ನಮ್ಮದು ಭಾರತೀಯ ಹೃದಯ. ಬುದ್ಧಿವಂತಿಕೆ ಮತ್ತು ಕೊಂಚ ಅಪ್ರಾಮಾಣಿಕತೆ ಇದ್ದರೆ ನನ್ನನ್ನು ಹೆಚ್ಚು ಭೇಟಿ ಮಾಡಬೇಡ. ಎಲ್ಲಾದರೂ ಪ್ರೀತಿಯಾಗಿಬಿಟ್ಟೀತು ಎನ್ನುತ್ತೇನೆ.
ಅದು ನಿಜ ಕೂಡ. ನನ್ನೊಂದಿಗೆ ಯಾರೇ ಆಗಲಿ ಸಂಪರ್ಕಕ್ಕೆ ಬಂದರು ನನ್ನ ವಶರಾಗಿಬಿಡುತ್ತಾರೆ ನನ್ನೊಂದಿಗೆ ಹೆಚ್ಚು ಭೇಟಿಯಾಗಬೇಡಿ ಎಂದು ನಾನು ಮೊದಲೇ ಎಚ್ಚರಿಸುತ್ತೇನೆ.
ಭೇಟಿಯಾಗುವುದು ತಪ್ಪಲ್ಲ ಎಂದು ನಾನೂ ಒಪ್ಪುತ್ತೇನೆ. ಇಡೀ ವಿಶ್ವ ಪ್ರೀತಿಯ ಮೇಲೆ ನಿಂತಿದೆ. ಪ್ರೀತಿಯಿಲ್ಲದಿದ್ದರೆ ಜೀವನ ಅಪೂರ್ಣವೆಂದು ತಿಳಿಯಲಾಗುತ್ತದೆ. ಆದರೆ ಪ್ರೀತಿ ಎನ್ನುವುದು ನೀಟ್ ಅಂಡ್ ಕ್ಲೀನ್ ಆಗಿರಬೇಕು. ಅದರಲ್ಲಿ ಯಾವುದೇ ದುರ್ಭಾವನೆಗೂ ಜಾಗ ಇಲ್ಲ. ನಾನಂತೂ ಪ್ರೀತಿಗಾಗಿ ಯಾವಾಗಲೂ ಹಪಹಪಿಸುತ್ತೇನೆ. ಅದಕ್ಕೆ ಯಾರೂ ಸಹಕರಿಸದಿದ್ದರೆ ಅದರಲ್ಲಿ ನನ್ನ ತಪ್ಪೇನಿದೆ? ಪ್ರೀತಿಗೆ ಯಾವ ಎಲ್ಲೆಯೂ ಇಲ್ಲ. ಯಾವುದೇ ಸಮಯದಲ್ಲಿ ಯಾವುದೇ ವಯಸ್ಸಿನಲ್ಲಿ ಪ್ರೀತಿ ಮಾಡಬಹುದು.
ವ್ಯಾಲೆಂಟೈನ್ ಡೇ ಹತ್ತಿರ ಬಂದಂತೆಲ್ಲ ನನ್ನ ಎದೆ ವೇಗವಾಗಿ ಹೊಡೆದುಕೊಳ್ಳುತ್ತದೆ. ವ್ಯಾಕುಲತೆ ನಿರಂತರವಾಗಿ ಹಿಂಬಾಲಿಸುತ್ತದೆ. ಸೇಂಟ್ ವ್ಯಾಲೆಂಟೈನ್‌ನ ಸಂದೇಶವನ್ನು ಕಂಠಪಾಠ ಮಾಡಿಕೊಂಡು ನಾನು ಪ್ರೀತಿಗಾಗಿ ಅತ್ತಿತ್ತ ಅಲೆಯುತ್ತೇನೆ. ಹಿಂದೆ ವ್ಯಾಲೆಂಟೈನ್ ಡೇನ ಮಹತ್ವ ತಿಳಿಯದಿದ್ದಾಗಲೇ ನನ್ನ ಮನಸ್ಸು ಪ್ರೀತಿಗಾಗಿ ಹಾತೊರೆಯುತ್ತಿತ್ತು. ಇನ್ನು ಜೀವನದಲ್ಲಿ ವ್ಯಾಲೆಂಟೈನ್ ಡೇ ಬಂದು ಅದರ ಮಹತ್ವ ತಿಳಿದಿರುವಾಗ ನನ್ನ ಮನಸ್ಸಿಗೆ ರೆಕ್ಕೆಗಳು ಮೂಡಿಬಿಟ್ಟವು.
