ಅಜಾಯಿತಾ ಹುಟ್ಟಿ ಬೆಳೆದದ್ದು, ಶಿಕ್ಷಣ ಪೂರೈಸಿದ್ದೆಲ್ಲ ನ್ಯೂಯಾರ್ಕಿನಲ್ಲಿ. ಆದರೆ ಈಕೆಗೆ, ತಮ್ಮ ಕೆರಿಯರ್‌ ಮತ್ತು ಭವಿಷ್ಯವನ್ನು ತಮ್ಮಿಷ್ಟದಂತೆ ರೂಪಿಸಿಕೊಳ್ಳುವುದು ಸುಲಭದ ಪ್ರಶ್ನೆ ಆಗಿರಲಿಲ್ಲ. ತಮ್ಮ ಶಾಲಾ ದಿನಗಳಿಂದಲೇ ಅಜಾಯಿತಾ ಚರ್ಚಾ ಸ್ಪರ್ಧೆ, ಆಟೋಟಗಳಲ್ಲಿ ಸದಾ ಮುಂದು. 15 ತುಂಬುವಷ್ಟರಲ್ಲೇ ಆಕೆ ಸ್ವಾವಲಂಬಿ ಆಗಿದ್ದರು. ಬೋಸ್ಟನ್‌ನ  ಟಫ್ಸ್ ಯೂನಿವರ್ಸಿಟಿಯಲ್ಲಿ ಸ್ನಾತಕ ಪದವಿ ಪಡೆದ ಮೇಲೆ, ಸ್ಪೇನ್‌ ಹಾಗೂ ವಾಶಿಂಗ್‌ಟನ್‌ನಲ್ಲಿ ತಮ್ಮ ಶಿಕ್ಷಣ ಪೂರೈಸಿದರು.

ಕಾಲೇಜಿನ ಕೊನೆಯ ಘಟ್ಟದಲ್ಲಿ ಅವರು ತಮ್ಮ ಪ್ರಾಜೆಕ್ಟ್ಸ್ ಪೂರೈಸಿಕೊಳ್ಳಲು ಹಲವಾರು ಸಲ ಭಾರತಕ್ಕೆ ಬರಬೇಕಾಯಿತು. ಭಾರತದ ಗ್ರಾಮೀಣ ಮಹಿಳೆಯರು ತಮ್ಮ ಕುಟುಂಬ ಮುನ್ನಡೆಸಲು ಪಡುತ್ತಿರುವ ಪಾಡು ಕಂಡು ಗ್ರಾಮೀಣ ಮಹಿಳೆಯರಿಗಾಗಿ ತಾವೇನಾದರೂ ಮಾಡಲೇಬೇಕು ಎನಿಸಿತು. ಮೈಕ್ರೋ ಫೈನಾನ್ಸ್ ಕುರಿತಾಗಿ ತಾವು ಅಂದುಕೊಂಡ ಯೋಜನೆ ಅನುಷ್ಠಾನಗೊಳಿಸಿದರೆ, ಈ ಮಹಿಳೆಯರ ಕಷ್ಟ ಕಳೆಯುವುದರ ಜೊತೆ ತಾವು ಏನಾದರೂ ದೊಡ್ಡ ಕೆಲಸ ಮಾಡಿದಂತಾಗುತ್ತದೆ ಎನಿಸಿತು.

ಅಜಾಯಿತಾ ಹೇಳುತ್ತಾರೆ, “ಬೋಸ್ಟನ್‌ನಲ್ಲಿ ಶಿಕ್ಷಣ ಪೂರೈಸಿ, ಅಮೆರಿಕಾ ಇಂಡಿಯಾ ಫೌಂಡೇಶನ್‌ನ ಕ್ಲಿಂಟನ್‌ ಸರ್ವೀಸ್‌ ಕಾರ್ಪ್‌ ಫೆಲೋಶಿಪ್‌ಗೆ ನಾನು ಅಪ್ಲೈ ಮಾಡಿದೆ. ಅದು ಸಿಗುತ್ತದೆಂಬ ಖಾತ್ರಿ ಇರಲಿಲ್ಲ. ಅಕಸ್ಮಾತ್‌ ಫೆಲೋಶಿಪ್‌ ಸಿಕ್ಕಿದರೆ ನನಗೆ 10 ತಿಂಗಳು ಭಾರತದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂದು ತಿಳಿಯಿತು. ಯಾವುದಕ್ಕೂ ಇರಲಿ ಎಂದು ನಾನು ನ್ಯೂಯಾರ್ಕಿನ ಲಾ ಫರ್ಮ್ ಸಹ ತುಂಬಿಸಿದ್ದೆ. ನಾನು ಮರಳಿ ಭಾರತಕ್ಕೆ ಹೋಗುವ ಬದಲು ಲಾ ಮಾಡುವುದೇ ವಾಸಿ ಎಂದು ತಾಯಿ ತಂದೆ ಭಾವಿಸಿದರು. ಮತ್ತೆ ನನ್ನ ಕನಸು ತುಂಡಾಗುವುದರಲ್ಲಿತ್ತು.

ಆಗ. 1 ವರ್ಷ ತಾನೇ….. ಭಾರತದಿಂದ ಬೇಗ ಮರಳಿ ಬರುತ್ತೇನೆ ಎಂದು ಅವರನ್ನು ಹೇಗೋ ಒಪ್ಪಿಸಿದೆ. ನನ್ನ ಈ ನಿರ್ಧಾರ ನನ್ನ ಬದುಕಿಗೆ ಹೊಸ ತಿರುವನ್ನು ತಂದುಕೊಟ್ಟಿತು. ಇಷ್ಟಕ್ಕೆ ನನ್ನ ಸಂಘರ್ಷ ಮುಗಿಯಲಿಲ್ಲ. ಮೇಲಿಂದ ಮೇಲೆ ಸವಾಲುಗಳು ನನ್ನನ್ನು ಸಶಕ್ತಗೊಳಿಸಿದವು. ಇದರ ಮಧ್ಯೆ ಹೊಸ ಹಾದಿ ಹುಟ್ಟುಹಾಕುವುದೇನೂ ಸುಲಭವಾಗಿರಲಿಲ್ಲ. ಭಾರತದಲ್ಲಿ ಭದ್ರವಾಗಿ ನೆಲೆಯೂರಲು ಹಾಗೂ ಗ್ರಾಮೀಣ ಭಾರತವನ್ನು ಹತ್ತಿರದಿಂದ ಗಮನಿಸಲು, 2006ರಲ್ಲಿ ನಾನು ಬೆಂಗಳೂರಿಗೆ ಬಂದೆ. ಇಲ್ಲಿನ ಉಜ್ಜೀವನ್‌ ಫೈನಾನ್ಶಿಯಲ್ ಸರ್ವೀಸಸ್‌ ಸೇರಿದ ನಂತರ, ನನ್ನ ಕನಸಿಗೊಂದು ಸಾಕಾರ ರೂಪ ಬಂತು.

“ಬೆಂಗಳೂರಿಗೆ ಬಂದು 15 ತಿಂಗಳಾಗುವಷ್ಟರಲ್ಲಿ ವಾಪಸ್ಸು ನ್ಯೂಯಾರ್ಕ್‌ಗೆ ಬರುವಂತೆ ತಾಯಿ ತಂದೆ ಒತ್ತಾಯಿಸತೊಡಗಿದರು. ವಿಧಿಯಿಲ್ಲದೆ ನಾನು ವಾಪಸ್ಸು ಹೋದೆ. ನಂತರ ಅಮೆರಿಕಾದ ಫೌಂಡೇಶನ್‌ ಜಾಯಿನ್‌ ಆದೆ. ಅಲ್ಲಿ ಫಂಡ್‌ ರೇಂಜಿಂಗ್‌ ನನ್ನ ಜವಾಬ್ದಾರಿ ಆಗಿತ್ತು. ಆ ಮೂಲಕ ನಾನು ಮತ್ತೆ ಭಾರತದೊಂದಿಗೆ ಸಂಪರ್ಕ ಹೊಂದಿದೆ.

