ಕರ್ನಾಟಕ ರಾಜ್ಯದ ನಾಲ್ಕನೆಯ ದೊಡ್ಡ ಜಿಲ್ಲೆ ಎಂದು ಪರಿಗಣಿಸಲ್ಪಟ್ಟಿರುವ ಧಾರವಾಡ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಿನಂತಿರುವ ಜಿಲ್ಲೆ. ಅದರಲ್ಲೂ ಹುಬ್ಬಳ್ಳಿ ಎಂದ ತಕ್ಷಣ ವಾಣಿಜ್ಯೋದ್ಯಮದ ತಾಣ ಎಂದು ಎಲ್ಲರ ಮನದಲ್ಲೂ ಬೇರೂರಿಬಿಟ್ಟಿದೆ. ಹುಬ್ಬಳ್ಳಿಯಲ್ಲಿ ರೈಲು, ವಿಮಾನ ಮತ್ತು ರಸ್ತೆ ಸಾರಿಗೆ ಎಲ್ಲ ಸೌಕರ್ಯಗಳು ಇರುವುದರಿಂದ ಮುಖ್ಯ ಸಾರಿಗೆ ಕೇಂದ್ರವೆಂದೂ ಹುಬ್ಬಳ್ಳಿ ಪರಿಗಣಿಸಲ್ಪಟ್ಟಿದೆ. ಇಂತಹ ಹುಬ್ಬಳ್ಳಿಗೆ ಬಂದವರು ಇಲ್ಲಿನ ಉಣಕಲ್ ಕೆರೆಗೆ ಒಮ್ಮೆಯಾದರೂ ಭೇಟಿ ನೀಡಲಿಲ್ಲವೆಂದಾದರೆ ನೀವು ಏನನ್ನೋ ಕಳೆದುಕೊಂಡಂತೆ. ಅಷ್ಟೇ ಅಲ್ಲ, ಪರಿಸರ ಪ್ರಿಯರಿಗಂತೂ ಇದು ಸ್ವರ್ಗವಷ್ಟೇ ಅಲ್ಲ ಇಲ್ಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಎರಡು ಕಣ್ಣು ಸಾಲದೇನೋ ಎಂಬಂತಿದೆ.

ಇತ್ತೀಚಿನ ವರ್ಷಗಳಲ್ಲಿ ಕೆರೆಗಳು ಮಾಯವಾಗಿ ಎಲ್ಲೆಂದರಲ್ಲಿ ಅಪಾರ್ಟ್‌ಮೆಂಟ್‌ ತಲೆ ಎತ್ತಿ ಕೆರೆಗಳ ಅಸ್ತಿತ್ವವೇ ಇಲ್ಲದಂತೆ ತನ್ನದೇ ಆದ ಪರಿಸರ ನಿರ್ಮಾಣವಾಗುತ್ತಿರುವುದು ತುಂಬ ಕಳವಳಕಾರಿ ಸಂಗತಿ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೆರೆಗಳಿದ್ದವು, ಅವು ಎಷ್ಟು ಅತಿಕ್ರಮಣವಾಗಿವೆ ಎಂಬುದನ್ನು ತಿಳಿಯಲು ರಚಿತವಾದ ಸಮಿತಿಯೊಂದಕ್ಕೆ ಸಿಕ್ಕ ಸಂಗತಿಗಳು ತುಂಬ ಕಳವಳಕಾರಿಯಾಗಿದ್ದವು ಎಂಬುದನ್ನು ನಾವು ಕಳೆದ ಕೆಲವು ದಿನಗಳಿಂದ ದಿನಪತ್ರಿಕೆಗಳಲ್ಲಿ ಸುದ್ದಿ ವಾಹಿನಿಗಳಲ್ಲಿ ಕೇಳಿದ್ದೇವಲ್ಲವೇ? ಹಾಗಾದರೆ ಹುಬ್ಬಳ್ಳಿಯ ಉಣಕಲ್ ಕೆರೆಯನ್ನು ನೋಡ ಬಂದರೆ ಸಾಕು, ಅದರೊಳಗಿನ ಇತಿಹಾಸದೊಡನೆ ಇಂದಿಗೂ ತನ್ನ ಸೌಂದರ್ಯವನ್ನು ಒಡಲಲ್ಲಿ ಹುದುಗಿಸಿ ಪರಿಸರಪ್ರೇಮಿಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಜೀವಸೆಲೆಯಾಗಿ ಕಂಗೊಳಿಸುತ್ತಿದೆ.

