ಕೋಕೋನಟ್ಲಡ್ಡು

ಸಾಮಗ್ರಿ : 1 ತೆಂಗಿನಕಾಯಿ, 3 ಕಪ್‌ ಹಾಲು, 1 ಕಪ್‌ ಸಕ್ಕರೆ, ಅಗತ್ಯಕ್ಕೆ ತಕ್ಕಷ್ಟು ಏಲಕ್ಕಿಪುಡಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು, ತುಪ್ಪ, ಗಸಗಸೆ.

ವಿಧಾನ : ಒಂದು ಬಾಣಲೆಯಲ್ಲಿ ಹಾಲು ಕಾಯಿಸಿ ಅರ್ಧದಷ್ಟು ಹಿಂಗುವವರೆಗೂ ಮಂದ ಉರಿಯಲ್ಲಿ ಕುದಿಸುತ್ತಿರಿ. ಇದಕ್ಕೆ ತೆಂಗಿನ ತುರಿ ಸೇರಿಸಿ ಹದನಾಗಿ ಕೈಯಾಡಿಸಿ. ಇದು ಕ್ರೀಂ ಮಿಶ್ರಣ ಆಗುವವರೆಗೂ ಗೊಟಾಯಿಸುತ್ತಿರಿ. ಆಮೇಲೆ ಸಕ್ಕರೆ, ಏಲಕ್ಕಿ ಸೇರಿಸಿ ನಡುನಡುವೆ ತುಪ್ಪ ಬೆರೆಸುತ್ತಾ ಕೆದಕುತ್ತಿರಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಇತ್ಯಾದಿ ಸೇರಿಸಿ ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿ. ಇದಕ್ಕೆ ಗಸಗಸೆ ಉದುರಿಸಿ, ತುಸು ಆರಿದ ನಂತರ ಉಂಡೆ ಕಟ್ಟಿ. ಇದೀಗ ಲಡ್ಡು ರೆಡಿ!

ಡ್ರೈ ಫ್ರೂಟ್ಸ್ ಲಡ್ಡು

ಸಾಮಗ್ರಿ : ಅರ್ಧರ್ಧ ಕಪ್‌ ಖರ್ಜೂರದ ಹೋಳು, ದೊಡ್ಡದಾಗಿ ತುಂಡರಿಸಿದ ಗೋಡಂಬಿ-ದ್ರಾಕ್ಷಿ, ಬಾದಾಮಿ, ಪಿಸ್ತಾ, ಅಂಜೂರ, 1 ಗಿಟುಕು ಕೊಬ್ಬರಿ ತುರಿ, ತುಸು ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಮಿಲ್ಕ್ ಮೇಡ್‌, ತುಪ್ಪ.

ವಿಧಾನ : ಮೊದಲು ತುಪ್ಪದಲ್ಲಿ ಎಲ್ಲಾ ಡ್ರೈ ಫ್ರೂಟ್ಸ್ ನ್ನೂ ಹುರಿದು, ಒಂದು ತಟ್ಟೆಗೆ  ಹಾಕಿಡಿ. ಇದರ ಮೇಲೆ ತುರಿದ ಕೊಬ್ಬರಿ ಹಾಕಿ, ಏಲಕ್ಕಿ ಪುಡಿ ಉದುರಿಸಿ, ಮಿಲ್ಕ್ ಮೇಡ್‌ ಹರಡಿ ಬೇಗ ಬೇಗ ಉಂಡೆ ಕಟ್ಟಿ. ಇದನ್ನು 1-2 ತಾಸು ಫ್ರಿಜ್‌ನಲ್ಲಿರಿಸಿ, ನಂತರ ರಾತ್ರಿಯಿಡೀ ಗಾಳಿಗಿಟ್ಟು ಮಾರನೇ ದಿನ ಸವಿಯಲು ಕೊಡಿ.

