ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಚಂದರಗಿ ಗ್ರಾಮದಲ್ಲಿ 1984ರಲ್ಲಿ ಕ್ರೀಡಾ ವಸತಿ ಶಾಲೆ ಆರಂಭಗೊಂಡಿತು. ಸಹಕಾರಿ ಕ್ಷೇತ್ರದಲ್ಲಿ ಆರಂಭಗೊಂಡ ದೇಶದ ಪ್ರಥಮ ಕ್ರೀಡಾ ವಸತಿ ಶಾಲೆ ಎಂಬ ಹಿರಿಮೆ ಇದಕ್ಕಿದೆ. ಈ ಅಪರೂಪದ ಶಾಲೆಯ ಸ್ಥಾಪನೆಗೆ ಕಾರಣರಾದವರು ಎಸ್‌.ಎಂ. ಕಲೂತಿ. ಮೂಲತಃ ಅವರು ಕುಸ್ತಿಪಟು. ರಾಜ್ಯ ರಾಷ್ಟ್ರಮಟ್ಟದಲ್ಲಿ ಅನೇಕ ಬಹುಮಾನಗಳನ್ನು ಪಡೆದರು. ಬಳಿಕ ಅವರು ಕ್ರೀಡಾ ತರಬೇತುದಾರರಾದರು. ನಂತರ ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಹಾಗೂ ಸಹಕಾರಿ ಸಂಘಗಳ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಜಪಾನಿನ ಎಕ್ಸ್ ಪೊ 70ಗೆ ಹೋಗುವ ಅವಕಾಶ ಅವರಿಗೆ ಲಭಿಸಿತ್ತು. ದೆಹಲಿಯಲ್ಲಿ ನಡೆದ 1982ರ ಏಷ್ಯನ್‌ ಕ್ರೀಡಾಕೂಟಕ್ಕೆ ಭೇಟಿ ಕೊಟ್ಟಿದ್ದರು. ಅದರಲ್ಲಿ ಭಾರತದ ಕಳಪೆ ಸಾಧನೆ ಅವರಿಗೆ ವಿಭಿನ್ನವಾಗಿ ಯೋಚಿಸುವಂತೆ ಮಾಡಿತು. ಸಹಕಾರಿ ರಂಗದಲ್ಲಿ  ಕ್ರೀಡಾ ವಸತಿ ಶಾಲೆ ತೆರೆದು ಪ್ರತಿಭಾವಂತರನ್ನು ಪ್ರೋತ್ಸಾಹಿಸಬೇಕೆಂದು ಬೆಳಗಾವಿ ಜಿಲ್ಲೆಯ ಸಹಕಾರಿ ಧುರೀಣರನ್ನು ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ನಿಯಮಿತ ಅರ್ಥಾತ್‌ `ಸ್ಪೋಕೊ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಕ್ರೀಡಾ ವಸತಿ ಶಾಲೆಗೆ ಚಂದರಗಿಯಲ್ಲಿದ್ದ ತೊರಗಲ್ಲ ಸಂಸ್ಥಾನದ ಉದಯಸಿಂಹ ನರಸೋಜಿರಾವ್ ‌ಸಿಂಧೆ ಮಹಾರಾಜರ ಬೇಸಿಗೆ ಅರಮನೆ ಹಾಗೂ ಇತರೆ ಕಟ್ಟಡಗಳನ್ನು ಖರೀದಿಸಿ 1984ರಲ್ಲಿ ಶಾಲೆ ಆರಂಭಿಸಿದರು. ಈ ಶಾಲೆಯಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕ ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳೆರಡರಲ್ಲೂ ಬೋಧಿಸುವುದರ ಜೊತೆ ಜೊತೆಗೆ ಕ್ರೀಡೆಯಲ್ಲೂ ಅವರನ್ನು ತರಬೇತುಗೊಳಿಸುತ್ತಿದೆ.

