ಮಮತಾ ತನ್ನ ಮಗಳು ಮಾನಸಿಗಾಗಿ ಟಿಫಿನ್‌ ಬಾಕ್ಸ್ ರೆಡಿ ಮಾಡುತ್ತಿದ್ದಳು. ಇನ್ನೇನು ಅವಳು ಹೊರಡುವ ವೇಳೆಯಾಗಿದೆ, `ಅಮ್ಮಾ, ಟಿಫಿನ್‌ ರೆಡಿಯಾ?’ ಎಂದು ಕೇಳುತ್ತಾಳೆ ಎಂದುಕೊಂಡಳು. ಪ್ರತಿ ದಿನ ಮಾನಸಿ ಹೊರಡುವ ಮುನ್ನ ತಾಯಿಯ ಕೋಣೆಯಲ್ಲಿದ್ದ ದೊಡ್ಡ ಕನ್ನಡಿಯಲ್ಲಿ ತನ್ನ ಬಿಂಬವನ್ನೊಮ್ಮೆ ನೋಡಿಕೊಂಡ ಬಳಿಕವೇ ಹೊರಗೆ ಹೊರಡುತ್ತಿದ್ದುದು. ಹಾಗೆ ಹೋದಳು ಕಾಲೇಜು ಇಲ್ಲವೇ ಸ್ನೇಹಿತರ ಮನೆಗೆ ಹೋಗುತ್ತಿದ್ದಳು.

ಪ್ರತಿ ದಿನ ಮಾನಸಿ ಹೊರಗೆ ಹೋದ ಬಳಿಕ ಮಮತಾ ಅವಳ ಕೋಣೆಗೆ ಹೋಗಿ ಅಲ್ಲಿ ಎಲ್ಲೆಂದರಲ್ಲಿ ಹರಡಿಟ್ಟಿದ್ದ ಬಟ್ಟೆಗಳು, ಪುಸ್ತಕಗಳು, ಇನ್ನಿತರೇ ವಸ್ತುಗಳನ್ನು ಒಪ್ಪ ಓರಣವಾಗಿ ಇರಿಸುತ್ತಿದ್ದಳು. ಇದೆಲ್ಲಾ ಜೋಡಿಸಿದ ಬಳಿಕ ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದಳು. ಇದು ನಿತ್ಯದ ನಿಯಮವಾಗಿತ್ತು. ಮಾನಸಿ ಮಮತಾಳ ಒಬ್ಬಳೇ ಮಗಳು. ತಂದೆ ಇಲ್ಲದ ಮಗುವೊಂದು ತುಸು ಮುದ್ದಿನಿಂದಲೇ ಬೆಳೆಸಿದ್ದಳು. ಮಗಳಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದರೂ ಶಿಸ್ತು ಮೀರಿ ನಡೆಯದಂತೆ ಎಚ್ಚರ ವಹಿಸಿದ್ದಳು. ಮಮತಾ ಸಣ್ಣ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತಿದ್ದರಿಂದ ಭಾನುವಾರ ಅವಳು ಹೆಚ್ಚಿನ ಸಮಯ ಮನೆಯಿಂದ ಹೊರಗೇ ಕಳೆಯ ಬೇಕಾಗಿತ್ತು. ಭಾನುವಾರ ಮಾತ್ರ ಮನೆಗೆಲಸದ ಜೊತೆಗೆ ಬೇರೆ ಕೆಲಸಗಳೂ ಇರುತ್ತಿದ್ದರಿಂದ ಮಮತಾಗೆ ಮಗಳ ಕೋಣೆ ಶುಚಿಗೊಳಿಸಲು ಸಮಯವಿರುತ್ತಿರಲಿಲ್ಲ. ಆದರೂ ತನ್ನ ಮುದ್ದು ಮಗಳ ಕೋಣೆ ಚೆನ್ನಾಗಿರಬೇಕೆಂದು ಬಯಸಿ ಹೇಗೋ ಸ್ವಲ್ಪ ಸಮಯವನ್ನು ಹೊಂದಿಸಿಕೊಂಡು ಅವಳ ಕೋಣೆಯನ್ನು ಅಣಿಗೊಳಿಸುತ್ತಿದ್ದಳು. `ಯಾರಾದರೂ ಅತಿಥಿಗಳು ಆಕಸ್ಮಿಕವಾಗಿ ಬಂದು ಈ ಕೋಣೆಯನ್ನು ನೋಡಿದರೆ?’ ಎನ್ನುವ ಸಂದೇಹ ಮಮತಾಳನ್ನು ಯಾವಾಗಲೂ ಕಾಡುತ್ತಿತ್ತು.