ಕೇಸರಿ ಪೇಡ

ಸಾಮಗ್ರಿ : 250 ಗ್ರಾಂ ಖೋವಾ, 1 ಕಪ್‌ ಸಕ್ಕರೆ, ಹಾಲಲ್ಲಿ ನೆನೆಸಿದ ತುಸು ಕೇಸರಿ, ಅರ್ಧ ಕಪ್‌ ಗಟ್ಟಿಯಾದ ಬಿಸಿ ಹಾಲು, ಅಗತ್ಯವಿದ್ದಷ್ಟು ತುಪ್ಪ, ಪಿಸ್ತಾ ಚೂರು, ಏಲಕ್ಕಿ ಪುಡಿ.

ವಿಧಾನ : ಖೋವಾವನ್ನು ಮತ್ತೆ ಮತ್ತೆ ಚೆನ್ನಾಗಿ ಮಸೆಯಿರಿ. ಒಂದು ಬಾಣಲೆಗೆ ತುಸು ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಖೋವಾ, ಸಕ್ಕರೆ ಹಾಕಿ ಅದು ಕರಗುವವರೆಗೂ ಕೈಯಾಡಿಸುತ್ತಿರಿ. ಆಮೇಲೆ ಕೇಸರಿ ಸಹಿತ ಹಾಲು ಬೆರೆಸಿ ಕೆದಕಬೇಕು. ಇದು ಗಟ್ಟಿ ಆಗತೊಡಗಿದಂತೆ ಏಲಕ್ಕಿಪುಡಿ ಸೇರಿಸಿ, ಕೆದಕಿ ಕೆಳಗಿಳಿಸಿ ಚೆನ್ನಾಗಿ ತಣ್ಣಗಾಗಲು ಬಿಡಿ. ನಂತರ ತುಪ್ಪ ಸವರಿದ ಕೈಗಳಿಂದ ಇದರಿಂದ ಚಿತ್ರದಲ್ಲಿರುವಂತೆ ಸಣ್ಣ ಸಣ್ಣ ಉಂಡೆ ಕಟ್ಟಿ, ಪಿಸ್ತಾದಿಂದ ಅಲಂಕರಿಸಿ, 1-2 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಜೋಧ್ಪುರಿ ಲಡ್ಡು

ಸಾಮಗ್ರಿ : 1 ಕಪ್‌ ತಾಜಾ ಕಡಲೆಹಿಟ್ಟು, ಹಾಲಲ್ಲಿ ನೆನೆದ ತುಸು ಕೇಸರಿ, ತುಸು ಏಲಕ್ಕಿ ಪುಡಿ ಲವಂಗ ಖರ್ಬೂಜದ ಬೀಜ, ಕರಿಯಲು ರೀಫೈಂಡ್‌ ಎಣ್ಣೆ, 1 ಕಪ್‌ ಸಕ್ಕರೆ.

ವಿಧಾನ : ಒಂದು ಸ್ಟೀಲ್ ‌ಪಾತ್ರೆಯಲ್ಲಿ 1 ಕಪ್‌ ನೀರು ಕುದಿಸಿ. ಇದಕ್ಕೆ ಸಕ್ಕರೆ ಹಾಕಿ ಒಂದೆಳೆ ಪಾಕ ತಯಾರಿಸಿ. ಇಳಿಸುವ ಮುನ್ನ ತುಸು ಕೇಸರಿ ಹಾಕಿ ಚೆನ್ನಾಗಿ ಮರಳಿಸಿ, ಇಳಿಸಿದ ಮೇಲೆ ಆರಲು ಬಿಡಿ. ಕಡಲೆಹಿಟ್ಟಿಗೆ ಕೇಸರಿ, ನೀರು ಬೆರೆಸಿ ಗಟ್ಟಿ ಮಿಶ್ರಣ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರ ಮೇಲೆ ಬೂಂದಿ ಜರಡಿ ಹಿಡಿದು, ಕಲಸಿದ ಮಿಶ್ರಣ ಹಾಕಿ ಉಜ್ಜುತ್ತಾ ಬೂಂದಿ ಕಾಳು ಕರಿದು ತೆಗೆಯಿರಿ. ಇದನ್ನು ನೇರವಾಗಿ ಸಕ್ಕರೆ ಪಾಕಕ್ಕೆ ಹಾಕಿಡಿ. ಆಮೇಲೆ ಮಿಕ್ಸಿಗೆ ಈ ಬೂಂದಿ ಕಾಳು ಹಾಕಿ, ತರಿತರಿ ಆಗುವಂತೆ ಮಾಡಿ. ಇದಕ್ಕೆ ಖರ್ಬೂಜಾ ಬೀಜ, ಏಲಕ್ಕಿ, ಲವಂಗ ಸೇರಿಸಿ, ಜಿಡ್ಡು ಕೈನಿಂದ ಒತ್ತುತ್ತಾ ಉಂಡೆ ಕಟ್ಟಿ. ಇದೀಗ ಜೋಧ್‌ಪುರಿ ಲಡ್ಡು ರೆಡಿ!

