ಹೊಸ ಟ್ರೆಂಡ್‌ಗೆ ಹೆಚ್ಚು ಒತ್ತು ನೀಡುತ್ತಿರುವ ಈ ದಿನಗಳಲ್ಲಿ, ಪ್ರತಿ ಕ್ಷೇತ್ರದಲ್ಲೂ ಹೊಸದನ್ನು ಹುಡುಕುತ್ತಿದೆ ಇಂದಿನ ಜನತೆ, ಮಾಡಿದ್ದೇ ಫ್ಯಾಷನ್ನು, ಆಡಿದ್ದೇ ಆಟ, ಹಾಡಿದ್ದೇ ಹಾಡು! ಪಾಶ್ಚಾತ್ಯ ಸಂಸ್ಕೃತಿ ಎಲ್ಲೆಡೆ, ಎಲ್ಲಾ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಿಬಿಟ್ಟಿದೆ. ಕೆಂಚರ ಹಾಡು, ಅವರ ಸಂಸ್ಕೃತಿ ಇಂದಿನ ಜನತೆಯನ್ನು, ಅದರಲ್ಲೂ ಯುವಜನತೆಯನ್ನು ಹುಚ್ಚೆಬ್ಬಿಸುತ್ತಿದೆ, ಎಲ್ಲಿಗೋ ಎಳೆದುಕೊಂಡು ಹೋಗುತ್ತಿದೆ. ಇಂತಹ ಕಾಲದಲ್ಲಿ ಹೊಸತನದ ಆವಿಷ್ಕಾರವನ್ನು ಹುಡುಕುವ ಸಲುವಾಗಿ ಪ್ರಸಿದ್ಧ ಗಾಯಕಿಯೋರ್ವರು ಮುಂದಾಗಿದ್ದಾರೆ.
ಅಲ್ಲೆಲ್ಲೋ ಒಂದೆಡೆ ಏರೋಬಿಕ್ಸ್ ನಡೆಯುತ್ತಿದೆ ಎಂದರೆ, ಒಂದಷ್ಟು ದೂರದಲ್ಲಿ ಲಯಬದ್ಧ ಪಾಶ್ಚಾತ್ಯ ಸಂಗೀತ ಕಿವಿಗಪ್ಪಳಿಸುತ್ತಿರುತ್ತದೆ. ವುಡನ್ ಫ್ಲೋರ್ ಆಗಿದ್ದರಂತೂ ಅಲ್ಲಿ ಕುಣಿಯುವವರ ಹೆಜ್ಜೆನಾದ ಅಷ್ಟೇ ಲಯಬದ್ಧವಾಗಿರುತ್ತದೆ. ಆ ವೆಸ್ಟ್ರನ್ ಮ್ಯೂಸಿಕ್ ಬದಲಿಗೆ ನಮ್ಮ ಕನ್ನಡ ಕವಿಗಳ ಹಾಡುಗಳನ್ನು ಅದರ ಸೊಗಡನ್ನು ಅಲ್ಲಿ ಸೇರಿಸಿದರೆ, ವಾವ್ ಎಂತಹ ಆಲೋಚನೆ, ಸೊಗಸಾಗಿದೆ…. ಇಂಥ ಒಂದು ಸಣ್ಣ ಆಲೋಚನೆ ಬಂದದ್ದೇ ತಡ, ಕಾರ್ಯನಿರತರಾದರು. ತಂಡವೊಂದನ್ನು ತಯಾರು ಮಾಡಿಕೊಂಡು, ಪ್ರಾಜೆಕ್ಟನ್ನು ಕೈಗೆತ್ತಿಕೊಂಡೇಬಿಟ್ಟರು, ಅವರೇ ಪ್ರಸಿದ್ಧ ಗಾಯಕಿ ಇಂದೂ ವಿಶ್ವನಾಥ್.
