ಲಘುಸಂಗೀತ, ಭಜನ್‌, ವಚನ, ಭಾವಗೀತೆ, ಜನಪದ, ಹಿನ್ನೆಲೆ ಸಂಗೀತ ಹೀಗೆ ಎಲ್ಲ ಪ್ರಕಾರದ ಸಂಗೀತದಲ್ಲಿ ಹಾಡುವವರು ಮತ್ತು ಸಾಧನೆ ಮಾಡಿದವರು ವಿರಳ. ಅಂತಹ ಅಪರೂಪದ ಸಾಧಕಿಯರಲ್ಲಿ  ಸಂಗೀತಾ ಕಟ್ಟಿ  ಒಬ್ಬರು.

ಸರಸ್ವತಿ ಪೂಜೆಯಂದು ಜನಿಸಿದ್ದರಿಂದಲೋ ಏನೋ, `ಸಂಗೀತಾ’ ಎಂದು ನಾಮಕರಣ. ಹೆಸರಿಗೆ ತಕ್ಕಂತೆಯೇ ಸಂಗೀತ ಸಾಧಕಿ.

ತಂದೆ ಡಾ. ಎಚ್‌.ಎ. ಕಟ್ಟಿ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಸಂಗೀತ ಆರಾಧಕರು ಕೂಡ. ಚಿಕ್ಕ ವಯಸ್ಸಿನಲ್ಲಿಯೇ ಮಗಳಿಗೆ ಸಂಗೀತ ಆಲಿಸುವ ಅಭ್ಯಾಸ ರೂಢಿಸಿದರು.

4ನೇ ವರ್ಷಕ್ಕೆ ಸಂಗೀತ ಲೋಕಕ್ಕೆ ಪಾದಾರ್ಪಣೆ. ಸಂಗೀತ ಸಾಮ್ರಾಟ ನೌಶಾದ್‌ ಅಲಿಯವರ ಭೇಟಿ ಸಂಗೀತಾ ಜೀವನಕ್ಕೆ ತಿರುವು ಕೊಟ್ಟಿತೆನ್ನಬಹುದು.

“ಈ ಹುಡುಗಿಗೆ ಒಳ್ಳೆಯ ಭವಿಷ್ಯವಿದೆ, ಒಳ್ಳೆಯ ಗುರುಗಳಿಂದ ತರಬೇತಿ ಕೊಡಿಸಿ,” ಎಂದು ಹೇಳಿದ್ದರು. ಆ ಮಾತು ಮುಂದೆ ನಿಜವೇ ಆಯಿತು.

ಶೇಷಗಿರಿ ದಂಡಾಪುರ ಹಾಗೂ ಚಂದ್ರಶೇಖರ ಪುರಾಣಿಕಮಠ ಅವರಿಂದ ಆರಂಭಿಕ ತರಬೇತಿ. ಬಳಿಕ ಬಸವರಾಜ ರಾಜಗುರು ಅವರ ಬಳಿ ಹೆಚ್ಚಿನ ತರಬೇತಿ.

13ನೇ ವಯಸ್ಸಿಗೆ ಕ್ಯಾಸೆಟ್‌ ರಾಜಗುರು ಅವರ ಬಳಿ ಅಭ್ಯಾಸ ಮಾಡುತ್ತಿರುವಾಗಲೇ ಸಂಗೀತಾ ಹಾಡಿದ `ದಾಸ ಮಂಜರಿ’ ಕ್ಯಾಸೆಟ್‌ ಬಂದುಬಿಟ್ಟಿತ್ತು. ಆಗ ಅವರ ವಯಸ್ಸು ಕೇವಲ 13. ಆ ಬಳಿಕ ಅವರಿಗೆ ಸಿನಿಮಾದಲ್ಲೂ ಹಾಡುವ ಅವಕಾಶಗಳು ಹೇರಳವಾಗಿ ಬರತೊಡಗಿದವು. 90ರ ದಶಕದಲ್ಲಿ ಅವರು ಒಂದೇ ವರ್ಷದಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡಿದ್ದರು.

ಗುರುವಿಗಾಗಿ ಹುಡುಕಾಟ

ಸಂಗೀತಾ ಕಟ್ಟಿ ಡಾ. ಬಸರಾಜ್‌ ರಾಜಗುರು ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಓದುತ್ತಿದ್ದರು. ಆಗ ಧಾರವಾಡ ಬೆಂಗಳೂರು ಓಡಾಟ ನಡೆದೇ ಇತ್ತು. ಈ ಮಧ್ಯೆ ಡಾ. ಬಸವರಾಜ ರಾಜಗುರು ಅವರ ಆಕಸ್ಮಿಕ  ನಿಧನ ಸಂಗೀತಾಗೆ ಬರಸಿಡಿಲು ಬಡಿದಂತಾಯಿತು. 12 ವರ್ಷದ ಅವರ ಒಡನಾಟ ಜೀವನದಲ್ಲಿ ಬಹು ಅಮೂಲ್ಯವಾದದ್ದನ್ನು ಕಳೆದುಕೊಂಡಂತೆ ಭಾಸವಾಗುತ್ತಿತ್ತು.