ಮಲಾಯಿ ಚಾಪ್

ಸಾಮಗ್ರಿ : 750 ಗ್ರಾಂ ಮಸೆದ ಪನೀರ್‌, 3-4 ಕಪ್‌ ಸಕ್ಕರೆ, ಅರ್ಧ ಲೀ. ಗಟ್ಟಿಹಾಲು, ತುಸು ಕೇದಗೆ ಎಸೆನ್ಸ್, ಎಡಿಬಲ್ ಕಲರ್ಸ್‌, ಅಲಂಕರಿಸಲು ಬಾದಾಮಿ ಚೂರು.

ವಿಧಾನ : ಪನೀರ್‌ನ್ನು ಮತ್ತೆ ಮತ್ತೆ ಮಸೆಯಿರಿ, ಅದು ಬಹಳ ಮೃದು ಆಗಬೇಕು. ಈಗ ದೊಡ್ಡ ಕುಕ್ಕರ್‌ಗೆ ತುಸು ನೀರು ಹಾಕಿ ಒಲೆಯ ಮೇಲಿರಿಸಿ. ಇದರಲ್ಲಿ ಚಿಕ್ಕ ಪ್ಯಾನ್‌ ಕೂರುವಂತಿರಲಿ. ಈ ಪ್ಯಾನ್‌ಗೆ ಸಕ್ಕರೆ, ನೀರು ಬೆರೆಸಿ ಶುಗರ್‌ ಸಿರಪ್‌ ತಯಾರಿಸಿ. ನಂತರ ಮಸೆದ 500 ಗ್ರಾಂ ಪನೀರ್‌ನಿಂದ ಸಣ್ಣ ಉಂಡೆ ಕಟ್ಟಿ, ಚಪ್ಪಟೆ ಮಾಡಿ, ಅವನ್ನು ಸಿರಪ್‌ಗೆ ಹಾಕಿ ಮುಚ್ಚಳ ಮುಚ್ಚಿರಿಸಿ. 1 ಸೀಟಿ ಬರುವಂತೆ ಕೂಗಿಸಿ, ಮಂದ ಉರಿ ಮಾಡಿ 10 ನಿಮಿಷ ಹಾಗೇ ಬಿಡಿ. ಇದು ಆರಿದ ನಂತರ, ಈ ಚಾಪ್ಸ್ ನ್ನು 3-4 ತಾಸು ತಣ್ಣಗಾಗಲು ಗಾಳಿಗೊಡ್ಡಬೇಕು. ಗಟ್ಟಿ ಹಾಲನ್ನು ಸ್ಟೀಲ್ ‌ಪಾತ್ರೆಯಲ್ಲಿ ಕಾಯಿಸಿ. ಮಂದ ಉರಿ ಮಾಡಿ, ಅರ್ಧದಷ್ಟು ಹಿಂಗಿಸಿ. ಆಮೇಲೆ ಸಕ್ಕರೆ ಹಾಕಿ ಸತತ ಕೈಯಾಡಿಸುತ್ತಾ, ಅದು ಚೆನ್ನಾಗಿ ಗಟ್ಟಿಯಾಗುವಂತೆ ಮಾಡಿ. ನಂತರ ಇದನ್ನು ಉಳಿದ 250 ಗ್ರಾಂ ಪನೀರ್‌, ಇನ್ನಷ್ಟು ಸಕ್ಕರೆ ಹಾಕಿ ಮಿಕ್ಸಿಯಲ್ಲಿ ಸ್ಮೂತ್‌ ಪೇಸ್ಟ್ ಮಾಡಿಕೊಳ್ಳಿ. ನಂತರ ಇದನ್ನು ಚಿತ್ರದಲ್ಲಿರುವಂತೆ, ಚಾಪ್ಸ್ ಮೇಲೆ ಅಲಂಕರಿಸಿ. ನಡುನಡುವೆ ಪಿಂಕ್‌, ಕೇಸರಿ ಕಲರ್‌, ಬಾದಾಮಿ ಬರಲಿ. ಇದನ್ನು ಮತ್ತೆ ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಸ್ಪೆಷಲ್ ಕೊಬ್ಬರಿ ಮಿಠಾಯಿ

