ಬಾರ್ಲಿ, ಸ್ಪಿನಾಚ್ ಎಗ್ ಡ್ರಾಪ್ ಸೂಪ್
ಸಾಮಗ್ರಿ : 1 ಕಪ್ ಬೆಂದ ಬಾರ್ಲಿ, ಅರ್ಧರ್ಧ ಕಪ್ ಓಟ್ಸ್, ಬೆಂದ ಸ್ವೀಟ್ ಕಾರ್ನ್, ಹೆಚ್ಚಿದ ಪಾಲಕ್ ಸೊಪ್ಪು, 1-2 ಮೊಟ್ಟೆಯ ಬಿಳಿ ಭಾಗ, ಚಿಕನ್ ಸ್ಟಾಕ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ಸೀಡ್‌ಲೆಸ್ ದಾಳಿಂಬೆ ಹರಳು, ಅಲಂಕರಿಸಲು ಪುದೀನಾ, ಲೆಟ್ಯೂಸ್ ಎಲೆ ಇತ್ಯಾದಿ.
ವಿಧಾನ : ಚಿಕನ್ ಸ್ಟಾಕ್ ಬಿಸಿ ಮಾಡಿ, ಅದಕ್ಕೆ ಬಾರ್ಲಿ, ಓಟ್ಸ್ ಬೆರೆಸಿ ಮತ್ತಷ್ಟು ಕುದಿಸಿ. ಇದಕ್ಕೆ ಹೆಚ್ಚಿದ ಪಾಲಕ್, ಮೊಟ್ಟೆಯ ಬಿಳಿ ಭಾಗ, ಉಪ್ಪು, ಮೆಣಸು ಸೇರಿಸಿ ಚೆನ್ನಾಗಿ ಕುದಿಸಿ ಕೆಳಗಿಳಿಸಿ. ಜೊತೆಗೆ ಸ್ವೀಟ್ ಕಾರ್ನ್, ದಾಳಿಂಬೆ ಸೇರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ನಿಂಬೆಹಣ್ಣು ಹಿಂಡಿಕೊಂಡು ಸವಿಯಲು ಕೊಡಿ.
ಪೋಚ್ಡ್ ಫಿಶ್ ವಿತ್ ಗ್ರೀನ್ ವೆಜಿಟೆಬಲ್ಸ್
ಸಾಮಗ್ರಿ : 2-3 ತುಂಡು ಸೋಲ್ ಫಿಶ್, 2-3 ಚಮಚ ಆಲಿವ್ ಆಯಿಲ್, 1 ಕಪ್ ವೆಜ್ ಸ್ಟಾಕ್, ಒಂದಿಷ್ಟು ಹೆಚ್ಚಿದ ಈರುಳ್ಳಿ, ಅದರ ತೆನೆ, ಅಗತ್ಯವಿದ್ದಷ್ಟು ಗುಂಡಗೆ ಹೆಚ್ಚಿದ ಕ್ಯಾರೆಟ್, ಹಳದಿ ಹಸಿರು ಝುಕೀನಿ, ಕೆಂಪು ಹಳದಿ ಹಸಿರು ಕ್ಯಾಪ್ಸಿಕಂ, ಬೇಬಿ ಕಾರ್ನ್, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಅಲಂಕರಿಸಲು ತುಸು ಹೆಚ್ಚಿದ ಕೊ.ಸೊಪ್ಪು, ಚೆರ್ರಿ ಟೊಮೇಟೊ.
