ಪ್ರಕರಣ-1
ನಿರ್ಮಲಾಗೆ ಹದಿನೆಂಟರ ಹರೆಯ. ಎರಡನೇ ಡಿಗ್ರಿಯಲ್ಲಿ ಓದುತ್ತಿದ್ದಾಳೆ. `ಮನೆಯಲ್ಲಿ ನನ್ನನ್ನು ಯಾರೂ ಗಮನಿಸುವುದೇ ಇಲ್ಲ. ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳುವುದೂ ಇಲ್ಲ. ನಾನೆಂದರೆ ಅವರಿಗೆ ಒಂದು ರೀತಿ ಉದಾಸೀನತೆ, ಗೆಳತಿಯರ ಬಳಗದಲ್ಲೂ ಅಷ್ಟೇ, ಬರಿಯ ಗ್ರೂಪಿಸಮ್,’ ಎನ್ನುತ್ತಾಳೆ ಚೆಂದದ ಮುದ್ದು ಹುಡುಗಿ. ಕವಿತೆಗಳು, ಒಳ್ಳೆಯ ಹನಿಗವನಗಳನ್ನು ಬರೆಯುತ್ತಾಳೆ. `ನನ್ನನ್ನು ಯಾರೂ ಗುರುತಿಸುವುದಿಲ್ಲ,’ ಎನ್ನುವುದೇ ಅವಳ ಬೇಸರ ಮತ್ತು ಖಿನ್ನತೆಗೆ ಕಾರಣ.
ಪ್ರಕರಣ-2
ಪ್ರೇಮಾಗೆ ಹತ್ತೊಂಬತ್ತರ ವಯಸ್ಸು. ಮನೆಯ ಕೆಲವು ಅನಿವಾರ್ಯಗಳಿಂದ ಮಧ್ಯದಲ್ಲಿ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ಕೆಲವು ದಿನ ಉದ್ಯೋಗಕ್ಕೆ ಸೇರಿದಳು, ಮತ್ತೆ ಈಗ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾಳೆ. `ನಾನು ಏನು ಮಾಡಿದರೂ ಅಷ್ಟೆ, ಯಾಕೋ ನನಗೆ ಯಾವುದರಲ್ಲೂ ಯಶಸ್ಸು ದೊರಕುತ್ತಿಲ್ಲ. ನನ್ನಲ್ಲಿ ಆತ್ಮವಿಶ್ವಾಸವೇ ಹೊರಟುಹೋಗಿದೆ. ನನ್ನ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನನ್ನ ಅದೃಷ್ಟವೇ ಇಷ್ಟೇನೇನೋ?’ ಎಂದು ಬೇಸರಿಸಿಕೊಂಡು ಕಣ್ಣೀರಿಡುತ್ತಾಳೆ.
ಪ್ರಕರಣ-3
ಗೀತಾಳಿಗೆ ಫೇಸ್‌ಬುಕ್ ಅಂದರೆ ಬಹಳ ಇಷ್ಟ ಆಗಾಗ ತನ್ನ ಫೋಟೋಗಳನ್ನು ಅಪ್‌ಲೋಡ್ ಮಾಡುವುದು, ಅನ್ಯರಿಂದ ಅದಕ್ಕೆ ಲೈಕ್ ಅಥವಾ ಕಾಮೆಂಟ್ ಪಡೆಯುವುದು ಮಿಕ್ಕವರಿಗೆ ತನ್ನ ಕಾಮೆಂಟ್ ನೀಡುವುದು ಇವುಗಳನ್ನು ಮಾಡುತ್ತಾ ಅವಳಿಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ದಿನದಲ್ಲಿ ಮೂರು ಗಂಟೆಗಳಿಗಿಂತ ಹೆಚ್ಚು ಹೊತ್ತು ಅದರಲ್ಲಿ ಕಳೆದುಹೋಗುತ್ತಿತ್ತು. ಹೀಗಾಗಿ ಓದಿನಲ್ಲಿ ಅವಳು ಹಿಂದೆ ಉಳಿದಳು. ಇದು ಫೇಸ್‌ಬುಕ್‌ನಿಂದಾದ ಫಲ ಎಂದು ಅವಳಿಗೆ ಅರ್ಥಾಗಲು ಪ್ರಾರಂಭವಾಯಿತು. ಈಗ ತನ್ನನ್ನು ತಾನು ಫೇಸ್‌ಬುಕ್‌ನಿಂದ ದೂರವಿಡಲು ಪ್ರಯತ್ನಿಸುತ್ತಿದ್ದಾಳೆ.
