ಎಂದಿನಂತೆ ಅಂದೂ ಸಹ ಅವರು ಊಟದ ಸಮಯದಲ್ಲಿ ಭೇಟಿಯಾಗಿದ್ದರು. ಸಿದ್ದಾರ್ಥ ಸುಜಾತಾಗೆ, “ನಾನು ನಿಮ್ಮ ತಂದೆ ತಾಯಿಯರನ್ನು ನೋಡುವುದಕ್ಕೂ ಮುನ್ನ ನೀನೊಮ್ಮೆ ನನ್ನ ತಂದೆತಾಯಿಯರನ್ನು ಭೇಟಿಯಾಗು,” ಎಂದ.

“ಏಕೆ?” ಅವಳು ಅಚ್ಚರಿಯಿಂದ ಕೇಳಿದಳು.

“ನನಗೆ ಗೊತ್ತಿಲ್ಲ. ಆದರೆ ಅವರು ನಿನ್ನನ್ನು ಭೇಟಿಯಾಗುವುದಕ್ಕೆ ಬಹಳ ಕಾತುರರಾಗಿ ಇದ್ದಾರೆ,” ಸಿದ್ಧಾರ್ಥನಿಗೂ ಅವನ ತಂದೆ ತಾಯಿ ಯಾವ ಕಾರಣಕ್ಕಾಗಿ ಸುಜಾತಾಳನ್ನು ಬರಹೇಳಿದ್ದಾರೆ ಎನ್ನುವ ಅರಿವಿರಲಿಲ್ಲ.

“ಸರಿ ಹಾಗಾದರೆ, ತಡವೇಕೆ? ನಾಳೆ ಸಂಜೆ ಆಫೀಸ್‌ ಮುಗಿದ ನಂತರ ನಾನು ನಿನ್ನೊಂದಿಗೆ ನಿನ್ನ ಮನೆಗೆ ಬರುತ್ತೇನೆ,” ಸುಜಾತಾ ನುಡಿದಳು.

“ಒಳ್ಳೆಯದು,” ಸುಜಾತಾಳಿಗೆ ಸಿದ್ದಾರ್ಥನ ಅಸ್ಪಷ್ಟ ದನಿ ಕೇಳಿಸಿತು.

“ನಾನು ನನ್ನ ತಂದೆ ತಾಯಿಗೆ ನಾಳೆ ಮನೆಗೆ ಬರುವುದು ಸ್ವಲ್ಪ ತಡವಾಗುತ್ತದೆ ಎಂದು ತಿಳಿಸುತ್ತೇನೆ,” ಭೇಟಿ ಖಚಿತಗೊಳಿಸಿಕೊಳ್ಳುವಂತೆ ಸುಜಾತಾ ಹೇಳಿದಳು.

ಅವರಿಬ್ಬರ ಸಂಬಂಧ ಹಾಗೂ ಪ್ರಣಯ ಇದು ಒಂದು ದಿನದಲ್ಲಿ ಪ್ರಾರಂಭವಾಗಿದ್ದಲ್ಲ. ಅದು ನಿಧಾನವಾಗಿ ಹಂತಹಂತವಾಗಿ ಬೆಳೆದದ್ದಾಗಿತ್ತು.

ಇದು ಪ್ರಾರಂಭವಾದದ್ದು ಎರಡು ವರ್ಷಗಳ ಹಿಂದೆ ಆಫೀಸಿನಲ್ಲಿ ಇಬ್ಬರೂ ಊಟದ ಡಬ್ಬಿಗಳನ್ನು ಬದಲಾಯಿಸಿಕೊಳ್ಳುವುದು, ಕಾಫಿ ಟೀಗಾಗಿ ಹತ್ತಿರದ ಹೋಟೆಲ್‌ಗೆ ಹೋಗುವುದು ಮಾಡುತ್ತಿದ್ದರು. ಇಬ್ಬರೂ ಆಗಾಗ ಚಲನಚಿತ್ರ ವೀಕ್ಷಣೆಗೆ ತೆರಳುವುದು, ಇತರೆ ಸಹೋದ್ಯೋಗಿಗಳ ಜೊತೆ ಸೇರಿ ಪಿಕ್ನಿಕ್‌ಗೆ ಹೋಗುವುದೂ ನಡೆದಿತ್ತು. ಆದರೆ ಅವರೆಂದೂ ಸಭ್ಯತೆಯ ಎಲ್ಲೇ ಮೀರಿರಲಿಲ್ಲ.

