ಪರರ ಸಹವಾಸ, ಭವಿಷ್ಯದ ವಿನಾಶ!

ಪತ್ನಿ ಪರಪುರುಷನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ತಿಳಿದುಬಂದಾಗ, ಪತಿ ಪತ್ನಿಯರ ನಡುವೆ ಬಿರುಕು ಮೂಡುವುದು ಸಾಮಾನ್ಯವೇ ಸರಿ, ಜೊತೆಗೆ ಯಾರದಾದರೂ ಕೊಲೆ ನಡೆದರೂ ಆಶ್ಚರ್ಯವಿಲ್ಲ.

ದೆಹಲಿಯಲ್ಲಿ ವಿದ್ಯುತ್‌ ವಿತರಿಸುವ ಕಂಟ್ರಾಕ್ಟರ್‌ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಪತಿರಾಯ ಅವನನ್ನು ಮಥುರಾವರೆಗೂ ಕರೆದೊಯ್ದು ಅಲ್ಲಿ ಕೊಲೆ ಮಾಡಿದ. ಆ ಕಂಟ್ರಾಕ್ಟರ್‌ ಈತನ ಪರಿಚಿತ ಮಾತ್ರವಲ್ಲದೆ, ಜೊತೆಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಮನೆಯಲ್ಲೇ ಬಾಡಿಗೆದಾರನಾಗಿದ್ದ.

ಪತ್ನಿ ಮೇಲೆ ಪತಿಗೆ ಈ ಹಕ್ಕು ಎಂಬುದು ಬಹು ಹಳೆಯ ಸಂಗತಿ. ರಾಮನು ಸೀತೆಯನ್ನು ವಾಪಸ್ಸು ಪಡೆಯಬೇಕೆಂದು ಘೋರ ಯುದ್ಧವನ್ನೇ ಮಾಡಬೇಕಾಯಿತು, ಅದೇ ತರಹ ಪತ್ನಿಗಾದ ಸೇಡನ್ನು ತೀರಿಸಿಕೊಳ್ಳಲು ದಾಯಾದಿಗಳ ನಡುವೆ ಮಹಾಭಾರತದ ಕುರುಕ್ಷೇತ್ರವೇ ನಡೆಯಿತು. ಸಂದೇಹವೇ ಮೂಲವಾದ ರಾಜ್‌ಕಪೂರ್‌ರ `ಸಂಗಂ’ ಎಂಥವರೂ ಮರೆಯದ ಚಿತ್ರ, ಇದರಲ್ಲಿ 3ನೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಅದೇ ತರಹ ನಾನಾಟಿಯ ಪ್ರಕರಣ ಬಹುದಿನ ಚರ್ಚೆಯಲ್ಲಿತ್ತು.

ಪತಿಗೆ ಪತ್ನಿಯ ಮೇಲಿನ ಈ ಹಕ್ಕಿನಿಂದಾಗಿ ಅವಳು ತನ್ನಿಷ್ಟದಂತೆ ಬೇರಾರೊಂದಿಗೂ ದೈಹಿಕ ಸಂಬಂಧ ಬೆಳೆಸಬಾರದೆಂಬ ಕಾರಣಕ್ಕೆ, ಇಂದೂ ಸಹ ಅನೇಕ ವಿವಾದಗಳು ಕೋರ್ಟಿನ ಕಟಕಟೆ ಹತ್ತುತ್ತಲಿವೆ.

