ಮನೆ ಎಂದರೆ ಎಲ್ಲರಿಗೂ ಸುಖ ನೆಮ್ಮದಿ ಶಾಂತಿಗಳನ್ನು ನೀಡುವ ಗೂಡು. ಇಲ್ಲಿ ಮಾನವ ಸಂಬಂಧಗಳು ನೆಲೆಯೂರಿರುತ್ತವೆ. ಆ ಸಂಬಂಧಗಳನ್ನು ಹಸುನುಗೊಳಿಸಲು, ಸಂಬಂಧಗಳು ನೆಲೆಸಲು ಇದೊಂದು ಬಾಂಧವ್ಯದ ನೆಲೆಗೂಡು. ಮನೆ ಎಂದರೆ ಬಹಳಷ್ಟು ಜನರ ಕನಸು, ಬಹಳಷ್ಟು ಜನರ ಜೀವನದ ಗುರಿ, ಬಹಳಷ್ಟು ಜನರ ಧ್ಯೇಯಗಳು, ಬಹಳಷ್ಟು ಮಂದಿಯ ಜೀವಮಾನದ ಸಾಧನೆಯೂ ಸಹ ಹೌದು. ಇಂತಹ ಪವಿತ್ರ ಸ್ಥಳದಲ್ಲಿ ನಾವೆಲ್ಲ ಕೂಡಿ ನಲಿದು ಕುಪ್ಪಳಿಸಿ ಕುಣಿದಾಡುತ್ತೇವೆ. ಮನೆಯನ್ನು ಸುಂದರವಾಗಿ ಅಲಂಕರಿಸಿ ನೋಡಿದಾಗ ಮನಕ್ಕೆ ಮುದ, ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಆರಾಮದಾಯಕ ಎನಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯೂ ಸಹ 20X20 ಸೈಟ್‌ನಲ್ಲಿ ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಡ್ಯೂಪ್ಲೆಕ್ಸ್ ಮನೆಗಳನ್ನು ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹವೇ ಸರಿ. ಆದರೆ ಇಂಥ ಮನೆಗಳಿಂದ ಒಬ್ಬ ಸಾಮಾನ್ಯ ಗೃಹಿಣಿ ಎದುರಿಸಬೇಕಾದ ಸಮಸ್ಯೆಗಳನ್ನು ನನ್ನ ಅನುಭವದಲ್ಲಿ ಹೇಳಬೇಕೆನಿಸಿದೆ. ಮುಂದೆ ಇಂತಹ ಮನೆ ಕಟ್ಟಲು ಇಚ್ಛಿಸುವವರು ಇದನ್ನೆಲ್ಲ ಯೋಚನೆ ಮಾಡಿ ಮುಂದಡಿ ಇಡಿ ಎಂಬುದು ನನ್ನ ಆಶಯ. ಆ ನಿಟ್ಟಿನಲ್ಲಿ ನಾವು ಎದುರಿಸಬೇಕಾದವರು ಎಂದರೆ ನಮ್ಮ ಮಕ್ಕಳು ಹಾಗೂ ಮನೆಯ ಕೆಲಸದವರು.