ಬಗೆಬಗೆಯ ಕ್ರೀಡಾ ತರಬೇತಿ : ಇಲ್ಲಿ ವಿದ್ಯಾರ್ಥಿಗಳಿಗೆ ಜಿಮ್ನಾಸ್ಟಿಕ್ಸ್, ಬ್ಯಾಡ್ಮಿಂಟನ್‌, ಕುಸ್ತಿ, ಟೇಬಲ್ ಟೆನಿಸ್‌ ಮುಂತಾದ ಒಳಾಂಗಣ ಕ್ರೀಡೆಗಳನ್ನು ಕಲಿಸಲು ಪ್ರತ್ಯೇಕ ಕ್ರೀಡಾಂಗಣಗಳಿವೆ. ಈಜು ತರಬೇತಿಗೆ ಬೃಹತ್‌ ಈಜುಗೊಳ ಇದೆ. ವಾಲಿಬಾಲ್‌, ಫುಟ್‌ಬಾಲ್‌, ಬ್ಯಾಸ್ಕೆಟ್‌ ಬಾಲ್, ಹಾಕಿ, ಲಾನ್‌ ಟೆನ್ನಿಸ್‌, ಖೋಖೋ, ಅಟ್ಯಾಪಟ್ಯಾ ಮುಂತಾದ ಆಟಗಳಲ್ಲಿ ತರಬೇತಿ ನೀಡಲು ಹೊರಾಂಗಣ ಕ್ರೀಡಾಂಗಣಗಳ ಸೌಲಭ್ಯವಿದೆ.

ಸಮತೋಲನ ಆಹಾರಕ್ಕೆ ಪ್ರಾಧಾನ್ಯತೆ : ಭವಿಷ್ಯದ ಕ್ರೀಡಾಪಟುಗಳಿಗೆ ಸಮತೋಲನ ಆಹಾರ ದೊರಕಬೇಕೆನ್ನುವುದು `ಸ್ಪೋಕೊ’ ಸಂಸ್ಥೆಯ ಮುಖ್ಯ ಧ್ಯೇಯ. ಸಂಸ್ಥೆ ತನ್ನದೇ ಆದ ಡೇರಿ ಫಾರ್ಮ್ ಹೊಂದಿದ್ದು, ಇಲ್ಲಿ 80 ಹಸುಗಳನ್ನು ಸಾಕಾಗಿದೆ. 30 ಎಕರೆ ಪ್ರದೇಶದಲ್ಲಿ ಬಾಳೆ, ಮಾವು, ದಾಳಿಂಬೆ, ಸಪೋಟ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿನ ಭೋಜನಾಲಯ ಅತ್ಯಂತ ವಿಶಾಲವಾಗಿದೆ. 700 ವಿದ್ಯಾರ್ಥಿಗಳು ಏಕಕಾಲಕ್ಕೆ  ಕುಳಿತು ಊಟ ಮಾಡಬಹುದಾಗಿದೆ.

ಪ್ರವೇಶ ಪರೀಕ್ಷೆ : ಈ ಕ್ರೀಡಾ ವಸತಿ ಶಾಲೆಯ 6ನೇ ತರಗತಿಗೆ ಪ್ರವೇಶ ಪಡೆಯಲು ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ತೃಪ್ತಿದಾಯಕ ಅಂಕ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಪ್ರತ್ಯೇಕ ವಸತಿ ಸೌಕರ್ಯ : ಇಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಧ್ಯಾರ್ಥಿಗಳಿಗೆ ಪ್ರತ್ಯೇಕ ನಸತಿ ವ್ಯಯಸ್ಥೆ ಕಲ್ಪಿಸಲಾಗಿದೆ. ಅದರ ಜೊತೆಗೆ ಪಿಯುಸಿ ವಿದ್ಯಾರ್ಥಿಗಳಿಗೂ ಪ್ರತ್ಯೇಕ ವಸತಿ ಸೌಕರ್ಯ ಕಲ್ಪಿಸಲಾಗಿದೆ.