ಕಛೇರಿ ಅವಧಿಯಲ್ಲಿ ತಾವಿಬ್ಬರೂ ಭೇಟಿಯಾಗುವುದನ್ನು ಆದಷ್ಟೂ ತಪ್ಪಿಸಿದ್ದರು. ಇದಕ್ಕಿದ್ದ ಪ್ರಮುಖ ಕಾರಣಗಳೆಂದರೆ ಕಛೇರಿ ಅನುಭವದ ಆಧಾರದಲ್ಲಿ ಸುಜಾತಾ, ಸಿದ್ದಾರ್ಥನಿಗಿಂತ ಹೆಚ್ಚಿನ ಅನುಭವ ಹೊಂದಿದ್ದಳು. ಅಲ್ಲದೆ, ಇಬ್ಬರ ಕೆಲಸದ ವಿಭಾಗಗಳು ಬೇರೆ ಬೇರೆಯಾಗಿದ್ದವು. ಹೀಗಾಗಿ ಪದೇಪದೇ ಭೇಟಿಯಾಗುವ ಮೂಲಕ ಸಹೋದ್ಯೋಗಿಗಳ ಬಾಯಿಗೆ ಅಗ್ಗದ ಸುದ್ದಿಯಾಗುವುದು ಅವರಿಗೆ ಬೇಕಾಗಿರಲಿಲ್ಲ. ದಿನ ಕಳೆದಂತೆ ಅವರಿಬ್ಬರಿಗೂ ತಾವು ಪರಸ್ಪರ ಪ್ರೀತಿಸುತ್ತಿರುವುದರ ಅರಿವಾಗಿತ್ತು. ಜೊತೆಗೆ ಪ್ರೀತಿ ದಿನದಿಂದ ದಿನಕ್ಕೆ ಗಾಢವಾಗುತ್ತಿರುವುದೂ ಅವರ ಗಮನಕ್ಕೆ ಬಂದಿತ್ತು. ಹೀಗಾಗಿ ತಾವು ಆದಷ್ಟು ಬೇಗನೆ ತಮ್ಮ ತಮ್ಮ ಪೋಷಕರ ಜೊತೆಗೆ ಮಾತನಾಡಿ ಅವರಲ್ಲಿ ತಮ್ಮ ಮದುವೆಯ ನಿರ್ಧಾರವನ್ನು ತಿಳಿಸಲು ಉತ್ಸುಕರಾಗಿದ್ದರು.

ಸುಜಾತಾ ತನ್ನ ಪೋಷಕರಿಗೆ ತಾನು ಸಿದ್ದಾರ್ಥನನ್ನು ಮದುವೆ ಆಗುವುದಾಗಿ ತಿಳಿಸಿದಾಗ ಅವರೇನೂ ಅಡ್ಡಿ ಮಾಡಲಿಲ್ಲ. ಸಿದ್ದಾರ್ಥ ಅವಳಿಗೆ ತಕ್ಕ ಜೋಡಿ ಎಂದೂ, ಅವನೊಡನೆ ತಮ್ಮ ಮಗಳು ಹೆಚ್ಚು ಕ್ಷೇಮದಿಂದಿರುವಳೆಂದೂ ಅವರು ತಿಳಿದಿದ್ದರು. ಆದರೆ ಇಷ್ಟು ದೀರ್ಘಕಾಲದ ಗೆಳೆತನವನ್ನು ತಮಗೆ ತಿಳಿಸಲು ಇಷ್ಟೊಂದು ಸಮಯ ತೆಗೆದುಕೊಂಡಿದ್ದಕ್ಕಾಗಿ ಅವಳ ಪೋಷಕರಿಗೆ ಕೊಂಚ ಬೇಸರವಾಗಿತ್ತು.

ಅಂದೂ ಸಹ ಸುಜಾತಾ ತಾನು ಸಿದ್ದಾರ್ಥನ ಮನೆಗೆ ಹೋಗುವೆನೆಂದಾಗ ತಂದೆ ಸಂತೋಷದಿಂದಲೇ ಒಪ್ಪಿಕೊಂಡರು. ಅವರಿಗೆ ತಮ್ಮ ಮಗಳ ಬಗ್ಗೆ ಸಂಪೂರ್ಣ ನಂಬಿಕೆ ಇತ್ತು. ಜೊತೆಗೆ ಸುಜಾತಾಳ ತಂಗಿ ವಂದನಾ ತಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ಹೋಗುವ ಸಂದರ್ಭದಲ್ಲಿ ತಾನು ಅಕ್ಕನ ಮದುವೆಯನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದಳು.

ಸಿದ್ದಾರ್ಥನ ತಂದೆ ತಾಯಿ ಮತ್ತೊಂದು ವಿಧದ ಆಲೋಚನೆಯಲ್ಲಿದ್ದರು. ಸಿದ್ದಾರ್ಥ ತನ್ನ ಹಾಗೂ ಸುಜಾತಾಳ ವಿಚಾರವನ್ನು ತಿಳಿಸಿದಾಗ ಅವರು ಆಘಾತಗೊಂಡರು. ಅವರು ತಮ್ಮ ಮನೆಗೆ ಬರುವ ಸೊಸೆ ಅಪಾರ ಹಣ ಹಾಗೂ ವರದಕ್ಷಿಣೆ ತರುತ್ತಾಳೆ, ಇದರಿಂದ ಸಿದ್ದಾರ್ಥನ ತಂಗಿ ಸುಮತಿಯ ಮದುವೆ ಮಾಡಿಸಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು.

ಸುಮತಿ ಸಿದ್ದಾರ್ಥನಿಗಿಂತ ನಾಲ್ಕು ವರ್ಷ ಚಿಕ್ಕವಳಾಗಿದ್ದು, ಪದವಿ ನಂತರ ಕಾಲೇಜು ಜೀವನಕ್ಕೆ ಕೊನೆ ಹಾಡಿದ್ದಳು. ಅವಳ ಮದುವೆ ವಿಚಾರವಾಗಿ ಸಿದ್ದಾರ್ಥನ ತಂದೆ ತಾಯಿಯರಿಗೆ ಅಪಾರ ನಿರೀಕ್ಷೆ ಇತ್ತು.

