ನಾವು ಹುಟ್ಟಿದೂರು ಮಲೆನಾಡಿನ ತವರೂರಾದ ಚಿಕ್ಕಮಗಳೂರು, ಚಿಕ್ಕಂದಿನಿಂದ ಅಲ್ಲಿನ ಗಿರಿ ಪ್ರದೇಶ ನಮಗೆ ಹೊಸತೇನಲ್ಲ ವರ್ಷಕ್ಕೊಮ್ಮೆ ಸೀತಾಳ್ಳಯ್ಯನ ಗಿರಿ. ಮುಳ್ಳಯ್ಯನ ಗಿರಿ ಮತ್ತು ಕೆಮ್ಮಣ್ಣು ಗುಂಡಿಗೆ ಹೋಗಿ ಬರುವುದು ನಮಗೆ ಮೊದಲಿನಿಂದಲೂ ಬಂದ ಪದ್ಧತಿ. ಆದರೆ ಮಕ್ಕಳು ದೊಡ್ಡವರಾಗಿ ನಾವು ಬೆಂಗಳೂರಿಗೆ ಬಂದ ಮೇಲೆ ಆ ಪದ್ಧತಿ ತಪ್ಪಿಹೋಯಿತು. ನನ್ನ ಚಿಕ್ಕಂದಿನ ಚಿಕ್ಕಮಗಳೂರನ್ನು ನಿಜಕ್ಕೂ ಮರೆತಂತೆಯೇ ಆಗಿತ್ತು. ಆದರೆ ಮಗಳು, ಮೊಮ್ಮಕ್ಕಳೊಡನೆ ಬಂದಾಗ ಅವಳಿಗೆ ತನ್ನ ಅಜ್ಜಿಯ ಮನೆಯನ್ನು ತೋರಿಸುವ ಆಸೆ ಹಂಡೆಯಲ್ಲಿ ನೀರನ್ನು ಹೇಗೆ ಕಾಯಿಸಿಕೊಳ್ಳುತ್ತಾರೆ ಎಂದು ಮಕ್ಕಳಿಗೆ ತೋರಿಸುವ ತವಕ, ಹಾಗೆಯೇ ಹಂಡೆಯ ಬಿಸಿ ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವ ಬಯಕೆ. ಗೀಸರ್‌ನ ನೀರಿನಲ್ಲಿ ಸ್ನಾನ ಮಾಡಿದ ಮಕ್ಕಳು ಹಂಡೆಯನ್ನು ನೋಡಿದ್ದೇ ಇಲ್ಲ. ಮೊಮ್ಮಕ್ಕಳ ದೆಸೆಯಿಂದ ನಾವು ಚಿಕ್ಕಮಗಳೂರಿಗೆ ಹೋಗಿ ಅಲ್ಲಿಯ ಹಚ್ಚ ಹಸುರಿನ ಗಿರಿ ಸಾಲುಗಳನ್ನು, ಕಾಫಿ ತೋಟಗಳನ್ನು ನೋಡಿ ಬಂದದ್ದಾಯಿತು.
ಬೆಂಗಳೂರಿನ ಬಿಸಿಲಿಗೆ ಬಸವಳಿದ ನಮಗೆ ಚಿಕ್ಕಮಗಳೂರಿನ ತಂಪು ಗಾಳಿ ನಿಜಕ್ಕೂ ಸ್ವರ್ಗ ಸುಖವನ್ನೀಯಿತು…. ಹಸುರಿನ ಗಿರಿಗಳ ಸಾಲೇ ನಿನ್ನಯ ಕೊರಳಿನ ಮಾಲೆ ಎನ್ನುವ ಕವಿ ನುಡಿಯ ನಿಜ ದರ್ಶನವಾದಂತೆನಿಸಿತು. ರುಕ್ಮಾಂಗದ ದೊರೆಯು ತನ್ನ ಚಿಕ್ಕ ಮಗಳಿಗೆ ಉಡುಗೊರೆಯಾಗಿ ನೀಡಿದ್ದರಿಂದ ಚಿಕ್ಕಮಗಳೂರೆನ್ನುವ ಹೆಸರು ಬಂದಿತಂತೆ. ಅಂದು ವಿದ್ಯೆ, ವ್ಯಾಪಾರ ಮತ್ತು ವಾಣಿಜ್ಯಕ್ಕೆ ಹೆಸರಾದ ಊರಾಗಿತ್ತು. ಈಗಲೂ ಸಿರಿವಂತರ ನಾಡೇ ಅದು. ಕಾಫಿ, ಏಲಕ್ಕಿ ತೋಟಗಳ ಒಡೆಯರು ಅಲ್ಲಿ ಶ್ರೀಮಂತರೇ.