ಫೆಬ್ರವರಿ 14ರಂದು ನೀವೇನಾದರೂ ನನ್ನನ್ನು ನೋಡಿದರೆ ದಂಗಾಗಿಬಿಡುತ್ತೀರಿ. ಬೆಳಗಿನಿಂದಲೇ ಟ್ರಿಮ್ ಆಗಿ ಡ್ರೆಸ್ ಮಾಡಿ, ಚೆನ್ನಾಗಿ ಅಲಂಕರಿಸಿಕೊಂಡು ಮುಖದಲ್ಲಿ ಮುಗುಳ್ನಗೆ ಮೂಡಿಸಿ ಓಡಾಡುತ್ತಿರುತ್ತೇನೆ. ನಾನು ಪತ್ರಿಕೆಗಳಲ್ಲಿ ಯಾರಾದರೂ ಅಪರಿಚಿತ ಪ್ರೇಮಿಗೆ ವ್ಯಾಲೆಂಟೈನ್ ಡೇನ ಸಂದೇಶದ ಜಾಹಿರಾತು ಕೊಡುತ್ತೇನೆ. ಎಷ್ಟು ದಿನಾಂತ ಹೀಗೆ ಮಾಡುವುದು ಎಂದು ಅನೇಕ ಬಾರಿ ಯೋಚಿಸುತ್ತಿರುತ್ತೇನೆ. ಇವೆಲ್ಲಾ ಶ್ರಮ ಯಾರಿಗಾಗಿ? ನನ್ನಾಕೆಯಂತೂ ನನ್ನ ಮನೆಯ ಕೋಳಿ, ನನ್ನ ಮನೆಯ ಬೇಳೆ, ಬೇರೆ ಜಾಗದಲ್ಲಿ ನನ್ನ ಬೇಳೆ ಬೇಯವುದಿಲ್ಲ. ಇನ್ನು ವ್ಯಾಲೆಂಟೈನ್ ಡೇನಂದು ನನ್ನ ಪರಿಸ್ಥಿತಿ ಏನಾಗಿರಬಹುದೆಂದು ನೀವೇ ಊಹಿಸಿ……
ಈ ಪ್ರೆಮದ ದೊಡ್ಡ ತಲೆನೋವು ಎಂದರೆ ನನ್ನ ಶ್ರೀಮತಿಯೇ! ಏನು ಮಾಡುವುದು? ಇದ್ದುದರಲ್ಲಿಯೇ ಸುಧಾರಿಸಬೇಕು. ಕುರುಡುಗಣ್ಣಿಗಿಂತ ಮೆಳ್ಳೆಗಣ್ಣು ಮೇಲು ಎಂಬುದು ಇದಕ್ಕೆ ಏನೋ? ಈ ಗಾದೆ ಮಾತನ್ನೇ ನಂಬಿಕೊಂಡು ನನ್ನ ಶ್ರೀಮತಿಯನ್ನೇ ನನ್ನ ವ್ಯಾಲೆಂಟಿನಿಯಾಗಿ ಆರಿಸಿಕೊಳ್ಳಬೇಕಾಗಿದೆ. ಕಾಲೇಜಿನ ಹಿಂದಿನ ದಿನಗಳು ನೆನಪಾಗುತ್ತವೆ. ಆಗೆಲ್ಲ ಒಂದಿಷ್ಟು ಲವ್ವು ಮಣ್ಣು ಮಸಿ ಇತ್ತು, ಆದರೆ ಅವೇನೂ ಕೈಗೂಡಲಿಲ್ಲ ಅನ್ನೋದು ಬೇರೆ ಕಥೆ. ಏನು ಮಾಡುವುದು? ಆ ಹಳೆಯ ಮಧುರ ನೆನಪುಗಳನ್ನೇ ಮೆಲುಕುಹಾಕುತ್ತಾ ಹೀಗೆ ವರ್ಷ ವರ್ಷ ವ್ಯಾಲೆಂಟೈನ್ ಡೇ ಕಳೆಯುವುದೇ ಆಗಿಹೋಗಿದೆ. ಆ ನೆನಪುಗಳಲ್ಲೇ ಇಂದಿನ ಹಸಿವು, ಬಾಯಾರಿಕೆ, ನಿದ್ದೆ ಎಲ್ಲಾ ಮರೆಯುವಂತಾಗಿದೆ.
