ಆದರೆ ಅಂದಿನಿಂದ ಕೆಲವು ದಿನಗಳವರೆಗೂ ಅವನು ಪ್ರತಿದಿನ ಮನೆ ಮುಂದೆ ಗಂಟೆಗಳ ಕಾಲ ನಿಂತಿರುತ್ತಿದ್ದ. ಕೆಲವೊಮ್ಮೆ ಮಹಡಿ ಮೇಲಿರುವ ನನ್ನ ಕೋಣೆಯತ್ತ ಇಲ್ಲವೇ ತನ್ನ ಕೈಯಲ್ಲಿದ್ದ ಮೊಬೈಲ್ ‌ನೋಡುತ್ತಿರುತ್ತಿದ್ದ. ಅವನ ಬಗ್ಗೆ ನನಗೆ ನಾನಾ ವಿಧವಾದ ಯೋಚನೆಗಳು ಪ್ರಾರಂಭವಾದವು. `ಅವನೇನಾದರೂ ನನಗೆ ಕರೆ ಮಾಡಲು ಬಯಸುತ್ತಿರುವನೆ?’ `ಅವನ ಬಳಿ ನನ್ನ ಮೊಬೈಲ್ ‌ನಂಬರ್‌ ಇದೆಯೇ?’ ನನಗೆ ತಿಳಿಯಲಿಲ್ಲ. ನೋಡಲು ಸುಂದರವಾಗಿದ್ದ ಅವನು ಒಂದುವೇಳೆ ಒಳ್ಳೆಯ ಸಂಪ್ರದಾಯಸ್ಥ ಮನೆತನದಿಂದ ಬಂದಿರಬಹುದೆಂದು ನನ್ನಲ್ಲೇ ಲೆಕ್ಕಾಚಾರ ಹಾಕತೊಡಗಿದೆ. ಹೀಗೆ ಹತ್ತು ದಿನಗಳು ಸರಿದವು. ನಿತ್ಯ ಅವನು ನಮ್ಮ ಮನೆಯ ಮುಂದೆ ನಿಲ್ಲುತ್ತಿದ್ದ. ನನ್ನಲ್ಲಿ ಏನೇನೋ ಭಾವನೆಗಳು ಉಕ್ಕುತ್ತಿದ್ದವು.

`ನಾನೇನಾದರೂ  ಅವನನ್ನು ಪ್ರೀತಿಸುತ್ತಿದ್ದೇನೆಯೇ?’

`ಹೌದು! ನಾನವನನ್ನು ಪ್ರೀತಿಸುತ್ತಿದ್ದೇನೆ.’

`ಆದರೆ ಅವನು ನನ್ನನ್ನು ಪ್ರೀತಿಸುತ್ತಿದ್ದಾನೆಯೇ?’ ಇದಕ್ಕೆ ನನ್ನಲ್ಲಿ ಉತ್ತರವಿಲ್ಲ. ನನ್ನಲ್ಲಿ ಆತಂಕ ಮನೆ ಮಾಡಿತು. `ಅವನೂ ನನ್ನನ್ನು ಪ್ರೀತಿಸುತ್ತಿದ್ದಲ್ಲಿ ಎಷ್ಟು ಚೆನ್ನ?’ ನಾನು ಕಡೆಗೊಮ್ಮೆ ನನ್ನ ಧೈರ್ಯವನ್ನು ಒಟ್ಟಾಗಿಸಿ. ಈ ವಿಷಯವನ್ನು ಅಮ್ಮನ ಬಳಿ ಹೇಳಲು  ತೀರ್ಮಾನಿಸಿದೆ.

“ಅಮ್ಮಾ…. ನಾನು ನಿನಗೊಂದು ವಿಷಯ ಹೇಳಬೇಕು?” ಎನ್ನುತ್ತಾ ಅಡುಗೆಮನೆಯಲ್ಲಿ ಕಾಫಿ ಮಾಡುತ್ತಿದ್ದ ಅಮ್ಮನ ಬಳಿ ಹೋಗಿ ಹೇಳಿದೆ. ನಾನು ಆ ಯುವಕನನ್ನು ನೋಡಿದಾಗಿನಿಂದ ನನ್ನ ಪ್ರೀತಿಯ ವಿಚಾರವನ್ನು ತಿಳಿಸಿದೆ.

ಕ್ಷಣ ಕಾಲ ಅಚ್ಚರಿ ವ್ಯಕ್ತಪಡಿಸಿದಂತೆ ಕಂಡರೂ “ಈ ಕುರಿತು ನಾಳೆ ಮಾತನಾಡೋಣ,” ಎಂದರು.