ಈ ನಿಟ್ಟಿನಲ್ಲಿ ಕಾನೂನು ಸಹ ಏಕಪಕ್ಷೀಯಾಗಿದೆ. ಪತ್ನಿ ತನ್ನಿಷ್ಟದಂತೆ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದರೆ, ಅದಕ್ಕೆ ಪತಿ ಆ 3ನೇ ವ್ಯಕ್ತಿ ಮೇಲೆ ಪತ್ತೇದಾರಿಕೆ ನಡೆಸಿ ಮೊಕದ್ದಮೆ ಹೂಡಬಹುದು. ಅಕಸ್ಮಾತ್‌ ಅನೈತಿಕ ಸಂಬಂಧವಿದೆ ಎಂಬುದು ಸಾಬೀತಾದರೆ, 3ನೇ ವ್ಯಕ್ತಿಗೆ ಕಠಿಣ ಶಿಕ್ಷೆಯೂ ಆಗುತ್ತದೆ. ಅದೇ ಪತಿರಾಯ ತಾನೇನಾದರೂ ಅಫೇರ್‌ ನಡೆಸಿ ಸಿಕ್ಕಿಬಿದ್ದರೆ, ಅವನಿಗೂ ಅಥವಾ ಅವನ ಪ್ರೇಯಸಿಗೂ (ಪತ್ನಿಯ ಸವತಿ…?) ಯಾವ ಶಿಕ್ಷೆಯೂ ಇಲ್ಲ! ಕೆಲವು ವರ್ಷಗಳ ಹಿಂದೆ ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ಪತ್ನಿ ಅಫೇರ್‌ ಹೊಂದಿದ್ದಳೆಂದು ಆ ಹಕ್ಕಿನ ವಿರುದ್ಧ ಶಿಕ್ಷೆ ವಿಧಿಸಿತ್ತು. ಏಕೆಂದರೆ, ಆ ಕಾನೂನಿನಿಂದ ಪತ್ನಿಗೆ ಬದಲಾಗಿ ಅವಳ ಪ್ರಿಯಕರನಿಗೆ ಶಿಕ್ಷೆ ಸಿಗುತ್ತದೆ ಎಂಬುದಕ್ಕಾಗಿ.ಇಂದೂ ಸಹ ಕಾನೂನು ಪತ್ನಿಯನ್ನು ಪತಿಯ ಸಂಪತ್ತು ಎಂದೇ ಭಾವಿಸುತ್ತದೆ. ಆದರೆ ವಾಸ್ತವ ಎಂದರೆ, ಪತಿ ಅಥವಾ ಪತ್ನಿ 3ನೇಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ, ಅದು ವಿಚ್ಛೇದನಕ್ಕೆ ಕಾರಣ ಎಂದು ಭಾವಿಸಬಹುದೇ ಹೊರತು ಅದನ್ನೇ ಅಪರಾಧ ಅಥವಾ ಅಪರಾಧಕ್ಕೆ ಕುಮ್ಮಕ್ಕು ಎನ್ನುವಂತಿಲ್ಲ.

ಒಂದು ಪಕ್ಷ ಇಂದಿನ ಹೆಣ್ಣು ಬೇರೆಯವರೊಂದಿಗೆ ಸಂಬಂಧ ಮಾಡಿದರೆ, ಅವಳು ಅದರ ಸಾಧಕ ಬಾಧಕಗಳನ್ನು ಅರಿತೇ ಮಾಡಿರುತ್ತಾಳೆ. ಸಾಮಾಜಿಕವಾಗಿ ಇದನ್ನು ತಪ್ಪು ಎನ್ನಬಹುದು, ಆದರೆ ಸಮಾಜದ ಹೆಸರಿನಲ್ಲಿ ಪತ್ನಿಯಾದವಳಿಗೆ ಒಬ್ಬ ಹೆಣ್ಣಿನ ಸಾಮಾನ್ಯ ಹಕ್ಕುಗಳಿಂದ ವಂಚಿಸುವಂತಿಲ್ಲ ಎಂಬುದೂ ಅಷ್ಟೇ ಸತ್ಯ.