“ಮೊದಲು ಸುಜಾತಾಳನ್ನು ಭೇಟಿಯಾಗೋಣ. ನಂತರಷ್ಟೇ ಅವಳ ಪೋಷಕರನ್ನು ಭೇಟಿಯಾಗುವ ಕುರಿತು ನಿರ್ಧರಿಸಿದರಾಯಿತು,” ಎಂದು ಸಿದ್ಧಾರ್ಥನ ತಂದೆ ನಾರಾಯಣರಾಯರು ಸಲಹೆ ನೀಡಿದರು. ತಾಯಿ ಸುಶೀಲಮ್ಮ ಸಹ ಪತಿಯ ಸಲಹೆಗೆ ಸಮ್ಮತಿಸಿದರು.

ಸುಜಾತಾಳ ಭೇಟಿಗೂ ಮುನ್ನ ಆಕೆಯ ಪೋಷಕರನ್ನು ಭೇಟಿಯಾಗುವಂತೆ ತನ್ನ ಪೋಷಕರನ್ನು ಒಪ್ಪಿಸುವಲ್ಲಿ ಸಿದ್ದಾರ್ಥ ವಿಫಲನಾದ.

ಮರುದಿನ ಸುಜಾತಾ, ಸಿದ್ದಾರ್ಥನೊಡನೆ ಅವನ ಮನೆಗೆ ಬಂದಳು. ಮೂರು ಕೋಣೆಗಳ ಸುಂದರ, ಅಚ್ಚುಕಟ್ಟಾದ ಮನೆ ಅವನದಾಗಿತ್ತು. ಸುಜಾತಾ ತನ್ನ ತಂದೆತಾಯಿಯರೊಂದಿಗೆ ಇಂತಹದೇ ಮನೆಯಲ್ಲಿ ವಾಸವಾಗಿದ್ದಳು.

ಸಿದ್ದಾರ್ಥನ ಪೋಷಕರೊಂದಿಗೆ ಭೇಟಿಗಾಗಿ ಮನೆಯ ಹಾಲ್‌ನಲ್ಲಿ ಕುಳಿತಿದ್ದ ಸುಜಾತಾಳಲ್ಲಿಗೆ ಸಿದ್ದಾರ್ಥನೊಂದಿಗೆ ಹಳದಿ ಬಣ್ಣದ ಶಾರ್ಟ್ಸ್, ಬಿಳಿಯ ಚೂಡಿ ಧರಿಸಿದ್ದ ಅವನ ತಂಗಿ ಸುಮತಿಯೂ ಬಂದಳು. ಅವಳೂ ಇವರ ಮಾತುಕತೆಯಲ್ಲಿ ಕೂಡಿಕೊಂಡಳು.

ಸಿದ್ದಾರ್ಥನ ತಂದೆತಾಯಿಯರು ಹೊರಗೆ ಬಂದೊಡನೆ ಸುಜಾತಾ ಕೈಜೋಡಿಸಿ ನಮಸ್ಕರಿಸಿದಳು. ಇಬ್ಬರೂ ಪರಸ್ಪರ ಪರಿಚಯಿಸಿಕೊಂಡರು. ಅವರು ತನ್ನ ಎದುರಿನ ಆಸನದಲ್ಲಿ ಕುಳಿತುಕೊಳ್ಳುವುದಕ್ಕಾಗಿ ಸುಜಾತಾ ಕಾಯುತ್ತಿದ್ದಳು.

“ಸುಮತಿ, ಅಣ್ಣನಿಗೆ ಟೀ ಮಾಡಿಕೊಂಡು ಬಾ,” ಸಿದ್ದಾರ್ಥನ ತಾಯಿ ಮಗಳಿಗೆ ಹೇಳಿದರು.

“ಎಲ್ಲರಿಗೂ ಮಾಡು…..” ಸಿದ್ದಾರ್ಥ ಹೇಳಿದ.

“ನಮ್ಮದೆಲ್ಲಾ ಆಯಿತು,” ಎಂದರು ಸುಶೀಲಮ್ಮ.

“ನಮಗಾಗಿ ನೀವು ಕಾಯಬಹುದಿತ್ತಲ್ಲ….?” ಎಂದು ಸಿದ್ದಾರ್ಥ ಕೇಳಿದಾಗ, “ಏಕೆ?” ಎಂದ ಸುಶೀಲಮ್ಮನ ಸಣ್ಣದಾಗಿ  ಗುಣುಗುಣಿಸಿದ ದನಿಯಷ್ಟೇ ಸುಜಾತಾಗೆ ಕೇಳಿಸಿತು. ಸುಮತಿ ಅದಾಗಲೇ ಅಡುಗೆ ಕೋಣೆ ಸೇರಿದ್ದಳು.

