ಹಾಕಿ, ಅದರ ಮೇಲೆ ಒಲೆಯನ್ನು ಇಟ್ಟು ಬೆಂಕಿ ಹಚ್ಚಿ ಮಡಕೆಯಲ್ಲಿ ಪೊಂಗಲ್ ಬೇಯಿಸುವಾಗ ಹೊರಗೆ ಉಕ್ಕುವಂತೆ ತಯಾರಿಸಬೇಕು. ನಂತರ ಸೂರ್ಯನಿಗೆ ನೈವೇದ್ಯ ಮಾಡಬೇಕು. ಆಗ ನಮ್ಮೊಳಗಿನ ಅಹಂಕಾರ ಮತ್ತಿತರ ಕೆಟ್ಟ ಭಾವನೆಗಳು ನಾಶವಾಗುತ್ತವೆ. ಮನಸ್ಸು ಶುದ್ಧವಾಗುತ್ತದೆ. ಅತಿಯಾದ ಬಿಸಿ ಹಾಗೂ ಹೊಗೆಯಲ್ಲಿ ಕಳೆಯುವ ಆ ಅವಧಿ ಬದುಕಿನ ಎಂಥ ಕಷ್ಟಗಳನ್ನಾದರೂ ತಾಳಿಕೊಳ್ಳುವ ಶಕ್ತಿಯನ್ನು ಕೊಡುತ್ತದೆ. ಪೊಂಗಲ್ ಉಕ್ಕುವ ರೀತಿಯಲ್ಲಿ ಮನೆಯಲ್ಲಿ ಅಷ್ಟೈಶ್ವರ್ಯಗಳು ತುಂಬಿ ಬರುವುದೆನ್ನುವುದು ಇದರ ಅರ್ಥ.

ಎಳ್ಳು ಬೀರುವುದು

ಸಂಕ್ರಾಂತಿ ಹಬ್ಬದ ವಿಶೇಷ ಸಂಭ್ರಮವೆಂದರೆ ಬಿಳಿ ಎಳ್ಳು, ಕಡಲೆಬೀಜ, ಬೆಲ್ಲ, ಕೊಬ್ಬರಿ, ಹುರಿಗಡಲೆಗಳನ್ನು ಸೇರಿಸುತ್ತಾರೆ. ಈ `ಸಂಕ್ರಾಂತಿ ಎಳ್ಳನ್ನು’ ಪ್ರತಿ ಮನೆಗೂ ಬೀರುವುದು ಒಂದು ಪ್ರಮುಖ ಅಂಗ. ಎಳ್ಳು ಹಾಗೂ ಬೆಲ್ಲಕ್ಕೆ ನಮ್ಮ ಹಿರಿಯರು ಬಹಳ ಮಹತ್ವವಾದ ಸ್ಥಾನವನ್ನು ಕೊಟ್ಟಿದ್ದಾರೆ. ಎಳ್ಳು ಶನಿಯ ಸಂಕೇತವಾದರೆ, ಬೆಲ್ಲ ಸೂರ್ಯನ ಸಂಕೇತ. ಇದೊಂದು ತಂದೆ ಮಕ್ಕಳ ಬಾಂಧವ್ಯವನ್ನು ಸೂಚಿಸುತ್ತದೆ. ಎಳ್ಳು ಸ್ನೇಹ ಸೌಹಾರ್ದವನ್ನು ಸೂಚಿಸುವುದಾದರೆ, ಬೆಲ್ಲ ಮಧುರವಾದ ನಡೆನುಡಿಗಳನ್ನು ಸೂಚಿಸುತ್ತದೆ.

ಸಂಕ್ರಾಂತಿ ಹಬ್ಬದ ಆಚರಣೆ. ಮೂಲ ಉದ್ದೇಶ ಒಂದೇ ಆದರೂ ಆಚರಿಸುವ ವಿಧಿ ವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಕೆಲವು ಕಡೆ ಮಕ್ಕಳನ್ನು ಕೂರಿಸಿ ಸಂಕ್ರಾಂತಿ ಎಳ್ಳು, ಅವರೆಕಾಯಿ, ಎಲಚಿ ಹಣ್ಣು, ಕಡಲೆಕಾಯಿ, ಕಬ್ಬಿನ ಚೂರು, ಕಿತ್ತಲೆಹಣ್ಣಿನ ತೊಳೆ ಇವುಗಳನ್ನು ಬೆರೆಸಿ ಪಾವಿನಲ್ಲಿ ತುಂಬಿ ಮುತ್ತೈದೆಯರು ತಲೆಯ ಮೇಲೆ ಸುರಿದು, ಆರತಿ ಮಾಡಿ ಶುಭವಾಗಲೆಂದು ಹರಸುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳಿಗೆ ಬರಬಹುದಾದ ಪೀಡೆ ತೊಲಗುತ್ತದೆ ಎಂಬ ನಂಬಿಕೆ ಇದೆ.