ಅದೆಲ್ಲ ನೆನೆಸಿಕೊಂಡು ದೇವದಾಸ್‌ನಂತೆ ಗಡ್ಡ ಬಿಟ್ಟು ಗಡಿಗೆ ಮುಖದಲ್ಲಿ ಊರೆಲ್ಲ ಅಂಡಲೆಯುವಾಗ, ನನ್ನ ಶ್ರೀಮತಿ ಅದರ ಗುರುತು ಹಿಡಿದವಳಂತೆ, “ಕಣ್ಣು ಬಿಟ್ಟಾಗ ಬೆಳಗಾಯಿತೆಂದು ತಿಳಿಯಿರಿ. ಅಜ್ಞಾನ ಕಳೆದಾಗ ಜ್ಞಾನ ಮೂಡಿತು ಎಂಬಂತೆ. ಆದದ್ದೆಲ್ಲ ಒಳಿತೇ ಆಯಿತು…. ಅಂದುಕೊಳ್ಳಿ. ಏನೋ ಕಾಲೇಜು ದಿನಗಳಲ್ಲಿ ನಿಮ್ಮ ಮುಸುಡಿ ಒಂದಿಷ್ಟು ಚೆನ್ನಾಗಿದ್ದಾಗ ಯಾರೋ ಕಿಸಕ್ಕನೆ ನಕ್ಕು ನಿಮಗೆ ಗ್ರೀನ್ ಸಿಗ್ನಲ್ ಕೊಟ್ಟಿರಬೇಕು, ಅದನ್ನೇ ದೊಡ್ಡದಾಗಿ ರೊಮ್ಯಾಂಟಿಕ್ ಹೀರೋ ಅಂದುಕೊಳ್ಳುವುದೇ? ಹೋಟೆಲ್‌ಗೆ ಹೋಗಿ ಊಟತಿಂಡಿ ಮಾಡುವಾಗ ನಾವು ನಮ್ಮ ತಟ್ಟೆ ನೋಡುವುದಕ್ಕಿಂತ ಬೇರೆಯವರು ಏನು ಆರ್ಡರ್‌ಮಾಡಿದ್ದಾರೋ.. ಛೆ..ಛೇ! ನಮಗೆ ಅದು ಮಿಸ್ ಆಯ್ತಲ್ಲ ಅಂತ ಪೇಚಾಡುವುದರಿಂದ ಲಾಭವೇನು? ಪಾಲಿಗೆ ಬಂದದ್ದು ಪಂಚಾಮೃತ ಅಂತ ಹೆಂಡ್ತೀನೇ ಲವರ್ ಅಂತ ಹಾಯಾಗಿರಿ!”
ಏನೋ ಅಂದುಕೊಂಡಿದ್ದೆ, ನನ್ನ ಶ್ರೀಮತಿನೂ ಚೆನ್ನಾಗಿಯೇ ತತ್ವಜ್ಞಾನ ಮಾತಾಡುತ್ತಾಳೆ…. ಇರಲಿ, ಅಷ್ಟು ಬೇಗ ಸೋಲು ಒಪ್ಪಬಾರದು ಅಂದುಕೊಳ್ಳುತ್ತಾ, “ಅದೆಲ್ಲ ಇರಲಿ, ನೀನು ನಮ್ಮ ಈ ವ್ಯಾಲೆಂಟೈನ್ ಕಾನ್‌ಸೆಪ್ಟ್ ಮಧ್ಯೆ ಬರಬೇಡ. ನಾನೀಗ ಪ್ರೇಮಲೋಕದ ಕಲ್ಪನಾ ವಿಲಾಸದಲ್ಲಿ ಭೃಂಗದ ಬೆನ್ನೇರಿ ಹೊರಟಿದ್ದೇನೆ… ಅದರಿಂದ ಇಳಿಯುವಾಗ ಕಿರಿಕಿರಿ ಮಾಡಬೇಡ. ನಾನು ಪ್ರತಿದಿನ ಅದನ್ನೇರಿ ಹೊರಡುವಾಗ ಖಾಲಿ ಚೀಲ ಹೊತ್ತು ಹೋಗಿ, ಬರುವಾಗ ನಿನಗೆ ಅಡುಗೆಗೆ ಸೊಪ್ಪು ತರಕಾರಿ ತಂದುಕೊಡ್ತೀನಿ. ಈ ರೀತಿ ನನ್ನ ಹೃದಯ ಹಸಿರೊ ಹಸಿರಾಗಿದೆ.