ತಿಳಿಗೆಂಪು ಬಣ್ಣದ ಕಾಟನ್‌ ಸೀರೆ, ಬಿಳಿ ಬಣ್ಣದ ರವಿಕೆ ಧರಿಸಿದ್ದ ಸುಶೀಲಮ್ಮ ಸುಜಾತಾಳನ್ನೊಮ್ಮೆ ಸೂಕ್ಷ್ಮವಾಗಿ ನೋಡುತ್ತಾ, “ನೀನೇನು ಜೀನ್ಸ್ ಟೀಶರ್ಟ್‌ ಧರಿಸಿದ್ದಿ…..?” ಎಂದರು.

“ನಾವು ಆಫೀಸಿನಿಂದ ನೇರವಾಗಿ ಬಂದೆವು,” ಸಿದ್ದಾರ್ಥ ವಿವರಿಸಿದ.

“ಹೆಣ್ಣುಮಕ್ಕಳು ಸೀರೆಯಲ್ಲಿ ಆಕರ್ಷಕವಾಗಿ, ಸುಂದರವಾಗಿ ಕಾಣುತ್ತಾರೆ. ಅದರಲ್ಲಿಯೂ ಮದುವೆ ಬಳಿಕ ಹೆಣ್ಣುಮಕ್ಕಳು ಸೀರೆ ಉಡುವುದೇ ಹೆಚ್ಚು ಸೂಕ್ತ,” ಸುಶೀಲಮ್ಮ ನುಡಿದರು.

“ಸಿಂಧೂರ ಇಟ್ಟುಕೊಂಡು, ಜಡೆ ಹಾಕಿಕೊಂಡು, ಮಂಗಳಸೂತ್ರ ಧರಿಸುವುದು ಭಾರತೀಯ ನಾರಿಯರ ಲಕ್ಷಣ,” ಎಂದ ಸುಶೀಲಮ್ಮ ಸಿಂಧೂರ, ಮಂಗಳಸೂತ್ರಾದಿಗಳನ್ನು ಧರಿಸಿಕೊಂಡಿದ್ದರು.

ಸುಜಾತಾ ಏನೊಂದೂ ಪ್ರತಿಕ್ರಿಯಿಸಲಿಲ್ಲ. ಇಂತಹ ವಿಚಾರಗಳಲ್ಲಿ ಅವಳು ಇಷ್ಟೊಂದು ಕಠಿಣಳಾಗಿಯೂ ಇರಲಿಲ್ಲ. ಅವಳ ತಂದೆ ತಾಯಿ ಇಂತಹ ಸಂಪ್ರದಾಯಗಳಿಗೆ ಅಷ್ಟೊಂದು ಒತ್ತು ನೀಡಿರಲಿಲ್ಲ. ಅವಳ ತಾಯಿ ಮಾತ್ರ ತಾವು ಸೀರೆ ಉಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದರು.

“ಇದೆಲ್ಲ ಮದುವೆಯಾದ ಹೆಣ್ಣೊಬ್ಬಳಲ್ಲಿ ಇರಬೇಕಾದ ಗುಣಲಕ್ಷಣಗಳು,” ನಾರಾಯಣರಾಯರು ಹೇಳಿದರು.

ಸುಜಾತಾ ಇದಕ್ಕೂ ಮೌನವಾಗಿಯೇ ಇರಲು ನಿರ್ಧರಿಸಿದಳು. ಆದರೆ ಸ್ವಲ್ಪ ತಡೆದು, “ಹಾಗಾದರೆ ಮದುವೆಯಾದ ಗಂಡು ಹೇಗಿರಬೇಕು?” ಎಂದು ಕೇಳಿದಳು.

ಹಾಗೆಂದು ಸಿದ್ದಾರ್ಥನಿಗೆ ತನ್ನ ತಂದೆತಾಯಿಯರ ಈ ರೀತಿಯ ನಂಬಿಕೆಗಳಲ್ಲಿ ಭರವಸೆ ಇರಲಿಲ್ಲ. ಅವನ ತಂಗಿ ಸುಮತಿಗೂ ಇವೆಲ್ಲ ಅಷ್ಟಕ್ಕಷ್ಟೇ ಆಗಿದ್ದವು.

“ನಿನ್ನ ತಂದೆ ಏನು ಮಾಡಿಕೊಂಡಿದ್ದಾರೆ?” ನಾರಾಯಣರಾಯರು ಕೇಳಿದರು.

“ಅವರು ಸರ್ಕಾರಿ ಕಛೇರಿಯಲ್ಲಿ ಅಸಿಸ್ಟೆಂಟ್‌ ಆಗಿದ್ದಾರೆ.”

“ಅಸಿಸ್ಟೆಂಟ್‌ ಅಷ್ಟೆ…..?“ತನ್ನ ತಂದೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ, ನನ್ನ ಸಂಪಾದನೆಯೇ ಮನೆ ಖರ್ಚಿಗೆಲ್ಲ ಆಧಾರ ಎಂದು ಸಿದ್ದಾರ್ಥ ಹಿಂದೊಮ್ಮೆ ಸುಜಾತಾಗೆ ತಿಳಿಸಿದ್ದ.

“ನಿನಗೊಬ್ಬಳು ತಂಗಿ ಇರಬೇಕಲ್ಲ….?” ಸುಶೀಲಮ್ಮ  ಕೇಳಿದರು.