ಅಂದು ಸಾಯಂಕಾಲ ಮಕ್ಕಳಿಗೆ ಅಲಂಕಾರ ಮಾಡಿ ತಟ್ಟೆಗೆ ಸಂಕ್ರಾಂತಿ ಎಳ್ಳಿನ ಜೊತೆ ಕಬ್ಬಿನ ತುಂಡು, ಎಲಚಿ ಹಣ್ಣು, ಬಾಳೆಹಣ್ಣು, ಕಿತ್ತಳೆ ಹಣ್ಣು ಹಾಗೂ ಬಣ್ಣ ಬಣ್ಣದ ಸಕ್ಕರೆ ಅಚ್ಚು ಇವುಗಳನ್ನು ಇಟ್ಟುಕೊಂಡು ಪ್ರತಿ ಮನೆಗೂ ಕೊಟ್ಟು ಬರುತ್ತಾರೆ. ಈ ಸಂಕ್ರಾಂತಿ ಎಳ್ಳನ್ನು ದಾನ ಮಾಡುವುದರಿಂದ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಎಳ್ಳು ಪೀಡೆಯ ಪರಿಹಾರ ಎಂಬುದು ಮೂಲ ಉದ್ದೇಶವಾದರೂ, ಎಳ್ಳು ಸಹ ಸಿಹಿಕಹಿಯ ಸಂಕೇತ. ನಾವು ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬುದೇ ಇದರರ್ಥ. ಎಳ್ಳು ಬೆಲ್ಲ ಹಂಚುವುದರಿಂದ ಜನರ ಪರಸ್ಪರ ಪರಿಚಯವಾಗುತ್ತದೆ. ಸ್ನೇಹ ವೃದ್ಧಿಯಾಗುತ್ತದೆ. ಇದರಿಂದ ಸಮಾಜದಲ್ಲಿ ಐಕ್ಯತೆ ವೃದ್ಧಿಸುವುದು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು ಎನ್ನುವಾಗ ಪ್ರೀತಿ ಸ್ನೇಹದ ಸಂಕೇತ ಆಗಿದೆ.

ಆರೋಗ್ಯವರ್ಧಕ ಸಂಕ್ರಾಂತಿ ಚಳಿಗಾಲದ ಹಬ್ಬ. ಚಳಿಯಿಂದ ಚರ್ಮ ಸುಕ್ಕಾಗಿ, ಕೊಬ್ಬಿನಂಶ ಕಡಿಮೆಯಾಗುತ್ತದೆ. ಇದನ್ನು ಮೊದಲೇ ಸರಿಪಡಿಸಿಕೊಳ್ಳದಿದ್ದಲ್ಲಿ ಬೇಸಿಗೆ ಕಾಲ ಬಂದಂತೆ ದೇಹಕ್ಕೆ ನಾನಾ ಉಪದ್ರವಗಳುಂಟಾಗುತ್ತದೆ. ಹೆಸರುಬೇಳೆಯಿಂದ ಮಾಡುವ ಪೊಂಗಲ್ ಶರೀರದ ಅನೇಕ ದೋಷಗಳನ್ನು ನಿವಾರಿಸುವ ಶಕ್ತಿ ಪಡೆದಿದೆ. ಮೆಣಸು ಉಷ್ಣ ತಗ್ಗಿಸಿ ಹುಣ್ಣುಗಳಾಗದಂತೆ, ಶೀತ ಆಗದಂತೆ ಮಾಡುತ್ತದೆ. ಜೀರಿಗೆ ಪಿತ್ತಹರ. ತೈಲ ಧಾನ್ಯವಾದ ನೆಲಗಡಲೆ, ಕೊಬ್ಬರಿ, ತೆಂಗಿನತುರಿ ವಾಯುಹರವಾದ, ಮನಸ್ಸಿಗೆ ಮುದ ನೀಡುವ ಇಂಗು ಇವುಗಳೆಲ್ಲವನ್ನೂ ಅದರೊಡನೆ ಸೇರಿಸಿ ಪೊಂಗಲ್ ಮಾಡಿ ದೇವರಿಗೆ ನೈವೇದ್ಯ ಮಾಡಿ ಬೆಳಗ್ಗೆಯೇ ತಿಂದರೆ ಶರೀರಕ್ಕೆ ಲವಲವಿಕೆ , ಆರೋಗ್ಯ, ಕೊಬ್ಬಿನ ಸೇರ್ಪಡೆ ಎಲ್ಲ ಉಂಟಾಗುತ್ತದೆ.