“2006-09ರವರೆಗೆ ಭಾರತದ ಬಗ್ಗೆ ಹತ್ತಿರದಿಂದ ಚೆನ್ನಾಗಿ ತಿಳಿದುಕೊಂಡ ನಂತರ, ಮೈಕ್ರೋ ಫೈನಾನ್ಸ್ ಒಂದೇ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ತಿಳಿಯಿತು. ವಿದ್ಯುತ್‌, ನೀರು, ಕಳಪೆ ಗುಣಮಟ್ಟದ ಸಾಮಗ್ರಿ, ಜನರ ಅಜ್ಞಾನ ಇತ್ಯಾದಿಗಳನ್ನು ಕೇವಲ ಒಂದು ಕಂಪನಿಯ ಮೂಲಕ ನಿವಾರಿಸಲಾಗದೆಂದು ತಿಳಿದುಕೊಂಡೆ. ಈ ರೀತಿ 2009ರಲ್ಲಿ ನನಗೆ ಫ್ರಾಂಟಿಯರ್‌ ಮಾರ್ಕೆಟ್‌ನ ಐಡಿಯಾ ಬಂದಿತು.”

ಸಾಂಪ್ರದಾಯಿಕ ವಿಚಾರಧಾರೆಗಳಿಗೆ ನೀವು ವೈಯಕ್ತಿಕವಾಗಿ ಏನು ಬೆಲೆ ತೆರಬೇಕಾಯಿತು? ಎಂಬುದಕ್ಕೆ,“ನನ್ನ ಕನಸುಗಳನ್ನು ನನಸಾಗಿಸಲು ನಾನು ಮನೆಯಲ್ಲೇ ಎಷ್ಟೋ ಸಂಘರ್ಷ ನಡೆಸಬೇಕಾಯಿತು ಹಾಗೂ ಮನೆಯವರೆಲ್ಲರ ಕೋಪ ಎದುರಿಸಬೇಕಾಯಿತು. ಹೀಗಾಗಿ ತಾಯಿ ತಂದೆಯರ ಮನಸ್ಸಿನಾಸೆ ಪೂರೈಸೋಣ ಎಂದು ಅವರು ಆರಿಸಿದ ವರನನ್ನು ಶಾಸ್ತ್ರೋಕ್ತ ಮದುವೆಯಾದೆ.

“ಫ್ರಾಂಟಿಯರ್‌ ಮಾರ್ಕೆಟ್‌ ಲಾಂಚ್‌ ಮಾಡಿದ್ದು ಹಾಗೂ ನನ್ನ ವೈವಾಹಿಕ ಜೀವನ ಎರಡೂ ಒಟ್ಟಿಗೆ ಶುರುವಾಯ್ತು. ಇದರೊಂದಿಗೆ ಕಷ್ಟಗಳೂ ಹೆಚ್ಚಿದವು. ಭಾರತದಲ್ಲಿ ನನ್ನ ಬಿಸ್‌ನೆಸ್‌ ಹಾಗೂ ನ್ಯೂಯಾರ್ಕ್‌ನ ಅತ್ತೆಮನೆ ಎರಡನ್ನೂ ಒಟ್ಟೊಟ್ಟಿಗೆ ಸುಧಾರಿಸುವುದು ಅತಿ ಕಷ್ಟದ ಕೆಲಸವಾಯ್ತು.”

ಯಾವ ರೀತಿ ನೀವು ಆತ್ಮವಿಶ್ವಾಸದಿಂದ ಎರಡನ್ನೂ ಎದುರಿಸಿದಿರಿ ಎಂಬುದಕ್ಕೆ ಉತ್ತರಿಸುತ್ತಾ, “2013 ನನ್ನ ಬದುಕಿನಲ್ಲಿ ಸಾಕಷ್ಟು ಏರಿಳಿತ ತಂದ ವರ್ಷ. ಮದುವೆ ಮುರಿದ ನಂತರ ನನ್ನ ಬಿಸ್‌ನೆಸ್‌ ಹಾಗೂ ವಯಸ್ಸಾದ ನನ್ನ ತಾಯಿ ತಂದೆಯವರನ್ನು ಗಮನಿಸತೊಡಗಿದೆ.