“ಹೌದು…. ಅವಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ಹೋಗಲಿದ್ದಾಳೆ,” ಎಂದ ಸುಜಾತಾ, “ನಾನೇ ಅವಳ ಎಲ್ಲಾ ಅಗತ್ಯಗಳನ್ನೂ ನೋಡಿಕೊಳ್ಳುತ್ತಿದ್ದೇನೆ,” ಎಂದೂ ಸೇರಿಸಿದಳು.

ನಾರಾಯಣರಾಯರು ಸುಜಾತಾಳತ್ತ ನೋಡುತ್ತಾ, “ಅದೆಲ್ಲ ಸರಿ, ನಿನ್ನ ಅಪ್ಪಾಜಿ ನಿಮ್ಮಿಬ್ಬರ ಮದುವೆಯನ್ನು ಹೇಗೆ ನಿಭಾಯಿಸುತ್ತಾರೆ?” ಎಂದು ಕೇಳಿದರು.

`ಇದರರ್ಥ ಸಿದ್ದಾರ್ಥ ಇದುವರೆಗೂ ತಾವಿಬ್ಬರೂ ವರದಕ್ಷಿಣೆ ತೆಗೆದುಕೊಳ್ಳದೆ ಮದುವೆಯಾಗಲು ನಿರ್ಧರಿಸಿರುವುದನ್ನು ಅವನ ಪೋಷಕರಿಗೆ ತಿಳಿಸಿಲ್ಲ,’ ಈಗಾದರೂ ಸಿದ್ದಾರ್ಥ ತನ್ನ ನೆರವಿಗೆ ಬರುತ್ತಾನೆ ಎನ್ನುವ ಸುಜಾತಾಳ ನಿರೀಕ್ಷೆ ಹುಸಿಯಾಯಿತು. ಅವನು ತುಟಿ ಬಿಚ್ಚದೆ ಕುಳಿತಿದ್ದ.

ಕೊನೆಯಲ್ಲಿ ಅವಳೇ ಧೈರ್ಯವಾಗಿ “ನಾವಿಬ್ಬರು ವರದಕ್ಷಿಣೆ ರಹಿತವಾಗಿ ಮದುವೆಯಾಗಲು ನಿರ್ಧರಿಸಿದ್ದೇವೆ,” ಎಂದು  ಹೇಳುತ್ತಾ ಒಮ್ಮೆ ಸಿದ್ದಾರ್ಥನ ಕಡೆ ತಿರುಗಿ ಅರ್ಥಗರ್ಭಿತವಾಗಿ ನೋಡಿದಳು. ಅವನು ಮಾತ್ರ ನೆಲದತ್ತ ದೃಷ್ಟಿ ನೆಟ್ಟು ಕುಳಿತಿದ್ದ.

“ಸಿದ್ದಾರ್ಥ…. ಅವಳು ಹೇಳುತ್ತಿರುವುದು ನಿಜವೇ?” ನಾರಾಯಣರಾಯರು ಕೇಳಿದರು.

ಸಿದ್ದಾರ್ಥ ತಾನು ಕುಳಿತಲ್ಲಿಂದಲೆ ತಲೆಯನ್ನೊಮ್ಮೆ ಎತ್ತಿ ತಂದೆಯತ್ತ ನೋಡದೆಯೇ “ಹೂಂ,“ ಎಂದ.

“ಇಂತಹ ಮುಖ್ಯ ವಿಚಾರಗಳನ್ನು ನೀವಿಬ್ಬರೇ ಹೇಗೆ ನಿರ್ಧರಿಸಿದಿರಿ?” ಸುಜಾತಾ ಎದುರಿನಲ್ಲಿರುವುದನ್ನೂ ಮರೆತಂತೆ ನಾರಾಯಣರಾಯರು ಸ್ವಲ್ಪ ಗಟ್ಟಿಯಾಗಿಯೇ ಕೇಳಿದರು, “ಅದಲ್ಲದೆ, ನಾವು ನಿನ್ನ ತಂಗಿ ಸುಮತಿ ಮದುವೆಯನ್ನೂ ಮಾಡಬೇಕಿದೆ.”

ತನ್ನ ಮತ್ತು ಸಿದ್ದಾರ್ಥನ ಮದುವೆಯನ್ನು ಸುಮತಿಯ ಮದುವೆಯೊಡನೆ ತಳುಕು ಹಾಕುತ್ತಿರುವುದು ಸುಜಾತಾಗೆ ಸರಿಕಾಣಲಿಲ್ಲ. ಆದರೆ ಅಷ್ಟರಲ್ಲಾಗಲೇ, “ನಾನು ನಿಮ್ಮ ವಿದ್ಯಾಭ್ಯಾಸಕ್ಕಾಗಿ ಎಷ್ಟು ಖರ್ಚು ಮಾಡಿದ್ದೇನೆ…..?” ನಾರಾಯಣರಾಯರು ಕೇಳಿದರು.

“ಹೌದು! ನನ್ನ ವಿದ್ಯಾಭ್ಯಾಸಕ್ಕೂ ನನ್ನ ತಂದೆ ಸಾಕಷ್ಟು ಖರ್ಚು ಮಾಡಿದ್ದಾರೆ…..” ಸುಜಾತಾ ಸ್ವಲ್ಪ ಗಟ್ಟಿ ದನಿಯಲ್ಲಿಯೇ ಹೇಳಿದಳು.