ಒಂದು ಕಾಲಕ್ಕೆ ಗ್ರಾಮ ಜೀವನದ ಕೇಂದ್ರಬಿಂದುವಾಗಿ ಈ ಕೆರೆಗಳಿದ್ದವು. ಪ್ರಾಚೀನ ಸಂಪ್ರದಾಯದ ಪ್ರಕಾರ ಮರಗಳನ್ನು ನೆಡುವುದು, ಶಾಲೆಗಳನ್ನು ತೆರೆಯುವುದು, ಬಾವಿಗಳನ್ನು ತೆಗೆಸುವುದು, ದೇವಾಲಯಗಳನ್ನು  ನಿರ್ಮಿಸುವುದು, ಕೆರೆಯನ್ನು ನಿರ್ಮಿಸುವುದು ದಾನ ಪರಂಪರೆಯ ಅವಿಭಾಜ್ಯ ಅಂಗಗಳಾಗಿದ್ದವು. ಮನುಷ್ಯನಿಗೆ ಮಾತ್ರವಲ್ಲದೇ ಇತರ ಎಲ್ಲ ಜೀವಜಂತುಗಳಿಗೆ ನೀರುಣಿಸುವ ಜೊತೆಗೆ ಅದರ ಸುತ್ತಮುತ್ತ ಕೆಲವು ಹಳ್ಳಿಗಳು ಹುಟ್ಟಿಕೊಂಡು ತನ್ನದೇ ಆದ ಪ್ರಕೃತಿಯನ್ನು ಈ ಕೆರೆಗಳು ನೀಡುತ್ತಿದ್ದವು. ಇಂದಿಗೂ ಕೂಡ ದೇಶದ ಇತಿಹಾಸದಲ್ಲಿ ಅನೇಕ ಕೆರೆಗಳಿಗೆ ತನ್ನದೇ ಆದ ಇತಿಹಾಸವಿದೆ. ಅವುಗಳ ಸುತ್ತ ಹಲವು ಶಾಸನಗಳಿವೆ, ಮೋಕ್ಷ ಸಾಧಕರ ಕಥೆಗಳಿವೆ.

ಹುಬ್ಬಳ್ಳಿ-ಧಾರವಾಡ ನಡುವೆ ಅವಳಿನಗರಗಳಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‌ಗಳಲ್ಲಿ ದಿನಕ್ಕೆ 55 ರೂ.ಗಳ ರಿಯಾಯಿತಿ ಪಾಸ್‌ ಸೌಲಭ್ಯವುಂಟು ಇದನ್ನು ಪಡೆದರೆ ಸಾಕು ಹುಬ್ಬಳ್ಳಿ-ಧಾರವಾಡವನ್ನು ಒಂದು ದಿನದ ಮಟ್ಟಿಗೆ ಎಲ್ಲೆಂದರಲ್ಲಿ ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಬಹುದಾಗಿದೆ. ಹುಬ್ಬಳ್ಳಿ ಬೆಂಗಳೂರಿನಿಂದ 400 ಕಿ.ಮೀ., ಧಾರವಾಡದಿಂದ 20 ಕಿ.ಮೀ., ಬೆಳಗಾವಿಯಿಂದ 85 ಕಿ.ಮೀ. ದೂರವಿದೆ. ಇದೊಂದು ವಾಣಿಜ್ಯ ಕೇಂದ್ರ. ಛೋಟಾ ಮುಂಬೈ ಎಂದೂ ಹುಬ್ಬಳ್ಳಿಯನ್ನು ಕರೆಯುತ್ತಾರೆ.

ಇದು ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರಲ್ಲಿ ಬರುತ್ತದೆ. ಅಷ್ಟೇ ಅಲ್ಲ ಕಾರವಾರ ಬಂದರು ಕೂಡ ಇಲ್ಲಿಂದ 165 ಕಿ.ಮೀ. ಅಂತರವಿದ್ದು ಒಂದೆಡೆ ನೈರುತ್ಯ ರೈಲ್ವೆ ವಲಯ. ಮತ್ತೊಂದೆಡೆ ವಿಮಾನ ನಿಲ್ದಾಣ. 46 ವಾರ್ಡ್‌ ಹೊಂದಿದ ಮಹಾನಗರ ಪಾಲಿಕೆ. 1997ರಿಂದ ವಾಯ್ಯವ್ಯ ಸಾರಿಗೆ ಸಂಸ್ಥೆಯನ್ನು ಹೊಂದುವ ಮೂಲಕ ರಾಜ್ಯದ ಎಲ್ಲ ಮಾರ್ಗಗಳಿಂದಲೂ ರಸ್ತೆ ಸಾರಿಗೆ ಸಂಪರ್ಕ ಹೊಂದಿದೆ.