ಹಾಗೆಯೇ ಎಲ್ಲ ಕೊಬ್ಬಿನಂಶವಿರುವ ಸಂಕ್ರಾಂತಿ ಎಳ್ಳು ಮತ್ತು ವಿಟಮಿನ್‌, ಕ್ಯಾಲ್ಸಿಯಂ, ಪ್ರೋಟೀನ್‌ ಇರುವ ಕಬ್ಬು, ಕಿತ್ತಳೆ, ಎಲಚಿ, ಬಾಳೆ ಹಣ್ಣುಗಳು ಇವುಗಳೆಲ್ಲವನ್ನೂ ಸೇವಿಸುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಎಣ್ಣೆ (ಕೊಬ್ಬು) ಅಂಶ ದೊರಕುತ್ತದೆ. ಅಲ್ಲದೆ ದೇಹದ ಮಾಂಸಖಂಡಗಳನ್ನು ಸುಸ್ಥಿತಿಯಲ್ಲಿಡುತ್ತದೆ. ಹೀಗೆ ನಮ್ಮ ದೇಹದ ಆರೋಗ್ಯವನ್ನು ಸಮತೋಲನದಲ್ಲಿಡಲು ಹಬ್ಬಗಳಲ್ಲಿ ಈ ರೀತಿಯ ವಸ್ತುಗಳನ್ನು ಬಳಸುವಂತೆ ನಮ್ಮ ಹಿರಿಯರು ಅರ್ಥ ಮಾಡಿಕೊಂಡು ಪ್ರಕೃತಿಯ ವಿದ್ಯಮಾನಕ್ಕೆ ಅನುಗುಣವಾಗಿ ಆಹಾರವನ್ನು ಬಳಸುವಂತೆ ಮಾಡಿದ್ದಾರೆ.

ಒಟ್ಟಿನಲ್ಲಿ ಹೊಸ ವರ್ಷದ ಈ ಮೊದಲ ಹಬ್ಬ ಆರೋಗ್ಯಪೂರ್ಣ ಮತ್ತು ಪ್ರೀತಿ ವಿಶ್ವಾಸಗಳನ್ನು ಬೆಳೆಸುವ ಒಂದು ಪವಿತ್ರ ಹಬ್ಬವಾಗಿದೆ. ಸಮಾಜದಲ್ಲಿ ಭಾವೈಕ್ಯತೆಯನ್ನು ಮೂಡಿಸಲು ಬಾಳಿನ ಬೇಸರವನ್ನು ಪರಿಹರಿಸಿ ಮನುಷ್ಯನ ಮನಸ್ಸಿಗೆ ಮುದವನ್ನು ನೀಡುವ ಈ ಹಬ್ಬ ಸೂರ್ಯನ ಪ್ರಕಾಶ ಎಳ್ಳಿನ ಸ್ನೇಹ ಬೆಲ್ಲದ ಸಿಹಿ ನಮ್ಮ ಜೀವನದಲ್ಲಿ ಸಾಕಾರಾಗಬೇಕಾದರೆ ಕತ್ತಲನ್ನು ಓಡಿಸಿ ಜ್ಞಾನದ ಜ್ಯೋತಿಯಾಗಿ ಹೊಸ ಬದುಕನ್ನು ಹಸನು ಮಾಡಿಕೊಳ್ಳುವ ದಿವ್ಯ ಸಂದೇಶವನ್ನು ನೀಡುವ ಈ ಮಕರ ಸಂಕ್ರಾಂತಿ ಹಬ್ಬವನ್ನು ಸ್ವಾಗತಿಸಿ ಒಳ್ಳೆಯ ಮಾತುಗಳನ್ನಾಡುತ್ತಾ ಸಂತೋಷದಿಂದ ಆಚರಿಸೋಣ.

ರಾಜೇಶ್ವರಿ ವಿಶ್ವನಾಥ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