ಸೀತಾಳ್ಳಯ್ಯನ ಗಿರಿ
ಮೊದಲ ದಿನ ಇನೋವಾದಲ್ಲಿ ತಮ್ಮನ ಮಕ್ಕಳನ್ನು ಏರಿಸಿಕೊಂಡು ಗಿರಿಯ ಕಡೆ ಹೊರಟೆ. ಮಧ್ಯಾಹ್ನದ ಊಟಕ್ಕೆ ಮಾವಿನಕಾಯಿ ಚಿತ್ರಾನ್ನ ಸಿದ್ಧವಾಯಿತು. ಮಕ್ಕಳು ಚಿಪ್ಸ್, ಫಾಂಟಾ, ಬಿಸ್ಕೆಟು ಚಾಕಲೇಟುಗಳನ್ನು ಮರೆಯದೆ ಹಿಡಿದುಕೊಂಡರು. ಎಷ್ಟು ಬೇಗ ಎಂದುಕೊಂಡರೂ ನಮ್ಮ ಪಟಾಲಮ್ ಹೊರಡುವ ಹೊತ್ತಿಗೆ ಬೆಳಗ್ಗೆ ಒಂಬತ್ತಾಗಿಯೇ ಹೋಯಿತು. ಮೊದಲಿಗೆ ಸೀತಾಳ್ಳಯ್ಯನ ಗಿರಿ, ಸಾಗುವ ದಾರಿಯಲ್ಲಿ ಅಕ್ಕಪಕ್ಕ ಕಾಫಿ ತೋಟಗಳು, ನಾವು ಹೋದ ಕಾಲಕ್ಕೆ ಅಲ್ಲಿ ಹೂವಿನ ಕಾಲ ಮುಗಿದು ಹೋಗಿತ್ತು. ಯುಗಾದಿಯ ನಂತರ ಏಪ್ರಿಲ್‌ನಲ್ಲಿ ಕಾಫಿ ಹೂ ನೋಡಲು ಬಲು ಚಂದ, ಮಲ್ಲಿಗೆಯ ಮೊಗ್ಗಿನ ಜಡೆ ಹೆಣೆದಂತಿರುತ್ತದೆ ಅಥವಾ ಕೆಂಪನೆಯ ಹೊಳೆಯು ಕಾಫಿ ಹಣ್ಣುಗಳನ್ನು ನೋಡಬೇಕೆಂದರೆ ಡಿಸೆಂಬರ್ ನಂತರ ಹೋಗಬೇಕು.
ಮಳೆಗಾಲ ಆಗ ತಾನೇ ಪ್ರಾರಂಭವಾಗಿದ್ದರಿಂದ ನಮಗೆ ಹೊಳೆಯುವ ಹಸಿರು ಎಲೆಗಳ ದರ್ಶನ ಭಾಗ್ಯವಷ್ಟೆ ಆಯಿತು. ಸುತ್ತಲಿನ ಪ್ರಕೃತಿಯ ಸಿರಿಯನ್ನು ಸವಿಯುತ್ತಾ ಸಾಗಿದಾಗ ಬಹಳ ಬೇಗ ಸೀತಾಳ್ಳಯ್ಯನ ಗಿರಿ ಸಿಕ್ಕಿತು. ಅಲ್ಲಿಯೇ ದೇವರ ದರ್ಶನ, ಉದ್ಭವ ಗಂಗೆಯ ಮಧ್ಯೆ ಶಿವಲಿಂಗ, ನಾವು ಹೋಗುವ ಹೊತ್ತಿಗೆ ಅಯ್ಯನೋರು ಪೂಜೆ ಮಾಡಿಕೊಟ್ಟರು. ಎತ್ತರದ ಹಸಿರು ಗಿರಿಗಳ ಸಾಲುಗಳ ನಡುವೆ ನೆಲೆಸಿರುವ ಶಿವನ ದರ್ಶನ ಮನಕ್ಕೆ ಮುದವೆನಿಸಿತು.
ಆಧುನಿಕ ಕಾಲ, ಅಲ್ಲಿಯೂ ಮಂಗಳಾರತಿಯ ಸಮಯದಲ್ಲಿ ವಿದ್ಯುತ್ ಜಾಗಟೆ, ಡಮರುಗ. ನಮ್ಮವರಿಂದ ಅದರ ಚಾಲನೆಯೂ ಆಗಿಹೋಯಿತು. ದೇವಾಲಯದ ಎದುರು ಒಂದು ಗುಹೆ, ಇದೇ ರೀತಿಯ ಗುಹೆ ನಾವು ಮುಳ್ಳಯ್ಯನಗಿರಿಯಲ್ಲೂ ಕಂಡೆವು. ಪ್ರಾಯಶಃ ಆಗಿನ ರಾಜರು ಗುಹೆಗಳ ಮೂಲಕ ಇಲ್ಲಿಗೆ ಬರುತ್ತಿದ್ದರೇನೋ ಅಥವಾ ಸಂಕಟಗಳ ಸಮಯದಲ್ಲಿ ಗುಹೆಯ ಮೂಲಕ ಸುರಕ್ಷಿತವಾಗಿ ದೇವಾಲಯ ತಲುಪುತ್ತಿದ್ದರೇನೋ, ಸರಿಯಾದ ಮಾಹಿತಿ ನೀಡುವವರು ಯಾರೂ ಇಲ್ಲವಾದ್ದರಿಂದ ನಮ್ಮದೇ ಆದ ಊಹೆಗಳನ್ನು ಮಾಡಿಕೊಂಡಿದ್ದಾಯಿತು. ಆ ದಿನ ದೇವಾಲಯದಲ್ಲಿ ಪೂಜೆ ಮಾಡಿಸುತ್ತಿದ್ದರು, ನೀವು ಊಟ ಮಾಡಿಕೊಂಡು ಹೋಗಿ ಎಂದು ಸತ್ಕರಿಸಿದರು. ನೋಡಿ ನಮ್ಮ ಸಂಸ್ಕೃತಿ ಅಡಗಿರುವುದೇ ಇಂತಹ ಅತಿಥಿ ಸತ್ಕಾರದಲ್ಲಿ, ಅವರ ವಿಶ್ವಾಸಕ್ಕೆ ಮನತುಂಬಿ ಬಂದರೂ ನಮಗೆ ಹೊತ್ತಾಗುತ್ತದೆ ಎಂದು ಅಲ್ಲಿಂದ ಹೊರಟೆವು.
ಮುಂದೆ ಎತ್ತರಕ್ಕೆ ಮುಳ್ಳಯ್ಯನ ಗಿರಿಯತ್ತ ನಮ್ಮ ಪಯಣ, ಹಾವಿನಂತೆ ಸಾಗುವ ರಸ್ತೆ ಪೂರ್ಣವಾಗಿ ಸುತ್ತಿ ಸುತ್ತಿ ಮೇಲೇರುತ್ತಿತ್ತು. ರಸ್ತೆಗಳೇನೋ ಚೆನ್ನಾಗಿದ್ದವು ಜೊತೆಗೆ ಕಣ್‌ತಣಿಸುವ ಹಸುರಿನ ಬೆಟ್ಟದ ಸಾಲು, ಹೊರಗಿನಿಂದ ಕಣ್‌ತೆಗೆಯಲು ಮನಸೇ ಬಾರದು. ಅಷ್ಟು ಸುಂದರ ಹಸಿರು, ಹಸಿರಿನ ಜೊತೆ ಆ ಬೇಸಿಗೆಯಲ್ಲೂ ತಂಗಾಳಿ ನಿಜಕ್ಕೂ ಅದಕ್ಕಿಂತಾ ಬೇರೆ ಸ್ವರ್ಗವಾದರೂ ಏಕೆ ಬೇಕೆನಿಸಿತು. ಹಸಿರನ್ನು ತನ್ನೊಡಲೊಳಗೆ ತುಂಬಿಸಿಕೊಂಡ ಬೆಟ್ಟದ ಸಾಲುಗಳು, ದಟ್ಟ ಮರಗಳು, ಕೆಳಗೆ ನೋಡಿದರೆ ಪ್ರಪಾತ, ಒಂದು ನಿಮಿಷ ಮೈ ಜುಮ್ಮೆನಿಸಿತು. ಪುಣ್ಯಕ್ಕೆ ನಮ್ಮವರು ಇನ್ನೂ ಈ ಅರಣ್ಯವನ್ನು ಉಳಿಸಿದ್ದಾರೆನ್ನುವ ಆನಂದ ತುಂಬಿ ಬಂತು. ಹಾಗೆಯೇ ನಮ್ಮ ಮುಂದಿನ ಜನಾಂಗಕ್ಕೆ ಈ ಹಸಿರನ್ನು, ಅರಣ್ಯಗಳನ್ನು ಉಳಿಸುವುದು ನಮ್ಮ ಬಾಧ್ಯತೆ ಎನ್ನುವ ಸತ್ಯದ ದರ್ಶನ ಆಯಿತು.