“ಇಂದು ನನ್ನ ಆ ಮನದನ್ನೆ ನನಗೆ ಇಂಥ ಖಾಲಿ ಚೀಲ ಭರ್ತಿ ಮಾಡಿಕೊಟ್ಟಿದ್ದಾಳೆ. ಮುಂದೆ ಇನ್ನೂ ಏನೇನು ಕೊಡಬಹುದೋ ಏನೋ? ಆದ್ದರಿಂದ ಆ ವಿಷಯವನ್ನು ಮರೆಯುವಂತಿಲ್ಲ. ಮತ್ತೆ ನಿದ್ದೆ, ಎಚ್ಚರ…. ಬೆಳಗಾಯ್ತು ಅಂತ ನೀನು ಏನೇನೋ ಅಂದ್ಯಲ್ಲ… ಪ್ರೇಮದ ಪರಿ ಎಂಥದ್ದು ಗೊತ್ತೇ? ಅದೆಷ್ಟು ತೀವ್ರ ಎಂದರೆ ಹಗಲು ರಾತ್ರಿ ಯಾವುದರ ಪರಿಜ್ಞಾನ ಇರುವುದಿಲ್ಲ. ಅದರಲ್ಲಿ ಗಾಢನಿದ್ದೆಯ ಪ್ರಶ್ನೆಯೇ ಇಲ್ಲ. ದೇಹ ಮಲಗಿದ್ದರೂ ಸುಷುಪ್ತಿಯಲ್ಲಿ ಹೃದಯ ಚಡಪಡಿಸುತ್ತಾ ಇರುತ್ತದೆ.
“ಆದ್ದರಿಂದ `ಬಿದ್ದೆ ಬಿದ್ದೆ ಬಾತ್‌ರೂಮಲ್ಲಿ… ಲವ್ವಲ್ಲಿ ಬಿದ್ದೆ…’ ಅಂತ ಹಾಡಿದ್ದಾರೆ. ಇಂದಿನ ಕಾಲದ ಹುಡುಗಿಯರಂತೂ ` ನನಗೂ ಒಬ್ಬ ಗೆಳೆಯ ಬೇಕು… ನಾನು ಈಗ ಪ್ರೀತಿಯಲ್ಲಿ ಬೀಳಬೇಕು,’ ಅಂತೆಲ್ಲ ಹಾಡ್ತಾರೆ ಗೊತ್ತಾ? ಇನ್ನಾದರೂ ನಿನ್ನ ತತ್ವಗಳನ್ನು ನಿನ್ನ ಬಳಿಯೇ ಇಟ್ಟುಕೊಂಡು ನನ್ನನ್ನು ಈ ಪ್ರೇಮರಥವೇರಿ ಹಾರಾಡಲು ಬಿಡು,” ಎಂದು ವಿವರಿಸಿದೆ.
ನನ್ನ ಶ್ರೀಮತಿ ಪಲುಕಿದಳು, “ಪ್ರೇಮದ ಜ್ವರ ಇಷ್ಟು ತೀವ್ರವಾಗಿ ನೆತ್ತಿಗೇರಿದೆ ಎಂದರೆ, ನಿಮ್ಮ ಧರ್ಮಪತ್ನಿಯಾಗಿ, ಆದರ್ಶ ಸತಿಯಾಗಿ ನಿಮಗೆ ಸಾಥ್ ನೀಡಲು ನಾನಿಲ್ಲಿ ಇಲ್ಲವೇ?”