ಸಾಮಗ್ರಿ : 1 ದೊಡ್ಡ ತೆಂಗಿನಕಾಯಿಯ ತುರಿ, 400 ಗ್ರಾಂ ಕಂಡೆನ್ಸ್ಡ್ ಮಿಲ್ಕ್, ರುಚಿಗೆ ತಕ್ಕಷ್ಟು ಏಲಕ್ಕಿಪುಡಿ, ಬೆಣ್ಣೆ, ಮಿಲ್ಕ್ ಮೇಡ್‌.

ವಿಧಾನ : ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ತೆಂಗಿನ ತುರಿ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ನಂತರ ಇದಕ್ಕೆ ಕಂಡೆನ್ಸ್ಡ್ ಮಿಲ್ಕ್, ಏಲಕ್ಕಿ ಪುಡಿ ಹಾಕಿ ಕೆದಕಬೇಕು. ತುಸು ಗಟ್ಟಿ ಆದಾಗ ಮಿಲ್ಕ್ ಮೇಡ್‌ ಬೆರೆಸಿ ಕೆದಕಬೇಕು. ತಳ ಹತ್ತದಂತೆ ಆಗಾಗ ಬೆಣ್ಣೆ ಬೆರೆಸುತ್ತಿರಿ. ಕೆಳಗಿಳಿಸಿದ ಮೇಲೆ ಜಿಡ್ಡು ಸವರಿದ ಬೇಕಿಂಗ್‌ ಶೀಟ್‌ ಹರಡಿದ ಟ್ರೇಯಲ್ಲಿ, ಈ ಮಿಶ್ರಣ ಹರಡಿಕೊಂಡು, ತುಸು ಆರಿದ ನಂತರ ಬರ್ಫಿ ಆಕಾರದಲ್ಲಿ ಕತ್ತರಿಸಿ. ಚಿತ್ರದಲ್ಲಿರುವಂತೆ ಇದಕ್ಕೆ ಎಡಿಬಲ್ ಕಲರ್ಸ್‌, ಬೆಳ್ಳಿ ರೇಕು, ಪಿಸ್ತಾದಿಂದ ಅಲಂಕರಿಸಿ, 1-2 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಮೂಂಗ್ದಾಲ್ ಬರ್ಫಿ

ಸಾಮಗ್ರಿ : 1 ಕಪ್‌ ಹೆಸರುಬೇಳೆ (5-6 ತಾಸು ನೆನೆಹಾಕಿಡಿ), 1-1 ಕಪ್‌ ತುಪ್ಪ, ಸಕ್ಕರೆ, ತಣ್ಣೀರು, 50 ಗ್ರಾಂ ಖೋವಾ, 2 ಚಿಟಕಿ ಏಲಕ್ಕಿ ಪುಡಿ, 4 ಚಮಚ ರೋಸ್ಟೆಡ್‌ ಬಾದಾಮಿ ಚೂರು, ತುಸು ಬೆಳ್ಳಿ ರೇಕು.