ಸಿನಿಮಾದಲ್ಲಿ ಸಾಕಷ್ಟು ಬೇಡಿಕೆಯಿದ್ದರೂ ಸಂಗೀತಾ ಅವರಿಗೆ ಹಿಂದೂಸ್ಧಾನಿ ಸಂಗೀತ ಕಲಿಯುವ ದಾಹ ಸ್ವಲ್ಪವೂ  ಹಿಂಗಿರಲಿಲ್ಲ. ಹೊಸ ಗುರುವಿಗಾಗಿ ಅವರ ಶೋಧನೆ ನಿರಂತರವಾಗಿತ್ತು. ಆ ಸಮಯದಲ್ಲಿ ಸಂಗೀತಾಗೆ ಭೇಟಿಯಾದವರು ಡಾ. ಕಿಶೋರಿ ಅಮೋಣ್‌ಕರ್‌. ಅವರು  `ಗಾನ ಸರಸ್ವತಿ’ ಎಂದೇ ಪ್ರಖ್ಯಾತರಾದವರು, ಪದ್ಮವಿಭೂಷಣ ಪುರಸ್ಕಾರದಿಂದ ಗೌರವಿಸಲ್ಪಟ್ಟವರು. ಅಂತಹ ಮೇರು ಗಾಯಕಿಯ ಸಾನಿಧ್ಯದಲ್ಲಿ ಕಲಿಯುವ ಅವಕಾಶ ದೊರೆತದ್ದು ಸಂಗೀತಾಗೆ ಬಲು ಖುಷಿ ಕೊಟ್ಟಿತು. ಸಂಗೀತಾ ಆಗ ಬಿ.ಎಸ್ಸಿ. ಕೊನೆಯ ವರ್ಷದಲ್ಲಿ ಓದುತ್ತಿದ್ದರು. ಪರೀಕ್ಷೆಗೆ ಇನ್ನು 2-3 ತಿಂಗಳು ಮಾತ್ರ ಉಳಿದಿತ್ತು. ಸಂಗೀತ ಕಲಿಯುವುದರ ಮುಂದೆ ಅವರಿಗೆ ಉಳಿದೆಲ್ಲ ಗೌಣ ಎಂಬಂತಾಗಿತ್ತು. ಗುರುವಿನ ಅನುಮತಿ ದೊರೆಯುತ್ತಿದ್ದಂತೆ ಅವರು ತಕ್ಷಣವೇ ಮುಂಬೈಗೆ ಹೊರಟರು. ಗುರುಕುಲ ಪದ್ಧತಿಯಂತೆ ಡಾ. ಕಿಶೋರಿ ಅಮೋಣ್‌ಕರ್‌ ಮನೆಯಲ್ಲಿದ್ದುಕೊಂಡೇ ಸಂಗೀತಾಭ್ಯಾಸ ಮಾಡಿದರು. ಅವರು ಅಲ್ಲಿದ್ದದ್ದು 5 ವರ್ಷ. ಈ ಐದು ವರ್ಷಗಳಲ್ಲಿ ಎರಡೇ ಎರಡು ಸಲ ಬೆಂಗಳೂರಿಗೆ ಬಂದು ಸಿನಿಮಾಗಳಿಗೆ ಹಾಡಿ ಹೋದರು. `ನಾಗಮಂಡಲ’ ಚಿತ್ರದ `ಕಂಬದ ಮ್ಯಾಲಿನ ಗೊಂಬೆಯೇ….’ ಹಾಗೂ `ಅಮೆರಿಕ ಅಮೆರಿಕ’ ಚಿತ್ರದ `ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು’ ಈ ಹಾಡುಗಳು ಅಪಾರ ಜನಪ್ರಿಯತೆ ಗಳಿಸಿದವು.

ಮದುವೆ ಬಳಿಕ ಪತಿ ಜೊತೆ ಬೆಂಗಳೂರಿನಲ್ಲಿ ವಾಸ. ಆ ಬಳಿಕ ಸಂಗೀತ ಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಲು ಹಾಗೂ ಹೊಸ ಹೊಸ ಪ್ರಯೋಗ ಮಾಡಲು ಅವಕಾಶ ದೊರೆಯಿತು.