ದಿ. ರಾಮಣ್ಣ ಹಾಗೂ ಶಾರದಾಂಬ ದಂಪತಿಗಳ ಮಗಳಾಗಿ ಜನಿಸಿದರು. ಓದಿ ಬೆಳದದ್ದು ಚಿಕ್ಕಮಗಳೂರಿನಲ್ಲಿ. ಬಾಲ್ಯದಿಂದಲೂ ಸಂಗೀತದಲ್ಲಿ ಅಪಾರ ಆಸಕ್ತಿ. ಶಾಲಾ ದಿನಗಳಲ್ಲಿ ಹತ್ತು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತ, ಸ್ಛೂರ್ತಿ ಹೊಂದಿ, ಜನರ ಮೆಚ್ಚುಗೆ ಆಶೀರ್ವಾದಗಳಿಂದ ಬೆಳೆಯುತ್ತ ಬಂದರು. ಬಿ.ಕಾಂ ಪದವಿ ಪಡೆದ ನಂತರ ವಿಶ್ವನಾಥ್‌ರನ್ನು ಮದುವೆಯಾಗಿ ಬೆಂಗಳೂರಿಗೆ 1975ರಲ್ಲಿ ಬಂದರು.
ಗುರು ಮುತ್ತಾಚಾರ್‌ರ ಬಳಿ ಸಂಗೀತ ಕಲಿತು, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಐದು ವರ್ಷಗಳ ಕಾಲ ಹಿಂದೂಸ್ಥಾನಿ ಗಾಯನವನ್ನು ಅಭ್ಯಸಿಸಿದ್ದಾರೆ. ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಹಿನ್ನೆಲೆ ಗಾಯಕಿ ಡಿಪ್ಲೊಮಾ ತರಬೇತಿ ಪಡೆದರು. ಅದೇ ಸಮಯದಲ್ಲಿ ಆಕಾಶವಾಣಿಯವರು ಆಡಿಷನ್ ಕರೆದರು. ಇದು ಇವರ ಬಾಳಿನಲ್ಲಾದ `ಟರ್ನಿಂಗ್ ಪಾಯಿಂಟ್.’ ಆಡಿಷನ್ ಮುಗಿದು `ಎ’ ಗ್ರೇಡ್ ಸಿಂಗರ್ ಹಾಗೂ `ಎ’ ಗ್ರೇಡ್ ಸಂಗೀತ ನಿರ್ದೇಶಕಿಯಾಗಿ ಆಯ್ಕೆಯಾದಾಗ ಆದ ಆನಂದ ಅಷ್ಟಿಷ್ಟಲ್ಲ.
ಆಕಾಶವಾಣಿಗೆ ಅಡಿಯಿಡುತ್ತಿದ್ದಂತೆ ಇವರ ಸಂಗೀತ ಬಳಗ ಬೆಳೆಯಿತು. ಸನ್ಮಿತ್ರರ ಒಡನಾಟದಿಂದ ಸ್ನೇಹ ಬಳಗ ಬೆಳೆಯಿತು. ದೂರದರ್ಶನದಲ್ಲೂ `ಎ’ ಗ್ರೇಡ್ ಆರ್ಟಿಸ್ಟ್ ಆಗಿ ತಮ್ಮ ಕಲಾಕ್ಷೇತ್ರದಲ್ಲಿ ನೆಲೆ ನಿಂತರು.
ಕಲಾಕ್ಷೇತ್ರಕ್ಕೆ ಕಾಲಿಡಲು ನೂರಾರು ಮಂದಿ ಆಸೆಯಿಂದ ಪ್ರಯತ್ನಪಡುತ್ತಾರೆ. ಕಲಾದೇವತೆ ಕೆಲವರನ್ನು ಮಾತ್ರವೇ ಆಯ್ದುಕೊಳ್ಳುತ್ತಾಳೆ. ಅದೊಂದು ಕಾಲವಿತ್ತು. ಇದ್ದದ್ದು ಒಂದೇ ಚಾನಲ್ ದೂರದರ್ಶನ, ವಾರಕ್ಕೊಂದು ಫಿಲಂ, 13 ವಾರಗಳ ಧಾರಾವಾಹಿ, ಹೀಗೆ ಬಹಳವೇ ಲಿಮಿಟೆಡ್ ಆಗಿತ್ತು. ಆ ದಿನಗಳಲ್ಲಿ ತಮ್ಮ ಸುಶ್ರಾವ್ಯ ಕಂಠದಿಂದ ದೇವರನಾಮ, ಸುಗಮಸಂಗೀತ ಗೀತೆಗಳನ್ನು ಕೇಳುಗರಿಗೆ ನೀಡುವ ಮುಖೇನ ಇಂದೂ ಖ್ಯಾತನಾಮರಾದರು. ಅವರ ಹಲವಾರು ಸುಪ್ರಸಿದ್ಧ ಹಾಡುಗಳು ಇಂದಿಗೂ ಕಿವಿಯಲ್ಲಿ ರಿಂಗುಣಿಸುತ್ತಿರುತ್ತವೆ. ಮುಂಜಾನೆಯ ರೇಡಿಯೋದಲ್ಲಿ ಸಂಜೆಯ ಟಿ.