ವಿಧಾನ : ನೆನೆದ ಬೇಳೆಯನ್ನು (ಆದಷ್ಟೂ ನೀರು ಬೆರೆಸದೆ) ತರಿತರಿಯಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ರುಬ್ಬಿದ ಬೇಳೆ ಹಾಕಿ ನಿಧಾನವಾಗಿ ಬಾಡಿಸಿ. ಆಮೇಲೆ ಅದನ್ನು ಅಗಲದ ಬೇಸನ್ನಿಗೆ ಹಾಕಿಟ್ಟು ಆರಲು ಬಿಡಿ. ಈಗ ಅದೇ ಬಾಣಲೆಗೆ ಖೋವಾ ಹಾಕಿ, ಅದನ್ನು ಬೆಚ್ಚಗಾಗುವಂತೆ ಬಾಡಿಸಿ. ನಂತರ ಇದನ್ನು ಏಲಕ್ಕಿಪುಡಿ ಸಮೇತ ಬೇಳೆಗೆ ಹಾಕಿಡಿ. ಅದೇ ಬಾಣಲೆಗೆ ಸಕ್ಕರೆ, ನೀರು ಬೆರೆಸಿ ಒಂದೆಳೆ ಪಾಕ ತಯಾರಿಸಿ. ಇದನ್ನು ಬೇಳೆಗೆ ಸುರಿದು ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ತುಪ್ಪ ಸವರಿದ ಟ್ರೇಗೆ ಇದನ್ನು ಸಮನಾಗಿ ಹರಡಿ, ಬೆಳ್ಳಿ ರೇಕು, ಬಾದಾಮಿ ಚೂರಿನಿಂದ ಅಲಂಕರಿಸಿ. ಡೈಮಂಡ್ ಆಕಾರದಲ್ಲಿ ಕತ್ತರಿಸಿ. ಇದೀಗ ಮೂಂಗ್‌ದಾಲ್ ‌ಬರ್ಫಿ ರೆಡಿ!

ಕಾಜೂ ರೋಸ್

ಸಾಮಗ್ರಿ : 2 ಕಪ್‌ ಗೋಡಂಬಿಯ ತರಿಯಾದ ಪುಡಿ, 1 ಕಪ್‌ ಸಕ್ಕರೆ, ಅರ್ಧರ್ಧ ಕಪ್‌ ಪುಡಿಸಕ್ಕರೆ, ಮಿಲ್ಕ್ ಪೌಡರ್‌, 2 ಚಟಿಕಿ ಏಲಕ್ಕಿಪುಡಿ, 2-2 ಹನಿ ರೋಸ್‌ ಎಸೆನ್ಸ್, ಬಣ್ಣಕ್ಕಾಗಿ ತುಸು ಬೀಟ್‌ರೂಟ್‌ ಪೇಸ್ಟ್.

ವಿಧಾನ : ಒಂದು ದೊಡ್ಡ ಸ್ಟೀಲ್ ‌ಪಾತ್ರೆಯಲ್ಲಿ ಸ್ವಲ್ಪ ನೀರು ಬಿಸಿ ಮಾಡಿ. ಇದರಲ್ಲಿ ಒಂದು ಹ್ಯಾಂಡ್‌ ರಹಿತ ಪ್ಯಾನ್‌ ಇರಿಸಿ, ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಮಿಲ್ಕ್ ಪೌಡರ್‌, ಸಕ್ಕರೆ, ಪುಡಿಸಕ್ಕರೆ ಸೇರಿಸಿ 2-3 ನಿಮಿಷ ಬಾಡಿಸಬೇಕು. ನಂತರ ಇದನ್ನು ಪ್ಯಾನಿನಿಂದ ಹೊರತೆಗೆದು ಗೋಡಂಬಿ ಪುಡಿ ಜೊತೆ ಬೆರೆಸಿಕೊಳ್ಳಿ. ನಂತರ ರೋಸ್‌ ಎಸೆನ್ಸ್ ನ್ನು ಬಿಸಿ ನೀರಲ್ಲಿ ಕದಡಿಕೊಂಡು ಇದಕ್ಕೆ ಬೆರೆಸಿಕೊಳ್ಳಿ. ಜೊತೆಗೆ ತುಸು ಬೀಟ್‌ರೂಟ್‌ ಪೇಸ್ಟ್ ಸಹ. ತುಪ್ಪ ಬೆರೆಸುತ್ತಾ ಚಪಾತಿ ಹಿಟ್ಟಿನಂತೆ ಕಲಸಬೇಕು. ಇದನ್ನು ದಪ್ಪ ಚಪಾತಿಯಾಗಿ ಲಟ್ಟಿಸಿ ಅದರಿಂದ ಚಿತ್ರದಲ್ಲಿರುವಂತೆ ಅಥವಾ ನಿಮ್ಮ ಆಯ್ಕೆಯ ಯಾವುದೇ ಆಕಾರ ನೀಡಿ ಮಿಠಾಯಿ ತಯಾರಿಸಿ. ಇದೀಗ ಕಾಜೂ ರೋಸ್‌ ಸವಿಯಲು ಸಿದ್ಧ!

