ಹೈದರಾಬಾದ್‌ ಕರ್ನಾಟಕ ಪ್ರದೇಶದ ಕಲಬುರಗಿ ನಗರದಲ್ಲಿ ಅಂಧ ಬಾಲಕಿಯರಿಗಾಗಿ ವಿಶೇಷ ಶಾಲೆಯೊಂದು ಕಾರ್ಯ ನಿರ್ವಹಿಸುತ್ತಿದೆ. ಆ ಶಾಲೆಯ ಹೆಸರು `ಶ್ರೀಮತಿ ಅಂಬೂಬಾಯಿ ಅಂಧ ಬಾಲಕಿಯರ ವಸತಿ ಶಾಲೆ.’ ಈ ಶಾಲೆ ಸ್ಥಾಪನೆಯಾದದ್ದು 2007ರಲ್ಲಿ. ಅದರ ಸಂಸ್ಥಾಪಕರು ದತ್ತು ಅಗರವಾಲ್‌. ಅವರು ಮೂಲತಃ ಹುಟ್ಟು ಕುರುಡರಲ್ಲ. 3ನೇ ತರಗತಿಯವರೆಗೆ ಇತರೆ ಸಾಮಾನ್ಯ ವಿದ್ಯಾರ್ಥಿಗಳಂತೆ ಇದ್ದರು. ಕಾಮಾಲೆ ರೋಗದ ತೀವ್ರತೆಯಿಂದ ಅವರು ತಮ್ಮ ಎರಡೂ ಕಣ್ಣುಗಳನ್ನು ಕಳೆದುಕೊಂಡರು. ಅಂಧರ ಶಾಲೆಯಲ್ಲಿ ಶಿಕ್ಷಣ ಪೂರೈಸಿದ ಅವರು, `ರಾಜ್ಯಶಾಸ್ತ್ರ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಂಧ ಬಾಲೆಯರ ಕಲ್ಯಾಣಕ್ಕಾಗಿ : ಅರು ವೃತ್ತಿಯಲ್ಲಿ ಸರ್ಕಾರಿ ನೌಕರರಾದರೂ, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಅಂಧ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಅಂಬೂಬಾಯಿ ಅಂಧ ಬಾಲಕಿಯರ ವಸತಿ ಶಾಲೆಯಲ್ಲಿ ಪ್ರಸ್ತುತ 71 ವಿದ್ಯಾರ್ಥಿನಿಯರಿದ್ದು, 1 ರಿಂದ 9 ರವರೆಗೆ ತರಗತಿಗಳು ನಡೆಯುತ್ತಿವೆ. 2016ನೇ ಸಾಲಿನಿಂದ ಇಲ್ಲಿ 10ನೇ ತರಗತಿ ಆರಂಭವಾಗಲಿದೆ. ಹೈದರಾಬಾದ್‌ ಕರ್ನಾಟಕ ಭಾಗದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ ಕಡೆಯ ಅಂಧ ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣುಮಕ್ಕಳು ಮೈಸೂರು ಬೆಂಗಳೂರು ಕಡೆ ವಿದ್ಯಾರ್ಜನೆಗೆ ಹೋಗುವುದು ಅಸಾಧ್ಯದ ಮಾತೇ ಸರಿ. ಅಂತಹ ಸ್ಥಿತಿಯಲ್ಲಿ ದತ್ತೂ ಅಗರವಾಲ್ ಅವರು ತಮಗೆ ಶಿಕ್ಷಣ ನೀಡಿದ ಪೂಜ್ಯ ತಾಯಿ ಅಂಬೂಬಾಯಿಯವರ ಸ್ಮರಣಾರ್ಥ ಶಾಲೆ ಆರಂಭಿಸಿ ಅಂಧ ಬಾಲಕಿಯರ ಬಾಳಿಗೆ ಬೆಳಕಾಗಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಅಂಧ ಹೆಣ್ಣು ಮಕ್ಕಳಿಗಾಗಿ ಶಿಕ್ಷಣ ನೀಡುತ್ತಿರುವ ಏಕೈಕ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿ ಈ ಶಾಲೆಗಿದೆ.