ಡ್ಯೂಪ್ಲೆಕ್ಸ್ ಹೌಸ್‌ನಲ್ಲಿ ಸರ್ವೇ ಸಾಮಾನ್ಯವಾಗಿ ಮಾಸ್ಟರ್ ಬೆಡ್ ರೂಮ್ ಅಂತ ಇದ್ದೇ ಇರುತ್ತದೆ. ಮಕ್ಕಳು ಚಿಕ್ಕವರಿದ್ದಾಗ ಎಲ್ಲರೂ ಆ ಒಂದೇ ಹಾಸಿಗೆಯಲ್ಲಿ ಮಲಗಿರುತ್ತೇವೆ. ಅಪ್ಪ ಮಕ್ಕಳು ಒಟ್ಟಿಗೇ ಬಾತ್ ಟಬ್‌ನಲ್ಲಿ ಸ್ನಾನ ಮಾಡುತ್ತಾರೆ. ಮೈಕೈ ಉಜ್ಜುತ್ತ ಸ್ನಾನ ಮಾಡಿಸ್ತಾರೆ. ಬಟ್ಟೆ ಬರೆ ಎಲ್ಲಾ ಅಚ್ಚುಕಟ್ಟು ಮಾಡಿಕೊಡ್ತೀವಿ. ಆಗೆಲ್ಲ ಮಕ್ಕಳನ್ನು ಸ್ಕೂಲಿಗೆ ಕಳುಹಿಸುವ ಭರದಲ್ಲಿ ನಾವುಗಳೂ ಸಹ ಬಹಳ ಆ್ಯಕ್ಟಿವ್ ಆಗಿರ್ತೀವಿ. ಅದೇ ದೊಡ್ಡವರಾದರೆ, ಅಬ್ಬಬ್ಬಾ ಸಾಕುಸಾಕಾಗುತ್ತೆ. ಅವರ ಜೊತೆ ಜೊತೆಗೇ ನಾವು ಬೆಳೆದಿರ್ತೀವಿ. ನಮಗೂ ವಯಸ್ಸಾಗುತ್ತಾ ಬಂದಿರುತ್ತೆ. ಮೇಲಿನ ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿರುತ್ತಾರೆ. ಅಲ್ಲಿಂದ ಜೋರಾಗಿ ಕೂಗಿ ಟವೆಲ್, ಕಾಚ ಅಂತಾರೆ. ಆ ಸಮಯವೇ ಬಹಳ ಹಾಟ್ ಸಮಯ. ಇತ್ತ ನಾವು ಅಡುಗೆಮನೆ, ದೇವರ ಮನೆಯಲ್ಲಿ ಬ್ಯುಸಿ. ಒಲೆ ಮೇಲೆ ಎಣ್ಣೆಯೋ ಬಿಸಿ ನೀರೋ ಇದ್ದರೆ ಎಷ್ಟು ಜೋಪಾನವಾಗಿರಬೇಕು. ಏಮಾರಿದರೆ ಒಗ್ಗರಣೆಯ ಎಣ್ಣೆ ಮೈಮೇಲೆ ಪ್ರೋಕ್ಷಣೆ ಆಗುತ್ತೆ. ಕರಿಯೋಕೆ ಏನಾದ್ರೂ ಇಟ್ಟಿದ್ರೆ ಅಂತೂ ಗೋವಿಂದ…. ತರಕಾರಿ ಹೆಚ್ಚುತ್ತಿದ್ದರೆ ಕೈ ಕೊಯ್ದುಕೊಳ್ಳೋದು, ಇಲ್ಲಾ ಕುಕ್ಕರ್ ಇಟ್ಟಿದ್ರೆ ಕೈ ಸುಟ್ಟುಕೊಳ್ಳೋದು, ಅಲ್ಲೆಲ್ಲೋ ಐರನ್ ಬಾಕ್ಸ್ ಇಟ್ಟಿದ್ದರೆ ಅದರ ಮೇಲೆ ನಿಗಾ, ಗಡಿಬಿಡಿಯಲ್ಲಿ ಕೈ ಜಾರಿದರೆ ಆಗುವ ಅನಾಹುತಗಳೋ ಹಲವಾರು.