ಪ್ರಕರಣ-4
ಪ್ರಣೀತಾಳಿಗೆ ಮೊಬೈಲ್ ಇಲ್ಲದೆ ಜೀವನವೇ ಇಲ್ಲ. ಕರೆನ್ಸಿ ಮುಗಿದು ಹೋದರೆ ಹಾಕಿಸಿಕೊಳ್ಳುವವರೆಗೂ ಅವಳಿಗೆ ತಡಯಲಾಗದು. ಬಸ್ಸಿನಲ್ಲಿದ್ದರೂ ಅಷ್ಟೇ, ಮನೆಯಲ್ಲಿದ್ದರೂ ಅಷ್ಟೇ ಹೊರಗೆ ನಡೆದಾಡುವಾಗಲೂ ಅವಳಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಇರಬೇಕು. ಅದಿಲ್ಲದೆ ಅವಳು ಸ್ವಲ್ಪ ಹೊತ್ತೂ ಇರಲಾರಳು. ಅವಳೊಂದು ರೀತಿಯಲ್ಲಿ ಮೊಬೈಲ್ ಅಡಿಕ್ಟ್ ಆಗಿದ್ದಾಳೆ ಎನ್ನಬಹುದು. ಹದಿ ಹರೆಯದಲ್ಲಿ ಇಂತಹ ಪ್ರಕರಣಗಳು ಬಹು ಸಾಮಾನ್ಯ. ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.
ಅಡೋಲೋಸೆನ್ಸ್ ಎಂದರೇನು?
ಬಾಲ್ಯದಿಂದ ಪ್ರೌಢಾವಸ್ಥೆಗೆ ತಲುಪುವ ಮುಂಚಿನ ಒಂದು ಹಂತ. ಅಂದರೆ ಎ ಟ್ರಾನ್ಸಿಶನ್ ಪೀರಿಯಡ್ ಫ್ರಂ ಚೈಲ್ಡ್ ಹುಡ್ ಟು ಅಡ್ಟ್ ಹುಡ್. ಈ ಹಂತದಲ್ಲಿ ಬಹಳಷ್ಟು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆಯ ಹಂತದಲ್ಲಿ ಹದಿಹರೆಯದವರು ಬಹಳ ಸೂಕ್ಷ್ಮ ಮನಸ್ಸಿನವರಾಗಿಬಿಡುತ್ತಾರೆ. ಅನೇಕ ಬಾರಿ ತಮ್ಮಲ್ಲಿನ ಆತ್ಮವಿಶ್ವಾಸ ಕಳೆದುಕೊಂಡುಬಿಡುತ್ತಾರೆ. ನಾಚಿಕೆ ಶುರುವಾಗುತ್ತದೆ. ಬಹಳ ಬೇಗ ಸಿಟ್ಟು ಬಂದುಬಿಡುತ್ತದೆ. ಈ ಸಮಯದಲ್ಲಿ ಅವರಿಗೆ ಹೆಚ್ಚು ಹೆಚ್ಚು ಸ್ನೇಹಿತರಾಗುತ್ತಾರೆ. ಅವರ ಸೋಶಿಯಲ್ ಸರ್ಕಲ್ ಬೆಳೆಯುತ್ತದೆ. ತಮ್ಮನ್ನು ತಾವು ರೂಪಿಸಿಕೊಳ್ಳುವಲ್ಲಿ, ತಮ್ಮದೊಂದು ಐಡೆಂಟಿಟಿಯನ್ನು ಕಂಡುಕೊಳ್ಳುವ ಹಂತದಲ್ಲಿ ತಮ್ಮ ಸ್ನೇಹಿತರಿಂದ ಬಹಳ ಪ್ರಭಾವಿತರಾಗುತ್ತಾರೆ. ನಿಜಕ್ಕೂ ಇದು ಆರೋಗ್ಯಕಾರಿ ಬೆಳವಣಿಗೆಯೇ, ಆದರೆ ಅನೇಕ ಬಾರಿ ಒತ್ತಡಗಳಿಗೆ ಒಳಗಾಗುವುದೂ ಉಂಟು. ಆದ್ದರಿಂದ ಈ ಸಮಯದಲ್ಲಿ ಅವರಿಗೆ ಮಾನಸಿಕವಾಗಿ ಬೆಂಬಲ ನೀಡುವರು. ಅವರನ್ನು ಅರ್ಥ ಮಾಡಿಕೊಳ್ಳುವವರು ಬೇಕಾಗುತ್ತದೆ. ಅವರ ಮನಸ್ಸು ಒಂದು ರೀತಿಯ ರೋಲರ್ ಕೋಸ್ಟರ್‌ನಂತೆ. ಒಮ್ಮೆ ಮೇಲೆ, ಒಮ್ಮೆಲೇ ಕೆಳಗೆ, ಉಲ್ಟಾ ಪಲ್ಟಾ ಆಗುವಂತೆ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆ ಪರಿಣಾಮವನ್ನು ಬೀರುತ್ತದೆ ಎನ್ನುತ್ತಾರೆ ಮಾನಸಿಕ ವೈದ್ಯರು.
ಅವರು ಎದುರಿಸಬೇಕಾದ ಒತ್ತಡಗಳು
ಈಗಿನ ಮಕ್ಕಳನ್ನು ಏನು ಓದುತ್ತೀಯಾ? ಎಂದು ಕೇಳಿದರೆ ಬರಿಯ ಬಿಎಸ್ಸಿ ಅಥವಾ ಬಿ.ಎ. ಎನ್ನುವುದಿಲ್ಲ. ಮಾಸ್ಟರ್ ಡಿಗ್ರಿಗಳ ಬಗ್ಗೆಯೇ ಹೇಳುತ್ತಾರೆ. ಎಂ.ಕಾಂ.. ಎಂ.ಎಸ್ಸಿ, ಎಂ.ಎ. ಎಂ.ಫಿಲ್ ಎನ್ನುವ ಉತ್ತರ ಬರುತ್ತದೆ. ಇದು ಅವರು ತಮ್ಮಲ್ಲೇ ಬೆಳೆಸಿಕೊಂಡ ಆಸೆ ಇರಬಹುದು ಅಥವಾ ಪೇರೆಂಟ್ ಪ್ರೆಶರ್ ಇರಬಹುದು ಅಥವಾ ಮತ್ತೊಬ್ಬ ಸ್ನೇಹಿತ/ ಸ್ನೇಹಿತೆ ಅಥವಾ ರಿಲೇಟಿವ್ಸ್/ಕಸಿನ್ಸ್ ರ ಮಾತುಗಳ ಪರಿಣಾಮದ ಪಿಯರ್ ಪ್ರೆಶರ್ ಇರಬಹುದು. ತಾವು ಓದು ಓದಿನ ಜೊತೆ ಜೊತೆಗೆ ಮತ್ತೊಂದಷ್ಟು ಕಂಪ್ಯೂಟರ್ ಕೋರ್ಸ್‌ಗಳು, ಬಿ.ಕಾಂ. ಜೊತೆ ಸಿ.ಎ., ಟ್ಯಾಲಿ, ಜೊತೆಗೆ ಈಗಿನ ರಿಯಾಲಿಟಿ ಶೋಗಳ ಪ್ರಭಾವ ಎಲ್ಲರಿಗೂ ಟಿ.ವಿ.ಯಲ್ಲಿ ಕಾಣಿಸಿಕೊಳ್ಳುವ ಆಸೆ. ಎಲ್ಲರಿಗೂ ತಾವು ಫೇಮಸ್ ಸಿಂಗರ್ಸ್ ಆಗಬೇಕು, ಫೇಮಸ್ ಡ್ಯಾನ್ಸರ್ಸ್ ಆಗಬೇಕು ಎನ್ನುವ ಆಸೆಗಳಿರುತ್ತವೆ. ಹಾಗಾಗಿ ಬರಿಯ ಓದು ಮಾತ್ರವಷ್ಟೇ ಅವರ ಮುಂದಿರುವುದಿಲ್ಲ. ಮಲ್ಟಿ ಟಾಸ್ಕ್ ಎನ್ನುವಂತೆ ಮತ್ತೊಂದಷ್ಟು ಒತ್ತಡಗಳೂ ಅವರಿಗಿರುತ್ತದೆ.