ಉಣಕಲ್ ಕೆರೆಗಾಗಿ ಧಾರವಾಡದಿಂದ ಹುಬ್ಬಳ್ಳಿಗೆ ಬರುವುದಾದರೆ ಉಣಕಲ್ ಕೆರೆಯ ನಿಲುಗಡೆ ಅಂತ ಹೇಳಬೇಕು. ಹುಬ್ಬಳ್ಳಿಗೆ ಬಂದು ಉಣಕಲ್ ಕೆರೆಗೆ ಬರಬೇಕೆಂದರೆ ಧಾರವಾಡಕ್ಕೆ ಹೋಗುವ ವಾಹನಗಳಲ್ಲಿ ಬರಬೇಕು. ಒಟ್ಟಾರೆ ಹುಬ್ಬಳ್ಳಿ-ಧಾರವಾಡ ಇವೆರಡೂ ಅವಳಿನಗರಗಳಿಂದ ಉಣಕಲ್ ಕೆರೆಗೆ ಬರಲು ಸಾಕಷ್ಟು ಸಾರಿಗೆ ವ್ಯವಸ್ಥೆ ಇದ್ದು, ಉಣಕಲ್ ಕೆರೆಗೆ ನಿಲುಗಡೆ ಕೂಡ ಕಲ್ಪಿಸಲಾಗಿದೆ.

110 ವರ್ಷಕ್ಕೂ ಹೆಚ್ಚಿನ ಇತಿಹಾಸ ಪರಂಪರೆಯುಳ್ಳ ಉಣಕಲ್‌ ಕೆರೆಯೂ ಕೂಡ ಹುಬ್ಬಳ್ಳಿಯ ಅತಿ ಪ್ರಾಚೀನ ಕೆರೆ. 200 ಎಕರೆ ಪ್ರದೇಶವನ್ನು ಆರಿಸಿರುವ ಈ ಕೆರೆಯು ಹುಬ್ಬಳ್ಳಿಯ ಅತ್ಯಂತ ಆಕರ್ಷಣೆಯ ತಾಣಗಳಲ್ಲಿ ಒಂದಾಗಿದೆ. ಮನರಂಜನಾ ಚಟುವಟಿಕೆಗಳಲ್ಲದೇ ಪರಿಸರಪ್ರಿಯರು ಮುಂಜಾನೆಯ ಸೂರ್ಯೋದಯ ಮತ್ತು ಸಂಜೆಯ ಸೂರ್ಯಾಸ್ತವನ್ನು ವೀಕ್ಷಿಸಲು ಅವಕಾಶ ಹೊಂದಿರುವ ಜೊತೆಗೆ ಬಯಲು ರಂಗಮಂದಿರ, ಉದ್ಯಾನವನ, ಸ್ವಾಮಿ ವಿವೇಕಾನಂದರ ಮೂರ್ತಿ ಹೊಂದಿದ ನಡುಗಡ್ಡೆಯಂತೆ ಕಂಗೊಳಿಸುವ ತಾಣ. ಅಲ್ಲಿ ಹೋಗಿ ಬರಲು ಬೋಟಿಂಗ್‌ ವ್ಯವಸ್ಥೆ ಇದೆ. ಇವುಗಳ ಜೊತೆಗೆ ಕುಡಿಯುವ ನೀರಿನ ಸೆಲೆಯನ್ನು ಒಳಗೊಂಡು ಸರೋವರ ಸಂಕೀರ್ಣ ಸುಂದರ ಹಚ್ಚ ಹಸುರಿನ ಪ್ರಕೃತಿ ರಮ್ಯ ಪರಿಸರ ಎಲ್ಲರ ಮನತಣಿಸುವಂತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.