ವಿ.ಯಲ್ಲಿ ಇಂದೂ ವಿಶ್ವನಾಥ್ ತಮ್ಮದೇ ಶೈಲಿಯ ಹಾಡುಗಳಿಂದ ಕಾಣಿಸುತ್ತಿದ್ದರು. ಇಂದು ತಮ್ಮ ಪ್ರತಿಭೆ ಪರಿಶ್ರಮಗಳಿಂದ ವಿದೇಶಗಳಲ್ಲಿಯೂ ಹಾಡುಗಾರಿಕೆಯ ಸುಧೆಯನ್ನು ಹರಿಸುತ್ತಿದ್ದಾರೆ. ಸಂಗೀತ ಸರಸ್ವತಿಯ ಸೇವೆಯಲ್ಲಿ ನಿರತರಾಗಿದ್ದಾರೆ. `ನಿಶೆಯು ಸುರಿಯಲು, ಉಷೆಯು ಬೆಳಗಲು,’ ಹಾಡಿನಲ್ಲಿನ ಭಾವ, ಸಾಯಿ ಭಜನೆಗಳಲ್ಲಿನ ಭಕ್ತಿ, ಹೀಗೇ ಇವರ ಗೀತೆಗಳಲ್ಲಿನ ದನಿ ಮನದಲ್ಲಿ ನಿಂತು, ಗುನ್‌ಗುನ್ ಮಾಡುವಂತೆ ಆಕರ್ಷಿಸುತ್ತದೆ.
ಕೆಲವು ಪ್ರಥಮಗಳಿಗೆ ಇವರು ಸಾಕ್ಷಿಯಾಗಿದ್ದಾರೆ. ಕನ್ನಡ ಪ್ರಪ್ರಥಮ ಸಂಗೀತ ನಿರ್ದೇಶಕಿ ಎಂಬ ಹೆಗ್ಗಳಿಕೆ ಇವರಿಗೇ ಸಲ್ಲುತ್ತದೆ. ವೈಶಾಖದ ದಿನಗಳು ಚಲನಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗಿ ಉತ್ತಮ ರಾಗ ಸಂಯೋಜನೆ ನೀಡಿ ಜನಪ್ರಿಯರಾದರು. `ಜಪಾನ್ ಕನ್ನಡ ಸಂಘ’ಕ್ಕೆ ತೆರಳಿದ ಪ್ರಥಮ ಸುಗಮ ಸಂಗೀತದ ಟೀಂ ಇವರದ್ದಾಗಿತ್ತು. ತಂಡದಲ್ಲಿದ್ದವರು ರತ್ನಮಾಲಾ ಪ್ರಕಾಶ್, ಇಂದೂ ವಿಶ್ವನಾಥ್, ಡಾ. ರೋಹಿಣಿ ಮೋಹನ್. ಅವಕಾಶ ದೊರೆತದ್ದು, ಅಲ್ಲಿನ ಜನ ಸ್ಪಂದಿಸಿದ್ದು ಮಾತ್ರ ಅವಿಸ್ಮರಣೀಯವಾದದ್ದು ಎಂದು ಹೆಮ್ಮೆಪಡುತ್ತಾರೆ. ಸುಗಮ ಸಂಗೀತ ಕ್ರೇತ್ರದ ಸಾಧನೆಗಾಗಿ ಕನ್ನಡ ರಾಜ್ಯೋತ್ಸ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಕರ್ನಾಟಕ ಕಲಾಶ್ರೀ, ಆರ್ಯಭಟ ಪ್ರಶಸ್ತಿ, ಕನ್ನಡ ಪತ್ರಿಕೆ ಸಂಸ್ಕೃತಿ ವೇದಿಕೆಯವರಿಂದ ಕರ್ನಾಟಕ ಚೇತನ, ಆಲ್ ಇಂಡಿಯಾ ರೇಡಿಯೋದಿಂದ ನ್ಯಾಷನಲ್ ಅವಾರ್ಡ್‌ಗಳನ್ನು ತಮ್ಮ ಮುಡಿಗೇರಿಸಿ ಕೊಂಡಿರುವರು. 