ಇವುಗಳ ಜೊತೆ ವಯಸ್ಸಿನ ಪ್ರಭಾವ, ಸಹಜ ಆಕರ್ಷಣೆ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಪ್ರಕರಣಗಳು ಶುರುವಾಗುತ್ತವೆ. ತಮ್ಮ ಫ್ರೆಂಡ್ಸ್ ಜೊತೆ ಮಾತನಾಡುವಾಗ `ಎಲ್ಲರಿಗೂ ಬಾಯ್ಸ್ ಫ್ರೆಂಡ್ಸ್ ಗರ್ಲ್ಸ್ ಫ್ರೆಂಡ್ಸ್ ಇರುವುದು ಸಹಜ, ತುಂಬಾ ಕಾಮನ್’ ಎನ್ನುವ ಭಾವನೆ ಬರುತ್ತದೆ. ಮತ್ತೆ ಕೆಲವರು `ನಿನಗೆ ಬಾಯ್ ಫ್ರೆಂಡ್ ಇಲ್ವಾ?’ ಎನ್ನುವ ಕೊಂಕು, ಬಾಯ್ ಫ್ರೆಂಡ್ ಇಲ್ಲಾಂದ್ರೆ ಅದೇನೋ ಕೊರತೆ ಅಥವಾ ಡಿಫೆಕ್ಟ್ ಅನ್ನುವ ಹಾಗೆ ಮಾತಾಡುತ್ತಾರೆ. ಆದರೆ ಮನೆಯಲ್ಲೇನಾದರೂ ಬಾಯ್ ಫ್ರೆಂಡ್ ಎನ್ನುವ ಮಾತನ್ನು ಎತ್ತಿದರೆ ದೊಡ್ಡ ರಾಮಾಯಣವೇ ಆಗಿಬಿಡುತ್ತದೆ. ಹೀಗಾಗಿ ಯಾವುದು ತಪ್ಪು, ಯಾವುದು ಸರಿ ಅನ್ನುವ ತೊಳಲಾಟ ಪ್ರಾರಂಭವಾಗುತ್ತದೆ.
ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಲು, ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು…..ಇಂತಹ ಸಮಯದಲ್ಲಿ ಯಾರ ಹತ್ತಿರವಾದರೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳೋಣ ಎಂದೆನಿಸುತ್ತದೆ. ಆದರೆ ಯಾರ ಹತ್ತಿರ ಹೇಳುವುದೆಂದು ಮಾತ್ರ ಗೊತ್ತಾಗುವುದಿಲ್ಲ. ಸ್ನೇಹಿತರಿಗೆ ಹೇಳಿದರೆ ಅವರು ಮತ್ತೊಬ್ಬರಿಗೆ ಹೇಳಬಹುದು, ಗುಂಪಿನಲ್ಲಿದ್ದಾಗ ಗೇಲಿ ಮಾಡಬಹುದು, ತಂದೆ ತಾಯಿ ಇಬ್ಬರೂ ಉದ್ಯೋಗಸ್ಥರಾದರೆ ಅವರ ಬಿಝಿ ಲೈಫ್‌ನಲ್ಲಿ ಅವರಿಗೆ ಇವರ ಮಾತನ್ನು ಕೇಳಲು ಸಮಯ ಇಲ್ಲದಿರಬಹುದು. ಆದರೆ ಅನೇಕ ಬಾರಿ ಮನಸ್ಸಿನಲ್ಲಿರುವುದನ್ನು ಯಾರಿಗಾದರೂ ಹೇಳಲೇಬೇಕು ಎನ್ನುವ ಒತ್ತವಿರುತ್ತದೆ. ಇಂತಹ ಸಮಯದಲ್ಲಿ ಸಹಾಯಕ್ಕೆ ಬರುವುದು ಆಪ್ತ ಸಮಾಲೋಚನೆ.