ವಿಧಾನ : ಒಂದು ಪ್ಯಾನಿನಲ್ಲಿ ಆಲಿವ್ ಆಯಿಲ್ ಬಿಸಿ ಮಾಡಿ ಅದರಲ್ಲಿ ಹೆಚ್ಚಿದ ಈರುಳ್ಳಿ, ಅದರ ತೆನೆ ಹಾಕಿ ಬಾಡಿಸಿ. ಇದಕ್ಕೆ ವೆಜ್ ಸ್ಟಾಕ್ ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಉಪ್ಪು, ಮೆಣಸು ಹಾಕಿ, ನಿಂಬೆ ರಸ ಬೆರೆಸಿಕೊಳ್ಳಿ. ಇದಕ್ಕೆ ಸೋಲ್ ಫಿಶ್ ತುಂಡು ಹಾಕಿ, ಲಘುವಾಗಿ ಬೇಯಿಸಿ ಕೆಳಗಿಳಿಸಿ. ಗುಂಡಗೆ ಕತ್ತರಿಸಿದ 3 ಬಗೆಯ ಕ್ಯಾಪ್ಸಿಕಂ, 2 ಬಗೆ ಝುಕೀನಿ, ಕ್ಯಾರೆಟ್, ಬೇಬಿಕಾರ್ನ್ ಇತ್ಯಾದಿ ಗ್ರಿಲ್ ಮಾಡಿಕೊಂಡು ಒಂದು ಟ್ರೇನಲ್ಲಿ ಜೋಡಿಸಿ. ಅದರ ಮೇಲೆ ಸೋಲ್ ಫಿಶ್ ಬರಲಿ. ಇದರ ಮೇಲೆ ಮತ್ತೆ ಉಪ್ಪು, ಮೆಣಸು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು, ಚಿತ್ರದಲ್ಲಿರುವಂತೆ ಅಲಂಕರಿಸಿ ವೆಜ್ ಸ್ಟಾಕ್ ಸಮೇತ ಸವಿಯಲು ಕೊಡಿ.
ಶುಗರ್ ಫ್ರೀ ಫ್ರೂಟ್ ಜೆಲ್ಲಿ
ಸಾಮಗ್ರಿ : 2 ಕಪ್ ಫ್ರಿಜ್ ನೀರು, 6 ಸ್ಯಾಚೆಟ್ ಶುಗರ್ ಫ್ರೀ, ಅರ್ಧ ಸಣ್ಣ ಚಮಚ ಜೆಲೆಟಿನ್, 2-3 ಹನಿ ಲೆಮನ್ ಎಸೆನ್ಸ್, 250 ಗ್ರಾಂ ಮಿಶ್ರ ಹಣ್ಣುಗಳ ಹೋಳು, ತುಸು ನಿಂಬೆರಸ.
ವಿಧಾನ : ಹಣ್ಣಿನ ಹೋಳುಗಳನ್ನು 2 ಭಾಗ ಮಾಡಿ. ಒಂದು ಭಾಗವನ್ನು 2 ಫ್ಯಾನ್ಸಿ ಗ್ಲಾಸುಗಳಿಗೆ ಹಾಕಿ ಫ್ರೀಝರ್‌ನಲ್ಲಿ ಸ್ವಲ್ಪ ಹೊತ್ತು ಇರಿಸಿ. ಆಮೇಲೆ ಬೆಚ್ಚಗಿನ ನೀರಲ್ಲಿ ಜೆಲೆಟಿನ್ ನೆನೆ ಹಾಕಿಡಿ. ಒಂದು ಪ್ಯಾನಿನಲ್ಲಿ ನೀರು ಬಿಸಿ ಮಾಡಿ ಅದಕ್ಕೆ ಶುಗರ್ ಫ್ರೀ, ಜೆಲೆಟಿನ್, ನಿಂಬೆರಸ, ಲೆಮನ್ ಎಸೆನ್ಸ್ ಬೆರೆಸಿ ಕುದಿಸಬೇಕು. ಒಂದು ಸ್ಟೀಲ್ ಬಟ್ಟಲಿಗೆ ಈ ಮಿಶ್ರಣ ಬಗ್ಗಿಸಿ ಐಸ್ ಕ್ಯೂಬ್ಸ್ ಬೆರೆತ ತಣ್ಣೀರಿನಲ್ಲಿ ಈ ಬಟ್ಟಲಿರಿಸಿ ಅದನ್ನು ಚೆನ್ನಾಗಿ ಕೂಲ್ ಮಾಡಿ. ಆದರೆ ಈ ಮಿಶ್ರಣ ಸೆಟ್ ಆಗದಂತೆ ನೋಡಿಕೊಳ್ಳಿ. ಫ್ರೀಝರ್‌ನಿಂದ ಫ್ಯಾನ್ಸಿ ಗ್ಲಾಸ್ ಹೊರತೆಗೆದು, ಅದಕ್ಕೆ ಈ ಮಿಶ್ರಣ ಬೆರೆಸಿ ಹಾಗೂ ಮತ್ತೊಮ್ಮೆ ಫ್ರಿಜ್‌ನಲ್ಲಿ ಸೆಟ್ ಆಗಲು ಇರಿಸಿ. ಹೊರತೆಗೆದ ನಂತರ ಉಳಿದ ಹಣ್ಣಿನ ಹೋಳು ತುಂಬಿಸಿ, ಚಿತ್ರದಲ್ಲಿರುವಂತೆ ರೆಡಿ ಮಾಡಿ ಸವಿಯಲು ಕೊಡಿ.