100ಕ್ಕೂ ಹೆಚ್ಚು ಭಾವಗೀತೆಗಳ ಕ್ಯಾಸೆಟ್‌ಗಳಲ್ಲಿ ಹಾಡುಗಾರಿಕೆ, 50ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಸಂಗೀತ ಸಂಯೋಜನೆ, ನಿರ್ದೇಶನ ನೀಡಿರುವರು. ಇವರ ಸಂಗೀತ ನಿರ್ದೇಶನದಲ್ಲಿ ಎಸ್.ಪಿ.ಬಿ., ಎಸ್. ಜಾನಕಿ, ವಾಣಿ ಜಯರಾಂ, ಕವಿತಾ ಕೃಷ್ಣಮೂರ್ತಿ, ಮನು ಹೀಗೆ ಹಲವು ಸುಪ್ರಸಿದ್ಧ ಗಾಯಕರು ಹಾಡಿರುರು. 80 ಜಿಂಗಲ್ಸ್, ಹಲವಾರು ಟಿ.ವಿ. ಸೀರಿಯಲ್ಸ್, ಬ್ಯಾಲೆ ನೃತ್ಯ, ಡಾಕ್ಯುಮೆಂಟರಿಗಳಿಗೆ, ಟೆಲಿ ಫಿಲಂಗಳಿಗೆ ಸಂಗೀತ ಸಂಯೋಜನೆ ಹಾಗೂ ಹಾಡುಗಾರಿಕೆ ನೀಡಿರುವರು. ರಾಗಗಳ ಆಧಾರಿತ `ರಾಗವಾಹಿನಿ’ ಸೀರಿಯಲ್‌ನ ನಿರ್ದೇಶಕಿ, ನಿರ್ಮಾಪಕಿಯಾಗಿದ್ದರು. ಉದಯ ಟಿವಿಯ ಗೀತಾಂಜಲಿ ಹಾಗೂ ದೂರದರ್ಶನದ ಶೃಂಗಾರ ತರಂಗ…. ಸಂಗೀತ ಧಾರಾವಾಹಿಗಳಿಗೆ ದುಡಿದಿರುವರು. ಇದಲ್ಲದೆ, ಸಿಂಗಪೂರ್‌ನಲ್ಲೂ ಹಾಡಿ ಜನಮನ ತಣಿಸಿದ್ದು ಸಂತಸದ ವಿಷಯವೇ ಹೌದು. ಆಕಾಶವಾಣಿಯಿಂದ ಪರಿಚಯಗೊಂಡ, ಹಿರಿಯ ಗಾಯಕ ಎಚ್.ಕೆ. ನಾರಾಯಣ್ ನನ್ನ ಗುರುಗಳು. ಅವರ ಮಾರ್ಗದರ್ಶನ, ಉತ್ತೇಜನ, ಸ್ಛೂರ್ತಿ ನನ್ನ ಇಂದಿನ ಏಳಿಗೆಗೆ ಮೂಲಕಾರಣ ಎನ್ನುತ್ತ ಗುರುಗಳನ್ನು ನೆನೆದರು. ಆಕಾಶವಾಣಿ ಹಲವು ಉತ್ತಮ ವೇದಿಕೆಗಳನ್ನು ನೀಡಿತು. ಅಲ್ಲಿಂದಲೇ ನನ್ನ ಬೆಳವಣಿಗೆ, ಅಲ್ಲಿಂದಲೇ ನನ್ನ ಏಳಿಗೆ ಎಂದರು. ಎಂದಿದ್ದರೂ ನನ್ನ ಮೊದಲ ಆದ್ಯತೆ ಆಕಾಶವಾಣಿಗೇ ಸಲ್ಲಬೇಕು ಎನ್ನುವ ಇವರು ಈ ಕ್ಷೇತ್ರದಲ್ಲಿ ಎಸ್.ಪಿ.ಬಿ., ಎಸ್. ಜಾನಕಿಯರಿಂದ ಹಿಡಿದು ಎಲ್ಲಾ ಹಿರಿಯ ಕಿರಿಯ ಗಾಯಕರುಗಳೊಟ್ಟಿಗೆ ಹಾಡಿರುವರು. ಯಾಕೋ ಇಂದಿನ ನಿರ್ಮಾಪಕರು, ನಿರ್ದೇಶಕರು ನಮ್ಮ ಕನ್ನಡ ಪ್ರತಿಭೆಗಳನ್ನು ಮರೆತಿರುವಂತಿದೆ. ನನಗೆ ಚಲನಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗುವ ದಾಹ ಇನ್ನೂ ಇಂಗಿಲ್ಲ. ಅವಕಾಶ ಕೊಟ್ಟರೆ ಇಂದಿಗೂ ಅದನ್ನು ಸಮರ್ಥವಾಗಿ ನಿಭಾಯಿಸುವೆ. ಬಯಕೆಯಿನ್ನೂ ಬತ್ತಿಲ್ಲ…. ಎನ್ನುತ್ತಾರೆ ಬೇಸರದಿಂದ.