ಆಪ್ತ ಸಮಾಲೋಚನೆ ಎಂದರೇನು?
ಆಪ್ತ ಸಮಾಲೋಚನೆ ಅಂದರೆ ನಿಮ್ಮ ಭಾವನೆಗಳನ್ನು, ಸಮಸ್ಯೆಗಳನ್ನು, ತೊಂದರೆಗಳನ್ನು ಸೂಕ್ತ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದು. ಅಲ್ಲಿ ಅದು ಮತ್ಯಾರಿಗಾದರೂ ತಲುಪಬಹುದು ಎನ್ನುವ ಯಾವ ಅಳುಕೂ ಬೇಕಾಗಿಲ್ಲ. ನೂರಕ್ಕೆ ನೂರರಷ್ಟು ಗೋಪ್ಯತೆಯನ್ನು ಕಾಪಾಡಲಾಗುತ್ತದೆ. ಯಾವುದೇ ಸಂಕೋಚವಿಲ್ಲದೆ ವಿದ್ಯಾರ್ಥಿಗಳು ತಮ್ಮ ಯಾವುದೇ ಸಮಸ್ಯೆಗಳನ್ನು ಆಪ್ತ ಸಮಾಲೋಚಕರೊಡನೆ, ಕೌನ್ಸಿಲರ್ಸ್‌ಜೊತೆ ಖಂಡಿತಾ ಹಂಚಿಕೊಳ್ಳಬಹುದು. ಕೌನ್ಸಿಲಿಂಗ್ ಅಂದ ಮಾತ್ರಕ್ಕೆ ಅದು ಯಾವುದೋ ಬಹಳ ಸೀರಿಯಸ್ ತೊಂದರೆ ಎಂದುಕೊಳ್ಳುವ ಅಗತ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಆಪ್ತ ಸಮಾಸೋಚನೆ ಸಹಾಯಕವಾಗುತ್ತದೆ.
“ಅವರು ಇತ್ತ ಮಕ್ಕಳೂ ಅಲ್ಲ ದೊಡ್ಡರೂ ಅಲ್ಲ, ಅವರ ಮನಸ್ಸಿನಲ್ಲಿ ಸಾಕಷ್ಟು ತೊಳಾಟಗಳಿರುತ್ತವೆ. ಜೊತೆಗೆ ಮಾಧ್ಯಮಗಳ ಪ್ರಭಾವ ಅವರ ವ್ಯಕ್ತಿತ್ವವನ್ನು ಅಲ್ಲಾಡಿಸಿಬಿಡುತ್ತದೆ. ಅಂತಹ ಸಮಯದಲ್ಲಿ ಪೋಷಕರು ಮತ್ತು ಶಿಕ್ಷಕರಿಗಿಂತ ಕೌನ್ಸಿಲರ್ಸ್ ನೀಡುವ ಸಾಂತ್ವನದ ಮಾತು ಕೆಲಸ ಮಾಡಬಲ್ಲದು. ಆದ್ದರಿಂದ ಈ ಸೂಕ್ಷ್ಮ ವಯಸ್ಸಿನಲ್ಲಿ ಕೌನ್ಸಿಲಿಂಗ್ ಅಗತ್ಯವೇ ಸರಿ,” ಎನ್ನುತ್ತಾರೆ ಪ್ರಸನ್ನ, ಆಪ್ತ ಸಲಹಾ ಕೇಂದ್ರದ ಮಲ್ಲೇಶ್ವರಂ ಶಾಖೆಯ ಗೌರವ ಕಾರ್ಯ ದರ್ಶಿನಿಯರಾದ ಪೂರ್ಣಿಮಾ ಪುರೋಹಿತ್.