ನಮ್ಮ ಊಹೆಗೂ ನಿಲುಕದ ಅಪಘಾತಗಳು, ಬೈದು ಕಿರುಚಿ ನಾವು ಆ ಕೆಲಸದ ಮಧ್ಯದಲ್ಲೂ ಅವರಿಗೆ ಆ `ಆ್ಯಕ್ಸೆಸರೀಸ್’ಗಳನ್ನು ಸರಬರಾಜು ಮಾಡಬೇಕು. ಇಲ್ಲದಿದ್ದರೆ ಎಲ್ಲಕ್ಕೂ ಅಮ್ಮನೇ ಹೊಣೆ. ಆ ಸಮಯದಲ್ಲಿ ಯಜಮಾನರ ಹೆಲ್ಪ್ ಕೇಳಿದರೆ? ಆಕಾಶ ಭೂಮಿ ಒಂದಾಗಿ ಹೋಗೋತರಹ ಕಿರುಚಾಡಿ ಕೂಗಾಡಿ ಇಡೀ ಅಟ್ಮಾಸ್ಛಿಯರ್ ಹಾಳು ಮಾಡಿರುತ್ತಾರೆ. ಲೋಕದ ಮಾತೇ ಅಷ್ಟೇ ತಾನೆ! `ಒಳ್ಳೆದೆಲ್ಲಾ ಅಪ್ಪಂದು, ಕೆಟ್ಟದ್ದೆಲ್ಲಾ ಅಮ್ಮಂದು!’ ಸರಿ ಇದು ಒಂದು ಏಜ್‌ನಲ್ಲಿ. ಆದರೆ ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲಂತೂ ರಾಮರಾಮ! ದೊಡ್ಡರಾಗಿರುತ್ತಾರಲ್ಲಾ! ಅಂತ ನಾವು ಸುಮ್ಮನಿರೋದಕ್ಕೆ ಆಗೋಲ್ಲ. ನಮ್ಮ ಮಾತು ಕೇಳೋಲ್ಲ. ಎಷ್ಟೇ ಹೇಳಿದರೂ ಮೈಮೇಲೆ ಪ್ರಜ್ಞೆ ಇರೋಲ್ಲ. ಕೆಲಸ ಎಲ್ಲೋ, ಗಮನ ಇನ್ನೆಲ್ಲೋ! ಮೊಬೈಲ್, ಫ್ರೆಂಡ್ಸ್ ಮೇಲೆ ನಿಗಾ ಜಾಸ್ತಿ ಆಗುತ್ತೆ. ಎಲ್ಲ ಮರೀತಾರೆ. ಟಾಯ್ಲೆಟ್ ಬಾತ್ ರೂಮುಗಳಲ್ಲೂ ಮೊಬೈಲ್‌ಗಳನ್ನು ಕೊಂಡೊಯ್ಯುತ್ತಾರೆ. ನಾವು ಕೆಳಗಿನಿಂದ ಕಿರುಚಿದರೂ ಅವರುಗಳಿಗೆ ಕೇಳಿಸೋಲ್ಲ! ಫಾಲೋ ಅಪ್ ಮಾಡೋಕ್ಕೆ ಕಷ್ಟ ಆಗುತ್ತೆ. ಪ್ರಶ್ನಿಸಿದ್ರೆ ಹಾರಿಕೆ ಉತ್ತರ ನೀಡೋದ್ರಲ್ಲಿ ನಿಸ್ಸೀಮರು. ಇನ್ನು ಹೆಚ್ಚು ಮಾತಾಡಿಸಿದ್ರೆ ಬಾಯಿಗೆ ಬಂದಂತೆ ಮಾತನಾಡಿ ನಮ್ಮ ಬಾಯಿ ಮುಚ್ಚಿಸುತ್ತಾರೆ. ಆಗ ನಾವು ಓದಿದ, ಕೇಳಿದ ಲೇಖನಗಳ ವಿಷಯ ನಮ್ಮ ಮನಸ್ಸುಗಳಲ್ಲೇ ಚರ್ಚೆಗೊಳಪಟ್ಟು, ಕೊನೆಗೆ `ನಮ್ಮದೇ ತಪ್ಪು’ ಎಂಬ ತೀರ್ಮಾನಕ್ಕೆ ನಾನು ಬರಬೇಕಾಗುತ್ತೆ. ಮೊಬೈಲ್ ಕೊಡಿಸಲೇ ಬಾರದಿತ್ತು ಅನಿಸುತ್ತೆ! ಪ್ರಯೋಜನವೇನು? ಇಷ್ಟೆಲ್ಲದರ ಮಧ್ಯೆ ಮಕ್ಕಳು ಕೂಗಿಕೊಂಡಾಗ ಟವೆಲ್, ಅಂಡರ್‌ವೇರ್ ಕೊಡಲೇಬೇಕು. ಇಲ್ಲದಿದ್ರೆ ಅವರಿಗೂ ಸ್ಕೂಲ್ ಕಾಲೇಜುಗಳಿಗೆ ಲೇಟ್, ಇವರಿಗೂ ಆಫೀಸ್‌ಗೆ ಲೇಟ್. ಸ್ವಲ್ಪ ತಡವಾದ್ರೂ ತೊಂದರೇನೇ. ಸರಿ ಮತ್ತೆ ಅಲ್ಲೂ ಅಮ್ಮನಿಗೇ ಬೈಗಳು. ನಿನ್ನಿಂದ ಲೇಟಾಯ್ತು. ನನಗೆ ಪನಿಷ್‌ಮೆಂಟ್ ಕೊಟ್ಟರು. ಎಷ್ಟು ಅವಮಾನವಾಯಿತು ಗೊತ್ತಾ? ಎಂದು ನಿಂದಿಸಿ ಕೋಪಕ್ಕೆ ಅಂದಿನ ಡಬ್ಬಿ ಹಾಗೇ ವಾಪಸ್ಸು ಬರುತ್ತೆ. ಅವಳ ಪರಿಶ್ರಮ ಅಲ್ಲಿಗೆ ಅಂದಿಗೆ ಫೇಲ್ಯೂರ್! ಇನ್ನು ಮಕ್ಕಳ ಈ ತೊಳಲಾಟ ಪೇಚಾಟ ನೋಡಿ ತಂದೆ `ನಿನಗೇನು ಬೇಗ ಮಾಡೋಕ್ಕೇ? ನೋಡು ಮಕ್ಕಳು ಸಫರ್ ಮಾಡಿದ್ರು ನಿನ್ನಿಂದ,’ ಎಂದಾಗಲಂತೂ ಮನಸ್ಸಿಗೆ ತುಂಬಾ ನೋವಾಗುತ್ತವೆ.
ಇನ್ನು ಸ್ಕೂಲು ಕಾಲೇಜಿನಿಂದ ಬಂದು ಬ್ಯಾಗ್ ಕೆಳಗೆ, ಓದೋಕೆ ಮೇಲೆ ಕೂತರೆ ಇಲ್ಲಿ ಪುಸ್ತಕ ಮರೀತಾರೆ. ಕೆಳಗೇನು ಕೆಲಸ ಮಾಡ್ತಿರ್ತೀಯೋ ಏನೋ ಅವರು ಕೂಗಿದಾಗೆಲ್ಲ ನಾವು ರೆಡಿ ಇರಬೇಕು. ಅಲರ್ಟ್ ಆಗಿರಬೇಕು. ಅವರು ಕೇಳಿದ್ದನ್ನು ಕೋಡೋಕೆ. ಅವರು ಹೇಳಿದ್ದನ್ನ ಮಾಡೋಕೆ. ಅಮ್ಮ ಕಾಫಿ, ಅಮ್ಮ ಹಸಿವು, ಅಮ್ಮ ನೋವು, ಅಮ್ಮ ಪ್ಲೀಸ್ ನಿನ್ನ ಮೊಬೈಲ್ ಕೊಡು ಫ್ರೆಂಡ್ ಹತ್ರ ಡೌಟ್ ಕೇಳ್ಬೇಕು ಹೀಗೆ…. ನಾನಾತರದ್ದು.
