ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಸತಿ ಶಾಲೆಗಳನ್ನು ಆರಂಭಿಸಿದೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಈ ಮೇಲಿನ ಶಿಕ್ಷಣ ಸಂಸ್ಥೆಗಳ ನೋಡ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಶಾಲೆಗಳ ವೈಶಿಷ್ಟ್ಯತೆಗಳು, ಪ್ರವೇಶ ಪ್ರಕ್ರಿಯೆ, ಮೀಸಲಾತಿ ವಿವರ ಸೌಲಭ್ಯಗಳ ಕುರಿತಂತೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 400ಕ್ಕೂ ಹೆಚ್ಚು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇದನ್ನು ಜವಾಹರ್ ನವೋದಯ ಶಾಲೆಗಳ ಮಾದರಿಯಲ್ಲಿ ಸ್ಥಾಪಿಸಲಾಗಿದೆ. ಆರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಶತಾಬ್ದಿ ಅಂಗವಾಗಿ 4 ಕಂದಾಯ ವಿಭಾಗಗಳಲ್ಲಿ ತಲಾ ಒಂದೊಂದು ಪರಿಶಿಷ್ಟ ಜಾತಿ ನವೋದಯ ಮಾದರಿ ಶಾಲೆಗಳನ್ನು ಆರಂಭಿಸಿತು. ನಂತರ ಪ್ರತಿ ಕಂದಾಯ ಜಿಲ್ಲೆಗೆ ಒಂದರಂತೆ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಆರಂಭಿಸಿತು. 1996-97ನೇ ಸಾಲಿನಿಂದ ಈವರೆಗೆ ಒಟ್ಟು 400ಕ್ಕೂ ಹೆಚ್ಚು ಮೊರಾರ್ಜಿ ದೇಸಾಯಿ ಶಾಲೆಗಳು ಆರಂಭಗೊಂಡಿವೆ.
ಪ್ರವೇಶ ಪ್ರಕ್ರಿಯೆ
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 6ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಪ್ರತಿ ವಸತಿ ಶಾಲೆಯಲ್ಲಿ 6ನೇ ತರಗತಿಗೆ ಕೇವಲ 50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಈ 50 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿನಿಯರಿಗೆ ಅವಕಾಶ ಕಡ್ಡಾಯವಾಗಿರುತ್ತದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮೊರಾರ್ಜಿ ದೇಸಾಯಿ ಶಾಲೆಗಳ ಸಂಖ್ಯೆ 179, ಪರಿಶಿಷ್ಟ ವರ್ಗದವರಿಗೆ 33 ವಸತಿ ಶಾಲೆಗಳಿವೆ. ಹಿಂದುಳಿದ ವರ್ಗಗಳಿಗೆ 132 ವಸತಿ ಶಾಲೆಗಳು ಅಲ್ಪಸಂಖ್ಯಾತರಿಗಾಗಿಯೇ 55 ವಸತಿ ಶಾಲೆಗಳಿವೆ. ಇದರ ಜೊತೆಗೆ ಶಿಕ್ಷಣ ಇಲಾಖೆಯಿಂದ ವರ್ಗಾವಣೆಗೊಂಡು 34 ವಸತಿ ಶಾಲೆಗಳು ಹಾಗೂ ಹುತಾತ್ಮರ ಹೆಸರಿನಲ್ಲಿ ಅಂದರೆ ಸಂಗೊಳ್ಳಿ ರಾಯಣ್ಣ ಸ್ಮಾರಕ ನಿವಾಸ ಶಾಲೆ, ಕವಿರನ್ನ ಸ್ಮಾರಕ ವಸತಿ ಶಾಲೆ, ಗಾಂಧಿ ತತ್ವ ವಸತಿ ಶಾಲೆ (ಬಾಲಕಿಯರಿಗಾಗಿ) ಹಾಗೂ ಗಾಂಧಿ ತತ್ವ ಆಧಾರಿತ ವಸತಿ ಶಾಲೆ (ಬಾಲಕರಿಗಾಗಿ) ಗಳು ಇವೆ.
ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಗಳು
ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರ ವರದಿಯ ಮೇರೆಗೆ ಸರ್ಕಾರ 2009-10ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗಾಗಿ ಶೈಕ್ಷಣಿಕ ಹಿಂದುಳಿದ ತಾಲ್ಲೂಕುಗಳಲ್ಲಿ ತಲಾ ಒಂದೊಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಸರ್ಕಾರ ಸ್ಥಾಪಿಸಿದೆ.
ಈ ಶಾಲೆಗಳ ವೈಶಿಷ್ಟ್ಯಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ಆದ್ಯತೆ.
ಈ ಶಾಲೆಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿಯವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶ.
ಇಲ್ಲಿ ಪ್ರತಿ ಶಾಲೆಗೆ ಕೇವಲ 50 ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಕನಿಷ್ಠ ಶೇ.50ರಷ್ಟು ಸೀಟುಗಳು ಆಯಾ ತಾಲ್ಲೂಕಿನ ವಿದ್ಯಾರ್ಥಿನಿಯರಿಗೆ ಮೀಸಲು.
ಈ ವಸತಿ ಶಾಲೆಗಳಲ್ಲಿ ಬೋಧನಾ ಮಾಧ್ಯಮ ನವೋದಯ ವಸತಿ ಶಾಲೆಗಳಲ್ಲಿನ ಬೋಧನಾ ಮಾಧ್ಯಮದ ಹಾಗೆ ಆಂಗ್ಲ ಮಾಧ್ಯಮವೇ ಆಗಿರುತ್ತದೆ.
6ನೇ ತರಗತಿಗೆ ಮೊರಾರ್ಜಿ ದೇಸಾಯಿ ಶಾಲೆಗಳಿಗೆ ನಿಗದಿಪಡಿಸಿದಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಆಯಾ ಶೈಕ್ಷಣಿಕ ವರ್ಷದ ಮಾರ್ಚ್ ತಿಂಗಳ ಯಾವುದಾದರೊಂದು ಭಾನುವಾರ 5ನೇ ತರಗತಿ ಮುಗಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಲಾಗುವುದು.
ರೋಸ್ಟರ್ ಮತ್ತು ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿಯ ಆದ್ಯತೆ ಪರಿಗಣಿಸಿ ಗಣಕೀಕೃತ ವಿಧಾನದಲ್ಲಿ ಆಯ್ಕೆ ಮಾಡಿ ದಾಖಲಾತಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶದಿಂದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳನ್ನು ತೆರೆಯಲಾಯಿತು. ಇಲ್ಲಿ 612ನೇ ತರಗತಿಯವರೆಗೆ ವಸತಿಯೊಂದಿಗೆ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆಯಲು ಅವಕಾಶವಿದೆ. ಪ್ರತಿ ತರಗತಿಯ ವಿದ್ಯಾರ್ಥಿಗಳ ಪ್ರವೇಶ ಸಂಖ್ಯಾಬಲ ಪ್ರತಿ ವಿಭಾಗಕ್ಕೆ 40ರಂತೆ ಎರಡು ವಿಭಾಗಗಳಿಗೆ ಒಟ್ಟು 80 ವಿದ್ಯಾರ್ಥಿಗಳಿಗೆ ಅವಕಾಶವಿದೆ.
ಪ್ರವೇಶ ಸಂಖ್ಯಾಬಲದ ಶೇ.50 ಸೀಟುಗಳು ಗಂಡುಮಕ್ಕಳಿಗೆ ಹಾಗೂ ಉಳಿದ ಶೇ. 50 ಸೀಟುಗಳು ಹೆಣ್ಣುಮಕ್ಕಳಿಗೆ ಮೀಸಲಾಗಿರುತ್ತವೆ.