ಹಿಂದಿನ ಕಾಲದಲ್ಲಿ ಆಪ್ತ ಸಮಾಲೋಚನೆ ಹಾಗಾದರೆ ಹಿಂದೆ ಈ ರೀತಿ ಟೀನ್ ಏಜರ್ಸ್ ಅರ್ಥಾತ್ ಹದಿಹರೆಯದವರಿಗೆ ಯಾವ ಒತ್ತಡ ಇರುತ್ತಿರಲಿಲ್ಲವೇ? ಅವರೇನೂ ತಪ್ಪೇ ಮಾಡುತ್ತಿರಲಿಲ್ಲವೇ? ಎನ್ನುವ ವಿಚಾರ ಬರುವುದುಂಟು. ಆಗಲೂ ಸಹ ಸಮಸ್ಯೆಗಳು ಇರುತ್ತಿದ್ದವು. ಆದರೆ ಆಗ ಅವಿಭಕ್ತ ಕುಟುಂಬಗಳು ಅಂದರೆ ಜಾಯಿಂಟ್ ಫ್ಯಾಮಿಲೀಸ್, ತಮ್ಮ ಭಾವನೆಗಳನ್ನು, ತೊಳಲಾಟಗಳನ್ನು ಹಂಚಿಕೊಳ್ಳಬೇಕೆನಿಸಿದಾಗ, ಅಕ್ಕನೋ, ತಂಗಿಯೋ ಅಥವಾ ಸೋದರತ್ತೆ, ಸೋದರಮಾವ ಈ ರೀತಿ ಮನೆಯ ತುಂಬಾ ಜನ ಇರುತ್ತಿದ್ದರು. ಆದರೆ ಈಗೆಲ್ಲಾ ವಿಭಕ್ತ ಕುಟುಂಬಗಳು ಅರ್ಥಾತ್ ನ್ಯೂಕ್ಲಿಯರ್ ಫ್ಯಾಮಿಲೀಸ್ ಆಗಿರುವುದರಿಂದ ಮನೆಯಲ್ಲಿ ಇರುವ ಜನರೇ ಕಡಿಮೆ, ಇರುವವರಿಗೆ ಕೇಳುವ ವ್ಯವಧಾನ ಇರುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಅವರಿಗೆ ಮಾನಸಿಕವಾಗಿ ಬೆಂಬಲ ನೀಡುವವರು, ಅವರನ್ನು ಅರ್ಥ ಮಾಡಿಕೊಳ್ಳುವವರು ಬೇಕಾಗುತ್ತದೆ. ವಿದೇಶಗಳಲ್ಲಿ ಟೀನ್ ಏಜರ್ಸ್ ಅರ್ಥಾತ್ ಹದಿಹರೆಯದವರಿಗೆಂದೇ ಹೆ್ಪೈ್‌ನ್‌ಗಳಿರುತ್ತವೆ. ಶಾಲಾ, ಕಾಲೇಜುಗಳಲ್ಲಿ ಕೌನ್ಸಿಲರ್ಸ್ ಇರುತ್ತಾರೆ. ರಿಚ್ಮಂಡ್ ಫೆಲೋಶಿಪ್ಸ್ ಸೊಸೈಟಿ ಆಫ್ ಇಂಡಿಯಾದ ಆಡಳಿತ ಮಂಡಳಿಯ ಸದಸ್ಯರು ಮತ್ತು ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಖ್ಯಾತ ಮನೋವೈದ್ಯರಾದ ಡಾ. ಶ್ರೀಧರ ಮೂರ್ತಿಯವರು, “ಅನೇಕ ಬಾರಿ ಹದಿಹರೆಯದವರು ಬಹಳ ಸಣ್ಣ ವಿಷಯಗಳಿಗೆ ಆತ್ಮಹತ್ಯೆಗೆ ಶರಣಾಗಿಬಿಡುತ್ತಾರೆ. ಪೋಷಕರಿಗೆ ಅವರು 90% ಅಂಕಗಳನ್ನು ತೆಗೆಯುವುದೇ ಮುಖ್ಯ ಗುರಿ, ಶಾಲಾ ಕಾಲೇಜುಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಬರಬೇಕು.