“ಅಯ್ಯೋ ಬಿಡು, ನೀನ್ಯಾಕೆ ನನ್ನ ತಲೆ ತಿಂತೀಯಾ? ಪ್ರೇಮದ ಮಹಿಮೆ ನಿನಗೇನು ಗೊತ್ತು? ಅದರ ಜ್ವರದಿಂದ ದೇಹ ನಡುಗುತ್ತಿದ್ದರೂ ಹೃದಯ ಎಷ್ಟು ಸಂಭ್ರಮಿಸುತ್ತದೆ ಗೊತ್ತಾ? ಅದೆಲ್ಲ ನಿನಗೆ ಗೊತ್ತಾಗಲ್ಲ…. ಕಸ ಮುಸುರೆ ನೋಡು ಹೋಗು,!” ಎಂದೆ.
ಶ್ರೀಮತಿ ಅಷ್ಟಕ್ಕೆ ಬಿಟ್ಟಾಳೆಯೇ ? “ಹಾಗೆ ಹೇಳಬೇಡಿ ನೀವು. ನಾನು ಕೂಡ ಮಾಡಲ್ ಆಗಿ ಲವ್ ಮಾಡಬಲ್ಲೆ. ನಾನು ಸಂಜೆ ಹೊತ್ತು ಶಾಪಿಂಗ್‌ಗೆ ಎಂದು ಹೊರಟರೆ ಬೀದೀಲಿ ಹೋಗೋರು ನನ್ನ ನೋಡಿ, ಮಾರನೇ ದಿನ ಡೈ ಮಾಡಿಕೊಂಡು ಟಿಪ್ ಟಾಪ್ ಆಗಿರಲು ಪ್ರಯತ್ನಿಸುತ್ತಾರೆ. ನನ್ನ ಚೆಲುವೇನು ಸಾಮಾನ್ಯ ಅಂದುಕೊಂಡಿರಾ? ಈಗಲೂ ನನ್ನ ಗ್ಲಾಮರ್‌ಗೇನೂ ಕಡಿಮೆ ಇಲ್ಲ. ವ್ಯಾಲೆಂಟೈನ್ ಡೇ ನಿಮ್ಮೊಬ್ಬರದೇ ಸ್ವತ್ತು ಅಂದುಕೊಳ್ಳಬೇಡಿ!”
ನನಗೂ ಸಿಟ್ಟು ಬಂದಿತ್ತು. “ ಏ… ಏ… ಏನು ಹೀಗೆಲ್ಲಾ ಮಾತಾಡ್ತೀಯಾ? ಮಾತಿನಲ್ಲಿ ಸ್ವಲ್ಪ ನಯ ನಾಜೂಕು ಇರಲಿ. ನೀನು 2-2 ಮಕ್ಕಳ ತಾಯಿ ಅನ್ನೋದು ನೆನಪಿಡು. ಇದೆಲ್ಲ ಹೇಳೋಕ್ಕೆ ನಾಚಿಕೆ ಅನಿಸೋಲ್ವೇ?”
“ ರೀ, ಸಾಕು ಸುಮ್ನರಿ! 2-2 ಮಕ್ಕಳು ಅನ್ನೋದು ನನಗೆ ಮಾತ್ರಲ್ಲ ನಿಮಗೂ ಹೌದು ಅನ್ನೋದು ನೆನೆಪಿರಲಿ. ಹಾಗಿರುವಾಗ ನೀವು ವ್ಯಾಲೆಂಟೈನ್ ಡೇ ಹೆಸರಲ್ಲಿ ಪ್ರೇಮಕ್ಕಾಗಿ ಇಷ್ಟೊಂದು ಹಾತೊರೆಯಬಹುದಾದರೆ ನಾನೇಕೆ ಒಂದು ಕೈ ನೋಡಬಾರದು?”