ಫ್ರೂಟ್ ವೆಜ್ ಸಲಾಡ್
ಸಾಮಗ್ರಿ : 1-1 ಕೆಂಪು ಹಸಿರು ಸೇಬು (ಹೆಚ್ಚಿ ಹೋಳು ಮಾಡಿ), ಜೊತೆಗೆ ಮಿಶ್ರ ಹಣ್ಣಿನ ಹೋಳುಗಳಾದ ಪ್ಲಮ್, ಕಿವೀ, ಅವಕ್ಯಾಡೋ, ಸಪೋಟ, ಸೀಡ್‌ಲೆಸ್ ದ್ರಾಕ್ಷಿ ಇತ್ಯಾದಿ, 1 ಕಪ್ ಕೆನೆಮೊಸರು, ತುಸು ಸೀಡ್‌ಲೆಸ್ ದಾಳಿಂಬೆ ಹರಳು, ಹೆಚ್ಚಿದ ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಸಕ್ಕರೆ.
ವಿಧಾನ : ಒಂದು ಬಟ್ಟಲಿಗೆ ಎಲ್ಲಾ ಹಣ್ಣುಗಳನ್ನೂ ಹೆಚ್ಚಿ ಹಾಕಿ, ಜೊತೆಗೆ ಉಳಿದ ಸಾಮಗ್ರಿ ಬೆರೆಸಿದರೆ ಸಲಾಡ್ ರೆಡಿ!
ಮಸಾಲೆ ಖಿಚಡಿ
ಸಾಮಗ್ರಿ : 2 ಕಪ್ ಬ್ರೋಕನ್ ವೀಟ್, 1 ತುಂಡು ಶುಂಠಿ, 2-3 ಹಸಿ ಮೆಣಸಿನಕಾಯಿ, 2 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಚಕ್ಕೆ, ಲವಂಗ, ಮೊಗ್ಗು, ಏಲಕ್ಕಿ, ಕರಿಬೇವು, 2 ಚಿಟಕಿ ಅರಿಶಿನ, ಸಣ್ಣಗೆ ಹೆಚ್ಚಿದ ಕ್ಯಾರೆಟ್ ಬೀನ್ಸ್, ಹಸಿ ಬಟಾಣಿ (ಒಟ್ಟಾಗಿ 1 ಕಪ್), 2-3 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು ಖಾರ.
ವಿಧಾನ : ಚಿಕ್ಕ ಕುಕ್ಕರ್‌ನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ಎಲ್ಲಾ ತರಕಾರಿ ಹೆಚ್ಚಿ ಹಾಕಿ. ಉಪ್ಪು, ಖಾರ, ಅರಿಶಿನ ಸೇರಿಸಿ. ಬ್ರೋಕನ್ ವೀಟ್ ತೊಳೆದು ಹಾಕಿ, 2 ಕಪ್ ನೀರು ಬೆರೆಸಿ, 3 ಸೀಟಿ ಬರುವಂತೆ ಕೂಗಿಸಿ. ಬಿಸಿ ಇರುವಾಗಲೇ ತುಪ್ಪ ಹಾಕಿ ಸವಿಯಲು ಕೊಡಿ.