`ಇಂದೂ ರೋಹಿಣಿ ಸುಗಮ ಸಂಗೀತ ಟ್ರಸ್ಟ್’ನ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಮೂರು ವರ್ಷದಿಂದಲೂ ಉಚಿತವಾಗಿ ಸಂಗೀತಾಸಕ್ತರಿಗೆ ವರ್ಕ್‌ಶಾಪ್‌ಗಳನ್ನು ನಡೆಸುತ್ತಾ ಬಂದಿದ್ದಾರೆ. ಮಕ್ಕಳಿಗೆ ಹಾಡುಗಳನ್ನು ಹೇಳಿಕೊಡುತ್ತಾರೆ. ತುಮಕೂರಿನಲ್ಲಿರುವ ಅಂಧರ ಶಾಲೆಯೊಂದಕ್ಕೆ ಚಾರಿಟಿ ಶೋ ನೀಡಿ, ಅವರುಗಳ ಬಾಳಿಗೂ ಬೆಳಕಾಗಿದ್ದಾರೆ.
ಪತಿ ವಿಶ್ವನಾಥ್‌ರ ಪರಿಪೂರ್ಣ ಸಹಕಾರವಿದೆ. ಮಗ ಪೃಥ್ವಿ ರೇಡಿಯೋ ಒನ್‌ನಲ್ಲಿ ಆರ್.ಜೆ.ಯಾಗಿದ್ದಾರೆ. ಮಗಳು ರೆಸ್ಟೋರೆಂಟ್‌ನಡೆಸುತ್ತಿದ್ದು, ಈಗ ಮಕ್ಕಳ ಪಾಲನೆ ಪೋಷಣೆಯಿಂದಾಗಿ ಸಂಸಾರದೆಡೆಗೆ ಗಮನ ಹೆಚ್ಚಾಗಿದೆ. ಇಬ್ಬರಿಗೂ ಸಂಗೀತಾಸಕ್ತಿಯೇನಿಲ್ಲ. ಅವರವರ ಕ್ಷೇತ್ರ ಅವರೇ ಆಯ್ಕೆ ಮಾಡಿಕೊಂಡು, ಅದರಲ್ಲಿ ಬೆಳೆಯುತ್ತಿದ್ದಾರೆ.
ಏರೋಬಿಕ್ಸ್ ಪ್ರೇಮಿಗಳಿಗಾಗಿ, ರಿಷಿ ಆಡಿಯೋಸ್ ಮೂಲಕ ಧ್ವನಿ ಸುರುಳಿ ಹಾಗೂ ವೀಡಿಯೋ ಚಿತ್ರೀಕರಣದ ಸಿಡಿಯನ್ನು ಹೊರತರುತ್ತಿರುವರು. ನಮ್ಮ ಹೆಮ್ಮೆಯ ಕವಿಗಳ ಗೀತೆಗಳು ಇಲ್ಲಿ ಹಾಡಾಗಿ ಹೊಮ್ಮಿವೆ. ಜೊತೆಗೆ ಏರೋಬಿಕ್ಸ್ ಖ್ಯಾತಿಯ ವನಿತಾ ಅಶೋಕ್, ವ್ಯಾಯಾಮ ತರಬೇತುದಾರರಾಗಿ ಹೆಜ್ಜೆ ಹಾಕಿದ್ದಾರೆ. ಕಳೆದ ಅಕ್ಟೋಬರ್ ಒಂದರಂದು ವಿಡಿಯೋ ಚಿತ್ರೀಕರಣ ಪೂರ್ಣಗೊಂಡು, ಸಂಕಲನ ಕಾರ್ಯ ಭರದಿಂದ ಸಾಗಿತು. ನವೆಂಬರ್ ಕನ್ನಡ ರಾಜ್ಯೋತ್ಸದಂದು ಈ ವಿಡಿಯೋ ಧ್ವನಿಸುರುಳಿ ಬಿಡುಗಡೆಗೊಂಡಿತು. ಇವರ ಈ ಹೊಸ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್ ಎನ್ನೋಣ!