ದೈಹಿಕ ಸಂಬಂಧ ಎಂಬುದು ವೈವಾಹಿಕ ಸಂಬಂಧಗಳಿಂದ ವಿಭಿನ್ನ. ವಿವಾಹ ಎಂದರೆ ಜೊತೆಯಲ್ಲಿ ವಾಸ, ಮನೆಯ ಜವಾಬ್ದಾರಿ ಹಂಚಿಕೊಳ್ಳುವಿಕೆ, ಪರಸ್ಪರರನ್ನು ನೋಡಿಕೊಳ್ಳುವ ವಾಗ್ದಾನಗಳಾಗಿವೆ. ಆದರೆ ದಾಂಪತ್ಯದಲ್ಲಿ ಬೇಸರ ಇಣುಕಿದಾಗ, ಪತಿ ಅಥವಾ ಪತ್ನಿಗೆ ಬೇರೊಬ್ಬರ ಕುರಿತು ಆಸೆ ಮೂಡಿದರೆ, ಅದನ್ನು ಈ ಮದುವೆಯ ದುರ್ಬಲ ಲಿಂಕ್‌ ಎಂದುಕೊಳ್ಳಬಹುದು. ಇದಕ್ಕಾಗಿ ಡೈವೋರ್ಸ್‌ ಪಡೆಯಬೇಕೇ ಬೇಡವೇ ಎಂಬುದು ಅವರಿಬ್ಬರಿಗೇ ಬಿಟ್ಟದ್ದು. ಆದರೆ ಇದನ್ನೇ ನೆಪವಾಗಿಸಿ ಪತಿ, ಪತ್ನಿ ಅಥವಾ 3ನೇ ವ್ಯಕ್ತಿಯ ಕೊಲೆ ಮಾಡಿಸುವುದು ಸಾಮಾಜಿಕ ಹಕ್ಕು ಅಥವಾ ಮುಂದಿನ ಕ್ರಮ ಎಂಬುದು ಖಂಡಿತಾ ಸರಿಯಲ್ಲ.

ದೆಹಲಿಯ ಈ ಪ್ರಕರಣದಲ್ಲಿ ಪತಿ ಉಮೇಶ್‌ ತನ್ನ ಪತ್ನಿ 3ನೇ ವ್ಯಕ್ತಿ ತಪನ್‌ ಜೊತೆ ಅಫೇರ್‌ ನಡೆಸಿದ್ದಳೆಂದು ಅವನನ್ನು ಕೊಂದುಹಾಕಿ ಶಿಕ್ಷೆ ನೀಡಿದ. ಈಗ ಏನಾಗುತ್ತದೆ? ಉಮೇಶ್‌ ವರ್ಷಗಳ ಕಾಲ ಜೈಲಿನಲ್ಲಿರಬೇಕು ಹಾಗೂ ಅವನ ಪತ್ನಿ, ವರ್ಷಗಳ ಕಾಲ ಆ ನೋವನ್ನು ಸಹಿಸಬೇಕು. ಅವಳ ಬಳಿ ಈಗ ಅತ್ತ ಪತಿಯೂ ಇಲ್ಲ, ಇತ್ತ ಪ್ರೇಮಿಯೂ ಇಲ್ಲ. ಮದುವೆಗೆ 3 ಜೀವಗಳನ್ನು ಬಲಿ ತೆಗೆದುಕೊಳ್ಳುವ ಈ ಹಕ್ಕು ಎಲ್ಲಿಂದ ಬಂತು?

ಈ ಯೋಚನೆ ಕೇವಲ ಗಂಡಸರದ್ದು ಮಾತ್ರ ಅಲ್ಲ, ಹೆಂಗಸರದ್ದೂ ಕೂಡ. ಪತಿ ಪತ್ನಿ ಇಬ್ಬರೂ ಪರಸ್ಪರರ ಮೇಲೆ ಹಕ್ಕು ಚಲಾಯಿಸುತ್ತಾ, ಹದ್ದು ಮೀರಿ ವರ್ತಿಸುತ್ತಾರೆ. ಅವರಿಗೆ ಸ್ವಲ್ಪ ತಪ್ಪುಗಳು ಆಗಲೇಬಾರದು, ಎಷ್ಟೋ ಹೆಚ್ಚಿನ ಪ್ರಕರಣಗಳಲ್ಲಿ ಕೋಪ ಮಿತಿ ಮೀರುತ್ತದೆ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರ ಎಂದುಕೊಳ್ಳಬೇಡಿ, ವಿಶ್ವವಿಡೀ ಪತಿ ಪತ್ನಿಯರು ಹೀಗೆ ಆಡುವುದು.