ಅದೊಂದು ಭಾನುವಾರ ಮಗಳ ಕೋಣೆಯನ್ನು ಅಣಿಗೊಳಿಸುವುದಕ್ಕಾಗಿಯೇ ಮೀಸಲಿಡಬೇಕಾಗಿ ಬಂದಿತು. ಅವಳ ಬಟ್ಟೆಗಳೆಲ್ಲ ಕೊಳೆಯಾಗಿದ್ದವು, ಡ್ರೆಸಿಂಗ್‌ ಟೇಬಲ್, ಕಂಪ್ಯೂಟರ್‌ ಟೇಬಲ್‌ಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ, ಅಲ್ಮೆರಾ ಕೂಡ ನೀಟಾಗಿರಲಿಲ್ಲ. ಇದೆಲ್ಲವನ್ನೂ ಚೆನ್ನಾಗಿ ಜೋಡಿಸಿ ಇಡುವಷ್ಟರಲ್ಲಿ ಸಾಕು ಸಾಕಾಯಿತು.

ಮತ್ತೊಮ್ಮೆ ಮಮತಾ ಮಗಳ ಕೋಣೆ ಅಣಿಗೊಳಿಸುತ್ತಿದ್ದ ಸಮಯದಲ್ಲಿ ಅವಳ ಡ್ರೆಸ್‌ಗಳೆಲ್ಲ ಕೆಳಗೇ ಬಿದ್ದಿರುವುದು ಕಂಡಿತು. ಮಮತಾ ತಡೆಯಲಾರದೆ ಮಗಳನ್ನು ಕರೆದು, “ಏನು ನಿನ್ನ ಕೋಣೆಯನ್ನು ಕಸದ ತೊಟ್ಟಿಯಾಗಿ ಇಟ್ಟುಕೊಂಡಿದ್ದೀಯಾ? ನನಗೂ ಬಿಡುವಿರಲ್ಲ. ನೀನು ನನಗಾಗಿಯೇ ಕಾಯುತ್ತಿರಬೇಡ. ನಿನ್ನ ಕೋಣೆ ನೀನೇ ನೀಟಾಗಿ ಜೋಡಿಸಿಟ್ಟುಕೊ,” ಎಂದಳು.

“ಅಯ್ಯೋ! ಈ ಮನೆಯಲ್ಲಿ ನಾನು, ನೀನು ಬಿಟ್ಟರೆ ಬೇರೆ ಯಾರೂ ಇಲ್ಲ. ಒಂದು ಹುಳು ಬರಲಾರದು. ಹೀಗಿರುವಾಗ ನಾನು ಕೋಣೆ ನೀಟಾಗಿಟ್ಟುಕೊಳ್ಳಲು ಏಕಿಷ್ಟು ಅವಸರ ಮಾಡುತ್ತಿದ್ದೀಯಾ? ನಿನಗೆ ಬೇಸರವಾದರೆ ನನ್ನ ಕೋಣೆಯ ಕಡೆ ಬರಲೇಬೇಡ….!” ಎಂದಳು ಮಾನಸಿ.

“ಏನು ನೀನು ಹೇಳುತ್ತಿರುವುದು? ಬೇರೊಬ್ಬರು ನಮ್ಮ ಮನಗೆ ಬರುತ್ತಾರೆ ಎನ್ನುವ ಕಾರಣಕ್ಕಾಗಿ ನಾವು ಮನೆಯನ್ನು ಓರಣವಾಗಿ ಇಟ್ಟುಕೊಳ್ಳುವುದಲ್ಲ. ಒಮ್ಮೊಮ್ಮೆ ಅತಿಥಿಗಳು ಸೂಚನೆ ನೀಡದೆ ಬಂದರೆ, ನೀನು ಕೋಣೆಯನ್ನು ನೀಟಾಗಿಸುವವರೆಗೆ ಅವರು ನಿನ್ನ ಕೋಣೆಗೆ ಬರುವುದನ್ನು ತಡೆಹಿಡಿಯುವೆಯಾ?” ಎಂದಳು ಮಮತಾ. ಅಷ್ಟರಲ್ಲಿ ಮಾನಸಿಯ ಸೋದರಮಾವ ಅಚಾನಕ್ಕಾಗಿ ಬಂದರು. ಅವರು ಬಂದದ್ದೂ ಕೂಡ ಮಾನಸಿಯ ಕೋಣೆಯನ್ನು ನೋಡುವುದಕ್ಕಾಗಿ.