ಸುಮತಿ ಎರಡು ಕಪ್‌ ಚಹಾ, ಬಿಸ್ಕೆಟ್‌ಗಳೊಡನೆ ಬಂದಳು, “ನಿನಗೆ ಬೇಡವೇ?” ಸುಜಾತಾ ಕೇಳಲು, “ಇಲ್ಲ…. ನನ್ನದಾಗಿದೆ,” ಸುಮತಿ ತಣ್ಣಗೆ ಉತ್ತರಿಸಿದಳು.

ಇಬ್ಬರೂ ಚಹಾ ಕುಡಿಯುವಷ್ಟು ಕಾಲ ಕೋಣೆಯಲ್ಲಿ ಮೌನ ಆವರಿಸಿತ್ತು.

“ನಿಮ್ಮ ತಂದೆಗೇನಾದರೂ ಚರ ಸ್ಥಿರಾಸ್ತಿಗಳಿವೆಯೇ?” ನಾರಾಯಣರಾಯರು ಮೌನವನ್ನು ಭೇದಿಸುತ್ತಾ ಕೇಳಿದರು.

ಸುಜಾತಾಳಿಗೆ ಅದು ಅಚ್ಚರಿಯನ್ನುಂಟು ಮಾಡಿತು. ಇದು ಅನಗತ್ಯ ಪ್ರಶ್ನೆ ಎಂದು ಭಾವಿಸಿದ ಸುಜಾತಾ ಉತ್ತರಿಸಲು ನಿರ್ಧರಿಸಿ, “ತನ್ನಿಬ್ಬರು ಹೆಣ್ಣುಮಕ್ಕಳೇ ನನ್ನ ಆಸ್ತಿ, ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿರುತ್ತಾರೆ,” ಎಂದಳು.

ಸ್ವತಃ ನಾರಾಯಣರಾಯರಿಗೇ ತಕ್ಷಣದಲ್ಲಿ ಏನೆಂದು ಪ್ರತಿಕ್ರಿಯಿಸಬೇಕೆಂದು ತಿಳಿಯದಾಯಿತು. ಅವರ ಮಡದಿ ಸುಶೀಲಮ್ಮ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆನ್ನುವುದನ್ನು ಅವರ ಮುಖದ ಮೇಲೆ ಮೂಡಿದ ಗೆರೆಗಳಿಂದಲೇ ತಿಳಿಯಬಹುದಾಗಿತ್ತು.

“ಆದರೆ ಹೆಣ್ಣುಮಕ್ಕಳೆಂದಿದ್ದರೂ ಪರರ ಮನೆಯ ಸ್ವತ್ತಾಗುತ್ತಾರೆ,” ಸುಶೀಲಮ್ಮ ಹೇಳಿದರು.

“ನಮ್ಮ ತಂದೆ ಈ ರೀತಿ ಎಂದೂ ಯೋಚಿಸಿದವರಲ್ಲ,” ಸುಜಾತಾ ತಕ್ಷಣ ಪ್ರತಿಕ್ರಿಯಿಸಿ, “ಅವರೇ ಹೇಳುವಂತೆ ಮದುವೆಯಾದ ನಂತರ ಮೊದಲಿನಂತೆಯೇ ಅವರವರ ಪೋಷಕರೊಡನೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಹೋಗಬೇಕು,” ಎಂದಳು.

ನಾರಾಯಣರಾಯರು ಸುಶೀಲಮ್ಮ ಇಬ್ಬರೂ ಒಟ್ಟಿಗೆ ಇರಿಯುವಂತೆ ಸುಜಾತಾಳತ್ತ ನೋಡಿದರು. ಆದರೆ ಯಾರೊಬ್ಬರೂ ಮಾತನಾಡಲಿಲ್ಲ. ಅಷ್ಟರಲ್ಲಿಯೇ ಮತ್ತೆ ತನ್ನ ಮಾತು ಪ್ರಾರಂಭಿಸಿದ ಸುಜಾತಾ, “ಅಂಕಲ್, ನೀವೇನಾದರೂ ಜಾತಿಯನ್ನು ಪರಿಗಣಿಸುತ್ತೀರಾದರೆ ನಾನೇ ಒಂದು ಮಾತು ಹೇಳಿಬಿಡುತ್ತೇನೆ. ನಾನು ಬಂಟರ ಸಮುದಾಯದವಳು. ಸಿದ್ದಾರ್ಥ ತಿಳಿಸಿದಂತೆ ನೀವು ಬ್ರಾಹ್ಮಣರು,” ಎನ್ನುತ್ತಾ ಇಬ್ಬರನ್ನೂ ಅಚ್ಚರಿಗೆ ದೂಡಿದಳು.