ಮೇಲಿನ ರೂಮಿನಲ್ಲೇ ಕೂತು ಎಲ್ಲ ನಮ್ಮ ಬಳಿಯಿಂದಲೇ ತರಿಸಿಕೊಳ್ತಾರೆ. ತಿಂಡಿ, ಕಾಫಿ ಕೊಟ್ಟಿದ್ದರೆ ಆ ತಟ್ಟೆ, ಲೋಟ ಅಲ್ಲೇ ಇರುತ್ತೆ. ಅದನ್ನು ಕೆಳಗೆ ತರೋಲ್ಲ. ನಾವೇ ತರಬೇಕು! ಅವರುಗಳು ಹತ್ತಾರು ಸಹ ಇಳಿದು ಹತ್ತಿದರೂ ಇಂಥ ಕೆಲಸ ಮಾಡೋಲ್ಲ. ಅದು ಅವರೇ ಕುಡಿದಿಟ್ಟ ಲೋಟ, ತಿಂದಿಟ್ಟ ತಟ್ಟೆ. ಇನ್ನು ಮೇಲಿನ ಬಾತ್ ರೂಮಿನಲ್ಲಿ ಸ್ನಾನ ಮಾಡಿದ್ರೆ ಬಿಚ್ಚಿದ ಬಟ್ಟೆ ಅಲ್ಲೇ ಇರುತ್ತೆ. ಅದು ಕೆಳಗೆ ಬರೋದು ಬಹಳ ಕಷ್ಟ. ಇವರ `ಈ’ `ಇ’ಗಳನ್ನು ನೋಡಿಕೊಳ್ಳೋದ್ರಲ್ಲಿ ಅಮ್ಮ ಹೈರಾಣ ಆಗಿರ್ತಾಳೆ. ಈ ಕೊಡು ಆ ಕೊಡು ಅನ್ನೋದರಲ್ಲಿ ನಾವು ನಮ್ಮ ದಿನದ ನಮ್ಮದೇ ಸಮಯವನ್ನು ನಾವು ಉಪಯೋಗಿಸಿಕೊಳ್ಳಲಾಗುತ್ತಿಲ್ಲ! ನಮ್ಮ ಆರೋಗ್ಯವನ್ನು ನಾವು ನೋಡಿಕೊಳ್ಳಲಾಗುತ್ತಿಲ್ಲ!
ಇನ್ನು ಮನೆಕೆಲಸದವರು. ಇವರು ಇಂಟರ್‌ವ್ಯೂಗೆ ಬರ್ತಾರೆ ಆಗ ನೋಡ್ಬೇಕು ಅವರ ಗತ್ತು ಗಮ್ಮತ್ತು. ಸೊಂಟದ ಮೇಲೆ ಕೈ ಇಟ್ಕೊಂಡು ಅವರು ಕೇಳೋ ಸ್ಟೈಲು ನೋಡಬೇಕು.
“ಎಷ್ಟು ರೂಮ್?” (ನಮ್ಮನ್ನು ಏನೂ ಸಂಬೋಧಿಸೋದೇ ಇಲ್ಲ)
“3 ಇದೆಮ್ಮಾ.”
“ಡೈಲೀ ಗುಡಿಸಿ ಒರೆಸಬೇಕಾ?”
“ಹೌದಮ್ಮ. ಅಡುಗೆಮನೆ ಕಟ್ಟೆ ಒರಸಬೇಕು, ಡಸ್ಟಿಂಗ್ ಮಾಡಬೇಕು.”
ಬಾತ್ ರೂಮ್ ಕ್ಲೀನ್ ಮಾಡಬೇಕಾ? ಪೊರಕೆ ಉದ್ದ ಇರ್ಬೇಕು, ನನಗೆ ಬ್ಯಾಕ್ ಪೇನ್, ಮಾಪ್ ಇದ್ಯಾ? ಬಗ್ಗಿ ಒರೆಸೋಕ್ಕೆ ಆಗೋಲ್ಲ. ವಾಷಿಂಗ್ ಮೆಷಿನ್ ಇದೆ ಅಲ್ವಾ? ಬಟ್ಟೆ ಮೇಲೆ ಒಣಗಿ ಹಾಕಬೇಕಾ? ನನಗೆ ಬಕೆಟ್ ಎತ್ತೋಕೆ ಆಗೋಲ್ಲ. ಬಕೆಟ್ ಮೇಲಿಟ್ಟರೆ ಒಣಗಿ ಹಾಕ್ತೀನಿ. ಬಟ್ಟೆ ಮಡಿಚೋಕೆ ಬರೋಲ್ಲ. ನೀವೇ ಮಡಿಚಿಕೊಳ್ಳಬೇಕು. ಮನೆ ಮುಂದೆ ನೀರು ಹಾಕ್ತೀನಿ, ರಂಗೋಲಿ ನೀವೇ ಹಾಕೋಬೇಕು. ಡೈಲೀ ಬೆಡ್ ಮಾಡ್ಬೇಕಾ? ಹಾಂ, ಮರೆತಿದ್ದೆ… ನನಗೆ ಪಾತ್ರೆ ತೊಳೆಯೋ ಸೋಪು ಅಲರ್ಜಿ, ನನಗೆ ಲಿಕ್ವಿಡ್ ಸೋಪ್ ತಂದುಕೊಡಿ. ಆಮೇಲೆ ತಿಂಗಳಿಗೆ ಒಂದು ರಜಾ ಬೇಕು. ಮೊದಲನೇ ದಿನ ತುಂಬಾ ಹೊಟ್ಟೆ ನೋವು ಬರುತ್ತೆ ಹಾಗಾಗಿ. ಮಕ್ಕಳನ್ನ ಕರ್ಕೊಂಡು 3 ತಿಂಗಳಿಗೊಂದು ಸಾರಿ ನಾನು ತಾಯಿ ಮನೆಗೆ ಹೋಗ್ತೀನಿ. ನಮ್ಮಪ್ಪ ಮತ್ತೆ ನಮ್ಮಣ್ಣ ನನಗೆ ಮಕ್ಕಳ ಫೀಸ್‌ಗೆ ಹಣ ಕೊಡ್ತಾರೆ. ಅದನ್ನು ಇಸ್ಕೊಂಡು ಬರ್ಬೇಕು. ನಮ್ಮ ಯಜಮಾನರನ್ನ ಕಳಿಸಿದ್ರೆ ಅದು ಸೀದಾ ಸಾರಾಯಿ ಅಂಗಡೀಗೆ ಹೋಗುತ್ತೆ. ಹೀಗಾಗಿ ನಾನೇ ಹೋಗ್ಬೇಕು. ಈ ಮೂದೇವಿ ಸರಿ ಇದ್ದಿದ್ರೆ ನಾನೇಕೆ ಹೀಗೆ ಕಷ್ಟಪಡಬೇಕಿತ್ತು? ನಮ್ಮಪ್ಪನ ಮನೇಲಿ ನನ್ನನ್ನು ತುಂಬಾ ಚೆನ್ನಾಗಿ ನೋಡ್ಕೊಂಡಿದ್ರು. ಇವನಿಗೆ ಕಟ್ಟಿ ನನ್ನ ಲೈಫೇ ಹಾಳುಮಾಡಿಬಿಟ್ರು. ಸರಿ ಇವರ ಎಲ್ಲ ಪ್ರಶ್ನೆಗಳಿಗೂ ಒಪ್ಪಿಕೊಂಡು ಕೆಲಸಕ್ಕೆ ಬರಲು ಹೇಳ್ತೀವಿ. ಕೆಲಸಕ್ಕೆ ಸೇರಿದ ಮೇಲೆ ಇವರ ರೀತಿ ಬದಲಾಗುತ್ತೆ. ನಾನೇನೋ ಒಂದು ಗಂಟೆ ಕೆಲ್ಸ ಅಂದ್ಕೊಂಡೆ. ಆದರೆ 2 ಗಂಟೆ ಹಿಡಿಯುತ್ತೆ. ನೀವು ಕೊಡೋ ಸಂಬಳ ಸಾಕಾಗೋಲ್ಲ. ಜಾಸ್ತಿ ಮಾಡಿದ್ರೇನೇ ನಾನು ನಾಳೆಯಿಂದ ಬರ್ತೀನಿ. ಇಲ್ಲದಿದ್ರೆ ನೀವು ಯಾರನ್ನಾದ್ರೂ ನೋಡ್ಕೊಳ್ಳಿ. 2 ದಿನದ ಸಂಬಳ ಕೊಟ್ಬಿಡಿ. ಇಲ್ಲ ಯೋಚನೆ ಮಾಡಿ ನನ್ನ ಮೊಬೈಲ್‌ಗೆ ಫೋನ್ ಮಾಡಿ ಬೇಕಿದ್ರೆ ಬರ್ತೀನಿ ಎಂದು ಕಡ್ಡಿ ತುಂಡರಿಸುವಂತೆ ಮಾತನಾಡಿ ಹೊರಟುಬಿಡ್ತಾರೆ. ಅವರು ಮಾಡೋ ಈ ಕೆಲಸಗಳಿಗೆ ನಾವು ಕೊಡಲಾರದಷ್ಟು, ಅಷ್ಟು ದುಡ್ಡು ಅವಶ್ಯಕತೆ ಇಲ್ಲದಷ್ಟು ಕೇಳಿ ನಮಗೆ ಬೇಜಾರು ಮಾಡಿ ಮುಜುಗರಕ್ಕೆ ಸಿಲುಕಿಸುತ್ತಾರೆ.