“ಕ್ರಮೇಣ ನನ್ನ ಶ್ರಮ ಸಾರ್ಥಕವಾಯಿತು. ತಾಯಿ ತಂದೆಯರ ಜೊತೆ ನನ್ನ ಸಂಬಂಧ ಸುಧಾರಿಸಿತು. ಹಾಗೆಯೇ ಹೆಸರು, ಐಡೆಂಟಿಟಿ ದೊರಕಿತು. 2013ರಲ್ಲಿ ನನ್ನ ಹೆಸರು `ಫೋರ್ಬ್ಸ್ ಅಂಡರ್‌ 30’ರಲ್ಲಿ ಸಹ ಬಂದಿತು.”

ಇಂದು ನಿಮ್ಮನ್ನು ನೀವು ಎಲ್ಲಿ ಗುರುತಿಸಿಕೊಳ್ಳುವಿರಿ ಎಂಬುದಕ್ಕೆ, “ಇಂದು ನಾನು ಸ್ವತಂತ್ರ ಹಾಗೂ ಮೊದಲಿಗಿಂತಲೂ ಹೆಚ್ಚು ಸಶಕ್ತ ವ್ಯಕ್ತಿತ್ವದವಳಾಗಿ ಗುರುತಿಸಲ್ಪಟ್ಟಿದ್ದೇನೆ. ನನ್ನ ಜೀವನ ಹಾಗೂ ಕೆಲಸದ ಮೇಲೆ ನನ್ನ ಸಂಪೂರ್ಣ ನಿಯಂತ್ರಣವಿದೆ. ಫ್ರಾಂಟಿಯರ್‌ ಮಾರ್ಕೆಟ್‌ ಚೆನ್ನಾಗಿ ಕೆಲಸ ಮಾಡುತ್ತಿದೆ.

“ನನ್ನ ಆಲೋಚನೆ ಹಾಗೂ ಕೆರಿಯರ್‌ಗೆ ಒಂದು ನಿರ್ದಿಷ್ಟ ರೂಪ ನೀಡುವಲ್ಲಿ, ನನಗೆ ಕೆಲಸ ಮಾಡಲು ಅವಕಾಶ ನೀಡಿದ ಸಂಸ್ಥೆಗಳ ಪಾತ್ರ ಹಿರಿದು. ಅವುಗಳಲ್ಲಿ `ಇಕೋಯಿಂಗ್‌ ಗ್ರೀನ್‌, ಡಾಸ್ರಾ, ಆ್ಯಕ್ಯುಮೆನ್‌ ಫಂಡ್‌, ಬಿಯಾಂಡ್‌ ಕ್ಯಾಪಿಟಲ್ ಫಂಡ್‌, ಸೀಡ್‌ ಫಂಡ್‌,’ ಇತ್ಯಾದಿ ಪ್ರಮುಖ.

“ಇಂದು ನನ್ನ ಬದುಕಿನ ಹಾದಿ ಗಮನಿಸಿದಾಗ, ಯಶಸ್ವಿಯಾಗಿ ಈ ಮಟ್ಟ ತಲುಪಿದೆನಲ್ಲ  ಎಂದು ಖುಷಿಯಾಗುತ್ತದೆ. ಮಹಿಳೆಯರ ಮೇಲೆ ಹೇರಿರುವ ಬಂಧನ ಹಾಗೇ ಇರುತ್ತದೆ. ಅವರು ತಡರಾತ್ರಿ ಕೆಲಸ ಮಾಡಿದರೆ ಅವರಿಗೆ ಸುರಕ್ಷೆಯ ಭಯ ಕಾಡುತ್ತದೆ. ಹೀಗಾಗಿ ಯಶಸ್ಸು ಮತ್ತು ಮಾನ್ಯತೆ ಗಳಿಸುವಾಗ, ಜನ ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂದು ಯೋಚಿಸುವ ಬದಲು, ನಾವು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದೇವೆ, ಎಂಬುದು ಮುಖ್ಯ.”

ಶ್ರೀವತ್ಸ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