``ಏನೇ ಅಡುಗೆ ಮಾಡಿ, ಅದರಲ್ಲಿ ಸ್ವಲ್ಪ ಪ್ರೀತಿ ಬೆರೆಸಿ. ಅದನ್ನು ಅಷ್ಟೇ ಖುಷಿಯಿಂದ ನಗುನಗುತ್ತಾ ಸರ್ವ್ ಮಾಡಿ. ನಗುವಿಗೆ ಖುಷಿಗೆ ಜಿಪುಣತನ ಬೇಡ. ನೀವು ಖುಷಿಯಿಂದಿದ್ದರೆ, ಇಡೀ ಕುಟುಂಬವೇ ಖುಷಿಯಿಂದಿರುತ್ತದೆ. ನೀವು ಆರೋಗ್ಯದಿಂದಿದ್ದರೆ, ನಿಮ್ಮ ಇಡೀ ಕುಟುಂಬ ಆರೋಗ್ಯದಿಂದಿರುತ್ತದೆ.
``ಅಡುಗೆ ಎನ್ನುವುದು ಕುಟುಂಬದವರನ್ನೆಲ್ಲ ಹತ್ತಿರ ತರುತ್ತದೆ. ಅದರಲ್ಲಿ ಪ್ರೀತಿ ಮತ್ತು ನಗು ಎಂಬ ಎರಡು ಮಸಾಲೆಗಳು ಬೆರೆತರೆ ಆ ಅಡುಗೆಯ ರುಚಿ ಇನ್ನೂ ಅದ್ಭುತವಾಗಿರುತ್ತದೆ.''
ಈ ಮಾತುಗಳು ಸುಪ್ರಸಿದ್ಧ ಶೆಫ್ ಶಾಜಿಯಾ ಖಾನ್ ಅವರದ್ದು. ಯಾವುದೇ ಅಡುಗೆ ಶೋ ಇರಲಿ, ಅವರು ಕೊನೆಗೆ ಮಹಿಳೆಯರಿಗೆ ಹೇಳುವುದು ಇದೇ ಮಾತುಗಳನ್ನು.
ಶಾಜಿಯಾ ಖಾನ್ ಶೆಫ್ ಆದದ್ದು......
ಶಾಜಿಯಾ ಖಾನ್ ಮಾಸ್ಟರ್ ಶೆಫ್ ಸೀಸನ್‌ನಲ್ಲಿ ರನ್ನರ್ ಅಪ್ ಆಗಿ ಒಮ್ಮೆಲೆ ಪ್ರಸಿದ್ಧಿಗೆ ಬಂದರು. ಆದರೆ ಅದಕ್ಕೂ ಮೊದಲು ಅವರು ಯಾವುದೇ ತರಬೇತಿ ಪಡೆದುಕೊಂಡಿರಲಿಲ್ಲ ಎನ್ನುವುದು ಉಲ್ಲೇಖನೀಯ ಸಂಗತಿ.
ಬೆಂಗಳೂರಿನ ರಿಚ್ಮಂಡ್ ಟೌನ್‌ನಲ್ಲಿ ಅವರದು ತುಂಬು ಕುಟುಂಬ. ಅಜ್ಜಿ ತಾತ, ಚಿಕ್ಕಮ್ಮ ಚಿಕ್ಕಪ್ಪ, ಅವರ ಮಕ್ಕಳ ಒಡನಾಟ ಅವರಿಗೆ ಬಾಲ್ಯದಲ್ಲಿ ಬಹಳಷ್ಟು ವಿಷಯಗಳನ್ನು ಕಲಿಸಿತು. ದೊಡ್ಡ ಕುಟುಂಬದಲ್ಲಿ ಅತ್ತೆ, ಅಮ್ಮ (ಸಬೀಹಾ ಬೇಗಂ), ಚಿಕ್ಕಮ್ಮ ಅಡುಗೆ ಕೆಲಸವನ್ನು ಹೊರೆ ಎಂದು ಭಾವಿಸದೆ, ಪ್ರೀತಿಯ ಕೆಲಸ ಎಂದು ಭಾವಿಸಿ ಮಾಡುತ್ತಿದ್ದರು. ಅದು ಶಾಜಿಯಾ ಮೇಲೆ ಬಹಳ ಪರಿಣಾಮ ಬೀರಿತು.ಶಾಲೆಯಿಂದ ಮನೆಗೆ ಬರುತ್ತಲೇ ಅವರು ಚಿಕ್ಕಪುಟ್ಟ ವ್ಯಂಜನಗಳನ್ನು ಮಾಡಲು ಕಲಿತುಕೊಳ್ಳುತ್ತಿದ್ದರು. 9ನೇ ವಯಸ್ಸಿನಲ್ಲಿ ಅವರು ಮಾಡಿದ ವೊದಲ ರೆಸಿಪಿ `ಕಸ್ಟರ್ಡ್ ವಿಥ್ ಫ್ರೂಟ್ಸ್.' ಬಳಿಕ ಕೇಸರಿ ಬಾಥ್, ಶ್ಯಾವಿಗೆ ಪಾಯಸ ಹೀಗೆ ಒಂದೊಂದಾಗಿ ಕಲಿಯುತ್ತಾ ಹೋದರು.