ಹೊನ್ನಮ್ಮನ ಹಳ್ಳದಲ್ಲಿ
ಅಲ್ಲಿಂದ ಸ್ವಲ್ಪ ದೂರ ಸಾಗುತ್ತಿದ್ದಂತೆ ಹೊನ್ನಮ್ಮನ ಹಳ್ಳದ ಹತ್ತಿರ ಇಳಿದು ತಣ್ಣನೆಯ ನೀರಿನಲ್ಲಿ ಕಾಲನ್ನು ಇಳಿಬಿಟ್ಟು ಸ್ವಲ್ಪ ಹೊತ್ತು ಆಟವಾಡಿದೆವು. ಅಲ್ಲಿ ನಾವು ಕಂಡ ನೇರಳೆ ಹಣ್ಣು ಬಹಳ ರುಚಿಕರವಾಗಿತ್ತು. ಬೆಂಗಳೂರಿನ ನೇರಳೆಹಣ್ಣಿಗಿಂತಾ ಬಹಳ ಚಿಕ್ಕದು ಮತ್ತು ಗುಂಡಾಗಿತ್ತು. ಆದರೆ ರುಚಿ ಮಾತ್ರಾ ಬಹಳ ಚೆನ್ನಾಗಿತ್ತು. ಎಲ್ಲರೂ ನೇರಳೆ ಹಣ್ಣುಗಳನ್ನು ಸವಿದೆವು.
ಮುಳ್ಳಯ್ಯನ ಗಿರಿ
ಮುಂದೆ ಮುಳ್ಳಯ್ಯನ ಗಿರಿಗೆ ಎತ್ತರಕ್ಕೆ ಏರುತ್ತಿದ್ದಂತೆ ಮತ್ತಷ್ಟು ತಂಗಾಳಿ ಮತ್ತು ಹಸಿರೂ ಅಷ್ಟೇ ಖುಷಿ ನೀಡಿತು. ಮುಳ್ಳಯ್ಯನ ಗಿರಿಯನ್ನು ಏರಲು ಒಂದಷ್ಟು ಮೆಟ್ಟಿಲುಗಳನ್ನು ಹತ್ತಿ ಬರಬೇಕು. ಹವಾಮಾನ ಚೆನ್ನಾಗಿತ್ತು. ಆದರೆ ವಯಸ್ಸಿನ ಪ್ರಭಾವ ನಾವು ಹತ್ತದಿದ್ದರೂ ಮಕ್ಕಳೆಲ್ಲರೂ ಮೇಲೇರಿದರು. ಅಲ್ಲೊಂದು ನಂದಿ ಇರುವ ಶಿವ ಮಂದಿರ, ಒಂದೆರಡು ಗುಹೆಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದ ಅತಿ ಹೆಚ್ಚಿನ ಎತ್ತರದ ಗಿರಿಯ ಮೇಲೇರಿ ಸುತ್ತಲಿನ ದೃಶ್ಯಗಳನ್ನು ನೋಡುವುದೇ ಆನಂದದ ವಿಷಯ.