ಅಲೆಮಾರಿ/ ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ : 2008-09ನೇ ಸಾಲಿನಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗಾಗಿಯೇ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಲ್ಲಿ, ಬಳ್ಳಾರಿ ಜಿಲ್ಲೆಯ ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಹಾಗೂ ಹಾಸನ ಜಿಲ್ಲೆಯ ಬೇಲೂರು ವಿಧಾನಸಭೆ ಕ್ಷೇತ್ರಗಳಲ್ಲಿ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ.
ಈ ವಿಶೇಷ ವಸತಿ ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ದೊರಕದೇ ಹೋದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಪ್ರವೇಶ ಪ್ರಕ್ರಿಯೆ : ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಶಾಲೆಗಳ ಪ್ರವೇಶ ಕುರಿತಂತೆ ಪ್ರಕಟಣೆ ನೀಡಲಾಗುತ್ತದೆ. ಜನವರಿ ತಿಂಗಳಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳ ಕಛೇರಿ, ಎಲ್ಲಾ ವಸತಿ ಶಾಲೆಗಳು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ಮತ್ತು ಹಿಂದುಳಿದ ವರ್ಗದ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಅರ್ಜಿ ವಿತರಣೆ ಮಾಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ವಸತಿ ಶಾಲೆಯ ಪ್ರಾಂಶುಪಾಲರಿಗೆ ಸಲ್ಲಿಸಬೇಕಾಗುತ್ತದೆ.
ಪ್ರವೇಶ ಪರೀಕ್ಷೆ ಮಾಧ್ಯಮ : ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಇರುತ್ತದೆ. ವಿದ್ಯಾರ್ಥಿಗಳು ಇಚ್ಛಾನುಸಾರ ಕನ್ನಡ ಅಥವಾ ಆಂಗ್ಲ ಮಾಧ್ಯಮದಲ್ಲಿ ಉತ್ತರಿಸಬಹುದು.
ಉರ್ದು ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಗಣಿತ, ಸಾಮಾನ್ಯ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಾನುಸಾರ ಪ್ರಶ್ನೆ ಪತ್ರಿಕೆ ಉರ್ದು ಮಾಧ್ಯಮದಲ್ಲಿರುತ್ತದೆ.
ಪ್ರಶ್ನೆ ಪತ್ರಿಕೆಯ ಸ್ವರೂಪ : ಪ್ರವೇಶ ಪರೀಕ್ಷೆಯು ಒಟ್ಟು 2 ಗಂಟೆ 30 ನಿಮಿಷದ್ದಾಗಿದ್ದು, ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ನೀಡಲಾಗುತ್ತದೆ. ಗಣಿತ, ಸಾಮಾನ್ಯ ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ, ಆಂಗ್ಲ ಹೀಗೆ 5 ವಿಷಯಗಳಿರುತ್ತವೆ. ಎಲ್ಲ 5 ಭಾಷೆಗಳೂ ತಲಾ 20 ಅಂಕ ಹೊಂದಿರುತ್ತವೆ.
ಉತ್ತರ ಬರೆಯುವ ವಿಧಾನ : ವಿದ್ಯಾರ್ಥಿಗಳು ಉತ್ತರಗಳನ್ನು ಪ್ರಶ್ನೆ ಪತ್ರಿಕೆಯಲ್ಲೇ ಬರೆಯಲು ಅವಕಾಶ ಕಲ್ಪಿಸಲಾಗಿದೆ. ನಿಗದಿಪಡಿಸಿರುವ ಸ್ಥಳದಲ್ಲೇ ಉತ್ತರ ಬರೆಯಬೇಕಾಗುತ್ತದೆ. ಹೀಗೆ ಉತ್ತರಿಸಿದ ಪ್ರಶ್ನೋತ್ತರ ಪತ್ರಿಕೆಗಳನ್ನು ನಂತರ ಹಿಂದಿರುಗಿಸಬೇಕಾಗುತ್ತದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಂ.179, 1 ಮತ್ತು 3ನೇ ಮಹಡಿ, ರೂಪಾ ಕಾಂಪ್ಲೆಕ್ಸ್, 1ನೇ ಮುಖ್ಯ ರಸ್ತೆ, ಬೆಂಗಳೂರು-20.