ಇಂದು ಹೆಣ್ಣು ಎಲ್ಲಾ ವಿಧದಲ್ಲೂ ತನ್ನ ಅಸ್ತಿತ್ವ ಸ್ಥಾಪಿಸುತ್ತಿರುವಾಗ, ಅವಳು ಕೇವಲ ಪತಿ ಮೇಲೆ ಆಶ್ರಿತಳಲ್ಲ, ಹೀಗಾಗಿ ಹೊಸ ಬಗೆಯ ಚಿಂತನೆಗಳು, ವಿಕಾಸಗೊಳ್ಳಬೇಕಿವೆ. ಒಬ್ಬರಿಗೆ ಮತ್ತೊಬ್ಬರು ತಮಗೆ ಮೋಸ ಮಾಡುತ್ತಿದ್ದಾರೆ ಎಂದೇ ಅನಿಸುತ್ತದೆ, ಆಗ ವಿಚ್ಛೇದನದ ಹಾದಿಯಂತೂ ತೆರೆದೇ ಇದೆ, ಹಾಗಿರುವಾಗ ಕೊಲೆ ಮಾಡಿ, ಜೇಲು ಸೇರಿ ಸಾಧಿಸುವುದೇನಿದೆ?

ಮನೆಮನೆಗೂ ಹರಡುತ್ತಿದೆ ಜಾತಿಯ ವಿಷ

ನಾವು ನಮ್ಮ ದೇಶ ಹಾಗೂ ಸಮಾಜ ಎಷ್ಟೋ ಆಧುನಿಕವಾಗಿದೆ ಹಾಗೂ ಇಂದಿನ ಪೀಳಿಗೆ ಪ್ರಾಚೀನ ವಿಚಾರಧಾರೆಗಳಿಂದ ಮೇಲೆದ್ದು ಬಂದಿದೆ ಎಂದುಕೊಂಡರೆ, ಅದಕ್ಕಿಂತಲೂ ಘೋರ ಭ್ರಮೆ ಇನ್ನೊಂದಿಲ್ಲ, ಆ ನಿಟ್ಟಿನಲ್ಲಿ ನಮ್ಮ ಸುಧಾರಣೆ ಆಗಬೇಕಿದೆ.

ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯ ಯುವಜನತೆಯ ತಾಣವಾದರೆ, ಅದು ಜಾತಿವಾದಿ ಗುಂಪುಗಾರಿಕೆಯ ತವರೂ ಆಗಿದೆ. ಅಲ್ಲಿ ಕನಿಷ್ಠವೆಂದರೂ 60 ಜಾತಿಗಳಿಗೆ ಸಂಬಂಧಿಸಿದ ಯುವ ಸಂಸ್ಥೆಗಳಿವೆ. ಅವು ಪರಸ್ಪರ ಪರಮ ಶತ್ರುಗಳು. ಜಾತಿ ವಾದದ ವಿಷಮಯ ದಳ್ಳುರಿಗೆ ಪೆಟ್ರೋಲ್, ತೈಲ, ದುರ್ಗಂಧ ಬೆರೆಸಿ ತಮ್ಮನ್ನು ತಾವು ಧನ್ಯವೆಂದುಕೊಳ್ಳುತ್ತಿ.

ಒಮ್ಮೊಮ್ಮೆ ಹಿಂದುಳಿದ ಅಂದರೆ ಅದರ್‌ ಬ್ಯಾಕ್‌ವರ್ಡ್‌ ಕ್ಯಾಸ್ಟ್ ಒಂದು ವೇದಿಕೆಯಲ್ಲಿ ಒಟ್ಟಾಗಿ ಕುಳಿತು ಏನಾದರೂ ಒಂದಿಷ್ಟು ಮಾಡುವ ಯೋಜನೆ ರೂಪಿಸುತ್ತವೆ. ಉದಾ, ಹಾರ್ದಿಕ್‌ ಪಟೇಲ್ ‌ಗುಜರಾತ್‌ನ ಆಂದೋಲನಕ್ಕೆ ಸಮರ್ಥನೆ ನೀಡಿದಂತೆ, ಆದರೆ ಅಲ್ಲಿ ಪ್ರತಿ ಜಾತಿಯನ್ನೂ ಪ್ರತ್ಯೇಕವಾಗಿ ಗುರುತಿಸುವ ಪ್ರಸಂಗ ಧುತ್ತೆಂದು ಎದುರಾಯಿತು.