6330 ಅಡಿ (1930 ಮೀ.) ಎತ್ತರದ ಮುಳ್ಳಯ್ಯನ ಗಿರಿ ಕರ್ನಾಟಕದಲ್ಲೇ ಅತಿ ಎತ್ತರದ ತಾಣ. ಚಿಕ್ಕಮಗಳೂರಿನಿಂದ 15 ಕಿ.ಮೀ. ದೂರದಲ್ಲಿರುವ, ಹಿಮಾಲಯ ಮತ್ತು ನೀಲಗಿರಿಯ ಮಧ್ಯದಲ್ಲಿರುವ ಪಶ್ಚಿಮ ಘಟ್ಟದ ಅತಿ ಎತ್ತರದ ಬೆಟ್ಟವೆನಿಸಿಕೊಂಡು ಟ್ರೆಕಿಂಗ್‌ಮಾಡುವವರಿಗೆ ಪ್ರಶಸ್ತ ಸ್ಥಳವಾಗಿದೆ.
ಬಾಬಾ ಬುಡನ್ ಗಿರಿ
ಅಲ್ಲಿಂದ ಮುಂದೆ ಬಾಬಾ ಬುಡನ್ ಗಿರಿ, 1835 ಮೀ. ಎತ್ತರದಲ್ಲಿದ್ದು, ಇಡೀ ಕರ್ನಾಟಕದಲ್ಲೇ ಸೂಕ್ಷ್ಮ ಪ್ರದೇಶವೆನಿಸಿಕೊಂಡು ವರ್ಷಕ್ಕೊಮ್ಮೆ ದತ್ತ ಜಯಂತಿಯಂದು ಪೊಲೀಸರನ್ನು ತನ್ನೆಡೆಗೆ ಕರೆಸಿಕೊಳ್ಳುವ ಬಾಬಾ ಬುಡನ್ ಗಿರಿಯನ್ನು ನೋಡಿ ಬಹಳ ದಿನಗಳಾಗಿತ್ತು. ಆದರೆ ಅಲ್ಲಿ ಹೋಗಿದ್ದೇ ನನ್ನ ಸಂತೋಷದ ಬೆಲೂನು ಪುಸ್ ಎಂದಿತು. ಅಷ್ಟು ಸುಂದರ ಪ್ರದೇಶವನ್ನು ಶುದ್ಧವಾಗಿ, ಸ್ವಚ್ಛವಾಗಿಟ್ಟುಕೊಳ್ಳುವುದರಲ್ಲಿ ನಮ್ಮ ಪ್ರವಾಸೋದ್ಯಮ ಇಲಾಖೆಯವರು ಪೂರ್ಣವಾಗಿ ಸೋತಿದ್ದಾರೆನಿಸಿತು. ಬಂದ ಪ್ರವಾಸಿಗರು ಅಲ್ಲೇ ಠಿಕಾಣಿ ಹೂಡಿ ಅಡುಗೆ ಮಾಡಿಕೊಳ್ಳುತ್ತಿದ್ದರು.
ಅಲ್ಲೇ ಕಸ ಕಡ್ಡಿಗಳು, ಮಾಣಿಕ್ಯಧಾರಾ ಜಲಪಾತವಂತೂ ಜನರಿಂದ ತುಂಬಿಹೋಗಿತ್ತು. ಅಲ್ಲೇ ಸ್ನಾನ ಮತ್ತು ಸ್ನಾನ ಮಾಡಿ ಅಲ್ಲಿ ವಸ್ತ್ರಗಳನ್ನು ಬಿಟ್ಟು ಹೋಗುವ ಸಂಪ್ರದಾಯ ಪಾಲನೆ, ನೋಡಿದ ಮನ ಮುದಗೊಳ್ಳಲೇ ಇಲ್ಲ. ಈ ತಾಣವನ್ನು ಮತ್ತೂ ಶುಭ್ರವಾಗಿಟ್ಟುಕೊಳ್ಳಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆಯೊಂದಿಗೇ ಅಲ್ಲಿಂದ ಹೊರಟೆವು. ಹಿಂದೆ ಗುಹೆಯ ಒಳಗೆ ಹೋಗಿ ದತ್ತಾತ್ರೇಯನ ದರ್ಶನ ಮಾಡಿಕೊಂಡು ಬರುತ್ತಿದ್ದೆವು.
ಅದು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಪವಿತ್ರ ತಾಣ, ಆದರೆ ಈಗ ಅಲ್ಲಿಗೆ ಪ್ರವೇಶವಿಲ್ಲ, ಗುಹೆ ಮಳೆಗೆ ಸ್ವಲ್ಪ ಕುಸಿದಂತಿದೆ ಎಂದು ಅಲ್ಲಿಗೆ ಬೀಗ ಹಾಕಿದ್ದರು. ಆ ತಾಣ ಹೇಗಿದ್ದರೂ ಸುತ್ತಲಿನ ಸುಂದರ ಹಸಿರು ಬೆಟ್ಟಗಳ ಆನಂದವನ್ನು ಮನತುಂಬಿಸಿಕೊಂಡೆವು.