ಗ್ರಿಲ್ಡ್ ಚಿಕನ್ ವಿತ್ ಸಾಟೆಡ್ ವೆಜಿಟೆಬಲ್
ಸಾಮಗ್ರಿ : 1 ಚಿಕನ್ ಬ್ರೆಸ್ಟ್, 2-3 ಚಮಚ ಆಲಿವ್ ಎಣ್ಣೆ, ಅಗತ್ಯವಿದ್ದಷ್ಟು ಕ್ಯಾರೆಟ್, ತುಂಡರಿಸಿದ ಹಸಿರು ಹಳದಿ ಝುಕೀನಿ ಹೋಳು, ಆ್ಯಸ್ಪೆರಾಗಸ್ ಬೇಬಿಕಾರ್ನ್, ಹೆಚ್ಚಿದ ಹಸಿರು ಕೆಂಪು ಹಳದಿ ಕ್ಯಾಪ್ಸಿಕಂ, ಗಾರ್ನಿಶಿಂಗ್‌ಗಾಗಿ ಕೊ.ಸೊಪ್ಪು ಚೆರ್ರಿ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು.
ವಿಧಾನ : ಚಿಕನ್ ಬ್ರೆಸ್ಟ್ ಗೆ ಆಲಿವ್ ಎಣ್ಣೆ, ಉಪ್ಪು, ಮೆಣಸು ಹಾಕಿ 1 ಗಂಟೆ ಕಾಲ ಮ್ಯಾರಿನೇಟ್ ಆಗಲು ಬಿಡಿ. ಎಲ್ಲಾ ತರಕಾರಿಗಳನ್ನೂ ಹೆಚ್ಚಿ ಬ್ಲ್ಯಾಂಚ್ ಮಾಡಿ (ಕುದಿವ ನೀರಲ್ಲಿ 2 ನಿಮಿಷ ಅದ್ದಿ ತೆಗೆಯಿರಿ) ಹಾಗೂ ಚಿಕನ್ ಬ್ರೆಸ್ಟ್ ನ ಎರಡೂ ಬದಿ ಚೆನ್ನಾಗಿ ಗ್ರಿಲ್ ಮಾಡಿ. ಒಂದು ಪ್ಯಾನಿನಲ್ಲಿ ತುಸು ಆಲಿವ್ ಎಣ್ಣೆ ಬಿಸಿ ಮಾಡಿ ತರಕಾರಿ ಹಾಕಿ ಸಾಟೆ ಮಾಡಿ (ಲಘುವಾಗಿ ಬಾಡಿಸಿ). ಇದರ ಮೇಲೆ ಗ್ರಿಲ್ಡ್ ಚಿಕನ್ ಬ್ರೆಸ್ಟ್ ಇರಿಸಿ, ಕೊ.ಸೊಪ್ಪು ಉದುರಿಸಿ, ಚೆರ್ರಿ ಟೊಮೇಟೋದಿಂದ ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿಬಿಸಿಯಾಗಿ ಸವಿಯಲು ಕೊಡಿ.
ಬಾರ್ಲಿ ಕಾರ್ನ್ ಸಲಾಡ್
ಸಾಮಗ್ರಿ : 1-1 ಕಪ್ ಓಟ್ಸ್, ಬೆಂದ ಸ್ವೀಟ್ ಕಾರ್ನ್, ಅರ್ಧ ಕಪ್ ಹೆಚ್ಚಿದ ಅಖರೋಟ್, ಒಂದಿಷ್ಟು ಹೆಚ್ಚಿದ ಈರುಳ್ಳಿ, ಕೊ.ಸೊಪ್ಪು, ಬೆಳ್ಳುಳ್ಳಿ, ಬ್ರೋಕ್ಲಿ, ಪುದೀನಾ, ಅರ್ಧ ಕಪ್ ಸೀಡ್‌ಲೆಸ್ ದಾಳಿಂಬೆ ಹರಳು, 1-2 ಚಮಚ ಆಲಿವ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ಅಲಂಕರಿಸಲು ಚೆರ್ರಿ ಟೊಮೇಟೊ.