“ಹೀಗಾಗಿ ಮಕ್ಕಳು ಬಹಳಷ್ಟು ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಬಹಳ ಸೂಕ್ಷ್ಮತೆಯಿಂದ ಅವರನ್ನು ಅರ್ಥ ಮಾಡಿಕೊಂಡು ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡುವವರು ಬೇಕಾಗುತ್ತದೆ. ಈ ಕೆಲಸವನ್ನು ಸರಿಯಾದ ಕೌನ್ಸಿಲರ್ಸ್‌ಖಂಡಿತಾ ನಿಭಾಯಿಸಬಲ್ಲರು,” ಎಂದು ಅಭಿಪ್ರಾಯಪಡುತ್ತಾರೆ.
ಪ್ರಸ್ತುತ ನಮ್ಮ ದೇಶದಲ್ಲಿ ಕೌನ್ಸಿಲಿಂಗ್‌ರಲ್ಲಿ ಯು.ಜಿ.ಸಿ.ಯಿಂದ 500 ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್‌ನಲ್ಲಿ ತರಬೇತಿ ಪಡೆದ ಶಿಕ್ಷಕರೊಬ್ಬರಿರಬೇಕು ಎನ್ನುವ ಪ್ರಸ್ತಾಪವನ್ನು ಶಾಲಾ ಕಾಲೇಜುಗಳ ಮುಂದೆ ಇಟ್ಟಾಗ ಆಯಾ ಕಾಲೇಜಿನಿಂದಲೇ ಇಬ್ಬರು ಅಧ್ಯಾಪಕ/ಕಿಯರಿಗೆ ತರಬೇತಿ ನೀಡಿ ಅಗತ್ಯವಿದ್ದಾಗ ಅವರಿಂದ ವಿದ್ಯಾರ್ಥಿನಿಯರಿಗೆ ಕೌನ್ಸಿಲಿಂಗ್ ಮಾಡಲಾಗುತ್ತಿತ್ತು. ಅಲ್ಲಿಯ ಅಧ್ಯಾಪಕ/ಕಿಯರಿಂದ ಸಾಧ್ಯವಾಗದಿದ್ದಾಗ ವೃತ್ತಿನಿರತ ಕೌನ್ಸಿಲರ್ಸ್ ಮತ್ತು ಮಾನಸಿಕ ತಜ್ಞರನ್ನು ಕರೆಸಲಾಗುತ್ತಿತ್ತು. ಅನೇಕ ಬಾರಿ ವಿದ್ಯಾರ್ಥಿನಿಯರನ್ನು ಕೌನ್ಸಿಲಿಂಗ್ ಸೆಂಟರ್ಸ್‌ಗೆ ಕಳುಹಿಸಲಾಗುತ್ತಿತ್ತು. ಇದು ಅನೇಕ ಕಾಲೇಜುಗಳಲ್ಲಿನ ಚಿತ್ರಣ. ಆದರೆ ಈಗಿನ ಜೀವನಶೈಲಿಯ ಜೊತೆ ಜೊತೆಗೆ ಹೆಚ್ಚುತ್ತಿರುವ ಖಿನ್ನತೆ ಮತ್ತು ಒತ್ತಡಗಳನ್ನು ಕಂಡಾಗ ನಿಯಮಿತವಾಗಿ ವಿದ್ಯಾರ್ಥಿ/ನಿಯರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅನುವಾಗುವಂತೆ ಬಹಳಷ್ಟು ಕಾಲೇಜುಗಳಲ್ಲಿಯೇ ಕೌನ್ಸಿಲಿಂಗ್‌ವೇದಿಕೆಯನ್ನು ಪ್ರಾರಂಭ ಮಾಡಲಾಗಿದೆ. ಈ ಮೂಲಕ ಅವರಿಗೆ ಕೌನ್ಸಿಲಿಂಗ್ ಬಗ್ಗೆ ತಪ್ಪು ಭಾವನೆಯನ್ನು ಹೋಗಲಾಡಿಸಿ ಅಗತ್ಯವಿರುವಾಗ ಅವರು ಮುಕ್ತವಾಗಿ ಕೌನ್ಸಿಲಿಂಗ್ ಸೌಲಭ್ಯವನ್ನು ಪಡೆದುಕೊಳ್ಳಲಿ, ಅಲ್ಲದೆ ಈ ಸಮಸ್ಯೆಗಳು ಅವರ ಓದಿಗೆ ಅಡಚಣೆಯಾಗದಿರಲಿ ಎನ್ನುವುದೇ ಆಡಳಿತ ವರ್ಗದ ಆಶಯ. ಆದ್ದರಿಂದ ಇಲ್ಲೂ ಸಹ ನಿಸ್ಸಂಕೋಚದಿಂದ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಒತ್ತಡಗಳನ್ನು ಎದುರಿಸಲು ಆಪ್ತ ಸಮಾಲೋಚಕರ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಆದ್ದರಿಂದ ಬಹಳಷ್ಟು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಯಮಿತವಾಗಿ ಕೌನ್ಸಿಲಿಂಗ್ ಸೆಷನ್ಸ್ ನಡೆಸಲಾಗುತ್ತಿದೆ.