ಕೆಮ್ಮಣ್ಣು ಗುಂಡಿಯ ಉದ್ಯಾನವನ
ಈವರೆಗೂ ರಸ್ತೆ ಚೆನ್ನಾಗಿಯೇ ಇತ್ತು. ಮುಂದೆ ಕೆಮ್ಮಣ್ಣುಗುಂಡಿಯತ್ತಲಿನ ರಸ್ತೆ ಸುಮಾರು, ಅದರಲ್ಲೂ ಮಳೆ ಬಂದಿದ್ದರಿಂದ ಒಂದೆಡೆ ಬಹಳ ಕಷ್ಟಪಟ್ಟು ನಮ್ಮ ವಾಹನದ ಟೈರು ಮಣ್ಣಿನಲ್ಲಿ ಹೂತುಹೋಗುತ್ತಿದ್ದಾಗ ಬರಿಯ ಕೆಮ್ಮಣ್ಣಿನಿಂದಲೇ ತುಂಬಿದ ಕೊರಕಲನ್ನು ನೋಡುತ್ತಿದ್ದೆವು. 1434 ಅಡಿ ಎತ್ತರದಲ್ಲಿನ ಈ ತಾಣದಲ್ಲಿ ಒಂದು ಸುಂದರ ಉದ್ಯಾನನವನ್ನು ರೂಪಿಸಲಾಗಿದೆ. ಅದರ ಪ್ರವೇಶಕ್ಕೆ ತಲಾ ಹತ್ತು ರೂಪಾಯಿಗಳು. ಉದ್ಯಾನವನ ತನ್ನೊಡಲೊಳಗೆ ಬಣ್ಣ ಬಣ್ಣದ ಹೂಗಳ ಜೊತೆ ಸುತ್ತಲೂ ಹಸುರಿನ ಗಿಡಗಳನ್ನು ತುಂಬಿಸಿಕೊಂಡು ಒಂದು ಪವಿತ್ರ ಸ್ಥಳಕ್ಕೆ ಹೋದಷ್ಟು ಶುಭ್ರವಾಗಿದೆ. ಬಣ್ಣ ಬಣ್ಣದ ಗುಲಾಬಿ ಹೂಗಳು ತಂಗಾಳಿಗೆ ತೊನೆದಾಡುತ್ತಾ ಮುಗುಳ್ನಗುತ್ತಿದ್ದವು. ಅಲ್ಲೊಂದಷ್ಟು ಹೊತ್ತು ಓಡಾಡಿ ಸುತ್ತಲಿನ ಪ್ರಕೃತಿಯ ರಮಣೀಯತೆಯನ್ನು ಕಣ್ ತುಂಬಿಸಿಕೊಂಡು ಕ್ಯಾಮೆರಾದಲ್ಲೂ ಕ್ಲಿಕ್ಕಿಸಿಕೊಂಡೆವು. ಅಲ್ಲಿಂದ ಸ್ವಲ್ಪ ದೂರಕ್ಕೆ ಜಾಯಿಂಟ್, ನಮಗೆ ಅದು ಆ ತೋಟದಿಂದಲೇ ಗೋಚರಾಗುತ್ತಿತ್ತು. ಟ್ರೆಕಿಂಗ್ ಪ್ರಿಯರು ನಡೆದು ಹೋಗಿ ಅಲ್ಲಿಂದ ಸುತ್ತಲಿನ ಪ್ರಕೃತಿಯ ಆಸ್ವಾದನೆ ಮಾಡಬಹುದು. ನಿಜಕ್ಕೂ ಹೊರಡಲೇ ಮನ ಬಾರದು. ಬೆಟ್ಟದ ತಪ್ಪಲಿನ ಸೂರ್ಯಾಸ್ತಮಾನ ನೋಡಲು ಬಲು ಚಂದ. ನಮ್ಮಲ್ಲಿರುವ ರಮಣೀಯ ತಾಣಗಳನ್ನು ಮರೆತು ವಿದೇಶ ಪ್ರವಾಸಕ್ಕೆ ಮಾರು ಹೋಗುತ್ತೇವೆ ಎನಿಸಿತು. ಸ್ವಲ್ಪ ದಿನಗಳ ಹಿಂದೆ ಹೋದ ಸಿಮ್ಲಾಗಿಂತ ಚಂದ ನಮ್ಮ ಚಿಕ್ಕಮಗಳೂರು ಎನ್ನುವ ಸತ್ಯ ಅರ್ಥವಾಯಿತು.