ಮರುದಿನ ಬೆಳಗ್ಗೆ ಅವನು ಮತ್ತೆ ನಮ್ಮ ಮನೆ ಮುಂದೆ ನಿಂತು ಮೊಬೈಲ್‌ನಲ್ಲಿ ಏನೋ ಮಾಡುತ್ತಿದ್ದ. ಆಗ ನನ್ನ ತಂದೆ ಅವನನ್ನು ಮನೆಗೆ ಕರೆದರು. ಅವನು ಅಪ್ಪಾಜಿಗೆ `ಧನ್ಯವಾದ’ ಹೇಳುತ್ತಾ ಒಳಗೆ ಬಂದ.

ಉಭಯಕುಶಲೋಪರಿಗಳಾದ ನಂತರ ತಂದೆ ಕೇಳಿದರು, “ನಾವೀಗ ನಿನ್ನ ತಂದೆತಾಯಿಗಳ ಬಗೆಗೆ ಕೇಳಬಹುದೆ?”

“ಯಾವುದರ ಕುರಿತು ಕೇಳಲಿದ್ದೀರಿ?” ಅವನು ಕೇಳಿದ.

ಅಷ್ಟರಲ್ಲಿ ಅಮ್ಮ ಅವನಿಗೂ, ನನಗೂ ಎಲ್ಲರಿಗೂ ಕಾಫಿ, ಬಿಸ್ಕೆಟ್‌ ತಂದಿಟ್ಟಳು. ಅವನು ನಿಧಾನವಾಗಿ ಕಾಫಿ ಕುಡಿಯಲಾರಂಭಿಸಿದ.

“ನೀನು ಪ್ರತಿದಿನ ನಮ್ಮ ಮನೆಯ ಎದುರು ನಿಂತು ಮೇಲಿನ ಕೋಣೆ ಕಿಟಕಿಯತ್ತ ನೋಡುತ್ತಿರುತ್ತೀ….?”

“ಓಹ್‌! ಬೇಡ. ನನ್ನ ತಾಯಿಗೆ ಇದರ ಕುರಿತು ಏನೂ ಹೇಳಬೇಡಿ.”

“ಏಕೆ?”

“ಅವರು ನನ್ನೊಂದಿಗೆ ಜಗಳವಾಡುತ್ತಾರೆ.”

“ಅವರೇಕೆ ನಿನ್ನೊಂದಿಗೆ ಜಗಳವಾಡುತ್ತಾರೆ?  ತನ್ನ ಮಗ ಮದುವೆಯಾಗಲು ಒಪ್ಪಿಕೊಂಡಿದ್ದಾನೆ ಎಂದರೆ ಅವರಿಗೆ  ಸಂತಸವಾಗುತ್ತದೆಯಲ್ಲವೇ?”

“ಏನು?!”

“ನೀನು ನನ್ನ ಮಗಳು ಲಿಖಿತಾಳನ್ನು ಪ್ರೀತಿಸುತ್ತಿರುವೆಯಾ?”

“ಹಾಂ, ನನಗೆ ಯಾವ ಹುಡುಗಿಯೂ ಪರಿಚಯವಿಲ್ಲ. ನೀವು ಏನೇನೋ ಹೇಳುತ್ತಿರುವಿರಿ…..”

“ಏನು….?!” ನನ್ನ ತಂದೆ ಅಚ್ಚರಿಯಿಂದ ಕೇಳಿದರು.

“ಹೌದು, ನನಗೆ ಇಲ್ಲಿ ಯಾರ ಪರಿಚಯ ಇಲ್ಲ.”

“ಹಾಗಾದಲ್ಲಿ ನೀನೇಕೆ ನಮ್ಮ ಮನೆ ಎದುರಿಗೆ ನಿಂತು ಮೇಲಿನ ಕಿಟಕಿಯತ್ತ ನೋಡುತ್ತಿದ್ದೆ?”

“ಓಹ್‌! ಅದು ನಾನಿಲ್ಲಿ ನಿಮ್ಮ ಮನೆಯ ಕೆಳಗೆ ಬಂದಾಗ ನನ್ನ ಮೊಬೈಲ್‌ಗೆ ವೈಫೈ ಕನೆಕ್ಟ್ ಆಗುತ್ತಿತ್ತು. ಆದರೆ ಕೆಲವೊಮ್ಮೆ ನೆಟ್‌ ವರ್ಕ್‌ ಸರಿಯಾಗಿ ಸಿಗುತ್ತಿರಲಿಲ್ಲ. ಆಗಾಗ ಕೈಕೊಡುತ್ತಿದ್ದ ನೆಟ್‌ವರ್ಕ್‌ಗಾಗಿ ನಾನು ಆಕಾಶದತ್ತ ನೋಡುತ್ತಿದ್ದೆ. ಆದರೆ ನಾನೆಂದೂ ನಿಮ್ಮ ಮಗಳ ಕೋಣೆಯತ್ತ ನೋಡಿಯೇ ಇಲ್ಲ. ನನಗೆ ಅವಳ ಪರಿಚಯ ಇಲ್ಲ.”

“ಹಾಗಾದಲ್ಲಿ ನಾನು ಕರೆದೊಡನೆ ನೀನೇಕೆ ಮನೆಗೆ ಬಂದೆ?”