ಎಂ.ಎಲ್.ಎ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆರ್. ಮಾಧವಿ ಮತ್ತು ಅದೇ ಕಾಲೇಜಿನಲ್ಲಿ ಕೌನ್ಸಿಲಿಂಗ್ ತರಬೇತಿ ಪಡೆದ ಡಾ. ರಾಣಿ ಸಂದು, “ಶಾಲಾ ಕಾಲೇಜುಗಳಲ್ಲಿ ಪಾಠಗಳು ಎಷ್ಟು ಮುಖ್ಯವೋ ಜೊತೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಮತ್ತು ತಳಮಳಗಳನ್ನು ಹಂಚಿಕೊಳ್ಳಲು ಕೌನ್ಸಿಲಿಂಗ್ ಸಹಾ ಅಷ್ಟೇ ಮುಖ್ಯ. ತನ್ಮೂಲಕ ಅವರ ಮನ ಹಗುರವಾಗಿ ಅವರಿಗೆ ಓದಿನ ಮೇಲೆ ಗಮನಹರಿಸಲು ಸಾಧ್ಯ,” ಎಂದು ಅಭಿಪ್ರಾಯಪಡುತ್ತಾರೆ.
ಅರುಣ ಚೇತನ ಶಾಲೆಯ ಪ್ರಾಂಶುಪಾಲರಾದ ಗಾಯತ್ರಿ ಪಂಜು, “ಈಗಿನ ಮಕ್ಕಳಿಗೆ ಎಲ್ಲಾ ಇದ್ದು ಏನೂ ಇಲ್ಲ ಎನ್ನುವ ಭಾವ. ಒಂದು ರೀತಿಯಲ್ಲಿ ಇರುವುದೆಲ್ಲ ಬಿಟ್ಟು ಇಲ್ಲದರೆಡೆಗೆ ತುಡಿತ, ಬರಿಯ ಶಾಪಿಂಗ್ ಅಥವಾ ಮೊಬೈಲ್ ಅವರನ್ನು ಹಿಡಿದಿಟ್ಟುಕೊಂಡಿದೆ. ಅವುಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಆದ್ದರಿಂದ ಅವುಗಳಿಂದ ಹೊರ ಬಂದು ವಾಸ್ತವ ಪ್ರಪಂಚದ ಅರಿವು ಅವರಿಗಾಗ ಬೇಕೆಂದರೆ ಖಂಡಿತ ಅವರಿಗೆ ಕೌನ್ಸಿಲಿಂಗ್ ಅಗತ್ಯ,” ಎನ್ನುತ್ತಾರೆ.
ಶಾಲಾ ಕಾಲೇಜುಗಳ ಆಡಳಿತ ವರ್ಗದವರು ಈ ಬಗ್ಗೆ ಗಮನಹರಿಸಿ, ನಿಯಮಿತವಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆದಾಗ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಖಂಡಿತ ಸಹಾಯವಾದೀತು, ಅಲ್ಲವೇ?
– ಮಂಜುಳಾ ರಾಜ್