ಕಲ್ಲತ್ ಗಿರಿ ಫಾಲ್ಸ್
ಮುಂದಿನ ಹಾದಿಯಲ್ಲಿ ಕಲ್ಲತ್ ಗಿರಿ ಜಲಪಾತಕ್ಕೆ ಹೋದೆವು. ಅಲ್ಲೂ ಸಹ ದೇವರ ಕಾರ್ಯವೆಂದು ಅಲ್ಲೇ ಊಟಗಳ ಏರ್ಪಾಡಾದಂತಿತ್ತು. ಹೀಗಾಗಿ ಅಲ್ಲಿಯೂ ಜಲಪಾತದ ಸವಿ ಸವಿಯಲು ಆಗಲೇ ಇಲ್ಲ. ಸುಂದರ ಜಲಪಾತ ಮತ್ತು ಹಸಿರಿನ ತಾಣನ್ನು ಶುಭ್ರವಾಗಿಟ್ಟುಕೊಳ್ಳಬೇಕೆಂದಾಗ ಅಲ್ಲಿ ಅಡುಗೆ ಊಟ ಉಪಚಾರಗಳಿರಬಾರದು. ಅದಕ್ಕೊಂದು ಪ್ರತ್ಯೇಕ ತಾಣವಿದ್ದು, ಬಳಸುವವರು ಇಂತಿಷ್ಟು ಹಣ ನೀಡಬೇಕೆಂದಾಗ ಖಂಡಿತ ಶುಭ್ರತೆಯ ಪಾಲನೆಯಾಗುತ್ತದೆ. ಅಲ್ಲಿಂದ ಹತ್ತಿರದಲ್ಲೇ ಇರುವ ಹೆಬ್ಬೆ ಫಾಲ್ಸ್ ಮತ್ತೊಂದು ಸುಂದರ ತಾಣ, ಸಮಯದ ಅಭಾವದಿಂದ ನಾವು ಅಲ್ಲಿಗೆ ಹೋಗಲಾಗಲಿಲ್ಲ.
ದಿನೇ ದಿನೇ ಜನಸಂಖ್ಯೆ ಏರುತ್ತಿದೆ. ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ. ಹೀಗಿರುವಾಗ ಕೆಲವೊಂದು ನಿಯಮಗಳನ್ನು ಕಡ್ಡಾಯ ಮಾಡಿದಾಗಲೇ ಆ ಸ್ಥಳದ ಸುಂದರತೆಯನ್ನು ಕಾಪಾಡಲು ಸಾಧ್ಯ. ಒಟ್ಟಿನಲ್ಲಿ ಮಲೆನಾಡಿನ ಗಿರಿಯ ದರ್ಶನ ಮಾಡಿ ಹಸಿರನ್ನು ಆನಂದಿಸುತ್ತಾ ಕಾಫಿ ಮತ್ತು ಏಲಕ್ಕಿ ಗಿಡಗಳ ಘಮವನ್ನು ಆಘ್ರಾಣಿಸುತ್ತಾ ಊರನ್ನು ತಲುಪಿದೆವು. ಊರಿಗೆ ಬಂದದ್ದೇ ನಾವು ಕಾಲೇಜಿನಲ್ಲಿ ಓದುತ್ತಿದ್ದಾಗ ತಪ್ಪದೆ ಭೇಟಿ ನೀಡುತ್ತಿದ್ದ ಟೌನ್ ಕ್ಯಾಂಟಿನ್‌ನಲ್ಲಿ ಮಸಾಲೆ ದೋಸೆ ಮತ್ತು ಜಾಮೂನ್ ತಿಂದೆವು. ರುಚಿ ಹಾಗೆಯೇ ಇದ್ದರೂ ಮೊದಲು ವಿಶಾಲ ಅಂಗಳದಲ್ಲಿ ಜಗುಲಿಯ ಮೇಲೆ ಕುಳಿತು ತಿನ್ನುತ್ತಿದ್ದ ಸವಿಯೇ ಬೇರೆ, ಈಗಿನ ಸುಸಜ್ಜಿತ ಕಟ್ಟಡಕ್ಕಿಂತ ಅದೇ ಚಂದವೆತ್ತೆನಿಸಿತು. ಏನೇ ಆಗಲಿ ಅಂತೂ ಇಂತೂ ಮಲೆನಾಡಿನ ಗಿರಿಯ ಸಾಲುಗಳನ್ನು ಕಂಡ ಧನ್ಯತೆ ನಮ್ಮದಾಯಿತು.
