ಬಹು ನಿರೀಕ್ಷಿತ ವಿಶ್ವ ಸುಂದರಿ 2025 ಗ್ರ್ಯಾಂಡ್ ಫಿನಾಲೆ ಶನಿವಾರ ಸಂಜೆ ಹೈದರಾಬಾದ್‌ನ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಥಾಯ್ಲೆಂಡ್ನ ಒಪಲ್ ಸುಚಾತಾ ಚೌವಾಂಶ್ರೀ (Opal Suchata Chuangsri) 72ನೇ ಆವೃತ್ತಿಯ ವಿಶ್ವ ಸುಂದರಿ ಕಿರೀಟ- 2025ನ್ನು ಮುಡಿಗೇರಿಸಿಕೊಂಡಿದ್ದಾರೆ.ಅದ್ಧೂರಿಯಾಗಿ ನಡೆದ ಸಮಾರಂಭದಲ್ಲಿ ಹಾಲಿ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಟೋ ಅವರು ಒಪಲ್ ಸುಚಾತಾ ಚೌಂಗಶ್ರೀ ಅವರಿಗೆ ಕಿರೀಟ ಧಾರಣೆ ಮಾಡಿದರು. ಅಂತರರಾಷ್ಟ್ರೀಯ ಸಂಬಂಧಗಳ ವಿದ್ಯಾರ್ಥಿನಿ ಮತ್ತು ವೃತ್ತಿಪರ ಮಾಡೆಲ್ ಆಗಿರುವ ಸುಚಾತಾ, ತೀವ್ರ ಪೈಪೋಟಿಯ ಅಂತಿಮ ಸುತ್ತಿನ ನಂತರ ವಿಜೇತರಾದರು.
ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಮೊದಲ ರನ್ನರ್ ಅಪ್ ಆದರೆ, ಪೋಲೆಂಡ್‌ನ ಮಜಾ ಕ್ಲಾಜ್ಡಾ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು.
ಮಿಸ್ ವರ್ಲ್ಡ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತೆಗೆ ಒಂದು ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂಪಾಯಿ ಮೌಲ್ಯದ ವಜ್ರದ ಕಿರೀಟವನ್ನು ಅವರ ಮುಡಿಗೆ ಸಿಂಗರಿಸಲಾಯಿತು. ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ಮೊದಲ ರನ್ನರ್ ಅಪ್ ಆದರೆ, ಪೋಲ್ಯಾಂಡ್ನ ಮಜಾ ಕ್ಲಾಜ್ಜಾ 2ನೇ ರನ್ನರ್ ಅಪ್ ಹಾಗೂ ಕೆರೆಬಿಯನ್ ದ್ವೀಪದ ಮಾರ್ಟಿನಿಕ್ ಆರ್ಲಿ ಜೋಕಿಮ್ 3ನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡರು.
ಅಗ್ರ 8 ರಲ್ಲಿ ಸ್ಥಾನ ಪಡೆಯುವಲ್ಲಿ ಭಾರತದ ನಂದಿನಿ ವಿಫಲ :
ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 108 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ಒಂದು ತಿಂಗಳಿನಿಂದ ವಿವಿಧ ಸುತ್ತುಗಳಲ್ಲಿ ಈ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಅಂತಿಮ (ಟ್ಯಾಲೆಂಟ್ ಕಾಂಪಿಟಿಷನ್) ಸುತ್ತಿಗೆ 24 ಮಂದಿ ಆಯ್ಕೆಯಾಗಿದ್ದರು, ಇದರಲ್ಲಿ ಭಾರತದ ರಾಜಸ್ಥಾನ ಮೂಲದ ನಂದಿನಿ ಗುಪ್ತಾ ಒಬ್ಬರಾಗಿದ್ದರು. ಏಪ್ರಿಲ್ 2023 ರಲ್ಲಿ, 19ನೇ ವಯಸ್ಸಿನಲ್ಲಿ, ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್’ ಕಿರೀಟವನ್ನು ನಂದಿನಿ ಗೆದ್ದುಕೊಂಡಿದ್ದರು. ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸುವ ನಿರೀಕ್ಷೆ ಹುಟ್ಟಿಸಿದ್ದ ನಂದಿನಿ ರೇಸ್‌ನಿಂದ ಹೊರಬಿದ್ದು ಅಗ್ರ 8 ರಲ್ಲಿ ಸ್ಥಾನ ಪಡೆಯುವ ಮುನ್ನವೇ ಹೊರಬಿದ್ದರು.