ಮದುವೆ ಬಳಿಕ ಶಾಜಿಯಾ ಅವರ ಮದುವೆ ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಅವರ ಪುತ್ರ ಮಕ್ಸೂದ್ ಅಲಿ ಖಾನ್‌ಅವರ ಜೊತೆ ಆಯಿತು. ಅಲ್ಲೂ ಕೂಡ ಅವರಿಗೆ ತವರುಮನೆಯ ವಾತಾವರಣವೇ ದೊರಕಿತು. ಹಿರಿಯ ರಾಜಕಾರಣಿಯ ಮನೆಯಾಗಿದ್ದರಿಂದ ಅಲ್ಲಿ ಸಂಬಂಧಿಕರು, ಪರಿಚಿತರು ಹೀಗೆ ಬರುವಹೋಗುವವರ ಸಂಖ್ಯೆ ಹೇರಳವಾಗಿತ್ತು. ಬಂದವರಿಗೆಲ್ಲ ಅತ್ತೆ ಆಯೇಶಾ ರೆಹಮಾನ್ ಜೊತೆ ರುಚಿರುಚಿಯಾದ ಅಡುಗೆಗಳನ್ನು ಮಾಡಿ ಬಡಿಸುವುದು ಅವರಿಂದ ಪ್ರಶಂಸೆಯ ಮಾತುಗಳನ್ನು ಕೇಳುವುದು ಶಾಜಿಯಾ ಅವರಿಗೆ ಖುಷಿ ಕೊಡುತ್ತಿತ್ತು. ಮನೆ, ಮಕ್ಕಳು, ಅಡುಗೆ.... ಹೀಗೆ ಅವರ ಸಂಸಾರ ಖುಷಿಯಲ್ಲಿ ತೇಲುತ್ತಿರುವಾಗ `ಸ್ಟಾರ್ ಪ್ಲಸ್'ನಲ್ಲಿ `ಮಾಸ್ಟರ್ ಶೆಫ್' ಸುಪ್ರಸಿದ್ಧ ಶೋ ಪ್ರಸಾರವಾಗುತ್ತಿತ್ತು. ಅದನ್ನು ನೋಡಿ ಸಂಬಂಧಿಕರು, ಪರಿಚಿತರು `ನೀನೂ ಅದರಲ್ಲಿ ಭಾಗವಹಿಸು,' ಎಂದು ಒತ್ತಾಯಿಸತೊಡಗಿದರು. ಅದು ಅಖಿಲ ಭಾರತ ಮಟ್ಟದ ಸ್ಪರ್ಧೆ. ತಾನು ಆಡಿಶನ್‌ಗೆ ಆಯ್ಕೆ ಆಗುತ್ತೇನೊ, ಇಲ್ಲವೋ ಎಂಬ ಆತಂಕ ಇದ್ದೇ ಇತ್ತು. ಮೊದಲ ಹಂತದಲ್ಲಿ 1000 ಜನರಲ್ಲಿ ಒಬ್ಬರಾಗಿ ಆಯ್ಕೆಯಾದದ್ದು ಅವರಿಗೆ ಬಹಳ ಖುಷಿ ನೀಡಿತು. 100ರಲ್ಲಿ, ನಂತರ ಟಾಪ್ 50ರಲ್ಲಿ ಆಯ್ಕೆಯಾಗಿ ತಮ್ಮ ಗೆಲುವಿನ ದಾಖಲೆ ಬರೆಯುತ್ತ ಹೋಗಿ ಕೊನೆಗೆ ಫೈನಲ್‌ನಲ್ಲಿ ರನ್ನರ್ ಅಪ್ ಆಗಿ ಆಯ್ಕೆಯಾದರು.