ಖೀರ್ಕದಮ್

ಸಾಮಗ್ರಿ : 16 ಡ್ರೈ ಜಾಮೂನು, 3 ಕಪ್‌ ಖೋವಾ, ಅರ್ಧರ್ಧ ಕಪ್‌ ಗಟ್ಟಿ ಹಾಲು, ಪುಡಿಸಕ್ಕರೆ, 2 ಸಣ್ಣ ಚಮಚ ರೋಸ್‌ ಎಸೆನ್ಸ್, ಅಗತ್ಯವಿದ್ದಷ್ಟು ಖೋವಾ ಪೌಡರ್‌.

ವಿಧಾನ : ಖೋವಾವನ್ನು ಚೆನ್ನಾಗಿ ಮಸೆದು, ಅದಕ್ಕೆ ಸಕ್ಕರೆ ಬೆರೆಸಿ. ಈ ಮಿಶ್ರಣವನ್ನು ಆದಷ್ಟು ಮೃದುಗಳಿಸಲು, ಇದಕ್ಕೆ ಹಾಲು ಬೆರೆಸಿ, 2-3 ನಿಮಿಷ ತುಪ್ಪದಲ್ಲಿ ಇದನ್ನು ಕೆದಕಬೇಕು. ಇದನ್ನು ಕೆಳಗಿಳಿಸಿ ಆರಿದ ಮೇಲೆ  ರೋಸ್‌ ಎಸೆನ್ಸ್ ಬೆರೆಸಿರಿ. ಇದರಿಂದ 16 ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ. ಇದನ್ನು ಅಂಗೈ ಮೇಲೆ ಚಪ್ಪಟೆಯಾಗಿ ತಟ್ಟಿಕೊಂಡು ನಡುವೆ 1-1 ಜಾಮೂನು ಇರಿಸಿ ಚೆನ್ನಾಗಿ ಕವರ್‌ ಮಾಡಿ. ಇವನ್ನು ಖೋವಾ ಪೌಡರ್‌ನಲ್ಲಿ ಹೊರಳಿಸಿ, ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ರೈಸ್ಪುಡಿಂಗ್

ಸಾಮಗ್ರಿ : 250 ಗ್ರಾಂ ಅಕ್ಕಿಹಿಟ್ಟು, 150 ಗ್ರಾಂ ಪುಡಿಸಕ್ಕರೆ, 100 ಗ್ರಾಂ ತುಪ್ಪ, ಅಗತ್ಯವಿದ್ದಷ್ಟು ಹಾಲು, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು.

ವಿಧಾನ : ಮೊದಲು ಬಾಣಲೆಯಲ್ಲಿ  ತುಪ್ಪ ಬಿಸಿ ಮಾಡಿ, ದ್ರಾಕ್ಷಿ ಗೋಡಂಬಿಗಳನ್ನು ಹುರಿದು ತೆಗೆಯಿರಿ. ಅದೇ ಬಾಣಲೆಗೆ ಇನ್ನಷ್ಟು ತುಪ್ಪ ಹಾಕಿ ಮಂದ ಉರಿಯಲ್ಲಿ ಅಕ್ಕಿಹಿಟ್ಟು ಹುರಿದು ಬೇಸನ್ನಿಗೆ ಹಾಕಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ, ಚಿತ್ರದಲ್ಲಿರುವಂತೆ ಆಕಾರ ಕೊಡಿ. ಇದೀಗ ಸ್ವಾದಿಷ್ಟ ರೈಸ್‌ ಪುಡಿಂಗ್‌ ಸವಿಯಲು ಸಿದ್ಧ!

Tags:
COMMENT