ಇಲ್ಲಿ ಒಳ ಪ್ರವೇಶವಾದರೆ ಸಾಕು ಎದುರಿಗೆ ಬೋಟಿಂಗ್‌ ವ್ಯವಸ್ಥೆಯನ್ನು ಕಾಣುತ್ತೇವೆ. ಇಲ್ಲಿ ದೊಡ್ಡ ಬೋಟ್‌ ಹಾಗೂ ಚಿಕ್ಕ  ಬೋಟ್‌ಇದ್ದು ನಮ್ಮ ಸಂಖ್ಯೆಯ ಮೇಲೆ ಅವರು ನಿಗದಪಡಿಸಿದ ದರದಲ್ಲಿ ಬೋಟಿಂಗ್‌ ಮಾಡಬಹುದಾಗಿದೆ. ಇನ್ನು ಪಾದಚಾರಿಗಳ ಮಾರ್ಗದಲ್ಲಿ ಕಿರೆ ದಂಡೆಗುಂಟ ಸಂಚರಿಸತೊಡಗಿದರೆ ಸಾಕು, ಒಂದೆಡೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಭರಾಟೆ ಸುತ್ತುಗೋಡೆಯಾಚೆ ಕಂಡರೆ ಗೋಡೊಳಗಿನ ಪರಸರದಲ್ಲಿ ಬೆಳೆದು ನಿಂತ ಗಿಡಮರಗಳು, ಮಕ್ಕಳ ಉದ್ಯಾನವನದಲ್ಲಿನ ಜೋಕಾಲಿ, ಜಾರುಬಂಡಿ ಇತ್ಯಾದಿ ಸಾಮಗ್ರಿಗಳು ಅಲ್ಲಲ್ಲಿ ಕುಳಿತುಕೊಳ್ಳಲು ನಿರ್ಮಿಸಿರುವ ಕಟ್ಟಿಗೆಯ ಹಾಗೂ ಕಲ್ಲಿನ ಬೆಂಚ್‌ಗಳು, ಒಂದೆಡೆ ಬಯಲು ರಂಗಮಂದಿರ ಮತ್ತೊಂದೆಡೆ ವೀಕ್ಷಣಾ ಗೋಪುರದಂತೆ ಕಾಣುವ ವಿನೂತನ ಶೈಲಿಯ ಕಟ್ಟಡದ ಮೆಟ್ಟಿಲುಗಳನ್ನೇರಿ ಮೇಲೆ ಬಂದರೆ ಇಡೀ ಉಣಕಲ್ ಕೆರೆಯ ರಮ್ಯ ನೋಟವನ್ನು ಆಹ್ಲಾದಿಸಬಹುದು. ಇಲ್ಲಿನ ನೀರಿನಲ್ಲಿ ಅಲೆಯುತ್ತಿರುವ ಬಾತುಕೋಳಿಗಳು ತಮ್ಮಷ್ಟಕ್ಕೆ ತಾವು ಜೊತೆಜೊತೆಯಾಗಿ ಸಾಗುತ್ತಿರುವ ನೋಟವಂತೂ ಪ್ರೇಮಿಗಳಿಗೆ  ರಮಣೀಯತೆಯನ್ನು ನೀಡುತ್ತದೆ.

ಆಯಾಸವಾಗಿದ್ದಲ್ಲಿ ಹುಲ್ಲುಹಾಸಿನ ಮೇಲೆ ಮಲಗಿ ವಿಶ್ರಾಂತಿ ಪಡೆಯಬಹುದು. ನಿಮ್ಮೊಂದಿಗೆ ತಿನ್ನಲು ತಿಂಡಿತಿನಿಸು ತಂದಿದ್ದಲ್ಲಿ ಒಂದೆಡೆ ಕುಳಿತು ತಿಂದು ಅಲ್ಲಿಯೇ ನಿಲ್ಲಿಸಿರುವ ವಿವಿಧ ಪ್ರತಿಕೃತಿಗಳಲ್ಲಿ ಕಸವನ್ನು ಹಾಕಿ ಸ್ವಚ್ಛತೆಗೆ ಆದ್ಯತೆ ನೀಡಿ. ನೀರಿನ ವ್ಯವಸ್ಥೆ ಕೂಡ ಉತ್ತಮವಾಗಿದ್ದು, ನೀರು ಕುಡಿದು ಮತ್ತೆ ಕೆರೆ ದಡದ ಸುತ್ತ ಸಂಚರಿಸಬಹುದಾದ ಪರಿಸರ ನಿರ್ಮಿತವಾಗಿದೆ. ಇದು ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಎಲ್ಲ ಜನರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಉದ್ಯಾನದಲ್ಲಿ ಪ್ರವೇಶಿಸಿದರೆ ಸಾಕಷ್ಟು ಹಸಿರ ಸಿರಿಯ ರಮ್ಯತೆಯಲ್ಲಿ ನಿಮ್ಮನ್ನು ನೀವು ಮರೆಯುವಂತಿದೆ ಇಲ್ಲಿನ ಪರಿಸರ. ಉಣಕಲ್ ಕೆರೆಯ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದ್ದು, ಕೆರೆಯ ಬಳಿ ವಾಹನಗಳಿಗೆ ನಿಲುಗಡೆ ಪಾರ್ಕಿಂಗ್‌ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕೆರೆಯ ಸುತ್ತಲೂ ಆಕರ್ಷಕ ವಿದ್ಯುತ್‌ದೀಪಗಳನ್ನು ಅಳವಡಿಸುವ ಮೂಲಕ ಕೆರೆಯ ಸೌಂದರ್ಯವನ್ನು ಇಮ್ಮಡಿಗೊಳಿಸಲಾಗಿದೆ.