ಯುವಜನತೆಗೆ ಈ ಜಾತಿ ಸಮೂಹಗಳಿಂದ ದೊಡ್ಡ ತೊಂದರೆ ಎದುರಾಗುತ್ತದೆ. ಮೊದಲ ಹಾಗೂ ಅತಿ ದೊಡ್ಡ ತೊಂದರೆ ಎಂದರೆ, ಈ ಗುಂಪುಗಾರಿಕೆ ಪ್ರೇಮಕ್ಕೆ ದೊಡ್ಡ ಕಂಟಕ. ಸಾಮಾನ್ಯವಾಗಿ ಈ ಗುಂಪುಗಾರಿಕೆಯಲ್ಲಿ ಒಂದು ಸಮುದಾಯ ಮತ್ತೊಂದು ಸಮುದಾಯದ ಜೊತೆಗೆ ಮದುವೆಗೆ ಒಪ್ಪುವುದೇ ಇಲ್ಲ. ಏಕೆಂದರೆ, ಹಾಗೊಂದು ವೇಳೆ ಪ್ರೇಮ ಬೆಳೆದು ಮದುವೆಯಲ್ಲಿ ಮುಕ್ತಯವಾದರೆ, ಜಾತಿವಾದದ ಅಸ್ತಿವಾರವೇ ಬಿದ್ದುಹೋಗುತ್ತದೆ ಹಾಗೂ ಜಾತಿ ಹೆಸರಿನಲ್ಲಿ ನಡೆಸುವ ಅಂಗಡಿಗಳು ಮುಚ್ಚಿಹೋಗುತ್ತವೆ. ಹಳ್ಳಿ, ತಾಲ್ಲೂಕು, ಹೋಬಳಿಗಳಲ್ಲೂ ಇದರ ಪರಿಣಾಮ ಗಮನಿಸಬಹುದು. ಈಗಂತೂ ಎಲ್ಲೆಲ್ಲೂ ಎಂಥ ಏರಿಯಾಗಳು ಬೆಳೆಯುತ್ತಿವೆ ಎಂದರೆ, ಅದರಲ್ಲಿ ಒಂದೇ ಜಾತಿಯ ಜನ ಒಂದೆಡೆ ವಾಸಿಸುವಂತಾಗಿದೆ.  ಜಾತಿವಾದಕ್ಕೆ ಒತ್ತು ನೀಡುವ ಪುರೋಹಿತರು ಇಲ್ಲಿ ಲೂಟಿ ಹೊಡೆಯುತ್ತಾರೆ.

ಈಗ ಹಿಂದುಳಿದ ಹಾಗೂ ದಲಿತ ಜಾತಿಗಳಲ್ಲೂ ಅವರವರೇ ಪುರೋಹಿತರಾಗಿ ತಯಾರಾಗಿದ್ದಾರೆ, ಅವರೂ ಸಹ ಭಕ್ತರಿಂದ ದೊಡ್ಡ ಮೊತ್ತದ ದಾನದಕ್ಷಿಣೆ ಗಿಟ್ಟಿಸುತ್ತಾರೆ ಹಾಗೂ ಕೇವಲ ಕಂದಾಚಾರಿಗಳನ್ನು ಮಾತ್ರ ಬೆಂಬಲಿಸುತ್ತಾರೆ. ಏಕೆಂದರೆ ಈ ಮೂಲಕ ಮಾತ್ರ ಅವರನ್ನು ಪ್ರಚೋದಿಸಬಹುದಾಗಿದೆ.

ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಗೋಮಾಂಸ ಸೇವಿಸಿದರೆಂದು ಹುಯಿಲೆಬ್ಬಿಸಲಾಯಿತು. ಯಾವ ಹಸುಗಳು ರಸ್ತೆ ಬದಿಯ ಕಸ ತಿನ್ನುತ್ತಿದ್ದವೋ ಅಂಥವನ್ನು ಕತ್ತರಿಸಿದರು ಎಂಬುದಕ್ಕಾಗಿ ಜನ ಕಿತ್ತಾಡಿ, ಮಾನವರ ತಲೆಯನ್ನೇ ಕಡಿಯಲು ಹೊರಟರು. ಯಾರು ಇದನ್ನು ತಿನ್ನುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ವಾದಿಸಿದರೋ ಅವರೂ ಇತರರ ತಲೆ ತೆಗೆಯಲು ಸಿದ್ಧರಾದರು. ಅಂತೂ ಸರ್ಕಾರ ಮಧ್ಯದಲ್ಲಿ ಮೂಗುತೂರಿಸಿ ಆ ಪ್ರಕರಣವನ್ನು ಅಲ್ಲೇ ಮೊಟಕುಗೊಳಿಸಿತು. ಇಲ್ಲದೇ ಇದ್ದರೆ ಜಾತಿಧರ್ಮಗಳ ಹೆಸರಿನಲ್ಲಿ ಹಂಚಿಹೋಗಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯ ಹೊಡೆದಾಟಗಳದ್ದೇ ಕ್ಲಾಸಸ್‌ ನಡೆಸಬೇಕಿತ್ತು.

ಇದು ಇಷ್ಟಕ್ಕೆ ಮುಗಿಯದೆ ಇಡೀ ದೇಶ ಪೂರ್ತಿ ಹರಡುತ್ತಿದೆ. ಪ್ರತಿ ಶಾಲೆ, ಕಾಲೇಜ್‌. ಆಫೀಸ್‌, ವಠಾರ, ಕಾಲೋನಿಗಳು ಜಾತಿ ಆಧರಿಸಿ ವಿಂಗಡಗೊಂಡಿವೆ. ಕಿಟೀ ಪಾರ್ಟಿಗಳಲ್ಲೂ ಒಂದೇ ರೀತಿಯ ಮಹಿಳೆಯರು ಕಂಡುಬರುತ್ತಾರೆ. ಪ್ರತಿ ಜಾತಿಯ ಮೇಲೂ ಏನೋ ಒಂದು ಮುದ್ರೆ ಬಿದ್ದಿದೆಯೇನೋ ಎಂಬಂತೆ, ಒಂದು ಜಾತಿಯವರಿಗೆ 4 ಕೈಗಳು ಮತ್ತೊಬ್ಬರಿಗೆ 3 ಕಂಗಳಿವೆ ಎಂಬಂತೆ!

ಹೀಗಾಗಿ ಮನೆಮನೆಗಳಿಗೂ ಜಾತಿಯ ವಿಷ ಉಣಿಸಲಾಗುತ್ತಿದೆ. ಇದು ಕಾವಿಧಾರಿಗಳ ಯಶಸ್ಸು ಇರಬಹುದು, ಆದರೆ ಆಧುನಿಕ ವಿಚಾರಧಾರೆಯವರ ಮನೆಗಳೂ ಸಹ ಒಂದು ಸಮರಸ ಸಮಾಜ ಎನಿಸುತ್ತಿಲ್ಲ. ನಮ್ಮ ದೇಶ ಒಂದು ಮೆಲ್ಟಿಂಗ್‌ ಪಾಟ್‌ ಆಗಲಿಲ್ಲ, ಇದನ್ನು ವಿಷಾದನೀಯ ಎನ್ನಬೇಕಾಗಿದೆ.

ತುಟಿಗಳ ಭಾಷೆ ಅರಿಯಿರಿ

ಪತ್ರಿಕೆಯ ನಿಯಮಿತ ವೈಯಕ್ತಿಕ ಸಮಸ್ಯೆಗಳ ವಿಭಾಗಕ್ಕೆ ಒಬ್ಬ ಹದಿಹರೆಯದ ಕಿಶೋರಿ, ತನ್ನ ಗೆಳತಿಯನ್ನು ಚುಂಬಿಸುವುದರಿಂದ ಹೆಚ್ಚಿನ ಆನಂದ ಸಿಗುತ್ತದೆ, ಇದರಿಂದ ಮುಂದೆ ತೊಂದರೆ ಇಲ್ಲ ತಾನೇ? ಎಂದು ನಿವೇದಿಸಿಕೊಂಡಿದ್ದಳು.

ವಿಜ್ಞಾನಿಗಳ ಪ್ರಕಾರ ಚುಂಬನದಿಂದ ಬಹಳಷ್ಟು ಲಾಭಗಳಿವೆ. ಚುಂಬನ ಸಂಬಂಧಗಳನ್ನು ಗಾಢಗೊಳಿಸುತ್ತದೆ. ಮೊದಲ ಚುಂಬನ ಉತ್ತಮವಾಗಿ ಪರಿಣಮಿಸಲಿಲ್ಲ ಎಂದರೆ 60% ಗಂಡಸರು ಮತ್ತು 59% ಹೆಂಗಸರು ಆ ಸಂಬಂಧವನ್ನು ಮುಂದುವರಿಸುವುದಿಲ್ಲಂತೆ.

ಇದಕ್ಕೆ ಕಾರಣ ಎಂದರೆ, ದೇಹದ ಸಂವೇದನಾಶೀಲ ಭಾಗಗಳಲ್ಲಿ ತುಟಿ ಅತಿ ಹೆಚ್ಚಿನ ಮಟ್ಟದ ಸಂವೇದನೆ ಪಡೆಯುವಲ್ಲಿ ಸಮರ್ಥ ಎನಿಸಿದೆ. ಚುಂಬನದಿಂದಲೇ ಆ ಸಂಗಾತಿ ಆತ್ಮೀಯರೋ ಶತ್ರುವೋ ತಿಳಿಯುತ್ತದೆ. ಚುಂಬನದಿಂದ ತಕ್ಷಣ ದೇಹದ ಕೆಮಿಕಲ್ಸ್ ಸಕ್ರಿಯಗೊಂಡು ಚುರುಕಾಗಿ ಕೆಲಸ ಆರಂಭಿಸುತ್ತದೆ. ಚುಂಬನ ಪಡೆದ ತುಟಿಗಳ ಸ್ಪರ್ಶ ಗ್ರಂಥಿಗಳು ಸಂದೇಶ ರವಾನಿಸಲು ಆರಂಭಿಸುತ್ತವೆ ಹಾಗೂ ಪ್ರೇಮದ ಆಕ್ಸಿಟಾಸಿನ್‌ ಹಾರ್ವೋನ್‌ ಕೆಮಿಕಲ್ಸ್ ಉತ್ಪಾದಿಸಲು ಆರಂಭಿಸುತ್ತದೆ. ಹೃದಯದ ಬಡಿತ ಹೆಚ್ಚುತ್ತದೆ, ಒತ್ತಡ ಕಡಿಮೆ ಆಗುತ್ತದೆ. ದೇಹ ಸುರಕ್ಷತೆಯ ಭಾವ ಅನುಭವಿಸುತ್ತದೆ, ರಕ್ತನಾಳ ಧಮನಿಗಳು ನೆಮ್ಮದಿಯಾಗಿ ತಮ್ಮ ಕೆಲಸ ಮುಂದುರಿಸುತ್ತವೆ, ಕೆನ್ನೆ ಕೆಂಪು ಕೆಂಪಾಗಿ ನಾಡಿಮಿಡಿತ ಹೆಚ್ಚುತ್ತದೆ.

ವೈಜ್ಞಾನಿಕವಾಗಿ ಇದನ್ನೇ ಪ್ರೇಮ ಎನ್ನುತ್ತಾರೆ. ಇದು ಹುಡುಗ ಹುಡುಗಿ ನಡುವೆ ಮಾತ್ರವಲ್ಲದೆ, ಇಬ್ಬರು ಹುಡುಗಿಯರು ಅಥವಾ ಹುಡುಗರ ನಡುವೆಯೂ ಆಗಬಹುದು. ತಾಯಿ ಮಗುವಿಗೆ ನೀಡುವುದು ವಾತ್ಸಲ್ಯದ ಮುತ್ತಾದರೆ, ಪ್ರೇಮಿ ಪ್ರೇಯಸಿಯರ ಚುಂಬನ ವೃತ್ತಾಂತದ ಬಗ್ಗೆ ಹೇಳುವುದೇ ಬೇಡ. ಈ ಕುರಿತಾಗಿ ಎಲ್ಲೂ ಆಕ್ಷೇಪಣೆ ಅಡ್ಡಿ, ಆತಂಕ, ವಿರೋಧ ಇರಬಾರದು.