ಶ್ರೀಮತಿಯ ಈ ಟಿಪ್ಪಣಿಗೆ ಬದಲು ಹೇಳದೆ ನಾನು ಪಕ್ಕದ ಮನೆಯವರಿಗೂ ಸೇರಿ ತರಕಾರಿ ತರಲೆಂದು ಹೊರಟೆ. ಅಂತೂ ಮಾರ್ಕೆಟ್ ಪೂರ್ತಿ ತಿರುಗಾಡಿ, ಪಕ್ಕದ ಮನೆಯವರಿಗೂ ಸೇರಿ ಅಗ್ಗದ ಬೆಲೆಯಲ್ಲಿ ಉತ್ತಮ ಗುಣಮಟ್ಟದ ತರಕಾರಿ ಕೊಂಡು, ಹೆಮ್ಮೆಯಿಂದ ತೆಗೆದುಕೊಂಡು ಹೋಗಿ ಪಕ್ಕದ ಮನೆಯಾಕೆಗೆ ಕೊಟ್ಟೆ. ಖುಷಿಯಿಂದ ಬಿಸಿ ಬಿಸಿ ಕಾಫಿ, ಕೋಡುಬಳೆ ಇತ್ಯಾದಿ ಏನಾದರೂ ಕೊಟ್ಟು ಬಾಯಿ ತುಂಬಾ ಉಪಚರಿಸುತ್ತಾರೆ ಎಂದುಕೊಂಡರೆ ಇದೇನಾಗಿ ಹೋಯಿತು?
ತರಕಾರಿ ಕವರ್ ಕೊಡುವಾಗ ನನ್ನ ಕೈ ಆಕೆಯ ಕೈಗೆ ತಗುಲಿದ್ದೇ ರಾದ್ಧಾಂತ ಎಂಬಂತೆ ಹೋ ಎಂದು ಹುಯಿಲೆಬ್ಬಿಸುವುದೇ? “ಏನ್ರಿ….. ಪಕ್ಕದ ಮನೆಯವ್ರು ಹೇಗೂ ಸದಾ ಫ್ರೀ ಇರ್ತೀರಲ್ಲ ಅಂತ ತರಕಾರಿ ತರಿಸಿದರೆ, ಅವಕಾಶ ನೋಡಿಕೊಂಡು ಹೀಗಾ ಆಡುವುದು? ನೀವೇನೂ ದಿಗಂತ್ ತರಹ ಯಂಗ್ ಹೀರೋ ಅಲ್ಲ, 2 ಮಕ್ಕಳ ತಂದೆ ಅಂತ ನೆನಪಿರಲಿ. ಇವತ್ತಿಗಾಯ್ತು, ಇನ್ನು ಮುಂದೆ ಎಂದೂ ತರಕಾರಿ ತರೋದು ಬೇಡ…. ಛೀ ಛೀ…….. ಯಾವ ಹುತ್ತದಲ್ಲಿ ಯಾವ ಹಾವೋ?”
ದುರ್ದಾನ ಪಡೆದನಂತೆ ತಲೆ ತಗ್ಗಿಸಿ ಮನೆಗೆ ಬಂದೆ. ಕೋಡುಬಳೆ ದೊರಕುವುದೆಂದು ಬಯಸಿ ಹೋದರೆ, ಇರುವ ಕೋಡು ಮುರಿದು ಬರೆ ಹಾಕಿದಳು ಆ ಮಹಾತಾಯಿ! ನಮ್ಮ ಕಿಟುಕಿಯಿಂದ ಇದನ್ನೆಲ್ಲಾ ಇಣುಕಿ ನೋಡುತ್ತಾ ಮುಸಿ ಮುಸಿ ನಗುತ್ತಿದ್ದ ಶ್ರೀಮತಿ ಸೋಟೆ ತಿವಿದಳು.
“ಏನದು….. ಅಷ್ಟೊಂದು ನಗು?”
“ ಏ… ಇವತ್ತು ವ್ಯಾಲೆಂಟೈನ್ ಡೇ! ಅಂದ ಮೇಲೆ ನಗು, ಖುಷಿ, ಸಂತೋಷ ಅಲ್ಲವೇ? ”
“ಇನ್ನು ಮುಂದಾದರೂ ಕಂಡೋರಿಗೆ ಹೀಗೆ ಸೇವೆ ಮಾಡುವುದನ್ನು ಬಿಟ್ಟುಬಿಡಿ. ಅದರ ಬದಲು ಇರುವುದರಲ್ಲಿ ಆನಂದ ಪಡೋದನ್ನು ಕಲಿಯಿರಿ. ಟೆನ್‌ಶನ್ ಬಿಟ್ಟುಬಿಡಿ, ಕೈಗೆಟುಕದ ದ್ರಾಕ್ಷಿ ಹುಳಿ ಹುಳಿ ಅನ್ನೋ ಬದಲು, ಪಾಲಿಗೆ ಬಂದದ್ದು ಪಂಚಾಮೃತ ಅನ್ನೋದನ್ನು ಕಲಿಯಿರಿ. ಕಂಡವರ ಮನೆಗೆ ಬೆಳಕು ಹಚ್ಚಲು ಹೋದರೆ ನಿಮ್ಮ ಕೈಯೇ ಸುಡೋದು. ಅದರ ಬದಲು ಕತ್ತಲಾಗಿರುವ ನಿಮ್ಮ ಮನೆಗೆ ದೀಪ ಹಚ್ಚಿ.