ಮೇರು ಗಾಯಕರ ಜೊತೆ

ಸಂಗೀತಾ ಅವರು ಡಾ. ರಾಜ್‌, ಡಾ.ಎಂ. ಬಾಲಮುರಳಿಕೃಷ್ಣ, ಡಾ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಡಾ. ಪಿ.ಬಿ. ಶ್ರೀನಿವಾಸ್‌, ಡಾ. ಕೆ.ಜೆ. ಜೇಸುದಾಸ್‌ ಹೀಗೆ  ಅನೇಕ ಮೇರು ಗಾಯಕರ ಜೊತೆ ಹಾಡಿದ್ದಾರೆ. ಭಕ್ತಿಗೀತೆ, ಭಾವಗೀತೆಗಳು, ಭಜನ್‌ ಹೀಗೆ ಅವರ ಎಲ್ಲ ಬಗೆಯ ಹಾಡುಗಳ 500ಕ್ಕೂ ಹೆಚ್ಚು ಆಲ್ಬಂಗಳು ಬಿಡುಗಡೆಗೊಂಡಿವೆ.

ಸಂಗೀತ ಕಾರ್ಯಕ್ರಮಗಳು

ಸಂಗೀತಾ ಅವರದು ಕ್ರಿಯಾಶೀಲ ವ್ಯಕ್ತಿತ್ವ. ಸಂಗೀತ ಕ್ಷೇತ್ರದಲ್ಲಿ ಏನನ್ನಾದರೂ ಹೊಸದನ್ನು ಮಾಡಬೇಕೆಂಬ ತುಡಿತ. `ಸಂಗೀತ ಸರಿತಾ,’ `ಸಂಗೀತ ನಿನಾದ,’ `ಪರಂಪರಾ,’ `ಬೇಂದ್ರೆ ಗೀತ ಯಾತ್ರಾ’ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ರಾಜ್ಯದ ಬೇರೆ ಬೇರೆ ಕಡೆ ಅಷ್ಟೇ ಅಲ್ಲ, ಅಮೆರಿಕಾ, ಆಸ್ಚ್ರೇಲಿಯಾ, ಅರಬ್‌ ಒಕ್ಕೂಟ ಸೇರಿದಂತೆ ಹಲವು ದೇಶಗಳಲ್ಲೂ ಕೊಟ್ಟಿದ್ದಾರೆ.

ಅಮೆರಿಕದ ಓಹಿಯೊ ಯೂನಿರ್ಸಿಟಿಯಲ್ಲಿ `ಭಾರತೀಯ ಸಂಗೀತ ಪರಂಪರೆಯಲ್ಲಿ ಮಹಿಳೆಯ ಪಾತ್ರ’ ಕುರಿತಂತೆ ಉಪನ್ಯಾಸ ಕೂಡ ನೀಡಿದ್ದಾರೆ.

ಸಂಗೀತಾ ಅವರಿಗೆ ಸಂಗೀತವೇ ಉಸಿರು. ಹಾಗೆಂದೇ ಮಗಳಿಗೆ `ಸಾನಿ’ ಮತ್ತು ಮಗನಿಗೆ `ನಿನಾದ್‌’ ಎಂದು ಹೆಸರಿಟ್ಟಿದ್ದಾರೆ. ಮಗಳ ಆಸಕ್ತಿ ಗಮನಿಸಿ ಕೂಚ್ಚುಪುಡಿ ಹಾಗೂ ತಬಾದ ತರಬೇತಿ ಕೊಡಿಸುತ್ತಿದ್ದಾರೆ.

ಪ್ರಶಸ್ತಿಗಳು

ಸಂಗೀತ ಕ್ಷೇತ್ರದಲ್ಲಿನ ಅವರ ಬಹುಮುಖ ಸೇವೆ ಗಮನಿಸಿ 2006-07ರಲ್ಲಿ ರಾಜ್ಯೋತ್ಸ ಪ್ರಶಸ್ತಿ 2011ರಲ್ಲಿ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಪುರಸ್ಕಾರ, ನಾಗಮಂಡಲದ ಗೀತೆಗೆ ಉದಯ ಟಿ.ವಿ. ಪ್ರಶಸ್ತಿ, `ಕಲ್ಯಾಣ ಮಂಟಪ’ದ ಹಿನ್ನೆಲೆ ಗಾಯನಕ್ಕೆ ಅತ್ಯುತ್ತಮ ಗಾಯಕಿ ಪುರಸ್ಕಾರ, `ಮಹಾನವಮಿ’ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಅತ್ಯುತ್ತಮ ಗಾಯಕಿ ಪುರಸ್ಕಾರಗಳು ಬಂದಿವೆ.