“ನಾನಿಂದು ಒಂದು ದೊಡ್ಡ ಮಲ್ಟಿನ್ಯಾಷನ್‌ ಸಂಸ್ಥೆಗೆ ನನ್ನ ಸಿ.ವಿ. ಫಾರ್ವರ್ಡ್ ಮಾಡಬೇಕಿತ್ತು. ಹೊರಗಿದ್ದಾಗ ನೆಟ್‌ವರ್ಕ್‌ಚೆನ್ನಾಗಿರಲಿಲ್ಲ. ಮನೆಯೊಳಗೆ ಬಂದಲ್ಲಿ ಒಳ್ಳೆಯ ನೆಟ್‌ವರ್ಕ್‌ ಸಿಗಬಹುದೆಂದು ಬಂದೆ.”

“ಹಾಗಾದರೆ ನಿನಗೆ ನಿನ್ನ ಸಿ.ವಿ. ಕಳಿಸುವುದಷ್ಟೇ ಮುಖ್ಯವಾಗಿತ್ತು. ನನ್ನ ಮಗಳ ಬಗ್ಗೆ ಯಾವುದೇ ಭಾವನೆಗಳಿರಲಿಲ್ಲವೇ?”

“ಖಂಡಿತಾ ಇರಲಿಲ್ಲ.”

“ವೆಲ್ ‌ಡನ್‌!” ಎಲ್ಲಾ ಯೋಚನೆಗಳೂ ತಿರುವುಮುರುವು ಆಗಿದ್ದವು.

“ಅಂಕಲ್, ನಾನಿನ್ನು ಹೊರಡುತ್ತೇನೆ. ಅಲ್ಲಿ ನನ್ನ ಅಮ್ಮ ನನಗಾಗಿ ಕಾಯುತ್ತಿರುತ್ತಾರೆ.”

“ಓಹ್‌! ಸರಿ, ನೀನಿನ್ನು ಹೊರಡು.”

ನನಗಾಗ ಅಚ್ಚರಿ ಎದುರಾಗಿತ್ತು. ನಾನು ಎಣಿಸಿದ್ದೇನು? ಇಲ್ಲಿ ನಡೆದದ್ದೇನು? ನಾನು ನೆನೆಸಿದ್ದರ ಬದಲು ಇಲ್ಲಿ ಬೇರೆಯೇ ಆಗಿತ್ತು. ನನಗೆ ಬಹಳ ಆಶ್ಚರ್ಯವಾಗಿತ್ತು. ನಾನು ಅವನನ್ನು ಪ್ರೀತಿಸುತ್ತಿದ್ದೆ, ಅವನೂ ನನ್ನನ್ನು ಪ್ರೀತಿಸುತ್ತಿದ್ದಾನೆ ಎನಿಸುತ್ತಿತ್ತು. ಆದರೆ ಅವನು ಕೇವಲ ನಮ್ಮ ಮನೆಯ ವೈ ಫೈ ಬಳಸಲು ಬರುತ್ತಿದ್ದನೆ? ನನ್ನ ಹೃದಯ ಚೂರಾಗಿ ಹೋಗಿತ್ತು. ಇದಾಗಿ ಆರು ತಿಂಗಳು ಕಳೆದವು. ಅದೊಂದು ದಿನ ಒಬ್ಬ ಮಹಿಳೆ ನಮ್ಮ ಮನೆಗೆ ಬಂದರು. ಅದು ಆ ಯುವಕನ ತಾಯಿ ಎನ್ನುವುದು ತಿಳಿಯಿತು. ಅವನಿಗೆ ಈಗ ಮಲ್ಟಿ ನ್ಯಾಷನಲ್ ಸಂಸ್ಥೆಯಲ್ಲಿ ಕೆಲಸ ದೊರಕಿತ್ತು. ಅವನೆಂದಿಗೂ ನಮ್ಮ ಮನೆಯಲ್ಲಾದ ಘಟನೆಯನ್ನು ಮರೆತಿರಲಿಲ್ಲ.

ಅವನು ನಮ್ಮ ಮನೆಯಿಂದ ಹೋದ ದಿನದಿಂದಲೇ ತನ್ನ ಹೃದಯದಲ್ಲಿ ನನಗೊಂದಷ್ಟು ಜಾಗ ನೀಡಿದ್ದನು. ಹಾಂ, ಅವನು ನನ್ನನ್ನು ಪ್ರೀತಿಸಲು ಪ್ರಾರಂಭಿಸಿದ್ದನು. ಇಂದು ನಾವಿಬ್ಬರೂ ಮದುವೆಯಾಗಿದ್ದೇವೆ. ಚೆನ್ನಾಗಿ ಜೀವನ ನಡೆಸುವುದಕ್ಕೆ ನಿರ್ಧರಿಸಿದ್ದೇವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