ಗ್ರಂಥಾಲಯ : ಇಲ್ಲಿನ ಗ್ರಂಥಾಲಯದ ಕಟ್ಟಡ ಭಾರತದ ಸಂಸತ್‌ ಕಟ್ಟಡದ ಮಾದರಿ ಹೊಂದಿದೆ. 400 ವಿದ್ಯಾರ್ಥಿಗಳು ಏಕಕಾಲಕ್ಕೆ ಕುಳಿತು ಓದಬಹುದಾದ ವ್ಯವಸ್ಥೆ ಇದೆ. ಗ್ರಂಥಾಲಯದಲ್ಲಿ 13,000 ಗ್ರಂಥಗಳಿವೆ.

ಶಿಷ್ಯ ವೇತನ : ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಮಿಂಚು ಈ ಶಾಲೆಯ ವಿದ್ಯಾರ್ಥಿಗಳಿಗೆ 5000 ರೂ.ಗಳವರೆಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

ಪಠ್ಯೇತರ ಚಟುವಟಿಕೆ : ವಿದ್ಯಾರ್ಥಿಗಳ ಪರಿಪೂರ್ಣ ವಿಕಾಸಕ್ಕೆ ನೆರವಾಗುವಂತೆ ಕಲೆ, ಸಂಗೀತ, ರಸಪ್ರಶ್ನೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಪ್ರತಿಭೆ ಹೊರ ಹೊಮ್ಮಿಸಲು ಬೇಸಿಗೆ ಶಿಬಿರಗಳನ್ನು ಕೂಡ ಏರ್ಪಡಿಸಲಾಗುತ್ತದೆ.

ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚಿದ ಶಾಲೆಯ ಕ್ರೀಡಾಪಟುಗಳು : ಈ ಶಾಲೆಯ ಅನೇಕ ವಿದ್ಯಾರ್ಥಿಗಳು 1989ರಿಂದ ಈವರೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಟ್ಯಾಪಟ್ಯಾ , ಸೈಕ್ಲಿಂಗ್‌, ಕುಸ್ತಿ, ಮಲ್ಲಕಂಬ, ಎತ್ತರ ಜಿಗಿತ, ಶಾಟ್‌ಪುಟ್‌, ಅಥ್ಲೆಟಿಕ್ಸ್ ಹಾಗೂ ಜಿಮ್ನಾಸ್ಟಿಕ್ಸ್ ಕ್ರೀಡೆಗಳಲ್ಲಿ ಚಿನ್ನದ ಪದಕ, ಬೆಳ್ಳಿ ಪದಕಗಳನ್ನು ಗೆದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪಠ್ಯದಲ್ಲೂ ಮುಂದೆ : ಚಂದರಗಿ ಕ್ರೀಡಾ ಶಾಲೆ ಕೇವಲ ಕ್ರೀಡಾರಂಗದಲ್ಲಷ್ಟೇ ಅಲ್ಲ, ಪಠ್ಯದಲ್ಲೂ ಹೆಸರು ಮಾಡಿದೆ. ಎಸ್‌ಎಸ್‌ಎಲ್ಸಿ ರಾಜ್ಯ ಪಠ್ಯಕ್ರಮದಲ್ಲಿ ಕಳೆದ ಅನೇಕ ವರ್ಷಗಳಿಂದ 100ಕ್ಕೆ 100ರಷ್ಟು ಫಲಿತಾಂಶ ಪಡೆಯುತ್ತಿದೆ.

ಸಂಯುಕ್ತ ಕ್ರೀಡಾ ವಸತಿ ಪದವಿಪೂರ್ವ ಮಹಾವಿದ್ಯಾಲಯ ಚಂದರಗಿ-591 114, ರಾಮದುರ್ಗ ತಾ,  ಬೆಳಗಾವಿ ಜಿಲ್ಲೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