ಮುಂದೆ ವರ್ಷಕ್ಕೊಮೆಯಾದರೂ ಅಲ್ಲಿಗೆ ಭೇಟಿ ನೀಡಬೇಕೆನ್ನುವ ನಿರ್ಧಾರ ಮಾಡಿಕೊಂಡೇ ಅಲ್ಲಿಂದ ಹೊರಟಿದ್ದಾಯಿತು. ಮಕ್ಕಳಿಗಿಂತ ಹೆಚ್ಚಾಗಿ ಅಲ್ಲಿನ ಸೊಬಗನ್ನು ಕಂಡು ಆನಂದಿಸಿದ್ದು ನಾವೇ. ಅಂತೂ ಮೊಮ್ಮಕ್ಕಳ ನೆವದಿಂದ ಮತ್ತೊಮ್ಮ್ಮೆ ಚಿಕ್ಕಂದಿನ ನೆನಪುಗಳನ್ನು ಹಸಿರು ಮಾಡಿಕೊಂಡ ಆನಂದವಂತೂ ನಮ್ಮಲ್ಲಿ ಸ್ಥಿರವಾಗಿ ಉಳಿಯಿತೆನ್ನುವುದರಲ್ಲಿ ಎರಡು ಮಾತಿಲ್ಲ.
ಪ್ರವಾಸಕ್ಕೆ ಪ್ರಶಸ್ತ ಸಮಯ
ಚಿಕ್ಕಮಗಳೂರಿನ ಗಿರಿ ಸಾಲನ್ನು ನೋಡಬೇಕೆಂದರೆ ಸೆಪ್ಟೆಂಬರ್‌ನಿಂದ ಫೆಬ್ರವರಿಯವರೆಗೂ ಪ್ರಶಸ್ತ ಸಮಯ. ಮಳೆಗಾಲದ ನಂತರ ಬೇಸಿಗೆಯ ಮೊದಲು ಅನುಕೂಲಕರ ವಾತಾವರಣವಿರುತ್ತದೆ. ಬೆಂಗಳೂರಿನಿಂದ 265 ಕಿ.ಮೀ. ದೂರದಲ್ಲಿರುವ ಚಿಕ್ಕಮಗಳೂರಿನ 25 ರಿಂದ 40 ಕಿ.ಮೀ. ಸುತ್ತಲಲ್ಲಿ ಈ ಎಲ್ಲವನ್ನೂ ನೋಡಬಹುದು. ಯಾವ ಸ್ವಿಟ್ಜರ್‌ಲ್ಯಾಂಡ್‌ಗೂ ಕಡಿಮೆ ಇಲ್ಲ ನಮ್ಮ ಮಲೆನಾಡಿನ ಗಿರಿಧಾಮ! ಬೇಕಾದಷ್ಟು ಹೋಮ್ ಸ್ಟೇಗಳಿವೆ, ರೆಸಾರ್ಟ್‌ಗಳಿವೆ. ಅಂತರ್ಜಾಲದಲ್ಲಿ ತಡಕಾಡಿದರೆ ನಿಮಗೆ ಹೊಂದುವಂತಹ ಬಜೆಟ್‌ನ ಸ್ಥಳಕ್ಕೆ ಮೋಸವಿಲ್ಲ. ಏನೇ ಆಗಲಿ, ಬೆಂಗಳೂರಿನ ಕಾಂಕ್ರೀಟ್ ನಾಡಿನಲ್ಲಿರುವವರಿಗೆ ನಿಜವಾದ ಪ್ರಕೃತಿಯ ದರ್ಶನವಾದೀತು.
– ಮಂಜುಳಾ ರಾಜ್