ಮೂಡಲಮನೆ, ಮನ್ವಂತರ, ಮಹಾಪರ್ವ, ಮಳೆಬಿಲ್ಲು ಧಾರಾವಾಹಿಗಳ ಶೀರ್ಷಿಕೆ ಗೀತೆಗಳು ಅವರನ್ನು ಸದಾ ನೆನಪಲ್ಲಿ ಉಳಿಯುವಂತೆ ಮಾಡಿವೆ.

ಗುರುವಿನ ನಂಟು

ಸಂಗೀತಾ ಅವರು ಸಂಗೀತ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದ್ದರೂ, “ನನ್ನ ವೃತ್ತಿ ಜೀವನದಲ್ಲಿ ಇನ್ನೂ ತೃಪ್ತಿ ಸಿಕ್ಕಿಲ್ಲ, ನಾನಿನ್ನೂ ಕಲಿಯುವುದು ಬಹಳಷ್ಟಿದೆ,” ಎಂದು ಹೇಳುತ್ತಾರೆ.

ಸಂಗೀತ ಕ್ಷೇತ್ರದಲ್ಲಿ ತಲುಪಬೇಕಾದ ಗುರಿಯನ್ನು ಸಾಕಷ್ಟು ಮಟ್ಟಿಗೆ ತಲುಪಿದ್ದರೂ ತಮಗೆ ವಿದ್ಯೆ ನೀಡಿದ ಗುರುವನ್ನು ಅವರು ಮರೆತಿಲ್ಲ. ಬಿಡುವು ಸಿಕ್ಕಾಗೆಲ್ಲ ಅವರು ತಮ್ಮ ಗುರುಗಳಾದ ಡಾ. ಕಿಶೋರಿ ಅಮೋಣ್‌ಕರ್‌ ಅವರ ಮನೆಗೆ ಹೋಗಿ ಕೆಲವು ದಿನ ಇದ್ದು ಬರುತ್ತಾರೆ.

ಸಂಗೀತದ ದುರಂತ

ಇತ್ತೀಚಿನ ವರ್ಷಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅವರು ವಿಷಾದದಿಂದ ಹೀಗೆ ಹೇಳುತ್ತಾರೆ, “ಕೆಟ್ಟ, ಕಲುಷಿತ ಆಹಾರದಿಂದ ಹೇಗೆ ಹೊಟ್ಟೆ ಕೆಡುತ್ತೋ, ಹಾಗೆಯೇ ಕಳಪೆ ಗುಣಮಟ್ಟದ ಸಂಗೀತದಿಂದ ಜನರ ಮನಸ್ಸು ಕೆಡುತ್ತಿದೆ. ಇದು ಸಂಗೀತ ಕ್ಷೇತ್ರದ ದುರಂತವೇ ಹೌದು.”

ಮಕ್ಕಳಿಗೆ ಸಂಸ್ಕಾರ

“ಮಕ್ಕಳಿಗೆ ಕೇವಲ ಸೌಲಭ್ಯ ಕೊಟ್ಟರೆ ಸಾಲದು, ಅವರಿಗೆ ಸಾಕಷ್ಟು ಸಮಯ ಕೊಡಬೇಕು. ಒಳ್ಳೆಯ ಸಂಸ್ಕಾರ ಕೊಡಬೇಕು. ಆಗಲೇ ಅವರು ಒಳ್ಳೆಯ ಪ್ರಜೆಯಾಗಲು ಸಾಧ್ಯ.”

ಕುಟುಂಬದ ಬೆಂಬಲ ಬೇಕು

“ಮಹಿಳೆ ತನ್ನ ಸ್ಥಾನ ಏನು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಾನು ಏನೆಲ್ಲ ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ನಾವು ಏನೇ ಸಾಧನೆ ಮಾಡಬೇಕೆಂದರೂ ಕುಟುಂಬದವರ ಸಹಕಾರ. ಬೆಂಬಲ ಬೇಕೇ ಬೇಕು. ಕುಟುಂಬದವರನ್ನು ಧಿಕ್ಕರಿಸಿ ಏನೇ ಸಾಧನೆ ಮಾಡಿದರೂ ಅದಕ್ಕೆ ಯಾವುದೇ ಅರ್ಥ ಇಲ್ಲ, ತೃಪ್ತಿಯೂ ಇರುವುದಿಲ್ಲ,” ಎಂದು ಸಂಗೀತಾ ಕಟ್ಟಿ ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