ಇದಕ್ಕೆ ಪ್ರತಿಯಾಗಿ ನಾರಾಯಣರಾಯರು ಏನೂ ಮಾತನಾಡದಿದ್ದರೂ ಸುಶೀಲಮ್ಮ ಮಾತ್ರ ಸ್ವಲ್ಪ ಅಸಮಾಧಾನಗೊಂಡಂತೆ ಕಾಣುತ್ತಿತ್ತು. ಆದರೆ ಸುಜಾತಾ ಅದೇನನ್ನೂ ಗಮನಕ್ಕೆ ತೆಗೆದುಕೊಳ್ಳದೆ ಮುಂದುವರಿದಳು, “ಇದನ್ನೆಲ್ಲ ನಾನೇಕೆ ಈಗಲೇ ಹೇಳುತ್ತಿರುವೆನೆಂದರೆ ನಾಳೆ ನೀವು ನಿಮ್ಮ ಮಗಳ ಮದುವೆ ಮಾಡಬೇಕಿದೆ.”

ತಕ್ಷಣವೇ ಇಡೀ ಕೋಣೆಯಲ್ಲಿ ಗಾಢ ಮೌನ ಆವರಿಸಿತು. ಅದೆಷ್ಟರ ಮಟ್ಟಿಗೆ ಇತ್ತೆಂದರೆ ಸಿದ್ದಾರ್ಥನಿಗೂ ಈ ಸನ್ನಿವೇಶ ತಾಳಿಕೊಳ್ಳುವುದು ಕಷ್ಟಕರವಾಯಿತು.

ಸುಶೀಲಮ್ಮ ಆ ಮೌನವನ್ನು ಭೇದಿಸುತ್ತಾ, ಸುಜಾತಾಳತ್ತ ತಿರುಗಿ ಕೇಳಿದರು, “ನಿನಗೆ ಆಭರಣಗಳೆಂದರೆ ಇಷ್ಟವಿಲ್ಲವೇ? ಕಿವಿಯ ರಿಂಗ್‌ನ ಹೊರತು ಇನ್ನೇನನ್ನೂ ಧರಿಸಿಲ್ಲ….?”

“ನೀವು ಹೇಳಿದ್ದು ನಿಜ. ನನಗೆ ಆಭರಣಗಳೆಂದರೆ ಅಷ್ಟೇನೂ ವ್ಯಾಮೋಹವಿಲ್ಲ,” ಅರ್ಧ ಮುಗುಳ್ನಗುವಿನೊಡನೆ ಸುಜಾತಾ ಹೇಳಿದಳು. ಕ್ಷಣ ಕಾಲ ಮತ್ತೆ ಸುತ್ತಲೂ ಮೌನ ಆವರಿಸಿತು. ಆದರೆ ಸುಜಾತಾ ಪುನಃ ಮಾತನಾಡಿ, “ಸಿದ್ದಾರ್ಥ್‌, ನಿಮಗಿದನ್ನು ಹೇಳದೇ ಇರಬಹುದು. ಆಫೀಸಿನಲ್ಲಿ ನಾನು ಅವನಿಗಿಂತಲೂ ಸೀನಿಯರ್‌,” ಎಂದಾಗ ನಾರಾಯಣರಾಯರು ಮತ್ತು ಸುಶೀಲಮ್ಮ ಇಬ್ಬರೂ ನಿಜಕ್ಕೂ ಅಚ್ಚರಿಗೊಳಗಾದರು. ಇಬ್ಬರೂ ಕಣ್ಣುಗಳನ್ನು ಅಗಲಿಸುತ್ತಾ ಸಿದ್ದಾರ್ಥನತ್ತ ನೋಡಿದರು.

ಸುಜಾತಾಳಿಗೆ ಮಾತನಾಡಲು ಇನ್ನೇನೂ ವಿಷಯಗಳಿರಲಿಲ್ಲ. ಒಮ್ಮೆ ಸುತ್ತಲೂ ಕಣ್ಣಾಡಿಸಿ ಎದ್ದು ನಿಲ್ಲುತ್ತಾ, “ಹಾಗಾದರೆ ನಾನು ಹೊರಡುತ್ತೇನೆ,” ಎಂದಳು.

“ನಾನು ಬಿಡಲು ಬರುತ್ತೇನೆ,” ಸಿದ್ದಾರ್ಥ ನುಡಿದ.

“ಬೇಡ, ನಾನು ರಿಕ್ಷಾದಲ್ಲೇ ಹೋಗುತ್ತೇನೆ.”

ಸುಜಾತಾಳ ಪೋಷಕರು ಅವಳು ಮನೆಗೆ ವಾಪಸ್ಸಾಗುವುದನ್ನೇ ಆತಂಕದಿಂದ ಎದುರು ನೋಡುತ್ತಿದ್ದರು.

“ಎಲ್ಲ ಮುಗಿಯಿತು,” ಎಂದ ಸುಜಾತಾ, “ನಮ್ಮ ಕುಟುಂಬಕ್ಕೂ ಅವರ ಕುಟುಂಬಕ್ಕೂ ಎಷ್ಟು ಮಾತ್ರ ಹೋಲಿಕೆ ಇಲ್ಲ,” ಎಂದಳು.

“ಕಾಲವೇ ಎಲ್ಲವನ್ನೂ ಸರಿಪಡಿಸುತ್ತದೆ. ನಿನಗೂ ನಿನ್ನ ಮುಂದಿನ ದಿನಗಳಲ್ಲಿ ಒಳ್ಳೆಯ ಸಮಯ ಬಂದೇ ಬರುತ್ತದೆ ಎನ್ನುವ ನಂಬಿಕೆ ನನಗಿದೆ,” ಅವಳ ಭುಜದ ಮೇಲೆ ತೋಳನ್ನಿರಿಸುತ್ತಾ ತಂದೆ ನುಡಿದರು.