ವಿಧಾನ : 2 ಕಪ್ ನೀರು ಬೆರೆಸಿ, ಉಪ್ಪು ಹಾಕಿ ಓಟ್ಸ್ ಬೇಯಿಸಿ. ಇದಕ್ಕೆ ಬೆಂದ ಸ್ವೀಟ್‌ಕಾರ್ನ್, ಹೆಚ್ಚಿದ ಈರುಳ್ಳಿ, ಅಖರೋಟ್, ಕೊ.ಸೊಪ್ಪು, ಪುದೀನಾ, ಬ್ರೋಕ್ಲಿ, ದಾಳಿಂಬೆ ಎಲ್ಲಾ ಸೇರಿಸಿ. ಆಲಿವ್ ಎಣ್ಣೆಗೆ ಉಪ್ಪು, ಮೆಣಸು, ಜಜ್ಜಿದ ಬೆಳ್ಳುಳ್ಳಿ ಉದುರಿಸಿ ನಿಂಬೆಹಣ್ಣು ಹಿಂಡಿಕೊಳ್ಳಿ. ಈ ಡ್ರೆಸಿಂಗ್‌ನ್ನು ಸಲಾಡ್ ಮೇಲೆ ಹರಡಿ, ಚಿತ್ರದಲ್ಲಿರುವಂತೆ ಚೆರ್ರಿ ಟೊಮೇಟೋಗಳಿಂದ ಅಲಂಕರಿಸಿ ಸವಿಯಲು ಕೊಡಿ.
ಬೇಸಿಲ್ ಫ್ರೈಡ್ ರೈಸ್
ಸಾಮಗ್ರಿ : 1 ಬಟ್ಟಲು ಉದುರುದುರಾದ ಅನ್ನ, ಒಂದಿಷ್ಟು ತುಂಡರಿಸಿದ ಹಸಿಮೆಣಸು ಒಣಮೆಣಸಿನಕಾಯಿ, 1 ಸಣ್ಣ ಚಮಚ ಗ್ರೀನ್‌ಪೆಪ್ಪರ್ ಕಾರ್ನ್, 4-5 ಎಸಳು ಹೆಚ್ಚಿದ ಬೆಳ್ಳುಳ್ಳಿ, 2-3 ತುಂಡು ಬ್ರೋಕ್ಲಿ, 3-4 ಬೇಬಿ ಕಾರ್ನ್, 1-2 ಕ್ಯಾರೆಟ್, 1 ಹಸಿರು ಕ್ಯಾಪ್ಸಿಕಂ, ಅರ್ಧ ಸೌಟು ರೀಫೈಂಡ್ ಆಯಿಲ್, ರುಚಿಗೆ ತಕ್ಕಷ್ಟು ಉಪ್ಪು, ಮ್ಯಾಗಿ ಮಸಾಲೆ, ಹೆಚ್ಚಿದ ತುಳಸಿ ಎಲೆ.
ವಿಧಾನ : ಬ್ರೋಕ್ಲಿ, ಬೇಬಿ ಕಾರ್ನ್, ಕ್ಯಾರೆಟ್ ತುಂಡರಿಸಿ ಬ್ಲ್ಯಾಂಚ್ ಮಾಡಿಕೊಳ್ಳಿ. ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ, ಹಸಿಒಣಮೆಣಸಿನಕಾಯಿ ಹಾಕಿ ಸಾಟೆ ಮಾಡಿ. ನಂತರ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಆಮೇಲೆ ಉಳಿದೆಲ್ಲ ಸಾಮಗ್ರಿಗಳನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿ. ಇದನ್ನು ತುಳಸಿ ಎಲೆಗಳಿಂದ ಗಾರ್ನಿಶ್ ಮಾಡಿ ಬಿಸಿಯಾಗಿ ಸವಿಯಲು ಕೊಡಿ.