ಎಷ್ಟೋ ಸಮಾಜಗಳು ಖುಲ್ಲಂಖುಲ್ಲ ಇಂಥ ಚುಂಬನವನ್ನು ಸ್ವೀಕರಿಸಲು ಹಿಂಜರಿಯುತ್ತವೆ, ಆದರೆ ಅದು ತಪ್ಪು. ಚುಂಬನ ಪ್ರೇಮ ಅಥವಾ ಸೆಕ್ಸ್ ನ ಆರಂಭ ಇರಬಹುದು, ಆದರೆ ಇದು ಶುಭಾರಂಭ. ಇದರ ಕುರಿತಾಗಿ ಅಡ್ಡಿ ಆಕ್ಷೇಪಣೆಗಳಿದ್ದರೆ, ಅದರರ್ಥ ಸಮಾಜ ತನ್ನ ಮೇಲೆ ತನಗೇ ನಂಬಿಕೆ ಇಲ್ಲ ಎಂದು ಸಾರಿಕೊಂಡಂತಾಗುತ್ತದೆ ಹಾಗೂ ಅದಕ್ಕೆ ನಾಗರಿಕರ ವಿವೇಕದ ಮೇಲೆ ಸಂದೇಹವಿದೆ ಎಂದರ್ಥ.

ಯಾವ ಸಮಾಜಕ್ಕೆ ಸ್ವಯಂ ತನ್ನ ಮೇಲೆಯೇ ನಂಬಿಕೆ ಇಲ್ಲವೇ, ಅದು ಖಂಡಿತಾ ದುರ್ಬಲ ಹಾಗೂ ಪಶುಸಮಾನ ಎನಿಸುತ್ತದೆ. ಅದು ಒಟ್ಟುಗೂಡಿ ಒಂದಾಗಿ ಶತ್ರುಗಳ ವಿರುದ್ಧ ಹೋರಾಡಲಾರದು ಅಥವಾ ಪ್ರಕೃತಿ ಜೊತೆ ಹೆಜ್ಜೆ ಹಾಕಲಾರದು. ಅದಕ್ಕೆ ಪ್ರೇಮ, ಸೆಕ್ಸ್, ಮಕ್ಕಳು ಸುಖದಿಂದಲ್ಲ ದೈಹಿಕ ಅಗತ್ಯಗಳ ಕಾರಣ ಸಿಕ್ಕಿದ ಶಿಕ್ಷೆಯಾಗಿದೆ. ಇಂಥ ಅಸಂತುಷ್ಟ ಸಮಾಜ ಸದಾ ಮಹಾ ಒತ್ತಡದಲ್ಲಿ ಇರುತ್ತದೆ, ತನಗೆ ತಾನೇ ಕಿತ್ತಾಡುತ್ತಿರುತ್ತದೆ.

ಪತಿ ಪತ್ನಿ, ಪ್ರಿಯ ಪ್ರೇಯಸಿ, ಫ್ರೆಂಡ್ಸ್, ಅಪರಿಚಿತರ ನಡುವೆ ಆತ್ಮೀಯತೆ, ನಂಬಿಕೆ ಮೂಡಿಸಲು ಆತ್ಮವಿಶ್ವಾಸ ಜಾಗೃತಗೊಳಿಸಲು, ಆನಂದದ ಅನುಭೂತಿಯ ಲಾಭ ಪಡೆಯಲು ತುಟಿಗಳ ಭಾಷೆ ಅರಿಯಿರಿ. ಇದು ಶುಷ್ಕ ಶಬ್ದಗಳ ನೆರವಿಲ್ಲದೆ ಎಷ್ಟೋ ಸಂಗತಿಗಳನ್ನು ನೇರ ತಿಳಿಸುವ ಕಲೆಯಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