“ನಮ್ಮ ಮನೆಯೇ ಸ್ವರ್ಗ… ಬೇರೆ ಎಲ್ಲಾ ಸುಳ್ಳು ಎಂದು ತಿಳಿಯಿರಿ. ಪ್ರೇಮದ ಹೆಸರಿನಲ್ಲಿ ಹುಚ್ಚುಕೋಡಿ ಬುದ್ಧಿ ತೋರಿಸಬೇಡಿ. ಮನವೆಂಬ ಮಾರ್ಕಟವನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಸಂಸಾರ ಅನ್ನೋ ಸಾಗರ ದಾಟಿ ಮುಂದುವರಿಯುವುದನ್ನು ನೋಡಿ. ಬೇರೆಯವರ ಬೀಡಿಗೆ ಬೆಂಕಿ ತಗುಲಿಸಲು ಹೋಗಿ ನಿಮ್ಮ ಮನೆಗೇ ಬೆಂಕಿ ಹಾಕಬೇಡಿ!”
ಶ್ರೀಮತಿ ಹೇಳುತ್ತಿರುವ ಮಾತೆಲ್ಲ ಸತ್ಯ ಅನಿಸಿತು. ಈ ಹಾಳು ಪ್ರೇಮದ ಜ್ವರ ಯಾಕೆ ಬೇಕು? ಆದರೆ ಹುಟ್ಟುಗುಣ ಸುಟ್ಟರೂ ಹೋಗದೆಂಬಂತೆ ಅದರ ಹ್ಯಾಂಗೋವರ್‌ನಿಂದ ಆಚೆ ಬರುವುದು ಅಷ್ಟು ಸುಲಭ ಅಲ್ಲವೆನಿಸಿತು! ಹಳೆಯದನ್ನು ಮರೆಯಲಾಗದು, ಹೊಸ ಸಂಕಷ್ಟಕ್ಕೆ ಸಿಲುಕಲಾಗದು. ಅಂತೂ ವ್ಯಾಲೆಂಟೈನ್ ಡೇ ಸಂಭ್ರಮವನ್ನು ಇರುವುದರಲ್ಲಿಯೇ ಸಮಾಧಾನವಾಗಿ ಆಚರಿಸಿಕೊಳ್ಳುವುದು ಎಂದಾಯಿತು.
ಈ ಸಂದರ್ಭದಲ್ಲಿ ಯಾಕೋ ದಾಸರ ವಾಣಿ ನೆನಪಾಯಿತು. `ನೀರಿನಲ್ಲಿರುವ ತಾವರೆ ಎಲೆ ಹಾಗೆ ಈ ಸಂಸಾರ…!’ ಎಂದಿದ್ದಾರೆ. ಅಂದಮೇಲೆ ಈ ಸಂಸಾರಕ್ಕೆ ಅಂಟಿಕೊಂಡಿರಬೇಕು, ಕೈಗೆಟುಕದ ಪ್ರೇಮಾಲಾಪಕ್ಕೆ ತೊಡಗುತ್ತಾ ಆಶಾವಾದಿಗಳಾಗಿರಬೇಕು. ಹಾಗಾಗಿ ಎಲೆ ನೀರಿನಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದ ಹಾಗೆ, ಸಂಸಾರ ಸಾಗರದಲ್ಲಿ ಮುಳುಗಿದ್ದರೂ ಪ್ರೇಮರಾಗ ಹಾಡದೆ ಇರಲಾಗದು, ಶ್ರೀಮತಿ ಜೊತೆಯೇ ಅದನ್ನು ಎಂಜಾಯ್ ಮಾಡಬಾರದೇಕೆ?