ಮಹಿಳಾ ತಂಡವೊಂದರ ಮುಖೇನ ಓಲ್ಡ್ ಹಿಟ್ಸ್ ಕೊಟ್ಟದ್ದು ಅವಿಸ್ಮರಣೀಯ. ಕನ್ನಡ ಭಾಷೆಯ ಮೇಲೆ ಅತೀಯಾದ ಅಭಿಮಾನ. ಹಲವಾರು ಧ್ವನಿ ಸುರುಳಿಗಳಲ್ಲಿ ಇವರ ಸಂಯೋಜನೆ ಮತ್ತು ಗಾಯನವಿದೆ. ಇವರ ಪ್ರಖ್ಯಾತ ಧ್ವನಿಸುರುಳಿಗಳೆಂದರೆ, ಎನ್.ಆರ್.ಐ ಮಕ್ಕಳಿಗಾಗಿ ಕನ್ನಡ ಕಲಿ ನಲಿ, ಅರಳು ಮಲ್ಲಿಗೆ, ಸಾಯಿರಾಂ ವೈಭವ, ಅಭಿಸಾರಿಕೆ, ತನು ನಿನ್ನದು, ಒಂದಿರುಳು ಬಂದೆ, ನಿರಂತರ, ನಮಗೆಲ್ಲಿ ನಲ್ಲ ನಾಳೆಯ ಚಿಂತೆ, ಗೊಮ್ಮಟ ಸ್ತುತಿ, ಮೋಹಿಸು ಸಂಜೆ, ಜೀನನ್ಮುಕ್ತಿ, ಪುಟಾಣಿ ಪ್ರಪಂಚ, ಚಿಣ್ಣರ ಚಿಲಿಪಿಲಿ, 108 ವಚನಾಮೃತವರ್ಷಿಣಿ, ಮುದ್ದು ಬೆನಕನ ಭಜನೆಗಳು, ಹಾಡುತ ನಲಿ ಕನ್ನಡ ಕಲಿ ಇತ್ಯಾದಿ… ಡಾ. ವಿಜಯಾ ಬಾಳೇಕುಂದ್ರಿಯವರ ರಚನೆಯ ಶಿಶುಗೀತೆಗಳಿಗೆ ದನಿಯಾಗಿರುವರು.
ಡಾ. ಕಮಲಾ ಹಂಪನ ರಚಿಸಿರುವ ಗೀತೆಗಳ ಧ್ವನಿಸುರುಳಿಯು ರಾಷ್ಟ್ರಪತಿ ಭವನದಲ್ಲಿ ಬಿಡುಗಡೆಗೊಳಿಸಿದರು. ಅದರ ಪರಿಪೂರ್ಣ ಸಂಗೀತ ಸಂಯೋಜನೆ ಹಾಡುಗಾರಿಕೆ ಇವರದೇ.
ಇಂತಹ ಪ್ರತಿಭಾನ್ವಿತ ಸಂಗೀತ ಸಂಯೋಜಕಿ, ನಿರ್ದೇಶಕಿ, ಗಾಯಕಿಯ ಹಂಬಲ, ಬಯಕೆಯನ್ನು ಇನ್ನಾದರೂ ನಮ್ಮ ಕನ್ನಡದ ನಿರ್ಮಾಪಕರು, ನಿರ್ದೇಶಕರು ಕಂಡು ಅರಸಿ ಬರುವಂತಾಗಲಿ, ಅವರಾಸೆಗಳು ಈಡೇರಲಿ, ಬಯಕೆಗಳು ಸಾಕಾರಗೊಳ್ಳಲೆಂದು ಆಶಿಸೋಣ.
– ಸವಿತಾ ನಾಗೇಶ್