ಸರಿ ಮಗದೊಬ್ಬಳ ಇಂಟರ್‌ವ್ಯೂ. ಹಾಗೂ ಹೀಗೂ ಒಬ್ಬಳು ಫಿಕ್ಸ್ ಆಗ್ತಾಳೆ. ಬಂದ್ಲಲ್ಲಪ್ಪ ನಾವು ಇನ್ನು ಸ್ವಲ್ಪ ಫ್ರೀ ಅಂದುಕೊಂಡು ಹಾಗೇ ಕುಳಿತುಕೊಳ್ಳೋ ಹಾಗಿಲ್ಲ. ಕಿಟಕಿ ಬಾಗಿಲು ಒರೆಸಿರೋಲ್ಲ. ಬಾಲ್ಕನಿ ತೊಳೆದಿರೋಲ್ಲ, ಮೆಟ್ಟಿಲು ಮೇಲಿನ ಧೂಳು ಹಾಗೇ ಇರುತ್ತೆ. ಇನ್ನು ಮಕ್ಕಳು ಮಾಡಿದ ಎಲ್ಲ ಅವಾಂತರಗಳೂ ಅಲ್ಲೇ ಇರ್ತವೆ. ಮಕ್ಕಳು ಓದೋವಾಗ ಬಿಟ್ಟಿದ್ದ ಖಾಲಿ ಚಿಪ್ಸ್ ಕವರ್, ಖಾಲಿ ಹಾಲಿನ ಲೋಟ ಒಣಗಿ ಹೋಗಿರುತ್ತೆ. ತಿಂಡಿ ತಿಂದ ತಟ್ಟೆ, ದೇವರ ಪ್ರಸಾದವೆಂದು ಮುಡಿದು ಅಲ್ಲೇ ಇಟ್ಟಿರೋ ಒಣಗಿದ ಹೂ, ತಿಂದು ಬಿಸಾಡಿದ ಚಾಕಲೇಟ್ ಪೇಪರ್…. ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾವೇನಾದರ್ರೂ ಏನಮ್ಮ ಇದೆಲ್ಲಾ ಮಾಡಬಾರದಾ? ಎಂದರೆ ಅಮ್ಮಾವರೇ, ನೀವೇ ಮಕ್ಕಳಿಗೆ ಕಲಿಸಿಕೊಡಬೇಕು. ಮುಂದೆ ಅವರುಗಳು ಫಾರಿನ್‌ಗೆ ಹೋದರೆ ಅವರ ಕೆಲಸ ಅವರೇ ಮಾಡ್ಕೊಬೇಕಾ? ಇವಾಗ್ಲಿಂದ ಹೇಳಿಕೊಟ್ಟರೆ ಚೆನ್ನಾಗಿರುತ್ತೆ ಅಲ್ವಾ? ಇವರ ಬುದ್ಧಿವಾದ ಜಾಸ್ತಿ ಆಗುತ್ತಾ ಹೋಗುತ್ತೆ. ನಮಗೆ ತಲೆ ಬಿಸಿ ಆಗುತ್ತೆ. ದುಡ್ಡು ಕೊಟ್ಟು ಇವರ ಕೈಲಿ ನಾವು ಬುದ್ಧಿವಾದ ಕೇಳೋ ಪರಿಸ್ಥಿತಿ ಬರುತ್ತೆ, ಜೋಕೆ!
ಬೇಕಿತ್ತಾ ಡ್ಯೂಪ್ಲೆಕ್ಸ್ ಹೌಸ್!?
– ಮಂಜುಳಾ ರಾಜ್