ಉಚಿತ ವ್ಯವಸ್ಥೆ : ವಸತಿ ಶಾಲೆಗೆ ಪ್ರವೇಶ ಪಡೆದ ಪ್ರತಿ ವಿದ್ಯಾರ್ಥಿನಿಗೂ ಬಟ್ಟೆ, ಊಟ, ಪುಸ್ತಕ ಮತ್ತಿತರ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಸರ್ಕಾರ ಅಂಧ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ತಲಾ 800 ರೂ.ನಂತೆ ಸಹಾಯಧನ ವಿತರಿಸುತ್ತಿದೆ. ಆದರೆ ಈ ಮೊತ್ತ ಈಗಿನ ಬೆಲೆ ಏರಿಕೆಯ ದಿನಗಳಲ್ಲಿ ಯಾವುದಕ್ಕೂ ಸಾಲದು. ಅದನ್ನು ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದಾನಿಗಳ ನೆರವಿನಿಂದ ಊಟ, ಉಪಾಹಾರ ಹಾಗೂ ಇತರೆ ಖರ್ಚುಗಳನ್ನು ನಿಭಾಯಿಸಲಾಗುತ್ತಿದೆ ಎಂದು ಶಾಲೆಯ ಸಂಸ್ಥಾಪಕ ದತ್ತು ಅಗರವಾಲ್ ಹೇಳುತ್ತಾರೆ.

ಶಾಲೆಗೆ ಪ್ರವೇಶ ಹೇಗೆ?

ಪ್ರತಿ ವರ್ಷ ಜೂನ್‌ 1 ರಿಂದ 30ರವರೆಗೆ ಜಾತಿ, ವರ್ಗ, ಅಂತಸ್ತಿನ ಭೇದವಿಲ್ಲದೆ ಅಂಧ ಬಾಲಕಿಯರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ಮಕ್ಕಳನ್ನು ದಾಖಲಿಸಲು ಬರುವ ಪೋಷಕರು ನೇತ್ರತಜ್ಞರ ಪ್ರಮಾಣಪತ್ರ, ಆದಾಯಪತ್ರ, ಜನ್ಮ ದಿನಾಂಕದ ದಾಖಲೆ ತೆಗೆದುಕೊಂಡು ಬರಬೇಕಾಗುತ್ತದೆ.

ಪಠ್ಯಕ್ರಮ : ಸಾಮಾನ್ಯ ಶಾಲೆಗಳು ಅನುಸರಿಸುವ ಪಠ್ಯಕ್ರಮವನ್ನೇ ಇಲ್ಲಿ ಅಳವಡಿಸಲಾಗುತ್ತದೆ. ಆದರೆ ಇಲ್ಲಿನ ತರಗತಿಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವುದರಿಂದ ತಜ್ಞ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿನಿಯ ಬಗ್ಗೆ ಕಾಳಜಿ ವಹಿಸುತ್ತಾರೆ. ಪಠ್ಯದ ಜೊತೆ ಸಂಗೀತ, ಕರಕುಶಲ ಕಲೆ, ದೈಹಿಕ ಶಿಕ್ಷಣ, ಯೋಗಾಭ್ಯಾಸ ಮುಂತಾದವುಗಳನ್ನು ಹೆಚ್ಚುವರಿಯಾಗಿ ಕಲಿಸಲಾಗುತ್ತದೆ.

ಕಂಪ್ಯೂಟರ್ಶಿಕ್ಷಣ : ಶಿಕ್ಷಣ ಮುಗಿಸಿ ಹೊರಗೆ ಹೋದಬಳಿಕ ಅವರು ಸ್ವಾವಲಂಬಿಗಳಾಗಿ ಜೀವಿಸಲು ಆರಂಭದಿಂದಲೇ ಅವರಿಗೆ ಕಂಪ್ಯೂಟರ್‌ಶಿಕ್ಷಣ ನೀಡಲಾಗುತ್ತದೆ.

ಸಾಂಸ್ಕೃತಿಕ ಚಟುವಟಿಕೆ : ಈ ಶಾಲೆಯ ವಿದ್ಯಾರ್ಥಿನಿಯರು ಕಲಬುರಗಿ ಉತ್ಸವದಲ್ಲಿ ಕಣ್ಣಿದ್ದವರೊಂದಿಗೆ ಸ್ಪರ್ಧಿಸಿ ಮೂರನೇ ಕ್ರಮಾಂಕ ಪಡೆದರು. ಇದೇ ರೀತಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶ್ರೀಮತಿ ಅಂಬೂಬಾಯಿ ಅಂಧ ಬಾಲಕಿಯರ ವಸತಿ ಶಾಲೆ ನಂ.4  282, ಮಕ್ತಮಪುರ, ಕಲಬುರಗಿ-585 101.

Tags:
COMMENT