ಒಮ್ಮೆ “ಹೂಂ!” ಎಂದ ಸುಜಾತಾ ಕತ್ತನ್ನು ತಿರುಗಿಸಿ ತನ್ನ ಮಂಜಾದ ಕಣ್ಣುಗಳಿಂದ ತಂದೆಯತ್ತ ನೋಡಿದಳು. ಅವರು ಮಗಳ ಮನಸ್ಸಿನ ನೋವನ್ನು ಅವಳ ಕಣ್ಣುಗಳಿಂದಲೇ ಅರಿತರು. ಮರುದಿನ ಸುಜಾತಾಳನ್ನು ಭೇಟಿಯಾಗಲು ಸಿದ್ಧಾರ್ಥ ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮತ್ತೆ ಅವರು ಎಂದಿನಂತೆಯೇ ಮಧ್ಯಾಹ್ನದ ಊಟದ ಬಿಡುವಿನಲ್ಲಿ ಭೇಟಿಯಾಗಬೇಕಾಯಿತು.

ಇಬ್ಬರೂ ಕೆಲವು ಸಮಯದವರೆಗೂ ಮೌನವಾಗಿ ಕುಳಿತಿದ್ದರು. ಕೊನೆಗೆ ಸಿದ್ದಾರ್ಥನೇ “ನಿನ್ನೆ ಅದೇನು ನಡೆಯಿತೋ ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ನಿನಗೆ ಬಹಳ ನೋವಾಗಿದೆ ಎನ್ನುವುದನ್ನು ನಾನು ಬಲ್ಲೆ,” ಎಂದ.

“ಅದೆಲ್ಲ ಏನಿಲ್ಲ ಸಿದ್ದಾರ್ಥ್‌. ನನಗೇನೂ ಬೇಸರವಿಲ್ಲ. ಎಲ್ಲರಿಗೂ ಅವರವರದ್ದೇ ದೃಷ್ಟಿಕೋನವಿರುತ್ತದೆ. ಆದರೆ ಆಗ ನೀನು ಮೌನವಾಗಿದ್ದುದು ಮಾತ್ರ ನನಗೆ ಬಹಳ ನೋವನ್ನುಂಟು ಮಾಡಿತು.”

ಸಿದ್ದಾರ್ಥ ಮೌನವಹಿಸಿದ. ಅವನ ಮನಸ್ಸು ಬಹಳವೇ ಕುಗ್ಗಿಹೋಗಿತ್ತು. ಅವಳು ಮುಂದುವರಿದು, “ನನ್ನ ಪೋಷಕರನ್ನು ನಿನ್ನವರು ಭೇಟಿಯಾಗುವುದಕ್ಕೂ ಮುನ್ನವೇ ನಾನು ನಿನ್ನ ಪೋಷಕರನ್ನು ಭೇಟಿಯಾದದ್ದು ಒಳ್ಳೆಯದಾಯಿತು. ನಿನ್ನ ತಂದೆ ತಾಯಿಯರೇನಾದರೂ ನನ್ನ ಬಳಿ ಕೇಳಿದಂತಹ ಪ್ರಶ್ನೆಗಳನ್ನು ನನ್ನ ತಂದೆತಾಯಿಯರ ಬಳಿ ಕೇಳಿದ್ದರೆ ಅವರು ಬಹಳ ನೊಂದುಕೊಳ್ಳುತ್ತಿದ್ದರು.”

ಸಿದ್ದಾರ್ಥ ಪುನಃ ಮೌನಕ್ಕೆ ಶರಣಾದ.

“ಇರಲಿ ಬಿಡು ಆದದ್ದು ಆಗಿಹೋಯಿತು. ಮುಂದೆ ನಿನ್ನ ಜೀವನ ಚೆನ್ನಾಗಿರಲಿ. ನಾವಿಬ್ಬರೂ ಸ್ನೇಹಿತರಷ್ಟೆ. ನಮ್ಮ ಮಧ್ಯದ ಎಲ್ಲಾ ಪ್ರೇಮ, ಪ್ರಣಯಗಳನ್ನು ಬದಿಗಿಟ್ಟು ಉತ್ತಮ ಸ್ನೇಹಿತರಾಗಿಯೇ ಮುಂದುವರಿಯೋಣ. ಪ್ರತಿದಿನದ ನಮ್ಮ ಊಟದ ವಿರಾಮದಲ್ಲಿ ಈ ಭೇಟಿ ಹೀಗೆಯೇ ಮುಂದುವರಿಯಲಿ,” ಸುಜಾತಾ ಅದೇ ಕೊನೆ ಎನ್ನುವಂತೆ ನುಡಿದಳು.

ಇಬ್ಬರಿಗೂ ತಾವು ಈ ರೀತಿಯಲ್ಲಿ ಇರುವುದು ಕಷ್ಟಕರ ಎನ್ನುವುದು ತಿಳಿದೇ ಇತ್ತು. ಆದರೆ  ಬದುಕಿನ ಬಂಡಿ ಮಾತ್ರ ಸಾಗುತ್ತಲೇ ಇತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