ಮಾನಸಿ ಅದೇ ಊರಿನ ಕಾಲೇಜಿನಲ್ಲಿ ಓದುತ್ತಿದ್ದಳು. ಅವಳ ಕಾಲೇಜಿನ ಲೈಬ್ರೆರಿಯಲ್ಲಿ ಸಾಕಷ್ಟು ಸಂಖ್ಯೆಯ ಪುಸ್ತಕಗಳಿದ್ದವು. ಅದರಲ್ಲಿ ಹೆಚ್ಚಿನ ಸಾಹಿತ್ಯ ಸಂಬಂಧಿತ ಪುಸ್ತಕಗಳಾಗಿದ್ದವು. ಅದರಲ್ಲಿಯೂ ಹಳೆಯ ಕ್ಲಾಸಿಕ್‌ ಪುಸ್ತಕಗಳೇ ಇದ್ದವು. ಮಾನಸಿಗೆ ಸೆಮಿಸ್ಟರ್‌ ಎಗ್ಸಾಮ್ ಹತ್ತಿರವಿದ್ದ ಕಾರಣ ಅವಳು ಸಾಕಷ್ಟು ಸಮಯ ಲೈಬ್ರೆರಿಯಲ್ಲಿ ಕಳೆಯುತ್ತಿದ್ದಳು. ಎಲ್ಲರಂತೆಯೇ ಅವಳೂ ಪರೀಕ್ಷೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಳು.

ಒಂದು ದಿನ ಮಾನಸಿ ಸ್ವಲ್ಪ ಆಲಸಿಯಾಗಿದ್ದು ತಡವಾಗಿ ಎದ್ದು ನಿತ್ಯದ ಬಟ್ಟೆ, ಪುಸ್ತಕಗಳನ್ನು ಜೋಡಿಸಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಹೊರ ಬಾಗಿಲು ಸದ್ದಾಯಿತು. ಮಮತಾ ಬೇರೆ ಕೆಲಸದಲ್ಲಿದ್ದ ಕಾರಣ ಮಾನಸಿಯೇ ಹೋಗಿ ಬಾಗಿಲು ತೆರೆದಳು. ತಕ್ಷಣ ಅವಳಿಗೆ ಅಚ್ಚರಿಯಾಯಿತು! ಏಕೆಂದರೆ ಅವಳ ಕಾಲೇಜಿನ ಉಪನ್ಯಾಸಕರು ಹಾಗೂ ಇಬ್ಬರು ವಿದ್ಯಾರ್ಥಿಗಳು ಬಾಗಿಲಿನಾಚೆ ನಿಂತಿದ್ದರು.

ಮಾನಸಿ ಸ್ವಲ್ಪ ಭಯಮಿಶ್ರಿತ ಭಾವದಿಂದ ಅವರನ್ನು ಆಹ್ವಾನಿಸಿದಳು. ಇವರೇಕೆ ನಮ್ಮ ಮನೆಯವರೆಗೂ ಬಂದಿದ್ದಾರೆನ್ನುವ ಪ್ರಶ್ನೆ ಮಾನಸಿಯ ಮನದಲ್ಲಿ ಕೊರೆಯುತ್ತಿತ್ತು. ಅಷ್ಟರಲ್ಲಿ ಒಳಗಿನಿಂದ ಮಮತಾ, “ಯಾರು ಬಂದಿದ್ದಾರೆ?” ಎಂದು ಕೇಳುತ್ತಾ ಹೊರಬಂದಳು.

ನಿಜಾರ್ಥದಲ್ಲಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಕೆಲವು ವಿದ್ಯಾರ್ಥಿಗಳ ನೋಟ್ಸ್ ಗಳು ಕಾಣೆಯಾಗಿದ್ದವು. ಆ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಮತ್ತು ಸಹಪಾಠಿಗಳಲ್ಲಿ ಕೆಲವೊಬ್ಬರ ಹೆಸರುಗಳನ್ನು ತಿಳಿಸಿ ಅವರ ಮನೆಯಲ್ಲಿ ಏನಾದರೂ ಸಿಗಬಹುದೇ? ಹುಡುಕಿಸಿ ಎಂದು ಕೇಳಿದ್ದರು. ಹೀಗಾಗಿ ಉಪನ್ಯಾಸಕರನ್ನು ಜೊತೆಗೂಡಿಸಿಕೊಂಡು ವಿದ್ಯಾರ್ಥಿಗಳು ಬೆಳಗ್ಗಿನ ಸಮಯದಲ್ಲಿಯೇ ಮಾನಸಿಯ ಮನೆಗೆ ಬಂದಿದ್ದರು.

ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಮಾನಸಿಕ ಕೋಣೆಯತ್ತ ಹೋಗುವುದನ್ನು ಮಾನಸಿ ಮತ್ತು ಮಮತಾ ಇಬ್ಬರೂ ನೋಡುತ್ತಿದ್ದರು. ಮಾನಸಿಯ ಮುಖ ಕುಂದಿಹೋಗಿತ್ತು. ಅವಳ ಕಣ್ಣಲ್ಲಿ ನೀರಾಡತೊಡಗಿತು. ಕೋಣೆಯಲ್ಲಿ ಸಾಲಾಗಿ ಜೋಡಿಸಿದ್ದ ಇಪ್ಪತ್ತಕ್ಕೂ ಹೆಚ್ಚಿನ ಸಿಡ್ನಿ ಫಿಲ್ಡರ್‌ ಕಾದಂಬರಿಗಳು ಅತಿಥಿಗಳನ್ನು ಸ್ವಾಗತಿಸಿದವು. ಅವರು ಎರಡು ನಿಮಿಷಗಳಲ್ಲಿಯೇ ಕೋಣೆಯಿಂದ ವಾಪಸ್ಸಾದರು. ಅವರಿಗೆ ಮಾನಸಿಕ ಕೋಣೆಯಲ್ಲಿ ಏನೂ ದೊರೆಯಲಿಲ್ಲ. ಆದರೆ ಮಾನಸಿಯ ಮನಸ್ಸಿಗೆ ಮಾತ್ರ ಬಹಳ ಆಘಾತವಾಗಿತ್ತು. ಅವಳು ತಾಯಿಯ ಬಳಿ ಹೋಗಿ ಜೋರಾಗಿ ಅಳಬೇಕೆಂದುಕೊಂಡಳು.

ಮಮತಾ, “ನೋಡು, ಅತಿಥಿಗಳು ಯಾವಾಗಲೂ ಹೇಳಿಕೇಳಿ ಬರುವುದಿಲ್ಲ ಎಂದು ನಾನು ಹೇಳುತ್ತಿರಲಿಲ್ಲವೇ? ಕೋಣೆಯನ್ನು ಯಾವಾಗಲೂ ನೀಟಾಗಿರಿಸಬೇಕೆಂದು ನಾನು ಹೇಳುತ್ತಿದ್ದ ಕಾರಣ ನಿನಗಿಂದು ಅರ್ಥವಾಯಿತೇ?” ಎಂದಳು. ಮಾನಸಿ ಏನೊಂದೂ ಪ್ರತಿಕ್ರಿಯಿಸದೆ ತನ್ನ ಕೋಣೆಗೆ ಹೋದಳು.

ಮರುದಿನ ಮಾನಸಿ ಎಂದಿನಂತೆ ಕಾಲೇಜಿಗೆ ಹೋದ ನಂತರ ಮಮತಾ ಅವಳ ಕೋಣೆಗೆ ಹೋದಳು. ಈ ಬಾರಿ ಮಮತಾಳಿಗೇ ಅಚ್ಚರಿ ಕಾದಿತ್ತು! ಕೋಣೆ ಎಂದಿನಂತೆ ಅದು ಅಸ್ತವ್ಯಸ್ತವಾಗಿರದೇ ಸ್ವಚ್ಛವಾಗಿ, ಅಂದವಾಗಿ ಜೋಡಿಸಲ್ಪಟ್ಟಿತ್ತು. ಪುಸ್ತಕಗಳು, ಬಟ್ಟೆಗಳೆಲ್ಲ ಸುಂದರವಾಗಿ ಅಚ್ಚುಕಟ್ಟಾಗಿ ಅದರದರ ಸ್ಥಾನದಲ್ಲಿ ಇಡಲ್ಪಟ್ಟಿತ್ತು. ಅಂತೂ ಮಾನಸಿಯ ಕೋಣೆಗೆ ಹೊಸ ರೂಪ ಬಂದಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