ದಿನನಿತ್ಯದ ಸಂಸಾರದ ಜಂಜಾಟ, ಕೆಲಸದ ನಡುವೆ ಒಂದಿಷ್ಟು ರಿಲ್ಯಾಕ್ಸ್ ಬೇಕಿದ್ದಲ್ಲಿ ಇಂತಹ ಸ್ಥಳಗಳಿಗೆ ಕುಟುಂಬ ಸಹಿತ ಬರುವುದು ಒಳ್ಳೆಯದು.

ಇದು ಉಲ್ಲಾಸ, ಸಂತೋಷದ ಜೊತೆಗೆ ಹಿತಕರವಾದ ವಾತಾವರಣದಲ್ಲಿ ತಾಜಾ ಗಾಳಿಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕೆರೆಗೆ ಪ್ರವೇಶ ಬೆಳಗಿನ 9 ರಿಂದ ಸಂಜೆ 8ರವರೆಗೆ ಇದ್ದು, ಇದರ ಸುತ್ತಮುತ್ತ ವಾಸಿಸುತ್ತಿರುವ ಜನರ ಬೆಳಗಿನ ವಾಯುವಿಹಾರಕ್ಕಾಗಿ ಪ್ರಾತಃಕಾಲ 5 ರಿಂದ 8.30ರವರೆಗೂ ಉಚಿತ ಅಕಾಶ ಕಲ್ಪಿಸಲಾಗಿರುವುದು ಕೂಡ ವಿಶೇಷ. ಹಾಗಾದರೆ ಇನ್ನೇಕೆ ತಡ? ಹುಬ್ಬಳ್ಳಿಗೆ ಯಾವುದಾದರೂ ಕೆಲಸಕ್ಕೆ ಬರುವುದಾದರೆ ಅಥವಾ ಉದ್ದೇಶಪೂರ್ವಕವಾಗಿ ಸ್ವಲ್ಪ ಬಿಡುವಿನ ವೇಳೆ ಕಳೆಯಬಯಸಿದ್ದಲ್ಲಿ ತಪ್ಪದೇ ಉಣಕಲ್ ಕೆರೆಗೆ ಬನ್ನಿ, ಆನಂದವನ್ನು ಹೊಂದಿ. ಅಂದಹಾಗೆ ಇಲ್ಲಿ ಪ್ರವೇಶಕ್ಕೆ ನಿಗದಿತ ದರವನ್ನು ನೀಡಬೇಕು. ದೊಡ್ಡವರಿಗೆ 10 ರೂ., ಸಣ್ಣ ಮಕ್ಕಳಿಗೆ 5 ರೂ. ವಾಹನಗಳಿಗೆ ಕೂಡ ಸ್ಥಳಾವಕಾಶವಿದ್ದು ಅವುಗಳ ನಿಲುಗಡೆಗೆ ಅಂದರೆ ದ್ವಿಚಕ್ರ ವಾಹನಗಳಾಗಿದ್ದಲ್ಲಿ 2 ರೂ., 4 ಚಕ್ರದ ವಾಹನಗಳಿಗೆ 5 ರೂ. ಶುಲ್ಕವನ್ನು ನೀಡಬೇಕು. ಒಟ್ಟಾರೆ ಯಾವುದೇ ರೀತಿ ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ಬನ್ನಿ ಉಣಕಲ್ ಕೆರೆಯ ಸೌಂದರ್ಯ ಸವಿಯೋದನ್ನು ಮಾತ್ರ ಕಳೆದುಕೊಳ್ಳಬೇಡಿ. ಇದು ವರ್ಷವಿಡೀ ಯಾವ ಸಂದರ್ಭದಲ್ಲಾದರೂ ಬಂದು ನೋಡಬಹುದಾದ ತಾಣ.

ವೈ.ಬಿ. ಕಡಕೋಳ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